Tag: ಮೈಸೂರು ಚಲೋ

  • ಬಿಎಸ್‌ವೈ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಿ- ಲೂಟಿ ಒಪ್ಪಿಕೊಂಡು ರಾಜೀನಾಮೆ ಕೊಡಿ: ವಿಜಯೇಂದ್ರ

    ಬಿಎಸ್‌ವೈ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಿ- ಲೂಟಿ ಒಪ್ಪಿಕೊಂಡು ರಾಜೀನಾಮೆ ಕೊಡಿ: ವಿಜಯೇಂದ್ರ

    ಮೈಸೂರು: ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಿ. ಮುಖ್ಯಮಂತ್ರಿಗಳೇ ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕೆಲಸ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y.Vijayendra) ಸವಾಲು ಹಾಕಿದರು.

    ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಖಂಡಿಸಿ ಬಿಜೆಪಿ-ಜೆಡಿಎಸ್ ವತಿಯಿಂದ ನಡೆದ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಇಂದು ಅವರು ಮಾತನಾಡಿದರು. ಯಡಿಯೂರಪ್ಪನವರ (Yediyurappa) ರಾಜಕೀಯ ನಿವೃತ್ತಿಯ ಮಾತನ್ನು ಹಿಂದಕ್ಕೆ ಪಡೆಯಿರಿ. ಮುಖ್ಯಮಂತ್ರಿಗಳೇ, ಸಾವಿರಾರು ಕೋಟಿ ಲೂಟಿ ಬಗ್ಗೆ ಒಪ್ಪಿಕೊಂಡು ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಎಸ್‌ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ಸಾವಿಗೆ ಕಾರಣ ಯಾರು: ಡಿಕೆಶಿಗೆ ಹೆಚ್‌ಡಿಕೆ ಪ್ರಶ್ನೆ

    ಮುಡಾ ಹಗರಣದಲ್ಲಿ 5 ಸಾವಿರ ಕೋಟಿಯ ಅವ್ಯವಹಾರ ಆಗದೆ ಇದ್ದರೆ ನೀವ್ಯಾಕೆ ಸದನದಿಂದ ಓಡಿ ಹೋಗಿದ್ದೀರಿ? ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ವಿಪಕ್ಷಕ್ಕೆ ಗೊಡ್ಡು ಬೆದರಿಕೆ ಹಾಕಿದ್ದು ಯಾಕೆ? ಹಗರಣಗಳ ಕುರಿತು ಆರೋಪಿಸುವ ಮೊದಲು ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ವಿವರ ಕೊಡಿ ಎಂದು ಒತ್ತಾಯಿಸಿದರು. ಯಡಿಯೂರಪ್ಪ ಅವರನ್ನು ಕಂಡರೆ ಇನ್ನೂ ನಿಮಗೆ ಭಯವೇ ಎಂದು ವಿಜಯೇಂದ್ರ ಪ್ರಶ್ನಿಸಿದರು.

    ಯಡಿಯೂರಪ್ಪ ಅವರ ಸಿಎಜಿ ಸಂಬಂಧ ಎಫ್‌ಐಆರ್, ಕುತಂತ್ರ ಮಾಡಿದ್ದನ್ನು ಪ್ರಸ್ತಾಪಿಸಿದರು. ಸಿದ್ದರಾಮಯ್ಯನವರ ವಿರುದ್ಧ ಈ ಹೋರಾಟವಲ್ಲ; ಭ್ರಷ್ಟ ಮುಖ್ಯಮಂತ್ರಿಗಳ ವಿರುದ್ಧ ನಮ್ಮ ಹೋರಾಟ ಎಂದರಲ್ಲದೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಮ್ಮದು ಎಂದು ತಿಳಿಸಿದರು. ನಿಂಗ ಅವರ ಜಮೀನು ಅಕ್ರಮ ಖರೀದಿ, ಅದನ್ನು ಸಿದ್ದರಾಮಯ್ಯನವರ ಶ್ರೀಮತಿಗೆ ನೀಡಿದ್ದನ್ನು ಪ್ರಸ್ತಾಪಿಸಿದರು. ಇದನ್ನೂ ಓದಿ: ಗನ್ ಪಾಯಿಂಟ್‍ಲ್ಲಿ ನಿವೇಶನ ಬರೆಸಿಕೊಂಡ ಆರೋಪ – ಮಹಿಳೆಯರಿಂದ ದೂರು ಕೊಡಿಸಲಿ: ಹೆಚ್‍ಡಿಕೆಗೆ ಡಿಕೆಶಿ ಸವಾಲ್

    ನಮ್ಮ ಹೋರಾಟ ನಿರಂತರವಾಗಿರಲಿದೆ. ನಮ್ಮ ಹೋರಾಟವನ್ನು ಯಾರೂ ಹತ್ತಿಕ್ಕಲು ಅಸಾಧ್ಯ ಎಂದು ಪ್ರಕಟಿಸಿದರು. ಪಾದಯಾತ್ರೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೆಸೆಯುವವರೆಗೆ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.

    ಬಡವರು, ರೈತರನ್ನು ಕಾಪಾಡುವ ಇಚ್ಛಾಶಕ್ತಿ ನಿಮ್ಮಲ್ಲಿಲ್ಲ. ನಮ್ಮ ಬಿಜೆಪಿ ಸರ್ಕಾರ ಮನೆ ಬಿದ್ದ ಸಂದರ್ಭದಲ್ಲಿ 5 ಲಕ್ಷ ಕೊಟ್ಟಿತ್ತು. ಈ ಸರ್ಕಾರ 1 ಲಕ್ಷ ಕೊಡುವುದಾಗಿ ಘೋಷಿಸಿದೆ. ಆದರೆ, ಅದನ್ನೂ ಕೊಟ್ಟಿಲ್ಲ. ಅಂಗನವಾಡಿ ಕಾರ್ಯಕರ್ತರಿಗೆ 2 ತಿಂಗಳಿಂದ ಗೌರವಧನ ಸಿಕ್ಕಿಲ್ಲ. ಅಂಗವಿಕಲರಿಗೆ 6 ತಿಂಗಳಿಂದ ಮಾಸಾಶನ ಕೊಟ್ಟಿಲ್ಲ ಎಂದು ಟೀಕಿಸಿದರು.

    15 ತಿಂಗಳುಗಳಲ್ಲಿ ಯಾವುದೇ ಹೊಸ ಅಭಿವೃದ್ಧಿ ಯೋಜನೆಯನ್ನು ಘೋಷಿಸಿಲ್ಲ. ದರಿದ್ರ ಕಾಂಗ್ರೆಸ್ ಸರ್ಕಾರ ಬಂದ ಬಳಿಕ, ಒಂದೆಡೆ ಭೀಕರ ಬರಗಾಲ. 1,500 ರೈತರ ಆತ್ಮಹತ್ಯೆ ಮಾಡಿಕೊಂಡರಲ್ಲವೇ? ಇದೇನಾ ನಿಮ್ಮ ರೋಲ್ ಮಾಡೆಲ್ ಸರ್ಕಾರ ಎಂದು ಪ್ರಶ್ನಿಸಿದರು. ವಿಪಕ್ಷವಾಗಿ ಸವಾಲು ಹಾಕಿದರೆ ನಮಗೇ ಧಮ್ಕಿ ಹಾಕುತ್ತೀರಾ? ಎಂದರಲ್ಲದೆ, ಚಮಚಾಗಿರಿ ಮಾಡುವ ವಿಪಕ್ಷ ನಮ್ಮದಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ‘ಮೈಸೂರು ಚಲೋ’ ಪಾದಯಾತ್ರೆ ಸಮಾರೋಪ ಸಮಾವೇಶಕ್ಕೆ ಚಾಲನೆ

    ಸಿದ್ದರಾಮಯ್ಯನವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ. ಪೊಲೀಸರನ್ನು ಉಪಯೋಗಿಸಿ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದೀರಿ. ಅಧಿವೇಶನದಲ್ಲಿ ವಾಲ್ಮೀಕಿ ನಿಗಮದ ಹಗರಣ, ಮುಡಾದ ಹಗರಣ ಕುರಿತು ಚರ್ಚಿಸಲು ಮುಂದಾದರೆ, ನಿಲುವಳಿ ಸೂಚನೆ ಮಂಡಿಸಿದರೆ, ವಿಪಕ್ಷದ ಕಿವಿಗೆ ಹೂ ಮುಡಿಸುವ ಕೆಲಸ ಮಾಡಿದರು ಎಂದು ಆಕ್ಷೇಪಿಸಿದರು.

    ಅಧಿವೇಶನದಲ್ಲಿ ಉತ್ತರ ಕೊಡಲಾಗದೆ ಓಡಿ ಹೋದ ರಣಹೇಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ಟೀಕಿಸಿದರು. ಇದನ್ನು ನಾನು ಹೇಳುತ್ತಿಲ್ಲ. ರಾಜ್ಯದ ಜನತೆ ಹೇಳುತ್ತಾರೆ ಎಂದರು. ಇದೇ 3ರಿಂದ ಆರಂಭವಾದ ಮೈಸೂರು ಚಲೋ ಪಾದಯಾತ್ರೆ ಯಶಸ್ವಿಯಾಗಿದೆ. ಭ್ರಷ್ಟಾಚಾರರಹಿತ ಸರ್ಕಾರ, ಅಹಿಂದ ಸಮುದಾಯಕ್ಕೆ ಸೌಕರ್ಯ ಕೊಡುವ ಭರವಸೆ ನೀಡಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ, ರಾಜ್ಯದ ಕಾಂಗ್ರೆಸ್ ಪಕ್ಷವು ಅಭಿವೃದ್ಧಿರಹಿತ, ಭ್ರಷ್ಟಾಚಾರಸಹಿತ ಸರ್ಕಾರವನ್ನು ನೀಡಿದೆ ಎಂದು ಆಕ್ಷೇಪಿಸಿದರು.

  • ಎಸ್‌ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ಸಾವಿಗೆ ಕಾರಣ ಯಾರು: ಡಿಕೆಶಿಗೆ ಹೆಚ್‌ಡಿಕೆ ಪ್ರಶ್ನೆ

    ಎಸ್‌ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ಸಾವಿಗೆ ಕಾರಣ ಯಾರು: ಡಿಕೆಶಿಗೆ ಹೆಚ್‌ಡಿಕೆ ಪ್ರಶ್ನೆ

    – ಲೂಟಿ ಮಾಡುವ ಡಿಕೆ ಶಿವಕುಮಾರ್‌ಗೆ ನಾನು ನಾಗರಹಾವು
    – ಮ್ಯಾನಹೋಲ್ ಛೇಂಬರ್‌ನ ಮುಚ್ಚಳ ಕದ್ದು ಗುಜರಿಗೆ ಹಾಕಿ ಜೀವನ ಮಾಡ್ತಿದ್ದ ಡಿಕೆಶಿ
    – ಸೈಟ್ ವಾಪಸ್ ಕೊಟ್ಟರೆ ನೀವು ಮಾಡಿದ ಅಕ್ರಮ ಮುಚ್ಚಿ ಹೋಗುತ್ತಾ?

    ಮೈಸೂರು: ಎಸ್‌ಎಂ ಕೃಷ್ಣ ಅವರು ನಿಮಗೆ ರಾಜಕೀಯ ಜನ್ಮ ಕೊಟ್ಟರು. ಅವರ ಅಳಿಯ ಸಿದ್ಧಾರ್ಥ್ ಆತ್ಮಹತ್ಯೆಗೆ ಕಾರಣ ಯಾರು ಎಂಬುದನ್ನು ಜನರ ಮುಂದಿಡಿ ಎಂದು ಡಿಕೆ ಶಿವಕುಮಾರ್‌ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D.Kumaraswamy) ಹೇಳಿದರು.

    ಮೈಸೂರು ಚಲೋ (Mysuru Chalo) ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಹಾಗೂ ಡಿಸಿಎಂ ವಿರುದ್ಧ ಗುಡುಗಿದರು. ನನ್ನ ಮತ್ತು ಯಡಿಯೂರಪ್ಪ ನಡುವೆ ಬಿರುಕು ಮೂಡಿಸಲು ಯತ್ನ ನಡೆಯುತ್ತಿದೆ. ಶ್ರಮಪಟ್ಟು 105 ಸ್ಥಾನವನ್ನು ಪಡೆದಿದ್ದಾಗ ಅಧಿಕಾರ ಸಿಗದ ಸಂದರ್ಭದಲ್ಲಿ ರಾಜಕೀಯವಾಗಿ ನನ್ನ ವಿರುದ್ಧ ಯಡಿಯೂರಪ್ಪ ಮಾತಾಡಿದ್ದಾರೆ. ಅದು ಸಹಜ. ವಿಧಾನಸಭೆಯಲ್ಲಿ ಅವತ್ತು ಯಡಿಯೂರಪ್ಪ ಅವರು ನನ್ನ ನಾಗರಹಾವು ಅಂದರು. ನಾನು ಡಿಕೆ ಶಿವಕುಮಾರ್ ಪಾಲಿಗೆ ನಾಗರಹಾವೇ. ಲೂಟಿ ಮಾಡುವ ಡಿಕೆ ಶಿವಕುಮಾರ್‌ಗೆ ನಾನು ನಾಗರಹಾವು. ಸಿದ್ದರಾಮಯ್ಯ ಪರ ನಾನು ಬಂಡೆ ಥರ ಇದ್ದೀನಿ ಅಂದರು. 2018 ರಲ್ಲಿ ನಾನು ಆ ಬಂಡೆ ಕಲ್ಲು ನಂಬಿಕೊಂಡೆ ಬಂಡೆಯನ್ನು ಮೈ ಮೇಲೆ ಎಳೆದುಕೊಂಡೆ. ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ 8 ಸ್ಥಾನ ಬಂದಿದೆ. ನಾನು ಅದು 9 ಅನ್ನಲ್ಲ. ಇನ್ನೊಂದು ಸ್ಥಾನ ಹೇಗೆ ಬಂತು ಅಂತಾ ನನಗೆ ಗೊತ್ತಿದೆ. ಸಿದ್ದರಾಮಯ್ಯ ಅವರೇ ನೀವು ಬರೀ ಹಿಂದುಳಿದ ವರ್ಗಗಳ ಸಿಎಂ ಅಲ್ಲ. ಆರೂವರೆ ಕೋಟಿ ಜನರ ಸಿಎಂ ಎಂಬುದನ್ನು ಅರಿಯಿರಿ. ಸಿದ್ದರಾಮಯ್ಯ ಅವರು ಸಿಎಂ ಆದರೆ ನನಗೆ ಯಾಕೆ ಹೊಟ್ಟೆ ಉರಿ? ನನ್ನ ಪ್ರಶ್ನೆ ನಿಮ್ಮ ಅನ್ಯಾಯದ ವಿರುದ್ಧ. ಸಿದ್ದರಾಮಯ್ಯ ಚಡ್ಡಿಯೆಲ್ಲಾ ಕಪ್ಪಾಗಿದೆ. ಮುಖದಲ್ಲಿ ಕಪ್ಪು ಚುಕ್ಕೆ ಇಲ್ಲ ಅಂದರೆ ಹೇಗೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಗನ್ ಪಾಯಿಂಟ್‍ಲ್ಲಿ ನಿವೇಶನ ಬರೆಸಿಕೊಂಡ ಆರೋಪ – ಮಹಿಳೆಯರಿಂದ ದೂರು ಕೊಡಿಸಲಿ: ಹೆಚ್‍ಡಿಕೆಗೆ ಡಿಕೆಶಿ ಸವಾಲ್

    ಸಿಎಂ ಪತ್ನಿಗೆ ಬಂದಿರೋದು ಯಾರೋ ಒಬ್ಬರ ಜಮೀನಲ್ಲ. ಅದು ಸರ್ಕಾರದ ಜಮೀನು. ನೀವು ಸಹಿ ಹಾಕದೆ ಇರಬಹುದು. ನಿಮ್ಮ ಮೂಗಿನ ನೇರಕ್ಕೆ ಎಲ್ಲವೂ ನಡೆದಿದೆ. 14 ಸೈಟ್ ವಾಪಸ್ ಕೊಡಲು ಸಿದ್ಧನಿದ್ದೇನೆ ಅಂತಾರೆ. ಈಗ ಸೈಟ್ ವಾಪಸ್ ಕೊಟ್ಟರೆ ನೀವು ಮಾಡಿದ ಅಕ್ರಮ ಮುಚ್ಚಿ ಹೋಗುತ್ತಾ? ಸಿದ್ದರಾಮಯ್ಯ ಅವರೇ ನೀವು ಕುಮಾರಸ್ವಾಮಿ, ಯಡಿಯೂರಪ್ಪ ಬಗ್ಗೆ ಚರ್ಚೆ ಮಾಡುತ್ತೀರಾ? ಮಿಸ್ಟರ್ ಶಿವಕುಮಾರ್ ತಾಯಿ ಚಾಮುಂಡಿ ನೆಲದಲ್ಲಿ ನಿಂತು ಕೇಳ್ತೀನಿ. ಕೊತ್ವಾಲ್‌ನ ಬಳಿ ಜೀವನ ಮಾಡುತ್ತಿದ್ದ ನಿಮಗೆ ಎಸ್.ಎಂ. ಕೃಷ್ಣ ಅವರು ರಾಜಕೀಯ ಜನ್ಮ ಕೊಟ್ಟರು. ಅವರ ಅಳಿಯ ಸಿದ್ಧಾರ್ಥ್ ಆತ್ಮಹತ್ಯೆಗೆ ಕಾರಣ ಯಾರು ಎಂಬುದನ್ನು ಜನರ ಮುಂದೆ ಇಡಿ. ಬೆಂಗಳೂರಿನ ಜೇಡರಹಳ್ಳಿ ಬಳಿ ರಾತ್ರಿ ಹೊತ್ತು ಮ್ಯಾನ್‌ಹೋಲ್ ಛೇಂಬರ್‌ನ ಮುಚ್ಚಳ ಕದ್ದು ಗುಜರಿಗೆ ಹಾಕಿ ಜೀವನ ಮಾಡುತ್ತಿದ್ದ ಶಿವಕುಮಾರ್ ನನ್ನ ಮತ್ತು ಯಡಿಯೂರಪ್ಪ ಬಗ್ಗೆ ಮಾತಾಡ್ತೀರಾ ಎಂದು ತರಾಟೆಗೆ ತೆಗೆದುಕೊಂಡರು.

    ನಾನು ನನ್ನ ಮಗನ ಭವಿಷ್ಯಕ್ಕಾಗಿ ಅಣ್ಣನ ಮಗನ ಜೈಲಿಗೆ ಕಳಿಸಿದ್ದೇನೆ ಅಂತಾರೆ ಡಿಕೆ ಶಿವಕುಮಾರ್. ರೇವಣ್ಣನ ಮೇಲೆ ಕೇಸ್ ಇಲ್ಲ. ಕೇಸ್ ಸೃಷ್ಟಿ ಮಾಡ್ತೀರಾ ನೀವು? ರೇವಣ್ಣನ ಹೆಂಡತಿಯನ್ನು ಜೈಲಿಗೆ ಕಳುಹಿಸಲು ಸುಪ್ರೀಂ ಕೋರ್ಟ್‌ಗೆ ಹೋಗಿ ಲಾಯರ್‌ಗೆ ಹಣ ವೆಚ್ಚ ಮಾಡಿಲ್ವಾ ಡಿಕೆ ಶಿವಕುಮಾರ್? ನಿಮ್ಮಂಥ ಕುತಂತ್ರಿ, ಮನೆ ಹಾಳರು ಇದ್ದಾರಾ? ಕಾಂಗ್ರೆಸ್‌ನವರು ಯಡಿಯೂರಪ್ಪ ಅವರ ಫೋಟೋ ಇಟ್ಟುಕೊಂಡು ಪೂಜೆ ಮಾಡಬೇಕು. 2013 ರಲ್ಲಿ ನಿಮ್ಮ ಮುಖ ನೋಡಿ ಕಾಂಗ್ರೆಸ್‌ಗೆ ಮತ ಹಾಕಲಿಲ್ಲ. ಯಡಿಯೂರಪ್ಪ ಅವರ ಕಾರಣದಿಂದ ಮತ ವಿಭಜನೆ ಆಗಿ ನಿಮಗೆ ಅಧಿಕಾರ ಸಿಕ್ತು. ಯಾವ ಯಡಿಯೂರಪ್ಪ ಅವರ ಫೋಟೋ ಇಟ್ಟುಕೊಳ್ಳಬೇಕಿತ್ತೋ ಅದೇ ಯಡಿಯೂರಪ್ಪ ಅವರ ವಿರುದ್ಧ 2013 ರಲ್ಲಿ ನೀವು ಹಾಕಿಸಿದ ಕೇಸ್ ಎಷ್ಟು? ಯಡಿಯೂರಪ್ಪ ಅವರ ಮೇಲೆ ಈಗ ಯಾವುದೋ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸುವ ಹುನ್ನಾರ ಮಾಡಿದ್ದೀರಾ ನಾಚಿಕೆ ಆಗಲ್ವಾ ಎಂದು ಟೀಕಿಸಿದರು. ಇದನ್ನೂ ಓದಿ: ‘ಮೈಸೂರು ಚಲೋ’ ಪಾದಯಾತ್ರೆ ಸಮಾರೋಪ ಸಮಾವೇಶಕ್ಕೆ ಚಾಲನೆ

    ನನ್ನ ಸಿಎಂ ಮಾಡಿದ್ದು ಯಡಿಯೂರಪ್ಪ, ಬಿಜೆಪಿ ಹಿರಿಯ ನಾಯಕರು. ನನ್ನನ್ನು ಕಾಂಗ್ರೆಸ್‌ನವರು ಸಿಎಂ ಮಾಡಲಿಲ್ಲ. ನಾನು ಅವತ್ತು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದುಕೊಂಡಿದ್ದೆ. ಆದರೆ ನಾನು ಅವತ್ತು ಮಾಡದ ತಪ್ಪಿಗೆ 15 ವರ್ಷ ಶಿಕ್ಷೆ ಅನುಭವಿಸಿದ್ದೇನೆ. ತಾಯಿ ಚಾಮುಂಡಿ ನೆಲದಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ. ನಾನು ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದಾಗ ಸಿದ್ದರಾಮಯ್ಯ ಹೆಜ್ಜೆ ಹೆಜ್ಜೆಗೂ ಹಿಂಸೆ ಕೊಟ್ಟರು. 10 ವರ್ಷ ಗೂಟ ಹೊಡೆದುಕೊಂಡು ಇರುತ್ತೀನಿ ಅಂತಾ ಶಿವಕುಮಾರ್ ಹೇಳಿದ್ದಾರೆ. ನಾವು ಸರ್ಕಾರ ತೆಗೆಯಲು ಹೊರಟಿಲ್ಲ. ನೀವಾಗಿ ನೀವೇ ಸರ್ಕಾರ ತೆಗೆಯೇಬಕು. ಸಿದ್ದರಾಮಯ್ಯ ಮೇಲೆ ಆ ಬಂಡೆ ಬಿದ್ದರೆ ಸಿದ್ದರಾಮಯ್ಯ ಕಥೆ ಏನಾಗಬಹುದು. ಐವತ್ತು ಡಿನೋಟಿಫಿಕೇಷನ್ ಮಾಡಿದ್ದೇನೆ ಅಂತಾರೆ. ತೆಗೆಯಪ್ಪಾ ಶಿವಕುಮಾರ್ ಅದೇನೂ ಇದೆ ಅಂತಾ? ಸುಳ್ಳು ಹೇಳಲು ಒಂದು ಮಿತಿ ಬೇಕು ಶಿವಕುಮಾರ್. ಬಿಜೆಪಿ ವಿರುದ್ಧ ಚುನಾವಣೆ ವೇಳೆ ಅಷ್ಟು ಆರೋಪ ಮಾಡಿದ್ದೀರಿ. ನೀವು ಆಡಳಿತಕ್ಕೆ ಬಂದು 15 ತಿಂಗಳಾಯಿತು. ತನಿಖೆ ಮಾಡಿಸಿದ್ದಿರಾ ಎಂದು ಪ್ರಶ್ನಿಸಿದರು.

    ಶಿವಕುಮಾರ್ ಈ ಕುಮಾರಸ್ವಾಮಿ ಮೇಲೆ ಕಣ್ಣಾಕಿದ್ದಾರೆ ಸರ್ವನಾಶ ಆಗ್ತೀಯಾ. ನನ್ನ ಬದುಕು ತೆರೆದ ಪುಸ್ತಕ ಅಂತಾರೆ. ಸಿದ್ದರಾಮಯ್ಯ ಅವರೇ ಅಕಾರ್ವತಿ ಹಗರಣ ತೆಗೆಯಿರಿ. ಕೆಂಪಣ್ಣ ಆಯೋಗ ವರದಿ ಓಪನ್ ಮಾಡಿ. ಸಿದ್ದರಾಮಯ್ಯ ಅವರೇ ಅಧಿಕಾರ ಶಾಶ್ವತ ಅಲ್ಲ. ಮಿಸ್ಟರ್ ಡಿಕೆ ನಿನ್ನೆ ತೊಡೆ ತಟ್ಟಿದ್ದೀರಿ. ಸ್ವೀಕಾರ ಮಾಡಿದ್ದೇನೆ. ಸಿದ್ದರಾಮಯ್ಯ ಅವರೇ ಅರ್ಕಾವತಿ ಬಡಾವಣೆ ಎಲ್ಲಾ ಪುರಾಣ ನನ್ನ ಬಳಿ ಇದೆ ಎಂದು ಟಾಂಗ್ ಕೊಟ್ಟರು.

  • ‘ಮೈಸೂರು ಚಲೋ’ ಪಾದಯಾತ್ರೆ ಸಮಾರೋಪ ಸಮಾವೇಶಕ್ಕೆ ಚಾಲನೆ

    ‘ಮೈಸೂರು ಚಲೋ’ ಪಾದಯಾತ್ರೆ ಸಮಾರೋಪ ಸಮಾವೇಶಕ್ಕೆ ಚಾಲನೆ

    – ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದ ‘ದೋಸ್ತಿ’ ನಾಯಕರು
    – ಎಲ್ಲಾ ಬಂಡೆಗಳು ಪುಡಿಯಾಗುತ್ತವೆ: ಡಿಕೆಶಿಗೆ ಟಾಂಗ್ ಕೊಟ್ಟ ಶ್ರೀರಾಮುಲು

    ಮೈಸೂರು: ಮುಡಾ, ವಾಲ್ಮೀಕಿ ಹಗರಣ ವಿರುದ್ಧ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ (BJP-JDS) ಜೊತೆಯಾಗಿ ಹಮ್ಮಿಕೊಂಡಿರುವ ‘ಮೈಸೂರು ಚಲೋ’ (Mysuru Chalo) ಪಾದಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಲ್ಲಿ ನಡೆಯುತ್ತಿದೆ.

    ಅರಮನೆ ಸಮೀಪದ ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆ ಹೊರಟು ಮಹಾರಾಜ ಕಾಲೇಜು ಮೈದಾನಕ್ಕೆ ಬಂದರು. ಬಳಿಕ ಸಮಾವೇಶದಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ: ವಿಜಯೇಂದ್ರ

    ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಮಾಜಿ ಡಿಸಿಎಂ ಶ್ರೀರಾಮುಲು, ವಿಪಕ್ಷ ನಾಯಕ ಆರ್.ಅಶೋಕ್ ಸಮಾವೇಶದಲ್ಲಿ ಭಾಗವಹಿಸಿದ್ದರು.

    ಸಮಾವೇಶದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಶ್ರೀರಾಮುಲು, ನಿನ್ನೆ ಸಿದ್ದರಾಮಯ್ಯ ಭಾಷಣದಲ್ಲಿ ಸಿಎಂ ಧ್ವನಿ ಕುಗ್ಗುತ್ತಿತ್ತು. ಆಡಳಿತ ಪಕ್ಷವೊಂದು ಪ್ರತಿ ಪಕ್ಷದ ಸಮಾವೇಶಕ್ಕೆ ಪರ್ಯಾಯವಾಗಿ ಸಮಾವೇಶ ಮಾಡಿದ್ದು ದುರಂತ. ಹಿಂದುಳಿದ ವರ್ಗದವನು ಎಂಬ ಕಾರಣಕ್ಕೆ ತಮ್ಮನ್ನು ಇಳಿಸುವ ಯತ್ನ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನಿಮ್ಮನ್ನು ಅಧಿಕಾರದಿಂದ ಇಳಿಸಲು ಯತ್ನಿಸುತ್ತಿರೋದು ಡಿ.ಕೆ.ಶಿವಕುಮಾರ್. ವಾಲ್ಮೀಕಿ ನಿಗಮದ ಒಂದೊಂದು ಪೈಸೆಯೂ ಕೂಡ ವಾಪಸ್ ಬರಬೇಕು. ಪ.ಜಾತಿ, ಪಂಗಡಗಳ ಹಣವನ್ನು ಗ್ಯಾರಂಟಿ ಹಣಕ್ಕೆ ಕೊಡುತ್ತಿದ್ದಾರೆ. ಇದಕ್ಕೆ ಎಸ್ಸಿ-ಎಸ್ಟಿ ಗ್ಯಾರಂಟಿ ಹಣ ಅಂತಾ ಹೆಸರಿಡಿ. ನೀವು 14 ವರ್ಷದ ಹಿಂದೆ ನಮ್ಮ ವಿರುದ್ಧ ಬಳ್ಳಾರಿ ಪಾದಯಾತ್ರೆ ಮಾಡಿದ್ದೀರಿ. ಈಗ ನಿಮ್ಮ ಹಗರಣ ವಿರುದ್ಧ ಈಗ ನಾವು ಪಾದಯಾತ್ರೆ ಮಾಡ್ತಿದ್ದೇವೆ. ಕಾಲ ಚಕ್ರ ಉರುಳಿತು ನೋಡಿ. ಸಿದ್ದರಾಮಯ್ಯ ಅವರೇ ಚಾಮುಂಡಿ ತಾಯಿ ನಿಮ್ಮನ್ನು ಬಿಡುವುದಿಲ್ಲ. ಜಗ್ಗಲ್ಲ ಬಗ್ಗಲ್ಲ ಅಂತೀರಿ. ಕೆಲವರು ಬಂಡೆ ಅನ್ನುತ್ತಾರೆ. ನಮ್ಮ ಕಾರ್ಯಕರ್ತರ ಶಕ್ತಿ ಮುಂದೆ ಎಲ್ಲರೂ ಬಗ್ಗಬೇಕು. ಎಲ್ಲಾ ಬಂಡೆಗಳು ಪುಡಿ ಆಗುತ್ತವೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: 100 ಕೋಟಿ ವೆಚ್ಚದ ನೂತನ ಬಸ್ ನಿಲ್ದಾಣಕ್ಕೆ ಕತ್ತಲೆ ಭಾಗ್ಯ; ಟಾರ್ಚ್‌ ಬೆಳಕಲ್ಲೇ ವರ್ತಕರ ವಹಿವಾಟು

    ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್ ಶವಯಾತ್ರೆಯ ಪಾದಯಾತ್ರೆ ಇದು. ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳು ಸಾವು ಉಚಿತ. ರೈತರಿಗೆ ಸಾವು ಉಚಿತ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅಧಿಕಾರದಲ್ಲಿ ಇರುವ ತನಕ ಪ್ರಾಮಾಣಿಕ ಅಧಿಕಾರಿಗಳ ಜೀವಕ್ಕೆ ಇಲ್ಲಿ ರಕ್ಷಣೆ ಇಲ್ಲ. ವಿಧಾನಸೌಧದಿಂದ ಸಿದ್ದರಾಮಯ್ಯ ಓಡಿ ಹೋಗಿದ್ದಕ್ಕೆ ನಾವು ಪಾದಯಾತ್ರೆ ಮಾಡಿದ್ದೇವೆ. ಸಿಎಂ ರಾಜೀನಾಮೆ ಕೊಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.

    ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರವಾಲ್ ಮಾತನಾಡಿ, ನಿನ್ನೆ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಒಂದು ಸಾವಿರ ಒಬ್ಬರಿಗೆ ಕೊಟ್ಟು ಜನರನ್ನು ಕರೆಸಲಾಗಿತ್ತು. ನಮ್ಮ ಪಾದಯಾತ್ರೆಗೆ ಹೆದರಿ ದುಡ್ಡು ಖರ್ಚು ಮಾಡಿ ಸಮಾವೇಶ ಮಾಡುವ ಅಗತ್ಯ ಕಾಂಗ್ರೆಸ್‌ಗೆ ಇತ್ತಾ? ಕಾಂಗ್ರೆಸ್ ಯಾವಾಗಲೂ ಲೂಟಿ ಮಾಡುವುದು ಲೂಟಿ ಮಾಡಿದ ಹಣವನ್ನು ಹೀಗೆ ಖರ್ಚು ಮಾಡುವುದು ಕಾಂಗ್ರೆಸ್ ಅಭ್ಯಾಸ. ನಿನ್ನೆಯ ಕಾಂಗ್ರೆಸ್ ರ‍್ಯಾಲಿ ಲೂಟಿ ರ‍್ಯಾಲಿ. ನಮ್ಮದು ಜನತಾ ರ‍್ಯಾಲಿ. ಸಿದ್ದರಾಮಯ್ಯ ತಮ್ಮ ಸ್ಥಾನ ಖಾಲಿ ಮಾಡುವವರೆಗೂ ಜನರ ಜೊತೆ ಸೇರಿ ಹೋರಾಟ ಮಾಡುತ್ತೇವೆ. ಡಿಕೆ ಶಿವಕುಮಾರ್ ಇತಿಹಾಸ ಯಾರಿಗೆ ಗೊತ್ತಿಲ್ಲ ಹೇಳಿ? ಡಿಕೆ ಶಿವಕುಮಾರ್ ಆಸ್ತಿ ಮೊದಲು ಎಷ್ಟಿತ್ತು? ಈಗ ಎಷ್ಟಾಗಿದೆ? ಡಿಕೆ ಶಿವಕುಮಾರ್‌ಗೆ ಇಷ್ಟು ಹಣ ಎಲ್ಲಿಂದ ಬಂತು? ಕರ್ನಾಟಕವನ್ನು ಡಿ.ಕೆ. ಶಿವಕುಮಾರ್ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

  • ಅಧಿಕಾರ ದಾಹದಿಂದ ಪಾದಯಾತ್ರೆ ಹಮ್ಮಿಕೊಂಡಿಲ್ಲ: ವಿಜಯೇಂದ್ರ

    ಅಧಿಕಾರ ದಾಹದಿಂದ ಪಾದಯಾತ್ರೆ ಹಮ್ಮಿಕೊಂಡಿಲ್ಲ: ವಿಜಯೇಂದ್ರ

    ಬೆಂಗಳೂರು: ರಾಜ್ಯದ ಇತಿಹಾಸದಲ್ಲಿ ಇಂಥ ಬೃಹತ್ ಪಾದಯಾತ್ರೆಯನ್ನು ಯಾರೂ ಹಮ್ಮಿಕೊಂಡಿರಲಿಲ್ಲ. ಯಾವುದೇ ಅಧಿಕಾರ ದಾಹದಿಂದ ನಮ್ಮ ಈ ಪಾದಯಾತ್ರೆ ಹಮ್ಮಿಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y.Vijayendra) ತಿಳಿಸಿದರು.

    ನಾಲ್ಕನೇ ದಿನವಾದ ಇಂದು ಮೈಸೂರು ಚಲೋ ಪಾದಯಾತ್ರೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ಭ್ರಷ್ಟ ಕಾಂಗ್ರೆಸ್ ಸರ್ಕಾರ ಮತ್ತು ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕಿತ್ತೆಸೆಯಬೇಕೆಂಬ ಸಂಕಲ್ಪದೊಂದಿಗೆ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯಪಾಲರು ಎರಡನೇ ಶೋಕಾಸ್ ನೋಟಿಸ್‌ ಕೊಟ್ಟಿಲ್ಲ: ಟಿಜೆ ಅಬ್ರಹಾಂ

    ರಾಜ್ಯದ ಆರೂವರೆ ಕೋಟಿ ಜನರಿಗೆ ಚುನಾಯಿತ ಸರ್ಕಾರ ಇದೆ ಎಂದು ಅನಿಸುತ್ತಿಲ್ಲ. ಕಾಂಗ್ರೆಸ್‌ ಅನೇಕ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದೆ. ಕಳೆದ 14 ತಿಂಗಳಿನಲ್ಲಿ ರಾಜ್ಯದಲ್ಲಿ ವಿದ್ಯುತ್ ದರ ಏರಿಸಿದ್ದಾರೆ. ಹಾಲಿನ ದರ ಹೆಚ್ಚಿಸಿದರೂ ಅದರ ಪ್ರಯೋಜನ ರೈತರು, ಹೈನುಗಾರರಿಗೆ ಲಭಿಸಿಲ್ಲ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ಕೊಡುತ್ತಿತ್ತು ಎಂದು ವಿವರಿಸಿದರು.

    ಸಿದ್ದರಾಮಯ್ಯನವರು ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ 1,200 ಕೋಟಿ ರೂ. ಹಾಗೇ ಉಳಿಸಿಕೊಂಡಿದ್ದಾರೆ. ನೋಂದಣಿ ಶುಲ್ಕ ಹೆಚ್ಚಾಗಿದೆ. ಅಕ್ಕಿ, ದವಸ ಧಾನ್ಯವೂ ದುಬಾರಿಯಾಗಿದೆ. 1,95,000 ಕೋಟಿ ಸಾಲವನ್ನು ಸಿದ್ದರಾಮಯ್ಯನವರ ಸರ್ಕಾರ ಮಾಡಿದೆ ಎಂದು ವಿಜಯೇಂದ್ರ ಟೀಕಿಸಿದರು. ಇದನ್ನೂ ಓದಿ: ಪ್ರತಿದಿನ ಪೊಲೀಸ್ ಅಧಿಕಾರಿಗಳು ಕಲೆಕ್ಷನ್ ಮಾಡ್ಲೇಬೇಕು: ಭಾಸ್ಕರ್ ರಾವ್ ಬೇಸರ

  • ಎರಡನೇ ದಿನಕ್ಕೆ ಪಾದಯಾತ್ರೆ; ರಾಜ್ಯದಿಂದ ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ – ವಿಜಯೇಂದ್ರ ಕಿಡಿ

    ಎರಡನೇ ದಿನಕ್ಕೆ ಪಾದಯಾತ್ರೆ; ರಾಜ್ಯದಿಂದ ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ – ವಿಜಯೇಂದ್ರ ಕಿಡಿ

    ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಭ್ರಷ್ಟ ಕಾಂಗ್ರೆಸ್ (Congress) ಸರ್ಕಾರವು ಹಣವನ್ನು ಲೂಟಿ ಮಾಡಿ, ಸಿದ್ದರಾಮಯ್ಯನವರು (Siddaramaiah) ಮತ್ತು ಡಿ.ಕೆ. ಶಿವಕುಮಾರ್ (DK Shivakumar) ಅವರು ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಟೀಕಿಸಿದರು.

    ಮೈಸೂರು ಚಲೋ (Mysuru Chalo) ಪಾದಯಾತ್ರೆಯ ಎರಡನೇ ದಿನವಾದ ಇಂದು (ಭಾನುವಾರ) ಬಿಡದಿಯಲ್ಲಿ ಪಾದಯಾತ್ರೆಗೆ ಚಾಲನೆ ಕೊಟ್ಟು ಅವರು ಮಾತನಾಡಿದರು. ಪರಿಶಿಷ್ಟ ಜಾತಿ, ಪಂಗಡದ ಪರವಾಗಿ, ಬಡ ಜನರ ಪರವಾಗಿ ಪ್ರಶ್ನಿಸಿದ ವಿಪಕ್ಷಕ್ಕೆ ಉತ್ತರ ಕೊಡಬೇಕಾದ ಆಡಳಿತ ಪಕ್ಷದವರು ವಿಪಕ್ಷಕ್ಕೇ ಮರುಪ್ರಶ್ನೆ ಹಾಕುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: Dengue Alert: ಒಂದು ವರ್ಷದೊಳಗಿನ 10 ಮಕ್ಕಳಿಗೆ ಡೆಂಗ್ಯೂ – ಪ್ರಕರಣಗಳ ಸಂಖ್ಯೆ 19 ಸಾವಿರಕ್ಕೆ ಏರಿಕೆ

    ಮಾನ್ಯ ಮುಖ್ಯಮಂತ್ರಿಯವರೇ, ನೀವು ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಹಿಂದ ಅಭಿವೃದ್ಧಿ ಹೆಸರಿನಿಂದ ಅಧಿಕಾರಕ್ಕೆ ಬಂದಿದ್ದೀರಿ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅವರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದ್ದನ್ನು ಸ್ವತಃ ಮುಖ್ಯಮಂತ್ರಿಗಳಾದ ನೀವೇ ಸದನದಲ್ಲಿ ಒಪ್ಪಿಕೊಂಡಿದ್ದೀರಿ. ವಾಲ್ಮೀಕಿ ನಿಗಮದಲ್ಲಿ ಹಗರಣ ಆದುದನ್ನು ಒಪ್ಪಿಕೊಂಡಿದ್ದೀರಲ್ಲವೇ? ನೀವು ನಮಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ದಲಿತರಿಗೆ ಸೇರಬೇಕಾದ 68 ಎಕರೆ ಜಮೀನನ್ನ ಡಿಕೆಶಿ ಲಪಟಾಯಿಸಿದ್ದಾರೆ – ಹೆಚ್‌ಡಿಕೆ ಬಾಂಬ್‌

    ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅಧಿಕಾರದ ದರ್ಪ, ಅಧಿಕಾರದ ಅಹಂನಿಂದ ಉಪ ಮುಖ್ಯಮಂತ್ರಿಯವರು ಮಾತನಾಡುತ್ತಿದ್ದಾರೆ. ಅವರು ರಾಜ್ಯದ ಜನತೆಗೆ ಉತ್ತರ ಕೊಡಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬಿಡದಿಯಲ್ಲಿರುವ ಟೊಯೊಟಾ ಫ್ಯಾಕ್ಟರಿ ಕೂಡ ಹೊರರಾಜ್ಯಕ್ಕೆ ಹೋಗುವ ಪರಿಸ್ಥಿತಿ ಉದ್ಭವವಾಗಿದೆ. ಹೊಸ ಉದ್ಯಮಗಳು, ಕೈಗಾರಿಕೆಗಳು ನಮ್ಮ ರಾಜ್ಯಕ್ಕೆ ಬರುತ್ತಿಲ್ಲ. ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ನಿಮ್ಮ ದುರಹಂಕಾರದ ನಡವಳಿಕೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಲೂಟಿ ಮಾಡುತ್ತ ಕುಳಿತಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 2ನೇ ದಿನಕ್ಕೆ ಕಾಲಿಟ್ಟ ದೋಸ್ತಿ ನಾಯಕರ ಪಾದಯಾತ್ರೆ; ಇದು ಹಗರಣಗಳ ಕೂಪ ಅಂತ ವಿಜಯೇಂದ್ರ ವಾಗ್ದಾಳಿ

  • ದಲಿತರಿಗೆ ಸೇರಬೇಕಾದ 68 ಎಕರೆ ಜಮೀನನ್ನ ಡಿಕೆಶಿ ಲಪಟಾಯಿಸಿದ್ದಾರೆ – ಹೆಚ್‌ಡಿಕೆ ಬಾಂಬ್‌

    ದಲಿತರಿಗೆ ಸೇರಬೇಕಾದ 68 ಎಕರೆ ಜಮೀನನ್ನ ಡಿಕೆಶಿ ಲಪಟಾಯಿಸಿದ್ದಾರೆ – ಹೆಚ್‌ಡಿಕೆ ಬಾಂಬ್‌

    – ಹೆಣ್ಣುಮಗಳನ್ನ ಕಿಡ್ನ್ಯಾಪ್‌ ಮಾಡಿ ಸೈಟು ಬರೆಸಿಕೊಂಡಿದ್ದೀರಿ
    – ನಂದು, ವಿಜಯೇಂದ್ರದು ಏನಿದೆ ನಿಮ್ಮ ಬಳಿ ಬಿಚ್ಚಿ ಎಂದು ಹೆಚ್‌ಡಿಕೆ ಸವಾಲ್‌

    ಬೆಂಗಳೂರು: ದಲಿತರಿಗೆ (Dalits) ಸೇರಬೇಕಾದ 68 ಎಕರೆ ಜಮೀನನ್ನು ಡಿಸಿಎಂ ಲಪಟಾಯಿಸಿದ್ದಾರೆ. ದಲಿತರಿಗೆ ಸಿಗಬೇಕಾದ ನಿವೇಶನಗಳನ್ನ ಡಿಕೆ ಶಿವಕುಮಾರ್ ಲಪಟಾಯಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಬಾಂಬ್‌ ಸಿಡಿಸಿದ್ದಾರೆ.

    ಪಾದಯಾತ್ರೆ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ದಲಿತರಿಗೆ ಸೇರಬೇಕಾದ 68 ಎಕರೆ ಜಮೀನನ್ನು ಡಿಸಿಎಂ (DCM) ಲಪಟಾಯಿಸಿದ್ದಾರೆ. ದಲಿತರಿಗೆ ಸಿಗಬೇಕಾದ ನಿವೇಶನಗಳನ್ನ ಡಿಕೆ ಶಿವಕುಮಾರ್ ಲಪಟಾಯಿಸಿದ್ದಾರೆ. ಅಸಲಿ ಸೊಸೈಟಿ ನಕಲಿ ಮಾಡಿ ದಲಿತರ ಭೂಮಿ ಲಪಟಾಯಿಸಿದ್ದಾರೆ. ಇವರ ಬಳಿ ನಾನು ಹೇಳಿಸಿಕೊಳ್ಳುವ ಅಗತ್ಯ ಇಲ್ಲ. ನಾನು ಸಿನಿಮಾ ವಿತರಕ ಆಗಿದ್ದಾಗ ಭೂಮಿ ಖರೀದಿಸಿದ್ದೆ. ಯಾರಿಗೂ ಮೋಸ ಮಾಡಲಿಲ್ಲ. ವಂಚನೆ ಮಾಡಿ ಭೂಮಿ ಖರೀದಿಸಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸವಾಲ್‌ ಎಸೆದಿದ್ದಾರೆ.

    ಅದೇನೋ ಬಿಚ್ತೀಯೋ ಬಿಚ್ಚು ನೋಡೋಣ:
    ಹೆಣ್ಣು ಮಗಳೊಬ್ಬಳನ್ನ‌ ಕಿಡ್ನ್ಯಾಪ್‌ ಮಾಡಿ ಬೆದರಿಕೆ ಹಾಕಿದ್ದು ಇವರು. ಆ ಹೆಣ್ಣುಮಗಳ ಕಿಡ್ನ್ಯಾಪ್ ಮಾಡಿ ಬೆದರಿಸಿ ಅವರಪ್ಪನಿಂದ ಸದಾಶಿವನಗರದಲ್ಲಿ ಸೈಟು ಬರೆಸಿಕೊಂಡಿದ್ದೀರಿ. ಅದೇನೋ ಬಿಚ್ತೀನಿ ಅಂದ್ಯಲ್ಲಪ್ಪ, ಬಿಚ್ಚು ನೋಡೋಣ, ನಂದು, ವಿಜಯೇಂದ್ರದು ಏನಿದೆ ನಿಮ್ಮ ಬಳಿ ಬಿಚ್ಚಿ? ನಾನಿರೋದು ಬೀದಿಯಲ್ಲಿ, ನೀನಿರೋದು ಗಾಜಿನ ಮನೆಯಲ್ಲಿ ಎಂದು ಡಿ.ಕೆ ಶಿವಕುಮಾರ್‌ (DK Shivakumar) ವಿರುದ್ಧ ಲೇವಡಿ ಮಾಡಿದ್ದಾರೆ.

    ನಾನು ಬಿಚ್ಚೋಕೆ ಹೋದ್ರೆ ನಿಮ್ಮದು ಪುಟ ಗಟ್ಟಲೆ ಇದೆ. ಅದನ್ನ ತನಿಖೆ ಮಾಡೋದಕ್ಕೆ ಹತ್ತತ್ತು ಸಿಬಿಐ, ಇಡಿ ಸಂಸ್ಥೆಗಳನ್ನ ಸ್ಥಾಪನೆ ಮಾಡ್ಬೇಕು. ಅಜ್ಜಯ್ಯನ ಬಗ್ಗೆ ಶಿವಕುಮಾರ್‌ಗೆ ಭಕ್ತಿ ಗೌರವ ಇದ್ದರೆ ಪ್ರಮಾಣ ಮಾಡಲಿ. ನೀವು ಪ್ರಾಮಾಣಿಕವಾಗಿ ಬೆಳೆದು ಬಂದ್ರಾ ಅಂತ ಪ್ರಮಾಣ ಮಾಡಲಿ. ನಾನೂ ಪ್ರಮಾಣ ಮಾಡ್ತೇನೆ. ಡಿಕೆಶಿಗೆ ಅಜ್ಜಯ್ಯನ ಶಾಪವೂ ಆರಂಭವಾಗಿದೆ. ಎಷ್ಟು ಮನೆಗಳನ್ನು ಒಡೆದು ನೀವು ಬೆಳೆದಿರಿ ಅಂತ ಗೊತ್ತಿದೆ ಎಂದು ಎಚ್ಚರಿಸಿದ್ದಾರೆ.

    ರಾಜ್ಯವನ್ನು ದರಿದ್ರದತ್ತ ತೆಗೆದುಕೊಂಡು ಹೋಗಿದ್ದಾರೆ:
    ಈ ಪಾದಯಾತ್ರೆ ಅಸೂಯೆಯಿಂದ ಹಮ್ಮಿಕೊಂಡಿದ್ದಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಅಂಗಡಿ ಬಾಗಿಲು ತೆರೆದು ಕೂತಿದೆ. ಗ್ಯಾರಂಟಿಗಳಿಂದ ಬದಲಾವಣೆಗಳನ್ನು ತಂದಿದ್ದೇವೆ ಅನ್ಕೊಂಡಿದ್ದೇವೆ. ಆದ್ರೆ ಗ್ಯಾರಂಟಿಗಳಿಂದ ರಾಜ್ಯವನ್ನು ದರಿದ್ರದತ್ತ ತೆಗೆದುಕೊಂಡು ಹೋಗಿದ್ದಾರೆ. ಮಂತ್ರಿಗಳಲ್ಲಿ ಭ್ರಷ್ಟಾಚಾರ ನಡೆಸಲು ಪೈಪೋಟಿ ನಡೀತಿದೆ. ಬಿಜೆಪಿ ಸರ್ಕಾರದಲ್ಲಿ ಅಕ್ರಮ ನಡೆದಿದೆ ಅಂತಾರೆ, ಇವರಿಗೆ ಒಂದೇ ಒಂದು ದಾಖಲೆ ಕೊಡಲು ಆಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಸಿಎಂ ಪತ್ನಿ ಸೈಟು ಪಡೆಯಲು ನಮ್ಮ ವಿರೋಧವಿಲ್ಲ:
    ನಮ್ಮ ಶಾಸಕರು ಇವರ ಅಕ್ರಮದ ಬಗ್ಗೆ ದಾಖಲೆಗಳ ಸಮೇತ ಮಾತಾಡಿದ್ದಾರೆ. ಮೈಸೂರು ನಗರದ ಉಸ್ತುವಾರಿಯನ್ನು ಸಿಎಂ ಅವರೇ ವಹಿಸಿಕೊಂಡಿದ್ದಾರೆ. ಸಿಎಂ ತಮ್ಮ ಪತ್ನಿ ಹೆಸರಲ್ಲಿ 14 ಸೈಟು ಪಡೆಯಲು ನಮ್ಮ ವಿರೋಧ ಇಲ್ಲ. ಆದರೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಸೈಟು ಪಡೆದಿದ್ದಾರೆ. ಇಲ್ಲಿ ನಿಂಗ, ಜವರ, ದೇವರಾಜ, ದಲಿತ ಅನ್ನೋ ಪ್ರಶ್ನೆ ಇಲ್ಲ. ನಕಲಿ ದಾಖಲೆ ಸೃಷ್ಟಿಸಿ 15 ಸೈಟುಗಳನ್ನು ತಗೊಂಡಿದ್ದಾರೆ. ಇದನ್ನು ಸಿಎಂ ಕಾನೂನು ಬಾಹಿರವಾಗಿ ತಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಿದ್ದರಾಮಯ್ಯ ಅವರು ಸರ್ಕಾರದ ಆಸ್ತಿ ಲಪಟಾಯಿಸಿದ್ದಾರೆ. ಇದರ ದಾಖಲೆ ಸದನದಲ್ಲಿ ಇಟ್ಟಿದೀವಿ. ಕಾಂಗ್ರೆಸ್ ನಾಯಕರು ಉತ್ತರ ಕೊಡದೇ ಪಲಾಯನ ಮಾಡಿದ್ದಾರೆ. ಇವರಿಗೆ ಯಾರಿಗಾದರೂ ತಾಕತ್ ಇದ್ರೆ, ಗಟ್ಟಿ ಧ್ವನಿ ಇದ್ದರೇ ಅದು ಕುಮಾರಸ್ವಾಮಿಗೆ ಅಂತ ಡಿಸಿಎಂ ಹೇಳಿದ್ದಾರೆ. ಡಿಸಿಎಂ ಅವರು ಏನು ಪ್ರಶ್ನೆ ಗಳನ್ನು ಹಾಕಿದಾರೋ ಅದಕ್ಕೆ ಉತ್ತರ ಕೊಡಲು ಇಲ್ಲಿದ್ದೇನೆ. ನನ್ನ ಬಗ್ಗೆ, ವಿಜಯೇಂದ್ರ ಬಗ್ಗೆ ಡಿಸಿಎಂ ಏಕವಚನದಲ್ಲಿ ಮಾತಾಡಿದ್ದಾರೆ. ನಾವೂ ಹಳ್ಳಿಯ ಮಕ್ಕಳೇ, ನಿಮಗಿಂತಲೂ ಹೆಚ್ಚಾಗಿ ಏಕವಚನದಲ್ಲಿ ಮಾತಾನಾಡಲು ನಮಗೂ ಗೊತ್ತು. ಆದ್ರೆ ಆ ಕೆಳಮಟ್ಟಕ್ಕೆ ನಾವು ಇಳಿಯಲ್ಲ ಎಂದು ಡಿಕೆಶಿ ವಿರುದ್ಧ ಹೆಚ್‌ಡಿಕೆ ಗುಡುಗಿದ್ದಾರೆ.

    ಕೇತಗಾನಹಳ್ಳಿಯಲ್ಲಿ ನಾನು ಚಲನಚಿತ್ರ ಪ್ರದರ್ಶಕನಾಗಿದ್ದಾಗ ಚುನಾವಣೆಗೆ ನಿಲ್ಲುವ 15 ವರ್ಷಗಳ ಹಿಂದೆ 45 ಎಕರೆ ಜಮೀನು ತಗೊಂಡಿದ್ದೇನೆ. ಇದನ್ನು ನಾನು ಎಲ್ಲೂ ಮುಚ್ಚಿಟ್ಟಿಲ್ಲ ಎಂದು ತಿಳಿಸಿದ್ದಾರೆ.

  • 2ನೇ ದಿನಕ್ಕೆ ಕಾಲಿಟ್ಟ ದೋಸ್ತಿ ನಾಯಕರ ಪಾದಯಾತ್ರೆ; ಇದು ಹಗರಣಗಳ ಕೂಪ ಅಂತ ವಿಜಯೇಂದ್ರ ವಾಗ್ದಾಳಿ

    2ನೇ ದಿನಕ್ಕೆ ಕಾಲಿಟ್ಟ ದೋಸ್ತಿ ನಾಯಕರ ಪಾದಯಾತ್ರೆ; ಇದು ಹಗರಣಗಳ ಕೂಪ ಅಂತ ವಿಜಯೇಂದ್ರ ವಾಗ್ದಾಳಿ

    – ಪಾದಯಾತ್ರೆಗೂ ಮುನ್ನ `ಬಿಡದಿ ತಟ್ಟೆ ಇಡ್ಲಿ’ ಸವಿದ ಬಿಜೆಪಿ ರಾಜ್ಯಾಧ್ಯಕ್ಷ

    ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ವತಿಯಿಂದ ನಡೆಯುತ್ತಿರುವ `ಮೈಸೂರು ಚಲೋ’ (Mysuru Chalo) ಪಾದಯಾತ್ರೆಯು 2ನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನಂದಂತೆಯೇ `ತೊಲಗಲಿ ತೊಲಗಲಿ ಕಾಂಗ್ರೆಸ್ ತೊಲಗಲಿʼ, ʻಧಿಕ್ಕಾರ, ಧಿಕ್ಕಾರ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ, ರಾಜ್ಯ ಸರ್ಕಾರಕ್ಕೆ ಧಿಕ್ಕಾರʼ ಘೋಷಣೆಗಳನ್ನು ಬಿಜೆಪಿ-ಜೆಡಿಎಸ್ ನಾಯಕರು ಮೊಳಗಿಸುತ್ತಿದ್ದಾರೆ.

    ಬೆಳಗ್ಗೆ 9:30ರ ಸುಮಾರಿಗೆ 2ನೇ ದಿನದ ಪಾದಯಾತ್ರೆ ಆರಂಭಗೊಂಡಿದ್ದು, ಬಿಡದಿಯಿಂದ ರಾಮನಗರದ (Ramanagara) ಕೆಂಗಲ್‌ವರೆಗೆ ಅಂದ್ರೆ ಸುಮಾರು 22 ಕಿಮೀ ವರೆಗೆ ಪಾದಯಾತ್ರೆ ಸಾಗಲಿದೆ. ರಾಮನಗರದಲ್ಲಿ ಸಂಜೆ 4 ಗಂಟೆ ವೇಳೆಗೆ ದೋಸ್ತಿ ನಾಯಕರಿಂದ ಸಾರ್ವಜನಿಕ ಸಭೆ ನಡೆಯಲಿದೆ. ಶನಿವಾರ (ಆ.3) ಕೆಂಗೇರಿಯಲ್ಲಿ ಉದ್ಘಾಟನೆಗೊಂಡ ಪಾದಯಾತ್ರೆಯು ಮೊದಲ ದಿನ ಬಿಡದಿವರೆಗೆ ನಡೆದಿತ್ತು.

    ತಟ್ಟೆ ಇಡ್ಲಿ ಸವಿದ ವಿಜಯೇಂದ್ರ
    ಪಾದಯಾತ್ರೆಗೂ ಮುನ್ನ ಬಿಡದಿಯಲ್ಲಿ ಮುಖಂಡರ ಜೊತೆ ವಿಜಯೇಂದ್ರ (BY Vijayendra) ತಟ್ಟೆ ಇಡ್ಲಿ ಸವಿದರು. ಈ ವೇಳೆ ಶಾಸಕರಾದ ಸಿ.ಕೆ ರಾಮಮೂರ್ತಿ, ಎಂ. ಕೃಷ್ಣಪ್ಪ, ಡಿ.ಎಸ್ ಅರುಣ್, ಎನ್. ರವಿಕುಮಾರ್, ಶರಣು ಸಲಗರ, ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಸೇರಿದಂತೆ ಪ್ರಮುಖರು ಉಪಾಹಾರ ಸೇವಿಸಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಪಾದಯಾತ್ರೆ ನೋಡಿ ಆಡಳಿತ ಪಕ್ಷ ಗಾಬರಿಯಾಗಿದೆ. ರಾಜ್ಯದ ಜನರ ಪರ ನಾವು ಸರ್ಕಾರಕ್ಕೆ ಪ್ರಶ್ನೆ ಕೇಳ್ತಿದ್ದೀವಿ. ನಮ್ಮ ಪ್ರಶ್ನೆಗಳಿಗೆ ಅವರಿಬ್ಬರೂ (ಸಿಎಂ, ಡಿಸಿಎಂ) ಉತ್ತರ ಕೊಡಬೇಕು. ಅವರು ಉತ್ತರ ಕೊಡುವ ಬದಲು ಬೆದರಿಕೆ ಹಾಕ್ತಿದ್ದಾರೆ. ಸದನದಲ್ಲೂ ಅವರು ಅಕ್ರಮಗಳ ಬಗ್ಗೆ ಉತ್ತರ ಕೊಡಲಿಲ್ಲ. ಆದರೆ ಉತ್ತರ ಕೊಡೋವರೆಗೂ ನಾವು ಬಿಡಲ್ಲ, ಹೋರಾಟ ಬಿಡಲ್ಲ. ಇದು ಹಗರಣಗಳ ಕೂಪ ಆಗಿದೆ. ಆಡಳಿತ ಪಕ್ಷದ ಪರಿಸ್ಥಿತಿ ಹಾಳಾಗಿದೆ. ಭ್ರಷ್ಟಾಚಾರದಲ್ಲಿ ಎಲ್ಲರೂ ನಿರತರಾಗಿದ್ದಾರೆ. ಪಿಎಸ್‌ಐ ಪರಶುರಾಮ್ ಅವರು ಶಾಸಕರ ಒತ್ತಡದ ಕಾರಣ ಮೃತ ಪಟ್ಟಿದ್ದಾರೆ. ಸ್ಥಳೀಯ ಶಾಸಕ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದೇ ಪರಶುರಾಮ್ ಸಾವಿಗೆ ಕಾರಣ. ಅಷ್ಟೇ ಅಲ್ಲ ನಿರಂತರವಾಗಿ ವರ್ಗಾವಣೆ ದಂಧೆಯೂ ನಡೀತಿದೆ ಎಂದು ಗುಡುಗಿದ್ದಾರೆ.

    ಯತ್ನಾಳ್ ವಿರುದ್ಧ ಶಾಸಕ ಕೃಷ್ಣಪ್ಪ ವಾಗ್ದಾಳಿ:
    ಪಾದಯಾತ್ರೆಗೂ ಮುನ್ನ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಕೃಷ್ಣಪ್ಪ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾದಯಾತ್ರೆ ಬಗ್ಗೆ ನಮ್ಮದೇ ಪಕ್ಷದ ಕೆಲವರು ಟೀಕೆ ಮಾಡ್ತಿದ್ದಾರೆ. ಯತ್ನಾಳ್ ಅವರೇ ಯಾಕೆ ಹೀಗ್ ಮಾಡ್ತೀರಿ? ಪಕ್ಷ ಸಂಘಟನೆಗೆ ಗಮನ ಕೊಡಿ. ಬಿಜೆಪಿ ಸರ್ಕಾರ ಇದ್ದಾಗಲೂ ಮಾತಾಡ್ತಿದ್ರಿ, ಈಗಲೂ ಮಾತಾಡ್ತಿದೀರಿ. ಪಕ್ಷದ ವಿಚಾರ ಯಾಕೆ ಹೀಗೆಲ್ಲ ಮಾತಾಡ್ತೀರಿ. ನಿಮ್ಮ ಕ್ಷೇತ್ರದಲ್ಲೇ ನೀವು ಲೀಡ್ ಕೊಡಿಸೋಕ್ಕೆ ಆಗಲಿಲ್ಲ. ನೀವೇನು ಪಾದಯಾತ್ರೆ ಬಗ್ಗೆ ಮಾತಾಡೋದು? ಮೊದಲು ನಿಮ್ಮ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

  • ಮೈಸೂರು ಚಲೋಗೆ ಭರ್ಜರಿ ಆರಂಭ; ಸಿದ್ದರಾಮಯ್ಯ ವಿರುದ್ಧ ಗುಡುಗಿದ ದೋಸ್ತಿ ನಾಯಕರು

    ಮೈಸೂರು ಚಲೋಗೆ ಭರ್ಜರಿ ಆರಂಭ; ಸಿದ್ದರಾಮಯ್ಯ ವಿರುದ್ಧ ಗುಡುಗಿದ ದೋಸ್ತಿ ನಾಯಕರು

    ಬೆಂಗಳೂರು: ಮೈಸೂರು ಚಲೋ ಪಾದಯಾತ್ರೆಯು ಕರ್ನಾಟಕದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಶಕ್ತಿಯನ್ನು ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದರು.

    ಕೆಂಗೇರಿಯಲ್ಲಿ ಇಂದು ಬಿಜೆಪಿ-ಜೆಡಿಎಸ್ ಸಮನ್ವಯದಲ್ಲಿ ‘ಮೈಸೂರು ಚಲೋ’ ಪಾದಯಾತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾಬಾಸಾಹೇಬ ಡಾ.ಅಂಬೇಡ್ಕರರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಗಾರಿ ಬಾರಿಸುವ ಮೂಲಕ ಪಾದಯಾತ್ರೆಯನ್ನು ಉದ್ಘಾಟನೆ ಮಾಡಲಾಯಿತು. ತೊಲಗಲಿ ತೊಲಗಲಿ ಕಾಂಗ್ರೆಸ್ ತೊಲಗಲಿ.. ಧಿಕ್ಕಾರ, ಧಿಕ್ಕಾರ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಘೋಷಣೆಗಳನ್ನು ಕೂಗಲಾಯಿತು.

    ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ವಚನಭ್ರಷ್ಟವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಅಹಿಂದ ವರ್ಗದವರಿಗೆ ಸಾಮಾಜಿಕ ನ್ಯಾಯ ಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯನವರ ಸರ್ಕಾರವು ಪರಿಶಿಷ್ಟ ಸಮುದಾಯದ ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಲೂಟಿ ಮಾಡಿದೆ ಎಂದು ಟೀಕಿಸಿದರು. ಮೈಸೂರಿನ ಮುಡಾದ ಅವ್ಯವಹಾರದಡಿ ಬಡವರಿಗೆ ನಿವೇಶನಗಳನ್ನು ವಂಚಿಸಿದ್ದಾರೆ. 5 ಸಾವಿರ ಕೋಟಿಯ ಹಗರಣ ಅಲ್ಲಿ ನಡೆದಿದೆ. ಭ್ರಷ್ಟ ಅಧಿಕಾರಿಗಳಿಗೆ ಸ್ವತಃ ಮುಖ್ಯಮಂತ್ರಿಗಳೇ ಬೆಂಬಲ, ರಕ್ಷಣೆ ಕೊಡುತ್ತಿದ್ದಾರೆ. ಭ್ರಷ್ಟಾಚಾರ ತಮ್ಮ ಬುಡಕ್ಕೆ ಬರುವ ಆತಂಕದಿಂದ ಮುಖ್ಯಮಂತ್ರಿಗಳೇ ಅಧಿಕಾರಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

    ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ ನೀಡಲು ಎಟಿಎಂ ಸರ್ಕಾರ ಬರುತ್ತಿದೆ ಎಂದು ಚುನಾವಣೆ ವೇಳೆ ಹೇಳಿದ್ದೆವು. ಮುಡಾ ಹಗರಣ ನಡೆದುದಾಗಿ ಸಿದ್ದರಾಮಯ್ಯನವರೇ ನೇಮಿಸಿದ ಮುಡಾ ಅಧ್ಯಕ್ಷ ಮರಿಗೌಡರೇ ಹೇಳಿದ್ದಾರೆ. ಪರಿಶಿಷ್ಟ ಸಮುದಾಯಕ್ಕೆ ನಿರಂತರ ಅನ್ಯಾಯ ಮಾಡಿದ್ದಾರೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್ ಪಕ್ಷ. ಅಂಥ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತು ಹಾಕಲಿದ್ದೇವೆ ಎಂದು ವಿಜಯೇಂದ್ರ ಪ್ರಕಟಿಸಿದರು. ಕಾಂಗ್ರೆಸ್ಸಿಗರು ಬಿಜೆಪಿಯ ಭ್ರಷ್ಟಾಚಾರದ ಕಟ್ಟು ಕಥೆ ಹೇಳುತ್ತಿದೆ. ನಮಗೆ ಧಮ್ಕಿ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಲಿದ್ದೇವೆ. ಸಿದ್ದರಾಮಯ್ಯನವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ. ನಮ್ಮ ಹೋರಾಟ ವ್ಯಕ್ತಿಯ ವಿರುದ್ಧ ಅಲ್ಲ. ಭ್ರಷ್ಟ ವ್ಯವಸ್ಥೆ ವಿರುದ್ಧ. ಬಡವರ ವಿರೋಧಿ ನೀತಿ ವಿರುದ್ಧ ಹೋರಾಟ ಇದು. ಇದೊಂದು ರಣಕಹಳೆ ಎಂದು ಸ್ಪಷ್ಟಪಡಿಸಿದರು.

    ಬಿಜೆಪಿ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಭ್ರಷ್ಟಾಚಾರದಲ್ಲಿ ಸಿಲುಕಿದ ಸಿದ್ದರಾಮಯ್ಯನವರು ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿರ್ಗಮಿಸಲಿ ಎಂದು ಒತ್ತಾಯಿಸಿದರು. ಈ ಪಾದಯಾತ್ರೆ ಮಧ್ಯದಲ್ಲೇ ಸಿದ್ದರಾಮಯ್ಯನವರು ರಾಜೀನಾಮೆ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕುಂಟುನೆಪ ಬೇಡ. ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ರಚನೆವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ವಿಜಯೇಂದ್ರ ತಿಳಿಸಿದರು.

    ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಇನ್ನು 10 ವರ್ಷ ಬಿಡಿ, 10 ತಿಂಗಳು ಕೂಡ ಅವರು ಆಡಳಿತ ನಡೆಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಸರ್ಕಾರವು ಆಡಳಿತದಲ್ಲಿ ಹಿಂದೆಂದೂ ಕಾಣದ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಸರ್ಕಾರ, ಸಿದ್ದರಾಮಯ್ಯನವರನ್ನು ಕಿತ್ತೊಗೆಯಲು ಈ ಪಾದಯಾತ್ರೆ ಮಾಡುತ್ತಿದ್ದೇವೆ. ವಾಲ್ಮೀಕಿ ನಿಗಮ, ಮುಡಾ ಹಗರಣ ಸಿದ್ದರಾಮಯ್ಯನವರ ಗಮನಕ್ಕೆ ಬಾರದೆ ನಡೆದಿದೆಯೇ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಕೆಂಪಣ್ಣ ಆಯೋಗದ ಮುಚ್ಚಿಟ್ಟ ಪುಸ್ತಕವನ್ನು ತೆರೆದಿಡಲು ಒತ್ತಾಯಿಸಿದರು.

    ಪಾದಯಾತ್ರೆ ತಡೆಯಲು ಕಾಂಗ್ರೆಸ್ಸಿನವರು ಬಿಡದಿಯಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ನಮ್ಮ ಆಸ್ತಿ ಕುರಿತ ಕಾಂಗ್ರೆಸ್ಸಿನ ಅಧ್ಯಕ್ಷರ ಪ್ರಶ್ನೆಗಳಿಗೆ ಬಿಡದಿಯಲ್ಲಿ ಉತ್ತರ ಕೊಡುತ್ತೇನೆ. ಅವರ ಅಕ್ರಮಗಳನ್ನೂ ತಿಳಿಸುತ್ತೇನೆ ಎಂದು ತಿಳಿಸಿದರು. ಜೈಲಿಗೆ ಹೋಗಲು ಸಿದ್ಧನಾಗಿದ್ದೇನೆ ಎಂದು ಶಿವಕುಮಾರ್ ಅವರೇ ಹೇಳಿದ್ದಾರೆ. ರಾಜಕೀಯಕ್ಕೆ ಬರುವ ಮೊದಲು ಶಿವಕುಮಾರರ ಆಸ್ತಿ ಹಿಂದೆ ಎಷ್ಟಿತ್ತು? ಒಂದು ಬ್ಲ್ಯಾಕ್‌ ಆಂಡ್ ವೈಟ್ ಟಿವಿ, ಡಿವಿಡಿ ಇದ್ದುದನ್ನು ಅವರ ಗುರುಗಳೇ ಹೇಳಿದ್ದಾರೆ. ಅದರ ಮೂಲಕ ಏನನ್ನು ಪ್ರದರ್ಶನ ಮಾಡಿದ್ದರು ಎಂದು ಪ್ರಶ್ನಿಸಿದರು. ಅದರಿಂದ ಸಾವಿರಾರು ಕೋಟಿ ಪಡೆದರೇ ಎಂದು ಕೇಳಿದರು. ಸಂವಿಧಾನ ಕೊಟ್ಟ ಹಕ್ಕುಗಳನ್ನು ಮೋದಿಯವರು ಜನತೆಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು. ಡಾ.ಪರಮೇಶ್ವರ್ ಅವರು ಯಾದಗಿರಿಯಲ್ಲಿ ಪೊಲೀಸ್ ಅಧಿಕಾರಿ ಸಾವಿನ ಬಗ್ಗೆ, ಅಧಿಕಾರಿಯ ಪತ್ನಿಯ ಆರೋಪಕ್ಕೆ ಉತ್ತರಿಸಬೇಕಿದೆ ಎಂದು ಆಗ್ರಹಿಸಿದರು.

    ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರವಾಲ್ ಮಾತನಾಡಿ, ರಾಹುಲ್ ಗಾಂಧಿಯವರ ಸೂಚನೆಯಂತೆ ಈ ಹಗರಣ ನಡೆದಿದೆ. ಹಣವನ್ನು ಹೈಕಮಾಂಡಿಗೆ ಕಳುಹಿಸಲಾಗಿದೆ. ಚುನಾವಣಾ ಭ್ರಷ್ಟಾಚಾರಕ್ಕೆ ಹಣ ಬಳಸಿದ್ದಾರೆ. ಡಿ.ಕೆ.ಶಿವಕುಮಾರ್ ಕೂಡ ಭ್ರಷ್ಟರು. ಅವರ ಅಕ್ರಮ ಹಣ ಈ ಹಿಂದೆ ಸಿಕ್ಕಿತ್ತು ಎಂದು ವಿವರಿಸಿದರು. ಸರ್ಕಾರಕ್ಕೆ ನೋಟಿಸ್ ಕೊಟ್ಟ ರಾಜ್ಯಪಾಲರಿಗೆ ಧನ್ಯವಾದ ಸಲ್ಲಿಸಿದರು.

    ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಮಾತನಾಡಿ, ಇದು ಜನರ ಪಾದಯಾತ್ರೆ. ವಿಜಯೇಂದ್ರ-ಕುಮಾರಸ್ವಾಮಿ ಅವರು ಕೃಷ್ಣಾರ್ಜುನರಂತೆ ಇದನ್ನು ಮುನ್ನಡೆಸುತ್ತಿದ್ದಾರೆ. ಕಾಂಗ್ರೆಸ್ ಎಂದರೆ ಭ್ರಷ್ಟರ ಸರ್ಕಾರ, ಸುಳ್ಳರ ಸರ್ಕಾರ ಎಂದು ಟೀಕಿಸಿದರು. ಸಂವಿಧಾನವನ್ನು ಅವಮಾನ ಮಾಡಿದ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ಕೊಡಬೇಕಿದೆ ಎಂದು ಆಗ್ರಹಿಸಿದರು.

    ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಕಾಂಗ್ರೆಸ್ಸಿನ ಡಿಎನ್‌ಎಯಲ್ಲೇ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ದೇಶದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿತ್ತು. ಆದರೆ, ವಾಜಪೇಯಿ, ನರೇಂದ್ರ ಮೋದಿಯವರ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪಗಳಿಲ್ಲ ಎಂದರು. ಕಲ್ಲಿದ್ದಲು, 2 ಜಿ ಸೇರಿ ಅನೇಕ ಹಗರಣಗಳು ಆಗ ನಡೆದಿದ್ದವು. ಈಗ ಸಿದ್ದರಾಮಯ್ಯನವರು ಇಂಥ ಹಗರಣಗಳನ್ನು ಮುಂದುವರೆಸಿದ್ದಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯನವರೇ ಈ ಹಗರಣ ನಿಮ್ಮ ಕೈಯಿಂದಲೇ ನಡೆದಿದೆ. ಭ್ರಷ್ಟತನ ಮುಚ್ಚಿಹಾಕಲು ರಾಜ್ಯಪಾಲರನ್ನು ಬೆದರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದ ಅವರು, ಕಾಂಗ್ರೆಸ್ ಹೈಕಮಾಂಡ್ ಕೂಡ ಇದರಲ್ಲಿ ಪಾಲುದಾರಿಕೆ ಪಡೆದಿದೆ ಎಂದು ಆಕ್ಷೇಪಿಸಿದರು.

    ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ನಾವು ನಿಲುವಳಿ ಸೂಚನೆ ಮೂಲಕ ಮುಡಾ ಹಗರಣದ ವಿವರ ಕೇಳಿದ್ದೆವು. ಮುಡಾದಲ್ಲಿ 3ರಿಂದ 4 ಸಾವಿರ ಕೋಟಿಯ ಹಗರಣ ಆಗಿದೆ ಎಂದು ಅವರ ಪಕ್ಷದವರೇ ಹೇಳಿದ್ದಾರೆ. ವಿಪಕ್ಷದ ಹೋರಾಟದ ಹಕ್ಕನ್ನು ಮುಂದಿಟ್ಟು ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ದಲಿತ ವ್ಯಕ್ತಿಯ ಜಮೀನು ನುಂಗಿದ್ದಾರೆ. ಸಿದ್ದರಾಮಯ್ಯನವರು ತಪ್ಪು ಮಾಡದೆ ಇದ್ದರೆ ಅವರ‍್ಯಾಕೆ ರಾಜ್ಯಪಾಲರನ್ನು ಪ್ರಶ್ನಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಒಂದು ನೋಟಿಸ್‌ಗೇ ಕಾಂಗ್ರೆಸ್ಸಿಗರು ಗಡಗಡ ನಡುಗುತ್ತಿದ್ದಾರೆ ಎಂದರು. ಕಾಂಗ್ರೆಸ್ ಇವತ್ತು ಒಡೆದ ಮನೆಯಾಗಿದೆ ಎಂದು ಲೇವಡಿ ಮಾಡಿದರು.

  • ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ದೋಸ್ತಿಗಳ ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ

    ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ದೋಸ್ತಿಗಳ ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ

    ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆಗೆ ಆಗ್ರಹಿಸಿ ಇಂದಿನಿಂದ ದೋಸ್ತಿಗಳು (BJP_JDS) ಮೈಸೂರು ಚಲೋ (Mysuru Chalo) ಆರಂಭಿಸಿದ್ದಾರೆ.

    ಬೆಂಗಳೂರಿನ ಕೆಂಗೇರಿ ಬಳಿ ಕೆಂಪಮ್ಮ ದೇವಸ್ಥಾನದ ಬಳಿ ನಗಾರಿ ಬಾರಿಸುವ ಮೂಲಕ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ (BS Yediyurappa) ಮತ್ತು ಮಾಜಿ ಸಿಎಂ, ಕೇಂದ್ರ ಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಪಾದಯಾತ್ರೆಗೆ ಚಾಲನೆ ನೀಡಿದರು. ಇದನ್ನೂ ಓದಿ: ಮುಡಾ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಬಿಎಸ್‌ವೈ

    ಹೆಚ್‌ಡಿಕೆ ಮಾತನಾಡಿ, ಇದು ಜನವಿರೋಧಿ ಸರ್ಕಾರವಾಗಿದ್ದು ಮುಡಾ, ವಾಲ್ಮೀಕಿ ಪ್ರಕರಣ ಬಯಲಿಗೆ ಬಂದಿದೆ. ಜನರ ಆಸ್ತಿಗಳನ್ನು ನುಂಗಿದ ಸರ್ಕಾರದ ವಿರುದ್ಧ ನಾವು ಜನಾಂದೋಲನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ದೇವೇಗೌಡರ ಕುಟುಂಬದಿಂದ ನೈಸ್ ಸುತ್ತಮುತ್ತ ಅಕ್ರಮ ಆಸ್ತಿ ಎಂಬ ಡಿಕೆ ಶಿವಕುಮಾರ್‌ (DK Shivakumar) ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಅವರ ಕೈಯಲ್ಲೇ ಇದೆ. ನಾವು ಅಕ್ರಮವಾಗಿ ಆಸ್ತಿ ಮಾಡಿದರೆ ಸರ್ಕಾರ ವಶಪಡಿಸಿಕೊಳ್ಳಲಿ. ಸರ್ಕಾರ ಅವರದ್ದೇ ಇದೆ, ಮುಟ್ಟುಗೋಲು ಹಾಕಿಕೊಳ್ಳಲಿ. ನಾವು ನ್ಯಾಯ ಬದ್ಧವಾಗಿ ಬದುಕಿದ್ದೇವೆ, ಇವರ ಥರ ಬದುಕಿಲ್ಲ. ಶಿವಕುಮಾರ್‌ ಬಿಡದಿಯಲ್ಲಿ ಆರೋಪ ಮಾಡಿದ್ದಾರೆ. ಅವರಿಗೆ ನಾನು ಬಿಡದಿಯಲ್ಲೇ ಉತ್ತರ ನೀಡುತ್ತೇನೆ ಎಂದು ತಿರುಗೇಟು ನೀಡಿದರು.

     

    ಇಂದಿನಿಂದ ಆಗಸ್ಟ್ 10 ರವರೆಗೆ ಏಳು ದಿನಗಳ ಕಾಲ ಒಟ್ಟು 124 ಕಿಮೀವರೆಗೆ ಪಾದಯಾತ್ರೆ ನಡೆದು ಮುಡಾ ಕಚೇರಿಯಲ್ಲಿ ಕೊನೆಯಾಗಲಿದೆ. ಕೊನೆಯ ದಿನದಂದು ಮೈಸೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವು ನಾಯಕರು ಭಾಗಿಯಾಗುವ ಸಾಧ್ಯತೆಯಿದೆ.

    ಮೈತ್ರಿ ಪಾದಯಾತ್ರೆಯ ಹಾದಿ
    * ಆ.3 – ಕೆಂಗೇರಿಯಲ್ಲಿ ಆರಂಭ. ಬಿಡದಿಯಲ್ಲಿ ವಾಸ್ತವ್ಯ
    * ಆ.4 – ಬಿಡದಿಯಲ್ಲಿ ಆರಂಭ. ಕೆಂಗಲ್‌ನಲ್ಲಿ ವಾಸ್ತವ್ಯ
    * ಆ.5 – ಕೆಂಗಲ್‌ನಲ್ಲಿ ಆರಂಭ. ನಿಡಘಟ್ಟದಲ್ಲಿ ವಾಸ್ತವ್ಯ
    * ಆ.6 – ನಿಡಘಟ್ಟದಲ್ಲಿ ಆರಂಭ. ಮಂಡ್ಯದಲ್ಲಿ ವಾಸ್ತವ್ಯ
    * ಆ.7 – ಮಂಡ್ಯದಲ್ಲಿ ಆರಂಭ. ತೂಬಿನಕೆರೆಯಲ್ಲಿ ವಾಸ್ತವ್ಯ
    * ಆ.8 – ತೂಬಿನಕೆರೆಯಲ್ಲಿ ಆರಂಭ. ಶ್ರೀರಂಗಪಟ್ಟಣದಲ್ಲಿ ವಾಸ್ತವ್ಯ
    * ಆ.9 – ಶ್ರೀರಂಗಪಟ್ಟಣದಲ್ಲಿ ಆರಂಭ. ಮೈಸೂರು ಹೊರವಲಯದಲ್ಲಿ ವಾಸ್ತವ್ಯ
    * ಆ.10 – ಮೈಸೂರು ಹೊರವಲಯದಲ್ಲಿ ಆರಂಭ. ವೇದಿಕೆಯಲ್ಲಿ ಅಂತ್ಯ

  • ಇಂದಿನಿಂದ ಮೈಸೂರಿಗೆ ದೋಸ್ತಿ ಪಾದಯಾತ್ರೆ – ಯಾವ ದಿನ ಎಲ್ಲಿ ವಾಸ್ತವ್ಯ?

    ಇಂದಿನಿಂದ ಮೈಸೂರಿಗೆ ದೋಸ್ತಿ ಪಾದಯಾತ್ರೆ – ಯಾವ ದಿನ ಎಲ್ಲಿ ವಾಸ್ತವ್ಯ?

    ಬೆಂಗಳೂರು: ಇಂದಿನಿಂದ ರಾಜ್ಯ ರಾಜಕೀಯ ಇನ್ನಷ್ಟು ಕಾವೇರಲಿದೆ. ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ತಲೆದಂಡಕ್ಕೆ ಆಗ್ರಹಿಸಿ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಜಂಟಿಯಾಗಿ ಮೈಸೂರು ಚಲೋ (Mysuru Chalo) ಪಾದಯಾತ್ರೆ ಹಮ್ಮಿಕೊಂಡಿದೆ. ಇಂದು ಬೆಳಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy), ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ (Yediyurappa) ಜಂಟಿಯಾಗಿ ಕೆಂಗೇರಿಯ ಕೆಂಪಮ್ಮ ದೇವಾಲಯದಲ್ಲಿ ಚಾಲನೆ ನೀಡಲಿದ್ದಾರೆ.

    ಎಂಟು ದಿನದಲ್ಲಿ 124 ಕಿಲೋಮೀಟರ್ ಪಾದಯಾತ್ರೆ ನಡೆಸಲು ಯೋಜನೆ ರೂಪಿಸಲಾಗಿದೆ. ಪಾದಯಾತ್ರೆಗೆ ಜೆಡಿಎಸ್ ಯಾವುದೇ ಷರತ್ತು ಹಾಕಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಈ ಪಾದಯಾತ್ರೆಗೆ ಸರ್ಕಾರ ಕೂಡ ಅನುಮತಿ ನೀಡಿದೆ. ಇದನ್ನೂ ಓದಿ: ಯಾದಗಿರಿ ಶಾಸಕರಿಂದ ಪೋಸ್ಟಿಂಗ್‌ಗೆ 30 ಲಕ್ಷ ರೂ ಬೇಡಿಕೆ? – ಪಿಎಸ್‌ಐ ಸಾವಿನ ಸುತ್ತ ಅನುಮಾನದ ಹುತ್ತ

    ಮೈತ್ರಿ ಪಾದಯಾತ್ರೆಯ ಹಾದಿ
    * ಆ.3 – ಕೆಂಗೇರಿಯಲ್ಲಿ ಆರಂಭ. ಬಿಡದಿಯಲ್ಲಿ ವಾಸ್ತವ್ಯ
    * ಆ.4 – ಬಿಡದಿಯಲ್ಲಿ ಆರಂಭ. ಕೆಂಗಲ್‌ನಲ್ಲಿ ವಾಸ್ತವ್ಯ
    * ಆ.5 – ಕೆಂಗಲ್‌ನಲ್ಲಿ ಆರಂಭ. ನಿಡಘಟ್ಟದಲ್ಲಿ ವಾಸ್ತವ್ಯ
    * ಆ.6 – ನಿಡಘಟ್ಟದಲ್ಲಿ ಆರಂಭ. ಮಂಡ್ಯದಲ್ಲಿ ವಾಸ್ತವ್ಯ
    * ಆ.7 – ಮಂಡ್ಯದಲ್ಲಿ ಆರಂಭ. ತೂಬಿನಕೆರೆಯಲ್ಲಿ ವಾಸ್ತವ್ಯ
    * ಆ.8 – ತೂಬಿನಕೆರೆಯಲ್ಲಿ ಆರಂಭ. ಶ್ರೀರಂಗಪಟ್ಟಣದಲ್ಲಿ ವಾಸ್ತವ್ಯ
    * ಆ.9 – ಶ್ರೀರಂಗಪಟ್ಟಣದಲ್ಲಿ ಆರಂಭ. ಮೈಸೂರು ಹೊರವಲಯದಲ್ಲಿ ವಾಸ್ತವ್ಯ
    * ಆ.10 – ಮೈಸೂರು ಹೊರವಲಯದಲ್ಲಿ ಆರಂಭ. ವೇದಿಕೆಯಲ್ಲಿ ಅಂತ್ಯ ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಜಂಟಿ ಪಾದಯಾತ್ರೆಗೆ ಹೈಕೋರ್ಟ್ ಗ್ರೀನ್‌ ಸಿಗ್ನಲ್