Tag: ಮೈಸೂರು ಮಹಾನಗರ ಪಾಲಿಕೆ

  • 1999-2024ರ ವರೆಗಿನ ಕಡತಗಳಲ್ಲಿ ಕೆಆರ್‌ಎಸ್‌ ರಸ್ತೆಗೆ ಪ್ರಿನ್ಸಸ್‌ ಹೆಸರಿಲ್ಲ: ಮೈಸೂರು ಪಾಲಿಕೆ ಆಯುಕ್ತ

    1999-2024ರ ವರೆಗಿನ ಕಡತಗಳಲ್ಲಿ ಕೆಆರ್‌ಎಸ್‌ ರಸ್ತೆಗೆ ಪ್ರಿನ್ಸಸ್‌ ಹೆಸರಿಲ್ಲ: ಮೈಸೂರು ಪಾಲಿಕೆ ಆಯುಕ್ತ

    – 1964-1999ರ ಕಡತ ಪರಿಶೀಲನೆ ಬಹುತೇಕ ಪೂರ್ಣ

    ಮೈಸೂರು: ನಗರದ ಕೆಆರ್‌ಎಸ್ ರಸ್ತೆಗೆ (KRS Road) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಹೆಸರು ಇಡುವ ವಿಚಾರ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ವಿವಾದಕ್ಕೆ ತೆರೆ ಎಳೆದಿದ್ದಾರೆ. 1999 ರಿಂದ 2024ರ ವರೆಗಿನ ಎಲ್ಲಾ ಕಡತಗಳನ್ನ ಪರಿಶೀಲಿಸಲಾಗಿದ್ದು, ಎಲ್ಲಿಯೂ ಪ್ರಿನ್ಸಸ್ ಹೆಸರು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಮೈಸೂರಿನ ಕೆಆರ್‌ಎಸ್‌ ರಸ್ತೆಗೆ (Mysuru KRS Road) ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ನಿಯೋಗ ಸಭೆ ನಡೆಸಿತು. ಸಭೆಯಲ್ಲಿ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ ವಿಜಯ್ ಕುಮಾರ್, ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಇದನ್ನೂ ಓದಿ: ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ ಪತ್ತೆಗೆ ಡ್ರೋನ್ ಕ್ಯಾಮೆರಾ ಬಳಕೆ: ಈಶ್ವರ್ ಖಂಡ್ರೆ

    ಈ ವೇಳೆ ಮಾತನಾಡಿದ ನಗರಪಾಲಿಕೆ ಆಯುಕ್ತರು, 1999 ರಿಂದ 2024ರ ವರೆಗಿನ ಎಲ್ಲಾ ಕಡತ ಪರಿಶೀಲನೆ ನಡೆಸಲಾಗಿದೆ. ಎಲ್ಲಿಯೂ ಪ್ರಿನ್ಸಸ್ ಹೆಸರು ಇಲ್ಲ. ಆ ರಸ್ತೆಗೆ ಯಾವ ಹೆಸರೂ ಇಲ್ಲ. ಈಗ 1964 ರಿಂದ 1999ರ ವರೆಗಿನ ಕಡತಗಳನ್ನೂ ಪರಿಶೀಲನೆ ಮಾಡುತ್ತಿದ್ದೇವೆ. ಅದು ಕೂಡ ಬಹುತೇಕ ಮುಕ್ತಾಯವಾಗಿದೆ. ಇನ್ನೂ 20 ವರ್ಷಗಳ ಕಡತಗಳ ಪರಿಶೀಲನೆ ಮಾತ್ರ ಬಾಕಿ ಇದೆ. ಈಗ ಪರಿಶೀಲನೆ ಮಾಡಿರುವ ಕಡತಗಳಲ್ಲಿ ಎಲ್ಲಿಯೂ ಕೂಡ ಪ್ರೀನ್ಸಸ್ ಹೆಸರು ಪ್ರಸ್ತಾಪ ಆಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ.. ಸಚಿವ ಸಂಪುಟದಿಂದ ಕೈಬಿಡಿ: ಜ್ಞಾನಪ್ರಕಾಶ್ ಸ್ವಾಮೀಜಿ ಆಗ್ರಹ

    ಕೆಆರ್‌ಎಸ್‌ ರಸ್ತೆಗೆ ಅಧಿಕೃತವಾಗಿ ಯಾವ ಹೆಸರು ಇಲ್ಲ. ನಾವು ಮೈಸೂರು ಪಾಲಿಕೆಯ 9 ವಲಯಗಳ ಆಯುಕ್ತರಿಂದ ಮಾಹಿತಿ ಪಡೆದಿದ್ದೇನೆ. ಅವರು ಕೂಡ ಪ್ರಿನ್ಸಸ್ ಹೆಸರು ಇದೇ ಎಂಬುದಕ್ಕೆ ಯಾವ ಅಧಿಕೃತ ದಾಖಲೆ ಇಲ್ಲ ಎಂದು ಹೇಳಿದ್ದಾರೆ. ನಮ್ಮ ವ್ಯಾಪ್ತಿಯ ದಾಖಲೆ ಪರಿಶೀಲನೆ ಬಹುತೇಕ ಮುಕ್ತಾಯವಾಗಿದೆ. ಇನ್ನೂ ಗೆಜೆಟ್‌ನಲ್ಲಿ ಆ ಹೆಸರು ಇದಿಯೋ ಇಲ್ವೊ ಎಂಬುದು ನನಗೆ ಮಾಹಿತಿ ಇಲ್ಲ. ಆ ದಾಖಲೆ ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ. ಪಾಲಿಕೆಯ ಕೌನ್ಸಿಲ್ ವ್ಯಾಪ್ತಿಯಲ್ಲಿ ಪ್ರಿನ್ಸಸ್ ಹೆಸರಂತೂ ಇಲ್ಲ ಎಂದು ತಿಳಿಸಿದ್ದಾರೆ.

    ಇನ್ನೂ ಕೆಆರ್‌ಎಸ್‌ ರಸ್ತೆಗೆ ಸಿಎಂ ಹೆಸರಿಡಬೇಕೆಂದು ಪರವಾಗಿ ಮಾತನಾಡಿದ್ದ ಮಾಜಿ ಸಂಸದ ಪ್ರತಾಪ್‌ ಸಿಂಹ ಉಲ್ಟಾ ಹೊಡೆದಿದ್ದಾರೆ. ಕೆಆರ್‌ಎಸ್ ರಸ್ತೆಗೆ ಪ್ರಿನ್ಸಸ್ ಎಂದು ಮಹಾರಾಜರ ಕಾಲದಲ್ಲೇ ಹೆಸರಿತ್ತು ಅನ್ನೋದಾದ್ರೇ ಆ ಹೆಸರು ಬದಲಾವಣೆ ಮಾಡುವುದು ಬೇಡ. ಇದಕ್ಕೆ ನನ್ನ ತಕರಾರು ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ಹೊಸ ಲೋಕದಲ್ಲಿ ಶೋಕ ಕಾಣಬಹುದು – ವಿದೇಶ ಪ್ರವಾಸಕ್ಕೆ ಛಲವಾದಿ ವ್ಯಂಗ್ಯ

  • ಸಿಎಂ ತವರಲ್ಲೇ ಇಂದಿರಾ ಕ್ಯಾಂಟಿನ್ ನಡೆಸಲು ನಿರಾಸಕ್ತಿ; ಬಯಲಾಯ್ತು ಕಳ್ಳ ಲೆಕ್ಕ – ʻಪಬ್ಲಿಕ್ʼ ವರದಿಯಿಂದ ಎಚ್ಚೆತ್ತ ಪಾಲಿಕೆ

    ಸಿಎಂ ತವರಲ್ಲೇ ಇಂದಿರಾ ಕ್ಯಾಂಟಿನ್ ನಡೆಸಲು ನಿರಾಸಕ್ತಿ; ಬಯಲಾಯ್ತು ಕಳ್ಳ ಲೆಕ್ಕ – ʻಪಬ್ಲಿಕ್ʼ ವರದಿಯಿಂದ ಎಚ್ಚೆತ್ತ ಪಾಲಿಕೆ

    – ಕ್ಯಾಂಟಿನ್ ಓಪನ್ ಮಾಡದಿದ್ರೂ ಪುಸ್ತಕದಲ್ಲಿದೆ ಊಟ-ತಿಂಡಿ ಲೆಕ್ಕ

    ಮೈಸೂರು: ಸಿಎಂ ಕನಸಿನ ಯೋಜನೆ ಇಂದಿರಾ ಕ್ಯಾಂಟಿನ್‌ಗೆ (Indira Canteen) ಸಿಎಂ ತವರಲ್ಲೇ ಬ್ರೇಕ್ ಬಿದ್ದಿದೆ. ಅದು ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ (Tanveer Sait) ಪ್ರತಿನಿಧಿಸಿರುವ ನರಸಿಂಹರಾಜ ಕ್ಷೇತ್ರದಲ್ಲೇ ಕ್ಯಾಂಟೀನ್‌ಗಳಿಗೆ ಬ್ರೇಕ್‌ ಹಾಕಿರುವುದು ಅಚ್ಚರಿಯ ಸಂಗತಿ.

    ಮೈಸೂರಿನ (Mysuru) ನರಸಿಂಹರಾಜ ಕ್ಷೇತ್ರದಲ್ಲಿ ಇಂದಿರಾ ಕ್ಯಾಂಟಿನ್ ಗಳು ನಿಷ್ಕ್ರಿಯಗೊಂಡಿವೆ. ಬನ್ನಿಮಂಟಪದ ಜೋಡಿ ತೆಂಗಿನಮರ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಮುಚ್ಚಿ ಹೋಗಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಕ್ಯಾಂಟಿನ್ ನಿರ್ಮಾಣ ಮಾಡಿದ್ರೂ ಜನರಿಗೆ ಪ್ರಯೋಜನವಾಗುತ್ತಿಲ್ಲ. ಕ್ಯಾಂಟೀನ್ ಸುತ್ತಲು ಗಿಡಗಂಟಿಗಳು ಬೆಳೆದುಕೊಂಡಿವೆ. ಕ್ಯಾಂಟೀನ್‌ನ ಕಿಟಕಿ, ಬಾಗಿಲುಗಳು ಮುರಿದ ಸ್ಥಿತಿಯಲ್ಲಿವೆ. ಬಡವರು ವಾಸಿಸುವ ಸ್ಥಳದಲ್ಲೇ ಕ್ಯಾಂಟೀನ್ ನಿರ್ಮಾಣಗೊಂಡಿದ್ದರೂ ಉಪಯೋಗಕ್ಕೆ ಬಾರದಂತಾಗಿದ್ದು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

    ʻಪಬ್ಲಿಕ್ ಟಿವಿʼ ಬಿಗ್ ಇಂಪ್ಯಾಕ್ಟ್: ನರಸಿಂಹರಾಜ ಕ್ಷೇತ್ರದಲ್ಲಿ ಇಂದಿರಾ ಕ್ಯಾಂಟೀನ್‌ ಆವರಣದಲ್ಲಿ ಅಶುಚಿತ್ವ ತಾಂಡವವಾಡುತ್ತಿರುವ ಬಗ್ಗೆ ಪಬ್ಲಿಕ್‌ ಟಿವಿ ವರದಿ ಬಿತ್ತರಿಸಿತ್ತು. ವರದಿ ಬಿತ್ತರಿಸಿದ ಕೆಲವೇ ಕ್ಷಣಗಳಲ್ಲಿ ಎಚ್ಚೆತ್ತ ಪಾಲಿಕೆ ಅಧಿಕಾರಿಗೂ (Mysore City Corporation Officers) ಇಂದಿರಾ ಕ್ಯಾಂಟಿನ್ ಹೊರ ಆವರಣ ಮತ್ತು ಒಳ ಆವರಣದ ಸ್ವಚ್ಚತೆ ಮಾಡಿಸಲು ಮುಂದಾಗಿದ್ದಾರೆ. ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳೇ ಈ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬಯಲಾಯ್ತು ಕಳ್ಳ ಲೆಕ್ಕ: ಮೈಸೂರಿನ ಎನ್.ಆರ್. ಕ್ಷೇತ್ರದ ಜೋಡಿ ತೆಂಗಿನ ಮರ ರಸ್ತೆಯಲ್ಲಿರೋ ಇಂದಿರಾ ಕ್ಯಾಂಟಿನ್ ಮುಚ್ಚಿ 6 ತಿಂಗಳಾಗಿದೆ. ಆದ್ರೆ ಇಂದಿರಾ ಕ್ಯಾಂಟಿನ್‌ನ ಫುಡ್‌ ರಿಜಿಸ್ಟರ್ ಪುಸ್ತಕದಲ್ಲಿ ಮಾತ್ರ ಇಂದಿನವರೆಗೂ ಊಟ-ತಿಂಡಿ ಕೊಟ್ಟಿದ್ದೇವೆ ಎಂಬ ಲೆಕ್ಕ ಬರೆಯಲಾಗಿದೆ. ಅಲ್ಲಿಗೆ ಕಳ್ಳ ಲೆಕ್ಕ ಇದು ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ.

  • ಮೇಡಂ ರಾಜೀನಾಮೆ ನೀಡಬೇಡಿ ಎಂದು ಶಿಲ್ಪಾ ನಾಗ್ ಕಾಲು ಹಿಡಿದ ಭದ್ರತಾ ಸಿಬ್ಬಂದಿ

    ಮೇಡಂ ರಾಜೀನಾಮೆ ನೀಡಬೇಡಿ ಎಂದು ಶಿಲ್ಪಾ ನಾಗ್ ಕಾಲು ಹಿಡಿದ ಭದ್ರತಾ ಸಿಬ್ಬಂದಿ

    ಮೈಸೂರು: ಇದ್ದಕ್ಕಿದ್ದಂತೆ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ನೀಡುವ ಕುರಿತು ಘೋಷಿಸಿದ್ದಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಸುದ್ದಿಗೋಷ್ಠಿ ಮುಗಿಸಿ ಹೊರಗೆ ಬರುತ್ತಿದ್ದಾಗ ಮೇಡಂ ರಾಜೀನಾಮೆ ನೀಡಬೇಡಿ ಎಂದು ಭದ್ರತಾ ಸಿಬ್ಬಂದಿ ಶಿಲ್ಪಾ ನಾಗ್ ಅವರ ಕಾಲು ಹಿಡಿದಿದ್ದಾರೆ.

    ಶಿಲ್ಪಾ ನಾಗ್ ಅವರು ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿರುವುದು ಶಾಕ್ ನೀಡಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಭದ್ರತಾ ಸಿಬ್ಬಂದಿ ಸಹ ಶಿಲ್ಪಾ ನಾಗ್ ಅವರು ಹೊರಗಡೆ ಬರುತ್ತಿದ್ದಂತೆ ಅವರ ಕಾಲು ಹಿಡಿದು ಮೇಡಂ ಹೋಗಬೇಡಿ ಎಂದು ಕೇಳಿಕೊಂಡಿದ್ದಾರೆ. ಶಿಲ್ಪಾ ನಾಗ್ ಅವರು ಅವರಿಂದ ಕಾಲು ಮುಟ್ಟಿಸಿಕೊಳ್ಳದೆ ಸಮಾಧಾನಪಡಿಸಿ, ತೆರಳಿದ್ದಾರೆ. ಮಾತ್ರವಲ್ಲದೆ ಗೇಟ್ ಬಳಿ ಬಂದು ಸಹ ಕೈ ಮುಗಿದಿದ್ದು, ಗೇಟ್ ನಿಂದ ನಿರ್ಗಮಿಸುವಾಗ ಮೇಡಂ ದಯವಿಟ್ಟು ರಾಜೀನಾಮೆ ಕೊಡಬೇಡಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ರಾಜೀನಾಮೆ ನೀಡಿ ಕಣ್ಣೀರಿಟ್ಟ ಶಿಲ್ಪಾನಾಗ್

    ಮತ್ತೊಬ್ಬ ವ್ಯಕ್ತಿ ಸಹ ಮೇಡಂ ನೀವು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ, ನಿಮ್ಮದು ಏನೂ ತಪ್ಪಿಲ್ಲ. ನೀವು ಕೆಲಸ ಮಾಡುತ್ತಿದೀರಿ, ನೀವ್ಯಾಕೆ ಈ ರೀತಿ ರಾಜೀನಾಮೆ ನೀಡುತ್ತೀರಿ, ಮಾಡದಿದ್ದವರೇ ಆರಾಮಾಗಿ ಇರುತ್ತಾರೆ. ಬೇಡ ಮೇಡಂ ನಾವೆಲ್ಲ ನಿಮಗೆ ಸಪೋರ್ಟ್ ಮಾಡುತ್ತೇವೆ. ನಿಮ್ಮ ನಿರ್ಧಾರವನ್ನು ದಯವಿಟ್ಟು ಹಿಂಪಡೆಯಿರಿ ಎಂದು ಗೋಗರೆದಿದ್ದಾರೆ, ಈ ವೇಳೆ ಶಿಲ್ಪಾ ನಾಗ್ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

    ಶಿಲ್ಪಾ ನಾಗ್ ರಾಜೀನಾಮೆ ನೀಡಿದ್ಯಾಕೆ?
    ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಶಿಲ್ಪಾನಾಗ್, ಜಿಲ್ಲಾಧಿಕಾರಿಗಳು ನಗರಕ್ಕೆ ಒಂದು ಮಾನದಂಡ, ಗ್ರಾಮಾಂತರಕ್ಕೆ ಒಂದು ಮಾನದಂಡ ಮಾಡಿದ್ದಾರೆ. ಸಿಟಿಯಲ್ಲಿ ಕಮಿಷನರ್ ವಿಫಲವಾಗಿದ್ದಾರೆ ಎಂದು ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದ ನಮಗೆ ಯಾವುದೇ ಸಹಕಾರ ದೊರೆತಿಲ್ಲ. ಸಿಎಸ್‍ಆರ್ ಫಂಡ್‍ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು ಸಹನೆ ಇರುತ್ತೆ, ಸಹನೆ ಕಟ್ಟೆ ಒಡೆದಾಗ ಏನು ಮಾಡಬೇಕು. ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

    ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನನ್ನನ್ನ ಟಾರ್ಗೆಟ್ ಮಾಡಲಾಗಿದೆ. ನನ್ನನ್ನ ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದ್ದು, ಅವರ ಇಗೋಯಿಂದ ನಮ್ಮ ಕೆಲಸಕ್ಕೆ ಮನ್ನಣೆ ಸಿಗುತ್ತಿಲ್ಲ ಎಂದು ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದರು. ನನಗೆ ಕೆಲಸ ಮಾಡುವ ಆಸಕ್ತಿಯೇ ಇಲ್ಲದಂತಾಗಿದ್ದು, ಚೀಫ್ ಸೆಕ್ರಟರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ವಿಷಯವನ್ನ ತಿಳಿಸಿ ಭಾವುಕರಾದರು.

    ಈ ರೀತಿಯ ಜಿಲ್ಲಾಧಿಕಾರಿ ಯಾವುದೇ ಜಿಲ್ಲೆಗೂ ಸಿಗಬಾರದು. ಟಾರ್ಗೆಟ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಮೈಸೂರು ಜಿಲ್ಲೆ ಬಿಟ್ಟು ತೊಲಗಿ, ತುಂಬಾ ಚೀಪ್ ಮೆಂಟಾಲಿಟಿ ಅಧಿಕಾರಿ ಅವರು. ಒಳ್ಳೆಯ ಜನರು ಇರೋ ಮೈಸೂರು ನಗರದಲ್ಲಿ ಜಿಲ್ಲಾಧಿಕಾರಿಗಳು ಈ ರೀತಿ ಗಲೀಜು ಎಬ್ಬಿಸುತ್ತಿದ್ದಾರೆ. ಯಾಕೆ ಈ ರೀತಿ ಹಠ ಮಾಡುತ್ತಿದ್ದಾರೋ ಗೊತ್ತಿಲ್ಲ. ನಾನು 2014ನೇ ಬ್ಯಾಚ್ ಅಧಿಕಾರಿ, ಅವರು 2009 ನೇ ಬ್ಯಾಚ್ ಅಧಿಕಾರಿ. ನನ್ನ ಮೇಲಿನ ಅವರ ದ್ವೇಷ ಮೈಸೂರು ಜನರ ಮೇಲೆ ಪರಿಣಾಮ ಆಗೋದು ಬೇಡ. ನಾನೇ ಸುಪ್ರೀಂ ಅಂತಾ ಅಧಿಕಾರಿಗಳ ಸಭೆಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಗೌರವ ಕೊಡದೆ ಅಧಿಕಾರಿಗಳನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

  • ಹುಣಸೂರು ಬೈ ಎಲೆಕ್ಷನ್ ಆಯ್ತು, ಈಗ ಮೇಯರ್ ಆಯ್ಕೆಗೂ ತಟಸ್ಥ ಎಂದ್ರು ಜಿಟಿಡಿ

    ಹುಣಸೂರು ಬೈ ಎಲೆಕ್ಷನ್ ಆಯ್ತು, ಈಗ ಮೇಯರ್ ಆಯ್ಕೆಗೂ ತಟಸ್ಥ ಎಂದ್ರು ಜಿಟಿಡಿ

    ಮೈಸೂರು: ಜೆಡಿಎಸ್ ವರಿಷ್ಠರ ಜೊತೆ ಮುನಿಸಿಕೊಂಡಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಹುಣಸೂರು ಉಪಚುನಾವಣೆಯಲ್ಲಿ ತಟಸ್ಥ ನಿಲುವು ತೆಳೆದಿದ್ದರು. ಈಗ ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲೂ ಅದೇ ಮನಸ್ಥಿತಿ ಮುಂದುವರಿಸಿದ್ದಾರೆ.

    ಮೈಸೂರು ಮಹಾನಗರ ಪಾಲಿಕೆ ಮೇಯರ್ – ಉಪಮೇಯರ್ ಸ್ಥಾನಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಸದ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿದ್ದು, ಒಪ್ಪಂದದ ಪ್ರಕಾರ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಮೇಯರ್ ಸ್ಥಾನ ಸಿಗುತ್ತಿದೆ. ಹೀಗಾಗಿ, ಜೆಡಿಎಸ್‍ನಲ್ಲಿ ಬಿರುಸಿನ ರಾಜಕೀಯ ಶುರುವಾಗಿದೆ. ಆದರೆ ಆರಂಭದಲ್ಲೆ ನನಗೂ ಇದಕ್ಕೂ ಸಂಬಂಧ ಇಲ್ಲ. ಪಕ್ಷ ಹೇಳಿದವರಿಗೆ ನಾನು ನನ್ನ ಮತ ಹಾಕಿ ಬರುತ್ತೇನೆ ಅಷ್ಟೇ ಎಂದು ಜಿಟಿಡಿ ಹೇಳಿದ್ದು, ಈ ಹೇಳಿಕೆ ಜಿಟಿಡಿ, ಬೆಂಬಲಿಗ ಪಾಲಿಕೆ ಸದಸ್ಯರಲ್ಲಿ ಆತಂಕ ಸೃಷ್ಟಿಸಿದೆ.

    ಮೈಸೂರಿನಲ್ಲಿ ಸಾರಾ ಮಹೇಶ್ ಅವರು ಏನು ಹೇಳುತ್ತಾರೋ, ಕುಮಾರಸ್ವಾಮಿ ಅವರು ಅದನ್ನೇ ಮಾಡಿಕೊಂಡು ಬರುತ್ತಿದ್ದಾರೆ. ನಾನು ಉಸ್ತುವಾರಿ ಸಚಿವನಾಗಿರಲಿ, ಮತದಾರನಾಗಿರಲಿ, ಯಾವತ್ತೂ ಅವರು ನನ್ನನ್ನು ಮೇಯರ್ ಚುನಾವಣೆಯಲ್ಲಿ ಪರಿಗಣಿಸಿಲ್ಲ. ಹಾಗಾಗಿ ಈಗಲೂ ಅವರೇ ಚುನಾವಣೆ ಮಾಡಲಿ. ಪಕ್ಷ, ಹೈಕಮಾಂಡ್ ಯಾರನ್ನು ಅಭ್ಯರ್ಥಿ ಮಾಡುತ್ತೋ. ಅವರಿಗೆ ವೋಟ್ ಹಾಕೋದಷ್ಟೇ ನನ್ನ ಕೆಲಸ ಎಂದಿದ್ದಾರೆ.

    ಮೇಯರ್ ಚುನಾವಣೆ ನನ್ನ ಕ್ಷೇತ್ರದ ವ್ಯಾಪ್ತಿಗೂ ಬರುತ್ತೆ ಹೀಗಾಗಿ ನಾನು ಕೂಡ ಸದಸ್ಯನಾಗಿ ಇದ್ದೇನೆ ಅಷ್ಟೇ. ಇದನ್ನು ಮೀರಿ ಅಭ್ಯರ್ಥಿ ಆಯ್ಕೆ ರಾಜಕೀಯ ನನಗೆ ಸಂಬಂಧ ಪಟ್ಟಿಲ್ಲ ಎಂದು ಮೈಸೂರಿನಲ್ಲಿ ಜಿಟಿಡಿ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಮೇಯರ್ ಚುನಾವಣೆಯಲ್ಲಿ ಜಿಟಿಡಿ ಅವರು ತಟಸ್ಥ ನಿಲುವು ಎಂಬುವುದು ಸ್ಪಷ್ಟವಾಗಿದೆ.

  • ಪಟ್ಟು ಬಿಡದೆ ಪವರ್ ತೋರಿದ ಸಿದ್ದರಾಮಯ್ಯ – `ಕೈ’ ಅಭ್ಯರ್ಥಿಗೆ ಒಲಿದ ಮೇಯರ್ ಪಟ್ಟ

    ಪಟ್ಟು ಬಿಡದೆ ಪವರ್ ತೋರಿದ ಸಿದ್ದರಾಮಯ್ಯ – `ಕೈ’ ಅಭ್ಯರ್ಥಿಗೆ ಒಲಿದ ಮೇಯರ್ ಪಟ್ಟ

    ಮೈಸೂರು: ಮಹಾನಗರ ಪಾಲಿಕೆ ಮೇಯರ್ ಪಟ್ಟಕ್ಕೆ ನಡೆದ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪಟ್ಟು ಬಿಡದೆ ಕಾಂಗ್ರೆಸ್ ಅಭ್ಯರ್ಥಿಗೆ ಮೇಯರ್ ಪಟ್ಟ ಲಭಿಸುವಂತೆ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಪುಷ್ಪಲತಾ ಜಗನ್ನಾಥ್ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

    ಇಂದು ನಡೆದ ಚುನಾವಣೆಯಲ್ಲಿ ಪುಷ್ಪಲತಾ ಜಗನ್ನಾಥ್ ಅವರಿಗೆ 48 ಮತಗಳು ಲಭಿಸಿದ್ದು, ಈ ಮೂಲಕ 21 ನೇ ಅವಧಿಗೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಚುನಾವಣೆಯಲ್ಲಿ ಎದುರಾಳಿ ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರಾ ಅವರು 24 ಮತಗಳನ್ನು ಪಡೆದರು. ಪಾಲಿಕೆಯ ನೂತನ ಉಪ ಮೇಯರ್ ಆಗಿ ಜೆಡಿಎಸ್ ಅಭ್ಯರ್ಥಿ ಶಫಿ ಅಹಮದ್ ಆಯ್ಕೆಯಾದರು. ಇತ್ತ ತಮ್ಮ ಗೆಲುವು ಖಚಿತವಾಗುತ್ತಿದಂತೆ ಮೇಯರ್ ಪುಷ್ಪಲತಾ ಅವರು ಕೌನ್ಸಿಲ್ ಸಭಾಂಗದಲ್ಲಿ ಎಲ್ಲಾ ಸದಸ್ಯರ ಬಳಿಗೆ ಹೋಗಿ ಕೈ ಮುಗಿದು ಧನ್ಯವಾದ ಅರ್ಪಿಸಿದರು.

    ಈ ಚುನಾವಣೆಯ ಗೆಲುವು ಪುಷ್ಪಲತಾ ಅವರ ಗೆಲುವಾದರು ಇದರ ಹಿಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ತಂತ್ರ ಫಲನೀಡಿದೆ ಎಂದು ಹೇಳಬಹುದು. ಇದರೊಂದಿಗೆ ಮೈತ್ರಿ ಸರ್ಕಾರದಲ್ಲಿ ಮೈತ್ರಿ ಕೂಟದ ಅಭ್ಯರ್ಥಿಗೆ ಜಯಭೇರಿ ಆಗಿದ್ದು, ತಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ ಎಂಬ ಸೂಚನೆ ನೀಡಲು ನಾಯಕರು ಯಶಸ್ವಿಯಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಇಂದು ಮೈಸೂರು ಮೇಯರ್-ಉಪಮೇಯರ್ ಚುನಾವಣೆ: ಕಾಂಗ್ರೆಸ್‍ಗೆ ಕುರ್ಚಿ ಸಾಧ್ಯತೆ

    ಇಂದು ಮೈಸೂರು ಮೇಯರ್-ಉಪಮೇಯರ್ ಚುನಾವಣೆ: ಕಾಂಗ್ರೆಸ್‍ಗೆ ಕುರ್ಚಿ ಸಾಧ್ಯತೆ

    ಮೈಸೂರು: ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

    ಈ ನಡುವೆ ಮೇಯರ್ ಸ್ಥಾನ ನಮಗೆ ಬೇಕು, ನಮಗೆ ಬೇಕು ಅಂತ ದೋಸ್ತಿ ಪಕ್ಷಗಳೇ ಕಿತ್ತಾಡಿಕೊಂಡಿವೆ. ಸಚಿವ ಸಾ.ರಾ.ಮಹೇಶ್ ಮೇಯರ್ ಸ್ಥಾನ ನಮಗೆ ಬೇಕು, ಮೇಯರ್ ಸಿಗದಿದ್ದರೆ ನಾವು ಮುಂದಿನ ನಿರ್ಧಾರ ಮಾಡಬೇಕಾಗುತ್ತೆ ಎಂದು ಪರೋಕ್ಷವಾಗಿ ಬಿಜೆಪಿ ಜೊತೆ ಹೋಗುವ ಸುಳಿವು ನೀಡಿದ್ರು.

    ಸಾ.ರಾ.ಮಹೇಶ್ ಹೇಳಿಕೆ ನೀಡುತ್ತಿದ್ದಂತೆಯೇ ಅವರ ಕಚೇರಿಗೆ ಬಂದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಏನಪ್ಪ ಹೀಗಂತೀಯ ಅಂತ ಒಂದು ಗಂಟೆಗೂ ಹೆಚ್ಚು ಕಾಲ ಸಾರಾ ಜೊತೆ ಮಾತುಕತೆ ನಡೆಸಿದ್ರು. ಲೋಕಲ್ ಅಖಾಡಕ್ಕೆ ಇಳಿದ ಸಿದ್ದರಾಮಯ್ಯ ಸಹ ಮೇಯರ್ ಸ್ಥಾನ ನಮಗೇ ಬೇಕು ಎಂದು ಪಟ್ಟಿ ಹಿಡಿದಿದ್ದರು. ಹೀಗಾಗಿ ಮೈಸೂರು ನಿವಾಸದಿಂದಲೇ ಎಚ್.ಡಿ. ದೇವೇಗೌಡರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಮನವಿ ಮಾಡಿದ್ರು. ದೇವೇಗೌಡರು ಸಹ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಇದೀಗ ಮೇಯರ್ ಸ್ಥಾನ ಕಾಂಗ್ರೆಸ್‍ಗೆ ಪಕ್ಕಾ ಆಗಿದೆ.

    ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಒಮ್ಮೆ ನೋವಾಗಿದೆ. ಮೈತ್ರಿ ವೇಳೆ ಇದ್ದಕಿದ್ದಂತೆ ನಾಮಪತ್ರ ಸಲ್ಲಿಸಿ ತೊಂದರೆ ಕೊಟ್ಟಿದ್ದರು. ಅದಕ್ಕಾಗಿ ಈ ಬಾರಿ ಮೊದಲಿಗೆ ಜೆಡಿಎಸ್‍ಗೆ ಮೇಯರ್ ಸ್ಥಾನ ಬೇಕು ಎಂದು ಕೇಳಿದ್ದೇವೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಹೆಚ್ಚು ಮತ ಇರುವವರಿಗೇ ಮೇಯರ್ ಸ್ಥಾನ ಎಂದು ಹೇಳಿದ್ದಾರೆ. ಸದ್ಯ ಮೇಯರ್ ಆಯ್ಕೆ ಮಾಡುವ ಮತದಾರರ ಸಂಖ್ಯೆ ಜೆಡಿಎಸ್‍ನಲ್ಲಿ ಹೆಚ್ಚಿದೆ. ನಾವು ಈಗಾಗಲೇ ಬಿಬಿಎಂಪಿಯಲ್ಲೂ ಕಾಂಗ್ರೆಸ್ಸಿಗೆ ಅಧಿಕಾರ ಬಿಟ್ಟುಕೊಟ್ಟಿದ್ದೇವೆ. ಈಗ ನಮಗೆ ಅಧಿಕಾರ ಕೇಳುತ್ತಿದ್ದೇವೆ. ಬಿಜೆಪಿ ನಾಯಕರು ಈಗಾಗಲೇ ಜೆಡಿಎಸ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಕಾಂಗ್ರೆಸ್ಸಿಗೆ ಸಚಿವ ಸಾ.ರಾ.ಮಹೇಶ್ ನೇರವಾಗಿ ಟಾಂಗ್ ಕೊಟ್ಟಿದ್ದರು.

    ಜೆಡಿಎಸ್ ಸದಸ್ಯರು ಈಗಾಗಲೇ ರೆಸಾರ್ಟ್‍ಗೆ ತೆರಳಿದ್ದು, ನಮ್ಮ ಸದಸ್ಯರು ಕಾಂಗ್ರೆಸ್ಸಿನಂತೆ ಹೆದರಿಕೊಂಡು ರೆಸಾರ್ಟ್ ಗೆ ಹೋಗಿಲ್ಲ. ಎಲ್ಲರೂ ಕೂತು ಸಮಾಲೋಚನೆ ನಡೆಸಲು ನಾವೇ ಕಳುಹಿಸಿಕೊಟ್ಟಿದ್ದೇವೆ. ಶಾಸಕ ತನ್ವೀರ್ ಸೇಠ್ ಈಗಾಗಲೇ ಬಂದು ಭೇಟಿಯಾಗಿ ಹೋಗಿದ್ದಾರೆ. ಮಾತುಕತೆ ನಡೆಸಿ ಮತ್ತೊಮ್ಮೆ ಬರುವುದಾಗಿ ತಿಳಿಸಿದ್ದಾರೆ ಎಂದು ಸಚಿವ ಸಾ.ರಾ.ಮಹೇಶ್ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ಸುಳಿವು ಕೊಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews