Tag: ಮೊರಾರ್ಜಿ ದೇಸಾಯಿ

  • ನೀವು ಚಹಾ ಮಾರಾಟ ಮಾಡಿ, ದೇಶ ಮಾರಬೇಡಿ: ಕಾಂಗ್ರೆಸ್ಸಿಗೆ ಮೋದಿ ಟಾಂಗ್

    ನೀವು ಚಹಾ ಮಾರಾಟ ಮಾಡಿ, ದೇಶ ಮಾರಬೇಡಿ: ಕಾಂಗ್ರೆಸ್ಸಿಗೆ ಮೋದಿ ಟಾಂಗ್

    ಗಾಂಧಿನಗರ್: 2019ರ ಲೋಕಸಭಾ ಚುನಾವಣೆಗೆ ನಿರ್ಣಾಯಕ ಎನ್ನಲಾಗಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಭರ್ಜರಿಯಾಗಿ ಪ್ರಚಾರ ಕೈಗೊಂಡಿದ್ದಾರೆ. ಸೋಮವಾರದಿಂದ ಪ್ರಚಾರ ಆರಂಭಿಸಿದ ಪ್ರಧಾನಿ ಮೋದಿ ಮೊದಲ ದಿನವೇ ಮೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಎಂದಿನ ಶೈಲಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಆರಂಭದಲ್ಲಿ ಆಶಾಪುರ ದೇವಾಲಯಕ್ಕೆ ಭೇಟಿ ನೀಡಿ ನಂತರ ರಾಜ್‍ಕೋಟ್‍ನ ಭುಜ್, ಅಮ್ರೇಲಿಯ ಧಾರ್‍ನಲ್ಲಿ ಎಂದಿನಂತೆ ತಮ್ಮ ಮೊನಚು ವ್ಯಂಗ್ಯ ಭರಿತ ಮಾತುಗಳನ್ನು ಆಡಿ ಕಾಂಗ್ರೆಸ್ ವಿರುದ್ಧ ವಾಕ್ ಪ್ರಹಾರ ನಡೆಸಿದರು. ಮೋದಿ ಹೋದಲೆಲ್ಲ ಜನಸಾಗರ ಕಂಡು ಬಂದಿದ್ದು, ಮೋದಿ ಮೋದಿ ಎಂದು ಜನರು ಉದ್ಘಾರಿಸುವುದು ಸಾಮಾನ್ಯವಾಗಿತ್ತು.

    ಚಹಾ ಮಾರಾಟ ಮಾಡಿದ್ದನ್ನು ಕಾಂಗ್ರೆಸ್ ಕೆಣಕ್ಕಿದ್ದಕ್ಕೆ ಭಾನುವಾರ ಗುಜರಾತ್ ನಲ್ಲಿ ಬಿಜೆಪಿ ನಾಯಕರು ಮೋದಿಯ ಮನ್ ಕೀ ಬಾತ್ ಕಾರ್ಯಕ್ರಮವನ್ನು ಚಹಾ ಹೀರುತ್ತಾ ಕೇಳಿ ತಿರುಗೇಟು ನೀಡಿದ್ದರು. ಇಂದು ಮೋದಿ ತಮ್ಮ ಭಾಷಣದಲ್ಲಿ, ನಾನು ದೇಶವನ್ನು ಮಾರಾಟ ಮಾಡುತ್ತಿಲ್ಲ. ಜೀವನೋಪಾಯಕ್ಕೆ ಚಹಾ ಅಷ್ಟೇ ಮಾರಿದ್ದೇನೆ. ಹೀಗಾಗಿ ನೀವು ದೇಶವನ್ನು ಮಾರಬೇಡಿ. ಚಾ ಮಾರಾಟ ಮಾಡಿ ಎಂದು ಸಲಹೆ ನೀಡಿ ಟಾಂಗ್ ನೀಡಿದರು.

    ನೀತಿ, ನಿಯತ್ತು, ನಾತ, ನೇತಾರರು ಕಾಂಗ್ರೆಸ್ ಗೆ ಇಲ್ಲ. ಭ್ರಷ್ಟಾಚಾರದ ವಿರುದ್ಧ ನಾವು ರಣಕಹಳೆ ಮೊಳಗಿಸಿದ್ದರಿಂದ ಕಾಂಗ್ರೆಸ್ ಗೆ ಸಮಸ್ಯೆಯಾಗಿದೆ. ನಾವು ಬಂದ ಬಳಿಕ ಬಡವರಿಗೆ ಕಡಿಮೆ ಬೆಲೆಯಲ್ಲಿ ಆರೋಗ್ಯ ಸಿಗುತ್ತಿದೆ. ಸ್ಟೆಂಟ್ ಗಳ ಬೆಲೆ ಇಳಿಕೆಯಾಗಿದೆ. ಯಾವುದೇ ತಾರತಮ್ಯ ಮಾಡದೇ ನಾವು ಗುಜರಾತ್ ಅಭಿವೃದ್ಧಿ ಮಾಡಿದ್ದೇವೆ ಎಂದು ತಿಳಿಸಿದರು.

    ಕಾಂಗ್ರೆಸ್ ಸರ್ದಾರ್ ಪಟೇಲ್ ಮತ್ತು ಮೊರಾರ್ಜಿ ದೇಸಾಯಿ ಅವರನ್ನು ಹೇಗೆ ನಡೆಸಿಕೊಂಡಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ತುರ್ತು ಪರಿಸ್ಥಿತಿ ಹೇರಿ ದೇಶದ ಜನರನ್ನು ಜೈಲಿಗೆ ಅಟ್ಟಿದ್ದು ಯಾವ ಪಕ್ಷ ಎನ್ನುವುದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಸರ್ದಾರ್ ಪಟೇಲ್ ಅವರಿಗೆ ಅವಮಾನ ಮಾಡಿದೆ. ಯಾವುದೇ ಕಾರಣಕ್ಕೂ ಗುಜರಾತ್ ಜನ ಈ ಅವಮಾನವನ್ನು ಕ್ಷಮಿಸುವುದಿಲ್ಲ ಎಂದು ಹೇಳುವ ಮೂಲಕ ಪಟೇಲ್ ಸಮುದಾಯವನ್ನು ಒಲೈಸಲು ಪ್ರಯತ್ನಿಸಿದರು.

    ದೆಹಲಿಯಲ್ಲಿ ಹೊಸ ಪಕ್ಷವೊಂದು ಅಸ್ತಿತ್ವಕ್ಕೆ ಬಂದಿದೆ. ಟೀಕಿಸುವುದು ಮತ್ತು ಓಡಿ ಹೋಗುವುದು ಇದು ಆ ಪಕ್ಷದ ಕಾರ್ಯವೈಖರಿ. ಆದರೆ ಹಿರಿಯ ಪಕ್ಷವಾದ ಕಾಂಗ್ರೆಸ್ ಈ ತಂತ್ರವನ್ನು ಅನುಸರಿಸಬಾರದು. ಆದರೆ ಕಳೆದ ಎರಡು ತಿಂಗಳಿನಿಂದ ಕಾಂಗ್ರೆಸ್ ಈ ತಂತ್ರವನ್ನು ಅನುಸರಿಸುತ್ತಿದ್ದು, ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿ ಆಪ್ ವಿರುದ್ಧವೂ ಮೋದಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಗುಜರಾತ್ ನಲ್ಲಿ ಬಿಜೆಪಿ ಬಿಟ್ಟು ಈ ಪಕ್ಷಗಳಿಗೆ ಮಾತ್ರ ನಿಮ್ಮ ಮತವನ್ನು ನೀಡಿ: ಅರವಿಂದ್ ಕೇಜ್ರಿವಾಲ್

    ಪಾಕಿಸ್ತಾನ ಕೋರ್ಟ್ ಪಾಕ್ ಉಗ್ರನನ್ನು ಬಿಡುಗಡೆಗೊಳಿಸಿದ್ದಕ್ಕೆ ಕಾಂಗ್ರೆಸ್ ಸಂಭ್ರಮಿಸಿದೆ. ಕಾಂಗ್ರೆಸ್ಸಿನ ಈ ನಡೆ ನೋಡಿ ನನಗೆ ಬಹಳ ಆಶ್ಚರ್ಯವಾಯಿತು. ಇದೇ ಕಾಂಗ್ರೆಸ್ ಈ ಹಿಂದೆ ನಮ್ಮ ಸೈನಿಕರು ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಂಬಲಿಲ್ಲ. ಆದರೆ ಅವರು ಚೀನಾದ ರಾಯಭಾರಿಯ ಜೊತೆ ನಂಬಿಕೆ ಇಟ್ಟಿದ್ದಾರೆ ಎಂದು ಟಾಂಗ್ ನೀಡಿದರು.

    ಕಳೆದ 15 ವರ್ಷಗಳಲ್ಲಿ ನಾನು ಏನು ಸಾಧನೆ ಮಾಡಿದ್ದೇನೋ ಅದು ಸಾಧ್ಯವಾಗಿದ್ದು ಗುಜರಾತ್ ನಿಂದ. ಗುಜರಾತ್ ನನ್ನ ಆತ್ಮ ಆಗಿದ್ದರೆ ಭಾರತ್ ನನ್ನ ಪರಮಾತ್ಮ ಎಂದರು.