Tag: ಮೈಸೂರು-ಕೊಡಗು

  • ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯ 3ನೇ ಪ್ಯಾಕೇಜ್‌ಗೆ ಕೇಂದ್ರ ಅನುಮೋದನೆ

    ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯ 3ನೇ ಪ್ಯಾಕೇಜ್‌ಗೆ ಕೇಂದ್ರ ಅನುಮೋದನೆ

    ಮಡಿಕೇರಿ: ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ (Mysuru Kushalnagar Highway) ಯೋಜನೆಯ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ಯಾಕೇಜ್-3 ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದೆ.

    2023ರ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಈ ಹೆದ್ದಾರಿ ನಿರ್ಮಾಣಕ್ಕೆ ವರ್ಚುವಲ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗಾಗಲೇ ಡಿಪಿಆರ್ ಅನ್ವಯ ಭೂಸ್ವಾಧೀನ ಪ್ರಕ್ರಿಯೆ ಮತ್ತು ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದೀಗ 3ನೇ ಹಂತದ ಪ್ಯಾಕೇಜ್‌ಗೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ. ಈ ಮಾಹಿತಿಯನ್ನು ಮೈಸೂರು ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Wadiyar) ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಇದು ನಮ್ಮ ಪ್ರದೇಶಕ್ಕೆ ಒಂದು ಪ್ರಮುಖ ಮೈಲಿಗಲ್ಲು, ವಿಶೇಷವಾಗಿ ಯೋಜನೆಯು ವರ್ಷಗಳಲ್ಲಿ ಎದುರಿಸಿದ ಹಲವು ವಿಳಂಬಗಳ ನಂತರ ಯಶಸ್ವಿಯಾಗಿದೆ. ಗೌರವಾನ್ವಿತ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಜೀ ಅವರೊಂದಿಗಿನ ನನ್ನ ಇತ್ತೀಚಿನ ಸಭೆಯಲ್ಲಿ, ಈ ಯೋಜನೆಯ ಸುತ್ತಲಿನ ಸವಾಲುಗಳು ಮತ್ತು ಸಮಸ್ಯೆಗಳನ್ನು ವೈಯಕ್ತಿಕವಾಗಿ ಪ್ರಸ್ತುತಪಡಿಸಲು ನನಗೆ ಅವಕಾಶ ಸಿಕ್ಕಿತು. ಅವರು ತ್ವರಿತ ಕ್ರಮ ಕೈಗೊಳ್ಳುವುದಾಗಿ ನನಗೆ ಭರವಸೆ ನೀಡಿದ್ದರು, ಭರವಸೆ ನೀಡಿದಂತೆ ಈಗ ಅನುಮತಿ ನೀಡಿದ್ದಾರೆ .

    ಈ ಹೆದ್ದಾರಿ ಯೋಜನೆಯು ಸಂಪರ್ಕವನ್ನು ಹೆಚ್ಚಿಸುವಲ್ಲಿ, ಪ್ರಯಾಣವನ್ನು ಸುಗಮಗೊಳಿಸುವಲ್ಲಿ ಮತ್ತು ಮೈಸೂರು ಮತ್ತು ಕೊಡಗಿನ ಆರ್ಥಿಕ ಮತ್ತು ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಬಹಳ ಮಹತ್ವದ್ದಾಗಿದೆ. ನಮ್ಮ ಜನರ ಪ್ರಯೋಜನಕ್ಕಾಗಿ ಇಂತಹ ಪ್ರಗತಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ನಾನು ಸಂಪೂರ್ಣವಾಗಿ ಬದ್ಧನಾಗಿರುತ್ತೇನೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

    ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಪೂರ್ಣ:
    ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿ ಪ್ರಾರಂಭಿಸಲು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ. 2ನೇ ಹಂತದ ಕಾಮಗಾರಿಗೆ ಶೇ.84 ರಷ್ಟು, 3ನೇ ಹಂತದ ಕಾಮಗಾರಿಗೆ ಶೇ.80 ರಷ್ಟು, 4ನೇ ಹಂತದ ಕಾಮಗಾರಿಗೆ ಶೇ.70 ರಷ್ಟು ಮತ್ತು 5ನೇ ಹಂತದ ಕಾಮಗಾರಿಗೆ ಶೇ.84 ರಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಪಿರಿಯಾಪಟ್ಟಣ ಮತ್ತು ಕುಶಾಲನಗರ ನಡುವಿನ ರಸ್ತೆ ಅಗಲೀಕರಣ ಚಟುವಟಿಕೆಗಳಿಗೆ ಅರಣ್ಯ ಇಲಾಖೆಯಿಂದ ಅನುಮಯಿ ಪಡೆಯಬೇಕಿದೆ ಎಂದು ಮೂಲಗಳು ತಿಳಿಸಿವೆ.

    ಮಹತ್ವಕಾಂಕ್ಷಿ ಯೋಜನೆಯಾದ ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯು 2027ರ ಜೂನ್‌ ತಿಂಗಳ ಒಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದ್ದಾರೆ.

  • ಮೈಸೂರು-ಕೊಡಗು ಲೋಕ ಅಖಾಡ: ದೋಸ್ತಿ, ಬಿಜೆಪಿ ಸಮೀಕ್ಷೆಯಲ್ಲಿ ಯಾರಿಗೆ ಮುನ್ನಡೆ?

    ಮೈಸೂರು-ಕೊಡಗು ಲೋಕ ಅಖಾಡ: ದೋಸ್ತಿ, ಬಿಜೆಪಿ ಸಮೀಕ್ಷೆಯಲ್ಲಿ ಯಾರಿಗೆ ಮುನ್ನಡೆ?

    ಬೆಂಗಳೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದೋಸ್ತಿಗಳಿಗೆ ಆಂತರಿಕ ಕಲಹಕ್ಕೆ ಸಾಕ್ಷಿಯಾಗಿತ್ತು. ಕೊನೆ ಕ್ಷಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರವನ್ನು ಕೈ ವಶ ಮಾಡಿಕೊಂಡು, ಆಪ್ತ ವಿಜಯ್ ಶಂಕರ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇತ್ತ ಬಿಜೆಪಿಯಿಂದ ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ ಎರಡನೇ ಬಾರಿ ಕಣಕ್ಕಿಳಿದಿದ್ದಾರೆ. ಹಾಗಾಗಿ ಮೈಸೂರು-ಕೊಡಗು ಹಲವು ಚುನಾವಣಾ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತು.

    ಚುನಾವಣೆ ಅಂತ್ಯಗೊಂಡು ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರ ಪೆಟ್ಟಿಗೆಯಲ್ಲಿ ಭದ್ರವಾಗಿ ಸ್ಟ್ರಾಂಗ್ ರೂಮ್ ಸೇರಿಕೊಂಡಿದೆ. ಇತ್ತ ಎರಡೂ ಪಕ್ಷಗಳು ಖಾಸಗಿ ಏಜೆನ್ಸಿಗಳ ಮೂಲಕ ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದ್ದು, ಸರ್ವೆಯ ಅಂಕಿ ಅಂಶಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ದೋಸ್ತಿ ಲೆಕ್ಕ: ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿ ನಡೆಸಿರುವ ಸಮೀಕ್ಷೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ದಾಖಲಿಸುತ್ತಾರೆ. ವಿಜಯ್ ಶಂಕರ್ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಅಲ್ಪ ಹಿನ್ನಡೆ ಕಂಡರೂ ಗೆಲುವು ದಾಖಲಿಸುತ್ತಾರೆ. ಮಡಿಕೇರಿಯಲ್ಲಿ 6 ಸಾವಿರ, ವಿರಾಜಪೇಟೆಯಲ್ಲಿ 10 ಸಾವಿರ, ಚಾಮುಂಡೇಶ್ವರಿಯಲ್ಲಿ 9 ಸಾವಿರ, ಕೃಷ್ಣರಾಜದಲ್ಲಿ 16 ಸಾವಿರ ಮತ್ತು ಚಾಮರಾಜದಲ್ಲಿ 12 ಸಾವಿರ ಮತಗಳ ಹಿನ್ನಡೆಯನ್ನು ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಕಾಣಲಿದ್ದಾರೆ. ಉಳಿದ ಕ್ಷೇತ್ರಗಳಾದ ಪಿರಿಯಾಪಟ್ಟಣದಲ್ಲಿ 24 ಸಾವಿರ, ಹುಣಸೂರು 26 ಸಾವಿರ ಮತ್ತು ನರಸಿಂಹರಾಜದಲ್ಲಿ 46 ಸಾವಿರ ಮತಗಳ ಅಂತರ ಕಾಯ್ದುಕೊಂಡು ಒಟ್ಟಾರೆಯಾಗಿ 43 ಸಾವಿರ ಮತಗಳ ಲೀಡ್‍ನಿಂದ ವಿಜಯ್ ಶಂಕರ್ ಗೆಲ್ಲುತ್ತಾರೆ ಎಂದು ದೋಸ್ತಿ ಸಮೀಕ್ಷೆ ಹೇಳುತ್ತಿದೆ.

    ಬಿಜೆಪಿ ಲೆಕ್ಕ: ಕಮಲ ನಾಯಕರ ಸಮೀಕ್ಷೆ ಪ್ರತಾಪ್ ಸಿಂಹ ಗೆಲುವು ಪಡೆಯಲಿದ್ದಾರೆ ಎಂದು ಹೇಳಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಲಿದ್ದಾರೆ. ಪಿರಿಯಾಪಟ್ಟಣದಲ್ಲಿ 25 ಸಾವಿರ, ಹುಣಸೂರಿನಲ್ಲಿ 25 ಸಾವಿರ ಮತ್ತು ನರಸಿಂಹಹರಾಜ ಕ್ಷೇತ್ರದಲ್ಲಿ 50 ಸಾವಿರ ಮತಗಳ ಹಿನ್ನಡೆಯನ್ನು ಪ್ರತಾಪ್ ಸಿಂಹ ಹೊಂದಲಿದ್ದಾರೆ. ಉಳಿದಂತೆ ಮಡಿಕೇರಿಯಲ್ಲಿ 70 ಸಾವಿರ, ವಿರಾಜಪೇಟೆಯಲ್ಲಿ 30 ಸಾವಿರ, ಚಾಮುಂಡೇಶ್ವರಿಯಲ್ಲಿ 20 ಸಾವಿರ, ಕೃಷ್ಣರಾಜದಲ್ಲಿ 19 ಸಾವಿರ, ಚಾಮರಾಜದಲ್ಲಿ 20 ಸಾವಿರ ಮುನ್ನಡೆ ಪಡೆದು ಅಂದಾಜು 65 ಸಾವಿರ ಮತಗಳ ಅಂತರದಿಂದ ಪ್ರತಾಪ್ ಸಿಂಹ ಗೆಲುವು ಕಾಣುತ್ತಾರೆ ಎಂದು ಬಿಜೆಪಿ ಸಮೀಕ್ಷೆ ತಿಳಿಸಿದೆ

  • ಮೈಸೂರು ಅಖಾಡ ಹೇಗಿದೆ? ಪ್ರತಾಪ್ ಸಿಂಹ, ವಿಜಯ ಶಂಕರ್ ಪ್ಲಸ್, ಮೈನಸ್ ಏನು?

    ಮೈಸೂರು ಅಖಾಡ ಹೇಗಿದೆ? ಪ್ರತಾಪ್ ಸಿಂಹ, ವಿಜಯ ಶಂಕರ್ ಪ್ಲಸ್, ಮೈನಸ್ ಏನು?

    ಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದರೂ ಸಹ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿಲ್ಲ. ಜನತಾದಳವೂ ಗೆದ್ದಿಲ್ಲ. ಒಟ್ಟು 16 ಚುನಾವಣೆಗಳು ನಡೆದಿದ್ದು, ಇಲ್ಲಿ ಕಾಂಗ್ರೆಸ್ 13 ಸಲ, ಬಿಜೆಪಿ 3 ಸಲ ಗೆದ್ದಿದೆ. ಗುರುಪಾದಸ್ವಾಮಿ, ಹೆಚ್.ಡಿ.ತುಳಸಿದಾಸಪ್ಪ, ಎಂ.ರಾಜಶೇಖರಮೂರ್ತಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಹೆಚ್.ವಿಶ್ವನಾಥ್ ಘಟಾನುಘಟಿ ನಾಯಕರು ಸಂಸದರಾಗಿದ್ದ ಕ್ಷೇತ್ರ ಇದು. ನಾಲ್ಕು ಬಾರಿ ಈ ಕೇತ್ರದಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗೆದ್ದಿದ್ದಾರೆ. ದೇವರಾಜ ಅರಸು ಪುತ್ರಿ ಚಂದ್ರಪ್ರಭಾ ಅರಸ್ ಅವರು ಈ ಕ್ಷೇತ್ರದಿಂದ 1991ರಲ್ಲಿ ಗೆದ್ದಿದ್ರು.

    ಈಗ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲೀಗ ಆಗ್ನಿ ಪರೀಕ್ಷೆ ಎದುರಾಗಿದ್ದು, ಕಾಳಗ ಜೋರಾಗಿಯೇ ಇದೆ. ಇಡೀ ಕ್ಷೇತ್ರದಲ್ಲಿ ಜಾತಿಯೇ ದೊಡ್ಡ ಟ್ರಂಪ್ ಕಾರ್ಡ್. ಅದರಲ್ಲೂ ಈ ಬಾರಿ ಒಕ್ಕಲಿಗ ಸಮುದಾಯದ ಮತಗಳ ಕ್ಷೇತ್ರದಲ್ಲಿ ನಿರ್ಣಾಯಕ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾದರೂ ಕೂಡ ಜೆಡಿಎಸ್ ನ ಸಂಪ್ರದಾಯಿಕ ಮತಗಳಾದ ಒಕ್ಕಲಿಗರ ಮತಗಳು ಮೈತ್ರಿ ಅಭ್ಯರ್ಥಿಗೆ ಬರುವುದು ಅಷ್ಟು ಸುಲಭವಿಲ್ಲ.

    ಎರಡು ಬಾರಿ ಬಿಜೆಪಿಯಿಂದ ಗೆದ್ದಿದ್ದ ವಿಜಯ್ ಶಂಕರ್‍ಗೆ ಕಳೆದ ಬಾರಿ ಮೈಸೂರಿನಿಂದ ಟಿಕೆಟ್ ಸಿಗದೇ ಹಾಸನದಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಈಗ ಅದೇ ವಿಜಯಶಂಕರ್ ಸಿದ್ದರಾಮಯ್ಯ ಬಲದಿಂದ ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಕಣಕ್ಕಿಳಿದಿದ್ದು, ಎದುರಾಳಿಯಾಗಿ ಬಿಜೆಪಿಯ ಪ್ರತಾಪ್ ಸಿಂಹ ಇದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಗುದ್ದಾಟ ಈಗ ಮೈತ್ರಿ ಪಕ್ಷಗಳಿಗೆ ದೊಡ್ಡ ತಲೆನೋವಾಗಿದ್ದು, ಅಖಾಡ ಸಾಕಷ್ಟು ಕುತೂಹಲ ಮೂಡಿಸಿದ್ದು ಗೆಲುವಿನ ಮಾಲೆ ಯಾರಿಗೆ ಅನ್ನೋದನ್ನ ಮತದಾರ ಪ್ರಭು ನಿರ್ಧರಿಸಲಿದ್ದಾನೆ.

    ಒಟ್ಟು ಮತದಾರರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 18,79,659 ಮತದಾರರಿದ್ದಾರೆ. ಇದರಲ್ಲಿ 9,40,687 ಮಹಿಳಾ ಮತದಾರರು ಮತ್ತು 9,38,826 ಪುರುಷ ಮತದಾರರಿದ್ದಾರೆ. ಜಾತಿವಾರು ನೋಡೋದಾದರೆ ಒಕ್ಕಲಿಗರು 4 ಲಕ್ಷ, ಮುಸ್ಲಿಮರು 2.10 ಲಕ್ಷ, ಲಿಂಗಾಯತರು 2 ಲಕ್ಷ, ಕುರುಬರು 1.80 ಲಕ್ಷ, ಎಸ್ಸಿ (ಬಲಗೈ) 1.75 ಲಕ್ಷ, ಎಸ್ಸಿ (ಎಡಗೈ) 1.25 ಲಕ್ಷ, ಎಸ್‍ಟಿ 1.25 ಲಕ್ಷ, ಕೊಡವರು 1 ಲಕ್ಷ, ಅರೆ ಭಾಷೆ ಒಕ್ಕಲಿಗರು 1 ಲಕ್ಷ, ಬ್ರಾಹ್ಮಣರು 1.10 ಲಕ್ಷ ಮತ್ತು ಇತರೆ/ಹಿಂದುಳಿದ ವರ್ಗ 2.30 ಲಕ್ಷ ಮತದಾರರು ಈ ಕ್ಷೇತ್ರದಲ್ಲಿದ್ದಾರೆ.

    2014ರ ಫಲಿತಾಂಶ:
    2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ 31,608 (2.72%) ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿಶ್ವನಾಥ್ ವಿರುದ್ಧ ಗೆಲುವು ಕಂಡಿದ್ದರು. ಪ್ರತಾಪ್‍ಸಿಂಹ (ಬಿಜೆಪಿ) 5,03,908 (43.45%), ಹೆಚ್.ವಿಶ್ವನಾಥ್ (ಕಾಂಗ್ರೆಸ್) 4,72,300 (40.73%), ಚಂದ್ರಶೇಖರಯ್ಯ(ಜೆಡಿಎಸ್) 1,38,587(11.95%) ಮತಗಳನ್ನು ಪಡೆದುಕೊಂಡಿದ್ದರು.

    ವಿಧಾನಸಭಾ ಎಲೆಕ್ಷನ್ ಫಲಿತಾಂಶ: 2018ರ ವಿಧಾನಸಭಾ ಚುನಾವಣೆಯಲ್ಲಿ 8 ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ, 3ರಲ್ಲಿ ಜೆಡಿಎಸ್ ಮತ್ತು ಒಂದರಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಮಡಿಕೇರಿ – ಅಪ್ಪಚ್ಚು ರಂಜನ್ (ಬಿಜೆಪಿ), ವಿರಾಜಪೇಟೆ – ಕೆ.ಜಿ.ಬೋಪಯ್ಯ (ಬಿಜೆಪಿ), ಕೃಷ್ಣರಾಜ – ಎಸ್.ಎ.ರಾಮದಾಸ್ (ಬಿಜೆಪಿ), ಚಾಮರಾಜ – ಎಲ್.ನಾಗೇಂದ್ರ (ಬಿಜೆಪಿ), ಚಾಮುಂಡೇಶ್ವರಿ – ಜಿ.ಟಿ.ದೇವೇಗೌಡ (ಜೆಡಿಎಸ್), ಹುಣಸೂರು – ಹೆಚ್.ವಿಶ್ವನಾಥ್ (ಜೆಡಿಎಸ್), ಪಿರಿಯಾಪಟ್ಟಣ – ಕೆ.ಮಹದೇವ್ (ಜೆಡಿಎಸ್) ಮತ್ತು ನರಸಿಂಹರಾಜ – ತನ್ವೀರ್ ಸೇಠ್ (ಕಾಂಗ್ರೆಸ್)

    ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
    ಪ್ರತಾಪ್ ಸಿಂಹ- ಬಿಜೆಪಿ
    ವಿಜಯಶಂಕರ್ – ಕಾಂಗ್ರೆಸ್
    ಡಾ.ಬಿ.ಚಂದ್ರ- ಬಿಎಸ್‍ಪಿ

    ಪ್ರತಾಪ್ ಸಿಂಹ
    ಪ್ಲಸ್ ಪಾಯಿಂಟ್: ಮೈತ್ರಿ ಇದ್ದರೂ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಒಳ ಜಗಳ ಲಾಭವಾಗಬಹುದು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ವಿರುದ್ಧ ತುಟಿ ಬಿಚ್ಚದೆ ಒಕ್ಕಲಿಗರಿಗೆ ಹತ್ತಿರವಾಗುತ್ತಿರೋದು. ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರನ್ನು ಹೊಂದಿದ್ದು ಗೆಲುವಿನ ಸಮೀಪ ತಲುಪಿಸುವಲ್ಲಿ ಸಹಾಯ ಮಾಡಬಲ್ಲದು. ಸಂಸದರ ಅನುದಾನ ಬಳಕೆಯಲ್ಲಿ ಮೊದಲಿಗ ಅನ್ನೋದು ಮತ್ತೊಂದು ಪ್ಲಸ್ ಪಾಯಿಂಟ್. ಮೈಸೂರಿನಲ್ಲಿ ಸ್ವತಃ ಮೋದಿ ಪ್ರಚಾರ ಹೆಚ್ಚಿನ ಮತಗಳನ್ನು ಸೆಳೆಯುವ ಸಾಧ್ಯತೆಗಳಿವೆ.

    ಮೈನಸ್ ಪಾಯಿಂಟ್: ಸಂಸದರು ಮತ್ತು ಕೆಲ ಸ್ಥಳೀಯ ಜನಪ್ರತಿನಿಧಿಗಳ ಸಂಬಂಧದಲ್ಲಿ ಬಿರುಕು ಹೊಡೆತ ನೀಡಬಹುದು. ಒಕ್ಕಲಿಗ ಸಮುದಾಯದ ಮತಗಳು ಈ ಬಾರಿ ಹಂಚಿ ಹೋಗಿದ್ದು, ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್, ಕಾಂಗ್ರೆಸ್ ಬಲಿಷ್ಠವಾಗಿರೋದು ಮತಗಳು ಮೈತ್ರಿ ಅಭ್ಯರ್ಥಿಯ ಪಾಲಾಗಬಹುದು. ಸಹಜವಾಗಿಯೇ ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಕಾಣಿಸಿಕೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

    ವಿಜಯಶಂಕರ್
    ಪ್ಲಸ್ ಪಾಯಿಂಟ್: ಕೈ ಅಭ್ಯರ್ಥಿ ವಿಜಯಶಂಕರ್ ಬೆನ್ನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ನಿಂತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಬಲಿಷ್ಠವಾಗಿರೋದು ಮತಗಳ ಕ್ರೋಢಿಕರಣವಾಗುವ ಸಾಧ್ಯತೆಗಳಿವೆ. ಕಳೆದ ಎರಡು ಚುನಾವಣೆಗಳಲ್ಲಿ ಸೋತ ಅನುಕಂಪದ ಅಲೆ ವರ್ಕ್‍ಔಟ್ ಆಗಬಹುದು. ದೇವೇಗೌಡ, ಕುಮಾರಸ್ವಾಮಿ ಅವರು ಬೆಂಬಲ ಕೊಡಿ ಅಂತಾ ಸಭೆ ನಡೆಸಿರೋದು. ಕ್ಷೇತ್ರದ ಸೋಲು ಗೆಲುವಿನ ಜಾಡುಗಳು ಬಗ್ಗೆ ಸೂಕ್ಷ್ಮತೆ ಗೊತ್ತಿರುವುದು.

    ಮೈನಸ್ ಪಾಯಿಂಟ್: ಚಾಮುಂಡೇಶ್ವರಿ ಸೋಲಿನ ಕಹಿಯ ಒಳ ಗುದ್ದಾಟ ನಿಲ್ಲದಿರುವುದು. ಸ್ವತಃ ಪ್ರಧಾನಿ ಮೋದಿಯೇ ಮೈಸೂರಿಗೆ ಪ್ರಚಾರಕ್ಕೆ ಬಂದು ಅಬ್ಬರಿಸಿರೋದು. ನಗರ ಪ್ರದೇಶ, ಕೊಡಗು ಭಾಗದಲ್ಲಿ ಬಿಜೆಪಿ ಬಲವಾಗಿರುವುದು. ಕಾಂಗ್ರೆಸ್, ಜೆಡಿಎಸ್ ನಲ್ಲಿ ಹೊಂದಾಣಿಕೆ ಕೊರತೆ ಹೆಚ್ಚಿರುವುದು.

  • ಕೊಡಗು: ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ

    ಕೊಡಗು: ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ

    ಕೊಡಗು: ಎಲ್ಲೆಡೆ ಲೋಕಸಭಾ ಚುನಾವಣೆಯ ಅಬ್ಬರ ಮನೆಮಾಡಿದೆ. ಗೆಲುವಿಗಾಗಿ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಜನರು ಮಾತ್ರ ತಮ್ಮ ಸಮಸ್ಯೆ ಬಗೆಹರಿಸೋರು ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳ್ಳುಸೋಗೆ ಗ್ರಾಮಸ್ಥರು ತಮ್ಮ ಬೆಳೆಗಳಿಗೆ ನೀರುಣಿಸಲು ಸೂಕ್ತ ರೀತಿಯಲ್ಲಿ ವಿದ್ಯುತ್ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ.

    ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳ್ಳುಸೋಗೆ ಗ್ರಾಮಸ್ಥರು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಗ್ರಾಮದ ಜಮೀನುಗಳಿಗೆ ಸೂಕ್ತ ರೀತಿಯಲ್ಲಿ ವಿದ್ಯುತ್ ನೀಡುತ್ತಿಲ್ಲ. ಇದರಿಂದ ಬೆಳೆಗಳು ಎಲ್ಲವೂ ಒಣಗಿ ಹೋಗುತ್ತಿದೆ. ಎಷ್ಟೇ ಬಾರಿ ಇಲಾಖೆಗೆ ಹೋಗಿ ಮಾನವಿ ಮಾಡಿದರೂ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ ಎಂದು ಗ್ರಾಮದ ರೈತರು ವಿದ್ಯುತ್ ಇಲಾಖೆಯ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ಅತಿವೃಷ್ಠಿಯಾಗಿ ಮಳೆಯ ನೀರು ಜಮೀನಿಗೆ ಬಂದು ಬೆಳೆಗಳು ಸಂಪೂರ್ಣ ಹಾಳಾಗಿತ್ತು. ಮಳೆಗಾಲ ಕಳೆದ ಮೇಲೆ ಇಲ್ಲಿನ ಗ್ರಾಮಸ್ಥರು ರಾಗಿ, ಜೋಳ, ಭತ್ತದ ಬೆಳೆ ಮಾಡಲು ಮುಂದಾದರೂ, ಆದರೆ ಮಳೆಗಾಲದಲ್ಲಿ ವಿದ್ಯುತ್ ಇಲಾಖೆಯ ಕಂಬಗಳು ನೆಲಕ್ಕೆ ಉರಳಿದ್ದವು. ಅಲ್ಲದೇ ಟ್ರಾನ್ಸ್ ಫಾರಂ ಸುಟ್ಟು ಹೋಗಿದ್ದು, 36 ಬೋರ್ ವೇಲ್ ಗೆ ವಿದ್ಯುತ್ ಸರಬರಾಜು ಇಲ್ಲದೆ ಸ್ಥಗಿತಗೊಂಡಿವೆ. ಇಲ್ಲಿಯವರೆಗೂ ಯಾವುದೇ ಕೆಲಸಗಳು ಅಗುತ್ತಿಲ್ಲ. ಬೆಳೆಗಳು ಎಲ್ಲವೂ ಒಣಗಿ ಹೋಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗ್ರಾಮಸ್ಥರು ಮತದಾನ ಮಾಡುವುದಿಲ್ಲ ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ.