Tag: ಮೊಹಮ್ಮದ್ ಕೈಫ್

  • ಸಹೋದರ ಧೋನಿ ದಯವಿಟ್ಟು ನನ್ನನ್ನು ಕ್ಷಮಿಸು- ಕೈಫ್

    ಸಹೋದರ ಧೋನಿ ದಯವಿಟ್ಟು ನನ್ನನ್ನು ಕ್ಷಮಿಸು- ಕೈಫ್

    ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅವರು ಬಟರ್ ಚಿಕನ್ ಮತ್ತು ಬಿರಿಯಾನಿ ಪ್ರಿಯರು ಎನ್ನುವುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ಇತ್ತೀಚೆಗೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಸಾಧ್ಯವಾಗದ ವಿಚಾರವಾಗಿ ಮಾತನಾಡಿ ಧೋನಿ-ಬಿರಿಯಾನಿ ಕಥೆ ಹೇಳಿದ್ದಾರೆ.

    2004ರಲ್ಲಿ ಧೋನಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದಾಗ ಕೈಫ್ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾಗಿದ್ದರು. ಆದಾಗ್ಯೂ ಕೈಫ್ ಅವರು ನಿಧಾನವಾಗಿ ಟೀಂ ಇಂಡಿಯಾದಿಂದ ಹೊರಗುಳಿದರು. ಇತ್ತ ಧೋನಿ 2007ರಲ್ಲಿ ಟಿ20 ತಂಡದ ನಾಯಕತ್ವ ವಹಿಸಿಕೊಂಡರು, ಬಳಿಕ 2008ರಲ್ಲಿ ಎಲ್ಲಾ ಮೂರು ಮಾದರಿ ಟೆಸ್ಟ್, ಏಕದಿನ, ಟಿ20 ನಾಯಕನಾಗಿ ಅನೇಕ ಸಾಧನೆಗೆ ಸಾಕ್ಷಿಯಾದರು.

    2006ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕೈಫ್ ಉತ್ತರ ಪ್ರದೇಶ ತಂಡ ಗೆಲುವಿಗೆ ಕಾರಣರಾಗಿದ್ದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಶತಕ ಗಳಿಸಿ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡುವ ನಿರೀಕ್ಷೆ ಮೂಡಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ವಿಚಾರವನ್ನು ತಮಾಷೆಯಾಗಿ ಹೇಳಿದ ಕೈಫ್, ನಮ್ಮ ಮನೆಯಲ್ಲಿ ಧೋನಿಗೆ ಸರಿಯಾಗಿ ಬಿರಿಯಾನಿ ಬಡಿಸದೇ ಇರುವುದು ಟೀಂ ಇಂಡಿಯಾ ಕಮ್‍ಬ್ಯಾಕ್‍ಗೆ ಅಡ್ಡಿಯಾಯಿತು ಎಂದು ಹೇಳಿದ್ದಾರೆ.

    ಕೈಫ್ 2006ರಲ್ಲಿ ಇಡೀ ಭಾರತದ ಕ್ರಿಕೆಟ್ ತಂಡವನ್ನು ತಮ್ಮ ನೋಯ್ಡಾ ಮನೆಗೆ ರಂಜಾನ್ ಹಬ್ಬಕ್ಕಾಗಿ ಆಹ್ವಾನಿಸಿದ್ದರು. ಈ ವೇಳೆ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಅವರಂತಹ ಹಿರಿಯ ಆಟಗಾರರು ಕೂಡ ಹಾಜರಾಗಿದ್ದರು. ಅವರಲ್ಲೆ ಒಂದು ಕೋಣೆಯಲ್ಲಿ ಕುಳಿತಿದ್ದರೆ ಎಂ.ಎಸ್.ಧೋನಿ, ಸುರೇಶ್ ರೈನಾ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಕೆಲ ಆಟಗಾರರು ಮತ್ತೊಂದು ಕೋಣೆಯಲ್ಲಿ ಕುಳಿತಿದ್ದರು. ಆಗ ಕೈಫ್ ಹಿರಿಯ ಆಟಗಾರರ ಬಗ್ಗೆ ಹೆಚ್ಚು ಕಾಳಜಿ ತೋರಿದ್ದರು.

    ಈ ವಿಚಾರವಾಗಿ ಮಾತನಾಡಿರುವ ಕೈಫ್, “2006ರಲ್ಲಿ ನಾನು ರಣಜಿ ಟ್ರೋಫಿ ಟೂರ್ನಿಯ ಫೈನಲ್‍ನಲ್ಲಿ ಶತಕ ಬಾರಿಸಿ ಉತ್ತರ ಪ್ರದೇಶದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದೆ. ಇದರಿಂದಾಗಿ ಎಂಎಸ್ ಧೋನಿ ಬಯಸಿದರೆ ನಾನು ಟೀಂ ಇಂಡಿಯಾಗೆ ಪುನರಾಗಮನ ಮಾಡಬಹುದೆಂದು ಭಾವಿಸಿದ್ದೆ” ಎಂದು ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.

    “ಎಂ.ಎಸ್.ಧೋನಿ, ಸುರೇಶ್ ರೈನಾ, ಇರ್ಫಾನ್ ಪಠಾಣ್ ಸೇರಿದಂತೆ ಕೆಲ ಆಟಗಾರರು ಒಂದು ಕೋಣೆಯಲ್ಲಿ ಕುಳಿತಿದ್ದರು. ಹಿರಿಯರಾದ ಸಚಿನ್, ಗಂಗೂಲಿ ಮತ್ತೊಂದು ಕೋಣೆಯಲ್ಲಿ ಕುಳಿತಿದ್ದರು. ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜರ ಜೊತೆಗೆ ಕುಳಿತು ಉಪಚರಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಹೆಚ್ಚಿನ ಸಮಯವನ್ನು ಹಿರಿಯರೊಂದಿಗೆ ಕಳೆದುಬಿಟ್ಟೆ. ಆ ಸಮಯದಲ್ಲಿ ಬಹುಶಃ ಧೋನಿ ಮತ್ತು ಇತರ ಕಿರಿಯ ಕ್ರಿಕೆಟಿಗರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಸಹೋದರ ಧೋನಿ ದಯವಿಟ್ಟು ನನ್ನನ್ನು ಕ್ಷಮಿಸು” ಎಂದು ಕೈಫ್ ಕೇಳಿಕೊಂಡಿದ್ದಾರೆ.

    ಕೈಫ್ 2006ರ ನವೆಂಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಪರ ಕೊನೆಯ ಪಂದ್ಯವನ್ನು ಆಡಿದ್ದರು. ಅವರು ಭಾರತ ಪರ 13 ಟೆಸ್ಟ್ ಮತ್ತು 125 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಎರಡು ಮಾದರಿಯಲ್ಲಿ ಕ್ರಮವಾಗಿ 624 ರನ್ ಮತ್ತು 2,753 ರನ್ ಗಳಿಸಿದ್ದಾರೆ. ಕೈಫ್ ತಮ್ಮ ಅದ್ಬುತ ಫೀಲ್ಡಿಂಗ್‍ಗೆ ಹೆಸರಾಗಿದ್ದರು. ಅವರು ಸಾರ್ವಕಾಲಿಕ ಅತ್ಯುತ್ತಮ ಭಾರತೀಯ ಫೀಲ್ಡರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

  • ಕ್ರಿಕೆಟ್ ಕಾಮೆಂಟೇಟರ್ ಆಗ್ತಾರಂತೆ ಯುವಿ, ಆದ್ರೆ..!?

    ಕ್ರಿಕೆಟ್ ಕಾಮೆಂಟೇಟರ್ ಆಗ್ತಾರಂತೆ ಯುವಿ, ಆದ್ರೆ..!?

    ಮುಂಬೈ: ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಶೀಘ್ರವೇ ಕಾಮೆಂಟೇಟರ್ ಆಗುತ್ತಾರಂತೆ. 2019ರ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ನಿವೃತ್ತಿ ಘೋಷಣೆ ಮಾಡಿದ್ದ ಯುವರಾಜ್ ಸಿಂಗ್, ಇತ್ತೀಚೆಗೆ ಇನ್‍ಸ್ಟಾ ಲೈವ್‍ನಲ್ಲಿ ಮೊಹಮ್ಮದ್ ಕೈಫ್‍ರೊಂದಿಗೆ ಮಾತನಾಡುತ್ತಾ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ರಿವೀಲ್ ಮಾಡಿದ್ದಾರೆ.

    ಲೈವ್ ಸಂದರ್ಭದಲ್ಲಿ ಕಾಮೆಂಟೇಟರ್ ಆಗಿ ಬದಲಾಗುವ ಅವಕಾಶ ಇದೆಯಾ ಎಂದು ಕೈಫ್ ಪ್ರಶ್ನಿಸಿದ್ದರು. ಇದಕ್ಕೂತ್ತರಿಸಿದ ಯುವಿ, ಕಾಮೆಂಟರಿ ಬಾಕ್ಸ್ ನಲ್ಲಿ ಕೆಲವರ ವಾದಗಳನ್ನು ಕೆಳಲಾಗದ ಸ್ಥಿತಿ ಇದೆ. ಆದ್ದರಿಂದ ಕಾಮೆಂಟರಿ ಬಾಕ್ಸ್ ನಲ್ಲಿ ಕುಳಿತು ಮಾತನಾಡುವುದು ಕಷ್ಟ. ಆದರೆ ಐಸಿಸಿ ಟೂರ್ನಿಗಳಲ್ಲಿ ಕಾಮೆಂಟರಿ ಹೇಳಬೇಕೆಂದು ಅನ್ನಿಸುತ್ತಿದೆ. ಮೈದಾನದಲ್ಲಿರೋ ಆಟಗಾರರಿಗೆ ಮಾತ್ರ ಸಂದರ್ಭದ ಒತ್ತಡ ಗೊತ್ತಾಗುತ್ತೆ. ಯುವ ಕ್ರಿಕೆಟಿಗರನ್ನು ಅನಗತ್ಯವಾಗಿ ವಿಮರ್ಶೆ ಮಾಡುವುದು ನನ್ನಿಂದ ಆಗುವುದಿಲ್ಲ. ಆದ್ದರಿಂದ ಹೆಚ್ಚು ದಿನ ಕಾಮೆಂಟರಿ ಮಾಡುವುದಿಲ್ಲ. ಯುವ ಆಟಗಾರರ ತಪ್ಪುಗಳನ್ನು ತಿಳಿದುಕೊಳ್ಳುವಂತೆ ಮಾಡುವುದು ಮಾತ್ರ ಕಾಮೆಂಟರಿ ನೀಡುವವರ ಜವಾಬ್ದಾರಿ ಅಷ್ಟೇ ಎಂದು ಯುವಿ ಅಭಿಪ್ರಾಯ ಪಟ್ಟಿದ್ದಾರೆ.

    2007 ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಟೀಂ ಇಂಡಿಯಾ ಗೆಲ್ಲುವಲ್ಲಿ ಯುವಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಆ ಬಳಿಕ ಯುವಿ ಕ್ರಿಕೆಟ್ ವೃತ್ತಿ ಜೀವನ ಹಳಿತಪ್ಪಿತ್ತು. ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಯುವಿ, ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ರೀತಿ ಧೋನಿ ತಮಗೆ ನಾಯಕರಾಗಿ ಸರಿಯಾದ ಬೆಂಬಲ ನೀಡಲಿಲ್ಲ. ಸುರೇಶ್ ರೈನಾಗೆ ಧೋನಿ ಬೆಂಬಲ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು ಎಂದು ಹೇಳಿದ್ದರು.

    2011ರ ವಿಶ್ವಕಪ್ ಸಂದರ್ಭದ ಟೀಂ ಇಂಡಿಯಾ ಆಯ್ಕೆಗೆ ಆಲ್‍ರೌಂಡರ್ ಗಳಾದ ಯೂಸುಫ್ ಪಠಾಣ್ ಮತ್ತು ಸುರೇಶ್ ರೈನಾ ಆಯ್ಕೆ ಗೊಂದಲ ಮೂಡಿತ್ತು. ನಾಯಕರಾಗಿದ್ದ ಧೋನಿಗೆ ರೈನಾ ಫೆವರಿಟ್ ಆಟಗಾರರರಾಗಿದ್ದರು. ಆದರೆ ಯೂಸುಫ್, ನಾನು ಉತ್ತಮ ಫಾರ್ಮ್‍ನಲ್ಲಿದ್ದೆವು. ನಾನು ವಿಕೆಟ್ ಗಳಿಸುತ್ತಿದ್ದ ಕಾರಣ ನನ್ನನ್ನು ತಂಡದಿಂದ ಕೈ ಬಿಡಲು ಸಾಧ್ಯವಾಗಿರಲಿಲ್ಲ ಎಂದು ಯುವಿ ವಿವರಿಸಿದ್ದರು.

  • ರನ್ನಿಂಗ್ ಕ್ಯಾಚ್ ಹಿಡಿದು ಸ್ವಚ್ಛ ಕೈಗಳ ಸಂದೇಶ ಕೊಟ್ಟ ಕೈಫ್

    ರನ್ನಿಂಗ್ ಕ್ಯಾಚ್ ಹಿಡಿದು ಸ್ವಚ್ಛ ಕೈಗಳ ಸಂದೇಶ ಕೊಟ್ಟ ಕೈಫ್

    ಮುಂಬೈ: ತಮ್ಮ ಜೀವನದ ಬೆಸ್ಟ್ ಕ್ಯಾಚಿಂಗ್ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ಸ್ವಚ್ಛ ಕೈಗಳ ಬಗ್ಗೆ ಉತ್ತಮ ಸಂದೇಶ ನೀಡಿದ್ದಾರೆ.

    ಕೊರೊನಾ ವೈರಸ್ ಹರಡು ಭೀತಿಯಲ್ಲಿ ಇಡೀ ದೇಶವೇ ಸ್ತಬ್ಧವಾಗಿದೆ. ಇಡೀ ದೇಶವೇ ಲಾಕ್‍ಡೌನ್ ಆದರೂ ಮಹಾಮಾರಿ ಕೊರೊನಾ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾದಿಂದ ಎಚ್ಚರವಹಿಸಲು ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಅರಿವು ಮೂಡಿಸುತ್ತಲೇ ಇದ್ದಾರೆ. ಅಂತಯೇ ಮೊಹಮ್ಮದ್ ಕೈಫ್ ಕೂಡ ಟ್ವಿಟ್ಟರ್ ನಲ್ಲಿ ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂದು ತಿಳಿ ಹೇಳಿದ್ದಾರೆ.

    ಈ ವಿಚಾರವಾಗಿ ಟ್ವೀಟ್‍ವೊಂದನ್ನು ಮಾಡಿರುವ ಕೈಫ್, ಇಂಗ್ಲೆಂಡ್ ತಂಡದ ವಿರುದ್ಧ ತಾವು ಹಿಡಿದಿರುವ ರನ್ನಿಂಗ್ ಕ್ಯಾಚ್‍ವೊಂದರ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯುವರಾಜ್ ಸಿಂಗ್ ಅವರು ಬೌಲಿಂಗ್ ಮಾಡಿದ್ದು, ಬ್ಯಾಟ್ಸ್ ಮ್ಯಾನ್ ಹೊಡೆದ ಬಾಲನ್ನು ಕೈಫ್ ತಮ್ಮ ಬಲಭಾಗಕ್ಕೆ ಓಡಿಹೋಗಿ ನಗೆದು ಕ್ಯಾಚ್ ಹಿಡಿಯುತ್ತಾರೆ. ಇದರ ಜೊತೆಗೆ ಉತ್ತಮ ಕೈಗಳು ಹೇಗೆ ಕ್ಯಾಚ್ ಬಿಡುವುದಿಲ್ಲವೋ ಹಾಗೇ ಸ್ವಚ್ಛ ಕೈಗಳಿಗೆ ವೈರಸ್ ಅಂಟುವುದಿಲ್ಲ ಎಂದು ಬರೆದು ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂಬ ಸಂದೇಶ ನೀಡಿದ್ದಾರೆ.

    ಈ ಹಿಂದೆಯೂ ಕೂಡ ಮೋದಿ ಅವರ ಜನತಾ ಕರ್ಫ್ಯೂಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದ ಕೈಫ್ ಅವರು, ನರೇಂದ್ರ ಮೋದಿ ಅವರು ನಮ್ಮ ದೇಶ ಕೊರೊನಾ ವೈರಸ್ ವಿರುದ್ಧ ಹೋರಾಡಲು ಒಳ್ಳೆಯ ಸಂದೇಶ ಕೊಟ್ಟಿದ್ದಾರೆ. ಮುಂಬರುವ ಸವಾಲುಗಳಿಗೆ ನಮ್ಮನ್ನು ಸಿದ್ಧಪಡಿಸಲು ಮೋದಿ ಜನತಾ ಕರ್ಫ್ಯೂ ಹಾಕಿದ್ದಾರೆ. ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಲು ಭಯಪಡಬೇಡಿ. ನಮ್ಮ ಪ್ರೀತಿ ಪಾತ್ರರು ಮತ್ತು ನಮ್ಮ ದೇಶದ ಜನರ ಯೋಗಕ್ಷೇಮದ ಜವಾಬ್ದಾರಿಯನ್ನು ನಾವು ತಗೆದುಕೊಳ್ಳುವ ಸಮಯವಿದು ಎಂದು ಬರೆದುಕೊಂಡಿದ್ದರು.

    ಜನತಾ ಕಫ್ರ್ಯೂ ಸಲುವಾಗಿ ಟ್ವೀಟ್ ಮಾಡಿದ್ದ ಕೈಫ್ ಮತ್ತು ಯುವರಾಜ್ ಇಬ್ಬರ ಟ್ವೀಟ್‍ಗೆ ರೀಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ ಅವರು, ಇಬ್ಬರು ಅತ್ಯುತ್ತಮ ಕ್ರಿಕೆಟಿಗರು ಇಲ್ಲಿದ್ದಾರೆ. ಅವರ ಜೊತೆಯಾಟವನ್ನು ನಾವು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇವೆ. ಈಗ ಅವರು ಹೇಳಿದಂತೆ ಇದು ಮತ್ತೊಂದು ಜೊತೆಯಾಟದ ಸಮಯ. ಈ ಬಾರಿ ಇಡೀ ಭಾರತವೇ ಒಂದು ಒಳ್ಳೆಯ ಜೊತೆಯಾಟವಾಗಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಮಾಡಬೇಕು ಎಂದು ಹೇಳಿದ್ದರು.

  • 9 ಎಸೆತಗಳಲ್ಲಿ 2 ಸಿಕ್ಸ್, 4 ಬೌಂಡರಿ ಸೇರಿ 31 ರನ್ ಚಚ್ಚಿದ ಪಠಾಣ್

    9 ಎಸೆತಗಳಲ್ಲಿ 2 ಸಿಕ್ಸ್, 4 ಬೌಂಡರಿ ಸೇರಿ 31 ರನ್ ಚಚ್ಚಿದ ಪಠಾಣ್

    ಮುಂಬೈ: ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಇರ್ಫಾನ್ ಪಠಾಣ್ ಸ್ಫೋಟಕ ಬ್ಯಾಟಿಂಗ್ ಹಾಗೂ ಮೊಹಮ್ಮದ್ ಕೈಫ್ ಉತ್ತಮ ಬ್ಯಾಟಿಂಗ್ ದರ್ಶನದಿಂದ ಭಾರತ ಲೆಜೆಂಡ್ಸ್ ತಂಡವು ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ 5 ವಿಕೆಟ್‍ಗಳ ಗೆಲುವು ಸಾಧಿಸಿದೆ.

    ರೋಡ್ ಸೇಫ್ಟಿ ವಲ್ರ್ಡ್ ಸೀರೀಸ್ 2020 ಟೂರ್ನಿಯ ಭಾಗವಾಗಿ ಕೆ.ಎಲ್.ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಶ್ರೀಲಂಕಾ ಲೆಜೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರತವು 9 ಎಸೆತಗಳು ಬಾಕಿ ಇರುವಂತೆ ಗೆದ್ದು ಬೀಗಿದೆ. ಇದನ್ನೂ ಓದಿ: ‘ಮಿಸ್ಟರ್ 360’ ರಾಹುಲ್ ಈ ಯುಗದ ನನ್ನ ನೆಚ್ಚಿನ ಬ್ಯಾಟ್ಸ್‌ಮನ್: ಬ್ರಿಯಾನ್ ಲಾರಾ

    ಶ್ರೀಲಂಕಾ ವಿರುದ್ಧ ಗೆಲುವು ದಾಖಲಿಸಲು ಕೊನೆಯ 18 ಎಸೆತಗಳಲ್ಲಿ 39 ರನ್ ಗಳಿಸಬೇಕಿತ್ತು. ಈ ಸ್ಫೋಟಕ ಬ್ಯಾಟಿಂಗ್ ತೋರಿದ ಇರ್ಫಾನ್ ಪಠಾಣ್ ಒಂಬತ್ತು ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ಹಾಗೂ ಮೂರು ಒಂಟಿ ರನ್ ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು. ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿದ ಇರ್ಫಾನ್ ಪಠಾಣ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಲೆಜೆಂಡ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ಮಾಡಿದ ಭಾರತವು 18.4 ಓವರ್ ಗಳಲ್ಲಿ 5 ವಿಕೆಟ್‍ಗೆ ಗುರಿ ತಲುಪಿತು. ಭಾರತದ ಪರ ಇರ್ಫಾನ್ ಪಠಾಣ್ ಔಟಾಗದೆ 57 ರನ್ ಮತ್ತು ಮೊಹಮ್ಮದ್ ಕೈಫ್ 46 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

    ಭಾರತೀಯ ಇನ್ನಿಂಗ್ಸ್ ಆರಂಭವು ತುಂಬಾ ಕೆಟ್ಟದಾಗಿತ್ತು. ಆರಂಭಿಕ 3 ವಿಕೆಟ್‍ಗಳು 19 ರನ್‍ಗಳಿಗೆ ಕುಸಿದವು. ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ 3 ರನ್ ಮತ್ತು ಸಚಿನ್ ತೆಂಡೂಲ್ಕರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ಮರಳಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಯುವರಾಜ್ ಸಿಂಗ್ ಕೇವಲ 1 ರನ್‍ಗೆ ಔಟಾದರು. ಈ ವೇಳೆ ಕೈಫ್ ಮತ್ತು ಪಠಾಣ್ ಉತ್ತಮ ಜೊತೆಯಾಟ ನೀಡಿ ತಂಡವನ್ನು ಗೆಲ್ಲಿಸಿದರು. ಈ ಸಮಯದಲ್ಲಿ ಶ್ರೀಲಂಕಾ ಚಮಿಂಡಾ ವಾಸ್ 2 ವಿಕೆಟ್ ಪಡೆದರೆ, ರಂಗನಾ ಹೆರತ್ ಮತ್ತು ಸಚಿತ್ರ ಸೇನನಾಯಕ ತಲಾ ಒಂದು ವಿಕೆಟ್ ಕಿತ್ತರು.

    ದಿಲ್ಶನ್- ಕಪುಗೆಡೆರಾ ಬ್ಯಾಟಿಂಗ್:
    ಶ್ರೀಲಂಕಾ ಲೆಜೆಂಡ್ಸ್ ತಂಡದ ನಾಯಕ ತಿಲ್ಲಕರತ್ನೆ ದಿಲ್ಶನ್ ಹಾಗೂ ರಮೇಶ್ ಕಲುವಿತರಣ ಅವರು 46 ರನ್‍ಗಳ ಜೊತೆಯಾಟವಾಡಿ ಉತ್ತಮ ಆರಂಭ ನೀಡಿದರು. ತಂಡಕ್ಕಾಗಿ ದಿಲ್ಶನ್ 23 ರನ್, ಚಮರ ಕಪುಗೆದೇರಾ 23 ರನ್ ಮತ್ತು ಕಲುವಿತರಣ 21 ರನ್ ಗಳಿಸಿದರು.

    ಈ ವೇಳೆ ಭಾರತದ ಮುನಾಫ್ ಪಟೇಲ್ ಅತ್ಯಂತ ಯಶಸ್ವಿ ಬೌಲಿಂಗ್ ಪ್ರದರ್ಶನ ನೀಡಿದರು. ಅವರು 4 ಓವರ್ ಬೌಲಿಂಗ್ ಮಾಡಿ 19 ರನ್ ನೀಡಿ 4 ವಿಕೆಟ್ ಪಡೆದರು. ಜಹೀರ್ ಖಾನ್, ಇರ್ಫಾನ್ ಪಠಾಣ್, ಮನ್‍ಪ್ರೀತ್ ಗೋನಿ ಮತ್ತು ಸಂಜಯ್ ಬಂಗಾರ್ ತಲಾ ಒಂದು ವಿಕೆಟ್ ಪಡೆದರು.

  • ರೋಹಿತ್ ದಾಖಲೆಯ ಶತಕ ಕುರಿತು ಮೊಹಮ್ಮದ್ ಕೈಫ್ ನುಡಿದ ಭವಿಷ್ಯ ನಿಜವಾಯ್ತು!

    ರೋಹಿತ್ ದಾಖಲೆಯ ಶತಕ ಕುರಿತು ಮೊಹಮ್ಮದ್ ಕೈಫ್ ನುಡಿದ ಭವಿಷ್ಯ ನಿಜವಾಯ್ತು!

    ನವದೆಹಲಿ: ಶ್ರೀಲಂಕಾ ವಿರುದ್ಧದ ಶುಕ್ರವಾರ ನಡೆದ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸುತ್ತಾರೆ ಎಂದು ನಾನು ಪಂದ್ಯದ ಮೊದಲೇ ಹೇಳಿದ್ದೆ ಎಂದು ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.

    ಈ ಕುರಿತು ಮೊಹಮ್ಮದ್ ಕೈಫ್ ತಮ್ಮ ಮೇಸೆಜ್ ನ ಸ್ಕ್ರಿನ್ ಶಾಟ್ ತೆಗೆದು ಪೋಸ್ಟ್ ಮಾಡಿ ಇಂದು ನಾನು ರೋಹಿತ್ ಶತಕ ಸಿಡಿಸುತ್ತಾರೆ ಎಂದು ನನ್ನ ಸ್ನೇಹಿತನಿಗೆ ಸಂದೇಶ ಕಳುಹಿಸಿದ್ದೆ. ಇದು ನಿಜವಾಗಿದೆ. ರೋಹಿತ್ ಈ ವಾರದಲ್ಲಿ ಎಂತಹ ಸಾಧನೆ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ರಾತ್ರಿ 7.21ಕ್ಕೆ ಕೈಫ್ ಮೆಸೇಜ್ ಮಾಡಿದ್ದ ಈ ಸಂದೇಶ ಇರುವ ಸ್ಕ್ರೀನ್ ಶಾಟ್ ಅನ್ನು 8.26ಕ್ಕೆ ಕೈಫ್ ಟ್ವೀಟ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವು ಕ್ರಿಕೆಟ್ ಅಭಿಮಾನಿಗಳು ಈ ಕುರಿತು ರಿ ಟ್ವೀಟ್ ಮಾಡಿ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

    ಅಭಿಮಾನಿಗಳ ಟ್ವೀಟ್:
    ಗುಜರಾತ್ ಚುನಾವಣೆ ಫಲಿತಾಂಶ ಕುರಿತು ಮೊದಲೇ ಏಕೆ ಹೇಳಿಲ್ಲ? -ಇಮ್ರಾನ್

    ನಿಮ್ಮ ಫೋಟೋ ಶಾಪ್ ಕೌಶಲ್ಯಕ್ಕೆ ಶುಭವಾಗಲಿ – ಅದರ್ಶ್ ಸೆಜ್ವಾಲ್

    ಮುಂದಿನ ಪ್ರಧಾನಿ ಯಾರು ಎಂದು ತಿಳಿಸಿ – ರಾಘವನ್

    ರೋಹಿತ್ ಈ ಪಂದ್ಯದಲ್ಲಿ 43 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರೆವಿನಿಂದ 118 ರನ್ ಸಿಡಿಸಿದ್ದರು. ಟೀಂ ಇಂಡಿಯಾ 88 ರನ್ ಗಳ ಭಾರಿ ಗೆಲುವು ಪಡೆಯುವ ಮೂಲಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮೊದಲ ಟಿ-20 ಸರಣಿಯನ್ನು ತನ್ನದಾಗಿಸಿಕೊಂಡಿತು.  ಇದನ್ನೂ ಓದಿ: ರೋಹಿತ್ ಶರ್ಮಾ ಬ್ಯಾಟಿಂಗ್ ವೈಭವ ಹೀಗಿತ್ತು

    ಕರ್ನಾಟಕದ ಕೆ.ಎಲ್ ರಾಹುಲ್, ರೋಹಿತ್ ಶರ್ಮಾ ಜೋಡಿ ಟಿ20 165 ರನ್ ಗಳ ಜೊತೆಯಾಟವಾಡಿದ್ದು, ಇದು ಭಾರತದಲ್ಲಿ ಮೊದಲ ವಿಕೆಟ್ ಗೆ ದಾಖಲಾದ ದೊಡ್ಡ ಜೊತೆಯಾಟವಾಗಿದ್ದು, ವಿಶ್ವದಲ್ಲಿ ನಾಲ್ಕನೇಯ ದೊಡ್ಡ ಜೊತೆಯಾಟವಾಗಿದೆ.  ಇದನ್ನೂ ಓದಿ: 23 ಎಸೆತಕ್ಕೆ 50 ರನ್, 35 ಎಸೆತಕ್ಕೆ 100 ರನ್: ಟಿ20ಯಲ್ಲೂ ರೋ’ಹಿಟ್’ ದಾಖಲೆಯ ಶತಕ