Tag: ಮೋಡಬಿತ್ತನೆ

  • ಮುಂಗಾರು ಕೈಕೊಡುವ ಮುನ್ಸೂಚನೆ – 88 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ

    ಮುಂಗಾರು ಕೈಕೊಡುವ ಮುನ್ಸೂಚನೆ – 88 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ

    ಬೆಂಗಳೂರು: ಈ ಬಾರಿ ಮುಂಗಾರು ಕೈ ಕೊಡುವ ಮುನ್ಸೂಚನೆ ದೊರೆತಿರುವ ಹಿನ್ನಲೆಯಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.

    ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು, ಈ ಬಾರಿ ಮುಂಗಾರು ಕೈ ಕೊಡುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಮೋಡ ಬಿತ್ತನೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದೇವೆ. ಈ ಬಾರಿ ಎರಡು ವರ್ಷದ ಅವಧಿಗೆ ಟೆಂಡರ್ ಕರೆಯಲು ತೀರ್ಮಾನ ಮಾಡಿದ್ದು, ಜೂನ್ ಕೊನೆ ವಾರದಲ್ಲಿ ಈ ಬಾರಿ ಮೋಡ ಬಿತ್ತನೆ ನಡೆಯಲಿದ್ದು, ಸುಮಾರು 88 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆಗೆ ನಿರ್ಧಾರ ಮಾಡಿದ್ದೇವೆ. ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಪ್ರಾರಂಭ ಮಾಡುವುದಾಗಿ ತಿಳಿಸಿದರು.

    ರಾಜ್ಯಾದ್ಯಂತ ಮೋಡ ಬಿತ್ತನೆ ಮಾಡಲಿದ್ದು, ಹುಬ್ಬಳಿ ಮತ್ತು ಬೆಂಗಳೂರಿನಲ್ಲಿ ಎರಡು ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಎರಡು ವಿಮಾನದಲ್ಲಿ ಈ ಬಾರಿ ಮೋಡ ಬಿತ್ತನೆ ಮಾಡಲಾಗುತ್ತದೆ. ತಜ್ಞರ ಸಮಿತಿ ಕೂಡಾ ಮೋಡ ಬಿತ್ತನೆ ಅವಶ್ಯಕತೆ ಇದೆ ಎಂದು ತಿಳಿಸಿದೆ. ಹೀಗಾಗಿ ಮೋಡ ಬಿತ್ತನೆಗೆ ಸರ್ಕಾರ ನಿರ್ಧಾರ ಮಾಡಿದೆ ಎಂದು ಸ್ಪಷ್ಟಪಡಿಸಿದರು.

    ಇದೇ ವೇಳೆ ಬರ ಪರಿಹಾರ ಕ್ರಮವಾಗಿ ಕೈಗೊಂಡಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಸಚಿವರು, ಇಷ್ಟು ದಿನ ಚುನಾವಣಾ ನೀತಿ ಸಂಹಿತೆ ಜಾರಿದ್ದ ಪರಿಣಾಮ ಸಭೆಗೆ ಅನುಮತಿ ಇರಲಿಲ್ಲ. ಇಂದು ಆಯೋಗದಿಂದ ಅನುಮತಿ ಪಡೆದು ಸಭೆ ನಡೆಸುತ್ತಿದ್ದೆವೆ. ಈಗಾಗಲೇ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿದ್ದೇವೆ. ಎಲ್ಲಾ ತಾಲೂಕು, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ಹಣ ಸಂದಾಯ ಮಾಡಿದ್ದು, ಅಗತ್ಯ ಕಡೆಗಳಲ್ಲಿ ಟ್ಯಾಂಕರ್ ನಲ್ಲಿ ನೀರು ಕೊಡಿ ಎಂದು ಹೇಳಿದ್ದೇವೆ. ಈಗಾಗಲೇ ಬಾಡಿಗೆಗೆ ಬೋರ್ ವೇಲ್‍ಗಳ ನೀಡು ಪಡೆದು ಪೂರೈಕೆ ಮಾಡುತ್ತಿದ್ದೇವೆ. ಜಾನುವಾರುಗಳ ಮೇವಿನ ಬಗ್ಗೆ ಸೂಕ್ತ ಕ್ರಮಕ್ಕೂ ಸೂಚನೆ ನೀಡಿದ್ದೇವೆ ಎಂದರು.

    ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 200 ಕೋಟಿ ರೂ.ಗಳನ್ನು ಟಾಸ್ಕ್ ಫೋರ್ಸ್ ಗೆ ಬಿಡುಗಡೆ ಮಾಡಿದ್ದೇವೆ. ಹಣ ಖರ್ಚಾದರೆ ಎಷ್ಟು ಹಣ ಬೇಕಾದರೂ ಕೊಡಲು ಸರ್ಕಾರ ಸಿದ್ಧವಾಗಿದೆ. 24 ಗಂಟೆಯೊಳಗೆ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಇಲಾಖೆ ಸ್ಥಾಪಿಸಿರುವ ಸಹಾಯವಾಣಿಗೆ ಕರೆ ಮಾಡಬಹುದು ಎಂದರು.

  • ಮಳೆಯಾಗ್ತಿರೋ ಹೊತ್ತಲ್ಲೇ ರಾಜ್ಯದಲ್ಲಿ ಮೋಡ ಬಿತ್ತನೆ- ಇಂದಿನಿಂದ 2 ತಿಂಗಳು ಬಿತ್ತನೆ ಕಾರ್ಯ

    ಮಳೆಯಾಗ್ತಿರೋ ಹೊತ್ತಲ್ಲೇ ರಾಜ್ಯದಲ್ಲಿ ಮೋಡ ಬಿತ್ತನೆ- ಇಂದಿನಿಂದ 2 ತಿಂಗಳು ಬಿತ್ತನೆ ಕಾರ್ಯ

    ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರೋ ಕಾರಣ ರಾಜ್ಯದಲ್ಲಿ ನಾಲ್ಕೈದು ದಿನ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ. ಇದನ್ನೇ ಸದುಪಯೋಗಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರ, ಮೋಡ ಬಿತ್ತನೆ ಮಾಡ್ತಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆ ನಡೆದಿದೆ.

    ನಿತ್ಯ ಸಂಜೆ ಆಯ್ತು ಅಂದ್ರೆ ವರುಣದೇವನ ಲೀಲೆ ಶುರುವಾಗಿರುತ್ತೆ. ರಾಜ್ಯದ ಹಲವೆಡೆ ಮಳೆರಾಯ ಧೋ ಅಂತಾ ಸುರೀತಿದ್ದಾನೆ. ರಾಜ್ಯದಲ್ಲಿ ಚೆನ್ನಾಗಿ ಮಳೆಯಾಗ್ತಿರೋ ಈ ಹೊತ್ತಲ್ಲಿ ರಾಜ್ಯ ಸರ್ಕಾರ ಮೋಡಬಿತ್ತನೆ ಹೆಸ್ರಲ್ಲಿ ಕೋಟಿ ಕೋಟಿ ಹಣವನ್ನು ನೀರಲ್ಲಿ ಹೋಮ ಮಾಡಲು ಮುಂದಾಗಿದೆ.

     ಇಂದಿನಿಂದ ರಾಜ್ಯದಲ್ಲಿ ಮೋಡಬಿತ್ತನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಮಧ್ಯಾಹ್ನ 12 ಗಂಟೆಗೆ ಜಕ್ಕೂರ್ ವಾಯುನೆಲೆಯಿಂದ ಟೇಕ್ ಆಫ್ ಆಗಲಿರುವ ಅಮೆರಿಕದ ವಿಶೇಷ ವಿಮಾನದ ಮೂಲಕ ಮೋಡ ಬಿತ್ತನೆ ಮಾಡಲಾಗುತ್ತದೆ.

    ಮೋಡಬಿತ್ತನೆ ಸಲುವಾಗಿಯೇ ಜಿಕೆವಿಕೆ ಅಂಗಳದಲ್ಲಿ ರಡಾರ್ ಹಾಗು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಮೊದಲು ದಕ್ಷಿಣ ಕರ್ನಾಟಕ ಭಾಗ ಅಂದ್ರೆ ಬೆಂಗಳೂರು, ಕಾವೇರಿ ಜಲಾನಯನ ಪ್ರದೇಶ, ತುಂಗಭದ್ರಾ ಭಾಗಗಳಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ಬರೋಬ್ಬರಿ 33 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಹೊಯ್ಸಳ ಸಂಸ್ಥೆಗೆ ಮೋಡಬಿತ್ತನೆಯ ಪ್ರಾಜೆಕ್ಟ್ ಸಿಕ್ಕಿದೆ. ಇನ್ನು 2- 3 ದಿನಗಳ ಅಂತರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿಯೂ ಮೋಡಬಿತ್ತನೆ ಕಾರ್ಯ ಆರಂಭವಾಗಲಿದೆ ಎನ್ನಲಾಗಿದೆ.

    ಹೇಗೆ ನಡೆಯುತ್ತೆ ಮೋಡ ಬಿತ್ತನೆ?: ಮಳೆ ಮೋಡಗಳ ಮೇಲೆ ನಿಗಾ ಇಡುವ ರಡಾರ್ 360 ಡಿಗ್ರಿ ಸುತ್ತಳತೆಯ 200 ಕಿಲೋಮೀಟರ್ ದೂರದ ಮೋಡಗಳ ಮೇಲೆ ಕೇಂದ್ರೀಕರಿಸಲಾಗುತ್ತೆ. ಮೋಡದ ಸಾಂದ್ರತೆಯ ತೀವ್ರತೆ ಮತ್ತು ಮೋಡ ಚದುರಿವಿಕೆ ಸಾಮಥ್ರ್ಯವನ್ನು ಚಿತ್ರದ ಮೂಲಕ ನಿಯಂತ್ರಣ ಕೊಠಡಿಯ ಕಂಪ್ಯೂಟರ್‍ಗೆ ರಡಾರ್ ರವಾನಿಸುತ್ತೆ. ಅಲ್ಲಿಂದ ವಿಹೆಚ್‍ಪಿ ಸಂಪರ್ಕ ವಾಹಕದ ಮೂಲಕ ಮೋಡ ಬಿತ್ತನೆಯ ಪೈಲಟ್‍ಗೆ ಸಂದೇಶ ರವಾನೆಯಾಗುತ್ತೆ. ತಾಂತ್ರಿಕ ಟೀಮ್‍ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ತಕ್ಷಣ ಮೋಡ ಬಿತ್ತನೆ ಕಾರ್ಯ ಶುರುವಾಗುತ್ತದೆ.

    ಒಟ್ಟು ಎರಡು ತಿಂಗಳ ಕಾಲ ಈ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ಆದ್ರೆ ಇದುವರೆಗೆ ಮೋಡ ಬಿತ್ತನೆ ಯಶಸ್ವಿಯಾದ ಉದಾಹರಣೆಗಳೇ ಇಲ್ಲ.