Tag: ಮೈಸೂರು ದಸರಾ 2019

  • ವಜ್ರಮುಷ್ಠಿ ಕಾಳಗದ ಉದ್ದೇಶ ತಿಳಿಸಿದ ಜಟ್ಟಿ

    ವಜ್ರಮುಷ್ಠಿ ಕಾಳಗದ ಉದ್ದೇಶ ತಿಳಿಸಿದ ಜಟ್ಟಿ

    ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಡೆಯುವ ಖಾಸಗಿ ದಸರಾದಲ್ಲಿ ವಜ್ರಮುಷ್ಠಿ ಕಾಳಗಕ್ಕೆ ವಿಶೇಷವಾದ ಸ್ಥಾನಮಾನವಿದೆ. ಈ ಕಾಳಗ ನಡಯದೇ ವಿಜಯದಶಮಿ ಕಾರ್ಯಕ್ರಮ ಸಂಪನ್ನವಾಗಲ್ಲ ಅನ್ನೋ ಪ್ರತೀತಿ ಹಿಂದಿನಿಂದಲೂ ಇದೆ. ಮೈನವಿರೇಳಿಸುವಂತಹ ಸಮರ ಕಲೆಯಾದ ಈ ವಜ್ರಮುಷ್ಠಿ ಕಾಳಗವನ್ನು ರಾಜ ಮಹಾರಾಜರ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಈ ಕಾಳಗದ ಉದ್ದೇಶವನ್ನು ಜಟ್ಟಿಯೊಬ್ಬರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಜಟ್ಟಿ ಕಾಳಗದಲ್ಲಿ ಭಾಗವಹಿಸಲು ನಡೆಸಿದ ತಯಾರಿ ಬಗ್ಗೆ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ನಾರಾಯಣ ಜಟ್ಟಿ ಮಾತನಾಡಿ, ಆರು ತಿಂಗಳ ಮುಂಚೆ ಕಷ್ಣ ಜಟ್ಟಿಯವರು ತಯಾರಿ ನಡೆಸುವಂತೆ ಸೂಚನೆ ಕೊಡುತ್ತಾರೆ. ಹೀಗಾಗಿ ಊರಲ್ಲೇ ಫಿಟ್ನೆಸ್ ಗಾಗಿ ವ್ಯಾಯಾಮ, ಯೋಗ ಹಾಗೂ ಕರಾಟೆ, ಮಾರ್ಷಲ್ ಆರ್ಟ್ಸ್(Martial Arts) ತರಬೇತಿ ಪಡೆಯುತ್ತೇನೆ ಎಂದರು.

    20 ವರ್ಷದಿಂದ ಅಂದರೆ 1999 ನಿಂದ ಇಲ್ಲಿಯವರೆಗೂ ಜಟ್ಟಿ ಕಾಳಗದಲ್ಲಿ ಭಾಗವಹಿಸುತ್ತಿದ್ದೇನೆ. ಇಲ್ಲಿ ಸೋಲು-ಗೆಲುವೆಂಬುದಿಲ್ಲ. ಶಾಂತಿಗಾಗಿ ಇದರಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಒಟ್ಟಿನಲ್ಲಿ ಚಾಮುಂಡೇಶ್ವರಿ ತಾಯಿಗೆ ನಮ್ಮ ರಕ್ತ ಅರ್ಪಿಸುವ ಉದ್ದೇಶ ತಲಾತಲಾಂತರಗಳಿಂದ ಬೆಳೆದು ಬಂದಿದೆ ಎಂದು ಅವರು ತಿಳಿಸಿದರು.

    ಕುಲದೇವತೆಯ ಶಾಂತಿಗಾಗಿ ವಜ್ರಮುಷ್ಠಿ ಕಾಳಗವನ್ನು ಬೇರೆಲ್ಲೂ ಆಡದೇ ಅರಮನೆಯಲ್ಲಿ ಮಾತ್ರ ಆಡುತ್ತೇವೆ. ಇದರಿಂದಾಗುವ ಗಾಯ 2 ದಿನದಲ್ಲಿ ವಾಸಿಯಾಗುತ್ತದೆ. ದೊಡ್ಡ ಗಾಯವೇನೂ ಆಗಲ್ಲ. ಯಾಕೆಂದರೆ ದೇವಿಯ ವರ ಇದೆ ಅನಿಸುತ್ತದೆ. ಮರು ದಿನ ಟಿಂಚರ್ ಹಾಕಿದರೆ ಸರಿ ಹೋಗುತ್ತದೆ ಎಂದರು.

    ಈ ಮೊದಲು ತಂದೆ ಭಾಗವಹಿಸುತ್ತಿದ್ದರು. ಸದ್ಯ ನಾನು ಪಾಲ್ಗೊಳ್ಳುತ್ತಿದ್ದೇನೆ. ಮುಂದೆ ನನ್ನ ಮಕ್ಕಳು ಜಟ್ಟಿ ಕಾಳಗದಲ್ಲಿ ಭಾಗವಹಿಸಬಹುದು. ಅವಕಾಶ ಸಿಕ್ಕಿದಾಗ ಬಂದು ಕಾಳಗದಲ್ಲಿ ಪಾಲ್ಗೊಳ್ಳುತ್ತೇವೆ. ಯಾಕೆಂದರೆ ಹೊಸಬರು ಬಂದಾಗ ಅವರಿಗೆ ನಾವು ಬಿಟ್ಟುಕೊಡಬೇಕಾಗುತ್ತದೆ. ಹೀಗಾಗಿ 2, 3 ಅಥವಾ 5 ವರ್ಷಕ್ಕೊಮ್ಮೆ ಚಾನ್ಸ್ ಸಿಗುತ್ತದೆ.

    ಇದಕ್ಕೂ ಮೊದಲು ಚನ್ನಪಟ್ಟಣದ ನರಸಿಂಹ ಜಟ್ಟಿ ಮಾತನಾಡಿ, ಈ ಹಿಂದೆ 2010ರಲ್ಲಿ ಭಾಗವಹಿಸಿದ ಬಳಿಕ ಈ ಬಾರಿ ಭಾಗವಹಿಸಿರುವುದಾಗಿ ತಿಳಿಸಿದರು. 2010ರಲ್ಲಿ ಜಟ್ಟಿ ಕಾಳಗದಲ್ಲಿ ಗೆದ್ದಿದ್ದೇವೆ. ವಂಶಪಾರಂಪರಿಕವಾಗಿ ಜಟ್ಟಿ ಕಾಳಗದಲ್ಲಿ ಭಾಗವಹಿಸುತ್ತಿದ್ದೇವೆ. ಇನ್ನು ಮುಂದೆ ಜಟ್ಟಿ ಕಾಳಗದಲ್ಲಿ ನಮ್ಮ ಕಿರಿಯರು ಕೂಡ ಭಾಗವಹಿಸಬೇಕು ಎಂದು ತಿಳಿಸಿದರು.

    ಅರಮನೆ ಆವರಣದಲ್ಲಿರುವ ವರಹಸ್ವಾಮಿ ದೇವಸ್ಥಾನದ ಬಳಿ ಜಟ್ಟಿಗಳಿಗೆ ಕೆಮ್ಮಣ್ಣು ಹಾಗೂ ಕೈಗೆ ಬಟ್ಟೆಗಳನ್ನು ಕಟ್ಟುವ ಮೂಲಕ ಅಖಾಡಕ್ಕೆ ಇಳಿಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಚನ್ನಪಟ್ಟಣ, ಚಾಮರಾಜನಗ ಹಾಗೂ ಮೈಸೂರು ಹೀಗೆ ಒಟ್ಟು 4 ಜಟ್ಟಿಗಳು ಈ ಕಾಳಗದಲ್ಲಿ ಭಾಗವಹಿಸಿದ್ದಾರೆ.

  • ಅರ್ಜುನನಿಗೆ ಇನ್ನೂ 10 ವರ್ಷ ಅಂಬಾರಿ ಹೊರುವ ತಾಕತ್ತಿದೆ- ಮಾವುತ ವಿನು

    ಅರ್ಜುನನಿಗೆ ಇನ್ನೂ 10 ವರ್ಷ ಅಂಬಾರಿ ಹೊರುವ ತಾಕತ್ತಿದೆ- ಮಾವುತ ವಿನು

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. 9ನೇ ಬಾರಿ ಅಂಬಾರಿ ಹೊರಲು ಅರ್ಜುನ ಸಿದ್ಧನಾಗಿದ್ದಾನೆ. ಅಂಬಾರಿ ಹೊರೋಕೆ ಅರ್ಜುನ ಹೇಗೆ ಸಿದ್ಧವಾಗಿದ್ದಾನೆ ಎಂಬುದರ ಬಗ್ಗೆ ಮಾವುತ ವಿನು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ಅರ್ಜುನ ಈ ಬಾರಿ ಲಾಸ್ಟ್ ಅಂಬಾರಿ ಹೋರೋದು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅರ್ಜುನನಿಗೆ ಇನ್ನೂ 10 ವರ್ಷ ಅಂಬಾರಿ ಹೊರುವ ಶಕ್ತಿ ಇದೆ. ಅರ್ಜುನ ಸ್ವಲ್ಪ ತುಂಟ. ಆದರೆ ಇಲ್ಲಿಗೆ ಬಂದರೆ ತಾಯಿ ಆಶೀರ್ವಾದದಿಂದ ಆ ತುಂಟತನ ಇರಲ್ಲ ಎಂದು ಹೇಳಿದ್ದಾರೆ.

    ಅರ್ಜುನ ಗಾಂಭೀರ್ಯದಿಂದ ಅಂಬಾರಿ ಹೊರುತ್ತಾನೆ. ಆತ ಈ ಬಾರಿಯೂ ಅರಾಮವಾಗಿ ಅಂಬಾರಿ ಹೊರುತ್ತಾನೆ. ಅರ್ಜುನನ ಜೊತೆ ನಾನು ಕನ್ನಡದಲ್ಲಿ ಮಾತಾಡುವುದಾಗಿ ವಿನು ತಿಳಿಸಿದ್ದಾರೆ.

    ಅಂಬಾರಿ ಹೊರುವ ಅರ್ಜುನನಿಗೆ ಗಂಡುಭೇರುಂಡಾ, ಶಂಕ ಚಕ್ರ, ವಿವಿಧ ಚಿತ್ತಾರಗಳ ಕಲಾಕೃತಿ ಅರ್ಜುನನಿಗೆ ಬಿಡಿಸಲಾಗುತ್ತಿದೆ. ಒಟ್ಟಿನಲ್ಲಿ ಬಣ್ಣ ಬಣ್ಣದ ಚಿತ್ತಾರದಲ್ಲಿ ಅಂಬಾರಿ ಹೊರಲು ಅರ್ಜುನ ರೆಡಿಯಾಗಿದ್ದಾನೆ.

    ಜಂಬೂ ಸವಾರಿ ವೀಕ್ಷಿಸಲು ಈಗಾಗಲೇ ಅಂಬಾವಿಲಾಸ ಅರಮನೆ ಮುಂಭಾಗ 26 ಸಾವಿರ ಜನರಿಗೆ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಅಂಬಾರಿ ಸಾಗುವ ರಸ್ತೆಯ ಬದಿಲ್ಲೂ ಸಹ ಆಸನಗಳ ವ್ಯವಸ್ಥೆ ಇದೆ. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಭಾರೀ ಜನಸ್ತೋಮ ಅರಮನೆ ನಗರಿಯಲ್ಲಿದೆ.

    ಜಂಬೂ ಸವಾರಿಗೆ ಸಿದ್ಧತೆ ಆರಂಭವಾಗುವುದು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮಧ್ಯಾಹ್ನ 2.25ರಿಂದ 3 ಗಂಟೆಯ ನಡುವೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ಬಳಿಕ ಮೆರವಣಿಗೆ ಆರಂಭವಾಗುತ್ತದೆ. ಸಂಜೆ 4.30ರಿಂದ 5 ಗಂಟೆ ನಡುವೆ ಕುಂಭ ಲಗ್ನದಲ್ಲಿ ಅಂಬಾರಿಗೆ ಸಿಎಂ ಪುಷ್ಪಾರ್ಚನೆ ಮಾಡಲಿದ್ದಾರೆ. ಬಳಿಕ 7 ಗಂಟೆಗೆ ಅಂಬಾರಿ ಬನ್ನಿ ಮಂಟಪ ತಲುಪತ್ತದೆ. ರಾತ್ರಿ 7.30ಕ್ಕೆ ಬನ್ನಿ ಮಂಟಪದಲ್ಲಿ ಪಂಜಿನ ಕವಾಯತು ಆರಂಭವಾಗುತ್ತದೆ. ಇದಕ್ಕೆ ರಾಜ್ಯಪಾಲ ವಜೂಭಾಯ್ ವಾಲಾ ಚಾಲನೆ ನೀಡಲಿದ್ದಾರೆ. ರಾತ್ರಿ 10 ಗಂಟೆಗೆ ಪಟಾಕಿ ಸಿಡಿಸಿ ದಸರಕ್ಕೆ ಅಧಿಕೃತ ತೆರೆಬೀಳುತ್ತದೆ.

    https://www.youtube.com/watch?v=ZnmJAbUqvg0

     

  • ಮೈಸೂರಲ್ಲಿ ಜಂಬೂ ಸವಾರಿಗೆ ಕ್ಷಣಗಣನೆ- ಪಂಜಿನ ಕವಾಯತು ಮೂಲಕ ನಾಡಹಬ್ಬಕ್ಕೆ ತೆರೆ

    ಮೈಸೂರಲ್ಲಿ ಜಂಬೂ ಸವಾರಿಗೆ ಕ್ಷಣಗಣನೆ- ಪಂಜಿನ ಕವಾಯತು ಮೂಲಕ ನಾಡಹಬ್ಬಕ್ಕೆ ತೆರೆ

    ಮೈಸೂರು: ನವರಾತ್ರಿ ಹಬ್ಬದ ಸಂಭ್ರಮ ಮುಗಿದು ಇಂದು ವಿಜಯ ದಶಮಿ ಸಂಭ್ರಮ. ನಾಡಹಬ್ಬದ ಖುಷಿಯಲ್ಲಿ ಕಂಗೊಳಿಸುತ್ತಿರುವ ಅರಮನೆ ಮೈಸೂರಲ್ಲೂ ವಿಜಯ ದಶಮಿ ಹಬ್ಬದ ಸಂಭ್ರಮ ಜೋರಿದೆ.

    ಬೆಳಗ್ಗೆ 10 ಗಂಟೆಗೆ ಜಟ್ಟಿಕಾಳಗ ನಡೆಯಲಿದೆ. ಜಟ್ಟಿ ಕಾಳಗದಲ್ಲಿ ಜಟ್ಟಿಯ ಶಿರದಿಂದ ರಕ್ತ ಚಿಮ್ಮಿದ್ರೆ ಇಲ್ಲಿಂದ ಎಲ್ಲಾ ಕಾರ್ಯಕ್ರಮಕ್ಕೂ ಚಾಲನೆ ಸಿಕ್ಕಂತೆಯೇ. ಬಳಿಕ ಬೆಳ್ಳಿರಥದಲ್ಲಿ ಯದುವೀರ್ ಮೆರವಣಿಗೆ ನಡೆಯಲಿದ್ದು, 10 ಗಂಟೆಯಿಂದ 12 ಗಂಟೆಯೊಳಗೆ ಬನ್ನಿಮರಕ್ಕೆ ಯದುವೀರ್ ಪೂಜೆ ಸಲ್ಲಿಸಲಿದ್ದಾರೆ. ಇಲ್ಲಿ ಯದುವೀರ್ ಕಂಕಣ ತೆಗೆಯಲಿದ್ದಾರೆ.

    ನಂತರ ಎಲ್ಲರೂ ಕಾತುರದಿಂದ ಕಾಯ್ತಿರೋ ಜಂಬೂ ಸವಾರಿ ಆರಂಭವಾಗಲಿದೆ. ಜಂಬೂ ಸವಾರಿ ವೀಕ್ಷಿಸಲು ಅಂಬಾವಿಲಾಸ ಅರಮನೆ ಮುಂಭಾಗ 26 ಸಾವಿರ ಜನರಿಗೆ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಅಂಬಾರಿ ಸಾಗುವ ರಸ್ತೆಯ ಬದಿಯಲ್ಲೂ ಆಸನಗಳ ವ್ಯವಸ್ಥೆ ಇದೆ. ಪೊಲೀಸರು ಟೈಟ್ ಸೆಕ್ಯೂರಿಟಿ ಮಾಡಿದ್ದಾರೆ. ಭಾರೀ ಜನಸ್ತೋಮ ಅರಮನೆ ನಗರಿಯಲ್ಲಿದೆ.

    ಜಂಬೂ ಸವಾರಿಗೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸಿಎಂ ಯಡಿಯೂರಪ್ಪ ಅವರು ಮಧ್ಯಾಹ್ನ 2.30ರ ಸುಮಾರಿಗೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ನಂದಿ ಧ್ವಜಕ್ಕೆ 9 ದಿನಗಳಿಂದ ಪೂಜೆ ಮಾಡುವ ಮೂಲಕ ಇಂದಿನ ನಂದಿ ಧ್ವಜ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹುಡಿಗಾಲದ ಮಹದೇವಪ್ಪ ಹಾಗೂ ಅವರ ಕುಟಂಬದವರು ಹಲವು ವರ್ಷಗಳಿಂದ ನಂದಿ ಧ್ವಜಕ್ಕೆ ಪೂಜೆ ಮಾಡಿಕೊಂಡು, ದಸರಾ ಮೆರವಣಿಗೆಯ ವೇಳೆ ನಂದಿ ಧ್ವಜವನ್ನು ತರಲಾಗುತ್ತಿದ್ದಾರೆ. ಈಗಾಗಲೇ ಮಹದೇವಪ್ಪ ಅವರ ಮನೆಯಲ್ಲಿ ನಂದಿ ಧ್ವಜಕ್ಕೆ ಪೂಜೆ ಮಾಡಿ ಸಿದ್ಧತೆಗೊಳಿಸಲಾಗಿದೆ.

    ಪಂಜಿನ ಕವಾಯತು ಮೂಲಕ ಮೈಸೂರಲ್ಲಿ ನಾಡಹಬ್ಬಕ್ಕೆ ತೆರೆಬೀಳಲಿದೆ. ಸಂಜೆ 4.30ಕ್ಕೆ ಹೊರಟ ಅಂಬಾರಿ ಸಂಜೆ 7 ಗಂಟೆಗೆ ಬನ್ನಿ ಮಂಟಪ ತಲುಪುತ್ತದೆ. ಇತ್ತ ರಾತ್ರಿ 7.30ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಆರಂಭವಾಗುತ್ತದೆ. ನೂರಾರು ಮಂದಿ ಪಂಜನ್ನು ಹಿಡಿದು ಸಾಹಸ ಪ್ರದರ್ಶಿಸುತ್ತಾರೆ. ಈ ಪಂಜಿನ ಕವಾಯತಿನ ಬಳಿಕ ರಾತ್ರಿ 10 ಗಂಟೆಗೆ ಪಟಾಕಿ ಸಿಡಿಸೋ ಮೂಲಕ ದಸರಾಕ್ಕೆ ತೆರೆ ಬೀಳುತ್ತದೆ.