Tag: ಮೈಸೂರ್ ಪಾಕ್

  • ಸಿಹಿಯಾದ ಮೈಸೂರ್ ಪಾಕ್ ಮಾಡೋ ಮೂಲಕ ದಸರಾ ಆರಂಭಿಸಿ

    ಸಿಹಿಯಾದ ಮೈಸೂರ್ ಪಾಕ್ ಮಾಡೋ ಮೂಲಕ ದಸರಾ ಆರಂಭಿಸಿ

    ಇಂದಿನಿಂದ ಹತ್ತು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ಷರಶಃ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನೆ ಪೂರಿತ ವಾತಾವರಣ ನಿರ್ಮಾಣವಾಗಲಿದೆ. ಇದಕ್ಕೆ ಕಾರಣ ಇಂದಿನಿಂದ ದಸರಾ ಮಹೋತ್ಸವ ಆರಂಭವಾಗಿದೆ. ದಸರಾ ಅಂದರೆ ನವರಾತ್ರಿ, ಒಂಬತ್ತು ದಿನ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ಪ್ರತಿದಿನ ಮನೆಯಲ್ಲಿ ಸಿಹಿ ಮಾಡಬೇಕಾಗುತ್ತದೆ. ಹೀಗಾಗಿ ದಸರಾ ಹಬ್ಬಕ್ಕಾಗಿ ಮೈಸೂರು ಪಾಕ್ ಮಾಡುವ ಸುಲಭ ವಿಧಾನ ಇಲ್ಲಿದೆ….

    ಬೇಕಾಗುವ ಸಾಮಾಗ್ರಿಗಳು
    1. ಕಡಲೆ ಹಿಟ್ಟು – ಅರ್ಧ ಕೆಜಿ
    2. ತುಪ್ಪ – 1 ಬಟ್ಟಲು
    3. ಎಣ್ಣೆ – 1 ಬಟ್ಟಲು
    4. ಸಕ್ಕರೆ – ಮುಕ್ಕಾಲು ಕೆಜಿ
    5. ನೀರು – 1 ಲೋಟ

    ಮಾಡುವ ವಿಧಾನ
    * ಒಂದು ಪ್ಯಾನ್‍ಗೆ ತುಪ್ಪ ಮತ್ತು ಎಣ್ಣೆಯನ್ನು ಹಾಕಿ ಕುದಿಸಿಡಿ.
    * ಈಗ ಒಂದು ಪ್ಯಾನ್‍ಗೆ ಸಕ್ಕರೆ, 1 ಲೋಟ ನೀರು ಹಾಕಿ ಕುದಿಸಿ.
    * ಒಂದು ಎಳೆ ಪಾಕ ಬಂದ ಮೇಲೆ ಅದಕ್ಕೆ(ಪಾಕ) ಸ್ವಲ್ಪ ಸ್ವಲ್ಪವೇ ಕಡಲೆಹಿಟ್ಟನ್ನು ಹಾಕಿಕೊಳ್ಳುತ್ತಾ ಸೌಟಿನಿಂದ ತಿರುಗಿಸುತ್ತೀರಿ.
    * ಕಡಲೆಹಿಟ್ಟು ಗಂಟುಗಳಿಲ್ಲದಂತೆ ಸಂಪೂರ್ಣವಾಗಿ ಸಕ್ಕರೆ ಪಾಕದೊಂದಿಗೆ ಮಿಕ್ಸ್ ಮಾಡಿ.
    * ಈಗ ಸ್ವಲ್ಪ ಸ್ವಲ್ಪವೇ ತುಪ್ಪ ಮತ್ತು ಎಣ್ಣೆ ಮಿಕ್ಸ್ ಅನ್ನು ಸೇರಿಸಿ ಕೈಯಾಡಿಸುತ್ತಿರಿ.
    * ಕಡಲೆಹಿಟ್ಟು ಈಗ ತುಪ್ಪ ಮತ್ತು ಎಣ್ಣೆಯನ್ನು ಹೀರಿಕೊಂಡು ಗಟ್ಟಿಯಾಗುತ್ತಾ ಬರುತ್ತದೆ.
    * ನಂತರ ತುಪ್ಪ ಸವರಿದ ಟ್ರೇಗೆ ಬಿಸಿ ಇರುವಾಗಲೇ ಕಡಲೆಹಿಟ್ಟು ಗಟ್ಟಿಯನ್ನು ಹಾಕಿ ಬೇಕಾದ ಶೇಪ್‍ಗೆ ಕತ್ತರಿಸಿ.
    * ಬಿಸಿ ಆರಿದ ಮೇಲೆ ಸ್ಲೈಸ್ ಗಳನ್ನು ಟ್ರೇನಿಂದ ಸಪರೇಟ್ ಮಾಡಿ ಸವಿಯಿರಿ..

  • ರೆಬೆಲ್ ಸ್ಟಾರ್ ಗೆ ಮೈಸೂರ್ ಪಾಕ್ ಅಂದ್ರೆ ಪಂಚಪ್ರಾಣ- ಮಂಡ್ಯ, ಬೆಂಗಳೂರು ಕಡೆಗೆ ಹೊರಟ್ರೆ ಪಾರ್ಸೆಲ್ ರೆಡಿ

    ರೆಬೆಲ್ ಸ್ಟಾರ್ ಗೆ ಮೈಸೂರ್ ಪಾಕ್ ಅಂದ್ರೆ ಪಂಚಪ್ರಾಣ- ಮಂಡ್ಯ, ಬೆಂಗಳೂರು ಕಡೆಗೆ ಹೊರಟ್ರೆ ಪಾರ್ಸೆಲ್ ರೆಡಿ

    ರಾಮನಗರ: ರೆಬೆಲ್ ಸ್ಟಾರ್ ಅಂಬರೀಶ್‍ಗೆ ಸಿಹಿ ತಿನಿಸುಗಳಲ್ಲಿ ಮೈಸೂರ್ ಪಾಕ್ ಅಂದರೆ ಪ್ರಿಯವಾದದ್ದು. ಅದರಲ್ಲೂ ರಾಮನಗರದ ಹೋಟೆಲ್‍ನ ಮೈಸೂರ್ ಪಾಕ್ ಅಂದರೆ ಅಚ್ಚುಮೆಚ್ಚಿನದ್ದಾಗಿತ್ತು. ಆ ನಗರ ಸಮೀಪ ಬರುತ್ತಿದ್ದಂತೆ ಮೈಸೂರ್ ಪಾಕ್ ಅಂಬಿಗಾಗಿ ರೆಡಿಯಾಗುತ್ತಿತ್ತು. ಅಂಬಿ ನಮ್ಮನ್ನಗಲುವ 15 ದಿನಗಳ ಮುಂಚೆ ಕೂಡ ಅಲ್ಲಿಯ ಮೈಸೂರ್ ಪಾಕ್‍ನ್ನ ಸವಿದಿದ್ದರು.

    ರೆಬೆಲ್ ಸ್ಟಾರ್ ಅಂಬರೀಶ್‍ಗೆ ಹೋದಲ್ಲಿ ಬಂದಲ್ಲೆಲ್ಲಾ ಹಾಗೂ ದೇಶ-ವಿದೇಶಗಳಲ್ಲೂ ಸ್ನೇಹಿತರು ಇದ್ದಾರೆ. ಮಂಡ್ಯ, ಮೈಸೂರು ಮಾತ್ರವಲ್ಲದೇ ಅಂಬಿಗೆ ರೇಷ್ಮೆನಗರಿ ರಾಮನಗರದಲ್ಲೂ ಉತ್ತಮ ಬಾಂಧವ್ಯವಿದೆ. ಊಟ, ತಿಂಡಿ-ತಿನಿಸಿನ ವಿಚಾರದಲ್ಲೂ ಅಂಬಿಗೆ ರಾಮನಗರ ಸಖತ್ ಪ್ರಿಯವಾಗಿತ್ತು. ಅದರಲ್ಲೂ ಚನ್ನಪಟ್ಟಣದಲ್ಲಿ ನಾಟಿಕೋಳಿ-ಮುದ್ದೆ ಇಷ್ಟಪಟ್ಟರೆ, ರಾಮನಗರದಲ್ಲಿ ಸಿಹಿ ತಿನಿಸು ಮೈಸೂರ್ ಪಾಕ್‍ನ್ನು ಇಷ್ಟಪಟ್ಟು ತಿನ್ನುತ್ತಿದ್ದರು.

    ಬೆಂಗಳೂರಿನಿಂದ ಮಂಡ್ಯ ಇಲ್ಲವೇ ಮೈಸೂರು ಕಡೆಗೆ ಅಂಬಿ ಹೊರಟರೆ ಅವರ ಪರಿಚಿತರು ನಗರದಲ್ಲಿನ ಹೋಟೆಲ್ ಜನಾರ್ದನ್‍ಗೆ ಹೋಗಿ ಮೈಸೂರ್ ಪಾಕ್ ಪಾರ್ಸೆಲ್ ಮಾಡಿ ತೆಗೆದುಕೊಂಡು ಹೋಗುತ್ತಿದ್ದರು. ನಮ್ಮನ್ನಗಲಿದ 15 ದಿನಗಳ ಮುಂಚೆ ರಾಮನಗರಕ್ಕೆ ಆಗಮಿಸಿದ್ದ ಅಂಬರೀಶ್ ತಮ್ಮ ಪರಿಚಿತರನ್ನ ಕಳಿಸಿ 2 ಕೆಜಿಯಷ್ಟು ಮೈಸೂರ್ ಪಾಕ್ ಪಾರ್ಸೆಲ್ ತೆಗೆದುಕೊಂಡಿದ್ದರು.

    1980ರ ಕಾಲದಲ್ಲೇ ಅಂಬಿ ಈ ಹೋಟೆಲ್‍ನ ಮೈಸೂರ್ ಪಾಕ್‍ನ ರುಚಿಯನ್ನ ಸವಿದಿದ್ದರು. 1997ರಲ್ಲಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಂಬರೀಶ್ ಎಂ.ಜಿ ರಸ್ತೆಯಲ್ಲಿ ಪ್ರಚಾರ ಮಾಡುವ ವೇಳೆ ಮೈಸೂರ್ ಪಾಕ್‍ನ್ನ ಹೊಗಳಿದ್ದರು. ಅಲ್ಲದೇ ಸ್ಥಳದಲ್ಲಿಯೇ ಮೈಸೂರ್ ಪಾಕ್ ಬೇಕೆಂದು ತರಿಸಿಕೊಂಡು ಸವಿದಿದ್ದರು. ಇಷ್ಟು ಮಾತ್ರವಲ್ಲದೇ ಆಪ್ತಮಿತ್ರ ವಿಷ್ಣು ದಂಪತಿಗೂ ಜನಾರ್ದನ್ ಹೋಟೆಲ್‍ನ ಮೈಸೂರು ಪಾಕ್ ರುಚಿ ತೋರಿಸಿದ್ದರು.

    ಇನ್ನೊಂದು ದಿನ ರಾಮದೇವರ ಬೆಟ್ಟದಲ್ಲಿ ‘ವಂದೇ ಮಾತರಂ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆಗ 1,500 ಕಲಾವಿದರಿಗೆ ಸ್ವಂತ ಖರ್ಚಿನಲ್ಲಿ ಜನಾರ್ದನ್ ಹೋಟೆಲ್‍ನಿಂದ ಮೈಸೂರ್ ಪಾಕ್ ತರಿಸಿ ಕೊಡಿಸಿದ್ದರು. ಕಳೆದ 66ನೇ ವರ್ಷದ ಹುಟ್ಟುಹಬ್ಬದ ವೇಳೆ ಹೆದ್ದಾರಿಯಲ್ಲಿಯೇ ತಮ್ಮ ಕಾರ್ ನಿಲ್ಲಿಸಿ ಗೆಳೆಯರನ್ನು ಕಳುಹಿಸಿ ಮೈಸೂರ್ ಪಾಕ್ ತರಿಸಿಕೊಂಡಿದ್ದರು. ಹೋಟೆಲ್ ಜನಾರ್ದನ್‍ನ ಮೈಸೂರ್ ಪಾಕ್ ಅಂದರೆ ಅಂಬಿಗೆ ಸಾಕಷ್ಟು ಪ್ರಿಯವಾಗಿತ್ತು. ಏನೇ ಸ್ಪೆಷಲ್ ಇದ್ದರೂ ಮೈಸೂರ್ ಪಾಕ್ ಬೇಕು ಎಂದು ಕೇಳುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv