Tag: ಮೈಸೂರು ಪಾಲಿಕೆ

  • ಮೈಸೂರು ಮೇಯರ್‌ ಚುನಾವಣೆ – ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆದ ಹೆಚ್‍ಡಿಡಿ

    ಮೈಸೂರು ಮೇಯರ್‌ ಚುನಾವಣೆ – ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆದ ಹೆಚ್‍ಡಿಡಿ

    – ಮೇಯರ್ ಚುನಾವಣೆಯಲ್ಲಿ ಬಿಗ್ ಟ್ವಿಸ್ಟ್
    – ಜೆಡಿಎಸ್ ಕೇಳದಿದ್ರೂ ಕಾಂಗ್ರೆಸ್ ಬೆಂಬಲ
    – ಗದ್ದುಗೆ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಶಾಕ್

    ಬೆಂಗಳೂರು/ಮೈಸೂರು: ರಾಜಕೀಯ ಚದುರಂಗದಾಟದಲ್ಲಿ ಯಾವಾಗ ಯಾರು ಯಾವ ಪಾನ್ ಮೂವ್ ಮಾಡಿ, ಯಾರನ್ನು ಕಟ್ಟಿ ಹಾಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೊನೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಇಂದು ಮೈಸೂರಿನಲ್ಲಿ ನಡೆದ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಯೇ ಸಾಕ್ಷಿ.

    ಕ್ಷಣ ಕ್ಷಣಕ್ಕೂ ಟ್ವಿಸ್ಟ್‌ಗಳನ್ನು ಪಡೆದುಕೊಂಡ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮತದಾನ ನಡೆಯುವಾಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಬಿಜೆಪಿಗೆ ಬಿಗ್ ಶಾಕ್ ನೀಡಿವೆ.

    ಮೇಯರ್ ಆಗಿ ಜೆಡಿಎಸ್‍ನ ರುಕ್ಮಿಣಿ ಮಾದೇಗೌಡ, ಉಪಮೇಯರ್ ಆಗಿ ಕಾಂಗ್ರೆಸ್‍ನ ಅನ್ವರ್ ಬೇಗ್ ಆಯ್ಕೆ ಆಗಿದ್ದಾರೆ. ಬೆಳಗ್ಗೆಯಿಂದಲೂ ಬಿಜೆಪಿಗೆ ಜೆಡಿಎಸ್ ಬೆಂಬಲಿಸಬಹುದು, ಮೇಯರ್ ಸ್ಥಾನ ಬಿಜೆಪಿ ಪಾಲಾಗಬಹುದು, ಉಪಮೇಯರ್ ಸ್ಥಾನ ಜೆಡಿಎಸ್ ತೆಗೆದುಕೊಳ್ಳಬಹುದು ಎಂಬ ವಾತಾವರಣ ಇತ್ತು. ಮಾಜಿ ಸಿಎಂ ಕುಮಾರಸ್ವಾಮಿ ನಡೆಯೂ ಇದಕ್ಕೆ ಇಂಬು ನೀಡುವಂತೆ ಇತ್ತು.

    ತಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಕಣಕ್ಕಿಳಿಯುತ್ತೇವೆ ಎನ್ನುತ್ತಲೇ, ಕಾಂಗ್ರೆಸ್ ಸಹವಾಸ ಬೇಡ ಎಂದು ಕುಮಾರಸ್ವಾಮಿ ಗರಂ ಆಗಿ ಹೇಳಿದ್ದರು. ಈ ಹೇಳಿಕೆಯಿಂದ ಕುಮಾರಸ್ವಾಮಿ ಬಿಜೆಪಿಯನ್ನು ಬೆಂಬಲಿಸಬಹುದು ಎನ್ನಲಾಗಿತ್ತು.

    ಮೂರು ಪಕ್ಷಗಳು ಸಹ ಮೇಯರ್, ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಇತ್ತ ಕೊನೆ ಕ್ಷಣದವರೆಗೂ ಮೇಯರ್‌ ಗಿರಿಗೆ ಪ್ರಯತ್ನಿಸಿದ್ದ ಕಾಂಗ್ರೆಸ್, ಇದು ಸಾಧ್ಯವಿಲ್ಲ ಎಂದು ಅರಿತೊಡನೆ ತನ್ನ ಕಾರ್ಯತಂತ್ರವನ್ನು ಏಕಾಏಕಿ ಬದಲು ಮಾಡಿತು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಜೆಡಿಎಸ್ ಬೆಂಬಲ ಕೇಳದೇ ಇದ್ದರೂ ಆ ಪಕ್ಷದ ಮೇಯರ್ ಅಭ್ಯರ್ಥಿಗೆ ಕಾಂಗ್ರೆಸ್ ತನ್ನೆಲ್ಲಾ ಮತಗಳನ್ನು ಹಾಕಿತು.

    ಅದರಲ್ಲೂ ಅಚ್ಚರಿ ಏನೆಂದರೆ ಕಾಂಗ್ರೆಸ್, ತನ್ನ ಅಭ್ಯರ್ಥಿಗೆ ಮತ ಹಾಕಲಿಲ್ಲ. ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಕೂಡ ಜೆಡಿಎಸ್‍ಗೆ ವೋಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಸದಸ್ಯರು, ಕಾಂಗ್ರೆಸ್‍ನ ಉಪಮೇಯರ್ ಅಭ್ಯರ್ಥಿ ಅನ್ವರ್ ಬೇಗ್‍ಗೆ ಮತ ಹಾಕಿದರು. ಈ ರೀತಿ ಚುನಾವಣೆ ನಡೆಯುತ್ತದೆ ಎಂದು ಬಿಜೆಪಿ ಊಹಿಸಿಯೇ ಇರಲಿಲ್ಲ. ಮೇಯರ್, ಉಪಮೇಯರ್ ಇಬ್ಬರಿಗೂ ತಲಾ 43 ಮತಗಳು ಬಿದ್ದವು. ಬಿಜೆಪಿ ಮೇಯರ್ ಅಭ್ಯರ್ಥಿಗೆ ಸುನಂದಾಗೆ 26 ಮತಗಳಷ್ಟೇ ಬಿತ್ತು.

    ಎಚ್‌ಡಿಡಿ ತಂತ್ರಗಾರಿಕೆ:
    ಒಂದು ಕಡೆ ಜೆಡಿಎಸ್ ಸದಸ್ಯರನ್ನು ಸೆಳೆಯಲು ಸಿದ್ದರಾಮಯ್ಯ ವಿಫಲರಾದರು ಎಂಬ ಮಾತುಗಳು ಕೇಳಿ ಬರುತ್ತಿದ್ದರೆ ಇನ್ನೊಂದು ಕಡೆ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಕೆಪಿಸಿಸಿ ಅಧ್ಯಕ್ಷ ಒಳ ಒಪ್ಪಂದ ಮಾಡಿಕೊಂಡು ಸಿದ್ದರಾಮಯ್ಯಗೆ ಬಿಗ್ ಶಾಕ್ ಕೊಟ್ಟಿದ್ದಾರೆ ಎಂಬ ಸುದ್ದಿಯೂ ರಾಜಕೀಯ ವಲಯದಿಂದ ಬರುತ್ತಿದೆ.

    ನಿನ್ನೆ ರಾತ್ರಿಯಿಂದಲೇ ದೇವೇಗೌಡರ ಜೊತೆಗೆ ಡಿ.ಕೆ. ಶಿವಕುಮಾರ್ ಸಂಪರ್ಕ ಹೊಂದಿದ್ದರೆಂದು ಹೇಳಲಾಗುತ್ತಿದೆ. ಮೈಸೂರಿನಲ್ಲೇ ಬೀಡು ಬಿಟ್ಟಿದ್ದ ಕುಮಾರಸ್ವಾಮಿ, ಬಿಜೆಪಿಗೆ ಬೆಂಬಲ ಕೊಡಲು ಮುಕ್ತ ಮನಸ್ಸು ಮಾಡಿದ್ದರು ಎನ್ನಲಾಗಿತ್ತು. ಆದರೆ ಇವತ್ತು ಬೆಳ್ಳಂಬೆಳಗ್ಗೆ ಕುಮಾರಸ್ವಾಮಿಗೆ ದೇವೇಗೌಡರು ಸಂದೇಶವೊಂದನ್ನು ರವಾನಿಸಿದ್ದರು. ಅದರನ್ವಯ ಎರಡು ಪಕ್ಷಗಳಿಂದ ಅಂತರ ಕಾಯ್ದುಕೊಂಡು, ಅಭ್ಯರ್ಥಿ ಕಣಕ್ಕಿಳಿಸಿ ಅಂತಿಮವಾಗಿ ಕಾಂಗ್ರೆಸ್ ಬೆಂಬಲ ಪಡೆದುಕೊಂಡರು. ದೇವೇಗೌಡರ ಈ ತಂತ್ರಗಾರಿಕೆಯಿಂದ ಇವತ್ತು ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಬೀಗಿದೆ.

    ಈ ತಂತ್ರಗಾರಿಕೆಯಿಂದ ಮೇಯರ್ ಸ್ಥಾನವೂ ಸಿಕ್ಕಿತು. ಜಾತ್ಯಾತೀತ ಪಟ್ಟವೂ ಉಳಿಯಿತು. ಸಿದ್ದರಾಮಯ್ಯಗೆ ಪಾಠವೂ ಕಲಿಸಿದಂತಾಯ್ತು. ಈ ಮೂಲಕ ಒಂದೇ ಕಲ್ಲಿಗೆ ಮೂರು ಹಕ್ಕಿಗಳನ್ನು ಎಚ್‌ಡಿಡಿ ಹೊಡೆದಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ.

    ಬಿಜೆಪಿ ಜೊತೆ ಹೋದ್ರೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಹೊಡೆತ ಬೀಳುವ ಸಾಧ್ಯತೆಯಿತ್ತು. ಹೀಗಾಗಿ ಬಿಜೆಪಿ ಬೆಂಬಲಿಸಲು ಮುಂದಾಗಿದ್ದ ಹೆಚ್‍ಡಿಕೆಗೆ ಹೆಚ್‍ಡಿಡಿ ಬ್ರೇಕ್ ಹಾಕಿದ್ದಾರೆ. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಬೆಂಬಲ ಪಡೆಯಲು ಹೆಚ್‍ಡಿಡಿ ಗ್ರೀನ್ ಸಿಗ್ನಲ್ ನೀಡಿದ್ದರು.

    ಪಟ್ಟ ಸಾಧಿಸಿದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ವಿರುದ್ಧ ಹಠ ಸಾಧಿಸಿದ ತೃಪ್ತಿ ಸಿಕ್ಕಿದೆ. ಆದರೆ ಪರಸ್ಪರ ತೊಡೆತಟ್ಟಿದ್ದರೂ ಸಿದ್ದು-ಹೆಚ್‍ಡಿಕೆಗೆ ಅವಕಾಶವಾದಿಗಳು ಎಂಬ ಹಣೆಪಟ್ಟಿ ಬಂದಿದೆ. ಮೈಸೂರು ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟದಿಂದ ಕಮಲಕ್ಕೆ ಮೇಯರ್‌ ಪಟ್ಟ ತಪ್ಪಿದರೂ ಭವಿಷ್ಯದಲ್ಲಿ ಇದನ್ನೇ ಪಕ್ಷದ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ.

  • ಬಹುಮತ ಇಲ್ಲದಿದ್ರೂ ಜೆಡಿಎಸ್‍ಗೆ ಮೈಸೂರು ಪಾಲಿಕೆಯ ಗದ್ದುಗೆ

    ಬಹುಮತ ಇಲ್ಲದಿದ್ರೂ ಜೆಡಿಎಸ್‍ಗೆ ಮೈಸೂರು ಪಾಲಿಕೆಯ ಗದ್ದುಗೆ

    – ಬಿಜೆಪಿಗೆ ಅಚ್ಚರಿಯ ಆಘಾತ ನೀಡಿದ ಕಾಂಗ್ರೆಸ್
    – ಅಂತರ ಕಾಯ್ದುಕೊಂಡಿದ್ದ ಜೆಡಿಎಸ್

    ಮೈಸೂರು: ಇಂದು ಬೆಳಗ್ಗೆಯಿಂದಲೂ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದ ಮೈಸೂರು ಮೇಯರ್ ಚುನಾವಣೆ ಅಚ್ಚರಿಯೊಂದಿಗೆ ಅಂತ್ಯವಾಗಿದೆ. ಜೆಡಿಎಸ್ ಗೆ ಮೇಯರ್ ಪಟ್ಟ ಒಲಿದಿದ್ದು, ಕಾಂಗ್ರೆಸ್ ದಳದ ಅಭ್ಯರ್ಥಿಗೆ ಬೆಂಬಲ ನೀಡಿತು. ಹಾಗಾಗಿ ಜೆಡಿಎಸ್ ರುಕ್ಮಿಣಿ ಮಾದೇಗೌಡ ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

    ಮೇಯರ್ ಚುನಾವಣೆ ಹಿನ್ನೆಲೆ ಮಾಜಿ ಸಿಎಂ ಕುಮಾರಸ್ವಾಮಿ ಮೈಸೂರಿನಲ್ಲಿಯೇ ಉಳಿದುಕೊಂಡಿದ್ದರು. ಮಂಗಳವಾರ ಸಂಜೆ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರನ್ನ ಭೇಟಿಯಾಗಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಇತ್ತ ಕಾಂಗ್ರೆಸ್ ಮಾಜಿ ಶಾಸಕ ತನ್ವೀರ್ ಸೇಠ್ ಹಳೆ ಮೈತ್ರಿಯನ್ನ ಮುಂದುವರಿಸುವಂತೆ ಹೇಳಿದ್ದರು. ಆದ್ರೆ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಮೈತ್ರಿಗೆ ಮುಂದಾದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನ ಸಂಪರ್ಕಿಸಿ ಬೆಂಬಲ ಕೇಳಿದ್ದರು ಎನ್ನಲಾಗಿದೆ.

    ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ್ರೆ ಕೇರಳ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವಂತೆ ದೇವೇಗೌಡರು ಸಂದೇಶ ರವಾನಿಸಿದ್ದರು. ಹಾಗಾಗಿ ಜೆಡಿಎಸ್ ಮ್ಯಾಜಿಕ್ ನಂಬರ್ ಇಲ್ಲದಿದ್ದರೂ ರುಕ್ಮಿಣಿ ಮಾದೇಗೌಡರನ್ನ ಕಣಕ್ಕಿಳಿಸಿತ್ತು ಎಂದು ತಿಳಿದು ಬಂದಿದೆ.

    ಇತ್ತ ಕಾಂಗ್ರೆಸ್, ಬಿಜೆಪಿ ಸಹ ಅಭ್ಯರ್ಥಿಗಳು ಸಹ ನಾಮಪತ್ರ ಸಲ್ಲಿಕೆ ಮಾಡಿದ್ದರು. ಹೆಚ್ಚು ಮತಗಳಿದ್ದ ಹಿನ್ನೆಲೆ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಸಿದ್ಧತೆ ಮಾಡಿಕೊಂಡಿತ್ತು. ಜೆಡಿಎಸ್ ಬೆಂಬಲ ಕೇಳದಿದ್ದರೂ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ರುಕ್ಮಿಣಿ ಮಾದೇಗೌಡರಿಗೆ ಬೆಂಬಲ ಸೂಚಿಸುವ ಮೂಲಕ ಬಿಜೆಪಿಗೆ ಅಚ್ಚರಿಗೆ ಆಘಾತ ನೀಡಿತು.

  • ಇಂದು ಮೈಸೂರು ಪಾಲಿಕೆ ಮೇಯರ್ ಎಲೆಕ್ಷನ್ – ಜೆಡಿಎಸ್ ನಿಲುವು ಸಸ್ಪೆನ್ಸ್

    ಇಂದು ಮೈಸೂರು ಪಾಲಿಕೆ ಮೇಯರ್ ಎಲೆಕ್ಷನ್ – ಜೆಡಿಎಸ್ ನಿಲುವು ಸಸ್ಪೆನ್ಸ್

    ಮೈಸೂರು: ಇಂದು ಮೈಸೂರು ಮಹಾ ನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ನಡೆಯಲಿದ್ದು, ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಕಾರಣ ಚುನಾವಣೆ ಕೂತುಹಲ ಮೂಡಿಸಿದೆ. ಪಾಲಿಕೆ ಸದಸ್ಯರು ಮತ್ತು ಶಾಸಕರು, ಸಂಸದರ ಸೇರಿ ಒಟ್ಟು 73 ಮತಗಳ ಪಾಲಿಕೆಯಲ್ಲಿ ಗದ್ದುಗೆ ಹಿಡಿಯಲು 38 ಮತಗಳು ಬೇಕು. ಆದರೆ ಪಾಲಿಕೆಯಲ್ಲಿ ಜೆಡಿಎಸ್ 22 ಮತ, ಕಾಂಗ್ರೆಸ್ 20 ಮತ ಹಾಗೂ ಬಿಜೆಪಿ 25 ಮತ, ಬಿಎಸ್‍ಪಿ 1 ಮತ ಹಾಗೂ ಪಕ್ಷೇತರ 5 ಮತ ಹೊಂದಿವೆ. ಹೀಗಾಗಿ ಮೈತ್ರಿ ಅನಿವಾರ್ಯ.

    ಕಳೆದ ಎರಡು ವರ್ಷದಿಂದ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಇತ್ತು. ಆದರೆ ಈ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರಿಸಲು ಜೆಡಿಎಸ್ ಒಪ್ಪುತ್ತಿಲ್ಲ. ಹೀಗಾಗಿ ಇವತ್ತಿನ ಚುನಾವಣೆ ಕೂತುಹಲ ಮೂಡಿಸಿದೆ. ಖುದ್ದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೈಸೂರಿಗೆ ಆಗಮಿಸಿ ಚುನಾವಣೆ ನಡೆಸುತ್ತಿದ್ದಾರೆ. ಮೈಸೂರಿನ ಹೊರ ವಲಯದ ರೆಸಾರ್ಟ್ ನಲ್ಲಿ ತಮ್ಮ ಪಕ್ಷದ ಸದಸ್ಯರ ಜೊತೆ ಸಭೆಯ ಮೇಲೆ ಸಭೆ ನಡೆಸಿದ್ದಾರೆ. ಈ ನಡುವೆ ಕಾಂಗ್ರೆಸ್ ಪರವಾಗಿ ಮಾಜಿ ಸಚಿವ ತನ್ವೀರ್ ಸೇಠ್ ದಳಪತಿಗಳ ಭೇಟಿ ಮಾಡಿ ಮೈತ್ರಿ ಮುಂದುವರಿಸಿ ಎಂದು ಕೇಳಿದ್ದಾರೆ.

    ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಮೇಯರ್ ಮಾಡುವಂತೆ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಜೆಡಿಎಸ್ ಮಾತ್ರ ತನ್ನ ನಿಲುವು ಸ್ಪಷ್ಟಪಡಿಸಿಲ್ಲ.

    ಒಟ್ಟು ಪಾಲಿಕೆಯ ಮತಗಳು-73
    ಪಾಲಿಕೆ ಗದ್ದುಗೆ ಹಿಡಿಯಲು ಬೇಕಾಗುವ ಮತಗಳು-38
    ಜೆಡಿಎಸ್-22 ಮತ
    ಕಾಂಗ್ರೆಸ್-20 ಮತ
    ಬಿಜೆಪಿ- 25 ಮತ
    ಬಿಎಸ್‍ಪಿ -1 ಮತ
    ಪಕ್ಷೇತರ-5 ಮತ

  • ಮೈಸೂರು ಪಾಲಿಕೆಯ ಮೂರು ಪಕ್ಷದಲ್ಲೂ ಗೊಂದಲ – ಯಾರ ಜೊತೆ ಯಾರು ಮೈತ್ರಿ?

    ಮೈಸೂರು ಪಾಲಿಕೆಯ ಮೂರು ಪಕ್ಷದಲ್ಲೂ ಗೊಂದಲ – ಯಾರ ಜೊತೆ ಯಾರು ಮೈತ್ರಿ?

    ಮೈಸೂರು : ಮಹಾನಗರ ಪಾಲಿಕೆ ಮೇಯರ್ ಗದ್ದುಗೆ ಹಿಡಿಯುವ ವಿಚಾರದಲ್ಲಿ ಮೂರು ರಾಜಕೀಯ ಪಕ್ಷಗಳು ಪೈಪೋಟಿಗೆ ಇಳಿದಿದ್ದು, ರಾಜಕೀಯ ಪಕ್ಷಗಳ ಮೈತ್ರಿ ಗೊಂದಲದಲ್ಲಿ ಮುಳುಗಿಹೋಗಿ ಮೈಸೂರಿನ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ.

    ಮೇಯರ್, ಉಪಮೇಯರ್ ಅವಧಿ ಮುಗಿದರೂ ಮೈತ್ರಿ ಬಗ್ಗೆ ಸ್ಪಷ್ಟತೆ ಇಲ್ಲ. ಮೂರು ಪಕ್ಷಗಳಲ್ಲಿ ಮೇಯರ್ ಪಟ್ಟಕ್ಕೆ ಜೋತು ಬಿದ್ದಿದ್ದು ಯಾರ ಜೊತೆ ಮೈತ್ರಿ ಮಾಡಿಕೊಳ್ಳಬೇಕೆಂಬ ಸ್ಪಷ್ಟತೆ ಯಾರಿಗೂ ಇಲ್ಲ.

    ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಗಳಲ್ಲಿ ಮೈತ್ರಿಯದ್ದೆ ಮಾತು ನಡೆಯುತ್ತಿದೆ. ಹಾಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯಲ್ಲಿರುವ ಪಾಲಿಕೆ ಆಡಳಿತವಿದೆ. ಹಳೆ ಮೈತ್ರಿ ಮುಂದುವರೆಸಿ ನಮಗೆ ಮೇಯರ್‌ ಸ್ಥಾನ ನೀಡಿ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಮೇಯರ್ ಸ್ಥಾನ ನಮಗೆ ಬೇಕು ಹಾಗಾಗಿ ನಾವು ಮೈತ್ರಿ ಮುರಿದುಕೊಳ್ಳುತ್ತೇನೆ ಎಂದು ಜೆಡಿಎಸ್‌ ಹೇಳುತ್ತಿದೆ.

    ಮೇಯರ್ ಸ್ಥಾನ ನಮಗೆ ನೀಡಿದರೆ ನಿಮ್ಮ ಜೊತೆ ಮೈತ್ರಿ  ಮಾಡುತ್ತೇವೆ ಎಂದು ಬಿಜೆಪಿ ಜೆಡಿಎಸ್‌ಗೆ ಸಂದೇಶ ರವಾನಿಸಿದೆ. ಮೇಯರ್, ಉಪಮೇಯರ್ ಅವಧಿ ಮುಗಿದು 10 ದಿನ ಕಳೆದರೂ ಇನ್ನು ಮೀಸಲಾತಿ ಪ್ರಕಟವಾಗಿಲ್ಲ. ಮೀಸಲಾತಿ ಪ್ರಕಟವಾಗದೆ ಚುನಾವಣೆ ದಿನಾಂಕವು ಪ್ರಕಟವಾಗುವುದಿಲ್ಲ.

    ಕಳೆದೊಂದು ವರ್ಷದಿಂದ ಕೋವಿಡ್‌ ಹಿನ್ನಲೆಯಲ್ಲಿ ಅಭಿವೃದ್ದಿಯಲ್ಲಿ ಕುಂಠಿತವಾಗಿತ್ತು. ಇದೀಗ ಮೈತ್ರಿ ವಿಚಾರವಾಗಿ ಮತ್ತೆ ಅಭಿವೃದ್ದಿಯಿಂದ ಮೈಸೂರು ವಂಚಿತವಾಗುತ್ತಿದೆ. ರಾಜ್ಯ ಬಜೆಟ್‌ನಲ್ಲಿ ವಿಶೇಷ ಅನುದಾನ ಕೇಳುವುದಕ್ಕೂ ಪಾಲಿಕೆಯ ಆಡಳಿತ ವ್ಯವಸ್ಥೆ ಇಲ್ಲ.

    65 ಸಂಖ್ಯಾಬಲದ ಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್‌ 19, ಜೆಡಿಎಸ್‌ 18, 5 ಇತರೇ ಒಬ್ಬರು ಬಿಎಸ್‌ಪಿ ಸದಸ್ಯರಿದ್ದಾರೆ.

  • ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಬಿರುಕು – ಪಾಲಿಕೆ, ಜಿಲ್ಲಾಡಳಿತ ಮೇಲೆ ನಿರ್ಲಕ್ಷ್ಯದ ಆರೋಪ

    ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಬಿರುಕು – ಪಾಲಿಕೆ, ಜಿಲ್ಲಾಡಳಿತ ಮೇಲೆ ನಿರ್ಲಕ್ಷ್ಯದ ಆರೋಪ

    ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಇರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಬಗ್ಗೆ ಮೈಸೂರು ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಸಾಕಷ್ಟು ದೂರು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ನಗರದ ಹೃದಯ ಭಾಗವಾದ ಕೆ.ಆರ್ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಇದೆ. ಅಮೃತ ಶಿಲೆಯಲ್ಲಿ ನಿರ್ಮಾಣವಾಗಿರುವ ಈ ಪ್ರತಿಮೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪಿನಾರ್ಥವಾಗಿ ಸರ್ ಎಂ. ವಿಶ್ವೇಶ್ವರಯ್ಯನವರು ಉದ್ಘಾಟಿಸಿದ್ದರು.

    ಆದರೆ ಈಗ ಪ್ರತಿಮೆಯ ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಬಗ್ಗೆ ಪಾಲಿಕೆ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿವೆ. ಪ್ರತಿಮೆ ಸರಿಪಡಿಸುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇತ್ತ ಚಾಮುಂಡಿ ಬೆಟ್ಟದಲ್ಲಿನ ನಂದಿ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಕೆಲವರು ಆತಂಕ ಮತ್ತು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ನಂದಿ ವಿಗ್ರಹ ಪರಿಶೀಲನೆ ನಡೆಸಿದೆ.

    ಸುಮಾರು 400 ವರ್ಷಗಳ ಹಳೆಯದಾದ ನಂದಿ ವಿಗ್ರಹ ಇದ್ದಾಗಿದ್ದು, 1659-73ರಲ್ಲಿ ನಿರ್ಮಾಣಗೊಂಡಿದೆ ಎನ್ನುವ ಉಲ್ಲೇಖವಿದೆ. ಚಾಮುಂಡಿಬೆಟ್ಟದ ಪ್ರಮುಖ ಕೇಂದ್ರ ಬಿಂದು. ನಂದಿ ವಿಗ್ರಹದ ಕಾಲು, ಕುತ್ತಿಗೆ ಹಾಗೂ ಮುಖದ ಕೆಲವೆಡೆ ಬಿರುಕು ಕಾಣಿಸಿಕೊಂಡಿದೆ ಎಂದು ಭಕ್ತರು ಜಿಲ್ಲಾಡಳಿತಕ್ಕೆ ತಿಳಿಸಿದ್ದರು.

    ಕಪ್ಪಾಗಿದ್ದ ನಂದಿ ವಿಗ್ರಹವನ್ನ ಪಾಲಿಶ್ ಮಾಡಿ ಹೊಸ ರೂಪ ಕೊಡಲಾಗಿತ್ತು. ಆ ಸಂದರ್ಭದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಪತ್ತೆಯಾಗಿತ್ತು. ಹೀಗಾಗಿ ಜಿಲ್ಲಾಡಳಿತ ಪಾರಂಪರಿಕ ತಜ್ಞರ ಸಮಿತಿಯೊಂದನ್ನ ರಚಿಸಿ ವಿಗ್ರಹ ಪರಿಶೀಲನೆಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಶಿಲ್ಪಿ ತಂಡ ವಿಗ್ರಹ ಪರಿಶೀಲನೆ ನಡೆಸಿದೆ.

    ಕೆಲವು ಕಡೆ ಬಿರುಕಿನ ರೀತಿ ಮೇಲ್ನೋಟಕ್ಕೆ ಕಾಣುತ್ತಿರೋದು ಬಿರುಕಲ್ಲ ಅದು ಕಲ್ಲಿನ ನೈಜತೆ ಎಂದು ಸಮಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಸಮಿತಿಯು ವರದಿ ನೀಡಲಿದ್ದು, ವರದಿಯಲ್ಲಿ ಬಿರುಕು ಬಿಟ್ಟಿದೆ ಎಂದು ತಜ್ಞರು ಸ್ಪಷ್ಟಪಡಿಸಿದರೆ ನಂದಿ ವಿಗ್ರಹದ ಬಿರುಕು ಮುಚ್ಚಲು ಕೂಡ ಜಿಲ್ಲಾಡಳಿತ ಮುಂದಾಗಲಿದೆ.