Tag: ಮೊಹಮ್ಮದ್ ಶಾರುಖ್

  • ದೆಹಲಿಯಲ್ಲಿ ಗುಂಡು ಹಾರಿಸಿ, ಗಲಭೆಗಳನ್ನು ಪ್ರಚೋದಿಸಿದ್ದ ಶಾರುಖ್ ಅರೆಸ್ಟ್

    ದೆಹಲಿಯಲ್ಲಿ ಗುಂಡು ಹಾರಿಸಿ, ಗಲಭೆಗಳನ್ನು ಪ್ರಚೋದಿಸಿದ್ದ ಶಾರುಖ್ ಅರೆಸ್ಟ್

    – ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಆರೋಪಿಯ ಬಂಧನ

    ನವದೆಹಲಿ: 47ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಈಶಾನ್ಯ ದೆಹಲಿ ದಂಗೆಯಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದ ಆರೋಪಿ ಮೊಹಮ್ಮದ್ ಶಾರೂಖ್‍ನನ್ನು ಶಾಮ್ಲಿ ಜಿಲ್ಲೆಯ ಬರೇಲಿಯಲ್ಲಿ ಇಂದು ಬಂಧಿಸಲಾಗಿದೆ.

    ಆರೋಪಿ ಮೊಹಮ್ಮದ್ ಶಾರುಖ್ ಫೆಬ್ರವರಿ 24ರಂದು ಜಫರಾಬಾದ್‍ನ ಪೊಲೀಸರ ಮೇಲೆ ಪಿಸ್ತೂಲ್‍ನಿಂದ 8 ಸುತ್ತು ಗುಂಡು ಹಾರಿಸಿದ್ದ. ಶಾರೂಖ್ ಗನ್ ತೋರಿಸಿದಾಗ ಬೆದರದ ಪೊಲೀಸ್ ಅಧಿಕಾರಿ ಎರಡು ಕೈ ಮೇಲೆತ್ತಿ ಮುಂದೆ ಸಾಗಿದ್ದರು. ಆಗ ಶಾರೂಖ್ 2 ಗುಂಡುಹಾರಿಸಿದ್ದ. ಇದನ್ನು ಸ್ಥಳೀಯರು ಮೊಬೈನ್‍ಲ್ಲಿ ಸೆರೆ ಹಿಡಿದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಾರುಖ್ ಬಂಧನಕ್ಕಾಗಿ ಬಲೆ ಬೀಸಿದ್ದರು. ಕಳೆದ 8 ದಿನಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಇಂದು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.

    ಈ ಹಿಂದೆ ಅಪರಾಧ ವಿಭಾಗವು ಶಾರುಖ್‍ನನ್ನು ಬರೇಲಿಯಲ್ಲಿ ಹುಡುಕಾಡಿತ್ತು. ಬಳಿಕ ದೆಹಲಿ ಪೊಲೀಸ್ ಹಾಗೂ ಅಪರಾಧ ವಿಭಾಗದ 10 ತಂಡಗಳು ಆರೋಪಿಗೆ ಶೋಧ ಕಾರ್ಯ ನಡೆಸಿದ್ದವು. ಗುಂಡು ಹಾರಿಸಿದ ಬಳಿಕ ಶಾರುಖ್ ಪಾಣಿಪತ್, ಕೈರಾನಾ, ಅಮ್ರೋಹ ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ತಲೆಮರೆಸಿಕೊಂಡಿದ್ದ. ಕೊನೆಯದಾಗಿ ಪೊಲೀಸರು ಶಾಮ್ಲಿಯಲ್ಲಿ ಆತನನ್ನು ಸೆರೆ ಹಿಡಿದಿದ್ದಾರೆ ಎಂದು ವರದಿಯಾಗಿದೆ. ದೆಹಲಿ ಹಿಂಸಾಚಾರದಲ್ಲಿ ಈವರೆಗೆ 47 ಜನರು ಸಾವನ್ನಪ್ಪಿದ್ದಾರೆ.

    ದೆಹಲಿ ಹಿಂಸಾಚಾರದ ನಂತರ ಶಾರುಖ್ ತಂದೆ ಸಬೀರ್ ರಾಣಾರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದರು. ಆದರೆ ಶಾರುಖ್ ತನ್ನ ತಂದೆಯನ್ನು ಇಬ್ಬರು ಸಹಚರರ ಮೂಲಕ ಬರೇಲಿಗೆ ಕಳುಹಿಸಿದ್ದ. ಹೀಗಾಗಿ ರಾಣಾ ಸುಮಾರು 4-5 ದಿನಗಳ ಕಾಲ ಇಲ್ಲಿಯೇ ಇದ್ದು, ನಂತರ ಶಾಮ್ಲಿಗೆ ಬಂದಿದ್ದ. ಈ ಕುರಿತು ಮಾಹಿತಿ ಸಿಗುತ್ತಿದ್ದ ಕಾರ್ಯಾಚರಣೆ ಚುರುಕುಗೊಳಿಸಿದ ದೆಹಲಿ ಪೊಲೀಸರು ಬರೇಲಿಯಲ್ಲಿ ಬಂಧಿಸಿದ್ದಾರೆ. ಆದರೆ ಶಾರುಖ್ ಬಂಧನದ ಬಗ್ಗೆ ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ ಎಂದು ಬರೇಲಿ ಮತ್ತು ಮೀರತ್ ಪೊಲೀಸರು ತಿಳಿಸಿದ್ದರು.

    ಮಾದಕವಸ್ತು ಕಳ್ಳಸಾಗಣೆ ವ್ಯವಹಾರ:
    ಶಾರುಖ್ ಕುಟುಂಬದವರು ಪಂಜಾಬ್ ಮೂಲದವರು. ಅವರು ಕಳೆದ ಹಲವಾರು ವರ್ಷಗಳಿಂದ ದೆಹಲಿಯ ಘೋಂಡಾದಲ್ಲಿ ವಾಸಿಸುತ್ತಿದ್ದಾರೆ. ಆತನ ತಂದೆ ಸಬೀರ್ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದ ಎಂದು ವರದಿಯಾಗಿದೆ. ಆರೋಪಿಗಳು ಪಂಜಾಬ್‍ನಿಂದ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು. ಜೊತೆಗೆ ದೆಹಲಿಯ ಅನೇಕ ಜಿಲ್ಲೆಗಳಿಗೆ ಹಾಗೂ ಉತ್ತರ ಪ್ರದೇಶಕ್ಕೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಮಾದಕ ವಸ್ತು ಮಾರಾಟ ನಿಷೇಧ ಕಾಯ್ದೆ ಅಡಿ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಪ್ರಸ್ತುತ ಸಬೀರ್ ಹಾಸಿಗೆ ಹಿಡಿದಿದ್ದಾನೆ. ಪಂಜಾಬ್, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಸಬೀರ್ ಜೈಲು ಶಿಕ್ಷೆ ಅನುಭವಿಸಿದ್ದ. ಆರೋಪಿ ಶಾರುಖ್‍ಗೆ ಇಬ್ಬರು ಸಹೋದರರೂ ಇದ್ದಾರೆ ಎಂದು ವರದಿಯಾಗಿದೆ.