Tag: ಮೌಢ್ಯ

  • ಕೊರೊನಾ ಭೀತಿ – ಗ್ರಾಮದ ಸುತ್ತಲೂ ತೆಂಗಿನಕಾಯಿ ಕಟ್ಟಿದ ಗ್ರಾಮಸ್ಥರು

    ಕೊರೊನಾ ಭೀತಿ – ಗ್ರಾಮದ ಸುತ್ತಲೂ ತೆಂಗಿನಕಾಯಿ ಕಟ್ಟಿದ ಗ್ರಾಮಸ್ಥರು

    ಚಿತ್ರದುರ್ಗ: ಕೊರೊನಾ ಸೋಂಕಿನ ಭೀತಿಯಿಂದಾಗಿ ಬೆಚ್ಚಿರುವ ಜಿಲ್ಲೆಯ ಗ್ರಾಮಸ್ಥರು ಗ್ರಾಮದ ಸುತ್ತಲೂ ತೆಂಗಿನಕಾಯಿ ಕಟ್ಟಿ ಮೌಢ್ಯದ ಮೊರೆ ಹೋಗಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಮನ್ನೇಕೋಟೆ ಗ್ರಾಮದಲ್ಲಿ ಕೊರೊನಾ ಸೋಂಕಿನಿಂದಾಗಿ 25 ದಿನಗಳ ಅಂತರದಲ್ಲಿ 15 ಜನರ ಸರಣಿ ಸಾವಾಗಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಗ್ರಾಮಸ್ಥರು, ಈ ಗ್ರಾಮದ ನಾಲ್ಕು ದಿಕ್ಕಿಗೂ ಮಂತ್ರಿಸಿದ ತೆಂಗಿನಕಾಯಿ ಕಟ್ಟಿ ದಿಗ್ಬಂಧನ ಹಾಕಿದ್ದಾರೆ.

    ಈ ಮೂಲಕ ಕೊರೊನಾ ಗ್ರಾಮದೊಳಗೆ ಬರುವುದಿಲ್ಲ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಸುಮಾರು ಎರಡು ಸಾವಿರ ಜನಸಂಖ್ಯೆಯುಳ್ಳ ಅತಿದೊಡ್ಡ ಗ್ರಾಮವಾಗಿರುವ ಮನ್ನೇಕೋಟೆಯಲ್ಲಿ, ಕಳೆದ ಒಂದು ತಿಂಗಳಿಂದ 450ಕ್ಕೂ ಹೆಚ್ಚು ಜನರು ಶೀತ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದಾರೆ.

    ಗ್ರಾಮದಲ್ಲಿ 5 ಮಂದಿ ಕೋವಿಡ್‍ಗೆ ಬಲಿಯಾಗಿದ್ದು, ಉಳಿದ 10 ಮಂದಿ ಇನ್ನಿತರೆ ರೋಗಗಳಿಗೆ ತುತ್ತಾಗಿದ್ದಾರೆ. ಆದರೆ ಸೌಜನ್ಯಕ್ಕೂ ಇಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಈ ಗ್ರಾಮಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಮೌಢ್ಯದ ಮೊರೆ ಹೋಗಿದ್ದಾರೆ. ಕೊರೊನಾ ನಿಯಮ ಪಾಲಿಸದೇ ಮೂಢನಂಬಿಕೆ ಮೊರೆಹೋದ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸದ ಜಿಲ್ಲಾಡಳಿತದ ವಿರುದ್ಧ ಗ್ರಾಮದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಹರಕೆಯ ನೆಪದಲ್ಲಿ ಮಹಿಳೆಯ ಶೋಷಣೆ – ದೇಹಕ್ಕೆ ಬೇವಿನ ಸೊಪ್ಪು ಕಟ್ಟಿ ಮೆರವಣಿಗೆ

    ಹರಕೆಯ ನೆಪದಲ್ಲಿ ಮಹಿಳೆಯ ಶೋಷಣೆ – ದೇಹಕ್ಕೆ ಬೇವಿನ ಸೊಪ್ಪು ಕಟ್ಟಿ ಮೆರವಣಿಗೆ

    ಯಾದಗಿರಿ: ರಾಜ್ಯದಲ್ಲಿ ಮೌಢ್ಯ ನಿರ್ಬಂಧ ಕಾಯ್ದೆ ಜಾರಿಯಲ್ಲಿದ್ದರೂ ದೇವರ ಹೆಸರಿನಲ್ಲಿ ಅಮಾಯಕರ ಶೋಷಣೆ ಮಾತ್ರ ನಿಲ್ಲುತ್ತಿಲ್ಲ. ಅನಾಗರಿಕ ಅನಿಷ್ಟ ಪದ್ಧತಿಗಳು ಇನ್ನೂ ರಾಜ್ಯದಲ್ಲಿ ತಂಡವಾಡುತ್ತಿದೆ ಎನ್ನುವುದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ.

    ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಹೊರ ವಲಯದಲ್ಲಿ ಹರಕೆಯ ನೆಪದಲ್ಲಿ ಮಹಿಳೆಯರ ಬೆತ್ತಲೆ ಸೇವೆ ನಡೆದಿದ್ದು, ಇದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಮಂಗಳವಾರ ಹಿನ್ನೆಲೆ ಕೆಲ ಸಮುದಾಯಗಳು ದೇವರಿಗೆ ಹರಕೆ ತೀರಿಸುವ ನೆಪದಲ್ಲಿ ಹೆಣ್ಣುಮಕ್ಕಳ ಅರೇ ಬೆತ್ತಲೆ ಮಾಡಿ ದೇಹಕ್ಕೆ ಬೇವಿನ ಸೊಪ್ಪನ್ನು ಕಟ್ಟಿ ಉರಿ ಬಿಸಿಲಿನಲ್ಲಿ ರಸ್ತೆಯಲ್ಲಿ ಮೆರವಣಿಗೆ ಸಹ ಮಾಡಿದ್ದಾರೆ. ಇಷ್ಟೇ ಅಲ್ಲದೇ ಸಾರ್ವಜನಿಕವಾಗಿ ಪ್ರಾಣಿಬಲಿ ಸಹ ನಡೆಸಲಾಗಿದೆ.

    ಜಿಲ್ಲೆಯ ಖಾನಾಪುರ, ಗುಂಡಗುರ್ತಿ, ಬಿಜಾಸಪುರ ಸೇರಿದಂತೆ ಬಹುತೇಕ ಕಡೆ ಇದೆ ರೀತಿಯ ಆಚರಣೆ ನಡೆದಿದೆ. ಸುರಪುರ ಪಟ್ಟಣದಲ್ಲಿಯೆ ಇಂತಹ ಅನಿಷ್ಟ ಪದ್ಧತಿಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ಅಧಿಕಾರಿಗಳು ಕಣ್ಣಮುಚ್ಚಿ ಕುಳಿತ್ತಿರುವುದು ವಿಪರ್ಯಾಸದ ಸಂಗತಿ.

  • ಮಾಟ ಮಂತ್ರ ಎಂಬ ಮೌಢ್ಯದ ಅನುಮಾನಕ್ಕೆ ಆಪ್ತ ಸ್ನೇಹಿತನನ್ನೇ ಕೊಂದ

    ಮಾಟ ಮಂತ್ರ ಎಂಬ ಮೌಢ್ಯದ ಅನುಮಾನಕ್ಕೆ ಆಪ್ತ ಸ್ನೇಹಿತನನ್ನೇ ಕೊಂದ

    ಚಿತ್ರದುರ್ಗ: ಮಾಟ ಮಂತ್ರ ಎಂಬ ಮೌಢ್ಯದ ಅನುಮಾನಕ್ಕೆ ವ್ಯಕ್ತಿಯೋರ್ವ ತನ್ನ ಅಪ್ತ ಸ್ನೇಹಿತನನ್ನೇ ಕೊಂದು ಹಾಕಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಡವಿಗೊಂಡನಹಳ್ಳಿಯ ಚಂದ್ರಣ್ಣ (55) ಹಾಗೂ ಮಂಜುನಾಥ್ (37) ಇಬ್ಬರು ಅಪ್ತ ಸ್ನೇಹಿತರಾಗಿದ್ದರು. ಅವರಿಬ್ಬರ ವಯಸ್ಸಿನಲ್ಲಿ ವ್ಯತ್ಯಾಸವಿದ್ದರೂ ಸಹ ಸುಮಾರು ವರ್ಷಗಳಿಂದ ಆಪ್ತ ಮಿತ್ರರಾಗಿದ್ದ ಗೆಳೆಯರ ನಡುವೇ ಮಾಟ ಮಂತ್ರ ಎಂಬ ಮೌಢ್ಯದ ಅನುಮಾನ ಮೂಡಿ ಅವರಿಬ್ಬರ ಮಧ್ಯೆ ದ್ವೇಷ ಹುಟ್ಟಿಸಿತ್ತು. ಈಗ ಆ ದ್ವೇಷ ಗೆಳೆಯನ ಜೀವವನ್ನೇ ಬಲಿ ಪಡೆದಿದೆ.

    ಸದಾ ಚಂದ್ರಣ್ಣನ ಎಲ್ಲಾ ಕೆಲಸ ಕಾರ್ಯಗಳಲ್ಲೂ ಹೆಗಲು ಕೊಡುತ್ತಿದ್ದ ಮಂಜುನಾಥ್ ಚಂದ್ರಣ್ಣ ಹಿರಿಯನಾದರೂ ತುಂಬ ಸಲಿಗೆಯಿಂದ ಇರುತ್ತಿದ್ದರು. ಆದರೆ ಅವರಿಬ್ಬರ ಸ್ನೇಹ ಸಹಿಸಲಾಗದ ಯಾರೋ ಮಹಾನುಭಾವರು ಇಬ್ಬರ ನಡುವೇ ಮಾಟ, ಮಂತ್ರ ಎಂಬ ಮೌಢ್ಯದ ಬೀಜವನ್ನು ಬಿತ್ತಿದ್ದರು. ಹೀಗಾಗಿ ಪರಸ್ಪರ ದ್ವೇಷ ಹಾಗೂ ಅಸೂಯೆ ಶುರುವಾಗಿತ್ತು. ದಿನಬೆಳಗಾದರೆ ಹಗೆತನ ಸಾಧಿಸುತ್ತಾ ಊರಲ್ಲಿ ಓಡಾಡುತ್ತಿದ್ದರು.

    ಹೀಗಿರುವಾಗ ಡಿಸೆಂಬರ್ 4 ರಂದು ಕಟ್ಟಿಗೆ ಕಡಿದು ಇದ್ದಲು ಮಾಡುವ ಕಾಯಕಕ್ಕೆ ಚಂದ್ರಣ್ಣ ತೆರಳಿದ್ದು, ರಾತ್ರಿ ವೇಳೆ ಅದೇ ಜಮೀನಿನಲ್ಲಿ ಮಲಗಲು ನಿರ್ಧರಿಸಿದ್ದರು. ಆಗ ಅವರನ್ನು ಹಿಂಬಾಲಿಸಿದ್ದ ಆತನ ಗೆಳೆಯ ಮಂಜುನಾಥ್ ಚಂದ್ರಣ್ಣ ನಿದ್ರೆಗೆ ಜಾರುತ್ತಿದ್ದಂತೆ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ. ಬಳಿಕ ಬಲವಾದ ಕೋಲಿನಿಂದ ಕತ್ತಿಗೆ ಇರಿದು ಉಸಿರುಗಟ್ಟಿಸಿದ್ದಾನೆ. ಕೊನೆಗೆ ತಲೆಮೇಲೆ ಕಲ್ಲು ಎತ್ತಿಹಾಕಿ ಚಂದ್ರಣ್ಣನನ್ನು ಹತ್ಯೆ ಮಾಡಿದ್ದಾನೆ.

    ಈ ವಿಷಯ ತಿಳಿದ ಚಂದ್ರಣ್ಣನ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸುಮಾರು ವರ್ಷಗಳಿಂದ ಚಂದ್ರಣ್ಣನಿಗೆ ಆಪ್ತ ಸ್ನೇಹಿತನಂತಿದ್ದ ಮಂಜುನಾಥ್ ಇತ್ತೀಚೆಗೆ ಚಂದ್ರಣ್ಣನು ನಮ್ಮ ಕುಟುಂಬದ ಮೇಲೆ ಮಾಟ ಮಂತ್ರ ಮಾಡಿಸಿ ನಮ್ಮ ಸಂಸಾರ ಹಾಳು ಮಾಡಿದ್ದಾನೆ. ಆತನನ್ನು ಬಿಡುವುದಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದ ಎಂದು ಹೇಳಿದ್ದಾರೆ.

    ಈ ವಿಷಯವನ್ನು ಬೆನ್ನತ್ತಿದ ಪೊಲೀಸರು ಮಂಜುನಾಥ್ ಅನ್ನು ವಿಚಾರಣೆ ನಡೆಸಿದಾಗ, ನಾನು ಕೊಲೆ ಮಾಡಿಲ್ಲ ಎಂದು ಹೇಳಿದ್ದಾನೆ. ಆದರೆ ನಂತರ ಮಾಟ ಮಂತ್ರ ಎಂಬ ಮೌಢ್ಯದ ಅನುಮಾದಿಂದ ನಾನೇ ಕೊಲೆ ಮಾಡಿದ್ದು, ಎಂದು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಮಾಜ ಕಲ್ಯಾಣ ಸಚಿವರ ತವರಲ್ಲೇ ಮೌಢ್ಯ- ಋತುಮತಿಯಾದ್ರೆ 1 ವಾರ ಮನೆಗಿಲ್ಲ ಪ್ರವೇಶ

    ಸಮಾಜ ಕಲ್ಯಾಣ ಸಚಿವರ ತವರಲ್ಲೇ ಮೌಢ್ಯ- ಋತುಮತಿಯಾದ್ರೆ 1 ವಾರ ಮನೆಗಿಲ್ಲ ಪ್ರವೇಶ

    ಚಿತ್ರದುರ್ಗ: ರಾಜ್ಯ ಸಮಾಜ ಕಲ್ಯಾಣ ಸಚಿವರ ತವರೂರಲ್ಲೇ ಇಂದಿಗೂ ಮೌಢ್ಯ, ಕಂದಾಚಾರಗಳು ಜೀವಂತವಾಗಿರುವುದನ್ನು ಕಾಣಬಹುದಾಗಿದೆ.

    ಜಿಲ್ಲೆಯ ಜಂಪಣ್ಣ ನಾಯ್ಕನ ಕೋಟೆಯ ಗೊಲ್ಲನ ಕಟ್ಟೆ ಗ್ರಾಮದಲ್ಲಿ 20 ಗೊಲ್ಲ ಕುಟುಂಬಗಳು ಇತರ ಸಮುದಾಯದ ಜೊತೆ ಸೇರದೆ ಪ್ರತ್ಯೇಕವಾಗಿದ್ದಾರೆ. ಇಲ್ಲಿ ಇಂದಿಗೂ ಬಾಲಕಿಯರು ಋತುಮತಿಯಾದರೆ ಒಂದು ವಾರಗಳ ಕಾಲ ಕಡ್ಡಾಯವಾಗಿ ಮನೆಯಿಂದ ಹೊರಗಿರಬೇಕು.

    ಈ ಸಂದರ್ಭದಲ್ಲಿ ಇಲ್ಲಿನ ಯುವತಿಯರು, ಮಹಿಳೆಯರಿಗೆ ಹಾಲು ಹಾಕಿ ಮಾಡಿದ ಕಾಫಿ-ಟೀ ಕೊಡುವುದಿಲ್ವಂತೆ. ಹೀಗಾಗಿ ಚಳಿಯನ್ನು ತಡೆಯಲಾಗದೇ ಮುಗ್ಧ ಮಹಿಳೆಯರು ಊರ ಹೊರಗಿನ ಪಾಳು ಮನೆಯನ್ನು ಆಶ್ರಯಿಸಿದ್ದಾರೆ. ಇನ್ನು ಕುಡಿಯಲು ನೀರು ಸಿಗದೇ ಪ್ರಾಣಿಗಳಿಗಿಂತ ಹೀನಾಯವಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ.

    ಇಲ್ಲಿ ಪೂರ್ವಜರ ಕಾಲದಿಂದಲೂ ಈ ಆಚರಣೆಗಳು ನಡೆದುಕೊಂಡು ಬರುತ್ತಿದೆ. ಒಂದು ವೇಳೆ ಈ ನಿಯಮ ಮೀರಿದರೆ ಮನೆಯ ಯಜಮಾನ ಸಾವನ್ನಪ್ಪುತ್ತಾನೆ ಅಥವಾ ಮನೆಯೊಳಗೆ ಹಾವು, ಚೇಳು ಬಂದು ಪ್ರಾಣ ಹಾನಿ ಮಾಡುತ್ತವೆ ಎಂಬ ಮೌಢ್ಯತೆ ಇಂದಿಗೂ ಈ ಸಮುದಾಯದ ಜನರಲ್ಲಿ ತಳವೂರಿದೆ. ಇದರಿಂದ ಇಲ್ಲಿನ ಮಹಿಳೆಯರು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

  • ದೇವಸ್ಥಾನಗಳಿಗೆ ಹೋಗ್ಬೇಡಿ, ಹೋದ್ರೆ ದಡ್ಡರಾಗುತ್ತೀರಿ: ಪ್ರೊ.ಕೆ ಎಸ್ ಭಗವಾನ್

    ದೇವಸ್ಥಾನಗಳಿಗೆ ಹೋಗ್ಬೇಡಿ, ಹೋದ್ರೆ ದಡ್ಡರಾಗುತ್ತೀರಿ: ಪ್ರೊ.ಕೆ ಎಸ್ ಭಗವಾನ್

    ಮೈಸೂರು: ದೇವಸ್ಥಾನಗಳಿಗೆ ಹೋಗಬೇಡಿ. ಹೋದರೆ ನೀವು ದಡ್ಡರಾಗುತ್ತೀರಿ. ರಾಮ ದೇವರಲ್ಲ ಅಂತ ಪ್ರಗತಿಪರ ಚಿಂತಕ ಪ್ರೊ.ಕ ಎಎಸ್ ಭಗವಾನ್ ಹೇಳಿದ್ದಾರೆ.

    83ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಪ್ರೊ.ಕೆ.ಎಸ್.ಭಗವಾನ್ ಇಂದು ಭಾಗವಹಿಸಿ, ರಾಮನ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಸದ್ದು ಗದ್ದಲ ಏರ್ಪಟ್ಟಿತು. ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಅಲಕ್ಷಿತ ಸಮುದಾಯಗಳು ಎಂಬ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ಭಗವಾನ್ ರಾಮನ ಬಗ್ಗೆ ಪ್ರಸ್ತಾಪ ಮಾಡಿದ್ರು.

    ರಾಮ ಒಬ್ಬ ಜಾತಿವಾದಿ, ಅವನು ದೇವರಲ್ಲ, ಹೆಂಡತಿಯನ್ನು ತುಂಬು ಗರ್ಭಿಣಿಯಾಗಿದ್ದಾಗ ಕಾಡಿಗೆ ಕಳುಹಿಸಿದವನು, ಕೆಲವರ ತಲೆ ಕಡಿದವನು ಇಂಥವನ ದೇವಸ್ಥಾನ ಕಟ್ಟಲು ಈಗ ಮುಂದಾಗಿದ್ದಾರೆ ಎಂದು ಭಗವಾನ್ ಪ್ರಸ್ತಾಪಿಸಿದ್ರು.

    ಈ ವೇಳೆ ಸಭಾಂಗಣದಲ್ಲಿದ್ದ ಕೆಲವರು ನೀನು ಮಾತಾಡುತ್ತಿರೋದು ತಪ್ಪು ಎಂದು ಗದ್ದಲ ಸೃಷ್ಟಿಸಿದ್ರು. ಇನ್ನು ಕೆಲವರು ಭಗವಾನ್ ಪರ ನಿಂತು ಭಗವಾನ್ ಮಾತಾಡಿರೋದು ಸರಿ ಎಂದು ಕೂಗಾಡಿದ್ರು. ಭಗವಾನ್ ಭಾಷಣ ಮುಗಿಯುವವರೆಗೂ ಸಭಾಂಗಣದಲ್ಲಿ ಮಾತ್ರ ಪರ ವಿರೋಧಗಳ ಬಗ್ಗೆ ಸದ್ದು ಗದ್ದಲ ಉಂಟಾಯಿತು. ನಂತರ ಕಾರ್ಯಕ್ರಮ ಮುಗಿದ ಮೇಲೆ ಪೊಲೀಸ್ ಭದ್ರತೆಯೊಂದಿಗೆ ಭಗವಾನ್ ರನ್ನು ಕರೆದೊಯ್ಯಲಾಯ್ತು.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಮೌಢ್ಯ, ಕಂದಾಚಾರ ಇವುಗಳನ್ನು ಬೆಳೆಸುತ್ತಾರೆ ಹೊರತು ಬುದ್ಧಿ ಬೆಳೆಸುವುದಿಲ್ಲ. ಹೀಗಾಗಿ ಬುದ್ಧಿ ಬೆಳೆಸದೇ ಇದ್ದರೆ ಜನ ಭಕ್ತಿ ಅನ್ನೋ ಹೆಸರಿನಲ್ಲಿ ದಡ್ಡರಾಗುತ್ತಾರೆ. ದೇವಸ್ಥಾನ `ದೆವ್’ ಎಂಬ ಧಾತುವಿನಿಂದ ಬಂದಿದೆ. `ದೆವ್’ ಅಂದ್ರೆ ಬೆಳಕು ಎಂದರ್ಥ. ಆದ್ರೆ ದೇವಸ್ಥಾನದಲ್ಲಿ ಬೆಳಕು ಎಲ್ಲಿದೆ. ಅದಕ್ಕೆ ನಾನು ದೇವಸ್ಥಾನಕ್ಕೆ ಹೋಗುತ್ತಿಲ್ಲ ಅಂತ ಹೇಳಿದ್ರು.

    ದೇವಸ್ಥಾನದಲ್ಲಿ ತಾರತಮ್ಯ, ಮೇಲು-ಕೀಳು ಇದೆ. ಹೀಗಾಗಿ ನಾನು ಕಳೆದ 58 ವರ್ಷಗಳಿಂದ ದೇವಸ್ಥಾನಕ್ಕೆ ಹೋಗುತ್ತಿಲ್ಲ. ವಾಲ್ಮೀಕಿ ರಾಮಾಯಣದಲ್ಲಿ ರಾಮ ದೇವರಲ್ಲ ಎಂದಿದ್ದಾನೆ. ಅದಕ್ಕೆ ನಾನು ರಾಮ ದೇವರಲ್ಲ ಎನ್ನುತ್ತಿದ್ದೇನೆ. ದೇವಸ್ಥಾನಗಳಿಗೆ ಹೋದರೆ ನಮ್ಮಲ್ಲಿ ಮೌಢ್ಯ ಬೆಳೆಯುತ್ತದೆ. ಆದ್ದರಿಂದ ನಾನು ದೇವಸ್ಥಾನಕ್ಕೆ ಹೋಗಲ್ಲ ನೀವೂ ಹೋಗಬೇಡಿ ಅಲ್ಲಿ ದೇವರಿಲ್ಲ ಎಂದಿದ್ದಾರೆ.

  • ಚಿತ್ರದುರ್ಗದಲ್ಲಿ ನಡೆಯುತ್ತೆ ಮುಗ್ಧ ಮಕ್ಕಳನ್ನು ಮುಳ್ಳಿನ ಮೇಲೆ ಉರುಳಾಡಿಸೋ ಆಚರಣೆ

    ಚಿತ್ರದುರ್ಗದಲ್ಲಿ ನಡೆಯುತ್ತೆ ಮುಗ್ಧ ಮಕ್ಕಳನ್ನು ಮುಳ್ಳಿನ ಮೇಲೆ ಉರುಳಾಡಿಸೋ ಆಚರಣೆ

    ಚಿತ್ರದುರ್ಗ: ರಾಜ್ಯ ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತರೋ ಸಿದ್ಧತೆಯಲ್ಲಿದೆ. ಆದರೆ ಮುಗ್ಧ ಮಕ್ಕಳನ್ನು ಮುಳ್ಳಿನ ಮೇಲೆ ಉರುಳಾಡಿಸೋ ಅಮಾನವೀಯ ಆಚರಣೆಯೊಂದು ಚಿತ್ರದುರ್ಗದಲ್ಲಿ ನಡೆದಿದೆ.

    ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಶೇ. 65ರಷ್ಟು ಹಿಂದುಳಿದ ಜನಾಂಗದವರಿದ್ದಾರೆ. ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ಇಂದಿಗೂ ಜೀವಂತವಾಗಿವೆ. ಇದಕ್ಕೆ ಸಾಕ್ಷಿ ಜಿಲ್ಲೆಯ ಹೊಸದುರ್ಗ ತಾಲೂಕಿನ ಐಲಾಪುರ ಎಂಬ ಗ್ರಾಮದಲ್ಲಿ ನಡೆಯುವ ಮುಳ್ಳಿನ ಪವಾಡ. ನವರಾತ್ರಿ ಆಚರಣೆಯ ಕೊನೆಯ ದಿನದಂದು ಈ ಗ್ರಾಮದಲ್ಲಿ ನಡೆಯೋ ದುರ್ಗಾಂಬಿಕಾ ದೇವಿಯ ಜಾತ್ರೆ ವೇಳೆ ದೇವಸ್ಥಾನದ ಮುಂಭಾಗದಲ್ಲಿ ಜಾಲಿ ಮುಳ್ಳಿನ ಗುಡ್ಡೆ ಹಾಕಿ ಅದರ ಮೇಲೆ ಮಕ್ಕಳನ್ನ ಮಲಗಿಸಿ ಉರುಳಾಡಿಸಲಾಗುತ್ತೆ. ಹೀಗೆ ಮಾಡಿದರೆ ಇಡೀ ಊರಿಗೆ ಒಳ್ಳೇದಾಗುತ್ತೆ ಎಂದು ನಂಬಿದ್ದಾರೆ.

    ಮುಳ್ಳಿನ ಮೇಲೆ ಮಕ್ಕಳನ್ನ ಮಲಗಿಸಿ ಹರಕೆ ತೀರಿಸುವ ತಾಯಂದಿರನ್ನು ಕೇಳಿದರೆ, ನಾವು ತಲಾ ತಲಾಂತರದಿಂದ ಈ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದು ಹೇಳುತ್ತಾರೆ. ರಾಜ್ಯದೆಲ್ಲೆಡೆ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿ ಬಗ್ಗೆ ಚರ್ಚೆಗಳು ಶುರುವಾಗಿದೆ. ಆದರೆ ಚಿತ್ರದುರ್ಗದಲ್ಲಿ ಮಾತ್ರ ಹೂವಿನಂತ ಚರ್ಮದ ಮಕ್ಕಳನ್ನು ಮುಳ್ಳಿನ ಮೇಲೆ ಮಲಗಿಸುತ್ತಾರೆ.

  • ಚಾಮರಾಜನಗರಕ್ಕೆ ಪದೇ ಪದೇ ನಾನು ಬರೋದು ಯಾಕೆ: ಸಿಎಂ ಉತ್ತರಿಸಿದ್ದು ಹೀಗೆ

    ಚಾಮರಾಜನಗರಕ್ಕೆ ಪದೇ ಪದೇ ನಾನು ಬರೋದು ಯಾಕೆ: ಸಿಎಂ ಉತ್ತರಿಸಿದ್ದು ಹೀಗೆ

    ಚಾಮರಾಜನಗರ: ಅಂಟಿರುವ ಮೌಢ್ಯವನ್ನು ಹೋಗಲಾಡಿಸಲು ನಾನು ಪದೇ ಪದೇ ಚಾಮರಾಜನಗರಕ್ಕೆ ಬರುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದ ಬಿ.ರಾಚಯ್ಯ ಜೋಡಿರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ತಾಲೂಕಿನ ಆಲೂರು ಗ್ರಾಮದಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಸ್ಮಾರಕ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಮಾಧ್ಯಮದ ಜೊತೆ ಮಾತನಾಡಿದ ಸಿಎಂ, ನಾನು ಇಲ್ಲಿ 7 ಬಾರಿ ಬಂದಿರುವುದು ಇಲ್ಲಿನ ಮೌಢ್ಯವನ್ನು ತಡೆಯಲು ಎಂದು ಹೇಳಿದರು.

    ನಾನು ಇಲ್ಲಿಗೆ ಬರುತ್ತಿರುವುದರಿಂದ ಈ ಜಿಲ್ಲೆಯ ನಗರದ ಮೌಢ್ಯ ಅಳಿಸಿ ಹೋಗಿದೆ. ಅಷ್ಟೇ ಅಲ್ಲದೇ ನನ್ನ ಕುರ್ಚಿಯೂ ಸಹ ಗಟ್ಟಿಯಾಗಿದೆ ಎಂದು ಚಾಮರಾಜನಗರಕ್ಕಿರುವ ಅಪನಂಬಿಕೆ ವಿರುದ್ಧ ಸಿಎಂ ಧ್ವನಿ ಎತ್ತಿದರು.

    ವೀರಶೈವ ಲಿಂಗಾಯಿತ ಧರ್ಮದ ವಿಚಾರದಲ್ಲಿ ಸರ್ಕಾರದ ನಿಲುವು ಯಾವುದು ಇಲ್ಲ ಎಂದು ಸ್ಪಷ್ಟಪಡಿಸಿದ ಅವರು ವೀರಶೈವ ಲಿಂಗಾಯಿತ ಧರ್ಮದ ವಿಚಾರದಲ್ಲಿ ಸರ್ಕಾರದ ಯಾವುದೇ ನಿಲುವು ಇಲ್ಲ. ಆದರೆ ಇದನ್ನು ನಾನೂ ಹುಟ್ಟಿ ಹಾಕಿದ್ದು ಎಂದು ಬಿಂಬಿಸಲಾಗುತ್ತಿದೆ. ಆದರೆ ಈ ವಿಚಾರವನ್ನ ನಾನೂ ಹುಟ್ಟಾಕಿದ್ದಲ್ಲ. ಇದರಲ್ಲಿ ನನ್ನ ಪಾತ್ರ ಮತ್ತು ನಿಲುವು ಏನು ಇಲ್ಲ. ಮಾತೇ ಮಹದೇವಿ ಮತ್ತು ಶಾಮನೂರು ಶಿವಶಂಕರಪ್ಪ ಪತ್ರ ಬರೆದಿದ್ದರು ಅಷ್ಟೆ ಎಂದರು.

    ತಮಿಳುನಾಡಿಗೆ ಕಬಿನಿ ನೀರು ಬಿಟ್ಟಿರುವ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ನಾಲ್ಕು ಜಲಾಶಯಗಳಲ್ಲಿ 40 ಟಿ ಎಂಸಿ ಯಷ್ಟು ನೀರಿದೆ. ನೀರು ಬಿಡದೇ ಇದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಹಾಗಾಗಿ ಕಾವೇರಿ ನ್ಯಾಯಾಧಿಕರಣದ ಆದೇಶದ ಪ್ರಕಾರ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ. ಅದೇ ರೀತಿ ನಮ್ಮ ರೈತರಿಗೂ ಇಂದಿನಿಂದ ನೀರು ಬಿಡಲಾಗುತ್ತಿದೆ ಎಂದು ತಿಳಿಸಿದರು.

  • ಮೌಢ್ಯ ವಿರೋಧಿ ಸರ್ಕಾರದಿಂದ ಮೌಢ್ಯಾಚರಣೆ: ಮಳೆಗಾಗಿ ಪರ್ಜನ್ಯ ಹೋಮಕ್ಕೆ ಸಿದ್ಧತೆ

    ಮೌಢ್ಯ ವಿರೋಧಿ ಸರ್ಕಾರದಿಂದ ಮೌಢ್ಯಾಚರಣೆ: ಮಳೆಗಾಗಿ ಪರ್ಜನ್ಯ ಹೋಮಕ್ಕೆ ಸಿದ್ಧತೆ

    ಬೆಂಗಳೂರು: ರಾಜ್ಯದಲ್ಲಿ ರಣಭೀಕರ ಬರ ಇದ್ದರೂ ಸಮರ್ಪಕವಾಗಿ ನಿಭಾಯಿಸದ ಆಡಳಿತ-ವಿಪಕ್ಷ, ರಾಜ್ಯ-ಕೇಂದ್ರ ಅಂತ ಹೇಳಿ ಸರ್ಕಾರ-ಜನಪ್ರತಿನಿಧಿಗಳು ಕೆಸರೆರಚಾಟದಲ್ಲೇ ಕಾಲಕಳೆದ್ರು. ವಿಪಕ್ಷಗಳು ಮಳೆಗಾಲದ ಆರಂಭದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡು ನಗೆಪಾಟಲಿಗೀಡಾದ್ರೆ, ಈಗ ಸರ್ಕಾರ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಪರ್ಜನ್ಯ ಹೋಮ ನಡೆಸಲು ಮುಂದಾಗಿದೆ.

    ಅದರಲ್ಲೂ ಮೌಢ್ಯ ವಿರೋಧಿ ಅಂತ ಹೇಳೋ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕೇರಳ ಪಂಡಿತರನ್ನ ಕರೆಸಿ ನೀರಾವರಿ ನಿಗಮ ಹೋಮ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

    ರಾಜ್ಯದ ಜೀವನದಿಗಳಾದ ಉತ್ತರದ ಕೃಷ್ಣಾನದಿ ಮೂಲದ ಮಹಾಬಲೇಶ್ವರದಲ್ಲಿ ಶುಕ್ರವಾರ, ದಕ್ಷಿಣದ ಕಾವೇರಿ ನದಿಮೂಲ ಭಾಗಮಂಡಲದಲ್ಲಿ ಶನಿವಾರ ಪರ್ಜನ್ಯ ಹೋಮ ನಡೆಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಎರಡೂ ಕಡೆ 20 ಲಕ್ಷ ರೂ. ಖರ್ಚು ಮಾಡಲು ಸರ್ಕಾರ ಮುಂದಾಗಿದೆ.

    ಟಿಆರ್‍ಪಿಗಾಗಿ ಮಾಡ್ತಿದ್ದೀರಿ: ಪರ್ಜನ್ಯ ಹೋಮ ಮಾಡ್ತಿರೋದ್ರ ಬಗ್ಗೆ ಸಂಜೆ 5 ಗಂಟೆ ನ್ಯೂಸ್‍ನಲ್ಲಿ ಜಲಸಂಪನ್ಮೂಲ ಸಚಿವರಾದ ಎಂ.ಬಿ. ಪಾಟೀಲ್ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿತು. ಈ ವೇಳೆ ದೂರವಾಣಿಯಲ್ಲಿ ಮಾತನಾಡಿದ ಸಚಿವರು ಸರ್ಕಾರದ ನಡೆಯನ್ನ ಬಲವಾಗಿ ಸಮರ್ಥಿಸಿಕೊಂಡು, ಇದ್ದಕ್ಕಿದ್ದಂತೆ ಭಾವೋದ್ವೇಗಕ್ಕೆ ಒಳಗಾಗಿ, ಟಿಆರ್‍ಪಿಗಾಗಿ ನೀವಿದನ್ನು ವಿವಾದ ಮಾಡ್ತಿದ್ದೀರಾ ಅಂದ್ರು. ಅಷ್ಟೇ ಅಲ್ಲ, ಇಂಥದ್ದನ್ನ ಕಡಿವಾಣ ಹಾಕೋಕೆ ಸದನ ಸಮಿತಿ ಮಾಡ್ತಿದ್ದೀವಿ ಅಂತ ಹೇಳಿದರು.

    ಈ ಸಂಬಂಧ ಫೇಸ್‍ಬುಕ್‍ನಲ್ಲಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಎಂಬಿ ಪಾಟೀಲ್, ನಗರೀಕರಣದ ಪರಿಣಾಮದಿಂದಾಗಿ ಕರ್ನಾಟಕ ಭೀಕರ ಬರವನ್ನು ಎದುರಿಸುತ್ತಿದೆ. ಹೀಗಾಗಿ ರೈತರ ಸಲಹೆಯ ಮೇರೆಗೆ ನಾವು ಪೂಜೆಯನ್ನು ನಡೆಸುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಪೂಜೆಗೆ ಆಗಮಿಸಬೇಕೆಂದು ಅವರು ಕೇಳೀಕೊಂಡಿದ್ದಾರೆ.

    ನಾವು ನಂಬಲ್ಲ: ಮಳೆಗಾಗಿ ಪರ್ಜನ್ಯ ಹೋಮದ ಮೂಲಕ ಮೌಢ್ಯ ಆಚರಣೆ ಮಾಡ್ತಿರೋ ಸಿಎಂ, ನಾವಿದನ್ನೆಲ್ಲಾ ನಂಬೋದಿಲ್ಲ ಅಂತ ಬೆಂಗಳೂರಿನಲ್ಲಿ ರಾಗ ಎಳೆದಿದ್ದಾರೆ. ವಿಕಾಸಸೌಧದಲ್ಲಿ ಮಕ್ಕಳ ಜೊತೆ ಮಕ್ಕಳ ರಕ್ಷಣೆ, ಆರೋಗ್ಯ, ಶಿಕ್ಷಣ, ಸಂಬಂಧಪಟ್ಟಂತೆ ಸಂವಾದ ನಡೆಸಿದ್ರು.

    ಈ ವೇಳೆ, ಸಿಎಂಗೆ ಮಕ್ಕಳು ಪ್ರಶ್ನೆಗಳ ಸುರಿಮಳೆ ಎದುರಾಯ್ತು. ಅದರಲ್ಲಿ ಗಮನ ಸೆಳೆದಿದ್ದು, ವಾಮಾಚಾರ, ಮೂಢನಂಬಿಕೆ ಹೆಸರಲ್ಲಿ ಮಕ್ಕಳ ಬಲಿ. ಇದರ ಬಗ್ಗೆ ಸರ್ಕಾರ ಯಾವ ಕ್ರಮಕೈಗೊಂಡಿದೆ ಅಂತ ರಾಮನಗರದ ವಿದ್ಯಾರ್ಥಿನಿ ಅಮೂಲ್ಯ ಪ್ರಶ್ನಿಸಿದ್ರು.

    ಉತ್ತರ ಕೊಟ್ಟ ಸಿಎಂ, ಸಮಾಜದಲ್ಲಿ ಮೂಢನಂಬಿಕೆ ಹೆಚ್ಚಿದೆ. ಮೌಢ್ಯದ ವಿರುದ್ಧ ಕಾನೂನಿಗೆ ಚಿಂತನೆ ನಡೆದಿದೆ ಅಂದ್ರು. ತಮ್ಮ ಕಾರಿನ ಮೇಲೆ ಕಾಗೆ ಕೂತದ್ದು, ಚಾಮರಾಜನಗರಕ್ಕೆ ಎಂಟ್ರಿ ಕೊಟ್ಟದ್ದು ಎಲ್ಲವನ್ನೂ ಉದಾಹರಣೆ ಸಹಿತ ವಿವರಿಸಿದ್ರು. ಇದೇ ವೇಳೆ, ನಾನು ಮೊದಲು ಸಿಗರೇಟ್ ಸೇದ್ತಿದೆ. ಸಮಸ್ಯೆ ಆದ ಕಾರಣ ಬಿಟ್ಟುಬಿಟ್ಟೆ ಅಂತ ಹೇಳಿದ್ರು. ಇನ್ನು, ತಂದೆ ಸಾಲತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿ ಕುಟುಂಬಕ್ಕೆ ದಿಕ್ಕಿಲ್ಲದಂತಾಗಿದೆ ಅಂತ ನೋವು ತೋಡಿಕೊಂಡ ರೈತನ ಮಗನಿಗೆ 5 ಲಕ್ಷ ಕೊಡುವಂತೆ ಸಿಎಂ ಸೂಚಿಸಿದ್ರು.

    ಪಬ್ಲಿಕ್ ಟಿವಿಗೆ ನೀರಾವರಿ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ ವಿಡಿಯೋ ಇಲ್ಲಿದೆ.

    https://www.youtube.com/watch?v=Uz2rsEJ-xKw