Tag: ಮೈಕಲ್ ಸ್ಲೇಟರ್

  • ಬಾರ್‌ನಲ್ಲಿ ವಾರ್ನರ್, ಸ್ಲೇಟರ್ ಮಧ್ಯೆ ಫೈಟಿಂಗ್?

    ಬಾರ್‌ನಲ್ಲಿ ವಾರ್ನರ್, ಸ್ಲೇಟರ್ ಮಧ್ಯೆ ಫೈಟಿಂಗ್?

    ಮಾಲೆ: ಸನ್‍ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಮತ್ತು ಆಸ್ಟ್ರೇಲಿಯಾದ ವೀಕ್ಷಕ ವಿವರಣೆಗಾರ ಮೈಕಲ್ ಸ್ಲೇಟರ್  ಕುಡಿದ ಮತ್ತಿನಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಕೋವಿಡ್ 19 ಸೋಂಕಿನಿಂದಾಗಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ರದ್ದಾಗಿದ್ದು ಬಿಸಿಸಿಐ ವಿದೇಶಿ ಆಟಗಾರರನ್ನು ಅವರ ದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಆಟಗಾರರನ್ನು ಮಾಲ್ಡೀವ್ಸ್ ಗೆ ಕಳುಹಿಸಿ ಅಲ್ಲಿಂದ ಆಸ್ಟ್ರೇಲಿಯಾಗೆ ಕಳುಹಿಸಲಾಗುತ್ತದೆ.

    ಆಸ್ಟ್ರೇಲಿಯಾದ ಆಟಗಾರರು, ಕೋಚ್, ವೀಕ್ಷಕ ವಿವರಣೆಗಾರರು ಮಾಲ್ಡೀವ್ಸ್ ಹೋಟೆಲಿನಲ್ಲಿ ತಂಗಿದ್ದಾರೆ. ಈ ಸಂದರ್ಭದಲ್ಲಿ ಬಾರ್ ಒಂದರಲ್ಲಿ ಡೇವಿಡ್ ವಾರ್ನರ್ ಮತ್ತು ಸ್ಲೇಟರ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮವೊಂದು ವರದಿ ಮಾಡಿದೆ.

    ಈ ಸುದ್ದಿಯನ್ನು ಇಬ್ಬರು ನಿರಾಕರಿಸಿದ್ದು, ಈ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ. ಪ್ರತಕ್ಷ ನೋಡದೇ ಸಾಕ್ಷ್ಯವಿಲ್ಲದೇ ವರದಿ ಮಾಡುವುದು ಸರಿಯಲ್ಲ. ಈ ಸುದ್ದಿ ಹೇಗೆ ಹುಟ್ಟಿಕೊಂಡಿತು ಎನ್ನುವುದು ತಿಳಿದಿಲ್ಲ ಎಂದು ಡೇವಿಡ್ ವಾರ್ನರ್ ಪ್ರತಿಕ್ರಿಯಿಸಿದ್ದಾರೆ.