Tag: ಮೈದಾನ

  • 1500 ಮೀ. ಓಡಿ ಚಿನ್ನ ಗೆದ್ದು ಮೈದಾನದಲ್ಲೇ ಪ್ರಾಣ ಬಿಟ್ಟ 78 ವರ್ಷದ ಸ್ಪರ್ಧಿ

    1500 ಮೀ. ಓಡಿ ಚಿನ್ನ ಗೆದ್ದು ಮೈದಾನದಲ್ಲೇ ಪ್ರಾಣ ಬಿಟ್ಟ 78 ವರ್ಷದ ಸ್ಪರ್ಧಿ

    ಚಂಢೀಗಡ: 78 ವರ್ಷದ ವೃದ್ಧರೊಬ್ಬರು 1500 ಮೀ. ಓಡಿ ಚಿನ್ನದ ಪದಕ ಗೆದ್ದು ಮೈದಾನದಲ್ಲೇ ಮೃತಪಟ್ಟ ಘಟನೆಯೊಂದು ಪಂಜಾಬ್‍ನ ಸಂಗ್ರೂರ್‍ನಲ್ಲಿ ನಡೆದಿದೆ.

    ಬಕ್ಷೀಶ್ ಸಿಂಗ್ ಮೃತಪಟ್ಟ ವ್ಯಕ್ತಿ. ಪಂಜಾಬ್ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ವೃದ್ಧರಿಗೆ ಅಥ್ಲೆಟಿಕ್ ಮೀಟ್ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಕ್ಷೀಶ್ ಸಿಂಗ್ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಬಳಿಕ ಮೈದಾನದಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

    1500 ಮೀ. ರೇಸ್ ಪೂರ್ಣಗೊಳಿಸಿದ ನಂತರ ಬಕ್ಷೀಶ್ ವಿಶ್ರಾಂತಿ ಪಡೆಯುತ್ತಿದ್ದರು. ಇದೇ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಸಿಂಗ್ರೂರ್ ನ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈದ್ಯರು ಬಕ್ಷೀಶ್ ಸಿಂಗ್ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಕಳೆದ ಶನಿವಾರ ಈ ಅಥ್ಲೆಟಿಕ್ ಮೀಟ್ ಆಯೋಜಿಸಲಾಗಿತ್ತು. 1500 ಮೀ. ಓಟದಲ್ಲಿ ಬಕ್ಷೀಶ್ ಚಿನ್ನದ ಪದಕ ಗೆದ್ದಿದ್ದರು ಎಂದು ಸಂಬಂಧಿ ಮಹಿಂದರ್ ಸಿಂಗ್ ವರ್ಕ್ ತಿಳಿಸಿದ್ದಾರೆ. ಬಕ್ಷೀಶ್ ತಮ್ಮ ಓಟವನ್ನು ಪೂರ್ಣಗೊಳಿಸಿದ್ದು ಸಂತಸ ತಂದಿದೆ ಎಂದು ಜೊತೆಯಲ್ಲಿದ್ದವರಿಗೆ ಹೇಳಿದ್ದರು.

    ವಿಶ್ರಾಂತಿ ಪಡೆಯಲು ಬಕ್ಷೀಶ್ ಮೊದಲು ತಮ್ಮ ಉಡುಪನ್ನು ಧರಿಸಲು ಹೋಗಿದ್ದರು. ಆದರೆ ಅವರಿಗೆ ತಮ್ಮ ಉಡುಪನ್ನು ಧರಿಸಲು ಆಗಲಿಲ್ಲ. ಈ ವೇಳೆ ಬಕ್ಷೀಶ್ ಅಲ್ಲಿಯೇ ಕುಸಿದು ಬಿದ್ದರು. ಬಕ್ಷೀಶ್‍ಗೆ ಓಡುವುದು ಎಂದರೆ ತುಂಬಾ ಇಷ್ಟ. ಅಲ್ಲದೆ ಅವರು ಯಾವಾಗಲೂ ನಾನು ಸತ್ತರೆ ಮೈದಾನದಲ್ಲಿಯೇ ಆಟಗಾರನಾಗಿ ಸಾಯಬೇಕು ಎಂದು ಹೇಳುತ್ತಿದ್ದರು ಎಂದು ಬಕ್ಷೀಶ್ ಸ್ನೇಹಿತರು ತಿಳಿಸಿದ್ದಾರೆ.

    ಬಕ್ಷೀಶ್ ಸಿಂಗ್ ಮೊದಲು ಸೈನ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿವೃತ್ತಿ ಪಡೆದ ಬಳಿಕ ಅವರು ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. 1982ರಲ್ಲಿ ಅವರು ಕ್ರೀಡೆಯಲ್ಲಿ ಭಾಗವಹಿಸಲು ಶುರು ಮಾಡಿದ್ದರು. ಬಕ್ಷೀಸ್ ಅವರು ಇವರೆಗೂ 200ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಬಕ್ಷೀಶ್ 800, 1500 ಹಾಗೂ 5000 ಮೀ. ಓಡುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು.

  • ಮೋದಿಯ ಕ್ರಿಕೆಟ್ ರಾಜತಾಂತ್ರಿಕತೆಯನ್ನು ಪ್ರಶಂಸಿಸಿದ ಸಚಿನ್

    ಮೋದಿಯ ಕ್ರಿಕೆಟ್ ರಾಜತಾಂತ್ರಿಕತೆಯನ್ನು ಪ್ರಶಂಸಿಸಿದ ಸಚಿನ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕ್ರಿಕೆಟ್ ರಾಜತಾಂತ್ರಿಕತೆಯನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪ್ರಶಂಶಿಸಿದ್ದಾರೆ.

    ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚಿಗೆ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಹೋಗಿದ್ದಾಗ ಅಲ್ಲಿನ ಅಧ್ಯಕ್ಷರಿಗೆ ಭಾರತ ತಂಡದ ಆಟಗಾರರು ಸಹಿ ಹಾಕಿದ್ದ ಬ್ಯಾಟ್ ನೀಡಿ ಗೌರವಿಸಿದ್ದರು.

    ಮಾಲ್ಡೀವ್ಸ್ ಅಧ್ಯಕ್ಷರಿಗೆ ಬ್ಯಾಟ್ ನೀಡಿದ ಫೋಟೋ ಹಾಕಿದ ಮೋದಿ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಸಚಿನ್ “ಕ್ರಿಕೆಟ್ ಆಟವನ್ನು ಪ್ರಚಾರ ಮಾಡುತ್ತಿರುವುದಕ್ಕೆ ಧನ್ಯವಾದಗಳು ಮೋದಿಜೀ. ನಿಮ್ಮ ನಡೆ ಕ್ರಿಕೆಟ್ ರಾಜತಾಂತ್ರಿಕತೆಗೆ ಒಂದು ಉತ್ತಮ ಉದಾಹರಣೆ. ಶೀಘ್ರದಲ್ಲೇ ಮಾಲ್ಡೀವ್ಸ್‍ನ್ನು ಕ್ರಿಕೆಟ್ ಮ್ಯಾಪ್‍ನಲ್ಲಿ ನೋಡಬಯಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

    ಕಳೆದ ಶನಿವಾರ ಮಾಲ್ಡೀವ್ಸ್‍ಗೆ ವಿದೇಶ ಪ್ರವಾಸಕ್ಕೆ ತೆರಳಿದ್ದ ಮೋದಿ ಅವರು ಆ ದೇಶದ ಕ್ರೀಡಾ ಕ್ಷೇತ್ರಕ್ಕೆ ಸಹಾಯವಾಗಲಿ ಎಂದು ಅಲ್ಲಿ ಒಂದು ಕ್ರಿಕೆಟ್ ಮೈದಾನ ನಿರ್ಮಾಣ ಮಾಡಲು ನೆರವು ನೀಡುವ ಭರವಸೆ ನೀಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಮೋದಿ ಅವರು ಆ ದೇಶದ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಭಾರತ ತಂಡದ ಆಟಗಾರರು ಸಹಿ ಹಾಕಿದ್ದ ಬ್ಯಾಟ್ ನೀಡಿ ಅದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಇದನ್ನು ಕಂಡ ಸಚಿನ್ ಅವರು, ಮೋದಿ ಅವರ ಈ ನಡೆ ಈಗ ನಡೆಯುತ್ತಿರುವ ವಿಶ್ವಕಪ್‍ನ ಕ್ರಿಕೆಟ್ ರಾಜತಾಂತ್ರಿಕತೆಗೆ ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.

    ಭಾರತ ದೇಶವು ಮಾಲ್ಡೀವ್ಸ್‍ನಲ್ಲಿ ಕ್ರಿಕೆಟ್‍ನನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ದೇಶದ ಕ್ರೀಡಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂಬ ಇಬ್ರಾಹಿಂ ಮೊಹಮದ್ ಸೊಲಿಹ್ ಅವರ ಉದ್ದೇಶವನ್ನು ನಾವು ಪೂರೈಸುತ್ತೇವೆ ಎಂದು ಮೋದಿ ಅವರು ಹೇಳಿದ್ದರು.

    ಈ ವಿಚಾರದ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಮಾತನಾಡಿ, ಭಾರತ ಮಾಲ್ಡೀವ್ಸ್‍ನಲ್ಲಿ ಒಂದು ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತಿದೆ ಮತ್ತು ಈ ದೇಶದಲ್ಲಿ ಕ್ರಿಕೆಟ್‍ಗೆ ಉತ್ತೇಜನ ನೀಡುವ ಸಲುವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆ ಮಾತನಾಡಿ ಇಲ್ಲಿನ ಕ್ರಿಕೆಟ್ ಆಟಗಾರಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

  • ಬ್ಯಾಟ್ಸ್ ಮನ್ ಬಾರಿಸಿದ ಸಿಕ್ಸರ್ ಗೆ ಮೈದಾನದ ಹೊರಗಿದ್ದ ಕಾರು ಜಖಂ: ವಿಡಿಯೋ

    ಬ್ಯಾಟ್ಸ್ ಮನ್ ಬಾರಿಸಿದ ಸಿಕ್ಸರ್ ಗೆ ಮೈದಾನದ ಹೊರಗಿದ್ದ ಕಾರು ಜಖಂ: ವಿಡಿಯೋ

    ಹರಾರೆ: ಜಿಂಬಾಬ್ವೆ ತಂಡ ನೇಪಾಳ ತಂಡವನ್ನು ಸೋಲಿಸಿ 2019ರ ವಿಶ್ವಕಪ್ ಕನಸನ್ನು ಜೀವಂತವಾಗಿ ಉಳಿಸಿಕೊಂಡಿದೆ. ಅರ್ಹತಾ ಪಂದ್ಯದಲ್ಲಿ ನೇಪಾಳ ತಂಡವನ್ನು 116ರನ್ ಗಳಿಂದ ಜಿಂಬಾಬ್ವೆ ಸೋಲಿಸಿದೆ. ಅಷ್ಟೇ ಅಲ್ಲದೇ ಈ ಪಂದ್ಯದಲ್ಲಿ ಜಿಂಬಾಬ್ವೆಯ ಸಿಕಂದರ್ ರಾಜಾ ಸಿಕ್ಸರ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಜಿಂಬಾಬ್ವೆ ಆಟಗಾರ ಸಿಕಂದರ್ 66 ಎಸೆತಗಳಲ್ಲಿ 123ರನ್ ಬಾರಿಸಿದ್ದು, ಅವರ ಈ ಶತಕದ ನೆರವಿನಿಂದ ಜಿಂಬಾಬ್ವೆ 380 ರನ್ ಗಳನ್ನ ಬಾರಿಸಿ ನೇಪಾಳ ತಂಡಕ್ಕೆ ಟಾರ್ಗೆಟ್ ನೀಡಿತ್ತು.  ಆದರೆ ನೇಪಾಳ ತಂಡ 50 ಓವರ್ ಗಳಲ್ಲಿ 264 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡು ಸೋಲನ್ನು ಅನುಭವಿಸಿತು.

    ನೇಪಾಳ ತಂಡದ ವಿರುದ್ಧ ಸಿಕಂದರ್ ಸೆಂಚುರಿ ಬಾರಿಸಿದಲ್ಲದೇ 3 ವಿಕೆಟ್‍ಗಳನ್ನು ಪಡೆದಿದ್ದಾರೆ. ಜಿಂಬಾಬ್ವೆ ತಂಡ 200 ರನ್ ಬಾರಿಸಿ 4 ವಿಕೆಟ್ ಕಳೆದುಕೊಂಡಾಗ ಸಿಕಂದರ್ ಮೈದಾನಕ್ಕೆ ಎಂಟ್ರಿ ನೀಡುವಾಗ ಅಲ್ಲಿದ್ದ ಜನರು ಅವರನ್ನು ಹುರಿದುಂಬಿಸಿ ಸ್ವಾಗತಿಸಿದರು. ಸಿಕಂದರ್ ಜೊತೆ ಜಿಂಬಾಬ್ವೆಯ ಅನುಭವಿ ಆಟಗಾರ ಬ್ರೆಂಡನ್ ಟೇಲರ್ ಕೂಡ 91 ಎಸೆತಗಳಲ್ಲಿ 100 ರನ್ ಬಾರಿಸಿದರು.

    ಐದನೇ ವಿಕೆಟ್ ಪಾಟ್ನರ್ ಶಿಪ್ ನಲ್ಲಿ ಟೇಲರ್ ಹಾಗೂ ಸಿಕಂದರ್ ಇಬ್ಬರೂ ಸೇರಿ 173 ರನ್ ಗಳನ್ನು ಬಾರಿಸಿದರು. ಸಿಕಂದರ್ ಒಂದೇ ಇನ್ನಿಂಗ್ಸ್ ನಲ್ಲಿ 7 ಬೌಂಡರಿ ಹಾಗೂ 9 ಸಿಕ್ಸ್ ಗಳನ್ನು ಬಾರಿಸಿದ್ದಾರೆ. ಅದರಲ್ಲಿ ಒಂದು ಸಿಕ್ಸ್ ಮಾತ್ರ ಎಲ್ಲರ ಗಮನ ಸೆಳೆಯಿತು. ಸಿಕಂದರ್ ಹೊಡೆದ ಸಿಕ್ಸರ್ ಮೈದಾನದಿಂದ ಹೊರಹೋಗಿದಲ್ಲದೇ ಅಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಜಖಂಗೊಳಿಸಿತ್ತು.

    ಸಿಕಂದರ್ ಸಿಕ್ಸರ್ ಬಾರಿಸಿದ ವಿಡಿಯೋವನ್ನು ಐಸಿಸಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನಿನ್ನೆ ನಡೆದ ಪಂದ್ಯದಲ್ಲಿ ಸಿಕಂದರ್ ತಮ್ಮ ಮೊದಲ ಸೆಂಚುರಿ ಹೊಡೆದಿದ್ದಲ್ಲದೇ ತಮ್ಮ ಸಿಕ್ಸರ್ ಮೂಲಕ ಮೈದಾನ ಹೊರಗಿದ್ದ ಕಾರಿನ ಕಿಟಕಿಯ ಗಾಜನ್ನು ಸಹ ಪುಡಿಪುಡಿ ಮಾಡಿದ್ದಾರೆ.” ಎಂದು ಟ್ವೀಟ್ ಮಾಡಿದ್ದಾರೆ.

    ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಮೈದಾನದಲ್ಲೇ ಕುಸಿದು ಬಿದ್ದ ಪರೇಡ್ ಮುಖ್ಯಸ್ಥ!

    ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಮೈದಾನದಲ್ಲೇ ಕುಸಿದು ಬಿದ್ದ ಪರೇಡ್ ಮುಖ್ಯಸ್ಥ!

    ಹಾವೇರಿ: 69 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಪರೇಡ್ ಮುಖ್ಯಸ್ಥರೊಬ್ಬರು ಮೈದಾನದಲ್ಲಿಯೇ ಕುಸಿದು ಬಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ.

    ಅಸ್ವಸ್ಥಗೊಂಡ ಪರೇಡ್ ಮುಖ್ಯಸ್ಥರನ್ನು ಆರ್ ಪಿಐ ಮಾರುತಿ ಹೆಗಡೆ (35) ಎಂದು ಗುರುತಿಸಲಾಗಿದೆ. ಇಂದು ಗಣರಾಜ್ಯೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಮಾರುತಿ ಅವರು ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲೇ ಇದ್ದ ಅಧಿಕಾರಿಗಳು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ತಹಶೀಲ್ದಾರರ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಯಿತು. ಸದ್ಯ ಮಾರುತಿ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

    ಕಳೆದ ಎರಡು ವರ್ಷಗಳಿಂದ ಮಾರುತಿ ಜಿಲ್ಲಾ ಮೀಸಲು ಪೊಲೀಸ್ ಪಡೆಯ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ ಗಣರಾಜ್ಯೋತ್ಸವ ಪರೇಡ್ ಇರೋ ಹಿನ್ನಲೆಯಲ್ಲಿ ಬೇಗನೇ ಆಗಮಿಸಿದ್ದರು. ಬಿಸಿಲಿನ ತಾಪಕ್ಕೆ ಆರ್‍ಪಿಐ ಕುಸಿದು ಬಿದ್ದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಕ್ರಿಕೆಟ್ ಮೂಲಕ ಚಿನ್ನ ಬೆಳೆಯುತ್ತಿದ್ದಾರೆ ದೆಹಲಿ ರೈತರು!

    ಕ್ರಿಕೆಟ್ ಮೂಲಕ ಚಿನ್ನ ಬೆಳೆಯುತ್ತಿದ್ದಾರೆ ದೆಹಲಿ ರೈತರು!

    ದೆಹಲಿ: ರಾಷ್ಟ್ರ ರಾಜಧಾನಿಯ ರೈತರು ತಮ್ಮ ಭೂಮಿಯಲ್ಲಿ ಕೃಷಿ ಕೆಲಸವನ್ನು ಬಿಟ್ಟು ಕ್ರಿಕೆಟ್ ಮೈದಾನಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದು, ಹೊಸ ಆದಾಯ ಮೂಲವನ್ನು ಹುಡುಕಿದ್ದಾರೆ.

    ದೆಹಲಿ ಗುರ್ಗಾವ್‍ನಲ್ಲಿ ಐಟಿ ಉದ್ಯಮ ದೊಡ್ಡದಾಗಿ ಬೆಳೆದಿರುವುದರಿಂದ ಇಲ್ಲಿನ ಐಟಿ ಉದ್ಯೋಗಿಗಳಿಗೆ ವಾರಾಂತ್ಯದಲ್ಲಿ ಕ್ರಿಕೆಟ್ ಆಡಲು ಈ ಮೈದಾನಗಳನ್ನು ಸಿದ್ಧ ಪಡಿಸಲಾಗಿದೆ. ಪ್ರತಿ ದಿನ ಈ ಮೈದಾನದಲ್ಲಿ ಕನಿಷ್ಠ ಮೂರು ಪಂದ್ಯಗಳನ್ನು ಆಯೋಜಿಸಲಾಗುತ್ತಿದ್ದು, ಪ್ರತಿ ಪಂದ್ಯಕ್ಕೆ ಸುಮಾರು 3,500 ರಿಂದ 7,500 ರೂ. ಗಳನ್ನು ನಿಗದಿ ಪಡಿಸಲಾಗುತ್ತಿದೆ.

    ಈ ಹೊಸ ಉದ್ಯಮದಲ್ಲಿ ದೆಹಲಿಯ ಬಿಲಿಯಾವಾಸ್ ಹಾಗೂ ಕದಾರ್ಪುರ್ ಪ್ರದೇಶದಲ್ಲಿ ಈಗಾಗಲೇ ಸುಮಾರು 40 ಮೈದಾನಗಳು ನಿರ್ಮಾಣವಾಗಿದೆ. ಪ್ರತಿ ಪಂದ್ಯಕ್ಕೆ ಪಡೆಯುವ ಮೊತ್ತವು ಪಂದ್ಯದ ಓವರ್ ಹಾಗೂ ಅಂಪೈರ್ ಫೀಸ್ ಆಧಾರಿಸಿ ನಿರ್ಧರಿಸಲಾಗುತ್ತದೆ. ಅಲ್ಲದೇ ಕೆಲವು ಮೈದಾನಗಳಲ್ಲಿ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದ್ದು ಈ ಸೇವೆಯನ್ನು ಪಡೆಯಲು ಹೆಚ್ಚಿನ ಮೊತ್ತ ನೀಡಬೇಕಾಗುತ್ತದೆ ಎಂದು ಪ್ರದೇಶದಲ್ಲಿ ಈಗಾಗಲೇ ಹಲವು ಪಂದ್ಯಗಳನ್ನು ಆಯೋಜಿಸಿರುವ ಟರ್ಫ್ ಸ್ಫೋರ್ಟ್ಸ್  ಮ್ಯಾನೇಜ್‍ಮೆಂಟ್ ಮಾಲೀಕ ಸಚಿನ್ ಖೂರನ ಅವರು ತಿಳಿಸಿದ್ದಾರೆ.

    ಇಲ್ಲಿ ನಡೆಯುವ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರುವ 20 ವರ್ಷದ ವಿದ್ಯಾರ್ಥಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಪ್ರತಿ ವಾರಾಂತ್ಯದಲ್ಲಿ ಇಲ್ಲಿ ನಡೆಯುವ ಪಂದ್ಯಗಳ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಂಪೈರಿಂಗ್ ಆರಂಭಿಸುವ ಮೊದಲು ಪ್ರತಿಯೊಬ್ಬರಿಗೂ 7 ರಿಂದ 8 ತಿಂಗಳ ಕಾಲ ತರಬೇತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಮೈದಾನಗಳಂತೆ ದೇಶದ ಇತರೇ ಪ್ರಮುಖ ಪ್ರದೇಶಗಳಲ್ಲಿಯೂ ಈ ಬೆಳವಣಿಗೆ ಕಂಡು ಬರುತ್ತದೆ ಎಂದು ಬೆಂಗಳೂರು ಪೂಮಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿನವಂತ್ ಸೆಹಗಲ್ ತಿಳಿಸಿದ್ದಾರೆ.

    ದೆಹಲಿಯ ಗುರು ಗಾಂವ್ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಈ ಮೈದಾನಗಳಿಂದ ಸ್ಥಳೀಯ ವ್ಯಾಪಾರಿಗಳಿಗೂ ಉತ್ತಮ ಲಾಭ ಲಭಿಸುತ್ತಿದ್ದು, ಸ್ಥಳೀಯ ಕ್ರಿಕೆಟ್ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ.