Tag: ಮೈತ್ರಿ ಮಂಜುನಾಥ್

  • ಹಫ್ತಾ: ಬೆರಗಾಗಿಸಿ ಬೆಚ್ಚಿ ಬೀಳಿಸೋ ಭಿನ್ನ ಭೂಗತ ಸ್ಟೋರಿ!

    ಹಫ್ತಾ: ಬೆರಗಾಗಿಸಿ ಬೆಚ್ಚಿ ಬೀಳಿಸೋ ಭಿನ್ನ ಭೂಗತ ಸ್ಟೋರಿ!

    ಬೆಂಗಳೂರು: ಕರಾವಳಿ ತೀರದ ಭೂಗತ ಲೋಕದ ಅಪರೂಪದ ಕಥೆಯ ಸುಳಿವಿನೊಂದಿಗೆ ಎಲ್ಲರನ್ನು ಆವರಿಸಿಕೊಂಡಿದ್ದ ಚಿತ್ರ ಹಫ್ತಾ. ಇಂಥಾ ಅಗಾಧ ನಿರೀಕ್ಷೆಗಳ ಜೊತೆಯೇ ಹಫ್ತಾ ಈಗ ತೆರೆ ಕಂಡಿದೆ. ನಿರೀಕ್ಷೆಯಂತೆಯೇ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಇದುವರೆಗೆ ಯಾರೂ ಮುಟ್ಟದ ಅಪರೂಪದ ಕಥೆಯೊಂದನ್ನು ಪ್ರೇಕ್ಷಕರೆದುರು ತೆರೆದಿಟ್ಟಿದ್ದಾರೆ. ಮಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದಂತಿರೋ ರಗಡ್ ಶೈಲಿ, ಖಡಕ್ ಡೈಲಾಗ್ ಮತ್ತು ಪ್ರತಿ ಸೀನುಗಳಲ್ಲಿಯೂ ಹಿಡಿದು ನಿಲ್ಲಿಸುವಂಥಾ ಕುತೂಹಲದ ನಿರೂಪಣೆಗಳ ಮೂಲಕ ಹಫ್ತಾ ಪ್ರೇಕ್ಷಕರಿಗೆ ಆಪ್ತವಾಗಿದೆ.

    ಅದೇ ಭೂಗತ ಜಗತ್ತು, ಅದೇ ಮಚ್ಚು ಲಾಂಗು ಮತ್ತು ಹೆಚ್ಚೆಂದರೆ ಪಿಸ್ತೂಲು… ಭೂಗತದ ಕಥೆಯೆಂದರೆ ಇಷ್ಟು ಮಾತ್ರವೇ ಅಲ್ಲ. ಭಿನ್ನವಾಗಿ ಆಲೋಚಿಸಿ ಹೊಸತೇನನ್ನೋ ಹುಡುಕಾಡೋ ಕಣ್ಣುಗಳಿದ್ದರೆ ಅದೇ ಭೂಗತದಲ್ಲಿ ಬೆರಗೊಂದನ್ನು ಆಯ್ದುಕೊಂಡು ಪ್ರೇಕ್ಷಕರನ್ನು ಚಕಿತಗೊಳಿಸಬಹುದೆಂಬುದಕ್ಕೆ ಹಫ್ತಾ ತಾಜಾ ಉದಾಹರಣೆಯಾಗಿ ನಿಲ್ಲುತ್ತದೆ. ಅದುವೇ ಇಡೀ ಸಿನಿಮಾದ ಶಕ್ತಿಯೂ ಹೌದು.

    ಅವರಿಬ್ಬರೂ ಒಟ್ಟಿಗೇ ಆಟವಾಡುತ್ತಾ ಬೆಳೆದ ಕುಚಿಕು ಗೆಳೆಯರು. ಆದರೆ ಬೆಳೆಯುತ್ತಾ ಬಂದಂತೆಲ್ಲ ಬದುಕಿನ ದಾರಿ ಟಿಸಿಲೊಡೆದು ಇಬ್ಬರದ್ದೂ ವಿರುದ್ಧ ದಿಕ್ಕಾಗಿ ಬಿಡುತ್ತೆ. ಅದರಲ್ಲೊಬ್ಬ ಭೂಗತ ಜಗತ್ತಿಗೆ ಎಂಟ್ರಿ ಕೊಟ್ಟು ಬಿಡುತ್ತಾನೆ. ಮತ್ತೊಬ್ಬನದ್ದು ನೀರಿನ ಕ್ಯಾನ್ ಮಾರೋ ಕಾಯಕ. ಹೀಗೆ ತನ್ನ ಪಾಡಿಗೆ ತಾನು ನೀರು ಮಾರೋ ಕೆಲಸ ಮಾಡಿಕೊಂಡಿದ್ದ ಹುಡುಗನಿಗೆ ಭರತನಾಟ್ಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಮೋಹ. ಈ ವ್ಯವಹಾರ ನಿರ್ಣಾಯಕ ಹಂತ ತಲುಪೋದರೊಳಗೇ ಭರತನಾಟ್ಯದ ಗುರುವಿನ ಕಾಕದೃಷ್ಟಿ ಆ ಹುಡುಗಿಯ ಮೇಲೆ ಬಿದ್ದಿರುತ್ತೆ. ತನ್ನ ಪ್ರೀತಿಯ ಹುಡುಗಿಯನ್ನು ಆ ಕಾಮುಕನಿಂದ ಕಾಪಾಡಿಕೊಳ್ಳುವ ಸಲುವಾಗಿ ನೀರು ಮಾರುವ ಕೈಗೆ ರಕ್ತ ಮೆತ್ತಿಕೊಳ್ಳುತ್ತೆ.

    ಈ ಕ್ರೈಂ ಮೂಲಕವೇ ನೀರಿನ ಕ್ಯಾನು ಮಾರೋ ಹುಡುಗನೂ ಭೂಗತಕ್ಕೆ ಎಂಟ್ರಿ ಕೊಟ್ಟಾಕ್ಷಣ ಹಳೇ ಗೆಳೆಯರ ಸಮಾಗಮ ಸಂಭವಿಸುತ್ತೆ. ಇಬ್ಬರೂ ಶಾರ್ಪ್ ಶೂಟರ್‍ಗಳಾಗಿ ವಿಜೃಂಭಿಸುತ್ತಾರೆ. ಇಷ್ಟಾಗುತ್ತಲೇ ವಿರೋಧಿ ಬಣ ಮಸಲತ್ತು ಮಾಡಿ ಈ ಇಬ್ಬರು ನಾಯಕರಲ್ಲೊಬ್ಬನನ್ನು ಅಪಹರಿಸಿ ಲಿಂಗ ಪರಿವರ್ತನೆ ಮಾಡಿ ಬಿಡುತ್ತೆ. ಅದರಾಚೆಗೆ ಇನ್ನಷ್ಟು ವೇಗ ಪಡೆದುಕೊಂಡು ಸಾಗುವ ಕಥೆ ಸಾಮಾನ್ಯರಿಗೆ ಗೊತ್ತಿಲ್ಲದ ವಿಕ್ಷಿಪ್ತ ಜಗತ್ತನ್ನು ತೆರೆದಿಡುತ್ತಾ ಸಾಗುತ್ತದೆ. ಕ್ಷಣ ಕ್ಷಣವೂ ಕುತೂಹಲ ಕೆರಳಿಸುತ್ತಾ ಸಾಗೋ ಕಥೆ ಕ್ಲೈಮ್ಯಾಕ್ಸಿನವರೆಗೂ ಒಂದೇ ವೇಗದಲ್ಲಿ ಪ್ರೇಕ್ಷಕರನ್ನು ಕೈ ಹಿಡಿದು ಕರೆದೊಯ್ಯುತ್ತದೆ. ಈ ನಿಟ್ಟಿನಲ್ಲಿ ನಿರ್ದೇಶಕರಾಗಿ ಪ್ರಕಾಶ್ ಹೆಬ್ಬಾಳ ಚೊಚ್ಚಲ ಚಿತ್ರದಲ್ಲಿಯೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

    ವರ್ಧನ್ ತೀರ್ಥಹಳ್ಳಿ ನಾಯಕನಾಗಿ, ಮಂಗಳಮುಖಿಯ ಪಾತ್ರದಲ್ಲಿಯೂ ಅದ್ಭುತವಾಗಿ ನಟಿಸಿದ್ದಾರೆ. ರಾಘವ್ ನಾಗ್ ಕೂಡಾ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ನಾಯಕಿ ಬಿಂಬಶ್ರೀ ನಟನೆಯೂ ಮನಸೆಳೆಯುವಂತಿದೆ. ಇನ್ನುಳಿದ ಪಾತ್ರ ವರ್ಗವೂ ಈ ಚಿತ್ರವನ್ನು ಪರಿಣಾಮಕಾರಿಯಾಗುವಂಥಾ ನಟನೆ ಕೊಟ್ಟಿದೆ. ಪಕ್ಕಾ ಮಾಸ್ ಶೈಲಿಯ ಈ ಚಿತ್ರ ಹೊಸಾ ಜಗತ್ತೊಂದನ್ನು ನಿಮ್ಮೆದುರು ಅನಾವರಣಗೊಳಿಸುವಂತೆ ಮೂಡಿ ಬಂದಿದೆ.

    ರೇಟಿಂಗ್: 3.5/5

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಈಗ ಎಲ್ಲಿ ನೋಡಿದರೂ ಹಫ್ತಾರೇ ಹಫ್ತಾ!

    ಈಗ ಎಲ್ಲಿ ನೋಡಿದರೂ ಹಫ್ತಾರೇ ಹಫ್ತಾ!

    ಬೆಂಗಳೂರು: ಮೈತ್ರಿ ಮಂಜುನಾಥ್ ನಿರ್ಮಾಣದ ಹಫ್ತಾ ಚಿತ್ರದ ಹಾಡುಗಳೀಗ ಎಲ್ಲೆಡೆ ರಾರಾಜಿಸುತ್ತಿವೆ. ಅದರಲ್ಲಿಯೂ ವಿಶೇಷವಾಗಿ ಇದರ ಟೈಟಲ್ ಸಾಂಗ್ ಅಂತೂ ಟ್ರೆಂಡ್ ಸೆಟ್ ಮಾಡಿದೆ. ಯೂಟ್ಯೂಬ್‍ನಲ್ಲಿಯೂ ಟ್ರೆಂಡಿಂಗ್‍ನಲ್ಲಿರೋ ಈ ಹಾಡಿಗೆ ದಿನದಿಂದ ದಿನಕ್ಕೆ ವೀಕ್ಷಣೆಯ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

    ಪ್ರಕಾಶ್ ಹೆಬ್ಬಾಳ ನಿರ್ದೇಶನದ ಹಫ್ತಾದ ಈ ಟೈಟಲ್ ಸಾಂಗಿಗೆ ಗೌತಮ್ ಶ್ರೀವತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ. ಕವಿರಾಜ್ ಎಲ್ಲರನ್ನೂ ಸೆಳೆಯುವಂಥಾ ಸಾಲುಗಳ ಈ ಹಾಡನ್ನು ಬರೆದಿದ್ದಾರೆ. ಈ ಹಾಡು ಲಹರಿ ಆಡಿಯೋ ಸಂಸ್ಥೆಯ ಮೂಲಕ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದ್ದ ಹಫ್ತಾರೇ ಹಫ್ತಾ ಎಂಬ ಈ ಹಾಡೀಗ ಎಲ್ಲರನ್ನೂ ಗುನುಗುನಿಸುತ್ತಿದೆ.

    ಗೌತಮ್ ಶ್ರೀವತ್ಸ ಈ ಮೂಲಕ ಮತ್ತೆ ಸದ್ದು ಮಾಡಿದ್ದಾರೆ. ರವಿಚಂದ್ರನ್, ಹಂಸಲೇಖಾ ಮುಂತಾದವರ ಗರಡಿಯಲ್ಲಿ ಪಳಗಿಕೊಂಡಿರೋ ಗೌತಮ್ ಈ ಸಿನಿಮಾಗೆ ಹಿನ್ನೆಲೆ ಸಂಗೀತವನ್ನೂ ಒದಗಿಸಿದ್ದಾರೆ. ಹಫ್ತಾ ರೇ ಹಫ್ತಾ ಎಂಬುದು ಇಡೀ ಚಿತ್ರದ ಫೋರ್ಸ್ ಧ್ವನಿಸುವಂಥಾ ಹಾಡು. ಇದಕ್ಕೆ ಪೂರಕವಾದ ಆವೇಗದಲ್ಲಿಯೇ ಇಡೀ ಚಿತ್ರ ಮೂಡಿ ಬಂದಿದೆಯಂತೆ.

    ಕರಾವಳಿ ಕಿನಾರೆಯ ಭೂಗತ ಜಗತ್ತಿನ ಕಥೆ ಹೊಂದಿರೋ ಈ ಚಿತ್ರ ಈಗಾಗಲೇ ಡಿಫರೆಂಟಾದ ಪೋಸ್ಟರ್, ಟೀಸರ್‍ಗಳಿಂದಲೇ ವ್ಯಾಪಕ ಮನ್ನಣೆ ಪಡೆದುಕೊಂಡಿದೆ. ಹಾಡುಗಳು ಹೊರ ಬಂದ ಮೇಲಂತೂ ಹಫ್ತಾದ ಖದರ್ ಎಲ್ಲ ದಿಕ್ಕುಗಳತ್ತಲೂ ಹರಡಿಕೊಳ್ಳುತ್ತಿದೆ. ಮೈತ್ರಿ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ಹಫ್ತಾದ ಖದರ್ ಇಷ್ಟರಲ್ಲಿಯೇ ಪ್ರೇಕ್ಷಕರ ಮುಂದೆ ಪ್ರದರ್ಶನಗೊಳ್ಳಲಿದೆ.

  • ಹಫ್ತಾ: ಕಡಲ ತಡಿಯಿಂದ ಬೀಸಿಬಂದ ಬಿರುಗಾಳಿಯಂಥಾ ಟ್ರೈಲರ್!

    ಹಫ್ತಾ: ಕಡಲ ತಡಿಯಿಂದ ಬೀಸಿಬಂದ ಬಿರುಗಾಳಿಯಂಥಾ ಟ್ರೈಲರ್!

    ಬೆಂಗಳೂರು: ಮೈತ್ರಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ಚಿತ್ರ ಹಫ್ತಾ. ವರ್ಧನ್ ತೀರ್ಥಹಳ್ಳಿ ನಾಯಕ ನಟನಾಗಿ ಲಾಂಚ್ ಆಗುತ್ತಿರೋ ಈ ಚಿತ್ರ ಈಗಾಗಲೇ ಪ್ರೇಕ್ಷಕರ ಗಮನವನ್ನು ತನ್ನತ್ತ ಆಕರ್ಷಿಸಿಕೊಂಡಿದೆ. ಪೋಸ್ಟರ್‍ಗಳ ಮೂಲಕವೇ ಕಡಲ ತಡಿಯ ಭೂಗತ ಲೋಕದ ರೋಚಕ ಸ್ಟೋರಿಯ ಝಲಕ್ ತೋರಿಸಿರುವ ಹಫ್ತಾದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಬೆರಗಾಗುವಂಥಾ ಮೇಕಿಂಗ್, ಅದಕ್ಕೆ ತಕ್ಕುದಾದ ಪಾತ್ರವರ್ಗ ಮತ್ತು ಖಡಕ್ ಕಥೆಯ ಸುಳಿವಿನ ಮೂಲಕ ಇದು ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

    ಈಗಾಗಲೇ ಚಿತ್ರರಂಗದ ಗಣ್ಯರೇ ಒಂದಷ್ಟು ಮಂದಿ ಹಫ್ತಾ ಖದರನ್ನು ಕಂಡು ಮೆಚ್ಚಿಕೊಂಡಿದ್ದಾರೆ. ಒಳ್ಳೆ ಮಾತಾಡುತ್ತಲೇ ಶುಭ ಕೋರಿದ್ದಾರೆ. ಇದೀಗ ಬಿಡುಗಡೆಯಾಗಿರೋ ಟ್ರೈಲರ್ ಹಫ್ತಾದ ಅಂತರಾಳವೇನೆಂಬುದರ ಸ್ಪಷ್ಟ ಸೂಚನೆ ನೀಡಿದೆ. ಕರಾವಳಿ ತೀರದಲ್ಲಿನ ಮಾಫಿಯಾ ಜಗತ್ತಿನ ಸುತ್ತ ಅತ್ಯಾಕರ್ಷಕ ಕಥೆ ಚಿತ್ರವಿಚಿತ್ರ ಪಾತ್ರಗಳ ಮೂಲಕ ಅನಾವರಣಗೊಂಡಿರೋದೂ ಪಕ್ಕಾ ಆಗಿದೆ. ವರ್ಧನ್ ತೀರ್ಥಹಳ್ಳಿ ನಾಯಕನಾಗಿ, ವಿಲನ್ ಆಗಿ ಮಂಗಳಮುಖಿ ಪಾತ್ರದಲ್ಲಿಯೂ ಅಬ್ಬರಿಸಿದ ರೀತಿ ಪ್ರೇಕ್ಷಕರನ್ನು ಸಂತೃಪ್ತಗೊಳಿಸಿದೆ.

    ಈ ಮೂಲಕವೇ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಯಾರೂ ಮುಟ್ಟದ ಕಥೆಯೊಂದನ್ನು ಎತ್ತಿಕೊಂಡು ಆರಂಭಿಕ ಹೆಜ್ಜೆಗಳಲ್ಲಿಯೇ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮೈತ್ರಿ ಮಂಜುನಾಥ್ ಮತ್ತು ಬಾಲರಾಜ್ ಸೇರಿಕೊಂಡು ಈ ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿದ್ದಾರೆಂಬುದಕ್ಕೂ ಈ ಟ್ರೈಲರ್ ಸಾಕ್ಷಿಯಂತಿದೆ. ಒಟ್ಟಾರೆಯಾಗಿ ಕಡಲ ಕಿನಾರೆಯ ಭೂಗತ ಲೋಕದ ಈ ವಿಶಿಷ್ಟ ಕಥಾನಕ ಭಾರೀ ಗೆಲುವಿನ ರೂವಾರಿಯಾಗೋ ಮುನ್ಸೂಚನೆಯಂತೆ ಈ ಟ್ರೈಲರ್ ಮೂಡಿ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹಫ್ತಾ ಬಿಡುಗಡೆಯ ದಿನಾಂಕವೂ ಹೊರಬೀಳಲಿದೆ.

  • ಹಫ್ತಾ: ನಿರ್ಮಾಪಕ ಮೈತ್ರಿ ಮಂಜುನಾಥ್ ಕಣ್ಣಲ್ಲಿ ಗೆಲುವಿನ ಪ್ರಭೆ!

    ಹಫ್ತಾ: ನಿರ್ಮಾಪಕ ಮೈತ್ರಿ ಮಂಜುನಾಥ್ ಕಣ್ಣಲ್ಲಿ ಗೆಲುವಿನ ಪ್ರಭೆ!

    ವರ್ಧನ್ ತೀರ್ಥಹಳ್ಳಿ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ಹಫ್ತಾ. ಪ್ರಕಾಶ್ ಹೆಬ್ಬಾಳ ನಿರ್ದೇಶನದ ಈ ಚಿತ್ರ ವಿಶೇಷವಾದೊಂದು ಕಥೆಯನ್ನು ಹೊಂದಿದೆಯೆಂಬ ಅಂದಾಜು ಈಗಾಗಲೇ ಪ್ರೇಕ್ಷಕರಿಗೆಲ್ಲ ಸಿಕ್ಕಿ ಬಿಟ್ಟಿದೆ. ಯಾವುದೇ ಯಶಸ್ವಿ ಚಿತ್ರ ಬಿಡುಗಡೆಗೂ ಮುಂಚೆಯೇ ಸಕಾರಾತ್ಮಕವಾದ ಟಾಕ್ ಕ್ರಿಯೇಟ್ ಮಾಡುತ್ತವಲ್ಲ? ಆ ರೀತಿಯ ಲಕ್ಷಣಗಳಿಗೆಲ್ಲ ಹಫ್ತಾ ಚಿತ್ರ ರೂವಾರಿಯಾಗಿದೆ. ಇದು ನಿರ್ಮಾಪಕರಾಗಿ ಮೊದಲ ಪ್ರಯತ್ನದಲ್ಲಿಯೇ ಮೈತ್ರಿ ಮಂಜುನಾಥ್ ಅವರಿಗೆ ತುಂಬು ಭರವಸೆಯನ್ನೂ ಹುಟ್ಟಿಸಿದೆ.

    ಮೈತ್ರಿ ಮಂಜುನಾಥ್ ಅವರು ಹಫ್ತಾ ಚಿತ್ರವನ್ನು ಮೈತ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಉದ್ಯಮಿಯಾಗಿ ಗುರುತಿಸಿಕೊಂಡಿರೋ ಮಂಜುನಾಥ್ ಮೈತ್ರಿ ಗ್ರೂಪ್ಸ್ ಮಾಲೀಕರು. ಇದರಡಿಯಲ್ಲಿ ಹಲವಾರು ಉದ್ಯಮಗಳ ಒಡೆಯರಾಗಿರುವ ಅವರ ಪಾಲಿಗೆ ಸಿನಿಮಾ ಮಾಡಬೇಕೆಂಬುದು ಹಳೆಯ ಕನಸು. ಹಾಗಂತ ಅದಕ್ಕೇನೂ ರೂಪುರೇಷೆ ಇಲ್ಲದಿರಲಿಲ್ಲ. ಒಟ್ಟಾರೆ ಒಂದು ಸಿನಿಮಾ ಮಾಡಿ ನಿರ್ಮಾಪಕ ಅನ್ನಿಸಿಕೊಳ್ಳುವ ಯಾವ ಅವಸರವೂ ಅವರಿಗಿರಲಿಲ್ಲ. ಎಲ್ಲ ರೀತಿಯಿಂದಲೂ ತಮಗೆ ಒಪ್ಪಿಗೆಯಾಗುವ, ಕೇಳಿದಾಕ್ಷಣವೇ ಗೆಲುವಿನ ಸೂಚನೆ ಸಿಗುವಂಥಾ ಕಥೆ ಸಿಕ್ಕಿದಾಗಲಷ್ಟೇ ನಿರ್ಮಾಪಕರಾಗಿ ಹೊಸ ಯಾನ ಆರಂಭಿಸಬೇಕೆಂಬ ನಿರ್ಧಾರ ಅವರದ್ದಾಗಿತ್ತು.

    ಇಂಥಾದ್ದೊಂದು ಅಚಲ ನಿರ್ಧಾರಕ್ಕೆ ಹೊಸಾ ಆವೇಗ ಸಿಕ್ಕಿದ್ದು ಎರಡು ವರ್ಷಗಳ ಹಿಂದೆ. ಈ ಸಿನೆಮಾದ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಮಂಜುನಾಥ್ ಅವರಿಗೆ ಬಹು ಕಾಲದ ಗೆಳೆಯ. ಅದೊಂದು ದಿನ ಎಲ್ಲ ತಯಾರಿ ಮಾಡಿಕೊಂಡು ಬಂದಿದ್ದ ಪ್ರಕಾಶ್ ಹಫ್ತಾ ಚಿತ್ರದ ಕಥೆಯನ್ನು ಮಂಜುನಾಥ್ ಅವರಿಗೆ ಒಪ್ಪಿಸಿದ್ದರಂತೆ. ಪೂರ್ತಿ ಕಥೆ ಕೇಳಿದವರಿಗೆ ತಾನು ನಿರ್ಮಾಪಕನಾಗಿ ಪಾದಾರ್ಪಣೆ ಮಾಡಲು ಇದೇ ಸರಿಯಾದ ಕಥೆ ಅಂತ ಆ ಕ್ಷಣವೇ ಅನ್ನಿಸಿತ್ತಂತೆ. ಈ ಕಾರಣದಿಂದಲೇ ಮೈತ್ರಿ ಪ್ರೊಡಕ್ಷನ್ಸ್ ಅಸ್ತಿತ್ವಕ್ಕೆ ಬಂದು ಹಫ್ತಾ ಚಿತ್ರಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿತ್ತು.

    ಬೆಂಗಳೂರಿನವರೇ ಆದ ಮಂಜುನಾಥ್ ಪಾಲಿಗೆ ಸಿನಿಮಾ ಆಕರ್ಷಣೆ ಇಂದು ನಿನ್ನೆಯದ್ದಲ್ಲ. ಈ ಬಗ್ಗೆ ಅಪಾರ ಕ್ರೇಜ್ ಹೊಂದಿದ್ದ ಅವರು ಕೆಲ ಕಿರು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಅದನ್ನು ಸಿನಿಮಾ ಮಾಡುವ ತಯಾರಿಯೆಂದೇ ಪರಿಗಣಿಸಿದ್ದರು. ತಾವೊಂದು ಸಿನಿಮಾ ನಿರ್ಮಾಣ ಮಾಡಿದರೆ ಅದು ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರಬೇಕೆಂದು ಆಶಿಸಿದ್ದ ಮಂಜುನಾಥ್ ಹಫ್ತಾ ಚಿತ್ರವನ್ನೂ ಕೂಡಾ ಅದರಂತೆಯೇ ರೂಪಿಸಿದ ಖುಷಿ ಹೊಂದಿದ್ದಾರೆ.

    ಹಫ್ತಾ ಚಿತ್ರ ಶುರುವಾದ ಮೊದಲ ದಿನವೇ ನೂರಾರು ಮಂದಿಗೆ ಕೆಲಸ ಕೊಟ್ಟ ತೃಪ್ತ ಭಾವವನ್ನೂ ತುಂಬಿಕೊಂಡಿದ್ದ ಮೈತ್ರಿ ಮಂಜುನಾಥ್ ಪಾಲಿಗೆ ಆರಂಭದಿಂದ ಇಲ್ಲಿಯವರೆಗೂ ಒಳ್ಳೆಯ ಅನುಭವಗಳೇ ಕೈ ಹಿಡಿದಿವೆ. ಆರಂಭದಲ್ಲಿ ಪ್ರಕಾಶ್ ಕಥೆ ಹೇಳುವಾಗ ಇದ್ದ ಫೀಲ್‍ಗೆ ಅನುಗುಣವಾಗಿಯೇ ಚಿತ್ರ ಮೂಡಿ ಬಂದಿರೋದರಿಂದ ಅವರಲ್ಲಿ ಗೆಲ್ಲುವ ಭರವಸೆ ಹೆಚ್ಚಾಗಿದೆ. ಕರಾವಳಿ ತೀರದ ಭೂಗತ ಜಗತ್ತಿನ ಕಥೆಯನ್ನು ವಿಭಿನ್ನವಾಗಿಯೇ ತೆರೆ ಮೇಲೆ ತಂದಿರೋದರ ಬಗ್ಗೆ ಖುಷಿ, ಮತ್ತದು ಎಲ್ಲಾ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ಭರವಸೆ ಮಂಜುನಾಥ್ ಅವರದ್ದು.

    ಇದು ಮೈತ್ರಿ ಮಂಜುನಾಥ್ ನಿರ್ಮಾಣದ ಮೊದಲ ಚಿತ್ರ. ಇದರ ಬಗ್ಗೆ ಈಗ ಅಷ್ಟ ದಿಕ್ಕುಗಳಿಂದಲೂ ಒಳ್ಳೆ ಮಾತುಗಳೇ ಕೇಳಿ ಬರುತ್ತಿವೆ. ಈ ಮೂಲಕವೇ ಪುಷ್ಕಳವಾದ ಗೆಲುವು ದಕ್ಕುತ್ತದೆ ಎಂಬ ಭರವಸೆಯೂ ಗಟ್ಟಿಯಾಗುತ್ತಿದೆ. ಇದುವೇ ಮಂಜುನಾಥ್ ಅವರಲ್ಲಿ ನಿರ್ಮಾಪಕರಾಗಿ ನೆಲೆ ಕಂಡುಕೊಳ್ಳುವ ಇರಾದೆಯನ್ನೂ ಹುಟ್ಟಿಸಿದೆ. ಈಗಾಗಲೇ ಅವರು ಎರಡನೇ ಚಿತ್ರಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಇದು ಹಫ್ತಾ ಬಿಡುಗಡೆ ಪೂರ್ವದಲ್ಲಿಯೇ ಸೃಷ್ಟಿಸಿರೋ ಕ್ರೇಜ್‍ನ ಪರಿಣಾಮ!

    https://www.youtube.com/watch?v=zZefRDFISRU

  • ಹಫ್ತಾ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್

    ಹಫ್ತಾ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್

    ಮೈತ್ರಿ ಪ್ರೊಡಕ್ಷನ್ ಲಾಂಛನದಲ್ಲಿ ಮೈತ್ರಿ ಮಂಜುನಾಥ್ ನಿರ್ಮಾಣದ ಹಫ್ತಾ ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಪಿಕೇಟ್ ನೀಡಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಪ್ರಕಾಶ್ ಹೆಬ್ಬಾಳ್ ನಿರ್ದೇಶನವಿದೆ.

    ಸೂರಿ ಸಿನಿಟೆಕ್- ಛಾಯಾಗ್ರಹಣ, ಸಂಗೀತ – ವಿಜಿ ಯಾಡ್ರ್ಲಿ, ಹಿನ್ನೆಲೆ ಸಂಗೀತ – ಗೌತಮ್ ಶ್ರೀವತ್ಸ, ಸಂಕಲನ -ವೆಂಕಿ ಯು.ಡಿ.ವಿ, ಸಹನಿರ್ದೇಶನ – ಕುಮಾರ್ ಟಿ ಗೌಡ ಬಸವರಾಜ್, ಸಾಹಸ – ರಾಕಿ ರಮೇಶ್, ನೃತ್ಯ – ಜೈ ನಿರ್ಮಾಣ ನಿರ್ವಹಣೆ – ಅಚ್ಯುತ್‍ರಾವ್, ದಶಾವರ ಚಂದ್ರು.

    ಈ ಚಿತ್ರವು ಸಂಪೂರ್ಣ ವಾಣಿಜ್ಯಾತ್ಮಕ ಮನರಂಜನೆಯ ಚಿತ್ರವಾಗಿದ್ದು ಚಿತ್ರಕಥೆಯು ಭೂಗತ ಜಗತ್ತಿನ ಹಫ್ತಾ ವಸೂಲಿ ಮತ್ತು ಸುಪಾರಿ ಕಿಲ್ಲರ್ ಗಳ ಅಂಶಗಳನ್ನು ಒಳಗೊಂಡಿರುತ್ತದೆ. ತಾರಾಗಣದಲ್ಲಿ ವರ್ಧನ್ ತೀರ್ಥಹಳ್ಳಿ, ಬಿಂಬಶ್ರೀ ನಿನಾಸಂ, ರಾಘವ್ ನಾಗ್, ಸೌಮ್ಯ ತತೀರ, ಬಲರಾಜ್ ವಾಡಿ, ದಶಾವರ ಚಂದ್ರು, ಉಗ್ರಂ ರವಿ, ಚಂದ್ರು ಮುಂತಾದವರಿದ್ದಾರೆ.