Tag: ಮೈಸೂರು-ಕುಶಾಲನಗರ ಹೆದ್ದಾರಿ

  • ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯ 3ನೇ ಪ್ಯಾಕೇಜ್‌ಗೆ ಕೇಂದ್ರ ಅನುಮೋದನೆ

    ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯ 3ನೇ ಪ್ಯಾಕೇಜ್‌ಗೆ ಕೇಂದ್ರ ಅನುಮೋದನೆ

    ಮಡಿಕೇರಿ: ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ (Mysuru Kushalnagar Highway) ಯೋಜನೆಯ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ಯಾಕೇಜ್-3 ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದೆ.

    2023ರ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಈ ಹೆದ್ದಾರಿ ನಿರ್ಮಾಣಕ್ಕೆ ವರ್ಚುವಲ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗಾಗಲೇ ಡಿಪಿಆರ್ ಅನ್ವಯ ಭೂಸ್ವಾಧೀನ ಪ್ರಕ್ರಿಯೆ ಮತ್ತು ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದೀಗ 3ನೇ ಹಂತದ ಪ್ಯಾಕೇಜ್‌ಗೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ. ಈ ಮಾಹಿತಿಯನ್ನು ಮೈಸೂರು ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Wadiyar) ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಇದು ನಮ್ಮ ಪ್ರದೇಶಕ್ಕೆ ಒಂದು ಪ್ರಮುಖ ಮೈಲಿಗಲ್ಲು, ವಿಶೇಷವಾಗಿ ಯೋಜನೆಯು ವರ್ಷಗಳಲ್ಲಿ ಎದುರಿಸಿದ ಹಲವು ವಿಳಂಬಗಳ ನಂತರ ಯಶಸ್ವಿಯಾಗಿದೆ. ಗೌರವಾನ್ವಿತ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಜೀ ಅವರೊಂದಿಗಿನ ನನ್ನ ಇತ್ತೀಚಿನ ಸಭೆಯಲ್ಲಿ, ಈ ಯೋಜನೆಯ ಸುತ್ತಲಿನ ಸವಾಲುಗಳು ಮತ್ತು ಸಮಸ್ಯೆಗಳನ್ನು ವೈಯಕ್ತಿಕವಾಗಿ ಪ್ರಸ್ತುತಪಡಿಸಲು ನನಗೆ ಅವಕಾಶ ಸಿಕ್ಕಿತು. ಅವರು ತ್ವರಿತ ಕ್ರಮ ಕೈಗೊಳ್ಳುವುದಾಗಿ ನನಗೆ ಭರವಸೆ ನೀಡಿದ್ದರು, ಭರವಸೆ ನೀಡಿದಂತೆ ಈಗ ಅನುಮತಿ ನೀಡಿದ್ದಾರೆ .

    ಈ ಹೆದ್ದಾರಿ ಯೋಜನೆಯು ಸಂಪರ್ಕವನ್ನು ಹೆಚ್ಚಿಸುವಲ್ಲಿ, ಪ್ರಯಾಣವನ್ನು ಸುಗಮಗೊಳಿಸುವಲ್ಲಿ ಮತ್ತು ಮೈಸೂರು ಮತ್ತು ಕೊಡಗಿನ ಆರ್ಥಿಕ ಮತ್ತು ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಬಹಳ ಮಹತ್ವದ್ದಾಗಿದೆ. ನಮ್ಮ ಜನರ ಪ್ರಯೋಜನಕ್ಕಾಗಿ ಇಂತಹ ಪ್ರಗತಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ನಾನು ಸಂಪೂರ್ಣವಾಗಿ ಬದ್ಧನಾಗಿರುತ್ತೇನೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

    ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಪೂರ್ಣ:
    ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿ ಪ್ರಾರಂಭಿಸಲು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ. 2ನೇ ಹಂತದ ಕಾಮಗಾರಿಗೆ ಶೇ.84 ರಷ್ಟು, 3ನೇ ಹಂತದ ಕಾಮಗಾರಿಗೆ ಶೇ.80 ರಷ್ಟು, 4ನೇ ಹಂತದ ಕಾಮಗಾರಿಗೆ ಶೇ.70 ರಷ್ಟು ಮತ್ತು 5ನೇ ಹಂತದ ಕಾಮಗಾರಿಗೆ ಶೇ.84 ರಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಪಿರಿಯಾಪಟ್ಟಣ ಮತ್ತು ಕುಶಾಲನಗರ ನಡುವಿನ ರಸ್ತೆ ಅಗಲೀಕರಣ ಚಟುವಟಿಕೆಗಳಿಗೆ ಅರಣ್ಯ ಇಲಾಖೆಯಿಂದ ಅನುಮಯಿ ಪಡೆಯಬೇಕಿದೆ ಎಂದು ಮೂಲಗಳು ತಿಳಿಸಿವೆ.

    ಮಹತ್ವಕಾಂಕ್ಷಿ ಯೋಜನೆಯಾದ ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯು 2027ರ ಜೂನ್‌ ತಿಂಗಳ ಒಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದ್ದಾರೆ.

  • ಮೈಸೂರು-ಕುಶಾಲನಗರ ರೈಲ್ವೇ ಯೋಜನಾ ವೆಚ್ಚ 3168.77 ಕೋಟಿ ರೂ.ಗೆ ಏರಿಕೆ!

    ಮೈಸೂರು-ಕುಶಾಲನಗರ ರೈಲ್ವೇ ಯೋಜನಾ ವೆಚ್ಚ 3168.77 ಕೋಟಿ ರೂ.ಗೆ ಏರಿಕೆ!

    – ತಲೆ ಎತ್ತಲಿವೆ 10 ರೈಲ್ವೇ ನಿಲ್ದಾಣಗಳು, 4 ಸೇತುವೆಗಳು; ಅಂತಿಮ ಲೊಕೆಷನ್‌ ಸಮೀಕ್ಷೆ ಮುಕ್ತಾಯ

    ಮಡಿಕೇರಿ: ಕೊಡಗು ಜಿಲ್ಲೆಯ ಜನರ ಬಹು ನಿರೀಕ್ಷಿತ ರೈಲ್ವೇ (Mysuru Kushalnagar Train Track) ಯೋಜನೆಯ ಫೈನಲ್ ಲೊಕೇಷನ್ ಸರ್ವೆ ಕಾರ್ಯವು ಮುಕ್ತಾಯಗೊಂಡಿದ್ದು ಅದನ್ನು ದೆಹಲಿಯ ರೈಲ್ವೇ ಮಂಡಳಿಗೆ ಸಲ್ಲಿಸಬೇಕಾಗಿದೆ.

    ಕಳೆದ ಒಂದು ದಶಕದಿಂದಲೂ ಕುಂಟುತ್ತಾ ಸಾಗಿದ್ದ ಈ ಯೋಜನೆಗೆ ಮೊದಲಿಗೆ 1,682 ಕೋಟಿ ರೂ. ಅಂದಾಜು ವೆಚ್ಚ ನಿಗದಿ ಪಡಿಸಲಾಗಿತ್ತು. ನಂತರ ಯೋಜನಾ ವೆಚ್ಚ 1,839 ಕೋಟಿ ರೂ.ಗೆ ಏರಿಕೆಯಾಗಿತ್ತು. ಇದೀಗ ಕೇಂದ್ರ ಸರ್ಕಾರದ (Union Government) ನೂತನ ಮಾನದಂಡಕ್ಕೆ ಅನುಗುಣವಾಗಿ 89 ಕಿಮೀ ರೈಲು ಮಾರ್ಗದ ಯೋಜನಾ ವೆಚ್ಚ 3,168.77 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಮೈಸೂರು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎರಡು ವರ್ಷಗಳ ಹಿಂದೆಯೇ ಫೈನಲ್ ಲೊಕೇಷನ್ ಸರ್ವೆ ನಡೆಸಲಾಗಿತ್ತು. ಆದ್ರೆ ತಾಂತ್ರಿಕ ಕಾರಣಗಳಿಂದ ಹಿಂತಿರುಗಿಸಲಾಗಿತ್ತು. ಈ ನಡುವೆ ಕೇಂದ್ರ ಸರ್ಕಾರವು ನೂತನ ರೈಲ್ವೇ ಹಳಿ ನಿರ್ಮಾಣ ಮಾಡಬೇಕಾದರೆ ಗರಿಷ್ಟ ಘಂಟೆಗೆ 165 ಕಿಮೀ ವೇಗದಲ್ಲಿ ರೈಲು ಚಾಲನೆಗೆ ಅವಕಾಶವಿರುವಂತೆ ಯೋಜನೆ ರೂಪಿಸುವಂತೆ ನಿಯಮಾವಳಿ ರೂಪಿಸಿತ್ತು. ಈ ಹಿಂದೆ ಘಂಟೆಗೆ 100 ಕಿಮೀ ವೇಗದಲ್ಲಿ ಚಾಲನೆಗೆ ಯೋಜನೆ ರೂಪಿಸಲಾಗಿತ್ತು. ಇದನ್ನೂ ಓದಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ ಮಿಸ್‌ ಇಂಡಿಯಾ ತಾರೆ 28ನೇ ವಯಸ್ಸಿಗೆ ಸಾವು!

    ಈ ನಡುವೆ ಮೈಸೂರಿನಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ 4 ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವೂ ಆಗಲಿರುವ ಹಿನ್ನೆಲೆಯಲ್ಲಿ ಈ ಹೆದ್ದಾರಿಗೆ ರೈಲ್ವೇ ಇಲಾಖೆಯಿಂದ 4 ಸೇತುವೆ ನಿರ್ಮಿಸುವುದೂ ಯೋಜನೆಯಲ್ಲಿ ಸೇರಿದೆ. ಹುಣಸೂರು ಸಮೀಪ ಒಂದು ಸಣ್ಣ ಹೊಳೆಗೆ ಸೇತುವೆ, ಎರಡು ಅಂಡರ್ ಪಾಸ್ ಗಳು ಮತ್ತು ಒಂದು ಫ್ಲೈಒವರ್‌ ಹೊಸದಾಗಿ ಸೇರ್ಪಡೆಯಾಗಿದೆ. ಇದಕ್ಕಾಗಿ 68 ಕೋಟಿ ರೂ.ಗಳು ಹೆಚ್ಚುವರಿ ವೆಚ್ಚ ತಗುಲಲಿದೆ. ಇದಲ್ಲದೆ 89 ಕಿಮೀ ಉದ್ದದ ಮಾರ್ಗಕ್ಕೆ ಒಟ್ಟು 10 ನಿಲ್ದಾಣಗಳೂ ಬರಲಿವೆ.

    ಬೆಳಗೊಳ, ಬೆಟ್ಟದೂರು, ಹಂದನಹಳ್ಳಿ, ತಿಪ್ಪೂರು, ಹುಣಸೂರು, ಕಲ್ಲಳ್ಳಿ, ಪಿರಿಯಾಪಟ್ಟಣ, ಚಿಕ್ಕ ಮಾಗಳಿ, ಮಂಚದೇವನ ಹಳ್ಳಿ ಹಾಗೂ ಕುಶಾಲನಗರದಲ್ಲಿ ರೈಲ್ವೇ ನಿಲ್ದಾಣಗಳ ನಿರ್ಮಾಣ ಆಗಲಿದೆ. ಕುಶಾಲನಗರದ ಸೇತುವೆಯಿಂದ 3 ಕಿಮೀ ಗಳಷ್ಟು ಎಡಭಾಗಕ್ಕೆ ಕಾವೇರಿ ನಿಸರ್ಗ ಧಾಮದ ಸಮೀಪ ರೈಲ್ವೇ ನಿಲ್ದಾಣ ನಿರ್ಮಾಣ ಆಗಲಿದೆ ಎಂದು ರೈಲ್ವೇ ಅಧಿಕಾರಿ ತಿಳಿಸಿದ್ದಾರೆ. ಹಿಂದಿನ ಯೋಜನೆ ಪ್ರಕಾರ ಈ ನಿಲ್ದಾಣ ಹೆದ್ದಾರಿಯ ಒಂದು ಫರ್ಲಾಂಗ್ ದೂರದಲ್ಲಿಯೇ ನಿರ್ಮಾಣ ಆಗಬೇಕಿತ್ತು. ಆದರೆ ಭವಿಷ್ಯದ ಅಭಿವೃದ್ದಿಯ ದೃಷ್ಟಿಯಿಂದ 3 ಕಿಮಿ ಒಳ ಭಾಗಕ್ಕೆ ಸ್ಥಳಾಂತರಿಸಲಾಗಿದೆ.

    ಉದ್ದೇಶಿತ ರೈಲ್ವೇ ನಿಲ್ದಾಣಗಳ ಒಂದೂವರೆ ಕಿಮೀ ಉದ್ದಕ್ಕೂ ಸುಮಾರು 100 ಮೀಟರ್‌ಗಳವರೆಗೆ ಮತ್ತು ರೈಲ್ವೇ ಹಳಿ ಹಾದು ಹೋಗುವ ಸ್ಥಳದಲ್ಲಿ 25 ಮೀಟರ್ ಗಳಷ್ಟು ಭೂಸ್ವಾಧೀನ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ ಎರಡು ಟ್ರ್ಯಾಕ್‌ ಗಳು ನಿರ್ಮಾಣ ಆಗಲಿವೆ. ಈ ಉದ್ದೇಶಿತ ಯೋಜನೆಗೆ ರಾಜ್ಯ ಸರ್ಕಾರವು ಭೂ ಸ್ವಾಧೀನ ಮಾಡಿಕೊಡಬೇಕಾಗಿದ್ದು ಯೋಜನೆಯನ್ನು ಎರಡೂ ಸರ್ಕಾರಗಳು 50% ನಷ್ಟು ವೆಚ್ಚದಲ್ಲಿ ಅನುಷ್ಠಾನಗೊಳಿಸಬೇಕಿದೆ. ಇದನ್ನೂ ಓದಿ: WPL 2024: ಆರ್‌ಸಿಬಿಯಲ್ಲಿ ಲೇಡಿ ʻಎಬಿಡಿʼ – ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಟ್ರೆಂಡ್‌!

    ಈಗ ಫೈನಲ್ ಲೊಕೇಷನ್ ಸರ್ವೆ ಪೂರ್ಣಗೊಂಡಿದ್ದು ಮೈಸೂರಿನಿಂದ ಹುಬ್ಬಳ್ಳಿಯ ನೈರುತ್ಯ ರೈಲ್ವೇಯ ಕೇಂದ್ರ ಕಚೇರಿಗೆ ಜನರಲ್‌ ಮ್ಯಾನೇಜರ್ ಅವರ ಕಚೇರಿಗೆ ಹೋಗಿ ನಂತರ ಅಲ್ಲಿಂದ ದೆಹಲಿಯ ರೈಲ್ವೇ ಮಂಡಳಿಗೆ ಕಳಿಸಿಕೊಡಲಾಗುತ್ತದೆ. ರೈಲ್ವೇ ಮಂಡಳಿ ಅನುಮೋದನೆ ನೀಡಿದ ಕೂಡಲೇ ಕೆಲಸ ಪ್ರಾರಂಭವಾಗಲಿದೆ.

  • ಮೈಸೂರು-ಕುಶಾಲನಗರ ನಾಲ್ಕು ಪಥದ ಹೆದ್ದಾರಿ ಕಾಮಗಾರಿ ಶೀಘ್ರವೇ ಆರಂಭ: ಪ್ರತಾಪ್ ಸಿಂಹ

    ಮೈಸೂರು-ಕುಶಾಲನಗರ ನಾಲ್ಕು ಪಥದ ಹೆದ್ದಾರಿ ಕಾಮಗಾರಿ ಶೀಘ್ರವೇ ಆರಂಭ: ಪ್ರತಾಪ್ ಸಿಂಹ

    ಮಡಿಕೇರಿ: ಮೈಸೂರು-ಕುಶಾಲನಗರ ನಾಲ್ಕು ಪಥದ ಹೆದ್ದಾರಿಯ (Mysuru-Kushalnagar Four Lane Highway) ಕಾಮಗಾರಿಯನ್ನು ಒಂದು ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಅವರು ತಿಳಿಸಿದರು.

    ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಮೈಸೂರು-ಕುಶಾಲನಗರ ನಾಲ್ಕು ಪಥದ ಹೆದ್ದಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅವರು ಚಾಲನೆ ನೀಡಿದ್ದು 4,130 ಕೋಟಿ ರೂ. ವೆಚ್ಚದಲ್ಲಿ 93 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಪ್ರತಾಪ್ ಸಿಂಹ ಅವರು ತಿಳಿಸಿದರು. ಇದನ್ನೂ ಓದಿ: ಮನೆಗೆ ಅತ್ತೆಯೇ ಸಿನಿಯರ್, ಅತ್ತೆ ಒಪ್ಪಿದ್ರಷ್ಟೇ ಸೊಸೆಗೆ 2,000 – ಲಕ್ಷ್ಮಿ ಹೆಬ್ಬಾಳ್ಕರ್

    ಕುಶಾಲನಗರ-ಸಂಪಾಜೆ (Kushalnagar-Sampaje) ಮಾರ್ಗದಲ್ಲಿ ಅಪಘಾತ ಸ್ಥಳಗಳನ್ನು ಗುರುತಿಸಿ ವರದಿ ನೀಡಬೇಕು. ಇಂತಹ ಸ್ಥಳಗಳಲ್ಲಿ ಅಪಘಾತ ತಪ್ಪಿಸಲು ಅಗತ್ಯ ಕ್ರಮವಹಿಸುವಂತೆ ಹೆದ್ದಾರಿ ಇಲಾಖೆಯ ಎಂಜಿನಿಯರ್‌ಗಳಿಗೆ ಸಂಸದರು ಸೂಚಿಸಿದರು.

    ಮದೆನಾಡು ಬಳಿಯ ಕರ್ತೋಜಿ ಗುಡ್ಡ ಮೇಲ್ಭಾಗದಲ್ಲಿ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಮಣ್ಣು ರಸ್ತೆಗೆ ಬರುವ ಸಾಧ್ಯತೆ ಇದೆ. ಆದ್ದರಿಂದ ತಡೆಗೋಡೆ ನಿರ್ಮಿಸಬೇಕಿದೆ. ಈ ಸಂಬಂಧ ಎಂಜಿನಿಯರ್‌ಗಳು ಸೂಕ್ತ ಕ್ರಮವಹಿಸಬೇಕು. ಹೆದ್ದಾರಿಯಲ್ಲಿ ಸಾರಿಗೆ ಸಂಚಾರಕ್ಕೆ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು ಎಂದು ಪ್ರತಾಪ್ ಸಿಂಹ ಅವರು ನಿರ್ದೇಶನ ನೀಡಿದರು.

     

    ಸದ್ಯದಲ್ಲೇ ಮುಂಗಾರು ಆರಂಭವಾಗಲಿದ್ದು 2018 ರಿಂದ ಇತ್ತೀಚೆಗೆ ಹೆಚ್ಚಿನ ಮಳೆಯಿಂದಾಗಿ ಹಾನಿಗಳು ಸಂಭವಿಸುತ್ತಿವೆ. ಪ್ರವಾಹ ಮತ್ತಿತರ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.