Tag: ಮೇಲ್ಛಾವಣೆ

  • ಕುಳಿತಿರುವಾಗ್ಲೇ ಕುಸಿದ ಮನೆ ಮೇಲ್ಛಾವಣಿ- 20 ಮಂದಿಗೆ ಗಾಯ

    ಕುಳಿತಿರುವಾಗ್ಲೇ ಕುಸಿದ ಮನೆ ಮೇಲ್ಛಾವಣಿ- 20 ಮಂದಿಗೆ ಗಾಯ

    ಹೈದರಾಬಾದ್: ಮೊಹರಂ ಆಚರಣೆ ವೀಕ್ಷಿಸಲು ನೂರಾರು ಜನರು ಕುಳಿತಿದ್ದ ಮೇಲ್ಛಾವಣಿ ಕುಸಿದಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗಿನ ಜಾವ ಸುಮಾರು 2 ಗಂಟೆಗೆ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಥಂದ್ರಪಡು ಗ್ರಾಮದಲ್ಲಿ ಈ ಅವಘಡ ಸಂಭವಿಸಿದ್ದು, 20 ಜನರು ಗಾಯಗೊಂಡಿದ್ದಾರೆ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮೊಹರಂ ಹಬ್ಬದ ಪ್ರಯುಕ್ತ ಹರಕೆ ಹೊತ್ತ ಭಕ್ತರು ಕೆಂಡದಲ್ಲಿ ಹಾಯುತ್ತಿದ್ದರು. ಈ ವೇಳೆ ಮನೆಯ ಮೇಲ್ಛಾವಣಿ ಕುಸಿಯುವ ದೃಶ್ಯಗಳು ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿವೆ.

    ಕೆಂಡ ಹಾಯುವ ದೃಶ್ಯಗಳನ್ನು ನೋಡಲು ಗ್ರಾಮಸ್ಥರು ಸುತ್ತಲಿನ ಮನೆಗಳ ಮೇಲ್ಛಾವಣಿ ಮೇಲೆ ಕುಳಿತಿದ್ದರು. ಹಳೆಯ ಮನೆಯಾಗಿದ್ದರಿಂದ ಏಕಾಏಕಿ ಮನೆಯ ಮೇಲ್ಛಾವಣಿ ಕುಸಿದಿದೆ. ನೆರದಿದ್ದ ಸ್ಥಳೀಯರು ಕೂಡಲೇ ಅವಶೇಷಗಳಡಿ ಸಿಲುಕಿದ್ದ ಎಲ್ಲರನ್ನು ರಕ್ಷಿಸಿದ್ದಾರೆ. ಸದ್ಯ ಎಲ್ಲ ಗಾಯಾಳುಗಳು ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮನೆಯ ಮೇಲ್ಛಾವಣೆ ಕುಸಿದು ಮಹಿಳೆಯರಿಬ್ಬರ ದುರ್ಮರಣ!

    ಮನೆಯ ಮೇಲ್ಛಾವಣೆ ಕುಸಿದು ಮಹಿಳೆಯರಿಬ್ಬರ ದುರ್ಮರಣ!

    ದಾವಣಗೆರೆ: ಮೇಲ್ಛಾವಣೆ ಕುಸಿದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಇನ್ನೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಗರದ ನಿಟ್ಟುವಳ್ಳಿ ಪ್ರದೇಶದಲ್ಲಿ ನಡೆದಿದೆ.

    ವೃದ್ಧೆ ದ್ಯಾಮಕ್ಕ ಹಾಗೂ ಸುಧಾ (35) ಮೃತ ದುರ್ದೈವಿಗಳಾಗಿದ್ದಾರೆ. ಇವರು ನಗರದ ನಿಟ್ಟುವಳ್ಳಿಯ ನಿವಾಸಿಗಳಾಗಿದ್ದು, ಮನೆಯ ಮೇಲ್ಛಾವಣೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಮಹಿಳೆಯರು ಮನೆ ಮುಂಭಾಗ ಮಾತನಾಡುತ್ತಾ ಕುಳಿತಿದ್ದಾಗ ಏಕಾಏಕಿ ಮನೆಯ ಮೇಲ್ಛಾವಣೆ ಕುಸಿದು ಬಿದ್ದಿದೆ. ಈ ವೇಳೆ ವೃದ್ಧೆ ದ್ಯಾಮಕ್ಕ ಸ್ಥಳದಲ್ಲೇ ಮೃತಪಟ್ಟು, ಸುಧಾ ಎಂಬವರು ಗಂಭೀರ ಗಾಯಗೊಂಡಿದ್ದರು.

    ಮನೆಯವರು ಕೂಡಲೇ ಸುಧಾರನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಿಸದೇ ತಡರಾತ್ರಿ ಆಸ್ಪತ್ರೆಯಲ್ಲೇ ಅಸುನೀಗಿದ್ದಾರೆ.

    ಘಟನೆ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಧಾರವಾಡದಲ್ಲಿ ಭಾರೀ ಗಾಳಿ: ಹಾರಿ ಹೋದ 10 ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಧಾರವಾಡದಲ್ಲಿ ಭಾರೀ ಗಾಳಿ: ಹಾರಿ ಹೋದ 10 ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ತಿರ್ಲಾಪೂರ ಗ್ರಾಮದಲ್ಲಿ ಭಾರಿ ಗಾಳಿಗೆ 10ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣೆಗಳು ಹಾರಿಹೋಗಿವೆ.

    ಇಂದು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಗಾಳಿ ಬೀಸಿದ್ದರಿಂದ ಮನೆಯ ತಗಡಿನ ಮೇಲ್ಛಾವಣಿಗಳು ಹಾರಿಹೋಗಿವೆ. ವಾಸವಿದ್ದ ಮನೆಗಳ ಮೇಲ್ಛಾವಣೆಯ ತಗಡುಗಳು ಹಾರಿದ್ದರಿಂದ ಗ್ರಾಮದ ಜನರು ಬಯಲಲ್ಲಿ ಕೂರುವಂತಾಗಿದೆ. ಗ್ರಾಮದ ಕೆಲ ಮನೆಗಳ ಹೆಂಚುಗಳು ಸಹ ಭಾರೀ ಗಾಳಿಗೆ ಹಾರಿವೆ.

    ಇನ್ನು ಧಾರವಾಡ ನಗರದ ಮಂಗಳವಾರಪೇಟೆಯಲ್ಲಿ ಯಂಡಿಗೇರಿ ಎಂಬವರ ಮನೆಯ ಆವರಣದಲ್ಲಿಯ ತೆಂಗಿನ ಮರಕ್ಕೆ ಸಿಡಲು ತಾಗಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿ ತೆಂಗಿನ ಮರಕ್ಕೆ ತಗುಲಿದ್ದ ಬೆಂಕಿಯನ್ನು ನಂದಿಸಿದ್ದಾರೆ.

     

  • ಕೊಪ್ಪಳ: ಮಳೆ-ಗಾಳಿಗೆ ಹಾರಿದ 30ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಕೊಪ್ಪಳ: ಮಳೆ-ಗಾಳಿಗೆ ಹಾರಿದ 30ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಕೊಪ್ಪಳ: ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಸುಮಾರು 30ಕ್ಕೂ ಹೆಚ್ಚು ಮನೆಯ ಮೇಲ್ಛಾವಣೆಯ ತಗಡುಗಳು ಹಾರಿಹೋಗಿವೆ.

    ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಲ್ಲಿ ದೇವಪ್ಪ, ಶಂಕ್ರಪ್ಪ ಹೊರಪೇಟೆ ಸೇರಿದಂತೆ ಇತರರ ಮನೆಯ ಮೇಲ್ಛಾವಣಿಗಳು ಹಾರಿಹೋಗಿವೆ. ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ತಗಡಿನ ಮೇಲ್ಛಾವಣಿಯುಳ್ಳ ಮನೆಯವರು ಪಕ್ಕದ ಮನೆಗಳಲ್ಲಿ ಮಲಗಿದ್ದರು.

    ಮನೆಗಳ ಮೇಲ್ಛಾವಣೆಗಳು ಹಾರಿ ಹೋಗಿದ್ದರಿಂದ ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಇದರಿಂದ ಕುಟುಂಬಸ್ಥರ ಬದುಕು ಬೀದಿಗೆ ಬಂದಂತಾಗಿದೆ. ಘಟನೆ ನಡೆದು ಕೆಲವು ಗಂಟೆಗಳು ಕಳೆದರೂ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ಬಳ್ಳಾರಿಯಲ್ಲಿ ತಂಪೆರದ ವರುಣ ದೇವ: ಬಿರುಬಿಸಿಲ ನಾಡು ಬಳ್ಳಾರಿಯಲ್ಲಿ ಗುರುವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಮಳೆಯಾಗಿದೆ. ಮಳೆಯ ಆಗಮನದಿಂದ ಬಿಸಿಲಿನಿಂದ ಕಂಗಾಲಾಗಿದ್ದ ಜನರು ಸಂತೋಷಗೊಂಡಿದ್ದಾರೆ.