Tag: ಮೈಸೂರು ಮೇಯರ್ ಎಲೆಕ್ಷನ್

  • ಮೈತ್ರಿಯಿಂದ ಬೇಸರಗೊಂಡ್ರಾ ಮಾಜಿ ಸಿಎಂ? – ‘ಸಿದ್ದರಾಮಯ್ಯ ಮನ್ ಕೀ ಬಾತ್’ನ ಇನ್‍ಸೈಡ್ ಸುದ್ದಿ

    ಮೈತ್ರಿಯಿಂದ ಬೇಸರಗೊಂಡ್ರಾ ಮಾಜಿ ಸಿಎಂ? – ‘ಸಿದ್ದರಾಮಯ್ಯ ಮನ್ ಕೀ ಬಾತ್’ನ ಇನ್‍ಸೈಡ್ ಸುದ್ದಿ

    ಬೆಂಗಳೂರು: ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಕಾಂಗ್ರೆಸ್ ನಲ್ಲಿ ಹಲವು ಬೆಳವಣಿಗೆಗೆ ಕಾರಣವಾಗುತ್ತಿದೆ. ಪಕ್ಷದೊಳಗಿನ ಆಂತರಿಕ ಗುದ್ದಾಟ ಮತ್ತೊಂದು ಆಯಾಮ ಪಡೆದುಕೊಂಡಿದ್ದು, ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜಕೀಯ ವೈರಾಗ್ಯದ ಬಗ್ಗೆ ಆಪ್ತರ ಜೊತೆ ಮಾತನಾಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಜೆಡಿಎಸ್ ಜೊತೆಗಿನ ಮೈತ್ರಿ ಬೆನ್ನಲ್ಲೇ ಅಸಮಾಧಾನಗೊಂಡಿರುವ ಸಿದ್ದರಾಮಯ್ಯನವರು ಮೂರು ದಿನಗಳ ವಿಶ್ರಾಂತಿಗಾಗಿ ಫಾರ್ಮ್ ಹೌಸ್‍ಗೆ ತೆರಳಿದ್ದಾರೆ ಎನ್ನಲಾಗಿದೆ. ಈ ನಡುವೆ ಇದೇ ವಿಚಾರವಾಗಿ ದೆಹಲಿ ನಾಯಕರನ್ನ ಭೇಟಿಯಾಗಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯನವರು ಆಪ್ತರ ಜೊತೆ ರಾಜಕೀಯ ವೈರಾಗ್ಯದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.

    ಸಿದ್ದರಾಮಯ್ಯ ಮನ್ ಕೀ ಬಾತ್: ನಾನು ಸಿಎಂ ಆಗಿದ್ದು ಆಯ್ತು. ಇನ್ನೇನೂ ಆಸೆ ಇಲ್ಲ, ಮಾಡಲು ಇನ್ನೇನಿದೆ. ನಾನು ಕಾಂಗ್ರೆಸ್ ಸೇರಿದ 6 ವರ್ಷದಲ್ಲೇ ಸಿಎಂ ಮಾಡಿದರು. ಅದಕ್ಕಿಂತ ನನಗೆ ಇನ್ನೇನು ಬೇಕು. ಸೋನಿಯಾ ಗಾಂಧಿ ಅವರ ಋಣವನ್ನು ಯಾವತ್ತೂ ಮರೆಯಲ್ಲ ಮತ್ತು ಅವರಿಗೆ ದ್ರೋಹ ಮಾಡಲ್ಲ. ಕಾಂಗ್ರೆಸ್ ಪಕ್ಷ ಉದ್ಧಾರ ಆಗಬೇಕು ಅಂದ್ರೆ ಜೆಡಿಎಸ್‍ನಿಂದ ದೂರ ಇರಬೇಕು. ಆದರೆ ಪದೇ ಪದೇ ನಾವು ಜೆಡಿಎಸ್‍ನವರ ಇಕ್ಕಳದಲ್ಲೇ ಸಿಕ್ಕಿಹಾಕಿಕೊಳ್ತೀವಿ. ಡಿಕೆಶಿ ಪದೇ ಪದೇ ಜೆಡಿಎಸ್‍ಗೆ ಒಳಗೊಳಗೆ ಸಪೋರ್ಟ್ ಮಾಡಿದ್ರೆ ಮೈಸೂರು ಭಾಗದಲ್ಲಿ ಯಾರ ಮೇಲೆ ಹೋರಾಟ ಮಾಡೋದು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‍ನಲ್ಲಿ ಮೈಸೂರು ಮೈತ್ರಿ ಲಡಾಯಿ – ಕೈ ಸದಸ್ಯರಿಂದಲೇ ಡೀಲ್ ಆರೋಪ

    ಹಳೇ ಮೈಸೂರು ಭಾಗದಲ್ಲಿ ನಮ್ಮ ಎದುರಾಳಿ ಜೆಡಿಎಸ್, ಆದ್ರೆ ಅವರ ಜೊತೆಯೇ ಹೊಂದಾಣಿಕೆ ಮಾಡಿಕೊಂಡ್ರೆ ಮುಂದೆ ಕಾಂಗ್ರೆಸ್ ಗತಿ ಏನು? ದೇವೇಗೌಡರ ಹತ್ತಿರ ನಾನು ಇದ್ದು ಬಂದಿದ್ದೀನಿ, ಶಿವಕುಮಾರ್ ಗೌಡರ ಟ್ರ್ಯಾಪ್‍ನಲ್ಲಿ ಬೀಳೋದು ಗ್ಯಾರಂಟಿ. ಕುಮಾರಸ್ವಾಮಿಯನ್ನ ಸಮ್ಮಿಶ್ರ ಸರ್ಕಾರ ಇದ್ದಾಗ ನೋಡಿ ಸಾಕಾಗಿಲ್ಲವಾ ಈ ಶಿವಕುಮಾರ್‍ಗೆ? ಒಬ್ಬ ಒಂದೂವರೆ ಜಿಲ್ಲೆ ಲೀಡರ್, ಇನ್ನೊಬ್ಬರು ಮೂರುವರೆ ಜಿಲ್ಲೆ ಲೀಡರ್. ನನಗೂ ಗೊತ್ತು ರಾಜಕೀಯ. ಶಿವಕುಮಾರ್ ನನ್ನ ಕ್ಯಾಬಿನೆಟ್‍ನಲ್ಲಿ ಮಂತ್ರಿಯಾಗಿದ್ದಾಗ ಏನ್ ಮಾಡ್ತಿದ್ದೀಯಾ.. ಏಕೆ ಮಾಡ್ತಿದ್ದೀಯಾ ಅಂತ ನಾನು ಒಂದು ದಿನ ಕೇಳಲಿಲ್ಲ ಎಂದು ಆಪ್ತರ ಬಳಿ ಡಿಕೆ ಶಿವಕುಮಾರ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಜಮೀರ್ ಮೇಲೆ ಸಿದ್ದರಾಮಯ್ಯಗೆ ಪ್ರೀತಿ – ತಿರುಗಿ ಬಿದ್ರಾ ಮುಸ್ಲಿಮ್‌ ನಾಯಕರು

    ನನ್ನ ಪಾಡಿಗೆ ನಾನು ಮೈಸೂರಿಗೆ ಹೋಗಿ ಆರಾಮವಾಗಿ ಇರ್ತೀನಿ. ಹೇಗಿದ್ರೂ ಮನೆ ರೆಡಿಯಾಗ್ತಿದೆ. ಮೊಮ್ಮಕ್ಕಳ ಹತ್ತಿರ ಕಾಲ ಕಳೆಯುತ್ತೇನೆ. ನನ್ನ ಮಗನನ್ನೂ ಎಂಎಲ್‍ಎ ಮಾಡಿದ್ದು ಆಯ್ತು.. ಅವನ ಕ್ಷೇತ್ರದಲ್ಲಿ ಅವನು ಇರ್ತಾನೆ. ನನ್ನ ಜೊತೆ ಇರೋರು ಕಮ್ಮಿ ಏನಿಲ್ಲ, ಅವರಿಗೂ ಪೊಲಿಟಿಕಲ್ ಸ್ಟ್ರೆಂಥ್ ಇದೆ. ಸರ್ವೈವ್ ಆಗ್ತಾರೆ. ಯಾವುದೋ ಲೋಕಲ್ ರಾಜಕೀಯದಲ್ಲಿ ನನ್ನನ್ನೇ ರಾಡಿ ಮಾಡೋದಕ್ಕೆ ಹೋದ್ರೆ ನಾನು ಸುಮ್ಮನೆ ಕುಳಿತುಕೊಳ್ಳಬೇಕಾ ಎಂದು ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಕ್ಷ ಬಲಪಡಿಸುವ ಕೆಲಸ ಮಾಡ್ತಿಲ್ಲ: ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಆಕ್ರೋಶ

  • ಪಕ್ಷ ಬಲಪಡಿಸುವ ಕೆಲಸ ಮಾಡ್ತಿಲ್ಲ: ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಆಕ್ರೋಶ

    ಪಕ್ಷ ಬಲಪಡಿಸುವ ಕೆಲಸ ಮಾಡ್ತಿಲ್ಲ: ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಆಕ್ರೋಶ

    ಮೈಸೂರು: ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರಿಗೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ. ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ತನ್ವೀರ್ ಸೇಠ್, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಮೈಸೂರು ಪಾಲಿಕೆ ಚುನಾವಣೆ ವೇಳೆ ಜೆಡಿಎಸ್ ಜೊತೆಗಿನ ಮೈತ್ರಿ ನಿರ್ಧಾರ ನನ್ನದು. 1983ರಿಂದ ಇಲ್ಲಿಯವರೆಗೂ ಬಿಜೆಪಿಗೆ ಮೈಸೂರು ಗದ್ದುಗೆ ಸಿಗದಂತೆ ನೋಡಿಕೊಳ್ಳಲಾಗಿದೆ. ಕೊನೆ ಕ್ಷಣದಲ್ಲಿ ಜೆಡಿಎಸ್‍ಗೆ ಬೆಂಬಲ ಸೂಚಿಸಿ ಬಿಜೆಪಿಯನ್ನ ಅಧಿಕಾರದಿಂದ ದೂರವಿರುವಂತೆ ನೋಡಿಕೊಳ್ಳಲಾಗಿದೆ. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

    ಪಕ್ಷ ಕುಂಠಿತಗೊಳಿಸುವ ಕೆಲಸ: ಮಾಧ್ಯಮಗಳ ಮೂಲಕ ಪಕ್ಷದಿಂದ ನೋಟಿಸ್ ಬಂದಿದೆ ಎಂದು ತಿಳಿದಿದೆ. ಆದ್ರೆ ಅಧಿಕೃತವಾಗಿ ನನಗೆ ನೋಟಿಸ್ ತಲುಪಿಲ್ಲ. ನೋಟಿಸ್ ಬಂದ್ರೆ ಉತ್ತರಿಸಲು ಸಿದ್ಧನಿದ್ದೇನೆ. ಸದನದಲ್ಲಿ ನಮ್ಮ ಬಳಿ ಮೊಬೈಲ್ ಬಳಸಲು ಸಾಧ್ಯ ಇರಲಿಲ್ಲ. ಈ ಹಿಂದೆ ವಿಪ್ ಉಲ್ಲಂಘನೆ ಮಾಡಿದವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯನವರು ಪಕ್ಷವನ್ನ ಕುಂಠಿತಗೊಳಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ನೋಟಿಸ್ ನಲ್ಲಿರುವ ಅಂಶಗಳನ್ನ ಗಮನಿಸಿ ಉತ್ತರ ನೀಡುತ್ತೇನೆ ಎಂದು ಸಿದ್ದರಾಮಯ್ಯನವರ ವಿರುದ್ಧ ಆಕ್ರೋಶ ಹೊರ ಹಾಕಿದರು.

    ಸಮರ್ಥಿಸಿಕೊಳ್ಳುವ ಧೈರ್ಯ ನನ್ನಲಿದೆ: ಚುನಾವಣೆಗೂ ಮುನ್ನ ಎಲ್ಲರ ಜೊತೆ ಮಾತನಾಡಿದ್ದೇನೆ. ಸದನದಲ್ಲಿದ್ದಾಗ ಸಿದ್ದರಾಮಯ್ಯನವರ ಕರೆ ಬಂದಿರೋದು ನಿಜ. ಚುನಾವಣೆ ಬಳಿಕ ನನ್ನ ವರದಿಯನ್ನ ಧೃವನಾರಾಯಣ್ ವರಿಗೆ ಸಲ್ಲಿಸಿದ್ದೇನೆ. ಇವರೆಗೂ ಯಾರ ಜೊತೆ ಮಾತನಾಡಿಲ್ಲ. ಜೆಡಿಎಸ್ ಜೊತೆಗಿನ ಬಗ್ಗೆ ಯಾರಿಗೆ ಏನು ಅಸಮಾಧಾನವಿದೆ ಅನ್ನೋದು ನನಗೆ ಗೊತ್ತಿಲ್ಲ. ಆದ್ರೆ ಪಕ್ಷದ ಕೆಲಸ ಮಾಡಿದ್ದು, ಒಪ್ಪಿಕೊಳ್ಳುವ ಮತ್ತು ಸಮರ್ಥಿಸಿಕೊಳ್ಳುವ ಧೈರ್ಯ ನನ್ನಲಿದೆ ಎಂದರು.

    ಉತ್ತರ ಕೊಡುತ್ತೇನೆ: ಜೆಡಿಎಸ್ ನಾಯಕರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸಲ್ಲ. ರಾಜಕಾರಣದಲ್ಲಿ ಕೊನೆ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು ಅನ್ನೋದಕ್ಕೆ ಮೈಸೂರು ಪಾಲಿಕೆ ಚುನಾವಣೆ ಸಾಕ್ಷಿಯಾಗಿದೆ. ಯಾರೇ ಸ್ಪಷ್ಟನೆ ಕೇಳಿದ್ರೂ ನಾನು ಉತ್ತರ ಕೊಡುತ್ತೇನೆ. ನನಗೆ ನೀಡಿದ ಜವಾಬ್ದಾರಿಯನ್ನ ನಿಭಾಯಿಸಿದ್ದೇನೆ ಅನ್ನೋ ತೃಪ್ತಿಗೆ ನನಗಿದೆ. ಮೊದಲಿಗೆ ಜೆಡಿಎಸ್ ಜೊತೆ ಮಾತನಾಡಲು ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿಯರು ಸೂಚಿಸಿದ್ದರು ಎಂದು ಹೇಳಿದರು.

    ರಾಜೀನಾಮೆ ಎಚ್ಚರಿಕೆ: ಇತ್ತ ಚುನಾವಣೆ ಯಲ್ಲಿ ಕಾಂಗ್ರೆಸ್, ಜೆಡಿಎಸ್ ಬೆಂಬಲಿಸಲು ಕಾರಣರಾದ ತನ್ವೀರ್ ಸೇಠ್ ಗೆ ಪಕ್ಷದಿಂದ ನೋಟಿಸ್ ಬಂದರೆ ಸಾಮಾಹಿಕ ರಾಜೀನಾಮೆಗೆ ಎನ್.ಆರ್. ಕ್ಷೇತ್ರದ ವಿವಿಧ ಬ್ಲಾಕ್ ಗಳ ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ. ತನ್ವೀರ್ ಸೇಠ್ ಮನೆ ಮುಂದೆ ತಮ್ಮದೆ ಪಕ್ಷದ ನಾಯಕರ ವಿರುದ್ದ ಕಾರ್ಯಕರ್ತರು ಪ್ರತಿಭಟಿಸಿದರು.

  • ಹುಲಿಯಾಗಿ ಅಬ್ಬರಿಸ್ತಿದ್ದ ಸಿದ್ದರಾಮಯ್ಯರನ್ನ ಕುಮಾರಣ್ಣ ಬೋನಿಗೆ ಹಾಕಿದ್ರು: ಪ್ರತಾಪ್ ಸಿಂಹ

    ಹುಲಿಯಾಗಿ ಅಬ್ಬರಿಸ್ತಿದ್ದ ಸಿದ್ದರಾಮಯ್ಯರನ್ನ ಕುಮಾರಣ್ಣ ಬೋನಿಗೆ ಹಾಕಿದ್ರು: ಪ್ರತಾಪ್ ಸಿಂಹ

    – ಇದು ಕಾಂಗ್ರೆಸ್ ಹೀನಾಯ ಸ್ಥಿತಿ ಪ್ರದರ್ಶನ

    ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿ ಹುಲಿಯಂತೆ ಅಬ್ಬರಿಸುತ್ತಿದ್ದರು. ಆದ್ರೆ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿದ್ದರಾಮಯ್ಯರನ್ನ ಬೋನಿನಲ್ಲಿ ಕೂಡಿ ಹಾಕಿದರು ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯ ಮಾಡಿದ್ದಾರೆ.

    ಮೈಸೂರು ಪಾಲಿಕೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಅಧಿಕಾರದ ಸನಿಹದಲ್ಲಿ ಬಿಜೆಪಿ ಗದ್ದುಗೆಯಿಂದ ವಂಚಿತವಾಯ್ತು. ಚುನಾವಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಕೊನೆ ಕ್ಷಣದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿ ಶಾಂತಕುಮಾರಿ ಅವರಿಗೆ ಮತ ಹಾಕದೇ ಮೋಸ ಮಾಡಿದೆ. ಹಿರಿಯರಾಗಿರುವ ಶಾಂತಕುಮಾರಿಗೆ ಕಾಂಗ್ರೆಸ್ ದ್ರೋಹ ಮಾಡಿದೆ. ಇವತ್ತಿನ ಘಟನೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪತನವಾಗುವ ಮುನ್ಸೂಚನೆ ಎಂದು ಭವಿಷ್ಯ ನುಡಿದರು.

    ನಾವು ಸಹಕಾರ ಕೇಳಿದ್ದೀವಿ. ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿ ಸಹಕಾರ ಕೇಳಿದ್ದೀವಿ, ಆದ್ರೆ ಸಿಗಲಿಲ್ಲ. ಹಾಗಾಗಿ ನಮ್ಮ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದೀವಿ. ಚುನಾವಣೆಯಲ್ಲಿ ಗೆಲ್ಲಲು ನಾವು ಸಹ ಪ್ರಯತ್ನಿಸಿದ್ದು, ನಮ್ಮ ಮತಗಳು ನಮ್ಮಲ್ಲಿವೆ. ಆದರೆ ಸಂಖ್ಯೆಯ ದೃಷ್ಟಿಯಲ್ಲಿ ಫಲ ಕೊಡಲಿಲ್ಲ. ಹಾಗಂತ ನಮಗೆ ಯಾವುದೇ ಬೇಸರ ಇಲ್ಲ ಎಂದರು.

    ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಬೆಂಬಲದಿಂದ ರುಕ್ಮಿಣಿ ಮಾದೇಗೌಡರು ಮೇಯರ್ ಮತ್ತು ಕಾಂಗ್ರೆಸ್ಸಿನ ಅನ್ವರ್ ಬೇಗ್ ಆಯ್ಕೆಯಾದರು. ಇಂದು ಬೆಳಗ್ಗೆ ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಕುಮಾರಸ್ವಾಮಿ, ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಎರಡು ಪಕ್ಷಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಇಂದಿನ ಸ್ಥಿತಿಗೆ ಸಿದ್ದರಾಮಯ್ಯ ಕಾರಣ ಎಂದು ವಾಗ್ದಾಳಿ ನಡೆಸಿದ್ದರು.