Tag: ಮೊದಲ ಫೋಟೋ

  • ಭೂಮಿಯ ಮೊದಲ ಫೋಟೋ ಕಳುಹಿಸಿದ ಚಂದ್ರಯಾನ-2

    ಭೂಮಿಯ ಮೊದಲ ಫೋಟೋ ಕಳುಹಿಸಿದ ಚಂದ್ರಯಾನ-2

    ನವದೆಹಲಿ: ಜುಲೈ 22ರಂದು ಚಂದ್ರಯಾನ-2 ಉಪಗ್ರಹವನ್ನು ಹೊತ್ತ ರಾಕೆಟ್ ಯಶಸ್ವಿಯಾಗಿ ನಭಕ್ಕೆ ಹಾರಿತ್ತು. ಚಂದ್ರನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಚಂದ್ರಯಾನ-2 ಉಪಗ್ರಹವನ್ನು ಚಂದ್ರನ ಅಂಗಳವನ್ನು ತಲುಪುವುದನ್ನೇ ಇಸ್ರೋ ವಿಜ್ಞಾನಿಗಳು ಕಾದುಕುಳಿತ್ತಿದ್ದಾರೆ. ಈ ನಡುವೆ ಬಾಹ್ಯಾಕಾಶದಿಂದ ಚಂದ್ರಯಾನ-2 ಭೂಮಿಯ ಮೊದಲ ಫೋಟೋ ಕ್ಲಿಕ್ಕಿಸಿ ಕಳುಹಿಸಿದೆ.

    ಕಳೆದ ವಾರ ಚಂದ್ರಯಾನ-2 ಭೂಮಿಯ ಮೊದಲ ಫೋಟೋ ಕಳುಹಿಸಿದೆ ಎಂದು ಭೂಮಿಯ ಹೈ ರೆಸೆಲ್ಯೂಶನ್ ಫೋಟೋವನ್ನು ಕಿಡಿಗೇಡಿಗಳು ಗೂಗಲ್ ಮಾಡಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ಇಸ್ರೋ ಈ ಫೋಟೋ ಬಿಡುಗಡೆ ಮಾಡಲಾಗಿದೆ ಎನ್ನುವ ಸುಳ್ಳು ಸುದ್ದಿ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿತ್ತು. ಇದೇ ಬೆನ್ನಲ್ಲಿ ಶನಿವಾರದಂದು 17:28 ಯುನಿವರ್ಸಲ್ ಟೈಮ್‍ಗೆ ಬಾಹ್ಯಾಕಾಶದಲ್ಲಿ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಎಲ್‍ಐ4 ಕ್ಯಾಮೆರಾ ಮೂಲಕ ಭೂಮಿಯ ಮೊದಲ ಚಿತ್ರವನ್ನು ಕ್ಲಿಕ್ಕಿಸಿದೆ. ಇದನ್ನೂ ಓದಿ:ಚಂದ್ರನ ದಕ್ಷಿಣ ಧ್ರುವವೇ ಆಯ್ಕೆ ಏಕೆ? ಯಾವ ಸಾಧನದ ಕೆಲಸ ಏನು?- ಇಲ್ಲಿದೆ ಚಂದ್ರಯಾನ 2 ಪೂರ್ಣ ಮಾಹಿತಿ

    ಈ ಫೋಟೋವನ್ನು ಸ್ವತಃ ಇಸ್ರೋ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಮೂಲಕ ಎಲ್‍ಐ4 ಕ್ಯಾಮೆರಾದಲ್ಲಿ ಸೆರೆಯಾಗಿರುವ ಭೂಮಿಯ ಸುಂದರ ಚಿತ್ರಗಳು ಎಂದು ಬರೆದು ಫೋಟೋದೊಂದಿಗೆ ಇಸ್ರೋ ಟ್ವೀಟ್ ಮಾಡಿದೆ.

    ಇಸ್ರೋದ ಪ್ರಕಾರ, ಚಂದ್ರಯಾನ್ -2 ಕಾರ್ಯಾಚರಣೆಯಲ್ಲಿ ಚಂದ್ರನ ಕಕ್ಷೀಯ ಭಾಗಗಳನ್ನು ಸೆರೆಹಿಡಿಯಲು ಆರ್ಬಿಟರ್ ಹೈ-ರೆಸಲ್ಯೂಶನ್ ಕ್ಯಾಮೆರಾ (ಒಹೆಚ್‍ಆರ್ ಸಿ) ಮತ್ತು ಟೆರೈನ್ ಮ್ಯಾಪಿಂಗ್ ಕ್ಯಾಮೆರಾ 2 (ಟಿಎಂಸಿ 2) ಎಂಬ ಎರಡು ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಇಸ್ರೋ ಸೈಟ್‍ನಲ್ಲಿನ ಈ ಎರಡು ಆರ್ಬಿಟರ್ ಪೇಲೋಡ್‍ಗಳ ವಿವರಗಳು, ಚಂದ್ರನ ಮೇಲ್ಮೈಯನ್ನು ಮ್ಯಾಪಿಂಗ್ ಮಾಡಲು ಅವುಗಳ ಪ್ರಾಥಮಿಕ ಬಳಕೆ ಬಗ್ಗೆ ವಿವರಿಸಲಾಗಿದೆ. ಒಹೆಚ್‍ಆರ್ ಸಿ ಲ್ಯಾಂಡಿಂಗ್ ಸೈಟ್ಟಿನಲ್ಲಿ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಒದಗಿಸುತ್ತದೆ. ಇದರಿಂದ ಚಂದ್ರನ ಮೇಲೆ ತಲುಪುವ ಲಾಂಡರ್ ಗಳು ಕುಳಿಗಳು ಮತ್ತು ಬಂಡೆಗಳು ಎಲ್ಲಿವೆ ಎನ್ನುವುದನ್ನ ಸುಲಭವಾಗಿ ತಿಳಿಯಲು ಸಹಾಕಾರಿಯಾಗುತ್ತದೆ.

    ಜುಲೈ 15ರ ಮಧ್ಯರಾತ್ರಿಯಂದು ನಡೆದ ಮೊದಲ ಪ್ರಯತ್ನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಚಂದ್ರಯಾನ-2 ಸ್ಥಗಿತಗೊಳಿಸಲಾಗಿತ್ತು. ಉಡಾವಣೆಗೆ 56 ನಿಮಿಷ ಇದ್ದಾಗ ರಾಕೆಟ್‍ಗೆ ಇಂಧನ ತುಂಬಿಸುವ ವೇಳೆ ಈ ದೋಷ ಪತ್ತೆಯಾಗಿತ್ತು. ವಿಜ್ಞಾನಿಗಳು ಕೂಡಲೇ ಉಡಾವಣೆ ಸ್ಥಗಿತಗೊಳಿಸಲು ನಿರ್ಧರಿಸಿದ್ದರು. ಇಸ್ರೋ ವಿಜ್ಞಾನಿಗಳು ಈಗ ಬಹಳ ಎಚ್ಚರಿಕೆಯಿಂದ ತಾಂತ್ರಿಕ ದೋಷಗಳನ್ನು ನಿವಾರಿಸಿದ್ದರು. ಹಲವು ಬಾರಿ ಪರೀಕ್ಷೆಗಳನ್ನು ನಡೆಸಿ ಮತ್ತೆ ತಾಂತ್ರಿಕ ದೋಷ ಕಾಣಿಸಿಕೊಳ್ಳದಂತೆ ನಿಗಾ ವಹಿಸಿದ್ದರು.

    ತಾಂತ್ರಿಕ ದೋಷವನ್ನು ಸರಿಪಡಿಸಿ ಜುಲೈ 22ರಂದು ಚಂದ್ರಯಾನ-2 ಆರಂಭವಾಗಿದೆ. ಈ ಸಾಧನೆ ಮಾಡುತ್ತಿರುವ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ, ಚೀನಾ ಮಾತ್ರ ಈ ಪ್ರಯೋಗದಲ್ಲಿ ಯಶಸ್ವಿಯಾಗಿವೆ. ಈ ಸಾಲಿಗೆ ಈಗ ಭಾರತ ಸೇರಿದೆ.

    ಚಂದ್ರಯಾನ 2 ಯೋಜನೆಗೆ ಸುಮಾರು 978 ಕೋಟಿ ವೆಚ್ಚವಾಗಿದೆ. ಇದರಲ್ಲಿ ಉಪಗ್ರಹ ನಿರ್ಮಾಣಕ್ಕೆ 603 ಕೋಟಿ ರೂ. ವೆಚ್ಚವಾಗಿದ್ದರೆ, ರಾಕೆಟ್‍ಗೆ 375 ಕೋಟಿ ರೂ. ಖರ್ಚಾಗಿದೆ. ಚಂದ್ರಯಾನ 2 ಉಪಗ್ರಹದ ಒಟ್ಟು ತೂಕ 3,850 ಕೆಜಿ ಇದ್ದು, 3 ಲಕ್ಷದ 82 ಸಾವಿರ ಕಿ.ಮೀ. ಸಾಗಲಿದೆ. 54 ದಿನಗಳ ಬಳಿಕ ಅಂದರೆ ಸೆಪ್ಟೆಂಬರ್ 13 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಲಿದೆ.