Tag: ಮೈಕ್ರೋಸಾಫ್ಟ್

  • H-1B Visa ಹೊಂದಿರುವವರು 24 ಗಂಟೆಯೊಳಗೆ ಅಮೆರಿಕಗೆ ವಾಪಸ್‌ ಬನ್ನಿ: ಮೆಟಾ, ಮೈಕ್ರೋಸಾಫ್ಟ್‌ ಸೂಚನೆ

    H-1B Visa ಹೊಂದಿರುವವರು 24 ಗಂಟೆಯೊಳಗೆ ಅಮೆರಿಕಗೆ ವಾಪಸ್‌ ಬನ್ನಿ: ಮೆಟಾ, ಮೈಕ್ರೋಸಾಫ್ಟ್‌ ಸೂಚನೆ

    – ಹೆಚ್‌-1ಬಿ ವೀಸಾ ವಾರ್ಷಿಕ ಶುಲ್ಕ 1 ಲಕ್ಷ ಡಾಲರ್‌ಗೆ ಹೆಚ್ಚಳ ಬೆನ್ನಲ್ಲೇ ಪ್ರಮುಖ ಕಂಪನಿಗಳು ಅಲರ್ಟ್‌

    ವಾಷಿಂಗ್ಟನ್: ಅಮೆರಿಕದಿಂದ ಹೊರಗಿರುವ ಹೆಚ್‌-1ಬಿ ವೀಸಾ (H-1B Visa) ಹೊಂದಿರುವ ತಮ್ಮ ಉದ್ಯೋಗಿಗಳಿಗೆ 24 ಗಂಟೆಯೊಳಗೆ ಯುಎಸ್‌ಗೆ ವಾಪಸ್‌ ಬನ್ನಿ ಎಂದು ಮೆಟಾ (Meta), ಮೈಕ್ರೋಸಾಫ್ಟ್‌ನಂತಹ (Microsoft) ಪ್ರಮುಖ ಕಂಪನಿಗಳು ಸೂಚನೆ ನೀಡಿವೆ.

    ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹೆಚ್‌-1ಬಿ ವೀಸಾ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿ ಆದೇಶ ಹೊರಡಿಸಿದ್ದಾರೆ. ಘೋಷಣೆ ಅಮೆರಿಕ ಕಂಪನಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್‌-1ಬಿ ವೀಸಾ ಹೊಂದಿರುವ ತಮ್ಮ ಉದ್ಯೋಗಿಗಳಿಗೆ ಯುಎಸ್‌ಗೆ ತಕ್ಷಣ ಮರಳುವಂತೆ ಸೂಚಿಸಿವೆ. ಇದನ್ನೂ ಓದಿ: ಭಾರತೀಯ ಉದ್ಯೋಗಿಗಳಿಗೆ ಶಾಕ್‌; H-1B ವೀಸಾ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿದ ಟ್ರಂಪ್‌

    ಪ್ರಸ್ತುತ ಅಮೆರಿಕದ ಹೊರಗೆ ವಾಸಿಸುತ್ತಿರುವ ತಮ್ಮ ಉದ್ಯೋಗಿಗಳಿಗೆ ಮರುಪ್ರವೇಶ ನಿರಾಕರಣೆಯನ್ನು ತಪ್ಪಿಸಲು 24 ಗಂಟೆಗಳ ಒಳಗೆ ದೇಶಕ್ಕೆ ಮರಳುವಂತೆ ಒತ್ತಾಯಿಸಿವೆ. ಎಲ್ಲಾ H-1B ವೀಸಾ ಹೊಂದಿರುವವರು ಕನಿಷ್ಠ 14 ದಿನಗಳ ವರೆಗೆ ಅಮೆರಿಕವನ್ನು ತೊರೆಯದಂತೆ ಒತ್ತಾಯಿಸಿವೆ. ಉತ್ತಮ ಭವಿಷ್ಯಕ್ಕಾಗಿ ನಮ್ಮ ನಿರ್ದೇಶನಗಳನ್ನು ಪಾಲಿಸಿ ಎಂದು ವಿದೇಶಿ ಉದ್ಯೋಗಿಗಳಿಗೆ ಸಲಹೆ ನೀಡಿವೆ.

    H-1B ವೀಸಾ ಮತ್ತು H4 ಸ್ಥಾನಮಾನ ಹೊಂದಿರುವವರು, ಅಮೆರಿಕ ಸರ್ಕಾರದ ಹೊಸ ನಿಯಮಗಳು ಏನೆಂದು ತಿಳಿಯುವವರೆಗೆ ಕನಿಷ್ಠ ಎರಡು ವಾರಗಳ ಕಾಲ ಅಮೆರಿಕದಲ್ಲಿಯೇ ಇರಬೇಕು. ಪ್ರಸ್ತುತ ದೇಶದಿಂದ ಹೊರಗೆ ಇರುವವರು 24 ಗಂಟೆಗಳ ಒಳಗೆ ಹಿಂತಿರುಗಬೇಕು ಎಂದು ಮೆಟಾ ತನ್ನ ಉದ್ಯೋಗಿಗಳಿಗೆ ತಿಳಿಸಿದೆ. ಇದನ್ನೂ ಓದಿ: ಪಾಕಿಸ್ತಾನ ನನ್ನ ಮನೆಯಂತೆ ಭಾಸವಾಗುತ್ತೆ, ಭಾರತ ಶಾಂತಿ ಮಾತುಕತೆ ನಡೆಸಬೇಕು: ಸ್ಯಾಮ್ ಪಿತ್ರೋಡಾ ಹೇಳಿಕೆ ವಿವಾದ

    ವಿಶೇಷ ವೃತ್ತಿ, ತಂತ್ರಜ್ಞಾನ ಕ್ಷೇತ್ರದಲ್ಲಿರುವ ನುರಿತರಿಗೆ ಅಮೆರಿಕದ ಹೆಚ್‌-1ಬಿ ವೀಸಾ ಮೀಸಲಾಗಿದೆ. ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಟೆಕ್ ಪ್ರೋಗ್ರಾಂ ವ್ಯವಸ್ಥಾಪಕರು ಮತ್ತು ಇತರ ಐಟಿ ವೃತ್ತಿಪರರನ್ನು ಈ ವೀಸಾ ಒಳಗೊಂಡಿರುತ್ತದೆ. ಅವು ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತವೆ. ಇನ್ನೂ ಮೂರು ವರ್ಷಗಳವರೆಗೆ ನವೀಕರಿಸಬಹುದು.

  • 25 ವರ್ಷದ ಬಳಿಕ ಪಾಕ್‌ ತೊರೆದ ಮೈಕ್ರೋಸಾಫ್ಟ್‌

    25 ವರ್ಷದ ಬಳಿಕ ಪಾಕ್‌ ತೊರೆದ ಮೈಕ್ರೋಸಾಫ್ಟ್‌

    ಇಸ್ಲಾಮಾಬಾದ್‌: ಆರ್ಥಿಕ ಕುಸಿತದಲ್ಲಿರುವ (Economic Crisis) ಪಾಕಿಸ್ತಾನಕ್ಕೆ ಈ ಮೈಕ್ರೋಸಾಫ್ಟ್‌ (Microsoft) ದೊಡ್ಡ ಶಾಕ್‌ ನೀಡಿದೆ. 25 ವರ್ಷದ ಬಳಿಕ ಪಾಕಿಸ್ತಾನದಲ್ಲಿರುವ ತನ್ನ ಕಚೇರಿಯನ್ನು ಮುಚ್ಚಲು ಮೈಕ್ರೋಸಾಫ್ಟ್‌ ಮುಂದಾಗಿದೆ.

    2000ನೇ ಇಸ್ವಿಯಲ್ಲಿ ಮೈಕ್ರೋಸಾಫ್ಟ್‌ ಪಾಕಿಸ್ತಾನದಲ್ಲಿ (Pakistan) ತನ್ನ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಮೈಕ್ರೋಸಾಫ್ಟ್ ಯಾವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ ಎನ್ನುವುದನ್ನು ಕಾರಣ ತಿಳಿಸದೇ ಇದ್ದರೂ ಆರ್ಥಿಕ ಪ್ರಕ್ಷುಬ್ಧತೆ ಮತ್ತು ಬದಲಾಗುತ್ತಿರುವ ರಾಜಕೀಯ ಕಾರಣದಿಂದ ಈ ನಿರ್ಧಾರ ಕೈಗೊಂಡಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ವಿಶ್ವಾದ್ಯಂತ ಸುಮಾರು 9,100 ಉದ್ಯೋಗಗಳನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಮೈಕ್ರೋಸಾಫ್ಟ್‌ ಪಾಕ್‌ ತೊರೆಯುವ ಸುದ್ದಿ ಪ್ರಕಟವಾಗಿದೆ.

    ಪಾಕಿಸ್ತಾನದಲ್ಲಿ ಮೈಕ್ರೋಸಾಫ್ಟ್‌ ಹೂಡಿಕೆ ಮಾಡಲು ಮುಂದಾಗಿತ್ತು. ಆದರೆ ಇಮ್ರಾನ್ ಖಾನ್ ಪದಚ್ಯುತಗೊಳಿಸಿದ ನಂತರ ದೇಶದಲ್ಲಿನ ಅಸ್ಥಿರತೆಯಿಂದಾಗಿ ಮೈಕ್ರೋಸಾಫ್ಟ್ ತನ್ನ ವಿಸ್ತರಣೆಯನ್ನು ವಿಯೆಟ್ನಾಂಗೆ ಬದಲಾಯಿಸಿದೆ.  ಇದನ್ನೂ ಓದಿ9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌ 

    ಪಾಕಿಸ್ತಾನದಲ್ಲಿ ಮೈಕ್ರೋಸಾಫ್ಟ್‌ ಸ್ಥಾಪಕ ಮುಖ್ಯಸ್ಥ ಜವಾದ್ ರೆಹಮಾನ್ ಲಿಕ್ಡ್‌ಇನ್‌ನಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಮೈಕ್ರೋಸಾಫ್ಟ್ ಪಾಕಿಸ್ತಾನದಲ್ಲಿ ತನ್ನ ಕಾರ್ಯಾಚರಣೆಗಳನ್ನು ಅಧಿಕೃತವಾಗಿ ಮುಚ್ಚುತ್ತಿದೆ ಎನ್ನುವುದನ್ನು ನಾನು ತಿಳಿದುಕೊಂಡೆ. ಉಳಿದಿರುವ ಕೊನೆಯ ಕೆಲವು ಉದ್ಯೋಗಿಗಳಿಗೆ ಔಪಚಾರಿಕವಾಗಿ ತಿಳಿಸಲಾಯಿತು. ಒಂದು ಯುಗ ಕೊನೆಗೊಳ್ಳುತ್ತದೆ ಎಂದು ಬರೆದುಕೊಂಡಿದ್ದಾರೆ.

    ಮೈಕ್ರೋಸಾಫ್ಟ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಸುದ್ದಿಗೆ ಪ್ರತಿಕ್ರಿಯಿಸಿದ ಮಾಜಿ ಅಧ್ಯಕ್ಷ ಆರಿಫ್ ಅಲ್ವಿ, ಮೈಕ್ರೋಸಾಫ್ಟ್ ನಿರ್ಧಾರವು ನಮ್ಮ ಆರ್ಥಿಕ ಭವಿಷ್ಯಕ್ಕೆ ಕಳವಳಕಾರಿ ಸಂಕೇತವಾಗಿದೆ. ಫೆಬ್ರವರಿ 2022 ರಲ್ಲಿ ಬಿಲ್ ಗೇಟ್ಸ್ ನನ್ನ ಕಚೇರಿಗೆ ಭೇಟಿ ನೀಡಿದ್ದನ್ನು ನಾನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ಪಾಕಿಸ್ತಾನದ ಜನರ ಪರವಾಗಿ, ನಮ್ಮ ದೇಶದಲ್ಲಿ ಪೋಲಿಯೊ ನಿರ್ಮೂಲನೆಗೆ ಅವರ ಗಮನಾರ್ಹ ಕೊಡುಗೆಗಳಿಗಾಗಿ ಅವರಿಗೆ ಹಿಲಾಲ್-ಎ-ಇಮ್ತಿಯಾಜ್ ಪ್ರಶಸ್ತಿಯನ್ನು ನೀಡುವ ಗೌರವ ನನಗೆ ಸಿಕ್ಕಿತು ಎಂದು ಬರೆದುಕೊಂಡಿದ್ದಾರೆ.

    ಪಾಕಿಸ್ತಾನ ಈಗ ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿದೆ. ಹೆಚ್ಚುತ್ತಿರುವ ನಿರುದ್ಯೋಗವಿದೆ. ನಮ್ಮಲ್ಲಿನ ಪ್ರತಿಭಾವಂತರು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಖರೀದಿಸುವ ಶಕ್ತಿ ಕಡಿಮೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

  • 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌

    9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌

    ವಾಷಿಂಗ್ಟನ್‌: ಸಾಫ್ಟ್‌ವೇರ್‌ ದೈತ್ಯ ಮೈಕ್ರೋಸಾಫ್ಟ್‌ (Microsoft) 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ.

    2023 ರ ನಂತರದ ಅತಿದೊಡ್ಡ ಉದ್ಯೋಗ ಕಡಿತ (Job Cut) ಮಾಡಲು ಮೈಕ್ರೋಸಾಫ್ಟ್‌ ಮುಂದಾಗಿದೆ. ಒಟ್ಟು ಉದ್ಯೋಗಿಗಳ ಪೈಕಿ 4% ಅಥವಾ 9,100 ಜನರನ್ನು ವಜಾಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ.

    ಜೂನ್ 2024 ರ ಹೊತ್ತಿಗೆ ವಿಶ್ವಾದ್ಯಂತ ಸುಮಾರು 2,28,000 ಉದ್ಯೋಗಿಗಳನ್ನು ಮೈಕ್ರೋಸಾಫ್ಟ್‌ ಹೊಂದಿತ್ತು. ಮೈಕ್ರೋಸಾಫ್ಟ್ ಮೇ ತಿಂಗಳಲ್ಲಿ 6,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈ ಬಾರಿ ವಿಶೇಷವಾಗಿ ಮಾರಾಟ ವಿಭಾಗದಲ್ಲಿ ಉದ್ಯೋಗ ಕಡಿತಗೊಳಿಸಲು ಮುಂದಾಗಿದೆ. ಇದನ್ನೂ ಓದಿ: ಮೈಕ್ರೋಸಾಫ್ಟ್‌ ಹಿಂದಿಕ್ಕಿ ವಿಶ್ವದ ಮೌಲ್ಯಯುತ ಕಂಪನಿಯಾದ ಎನ್‌ವಿಡಿಯಾ

    ಆರ್ಥಿಕ ಅಸ್ಥಿರತೆಯಿಂದಾಗಿ ಕಳೆದ ವರ್ಷದಿಂದ ವೆಚ್ಚಕ್ಕೆ ಕಡಿವಾಣ ಹಾಕಲು ಮೈಕ್ರೋಸಾಫ್ಟ್‌ ಮುಂದಾಗುತ್ತಿದ್ದು ಅದರಲ್ಲಿ ನೌಕರರ ವಜಾಗೊಳಿಸುವ ಕ್ರಮವೂ ಸೇರಿದೆ. ಕಳೆದ ವರ್ಷವೂ ಇದೇ ರೀತಿಯಲ್ಲಿ ಉದ್ಯೋಗ ಕಡಿತ ಮಾಡಿತ್ತು. ಈ ಮೂಲಕ ಕಂಪನಿಯು ತನ್ನ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವ ಪ್ರಯತ್ನಕ್ಕೆ ಕೈಹಾಕಿತ್ತು.

    ಕೃತಕ ಬುದ್ಧಿಮತ್ತೆಯಲ್ಲಿ (AI) ಭಾರಿ ಹೂಡಿಕೆ ಮಾಡುತ್ತಿರುವ ಬಿಗ್‌ ಟೆಕ್‌ ಕಂಪನಿಗಳು ಈಗ ಉದ್ಯೋಗ ಕಡಿತಕ್ಕೆ ಕೈಹಾಕಿವೆ. ಈ ವರ್ಷದ ಆರಂಭದಲ್ಲಿ ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾ 5% ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿತ್ತು. ಗೂಗಲ್‌ ಕಳೆದ ವರ್ಷ ನೂರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು.

  • ಮೈಕ್ರೋಸಾಫ್ಟ್‌ ಹಿಂದಿಕ್ಕಿ ವಿಶ್ವದ ಮೌಲ್ಯಯುತ ಕಂಪನಿಯಾದ ಎನ್‌ವಿಡಿಯಾ

    ಮೈಕ್ರೋಸಾಫ್ಟ್‌ ಹಿಂದಿಕ್ಕಿ ವಿಶ್ವದ ಮೌಲ್ಯಯುತ ಕಂಪನಿಯಾದ ಎನ್‌ವಿಡಿಯಾ

    ವಾಷಿಂಗ್ಟನ್‌: ಚಿಪ್‌ ತಯಾರಕ ಎನ್‌ವಿಡಿಯಾ (Nvidia) ಮೈಕ್ರೋಸಾಫ್ಟ್‌ (Microsoft) ಹಿಂದಿಕ್ಕಿ ವಿಶ್ವದ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ.

    ಈ ವಾರ ಎನ್‌ವಿಡಿಯಾದ ಷೇರು ಮೌಲ್ಯ ಏರಿಕೆಯಾಗುತ್ತಾ ಸಾಗಿದ್ದರಿಂದ ಈಗ 3.34 ಲಕ್ಷ ಕೋಟಿ ಡಾಲರ್‌  ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದೆ.

    ಮೈಕ್ರೋಸಾಫ್ಟ್‌ 3.32 ಲಕ್ಷ ಕೋಟಿ ಡಾಲರ್‌ ಮೌಲ್ಯದ ಕಂಪನಿಯಾಗಿದ್ದರೆ ಐಫೋನ್‌ ತಯಾರಕಾ ಆಪಲ್‌ (Apple) 3.29 ಲಕ್ಷ ಕೋಟಿ ಡಾಲರ್‌ ಮೌಲ್ಯದ ಕಂಪನಿಯಾಗಿದೆ. ಇದನ್ನೂ ಓದಿ: Mandya | ಕೆಆರ್‌ಎಸ್‌ ಡ್ಯಾಂನಿಂದ ಕಾವೇರಿ ನದಿಗೆ 45,000 ಕ್ಯೂಸೆಕ್ ನೀರು

    ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (AI) ಬೇಡಿಕೆ ಹೆಚ್ಚಾಗುತ್ತಿದ್ದಂತೆ ಚಿಪ್ ತಯಾರಕಾ ಕಂಪನಿಗಳ ಷೇರುಗಳ ಮೌಲ್ಯ ಏರಿಕೆ ಆಗುತ್ತಿದೆ. ಒಂದು ವರ್ಷದಲ್ಲಿ ಎನ್‌ವಿಡಿಯಾ ಷೇರು ಮೌಲ್ಯ 27% ಏರಿಕೆಯಾಗಿದ್ದರೆ ಕಳೆದ 5 ದಿನಗಳಲ್ಲಿ 7.13% ಏರಿಕೆಯಾಗಿದೆ. ಸದ್ಯ ಈಗ ಎನ್‌ವಿಡಿಯಾ 1 ಷೇರು 154.31 ಡಾಲರ್‌ (13,224 ರೂ.) ವಹಿವಾಟು ನಡೆಸುತ್ತಿದೆ. ಇದನ್ನೂ ಓದಿ: NASA Axiom-4 Mission | ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ

    ಈ ವರ್ಷದ ಅಂತ್ಯದಲ್ಲಿ ಎನ್‌ವಿಡಿಯಾ ಬ್ಲ್ಯಾಕ್‌ವೆಲ್ ಲೈನ್ ಸೇರಿದಂತೆ ಹೊಸ ಚಿಪ್‌ಗಳನ್ನು ಬಿಡುಗಡೆ ಮಾಡಲಿದ್ದು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮುಂದುವರಿಯಲಿದೆ.

  • ಕಮಲಾಗೆ ಗೂಗಲ್‌, ಮೈಕ್ರೋಸಾಫ್ಟ್‌ ಭಾರೀ ದೇಣಿಗೆ – ಟ್ರಂಪ್‌ಗೆ ಅಮೆರಿಕನ್‌ ಏರ್‌ಲೈನ್ಸ್‌, ವಾಲ್‌ಮಾರ್ಟ್‌ ಸಹಾಯ

    ಕಮಲಾಗೆ ಗೂಗಲ್‌, ಮೈಕ್ರೋಸಾಫ್ಟ್‌ ಭಾರೀ ದೇಣಿಗೆ – ಟ್ರಂಪ್‌ಗೆ ಅಮೆರಿಕನ್‌ ಏರ್‌ಲೈನ್ಸ್‌, ವಾಲ್‌ಮಾರ್ಟ್‌ ಸಹಾಯ

    ವಾಷಿಂಗ್ಟನ್‌: ಅಮೆರಿಕದ ಚುನಾವಣೆ (US Presidential Election) ಕಾವೇರುತ್ತಿದ್ದು ಕಂಪನಿಗಳೇ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ದೇಣಿಗೆ ನೀಡಿವೆ.

    ಗೂಗಲ್‌ ಮತ್ತು ಮೈಕ್ರೋಸಾಫ್ಟ್‌ ಕಂಪನಿ ಕಮಲಾ ಹ್ಯಾರಿಸ್‌ (Kamala Harris) ಭಾರೀ ಮೊತ್ತದ ದೇಣಿಗೆ ನೀಡಿದರೆ ಡೊನಾಲ್ಡ್‌ ಟ್ರಂಪ್‌ಗೆ (Donald Trump) ಅಮೆರಿನ್‌ ಏರ್‌ಲೈನ್ಸ್‌, ವಾಲ್‌ಮಾರ್ಟ್‌ ಹಣಕಾಸಿನ ಸಹಾಯ ನೀಡಿದೆ. ಇದನ್ನೂ ಓದಿ: ಇಸ್ರೇಲ್‌ ರಾಕೆಟ್‌ ದಾಳಿಗೆ ಲೆಬನಾನ್‌ ಛಿದ್ರ ಛಿದ್ರ – ಸಾವಿನ ಸಂಖ್ಯೆ 492ಕ್ಕೆ ಏರಿಕೆ!


    ಯಾರಿಗೆ ಎಷ್ಟು?
    ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಗೂಗಲ್‌ 14,64,292 ಡಾಲರ್‌, ಮೈಕ್ರೋಸಾಫ್ಟ್‌ 7,43,045 ಡಾಲರ್‌, ಬ್ರೌನ್‌ ಆಂಡ್‌ ಬ್ರೌನ್‌ 3,24,568 ಡಾಲರ್‌ ನೀಡಿದೆ.

    ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರಿಗೆ ಅಮೆರಿಕನ್‌ ಏರ್‌ಲೈನ್ಸ್‌ 1,34,174 ಡಾಲರ್‌, ವಾಲ್‌ಮಾರ್ಟ್‌ 83,908 ಡಾಲರ್‌, ಬೋಯಿಂಗ್‌ 82,761 ಡಾಲರ್‌ ನೀಡಿದೆ.

    ಈ ವಿಚಾರವನ್ನು ಎಕ್ಸ್‌ ಮುಖ್ಯಸ್ಥ ಎಲೋನ್‌ ಮಸ್ಕ್ (Elon Musk) ಪ್ರಸ್ತಾಪಿಸಿ, ಗೂಗಲ್ ಮತ್ತು ಮೈಕ್ರೋಸಾಫ್ಟ್ ಡೆಮಾಕ್ರಟಿಕ್ ಪಕ್ಷಕ್ಕೆ ಭಾರೀ ದೇಣಿಗೆ ನೀಡಿವೆ. ಈ ಎರಡೂ ಕಂಪನಿಗಳು ಸುಮಾರು 100%  ಹುಡುಕಾಟವನ್ನು ನಿಯಂತ್ರಿಸುತ್ತವೆ. ಇವರು ಸಹಾಯ ಮಾಡದೇ ಇದ್ದರೂ ಪಕ್ಷಪಾತವನ್ನು ಪರಿಚಯಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     

  • ಭಾರತದಲ್ಲಿ ಏರ್‌ಲೈನ್ಸ್ ವ್ಯವಸ್ಥೆಗಳು ಸಹಜ ಸ್ಥಿತಿಗೆ ಮರಳಿವೆ – ನಾಗರಿಕ ವಿಮಾನಯಾನ ಸಚಿವಾಲಯ

    ಭಾರತದಲ್ಲಿ ಏರ್‌ಲೈನ್ಸ್ ವ್ಯವಸ್ಥೆಗಳು ಸಹಜ ಸ್ಥಿತಿಗೆ ಮರಳಿವೆ – ನಾಗರಿಕ ವಿಮಾನಯಾನ ಸಚಿವಾಲಯ

    ನವದೆಹಲಿ: ಮೈಕ್ರೋಸಾಫ್ಟ್ ಕ್ಲೌಡ್‌ನಲ್ಲಿ (Microsoft Cloud) ಕಂಡುಬಂದ ಸಮಸ್ಯೆ ಸರಿಯಾಗಿದ್ದು, ಇದರಿಂದ ಉಂಟಾದ ಸಮಸ್ಯೆಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುತ್ತಿದೆ. ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಿಮಾನಯಾನ ವ್ಯವಸ್ಥೆಗಳು ಸಹಜ ಸ್ಥಿತಿಗೆ ಮರಳಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (Ministry of Civil Aviation) ಶನಿವಾರ ಹೇಳಿದೆ.

    ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವಾಲಯ, ಬೆಳಗ್ಗೆ 3 ಗಂಟೆಯಿಂದ ವಿಮಾನ ನಿಲ್ದಾಣಗಳಲ್ಲಿ ಏರ್‌ಲೈನ್ ವ್ಯವಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಈಗ ವಿಮಾನ ಕಾರ್ಯಾಚರಣೆಗಳು ಸುಗಮವಾಗಿ ನಡೆಯುತ್ತಿವೆ. ಶುಕ್ರವಾರ ಅಡಚಣೆಗಳಿಂದ ಉಂಟಾದ ಸಮಸ್ಯೆಗಳನ್ನು ಸರಿಪಡಿಸಲಾಗುತ್ತಿದೆ ಎಂದು ಹೇಳಿದೆ.

    ಈ ನಡುವೆ ಬಯೋಮೆಟ್ರಿಕ್ ಆಧಾರಿತ ಬೋರ್ಡಿಂಗ್ ವ್ಯವಸ್ಥೆಯಾದ ಡಿಜಿ ಯಾತ್ರಾ ವ್ಯವಸ್ಥೆಯು ಕಾರ್ಯನಿರ್ವಹಿಸದ ಕಾರಣ ದೆಹಲಿಯ ಐಜಿಐ ವಿಮಾನ ನಿಲ್ದಾಣವು ಶನಿವಾರ ಬೆಳಗ್ಗೆ ಗಮನಾರ್ಹ ಅಡಚಣೆಗಳನ್ನು ಎದುರಿಸಿತು. ಪ್ರಯಾಣಿಕರು ಮ್ಯಾನುವಲ್ ಚೆಕ್ ಇನ್ ಮಾಡಲು ಪ್ರಯಾಸಪಡುತ್ತಿದ್ದರಿಂದ ನಿರ್ಗಮನ ಟರ್ಮಿನಲ್‌ಗಳಲ್ಲಿ ದೊಡ್ಡ ಸರತಿ ಸಾಲುಗಳು ಏರ್ಪಟ್ಟಿತು.

    ಪ್ರಯಾಣಿಕರಿಗೆ ಸಹಾಯ ಮಾಡಲು ಮತ್ತು ದಟ್ಟಣೆಯನ್ನು ನಿರ್ವಹಿಸಲು ವಿಮಾನ ನಿಲ್ದಾಣದ ಅಧಿಕಾರಿಗಳು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ 400ಕ್ಕೂ ಹೆಚ್ಚು ವಿಮಾನಗಳು ವಿಳಂಬವನ್ನು ಎದುರಿಸುತ್ತಿವೆ. ಹಲವಾರು ಪ್ರಯಾಣಿಕರು ಕೈಬರಹದ ಬೋರ್ಡಿಂಗ್ ಪಾಸ್‌ಗಳ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

  • ವಿಶ್ವಾದ್ಯಂತ ಸಾಫ್ಟ್‌ವೇರ್‌ ಸ್ಥಗಿತ – ವಿಮಾನ, ಸ್ಟಾಕ್‌ ಎಕ್ಸ್‌ಚೇಂಜ್‌, ಬ್ಯಾಂಕಿಂಗ್‌ ಸೇವೆಯಲ್ಲಿ ವ್ಯತ್ಯಯ

    ವಿಶ್ವಾದ್ಯಂತ ಸಾಫ್ಟ್‌ವೇರ್‌ ಸ್ಥಗಿತ – ವಿಮಾನ, ಸ್ಟಾಕ್‌ ಎಕ್ಸ್‌ಚೇಂಜ್‌, ಬ್ಯಾಂಕಿಂಗ್‌ ಸೇವೆಯಲ್ಲಿ ವ್ಯತ್ಯಯ

    – ಬೆಂಗಳೂರು, ದೆಹಲಿ ವಿಮಾನ ನಿಲ್ದಾಣದಲ್ಲೂ ಸಮಸ್ಯೆ
    – ಹೈದರಾಬಾದ್ ಏರ್ಪೋಟ್‌ನಲ್ಲಿ ಕೈಬರಹದಲ್ಲೇ ಬೋರ್ಡಿಂಗ್ ಪಾಸ್ ವಿತರಣೆ

    ನವದೆಹಲಿ: ಮೈಕ್ರೋಸಾಫ್ಟ್‌ (Microsoft) ಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ವಿಮಾನ, ಸೂಪರ್‌ಮಾರ್ಕೆಟ್‌, ಬ್ಯಾಂಕಿಂಗ್‌ ಸೇರಿದಂತೆ ಅನೇಕ ವಲಯಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

    ತಾಂತ್ರಿಕ ಸಮಸ್ಯೆಯಿಂದ ಭಾರತದ ಇಂಡಿಗೋ, ಸ್ಪೈಸ್‌ಜೆಟ್ ಮತ್ತು ಆಕಾಶ ಏರ್ ಬುಕಿಂಗ್, ಚೆಕ್-ಇನ್ ಮತ್ತು ಫ್ಲೈಟ್ ನವೀಕರಣಗಳ ಸೇವೆ ಮೇಲೆ ಪರಿಣಾಮ ಬೀರಿದೆ. ದೆಹಲಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಸಮಸ್ಯೆ ತಲೆದೋರಿದೆ. ಸಮಸ್ಯೆ ಕುರಿತು ಪ್ರತಿಕ್ರಿಯಿಸಿರುವ ಮೈಕ್ರೋಸಾಫ್ಟ್‌, ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಇದನ್ನೂ ಓದಿ: ದೇವರು ನನ್ನನ್ನು ಕಾಪಾಡಿದ: ಹಂತಕನ ಗುಂಡೇಟಿನಿಂದ ಬಚಾವಾದ ಟ್ರಂಪ್‌ ಮಾತು

    ತಾಂತ್ರಿಕ ಸಮಸ್ಯೆಯಿಂದಾಗಿ ಹೈದರಾಬಾದ್ ಏರ್ಪೋರ್ಟ್‌ನಲ್ಲಿ ಕೈಬರಹದಲ್ಲೇ ಬೋರ್ಡಿಂಗ್ ಪಾಸ್ ವಿತರಣೆ ಮಾಡಲಾಗುತ್ತಿದೆ. ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಸೇವೆಯಲ್ಲೂ ವ್ಯತ್ಯಯವಾಗಿದೆ. ಸ್ಕೈ ನ್ಯೂಸ್, ಆಸ್ಟ್ರೇಲಿಯಾದ ಎಬಿಸಿ ನ್ಯೂಸ್ ಪ್ರಸಾರ ಸ್ಥಗಿತಗೊಂಡಿದೆ. ಬ್ರಿಟನ್‌ನಲ್ಲೂ ರೈಲು ಸೇವೆ ಸ್ಥಗಿತವಾಗಿದೆ. ಭಾರತದ ಐಟಿ ಇಲಾಖೆಯಿಂದ ಮೈಕ್ರೋಸಾಫ್ಟ್ ಸಂಸ್ಥೆ ಜೊತೆ ಸಂಪರ್ಕ ಸಾಧಿಸಲಾಗುತ್ತಿದೆ.

    ವಿಮಾನ ಕಾರ್ಯಾಚರಣೆಯ ಅಡೆತಡೆಗಳ ಕುರಿತು ನವೀಕರಣಗಳನ್ನು ಒದಗಿಸುವಲ್ಲಿ ನಾವು ಪ್ರಸ್ತುತ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಈ ಸಮಸ್ಯೆಯನ್ನು ಪರಿಹರಿಸಲು ನಮ್ಮ ತಂಡವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಯಾವುದೇ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ನಿಮ್ಮ ತಾಳ್ಮೆ ಮತ್ತು ಸಹಕಾರಕ್ಕಾಗಿ ಧನ್ಯವಾದಗಳು ಎಂದು ಸ್ಪೈಸ್‌ಜೆಟ್ ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ಪ್ರತಿಭಟನೆ – ಹಿಂಸಾಚಾರಕ್ಕೆ 32 ಮಂದಿ ಬಲಿ!

    ದೆಹಲಿ ವಿಮಾನ ನಿಲ್ದಾಣವು ಕೆಲವು ಸೇವೆಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ. ಜಾಗತಿಕ ಐಟಿ ಸಮಸ್ಯೆಯಿಂದಾಗಿ, ದೆಹಲಿ ವಿಮಾನ ನಿಲ್ದಾಣದಲ್ಲಿನ ಕೆಲವು ಸೇವೆಗಳು ತಾತ್ಕಾಲಿಕವಾಗಿ ಪರಿಣಾಮ ಬೀರಿವೆ. ನಮ್ಮ ಪ್ರಯಾಣಿಕರಿಗೆ ಎದುರಾಗಿರುವ ಅನಾನುಕೂಲತೆಯನ್ನು ಕಡಿಮೆ ಮಾಡಲು ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದು ತಿಳಿಸಿದೆ.

  • ರಾತ್ರಿ ನಾನು ಭಾರತ – ನ್ಯೂಜಿಲೆಂಡ್‌ ಸೆಮಿಫೈನಲ್‌ ವೀಕ್ಷಿಸಿದ್ದೆ: ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ

    ರಾತ್ರಿ ನಾನು ಭಾರತ – ನ್ಯೂಜಿಲೆಂಡ್‌ ಸೆಮಿಫೈನಲ್‌ ವೀಕ್ಷಿಸಿದ್ದೆ: ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ

    ವಾಷಿಂಗ್ಟನ್‌: ಮೈಕ್ರೋಸಾಫ್ಟ್‌ (Microsoft) ಸಿಇಒ ಸತ್ಯ ನಾದೆಲ್ಲಾ (Satya Nadella) ಅವರು ಭಾರತ (India) ಮತ್ತು ನ್ಯೂಜಿಲೆಂಡ್‌ (New Zealand) ನಡುವಿನ ವಿಶ್ವಕಪ್‌ ಕ್ರಿಕೆಟ್‌ (World Cup Cricket) ಸೆಮಿಫೈನಲ್‌ ಪಂದ್ಯವನ್ನು ವೀಕ್ಷಿಸಿ ಸುದ್ದಿಯಾಗಿದ್ದಾರೆ.

    ಈ ಹಿಂದೆ ಹಲವು ಬಾರಿ ಕ್ರಿಕೆಟ್‌ ಬಗ್ಗೆ ಮಾತನಾಡಿರುವ ಸತ್ಯ ನಾದೆಲ್ಲಾ ಅವರು ಮೈಕ್ರೋಸಾಫ್ಟ್‌ ಕಾರ್ಯಕ್ರಮದಲ್ಲಿ ರಾತ್ರಿ ನಾನು ಕ್ರಿಕೆಟ್‌ ಸೆಮಿಫೈನಲ್‌ ವೀಕ್ಷಣೆ ಮಾಡಿದ್ದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಶಮಿಗೆ 7 ವಿಕೆಟ್ ಸಿಗುತ್ತೆ – ನ.14ಕ್ಕೆ ಬಿದ್ದ ಕನಸು ನನಸಾಯ್ತು

    ಮೈಕ್ರೋಸಾಫ್ಟ್ ಇಗ್ನೈಟ್ 2023 ( Microsof Ignite 2023) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ರಾತ್ರಿಯಿಡೀ ಎಚ್ಚರಗೊಂಡಿದ್ದೆ. ಈ ಇಗ್ನೈಟ್ ಕಾರ್ಯಕ್ರಮವನ್ನು ನಿಗದಿ ಮಾಡುವಾಗ ವಿಶ್ವಕಪ್‌ ಸೆಮಿಫೈನಲ್‌ ದಿನವೇ ಈ ಕಾರ್ಯಕ್ರಮವನ್ನು ನಾವು ಆಯೋಜಿಸುತ್ತೇವೆ ಎಂಬುದು ನಮಗೆ ತಿಳಿದಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡ ಫೈನಲ್ ಗೆದ್ದರೆ ಬೆತ್ತಲಾಗುವೆ ಎಂದ ನಟಿ ರೇಖಾ

    ಈ ಹಿಂದೆ ಹಲವಾರು ಸಂದರ್ಭಗಳಲ್ಲಿ, ತಂಡದೊಂದಿಗೆ ಕೆಲಸ ಮತ್ತು ನಾಯಕತ್ವವನ್ನು ಅರ್ಥಮಾಡಿಕೊಳ್ಳಲು ಕ್ರಿಕೆಟ್ ಸಹಾಯ ಮಾಡಿದೆ ಎಂದು ನಾದೆಲ್ಲಾ ಹೇಳಿದ್ದರು. ಅಷ್ಟೇ ಅಲ್ಲದೇ ಈ ಹಿಂದೆ ಶಾಲಾ ತಂಡದಲ್ಲೂ ಅವರು ಕ್ರಿಕೆಟ್‌ ಆಡಿದ್ದರು.

     

    ಇತ್ತೀಚೆಗೆ ಸತ್ಯ ನಾದೆಲ್ಲಾ ಅವರು ಐಪಿಎಲ್‌ನ ದೆಹಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಕೈಜೋಡಿಸಿದ್ದು, ಅಮೆರಿಕದಲ್ಲಿ ಕ್ರಿಕೆಟ್‌ ಉತ್ತೇಜಿಸಲು ಆರಂಭಗೊಂಡಿರುವ ಮೇಜರ್ ಲೀಗ್ ಕ್ರಿಕೆಟ್ (MLC) ಟಿ20 ಪಂದ್ಯಾವಳಿಯಲ್ಲಿ ಸಿಯಾಟಲ್ ಓರ್ಕಾಸ್ ಫ್ರಾಂಚೈಸಿಯ ಸಹ-ಮಾಲೀಕರಾಗಿದ್ದಾರೆ. ಅಷ್ಟೇ ಅಲ್ಲದೇ ಅವರು ಸಿಯಾಟಲ್‌ನಲ್ಲಿ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಯೋಜಿಸಿದ್ದಾರೆ. ವಾಷಿಂಗ್ಟನ್‌ನ ರೆಡ್‌ಮಂಡ್‌ನಲ್ಲಿರುವ ಹೊಸ ಮೈಕ್ರೋಸಾಫ್ಟ್ ಕ್ಯಾಂಪಸ್ ಕ್ರಿಕೆಟ್ ಮೈದಾನವನ್ನು ಹೊಂದಿದೆ.  ಇದನ್ನೂ ಓದಿ: ಫೈನಲಿಗೆ ಟೀಂ ಇಂಡಿಯಾ – ನಾಯಕನಾಗಿ ದಾಖಲೆ ಬರೆದ ರೋಹಿತ್‌ ಶರ್ಮಾ

  • ಮಕ್ಕಳ ಮಾಹಿತಿ ಅಕ್ರಮವಾಗಿ ಸಂಗ್ರಹ – 165 ಕೋಟಿ ಪಾವತಿಗೆ ಮುಂದಾದ ಮೈಕ್ರೋಸಾಫ್ಟ್

    ಮಕ್ಕಳ ಮಾಹಿತಿ ಅಕ್ರಮವಾಗಿ ಸಂಗ್ರಹ – 165 ಕೋಟಿ ಪಾವತಿಗೆ ಮುಂದಾದ ಮೈಕ್ರೋಸಾಫ್ಟ್

    ವಾಷಿಂಗ್ಟನ್: ದೈತ್ಯ ಟೆಕ್ ಕಂಪನಿ ಮೈಕ್ರೋಸಾಫ್ಟ್ (Microsoft) ಪೋಷಕರ ಒಪ್ಪಿಗೆಯಿಲ್ಲದೆ ಮಕ್ಕಳ ವೈಯಕ್ತಿಕ ಮಾಹಿತಿಯನ್ನು (Children’s Personal Data) ಅಕ್ರಮವಾಗಿ ಸಂಗ್ರಹಿಸಿದೆ ಎಂದು ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ (FTC) ಆರೋಪಿಸಿದೆ. ಇದನ್ನು ಇತ್ಯರ್ಥಗೊಳಿಸಲು ಇದೀಗ ಮೈಕ್ರೋಸಾಫ್ಟ್ ಬರೋಬ್ಬರಿ 20 ಮಿಲಿಯನ್ ಡಾಲರ್ (ಸುಮಾರು 165 ಕೋಟಿ ರೂ.) ಪಾವತಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

    ಮೈಕ್ರೋಸಾಫ್ಟ್‌ನ ಎಕ್ಸ್‌ಬಾಕ್ಸ್ (Xbox) ಗೇಮಿಂಗ್ ಸಿಸ್ಟಂಗೆ ಸೈನ್‌ಅಪ್ ಆಗಿರುವ ಮಕ್ಕಳು ತಮ್ಮ ಪೋಷಕರಿಗೆ ತಿಳಿಸದೇ ಅಥವಾ ಪೋಷಕರ ಒಪ್ಪಿಗೆ ಪಡೆಯದೇ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿದೆ. ಇದು ಅಮೆರಿಕದ ಮಕ್ಕಳ ಆನ್‌ಲೈನ್ ಗೌಪ್ಯತೆ ಸಂರಕ್ಷಣಾ ಕಾಯಿದೆಯನ್ನು (COPPA) ಉಲ್ಲಂಘಿಸಿದೆ ಎಂದು ಎಫ್‌ಟಿಸಿ ಆರೋಪಿಸಿದೆ.

    ಮೈಕ್ರೋಸಾಫ್ಟ್ ತನ್ನ ಎಕ್ಸ್‌ಬಾಕ್ಸ್ ಸಿಸ್ಟಮ್‌ನ ಮಕ್ಕಳ ಬಳಕೆದಾರರಿಗೆ ಗೌಪ್ಯತೆಯ ರಕ್ಷಣೆಯನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಮೈಕ್ರೋಸಾಫ್ಟ್ ಮಕ್ಕಳ ಡೇಟಾವನ್ನು ಹಂಚಿಕೊಳ್ಳುವ ಮೂರನೇ ವ್ಯಕ್ತಿಯ ಗೇಮಿಂಗ್ ಪಬ್ಲಿಷರ್‌ಗಳಿಗೆ ಇದು ಸಿಒಪಿಪಿಎ ರಕ್ಷಣೆಯನ್ನು ಒದಗಿಸುತ್ತದೆ ಎಂದು ಎಫ್‌ಟಿಸಿ ಹೇಳಿದೆ. ಇದನ್ನೂ ಓದಿ: 100 ಭೂಕಂಪಗಳಾದ್ರೂ ಜಗ್ಗದೇ ನಿಂತಿದೆ 10 ಅಂತಸ್ತಿನ ಮರದ ಕಟ್ಟಡ – ಎಲ್ಲಿದೆ ಕಟ್ಟಡ, ಏನಿದರ ವಿಶೇಷತೆ!?

    13 ವರ್ಷದೊಳಗಿನ ಮಕ್ಕಳಿಗೆ ನಿರ್ದೇಶಿಸಲಾದ ಆನ್‌ಲೈನ್ ಸೇವೆಗಳು ಹಾಗೂ ವೆಬ್‌ಸೈಟ್‌ಗಳು ಸಂಗ್ರಹಿಸುವ ಮಾಹಿತಿಗಳ ಕುರಿತು ಪೋಷಕರಿಗೆ ತಿಳಿಸಲು ಹಾಗೂ ಮಕ್ಕಳ ವೈಯಕ್ತಿಕ ಮಾತಿಗಳನ್ನು ಸಂಗ್ರಹಿಸುವುದಕ್ಕೂ ಮೊದಲು ಪರಿಶೀಲಿಸಿ ಒಪ್ಪಿಗೆಯನ್ನು ಪಡೆಯುವ ಕಾನೂನಿನ ಅಗತ್ಯವಿದೆ.

    2015 ರಿಂದ 2020 ರವರೆಗೆ ಪೋಷಕರು ಒಪ್ಪಿಗೆ ನೀಡಲು ವಿಫಲರಾಗಿದ್ದರೂ ಸಹ ಖಾತೆ ರಚನೆ ಪ್ರಕ್ರಿಯೆಯಲ್ಲಿ ಮಕ್ಕಳಿಂದ ಸಂಗ್ರಹಿಸಲಾದ ಡೇಟಾವನ್ನು ಮೈಕ್ರೋಸಾಫ್ಟ್ ಇನ್ನೂ ಉಳಿಸಿಕೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ

  • 7 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲು ಮುಂದಾದ The Walt Disney

    7 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲು ಮುಂದಾದ The Walt Disney

    ವಾಷಿಂಗ್ಟನ್: ಅಮೆರಿಕದ (US) ದಿ ವಾಲ್ಟ್ ಡಿಸ್ನಿ ಕಂಪನಿ (The Walt Disney Company), ವೆಚ್ಚದಲ್ಲಿ ಉಳಿತಾಯ ಮಾಡುವ ಸಲುವಾಗಿ ಏಕಾಏಕಿ 7 ಸಾವಿರ ಉದ್ಯೋಗಿಗಳನ್ನ ವಜಾಗೊಳಿಸಲು (Layoff) ಮುಂದಾಗಿದೆ. ಕಂಪನಿಗೆ ತಗಲುವ ವೆಚ್ಚ ಕಡಿಮೆ ಮಾಡಲು ಈ ನಿರ್ಧಾರ ಕೈಗೊಂಡಿದೆ.

    ವಿಶ್ವದ ದೈತ್ಯ ಟೆಕ್ ಕಂಪನಿಗಳಲ್ಲಿ (Tech Company) ಸರಣಿಯಾಗಿ ಉದ್ಯೋಗಿಗಳನ್ನು (Employees) ಕೆಲಸದಿಂದ ತೆಗೆಯುವ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಡಿಸ್ನಿ ಕೂಡಾ ಈ ನಿರ್ಧಾರ ಕೈಗೊಂಡಿದೆ. 2022ರ ನವೆಂಬರ್‌ನಲ್ಲಿ ಮಾಜಿ ಸಿಇಒ ಬಾಬ್ ಚಾಪೆಕ್ ಅವರಿಂದ ರಾಬರ್ಟ್ ಇಗರ್ (Robert Iger) ಅವರು ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಕಂಪನಿಯ ಆರ್ಥಿಕ ವೆಚ್ಚ ಕಡಿತಗೊಳಿಸಲು ನಿರ್ಧರಿಸಿದ್ದು, ಅದಕ್ಕಾಗಿ ಉದ್ಯೋಗಿಗಳನ್ನ ಕಡಿತಗೊಳಿಸಲು ಮುಂದಾಗಿದ್ದಾರೆ.

    ಡಿಸ್ನಿಯು ತನ್ನ ಪ್ರತಿಸ್ಪರ್ಧಿ ನೆಟ್‌ಫ್ಲಿಕ್ಸ್‌ ನಂತೆಯೇ (Netflix) ಚಂದಾದಾರರ ಬೆಳವಣಿಗೆಯಲ್ಲಿ ನಿಧಾನವಾಗಿದೆ. ಯುಎಸ್ ಮತ್ತು ಕೆನಡಾದಲ್ಲಿ ಕೇವಲ 2 ಲಕ್ಷ ಚಂದಾದಾರರನ್ನು ತಲುಪಿದ್ದು, ಒಟ್ಟು ಬಳಕೆದಾರರ ಸಂಖ್ಯೆ 46.6 ಮಿಲಿಯನ್‌ಗೆ ತಂದಿದೆ. ಹಾಟ್‌ಸ್ಟಾರ್ (Hotstar) ಹೊರತುಪಡಿಸಿ ಸ್ಟ್ರೀಮಿಂಗ್ ಸೇವೆಯು 12 ಲಕ್ಷ ಸದಸ್ಯರ ಸಂಖ್ಯೆಯಷ್ಟು ಹೆಚ್ಚಾಗಿದೆ. ಈ ನಡುವೆ ಇತರ ವೇದಿಕೆಗಳಾದ ಹುಲು ಮತ್ತು ಇಎಸ್‌ಪಿಎನ್ ಪ್ಲಸ್ ಬಳಕೆದಾರರಲ್ಲೂ ಕ್ರಮವಾಗಿ 8 ಮತ್ತು 6 ಲಕ್ಷ ಏರಿಕೆ ಕಂಡಿದೆ. ಇದನ್ನೂ ಓದಿ: 18 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಲಿದೆ amazon

    ಡಿಸ್ನಿ ತನ್ನ ತ್ರೈಮಾಸಿಕ ಬೆಳವಣಿಗೆಯನ್ನು ಗಮನಿಸಿದ ನಂತರ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಕೈಗೊಂಡಿದೆ. ವಿಶ್ವದಾದ್ಯಂತ ನಮ್ಮ ಉದ್ಯೋಗಿಗಳ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕಂಪನಿಯಾದ್ಯಂತ 5.5 ಶತಕೋಟಿ ಡಾಲರ್ ಉಳಿತಾಯದ ಗುರಿ ಹೊಂದಿದ್ದು, ಅದಕ್ಕಾಗಿ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಸಿಇಒ ಹೇಳಿದ್ದಾರೆ.

    ನಿರಂತರವಾಗಿ ಬೆಳವಣಿಗೆಯೊಂದಿಗೆ ಲಾಭದಾಯಕತೆ ಸಾಧಿಸುವುದು ನಮ್ಮ ಗುರಿಯಾಗಿದೆ. ಪ್ರಸ್ತುತ ನಮ್ಮ ಈ ನಿರ್ಧಾರದಿಂದ 2024 ಆರ್ಥಿಕ ವರ್ಷದ ವೇಳೆಗೆ ಡಿಸ್ನಿ ಪ್ಲಸ್ ಗರಿಷ್ಠ ಲಾಭದ ಗುರಿ ತಲುಪುತ್ತದೆ ಎಂದು ಇಗರ್ ಹೇಳಿದ್ದಾರೆ. ಆದರೆ, ಯಾವ ವಿಭಾಗಗಳಿಗೆ ಇದರ ಪರಿಣಾಮ ಬೀರುತ್ತದೆ ಅನ್ನುವ ಬಗ್ಗೆ ಬಹಿರಂಗಪಡಿಸಿಲ್ಲ. ಇದನ್ನೂ ಓದಿ: 1,337 ಕೋಟಿ ಪೈಕಿ ಶೇ.10 ರಷ್ಟು ದಂಡವನ್ನು ಠೇವಣಿ ಇಡಿ – ಗೂಗಲ್‌ಗೆ NCALT ಆದೇಶ

    ಈಗಾಗಲೇ ಅಮೆಜಾನ್ 18 ಸಾವಿರ, ಸೇಲ್ಸ್‌ಫೋರ್ಸ್‌ 8 ಸಾವಿರ, ಮೈಕ್ರೋಸಾಫ್ಟ್ (Microsoft) 10 ಸಾವಿರ ಹಾಗೂ ಗೂಗಲ್ 12 ಸಾವಿರ ಸೇರಿದಂತೆ ವಿವಿಧ ಕಂಪನಿಗಳು ಕಳೆದ ಒಂದು ವಾರದಲ್ಲಿ 50 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನ ಮನೆಗೆ ಕಳುಹಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k