Tag: ಮೊಘಲ್

  • ಆಗ್ರಾ ಮೊಘಲ್ ಮ್ಯೂಸಿಯಂಗೆ ಶಿವಾಜಿ ಮಹಾರಾಜ್ ಹೆಸರು: ಯೋಗಿ ಆದಿತ್ಯನಾಥ್

    ಆಗ್ರಾ ಮೊಘಲ್ ಮ್ಯೂಸಿಯಂಗೆ ಶಿವಾಜಿ ಮಹಾರಾಜ್ ಹೆಸರು: ಯೋಗಿ ಆದಿತ್ಯನಾಥ್

    – ಉತ್ತರ ಪ್ರದೇಶದಲ್ಲಿ ಗುಲಾಮ ಮನಸ್ಥಿತಿಗೆ ಸ್ಥಾನವಿಲ್ಲ

    ಲಕ್ನೋ: ಆಗ್ರಾದ ಸುಪ್ರಸಿದ್ಧ ತಾಜ್ ಮಹಲ್ ಆವರಣದಲ್ಲಿರುವ ಮೊಘಲ್ ವಸ್ತು ಸಂಗ್ರಹಾಲಯಕ್ಕೆ ಮರು ನಾಮಕರಣ ಮಾಡಲಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜ್ ಎಂದು ಹೆಸರಿಡಲಾಗಿದೆ. ಈ ಕುರಿತು ಸ್ವತಃ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಪಷ್ಟಪಡಿಸಿದ್ದಾರೆ.

    ಮೊಘಲರು ನಮ್ಮ ಹೀರೋಗಳಾಗಲು ಹೇಗೆ ಸಾಧ್ಯ ಎಂದು ಸಭೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ. ಇಂತಹ ಗುಲಾಮ ಮನಸ್ಥಿತಿಯ ಯಾವುದೇ ವಿಷಯವನ್ನು ಬಿಜೆಪಿ ಸರ್ಕಾರ ತೆಗೆದು ಹಾಕುತ್ತದೆ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್ ಸಹ ಮಾಡಿರುವ ಅವರು, ನಿರ್ಮಾಣ ಹಂತದಲ್ಲಿರುವ ಆಗ್ರಾದ ವಸ್ತುಸಂಗ್ರಹಾಲಯಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಎಂದು ನಾಮಕರಣ ಮಾಡಲಾಗಿದೆ. ಹೊಸ ಉತ್ತರ ಪ್ರದೇಶದಲ್ಲಿ ಗುಲಾಮಿ ಮನಸ್ಥಿತಿಗಳಿಗೆ ಯಾವುದೇ ರೀತಿಯ ಸ್ಥಾನವಿಲ್ಲ. ಶಿವಾಜಿ ಮಹಾರಾಜ್ ನಮ್ಮ ಹೀರೋ. ಜೈ ಹಿಂದ್, ಜೈ ಭಾರತ್ ಎಂದು ಅವರು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಕೇವಲ ಆಗ್ರಾದ ವಸ್ತುಸಂಗ್ರಹಾಲಯ ಮಾತ್ರವಲ್ಲ ಅಲಹಬಾದ್‍ಗೆ ಪ್ರಯಾಗ್‍ರಾಜ್ ಸೇರಿ ಯೋಗಿ ಆದಿತ್ಯನಾಥ್ ಅವರು ತಮ್ಮ 3 ವರ್ಷಗಳ ಆಡಳಿತಾವಧಿಯಲ್ಲಿ ಹಲವು ಸ್ಥಳಗಳು, ರಸ್ತೆಗಳ ಹೆಸರನ್ನು ಬದಲಾಯಿಸಿದ್ದಾರೆ. ಅಲ್ಲದೆ ಗುಲಾಮಿ ಸಂಸ್ಕೃತಿಗೆ ಉತ್ತರ ಪ್ರದೇಶದಲ್ಲಿ ಸ್ಥಾನಮಾನವಿಲ್ಲ ಎಂದು ಹೇಳಿದ್ದಾರೆ.

    ಮೊಘಲ್ ಮ್ಯೂಸಿಮ್ ಯೋಜನೆಯನ್ನು ಕಳೆದ ಬಾರಿಯ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ 2015ರಲ್ಲಿ ಜಾರಿಗೆ ತರಲಾಗಿತ್ತು. ತಾಜ್ ಮಹಲ್ ಬಳಿಯ ಒಟ್ಟು 6 ಎಕರೆ ಪ್ರದೇಶದಲ್ಲಿ ಈ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುತ್ತಿದೆ. ವಸ್ತು ಸಂಗ್ರಹಾಲಯವು ಮೊಘಲ್ ಸಂಸ್ಕೃತಿ, ಕಲಾಕೃತಿಗಳು, ವರ್ಣಚಿತ್ರಗಳು, ಪಾಕ ಪದ್ಧತಿ, ವೇಷ ಭೂಷಣ, ಮೊಘಲ್ ಯುಗ, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ಹಾಗೂ ಪ್ರದರ್ಶನ ಕಲೆಗಳನ್ನು ಒಳಗೊಂಡಿದೆ.

  • ರಾಮ ಮಂದಿರ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆ ನೀಡುತ್ತೇನೆ – ಮೊಘಲ್ ವಂಶಸ್ಥನಿಂದ ಆಫರ್

    ರಾಮ ಮಂದಿರ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆ ನೀಡುತ್ತೇನೆ – ಮೊಘಲ್ ವಂಶಸ್ಥನಿಂದ ಆಫರ್

    ಹೈದರಾಬಾದ್: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಚಿನ್ನದ ಇಟ್ಟಿಗೆಯನ್ನು ನಾನು ನೀಡುತ್ತೇನೆ ಎಂದು ಮೊಘಲ್ ಸಾಮ್ರಾಜ್ಯದ ವಂಶಸ್ಥರೊಬ್ಬರು ಹೇಳಿದ್ದಾರೆ.

    ಈಗ ಹೈದರಾಬಾದ್‍ನಲ್ಲಿ ವಾಸವಾಗಿರುವ ಮೊಘಲ್ ಸಾಮ್ರಾಜ್ಯದ ಆರನೇ ಪೀಳಿಗೆಯ ಹಬೀಬುದ್ದೀನ್ ಟ್ಯೂಸಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಈ ಕೊಡುಗೆ ನೀಡುವುದಾಗಿ ಪ್ರಕಟಿಸಿದ್ದಾರೆ.

    ಮೊಘಲ್ ಸಾಮ್ರಾಜ್ಯದ ಕೊನೆಯ ದೊರೆ ಬಹಾದೂರ್ ಷಾ ಜಾಫರ್ ಆಗಿದ್ದು ಆತನ ಆರನೇ ಪೀಳಿಗೆಯ ವಂಶಸ್ಥ ಹಬೀಬುದ್ದೀನ್ ಅವರು ಕಳೆದ ಸೆಪ್ಟೆಂಬರ್ ನಲ್ಲಿ ಈ ಆಫರ್ ಪ್ರಕಟಿಸಿದ್ದರು. ಆದರೆ ಈಗ ರಾಮ ಜನ್ಮಭೂಮಿ ಭೂವಿವಾದವನ್ನು ಆಲಿಸುತ್ತಿರುವ ಸುಪ್ರೀಂಕೋರ್ಟ್ ಪೀಠದ ಮುಂದೆ ಅರ್ಜಿ ಸಲ್ಲಿಸಿ ತನ್ನ ವಾದವನ್ನು ಆಲಿಸಬೇಕೆಂದು ಕೇಳಿಕೊಂಡಿದ್ದಾರೆ. ಫೆಬ್ರವರಿ 8ರಂದು ಈ ಅರ್ಜಿ ಸಲ್ಲಿಸಿದ್ದು ಇನ್ನೂ ಸುಪ್ರೀಂ ವಿಚಾರಣೆಗೆ ತೆಗೆದುಕೊಂಡಿಲ್ಲ.

    ಅರ್ಜಿಯಲ್ಲಿ ಏನಿದೆ?
    ವಿವಾದಿತ ಸ್ಥಳಕ್ಕೆ ಸಂಬಂಧಿಸಿದ ಯಾರ ಬಳಿಯೂ ದಾಖಲೆಗಳಿಲ್ಲದ ಕಾರಣ ಯಾರಿಗೂ ಹಕ್ಕಿಲ್ಲ. ಆದರೆ ಮೊಘಲ್ ವಂಶಸ್ಥನಾಗಿರುವುದರಿಂದ ಆ ಜಾಗದ ಮೇಲೆ ನಮಗೆ ಹಕ್ಕಿದೆ. ಹೀಗಾಗಿ ಈ ಜಾಗವನ್ನು ನಮಗೆ ನೀಡುವಂತೆ ಕೇಳಿಕೊಂಡಿದ್ದಾರೆ. ಸೇನೆಯ ನಮಾಜ್‍ಗಾಗಿ ಬಾಬರಿ ಮಸೀದಿ ನಿರ್ಮಿಸಲಾಗಿದೆ. ಅಲ್ಲಿ ಮೊದಲು ಏನಿತ್ತು ಎನ್ನುವ ವಿಚಾರಕ್ಕೆ ನಾನು ಈಗ ಹೋಗುವುದಿಲ್ಲ. ಒಬ್ಬ ನೈಜ ಮುಸ್ಲಿಮನಾಗಿ ಹಿಂದೂಗಳ ಭಾವನೆಗಳನ್ನು ಗೌರವಿಸಿ ಜಾಗ ಬಿಟ್ಟುಕೊಡುತ್ತೇನೆ. ಒಂದು ವೇಳೆ ನಮಗೆ ಈ ಭೂಮಿಯನ್ನು ನೀಡಿದರೆ ರಾಮ ಮಂದಿರ ಕಟ್ಟಲು ಜಾಗ ನೀಡುತ್ತೇನೆ ಎಂದು ಟ್ಯೂಸಿ ಹೇಳಿದ್ದಾರೆ.

    ಜಾಫರಿಗೆ ಹೇಗೆ ಸಂಬಂಧ?
    ಮೊಘಲರ ಕೊನೆಯ ದೊರೆ ಬಹಾದೂರ್ ಷಾ ಜಾಫರಿಗೆ 49 ಮಕ್ಕಳು. ಈ ಪೈಕಿ ಮಿರ್ಜಾ ಕ್ವಾಯಿಷ್ ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಪತ್ನಿ ಜೊತೆ ನೇಪಾಳದ ರಾಜಧಾನಿ ಆಗಿರುವ ಕಠ್ಮಂಡುವಿಗೆ ಪರಾರಿಯಾಗಿದ್ದರು. ಈ ದಂಪತಿಯ ಪುತ್ರ ಮಿರ್ಜಾ ಅಬ್ದುಲ್ಲಾ ಹೈದರಾಬಾದಿನಲ್ಲಿ ವಾಸಿಸುತ್ತಿದ್ದರು. ಇವರ ಪುತ್ರ ಮಿರ್ಜಾ ಪ್ಯಾರೆ. ಮಿರ್ಜಾ ಪ್ಯಾರೆಯ ಮೂವರು ಮಕ್ಕಳಲ್ಲಿ ಒಬ್ಬರಾದ ರಾಣಿ ಲೈಲಾ ಉಮಾಹನಿಯನ್ನು ವಿವಾಹವಾಗಿದ್ದು ಹೈದರಾಬಾದ್‍ನ ರಾಜಕುಮಾರ ಮೊಯಿನುದ್ದೀನ್ ಟ್ಯೂಸಿ. ಈ ದಂಪತಿಯ ಪುತ್ರ ಯಾಕೂಬ್ ಆರೀಫ್ ಉದ್ದೀನ್ ಟ್ಯೂಸಿ. ಯಾಕೂಬ್ ಆರೀಫ್ ಟ್ಯೂಸಿಯ ಪುತ್ರನೇ ಹಬಿಬುದ್ದೀನ್ ಟ್ಯೂಸಿ.

    ಅವರ ಪುತ್ರ ಮಿರ್ಜಾ ಪ್ಯಾರೆ. ಇವರ ಮೂರು ಮಕ್ಕಳಲ್ಲಿ ಒಬ್ಬರಾದ ರಾಣಿ ಲೈಲಾ ಉಮಾಹನಿ ಒಬ್ಬರು. ಉಮಾಹನಿಯನ್ನು ಮದುವೆಯಾಗಿದ್ದು ಹೈದರಾಬಾದ್‍ನ ರಾಜಕುಮಾರ ಮೊಯಿನುದ್ದೀನ್ ಟ್ಯೂಸಿ. ಇವರಿಗೆ ಹುಟ್ಟಿದ ಮಗನೇ ಪ್ರಿನ್ಸ್ ಯಾಕುಬ್ ಅರಿಫುದ್ದೀನ್ ಟ್ಯೂಸಿ. ಅರಿಫುದ್ದೀನ್ ಟ್ಯೂಸಿಯ ಮಗನೇ ಯಾಕೂಬ್ ಹಬೀಬುದ್ದೀನ್ ಟ್ಯೂಸಿ.

    ಟ್ಯೂಸಿ ಅವರು ತಮ್ಮ ಬಳಿಯಲ್ಲೇ ಕೆಲವು ಅಧಿಕಾರಗಳನ್ನು ಇಟ್ಟುಕೊಂಡಿದ್ದಾರೆ. ಪ್ರತಿ ವರ್ಷ ನಡೆಯುವ ಶಹಜಹಾನ್‍ನ ಉರೂಸ್ ಸಮಾರಂಭದ ವೇಳೆ ಖ್ಯಾತ ತಾಜ್‍ಮಹಲ್‍ನ ಒಳಗಿನ ಸೆಲ್ಲರ್ ಬಾಗಿಲನ್ನು ಟ್ಯೂಸಿ ಅವರೇ ತೆಗೆಯುತ್ತಾರೆ.

    50 ವರ್ಷದ ಟ್ಯೂಸಿ ಪಾಸ್‍ಪೋರ್ಟ್ ಪಡೆಯುವ ಸಂದರ್ಭದಲ್ಲಿ ಮೊಘಲರ ಕಾಲದ ಟೋಪಿ ತೆಗೆದಿರುವ ಫೋಟೋ ಹಾಕಬೇಕೆಂದು ಅಧಿಕಾರಿಗಳು ಹೇಳಿದ್ದರು. ಈ ವೇಳೆ ನಾನು ಮೊಘಲ್ ವಂಶಸ್ಥ, ಈ ಟೋಪಿ ನಮ್ಮ ಹೆಮ್ಮೆ ಎಂದು ತಿಳಿಸಿದ್ದೆ. ಕೊನೆಗೆ ಅಧಿಕಾರಿಗಳು ಪಾಸ್ ಪೋರ್ಟ್ ನಲ್ಲಿ ಟೋಪಿ ಇರುವ ಫೋಟೋ ಹಾಕಲು ಅನುಮತಿ ನೀಡಿದರು ಎಂದು ಟ್ಯೂಸಿ ತಿಳಿಸಿದ್ದಾರೆ.

    ದೊಡ್ಡ ಸಮಾರಂಭ, ಹಬ್ಬದ ಸಮಯದಲ್ಲಿ ಮಾತ್ರ ನಾನು ಮೊಘಲರ ಕಾಲದ ಬಟ್ಟೆಯನ್ನು ಧರಿಸುತ್ತೇನೆ. ಸಾಮಾನ್ಯ ದಿನಗಳಲ್ಲಿ ಜೀನ್ಸ್ ಮತ್ತು ಟಿಶರ್ಟ್ ಧರಿಸಿ ಬೈಕಿನಲ್ಲಿ ಓಡಾಡುತ್ತೇನೆ. ಫಾರ್ಮ್ ಹೌಸ್ ನಲ್ಲಿ ಬನಿಯನ್ ಧರಿಸಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.