Tag: ಮೇಯರ್

  • ಮೇಯರ್ ಸ್ಥಾನಕ್ಕಾಗಿ ಭಾರೀ ಲಾಬಿ: ಒಂದು ವೋಟಿಗೆ ಕೋಟಿ ಕೋಟಿ ರೂಪಾಯಿ!

    ಮೇಯರ್ ಸ್ಥಾನಕ್ಕಾಗಿ ಭಾರೀ ಲಾಬಿ: ಒಂದು ವೋಟಿಗೆ ಕೋಟಿ ಕೋಟಿ ರೂಪಾಯಿ!

    – ಇತ್ತ ಆಪರೇಷನ್ ಭಯಕ್ಕೆ ರೆಸಾರ್ಟ್ ನತ್ತ ಹೊರಟ ಪಾಲಿಕೆ ಸದಸ್ಯರು

    ಬೆಂಗಳೂರು: ಬಿಬಿಎಂಪಿ ಮೇಯರ್ ಗಿರಿಗಾಗಿ ಭಾರೀ ಲಾಬಿ ನಡೆಯುತ್ತಿದ್ದು, ಒಂದು ವೋಟಿಗೆ ಕೋಟಿ ಕೋಟಿ ರೂಪಾಯಿ ರವಾನೆಯಾಗಿದೆಯಂತೆ. ಇದಲ್ಲದೇ ಬಿಜೆಪಿಯ ಆಪರೇಷನ್ ಕಮಲದ ದಾಳಿಗೆ ತಪ್ಪಿಸಿಕೊಳ್ಳಲು ಪಕ್ಷೇತರ ಸದಸ್ಯರನ್ನು ರೆಸಾರ್ಟ್ ನತ್ತ ಕಳುಹಿಸಿಕೊಡಲು ಕಾಂಗ್ರೆಸ್ ಮುಂದಾಗಿದೆ ಎನ್ನುವ ಮಾಹಿತಿ ಸಹ ಲಭ್ಯವಾಗಿದೆ.

    ಹೌದು, ಬಿಬಿಎಂಪಿ ಮೇಯರ್ ಗಿರಿಗಾಗಿ ರೆಸಾರ್ಟ್ ರಾಜಕಾರಣ ಶುರುವಾಗಿದೆ. ಭಾರೀ ಡಿಮ್ಯಾಂಡ್‍ನಲ್ಲಿರುವ ಬಿಬಿಎಂಪಿ ಪಕ್ಷೇತರ ಸದಸ್ಯರನ್ನು ಗೋವಾಕ್ಕೆ ಕಳುಹಿಸುತ್ತಿದ್ದು, ಚುನಾವಣೆಗೆ ಮುನ್ನ 10 ದಿನದ ಮೊದಲೇ ರೆಸಾರ್ಟ್ ರಾಜಕಾರಣವನ್ನು ಕಾಂಗ್ರೆಸ್ ಶುರುಮಾಡಿದೆ. ಅಲ್ಲದೇ 8 ಜನ ಪಕ್ಷೇತರ ಶಾಸಕರ ಮನ ಒಲಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕ ರಾಮಲಿಂಗಾ ರೆಡ್ಡಿಯವರ ಸಂಧಾನ ಯಶಸ್ವಿಯಾಗಿದ್ದು, ಹೀಗಾಗಿ ಬಿಜೆಪಿಯ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಲು ರೆಸಾರ್ಟ್ ರಾಜಕಾರಣ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

    ಇದೇ ತಿಂಗಳ 28ರಂದು ನಡೆಯುವ ಬಿಬಿಎಂಪಿ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷೇತರರಿಗೆ ಭಾರೀ ಡಿಮ್ಯಾಂಡ್ ಬಂದಿದ್ದು, ಒಂದೇ ಒಂದು ವೋಟಿಗೆ ಕೋಟಿ ಕೋಟಿ ರೂಪಾಯಿ ಜೊತೆಗೆ ಲಾಭದಾಯಕ ಸ್ಥಾಯಿ ಸಮಿತಿ ಸದಸ್ಯ ಸ್ಥಾನವನ್ನು ನೀಡಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಬಿಬಿಎಂಪಿಯ 8 ಜನ ಪಕ್ಷೇತರ ಸದಸ್ಯರು ರಾತ್ರೋ ರಾತ್ರಿ ಕೋಟ್ಯಧಿಪತಿಗಳಾಗಲಿದ್ದಾರೆ. ಅಲ್ಲದೇ ಆಡಳಿತ ರೂಢ ಕಾಂಗ್ರೆಸ್ ಈಗಾಗಲೇ 2 ಕೋಟಿ ರೂಪಾಯಿ ಹಣವನ್ನು ರವಾನಿಸಿದೆ ಎಂಬುದರ ಬಗ್ಗೆ ಮಾಹಿತಿ ಲಭಿಸಿದೆ.

    ಪಕ್ಷೇತರ ಶಾಸಕರು ರಾಜ್ಯದಿಂದ ಹೊರಗೆ ಹೋಗುತ್ತಾ ಇರುವುದು ನಿಜ. ಮಂಗಳವಾರ ಪಕ್ಷೇತರರು ಬೆಂಗಳೂರು ಬಿಡಲಿದ್ದಾರೆ. ಆದರೆ ಅವರು ಗೋವಾಕ್ಕೆ ತೆರಳುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಗೋವಾದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿರುವುದು ಮುನ್ನೆಚ್ಚರಿಕಾ ಕ್ರಮವಾಗಿ ಆಂಧ್ರಪ್ರದೇಶ, ತಮಿಳುನಾಡು ಅಥವಾ ಕೇರಳ ಕಡೆ ಹೋಗಬಹುದೆಂದು ಮಾಹಿತಿ ಲಭ್ಯವಾಗಿದೆ. ಆದರೆ ಇದುವರೆಗೆ ಎಲ್ಲಿಗೆ ಹೋಗುತ್ತಾರೆ ಎನ್ನುವುದು ಖಚಿತವಾಗಿಲ್ಲ. ಈ ಎಲ್ಲಾ ಪಕ್ಷೇತರ ಸದಸ್ಯರು ಕಾಂಗ್ರೆಸ್ ಪರವಾಗಿಯೇ ಇದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಾಲಿಕೆ ಮೇಯರ್ ಪಟ್ಟಕ್ಕಾಗಿ ದೋಸ್ತಿ ನಡುವೆ ಫೈಟ್!

    ಪಾಲಿಕೆ ಮೇಯರ್ ಪಟ್ಟಕ್ಕಾಗಿ ದೋಸ್ತಿ ನಡುವೆ ಫೈಟ್!

    ಮೈಸೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಪಕ್ಷದ ನಡುವೆ ಮಹಾನಗರ ಪಾಲಿಕೆಯ ಮೇಯರ್ ಪಟ್ಟಕ್ಕಾಗಿ ಕಿತ್ತಾಟ ಜೋರಾಗಿ ನಡೆಯುತ್ತಿರುವ ಕುರಿತು ಮಾಹಿತಿ ಲಭಿಸಿದೆ.

    ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಗುದ್ದಾಟ ಏರ್ಪಟ್ಟಿದ್ದು, ಮೇಯರ್ ಸ್ಥಾನ ತಮಗೆ ಸಿಗದೆ ಇದ್ದರೆ, ಕಾಂಗ್ರೆಸ್ ಜೊತೆ ಮೈತ್ರಿಯೇ ಇಲ್ಲ. ಒಂದು ವೇಳೆ ಮೇಯರ್ ಸ್ಥಾನ ಸಿಗದಿದ್ದರೆ, ಬಿಜೆಪಿ ಜೊತೆ ಸೇರಿ ಅಧಿಕಾರ ನಡೆಸುತ್ತೇವೆ ಎನ್ನುವ ಚರ್ಚೆ ಸ್ಥಳೀಯ ಜೆಡಿಎಸ್ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.

    ಜೆಡಿಎಸ್‍ಗೆ ಟಾಂಗ್ ನೀಡಿರುವ ಕಾಂಗ್ರೆಸ್, ಯಾವುದೇ ಕಾರಣಕ್ಕೂ ಮೇಯರ್ ಸ್ಥಾನ ಬಿಟ್ಟು ಕೊಡಲ್ಲ. ಮೇಯರ್ ಸ್ಥಾನ ಸಿಗದೆ ಇದ್ದರೆ, ವಿಪಕ್ಷ ಸ್ಥಾನದಲ್ಲಿ ಕೂರುತ್ತೇವೆ. ಅಲ್ಲದೇ ಜೆಡಿಎಸ್‍ಗೆ ಮೇಯರ್ ಸ್ಥಾನ ಬಿಟ್ಟು ಕೊಡಬೇಡಿ ಎಂದು ಸಿದ್ದರಾಮಯ್ಯ ಸ್ಥಳೀಯ ಮುಖಂಡರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಹೀಗಾಗಿ ಮೈಸೂರು ಪಾಲಿಕೆಯಲ್ಲಿ ಮತ್ತೊಮ್ಮೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ದೋಸ್ತಿ ಖಚಿತವಾಗುತ್ತೆ ಎಂದು ಹೇಳಲಾಗುತ್ತಿದೆ. ಇದೇ ತಿಂಗಳ ಮೂರನೇ ತಾರೀಖಿನಂದು ಪ್ರಕಟಗೊಂಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿತ್ತು. ಯಾವುದೇ ಪಕ್ಷಗಳು ಬಹುಮತ ಪಡೆಯದ ಕಾರಣ, ಮೈತ್ರಿಯೊಂದಿಗೆ ಅಧಿಕಾರ ಹಿಡಿಯುವ ಅನಿವಾರ್ಯ ಸೃಷ್ಟಿಯಾಗಿತ್ತು.

    ಈ ಮೊದಲು ಜೆಡಿಎಸ್ ವರಿಷ್ಠ ದೇವೇಗೌಡರು ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಹೇಳಿದ್ದರು. ಆದರೆ ಈಗ ಸ್ಥಳೀಯ ಮುಖಂಡರ ಮೇಯರ್ ಸ್ಥಾನಕ್ಕಾಗಿನ ಕಿತ್ತಾಟ ಮೈತ್ರಿಗೂ ಮೊದಲೇ ಮುರಿದು ಬೀಳುವ ಹಂತ ತಲುಪಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರದಿಂದ ಭ್ರಷ್ಟಾಚಾರಕ್ಕೆ ಎಡೆಯಾಗಲಿದ್ದ ಬಿಬಿಎಂಪಿಯ ಬಿಲ್ ಪ್ರಸ್ತಾವನೆ ರಿಜೆಕ್ಟ್!

    ಸರ್ಕಾರದಿಂದ ಭ್ರಷ್ಟಾಚಾರಕ್ಕೆ ಎಡೆಯಾಗಲಿದ್ದ ಬಿಬಿಎಂಪಿಯ ಬಿಲ್ ಪ್ರಸ್ತಾವನೆ ರಿಜೆಕ್ಟ್!

    ಬೆಂಗಳೂರು: ತಮಗೆ ಬೇಕಾದ ಕಾಮಗಾರಿಗಳಿಗೆ 295 ಕೋಟಿ ರೂ. ಹಣವನ್ನು ಬಿಡುಗಡೆ ಮಾಡುವಂತೆ ಸಲ್ಲಿಕೆಯಾಗಿದ್ದ ಬಿಬಿಎಂಪಿ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದೆ.

    ಪ್ರಸ್ತಾವನೆಯಲ್ಲಿ ಸ್ಪಷ್ಟ ಅಭಿಪ್ರಾಯ ಇಲ್ಲ ಎಂದು ಹೇಳಿ ನಗರಾಭಿವೃದ್ಧಿ ಇಲಾಖೆಯಿಂದ ಬಿಬಿಎಂಪಿ ಆಯುಕ್ತರಿಗೆ ಆದೇಶ ಪ್ರಕಟವಾಗಿದೆ. ಹೈಕೋರ್ಟ್ ಆದೇಶದಂತೆ ಹಿರಿತನ ಆಧಾರದ ಮೇಲೆ ಬಿಲ್ ಬಿಡುಗಡೆ ಪದ್ಧತಿ ಮುಂದುವರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

    ಈ ಹಿಂದೆ ಗುತ್ತಿಗೆದಾರರು ಪ್ರಭಾವಿ ರಾಜಕಾರಣಿಗಳ ಮೂಲಕ ಲೆಟರ್ ಆಫ್ ಕ್ರೆಡಿಟ್ (ಎಲ್‍ಒಸಿ) ಪಡೆದು ಬಿಬಿಎಂಪಿಗೆ ಸಲ್ಲಿಸಿ ಹಿರಿತನವಿಲ್ಲದಿದ್ದರೂ ಬಿಲ್ ಮೊತ್ತ ಪಡೆದುಕೊಳ್ಳುತ್ತಿದ್ದರು. 2015ರಲ್ಲಿ ಈಗಿನ ಮುಖ್ಯ ಕಾರ್ಯದರ್ಶಿಯಾಗಿರುವ ವಿಜಯಭಾಸ್ಕರ್ ಬಿಬಿಎಂಪಿ ಆಯುಕ್ತರಾಗಿದ್ದ ವೇಳೆ ಎಲ್‍ಒಸಿ ಪಡೆದು ಬಿಲ್ ಪಾವತಿಸುವ ವ್ಯವಸ್ಥೆಯನ್ನು ರದ್ದುಗೊಳಿಸಿ ಮೊದಲು ಕೆಲಸ ಮುಗಿಸಿದವರಿಗೆ ಬಿಲ್ ಪಾವತಿ ಮಾಡುವ ಹಿರಿತನದ ನಿಯಮವನ್ನು ಜಾರಿಗೆ ತಂದಿದ್ದರು.

    ಈ ನೀತಿಯನ್ನು ಗಾಳಿಗೆ ತೂರಿ ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಸಚಿವರ ವಿವೇಚನೆಗೊಳಪಟ್ಟ ಕಾಮಗಾರಿಗಳಿಗೆ 85 ಕೋಟಿ ರೂ., ಮೇಯರ್ ಆದೇಶಿಸುವ ಕಾಮಗಾರಿಗಳಿಗೆ 160 ಕೋಟಿ ರೂ., ಉಪಮೇಯರ್ ಸೂಚಿಸುವ ಕಾಮಗಾರಿಗಳಿಗೆ 50 ಕೋಟಿ ರೂ. ಸೇರಿ ಒಟ್ಟು 295 ಕೋಟಿ ರೂ. ಅನುದಾನಕ್ಕೆ ಹಿರಿತನವಿಲ್ಲ ಎಂದು ಆಯುಕ್ತರು ತಮ್ಮ ಅಧಿಕಾರಕ್ಕೆ ಬಳಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

    ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಭ್ರಷ್ಟಾಚಾರಕ್ಕೆ ಎಡೆ ಮಾಡಿ ಕೊಡುತ್ತಾ ಈ ಪದ್ದತಿ ಎನ್ನುವ ಅನುಮಾನ ಎದ್ದಿತ್ತು. ಇದರಿಂದಾಗಿ ಪರ್ಸಂಟೇಜ್ ಕಾಮಾಗಾರಿಗಳಿಗೆ ಬೇಗನೆ ಬಿಲ್ ಪಾವತಿಯಾಗುವ ಸಾಧ್ಯತೆಯಿದೆ ಎನ್ನುವ ಮಾತು ಕೇಳಿ ಬಂದಿತ್ತು. ಈ ವಿಚಾರ ಚರ್ಚೆಯಾಗುತ್ತಿರುವಾಗಲೇ ಸರ್ಕಾರ ಪ್ರಸ್ತಾಪವನ್ನು ತಿರಸ್ಕರಿಸಿ ಆಗಬಹುದಾಗಿದ್ದ ವಿವಾದವನ್ನು ತಣ್ಣಗೆ ಮಾಡಿದೆ. ಸದ್ಯಕ್ಕೆ ಬಿಬಿಎಂಪಿಯಲ್ಲಿ 2 ಸಾವಿರ ಕೋಟಿ ರೂಪಾಯಿಯ 8,119 ಬಿಲ್‍ಗಳು ಬಾಕಿ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫ್ಲೆಕ್ಸ್ ತೆರವು ಮಾಡದಿದ್ರೆ ಅಮಾನತು ಶಿಕ್ಷೆ: ಅಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಎಚ್ಚರಿಕೆ

    ಫ್ಲೆಕ್ಸ್ ತೆರವು ಮಾಡದಿದ್ರೆ ಅಮಾನತು ಶಿಕ್ಷೆ: ಅಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಎಚ್ಚರಿಕೆ

    ಬೆಂಗಳೂರು: ನಗರದಲ್ಲಿಂದು ಬೆಳ್ಳಂಬೆಳಗ್ಗೆಯೇ ಮೇಯರ್ ಸಂಪತ್ ರಾಜ್ ರವರು ಫ್ಲೆಕ್ಸ್ ಹಾಗೂ ಭಿತ್ತಿಪತ್ರ ತೆರವು ಕಾರ್ಯಾಚರಣೆಯನ್ನು ಬಿರುಸಿನಿಂದ ಕೈಗೊಂಡಿದ್ದಾರೆ.

    ಶನಿವಾರದಿಂದ ಫ್ಲೆಕ್ಸ್ ಹಾಗೂ ಭಿತ್ತಿಪತ್ರ ತೆರವುಗೊಳಿಸುವ ಕಾರ್ಯಾಚರಣೆಯ ಅಭಿಯಾನಕ್ಕೆ ಮೇಯರ್ ರವರು ಚಾಲನೆ ನೀಡಿದ್ದರು. ಇಂದು ಬೆಳ್ಳಂಬೆಳಗ್ಗಿನಿಂದಲೇ ಕಾರ್ಯಪ್ರವೃತರಾದ ಅವರು ಹಲಸೂರು ಮೆಟ್ರೋ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಜೀವನ್‍ಭೀಮಾ ನಗರ ವಾರ್ಡ್ ಮತ್ತು ಹೊಯ್ಸಳನಗರ ವಾರ್ಡಿನ ಅಧಿಕಾರಿಗಳ ವಿರುದ್ಧ ಗರಂ ಆಗಿ, ಸ್ಥಳದಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಜೀವನ್‍ಭೀಮಾ ನಗರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆದ ಪ್ರಸನ್ನರವರನ್ನು ತರಾಟೆಗೆ ತೆಗೆದುಕೊಂಡ ಅವರು, ಈಗಾಗಲೇ ಎಲ್ಲಾ ನಾಮಫಲಕಗಳನ್ನು ಶೇಕಡ 60ರಷ್ಟು ಕನ್ನಡದಲ್ಲೇ ನಮೂದಿಸಬೇಕು ಎಂಬ ನಿಯಮವನ್ನು ರೂಪಿಸಿದ್ದರೂ, ಇದರು ಕುರಿತು ನೀವು ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈಗಾಗಲೇ ಫ್ಲೆಕ್ಸ್ ಹಾಗೂ ಭಿತ್ತಿಪತ್ರಗಳನ್ನು ತೆಗೆಯುವಂತೆ ಸೂಚನೆ ನೀಡಿದ್ದರೂ ನೀವು ಪಾಲಿಸಿಲ್ಲ. ಇನ್ನುಮುಂದೆ ಸರಿಯಾಗಿ ಕೆಲಸ ನಿರ್ವಹಿಸದೇ ಇರುವುದು ಕಂಡುಬಂದಲ್ಲಿ ಅಮಾನತು ಮಾಡಲಾಗುವುದು ಎಂದು ಸ್ಥಳದಲ್ಲೇ ಎಚ್ಚರಿಸಿದರು.

    ಈ ವೇಳೆ ರಸ್ತೆಯಲ್ಲಿ ಸಿಕ್ಕ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುತ್ತಿದ್ದ ವ್ಯಾಪಾರಿಗೆ ಬುದ್ಧಿಮಾತನ್ನು ಹೇಳಿ, ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಧ್ವಜ ಮಾರದಂತೆ ಸೂಚನೆ ನೀಡಿದ್ದು, ಕೇವಲ ಬಟ್ಟೆಯಲ್ಲಿ ತಯಾರಿಸಿದ ಧ್ವಜಗಳನ್ನ ಮಾತ್ರ ಮಾರಾಟ ಮಾಡುವಂತೆ ಸೂಚಿಸಿದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳು ಧ್ವಜಗಳನ್ನು ಕಿತ್ತುಕೊಳ್ಳಲು ಮುಂದಾದಾಗ, ಹೋಗಲಿ ಈ ಸಾರಿ ಬಿಡಿ, ಮತ್ತೊಮ್ಮೆ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವುದು ಕಂಡುಬಂದಲ್ಲಿ ಕ್ರಮತೆಗೆದುಕೊಳ್ಳಿ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಹೆಚ್ಚುತ್ತಿದೆ ಬಿಬಿಎಂಪಿ ಬೇಡಿಕೆ ಪಟ್ಟಿ: ದುಬಾರಿ ಕಾರ್ ಆಯ್ತು, ಈಗ ನಿವಾಸ ಬೇಕಂತೆ

    ಹೆಚ್ಚುತ್ತಿದೆ ಬಿಬಿಎಂಪಿ ಬೇಡಿಕೆ ಪಟ್ಟಿ: ದುಬಾರಿ ಕಾರ್ ಆಯ್ತು, ಈಗ ನಿವಾಸ ಬೇಕಂತೆ

    ಬೆಂಗಳೂರು: ದುಬಾರಿ ಕಾರು ಬೇಡಿಕೆ ಬೆನ್ನಲ್ಲೇ ಸಾರ್ವಜನಿಕರನ್ನು ಭೇಟಿ ಮಾಡಲು ಪ್ರತ್ಯೇಕ ನಿವಾಸ ಬೇಕು ಅಂತಾ ಬಿಬಿಎಂಪಿ ಅಧ್ಯಕ್ಷರು ಬೇಡಿಕೆ ಇಟ್ಟಿದ್ದಾರೆ.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದುಂದುವೆಚ್ಚ ನಿಯಂತ್ರಣ ಮಾಡುವುದಾಗಿ ಹೇಳಿದ್ದರು. ಆದರೆ ಇತ್ತ ಬಿಬಿಎಂಪಿ ಅಧ್ಯಕ್ಷರು ತಮ್ಮ ದುಬಾರಿ ವೆಚ್ಚದ ಪಟ್ಟಿಯನ್ನು ಹೆಚ್ಚಿಸುತ್ತಿದ್ದಾರೆ. ಸಚಿವರಿಗೆ ಸಿಗುವ ಸವಲತ್ತುಗಳು ನಮಗೂ ಸಿಗಬೇಕೆಂದು ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರು ನಿನ್ನೆಯಷ್ಟೇ ದುಬಾರಿ ವೆಚ್ಚದ ಕಾರಿನ ಬೇಡಿಕೆ ಇಟ್ಟಿದ್ದರು. ಈಗ ಮೇಯರ್, ಉಪ ಮೇಯರ್, ಕಮೀಷನರ್‍ಗಳಿಗೆ ನಿವಾಸಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತಾಗಿ ಬಿಬಿಎಂಪಿ ಮೇಯರ್ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಈಗಾಗಲೇ ಬಿಬಿಎಂಪಿ ನಿವಾಸಕ್ಕೆ ಜಾಗ ಸಿದ್ಧವಾಗಿದೆ. ಇದನ್ನು ಓದಿ: 3 ಕೋಟಿ ರೂ. ವೆಚ್ಚದಲ್ಲಿ 12 ಕಾರು ಖರೀದಿಗೆ ಮುಂದಾದ ಬಿಬಿಎಂಪಿ!

    ಮೇಯರ್ ಹಾಗೂ ಉಪ ಮೇಯರ್ ಬೆಂಗಳೂರು ನಿವಾಸಿಗಳು ಪ್ರತಿ ವರ್ಷವೂ ಬದಲಾಗುತ್ತಾರೆ. ಹೀಗಾಗಿ ನಿವಾಸವನ್ನು ನೀಡಿದರೆ ಸರ್ಕಾರದ ಮೇಲೆ ಲಕ್ಷಾಂತರ ರೂಪಾಯಿ ಹೊರೆ ಬೀಳುತ್ತದೆ. ಹೀಗಾಗಿ ಪ್ರತ್ಯೇಕ ನಿವಾಸದ ಅವಶ್ಯಕತೆ ಇಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ದಾಖಲೆ ನಿರ್ಮಿಸಿದ ಮೇಯರ್ ಸಂಪತ್ ರಾಜ್

    ದಾಖಲೆ ನಿರ್ಮಿಸಿದ ಮೇಯರ್ ಸಂಪತ್ ರಾಜ್

    ಬೆಂಗಳೂರು: ನಗರದ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅತಿ ಹೆಚ್ಚು ಸಭೆ ನಡೆಸುವ ಮೂಲಕ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.

    ಮೇಯರ್ ಸಂಪತ್ ರಾಜ್ ಬಿಬಿಎಂಪಿಯಲ್ಲಿ ಅತೀ ಹೆಚ್ಚು ಕೌನ್ಸಿಲ್ ಸಭೆ ನಡೆಸಿದ ದಾಖಲೆ ನಿರ್ಮಿಸಲು ಮುಂದಾಗಿದ್ದು, ಸಭೆಗಳ ಮೇಲೆ ಸಭೆಗಳನ್ನು ಮೇಯರ್ ಮಾಡುತ್ತಿದ್ದಾರೆ. ಆದರೆ ರೆಕಾರ್ಡ್ ಬ್ರೇಕ್ ಮಾಡುವುದಕ್ಕೆ ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ ಎಂಬ ಆರೋಪವೂ ಸಹ ಕೇಳಿ ಬರುತ್ತಿದೆ.

    ಮೇಯರ್ ಸಂಪತ್ ರಾಜ್ ಇದುವರೆಗೂ 31 ಸಭೆಗಳನ್ನು ನಡೆಸಿದ್ದಾರೆ. 31 ಸಭೆಗಳನ್ನು ನಡೆಸುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ. 31 ಸಭೆಗಳಿಗೆ ಬರೋಬ್ಬರಿ 3 ಕೋಟಿ ರೂಪಾಯಿ ವೆಚ್ಚವಾಗಿದೆ. 31 ಸಭೆ ನಡೆಸಿದ್ದರು ಚರ್ಚೆ ನಡೆದಿದ್ದು, ಕೇವಲ 76 ಗಂಟೆಗಳು ಮಾತ್ರವಾಗಿದೆ.

    198 ಚುನಾಯಿತ ಸದಸ್ಯರು ಹಾಗೂ 20 ನಾಮನಿರ್ದೇಶಿತ ಸದಸ್ಯರಿಗೆ ಭತ್ಯೆ ಕೊಡಲಾಗುತ್ತದೆ. ಕೌನ್ಸಿಲ್ ಸಭೆಗೆ ಹಾಜರಾಗುವ ಸದಸ್ಯರಿಗೆ ಒಂದು ದಿನಕ್ಕೆ 400 ರೂ. ಭತ್ಯೆ ನೀಡಲಾಗುತ್ತದೆ. ಜೊತೆಗೆ ಊಟ, ಉಪಹಾರ, ಇನ್ನಿತರ ವೆಚ್ಚ ಸೇರಿ ಒಂದು ದಿನದ ಸಭೆಗೆ ಅಂದಾಜು 8 ಲಕ್ಷ ರೂ. ಖರ್ಚಾಗುತ್ತದೆ. ಆದ್ದರಿಂದ ಸಂಪತ್ ರಾಜ್ ಅವಧಿಯಲ್ಲಿ ಸಭೆಗಾಗಿಯೇ ಬರೋಬ್ಬರಿ 3 ಕೋಟಿ ರೂ. ಖರ್ಚು ಮಾಡಲಾಗಿದೆ. ಮೇಯರ್ ಅವಧಿ ಎರಡು ತಿಂಗಳು ಇದೆ. ಆದ್ದರಿಂದ ಮೇಯರ್ ಗೆ ಎರಡರಿಂದ ಮೂರು ಸಭೆ ನಡೆಸುವ ಅವಕಾಶ ಕೂಡ ಇದೆ.

  • ಎಂ.ಬಿ.ಪಾಟೀಲ್ ತಂತ್ರಕ್ಕೆ ತಲೆ ಕೆಳಗಾಯಿತು ಶಾಸಕ ಯತ್ನಾಳ್ ಯೋಜನೆ

    ಎಂ.ಬಿ.ಪಾಟೀಲ್ ತಂತ್ರಕ್ಕೆ ತಲೆ ಕೆಳಗಾಯಿತು ಶಾಸಕ ಯತ್ನಾಳ್ ಯೋಜನೆ

    ವಿಜಯಪುರ: ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬಂಡಾಯ ಅಭ್ಯರ್ಥಿಗೆ ಬೆಂಬಲ ನೀಡುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯೋಜನೆಯನ್ನು ಮಾಜಿ ಸಚಿವ ಎಂ.ಬಿ.ಪಾಟೀಲ್ ತಲೆ ಕೆಳಗಾಗಿಸಿದ್ದಾರೆ.

    ಇಂದು ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಇದರಲ್ಲಿ ಮೇಯರ್ ಸ್ಥಾನ ಕಾಂಗ್ರೆಸ್ ಅಭ್ಯರ್ಥಿ ಶ್ರೀದೇವಿ ಲೋಗಾಂವಿ ಅವರ ಪಾಲಾಗಿದೆ. ಇತ್ತ ಉಪಮೇಯರ್ ಸ್ಥಾನಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿ ಗೋಪಾಲ್ ಘಟಕಾಂಬಳೆ ಸ್ಪರ್ಧಿಸಿದ್ದರು. ಹೀಗಾಗಿ ಎಂ.ಬಿ.ಪಾಟೀಲ್ ಸಲಹೆಯಂತೆ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಬಿಜೆಪಿ ಬಂಡಾಯ ಅಭ್ಯರ್ಥಿಗೆ ಬೆಂಬಲ ನೀಡಿ ಆಯ್ಕೆ ಮಾಡಿದ್ದಾರೆ.

    ಬಿಜೆಪಿ ಬಂಡಾಯ ಅಭ್ಯರ್ಥಿಯ ಗೆಲುವಿನಿಂದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ತೀವ್ರ ಮುಖಭಂಗ ಉಂಟಾಗಿದೆ. ಮೇಯರ್ ಶ್ರೀದೇವಿ ಲೋಗಾಂವಿ 20 ಮತ ಗಳಿಸಿ ಜಯ ಸಾಧಿಸಿದ್ದರೇ, ಗೋಪಾಲ್ ಘಟಕಾಂಬಳೆ 26 ಮತಗಳ ಮೂಲಕ ಗೆಲುವಿನ ನಗೆ ಬೀರಿದರು.

    ಇತ್ತ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಸಂತೋಷ್ ಚವ್ಹಾಣ್ 4 ಮತಗಳ ಅಂತರದಿಂದ ಸೋಲಬೇಕಾಯಿತು. ಮೇಯರ್-ಉಪಮೇಯರ್ ಆಯ್ಕೆಯಲ್ಲಿ ನಗರ ಶಾಸಕ ಬಸನಗೌಡ ಪಾಟೀಲ್, ನಾಗಠಾಣ ಶಾಸಕ ದೇವಾನಂದ ಚವ್ಹಾಣ್, ತಲಾ ಒಬ್ಬರಂತೆ ಸಂಸದ ಹಾಗೂ ವಿಧಾನ ಪರಿಷತ್ ಸದಸ್ಯರು ಮತ ಚಲಾಯಿಸಬಹುದಾಗಿದೆ. ಆದರೆ ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯ ಅರುಣ ಶಾಪೂರ್, ಪಕ್ಷೇತರ ಕಾರ್ಪೊರೇಟರ್ ರವಿ ಲೋಣಿ ಚುನಾವಣೆಯಿಂದ ದೂರ ಉಳಿದಿದ್ದರು. ಇದರ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿದೆ ಎನ್ನಲಾಗಿದೆ. ಬೆಳಗಾವಿಯ ಪ್ರಾದೇಶಿಕ ಆಯುಕ್ತರಾದ ಪಿ.ಎ.ಮೇಘನ್ನವರ್ ಚುನಾವಣೆಯನ್ನು ನಡೆಸಿಕೊಟ್ಟರು.

  • ದ್ವಿಚಕ್ರ ವಾಹನವೇರಿ ಮೇಯರ್ ರಿಂದ ರಸ್ತೆ ಗುಂಡಿ ಪರಿಶೀಲನೆ- ದಾರಿ ಮಧ್ಯೆ ಸಿಕ್ಕ ನಲಪಾಡ್!

    ದ್ವಿಚಕ್ರ ವಾಹನವೇರಿ ಮೇಯರ್ ರಿಂದ ರಸ್ತೆ ಗುಂಡಿ ಪರಿಶೀಲನೆ- ದಾರಿ ಮಧ್ಯೆ ಸಿಕ್ಕ ನಲಪಾಡ್!

    ಬೆಂಗಳೂರು: ಬಿಬಿಎಂಪಿ ಮೇಯರ್ ಸಂಪತ್ ರಾಜ್ ಮಂಗಳವಾರ ರಾತ್ರಿ 9 ಗಂಟೆಯಿಂದ ತಡ ರಾತ್ರಿವರೆಗೂ ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನ ಹಲವೆಡೆ ರಸ್ತೆ ಗುಂಡಿ ವೀಕ್ಷಣೆ ಮಾಡಿದ್ದಾರೆ.

    ಲಾಟರಿ ಮೂಲಕ ವೀಕ್ಷಣೆ ವಲಯವನ್ನು ಆಯ್ಕೆ ಮಾಡಿಕೊಂಡು ಬಿಬಿಎಂಪಿ ಕೇಂದ್ರ ಕಚೇರಿಯಿಂದ ದ್ವಿಚಕ್ರ ವಾಹನವೇರಿ ಗುಂಡಿಗಳ ಪರಿಶೀಲನೆಗೆ ತೆರಳಿದರು. ಆರಂಭದಲ್ಲಿ ಪಾಲಿಕೆ ಕಚೇರಿ ಬಳಿಯೇ ಸಂಪತ್ ರಾಜ್ ಅವರಿಗೆ ಗುಂಡಿಗಳ ದರ್ಶನವಾಯಿತು. ಎಂಜಿ ರೋಡ್ ಮತ್ತು ಟೆಂಡರ್ ಶ್ಯೂರ್ ರಸ್ತೆ ಹದಗೆಟ್ಟ ಹಿನ್ನೆಲೆ, ಈ ಎರಡು ಕಾಮಗಾರಿಯ ಗುತ್ತಿಗೆದಾರರಿಗೆ 10 ಲಕ್ಷ ರೂ. ದಂಡ ವಿಧಿಸಲು ಮೇಯರ್ ಸೂಚನೆ ನೀಡಿದರು. ಇತ್ತ ಬೆಂಗಳೂರು ಕ್ಲಬ್ ಮತ್ತು ಸುಬ್ಬಯ್ಯ ವೃತ್ತದ ಹತ್ತಿರ ರಸ್ತೆ ಕಾಮಗಾರಿಯ ಗುತ್ತಿಗೆದಾರರಿಗೆ 1 ಲಕ್ಷ ರೂ. ದಂಡ ವಿಧಿಸುವಂತೆ ಸೂಚಿಸಿದರು.

    ಪರಿಶೀಲನೆಯ ಬಳಿಕ ಮಾತನಾಡಿದ ಮೇಯರ್ ಸಂಪತ್ ರಾಜ್, ಮಾಧ್ಯಮಗಳ ವರದಿ ಆಧರಿಸಿ ರಸ್ತೆಗಳಲ್ಲಿನ ಗುಂಡಿಗಳ ವೀಕ್ಷಣೆ ಮಾಡಲಾಗುತ್ತಿದೆ. ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳು ಕಂಡು ಬಂದಿದ್ದು ಸರಿಯಾಗಿ ಕಾಮಗಾರಿ ಮಾಡದ ಗುತ್ತಿಗೆದಾರರಿಗೆ ದಂಡ ಹಾಕಲಾಗಿದೆ ಎಂದು ತಿಳಿಸಿದರು.

    ರಸ್ತೆ ಗುಂಡಿಗಳ ವೀಕ್ಷಣೆಯ ವೇಳೆ ದಾರಿ ಮಧ್ಯೆ ಶಾಸಕ ಹ್ಯಾರಿಸ್ ಪುತ್ರ ಮೊಹ್ಮದ್ ನಲಪಾಡ್ ಸಿಕ್ಕಿದ್ದು, ಮೇಯರ್ ಕೈ ಕುಲುಕಿದ್ರು.

  • 2 ತಿಂಗ್ಳು ಇರುವಾಗ್ಲೇ ಮೇಯರ್ ಹುದ್ದೆಗೆ ನಡೇತಿದೆ ಭಾರೀ ಲಾಬಿ!

    2 ತಿಂಗ್ಳು ಇರುವಾಗ್ಲೇ ಮೇಯರ್ ಹುದ್ದೆಗೆ ನಡೇತಿದೆ ಭಾರೀ ಲಾಬಿ!

    ಬೆಂಗಳೂರು: ಮೇಯರ್ ಅವಧಿ ಇನ್ನೂ 2 ತಿಂಗಳಿರುವಾಗಲೇ ಹೊಸ ಮೇಯರ್ ಗಾದಿಗೆ ಲಾಬಿ ಆರಂಭವಾಗಿದೆ. ಈ ಬಾರಿ ಬಿಬಿಎಂಪಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿರುವ ಮೇಯರ್ ಹುದ್ದೆಗಾಗಿ ಕಾಂಗ್ರೆಸ್-ಜೆಡಿಎಸ್ ಭರ್ಜರಿ ಕಸರತ್ತು ನಡೆಸುತ್ತಿವೆ.

    ಈ ಬಾರಿ ಮೇಯರ್ ಹುದ್ದೆ ಮೇಲೆ ಜೆಡಿಎಸ್ ಕಣ್ಣು ಇಟ್ಟಿದೆ. ಜೆಡಿಎಸ್ ನಿಂದ ಮೇಯರ್ ರೇಸ್‍ನಲ್ಲಿ ಹೇಮಲತಾ ಗೋಪಾಲಯ್ಯ, ನೇತ್ರಾ ನಾರಾಯಣ್, ರಮಿಳಾ ಉಮಾಶಂಕರ್ ಹೆಸರು ಕೇಳಿ ಬರುತ್ತಿದ್ದು, ಮೇಯರ್ ಹುದ್ದೆ ಪಡೆಯಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಆಡಳಿತದಲ್ಲಿ ಈಗಾಗಲೇ ಕಾಂಗ್ರೆಸ್, 3 ಬಾರಿ ಮೇಯರ್ ಪಟ್ಟ ಅಲಂಕರಿಸಿದೆ. ಬೆಂಗಳೂರು ಶಾಸಕರ ಬೆಂಬಲಿಗರಿಂದಲೂ ಮೇಯರ್ ಪಟ್ಟಕ್ಕೆ ಪೈಪೋಟಿ ನಡೆಯುತ್ತಿದೆ. ಸಚಿವ ಕೆ.ಜೆ. ಜಾರ್ಜ್, ಶಾಸಕರಾದ ರಾಮಲಿಂಗರೆಡ್ಡಿ ಹಾಗೂ ಎನ್.ಎ. ಹ್ಯಾರಿಸ್ ತಮ್ಮವರನ್ನು ಮೇಯರ್ ಸೀಟಿನಲ್ಲಿ ಕೂರಿಸುವ ಶತಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಮೇಯರ್ ಸ್ಥಾನಕ್ಕೆ ಲಿಂಗರಾಜಪುರಂನ ಲಾವಣ್ಯ ಗಣೇಶ್ ರೆಡ್ಡಿ, ಶಾಂತಿನಗರ ವಾರ್ಡ್ ನ ಪಿ. ಸೌಮ್ಯ ಶಿವಕುಮಾರ್, ಜಯನಗರ ವಾರ್ಡ್ ನ ಗಂಗಾಂಬಿಕೆ ಮಲ್ಲಿಕಾರ್ಜುನ ಮೇಯರ್ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನು ಗಂಗಾಂಬಿಕಾ ಮಲ್ಲಿಕಾರ್ಜುನ ಬೆನ್ನಿಗೆ ರಾಮಲಿಂಗರೆಡ್ಡಿ, ಸಚಿವ ಕೆ.ಜೆ ಜಾರ್ಜ್ ತಮ್ಮ ಕ್ಷೇತ್ರ ವ್ಯಾಪ್ತಿಯ ಲಾವಣ್ಯ ಗಣೇಶ್ ರೆಡ್ಡಿ ಪರ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಯುತ್ತಿದೆ. ಸೌಮ್ಯ ಶಿವಕುಮಾರ್ ಪರ ಶಾಸಕ ಎನ್.ಎ. ಹ್ಯಾರಿಸ್ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ.

    ಇವರೆಲ್ಲರ ಪೈಪೋಟಿ ನಡುವೆಯೇ ಎಚ್‍ಎಂಟಿ ವಾರ್ಡ್ ನ ಕಾರ್ಪೋ ರೇಟರ್ ಆಶಾ ಸುರೇಶ್ ಕೂಡ ಮೇಯರ್ ಗದ್ದುಗೆಗೆ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಹಾಲಿ ಮೇಯರ್ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಈ ಬಾರಿ ಜನರಲ್ ಮಹಿಳೆ ಮೇಯರ್ ಹುದ್ದೆ ಮೀಸಲಿಡಲಾಗಿದೆ. ಹೀಗಾಗಿ ದೋಸ್ತಿ ಆಡಳಿತದಲ್ಲೀಗ ಬಿಬಿಎಂಪಿ ಮೇಯರ್ ಗಾಗಿ ಗುದ್ದಾಟ ಆರಂಭವಾಗಿದೆ.

  • ಬಿಬಿಎಂಪಿಯಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ ಮೇಯರ್ ಸಂಪತ್ ರಾಜ್!

    ಬಿಬಿಎಂಪಿಯಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ ಮೇಯರ್ ಸಂಪತ್ ರಾಜ್!

    ಬೆಂಗಳೂರು: ಬಿಬಿಎಂಪಿಯಲ್ಲಿ ಮೇಯರ್ ಬದಲಾವಣೆ ಆಗುವಾಗ ವಿಶೇಷವಾದ ಹೊಸ ಸಂಪ್ರದಾಯ ಆಚರಣೆಗೆ ಚಿಂತನೆ ಮಾಡಿದ್ದು, ಬೆಳ್ಳಿ ಕೀ ಮತ್ತು ಬ್ಯಾಟನ್ ಹಸ್ತಾಂತರಿಸುವ ಸಮಾರಂಭ ನಡೆಸಲು ಮೇಯರ್ ಸಂಪತ್ ರಾಜ್ ನಿರ್ಧರಿಸಿದ್ದಾರೆ.

    ನೂತನ ಮೇಯರ್ ಗೆ ಅಧಿಕಾರ ಹಸ್ತಾಂತರದ ವೇಳೆ ನಿರ್ಗಮಿತ ಮೇಯರ್ ರಿಂದ ಬೆಳ್ಳಿ ಕೀ ಮತ್ತು ಬ್ಯಾಟನ್ ಹಸ್ತಾಂತರಿಸುವ ಹೊಸ ಸಂಪ್ರದಾಯವನ್ನು ಪರಿಚಯಿಸಲು ಸಂಪತ್ ರಾಜ್ ಮುಂದಾಗಿದ್ದಾರೆ.

    ಅದೇ ರೀತಿ ಬಿಬಿಎಂಪಿಗೆ ಆಗಮಿಸುವ ನೂತನ ಆಯುಕ್ತರಿಗೂ ಹೊಸ ಸಂಪ್ರದಾಯವನ್ನು ಪರಿಚಯಿಸಿದ್ದು, ನೂತನ ಆಯುಕ್ತರಿಗೆ ಅಧಿಕಾರವನ್ನು ವಹಿಸಿಕೊಳ್ಳುವಾಗ ಕೆಎಂಸಿ ಕಾಯ್ದೆ ಪುಸ್ತಕವನ್ನು ನೀಡಿ ಅಧಿಕಾರವನ್ನು ಹಸ್ತಾಂತರಿಸಲು ಚಿಂತಿಸಿದ್ದಾರೆ.

    ಈ ಬಗ್ಗೆ ಕುರಿತು 2018-19ನೇ ಸಾಲಿನ ಬಜೆಟ್ ಪುಸ್ತಕದಲ್ಲಿ ಸಲಹೆ ನೀಡಿದ್ದು, ಸದ್ಯ ಬಿಬಿಎಂಪಿಗೆ ಈ ಹೊಸ ಸಂಪ್ರದಾಯವನ್ನು ಇದೇ ವರ್ಷದಿಂದ ಜಾರಿಗೊಳಿಸಲು ಮೇಯರ್ ಸಂಪತ್ ರಾಜ್ ತೀರ್ಮಾನಿಸಿದ್ದಾರೆ. ಆದ್ರೆ ಈ ಹಿಂದೆ ಈ ರೀತಿಯ ಯಾವುದೇ ಸಂಪ್ರದಾಯಗಳಿರಲಿಲ್ಲ. ಮೇಯರ್ ಆಗಿ ಆಯ್ಕೆಯಾದ ನಾಯಕ ನೇರವಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದರು. ಇನ್ನು ಮುಂದೆ ಅಧಿಕಾರ ಹಸ್ತಾಂತರಕ್ಕಾಗಿ ಕಾರ್ಯಕ್ರಮ ನಡೆಸಲು ಮೇಯರ್ ಸಂಪತ್ ರಾಜ್ ತೀರ್ಮಾನಿಸಿದ್ದಾರೆ.