Tag: ಮೇಯರ್

  • ದೆಹಲಿಯಲ್ಲಿ ಲುಂಗಿ ಉಡಲು ಬಾರದವರಿಂದ ಮೇಯರ್ ಪಟ್ಟ ಕನ್ನಡಿಗರಿಗೆ ಕೈ ತಪ್ಪಿತು : ಭೀಮಾಶಂಕರ್ ಪಾಟೀಲ್

    ದೆಹಲಿಯಲ್ಲಿ ಲುಂಗಿ ಉಡಲು ಬಾರದವರಿಂದ ಮೇಯರ್ ಪಟ್ಟ ಕನ್ನಡಿಗರಿಗೆ ಕೈ ತಪ್ಪಿತು : ಭೀಮಾಶಂಕರ್ ಪಾಟೀಲ್

    ಬೆಂಗಳೂರು: ಲುಂಗಿ ಉಡಲು ಬಾರದ ಕೆಲವರು ಮಾಡಿದ ನಾಡ ವಿರೋಧಿ ಸಂಚಿಗೆ ಕನ್ನಡಿಗರಿಗೆ ಬಿಬಿಎಂಪಿ ಮೇಯರ್ ಪಟ್ಟ ಒಲಿಯದೇ ಹೋಯಿತು ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಕಿಡಿಕಾರಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಈ ಬಾರಿ ಕನ್ನಡಿಗರನ್ನೇ ಆಯ್ಕೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಟ್ಟಿ ನಿಲುವು ತಾಳಿದ್ದರು. ಆದರೆ ದೆಹಲಿಯಲ್ಲಿ ಕುಳಿತು ಲುಂಗಿ ಉಡಲು ಬಾರದ ಕೆಲವರು ಮಾಡಿದ ನಾಡ ವಿರೋಧಿ ಸಂಚಿಗೆ ಕನ್ನಡಿಗರಿಗೆ ಈ ಪಟ್ಟ ಒಲಿಯದೇ ಹೋಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದಿದ್ದರೂ ಅಧಿಕಾರದಿಂದ ವಂಚಿತಗೊಂಡಿದ್ದ ಬಿಜೆಪಿ ಈ ಬಾರಿ ಬಿಬಿಎಂಪಿ ಮೇಯರ್ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

    ಒಟ್ಟು 129 ಮತಗಳನ್ನು ಪಡೆಯುವ ಮೂಲಕ ಜೋಗುಪಾಳ್ಯ ವಾರ್ಡಿನ ಬಿಜೆಪಿ ಸದಸ್ಯ ಗೌತಮ್ ಕುಮಾರ್ ಜೈನ್ ಮೇಯರ್ ಆಗಿ ಆಯ್ಕೆ ಆಗಿದ್ದರೆ, ಬೊಮ್ಮನಹಳ್ಳಿ ವಾರ್ಡಿನ ರಾಮ್ ಮೋಹನ್ ರಾಜು ಉಪ ಮೇಯರ್ ಆಗಿ ಆಯ್ಕೆ ಆಗಿದ್ದಾರೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದರೂ ಕೊನೆ ಕ್ಷಣದಲ್ಲಿ ಪಕ್ಷೇತರ ಪಾಲಿಕೆ ಸದಸ್ಯರ ಜೊತೆಗಿನ ಮಾತುಕತೆ ಯಶಸ್ವಿಯಾಗದ ಪರಿಣಾಮ ಮೇಯರ್ ಹುದ್ದೆ ಕೈ ತಪ್ಪಿತ್ತು. ಆದರೆ ಈ ಬಾರಿ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ ಪರಿಣಾಮ ಬಿಜೆಪಿ ಬಿಬಿಎಂಪಿಯಲ್ಲಿ ಅಧಿಕಾರವನ್ನು ಹಿಡಿದಿದೆ.

    ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ 257 ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದರೂ 249 ಮಂದಿ ಹಾಜರಾಗಿದ್ದರು. 8 ಮಂದಿ ಗೈರಾಗಿರುವ ಕಾರಣ ಬಹುಮತಕ್ಕೆ 125 ಸದಸ್ಯರ ಬೆಂಬಲ ಬೇಕಿತ್ತು. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಪದ್ಮನಾಭ ರೆಡ್ಡಿ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದರು.

  • ಕ್ಲೈಮ್ಯಾಕ್ಸ್ ಟ್ವಿಸ್ಟ್ – ಬಿಬಿಎಂಪಿ ಮೇಯರ್ ಹುದ್ದೆಗೆ ಬಿಜೆಪಿಯಿಂದ ಇಬ್ಬರು ಸ್ಪರ್ಧೆ

    ಕ್ಲೈಮ್ಯಾಕ್ಸ್ ಟ್ವಿಸ್ಟ್ – ಬಿಬಿಎಂಪಿ ಮೇಯರ್ ಹುದ್ದೆಗೆ ಬಿಜೆಪಿಯಿಂದ ಇಬ್ಬರು ಸ್ಪರ್ಧೆ

    ಬೆಂಗಳೂರು: ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರೀ ಕಸರತ್ತು ನಡೆಯುತ್ತಿದೆ. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಇಬ್ಬರು ನಾಮಪತ್ರ ಸಲ್ಲಿಕೆ ಮಾಡಿದರೆ, ಉಪಮೇಯರ್ ಸ್ಥಾನಕ್ಕೆ ಮೂವರು ನಾಮಪತ್ರ ಸಲ್ಲಿಸಿದ್ದಾರೆ.

    ಮೇಯರ್ ಹುದ್ದೆಗೆ ಬಿಜೆಪಿಯಿಂದ ಗೌತಮ್ ಕುಮಾರ್ ಜೈನ್, ಪದ್ಮನಾಭರೆಡ್ಡಿ ನಾಮಪತ್ರ ಸಲ್ಲಿಸಿದರೆ ಉಪ ಮೇಯರ್ ಹುದ್ದೆಗೆ ಮಹಾಲಕ್ಷ್ಮಿ ರವೀಂದ್ರ, ಗುರುಮೂರ್ತಿ ರೆಡ್ಡಿ, ಮೋಹನ್ ರಾಜ್ ನಾಮಪತ್ರ ಸಲ್ಲಿಸಿದ್ದಾರೆ.

    ಹೆಚ್ಚು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಸಭೆಯಲ್ಲಿ ಆರ್ ಅಶೋಕ್ ಹಾಗೂ ಅಶ್ವಥ್ ನಾರಾಯಣ ವಿರುದ್ಧ ಗರಂ ಆಗಿರುವ ಗೌತಮ್ ಜೈನ್, ಪಕ್ಷದ ಅಧಿಕೃತ ಅಭ್ಯರ್ಥಿ ನಾನು. ಆದರೆ ಪದ್ಮನಾಭ ರೆಡ್ಡಿ ಹೇಗೆ ನಾಮಪತ್ರ ಸಲ್ಲಿಸಿದರು ಎಂದು ಪ್ರಶ್ನಿಸಿದ್ದಾರೆ.

    ಅಲ್ಲದೆ ನನಗೆ ಪಕ್ಷದ ಹಿರಿಯರು, ಸಂಘಟನೆಯವರು ಎಲ್ಲರೂ ಸೇರಿ ನಾಮಪತ್ರ ಸಲ್ಲಿಸಲು ಹೇಳಿದ್ದಾರೆ. ಹೀಗಾಗಿ ಅವರ ಮುಖಾಂತರ ಬಂದು ನಾನು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಇಬ್ಬರು ನಾಮಪತ್ರ ಸಲ್ಲಿಸಿದರೆ ಒಬ್ಬರನ್ನು ಆಯ್ಕೆ ಮಾಡುತ್ತಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಗೌತಮ್ ಜೈನ್ ಹೇಳಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಮೇಯರ್ ಅಭ್ಯರ್ಥಿ – ಬಿಎಸ್‍ವೈ ವಿರುದ್ಧ ಸೆಡ್ಡು ಹೊಡೆದು ಗೆದ್ದ ಕಟೀಲ್

    ಇತ್ತ ಪದ್ಮನಾಭ ರೆಡ್ಡಿ ಅವರು ಬಂಡಾಯವಾಗಿ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷ ನನಗೆ ನಾಮಪತ್ರ ಸಲ್ಲಿಸುವಂತೆ ಸೂಚನೆ ಕೊಟ್ಟಿದೆ. ಹೀಗಾಗಿ ನಾನು ನನ್ನ ಕಾರ್ಪೋರೇಟರ್ ಜೊತೆಗೆ ಬಂದು ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷದ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.

    ಬಂಡಾಯದ ಬಗ್ಗೆ ಹೇಳಿದ್ದೇನು?
    ನನ್ನ ನಾಯಕರಾದ ನರೇಂದ್ರ ಮೋದಿ, ಬಿಎಸ್ ಯಡಿಯೂರಪ್ಪ, ಬೆಂಗಳೂರು ನಗರದ ನಾಯಕಾರದ ಆರ್ ಅಶೋಕ್ ಹಾಗೂ ಎಲ್ಲಾ ಶಾಸಕ, ಸಂಸದರು ಒಟ್ಟಾಗಿ ಶಿಸ್ತಿನ ಪಕ್ಷದಲ್ಲಿದ್ದೇವೆ. ಹೀಗಾಗಿ ಪಕ್ಷ ಆದೇಶ ಮಾಡಿದ್ದು ನಾಮಪತ್ರ ಸಲ್ಲಿಸಿದ್ದೇನೆ. ಒಟ್ಟಿನಲ್ಲಿ ಪಕ್ಷದ ಆದೇಶಕ್ಕೆ ತಲೆ ಬಾಗುತ್ತೇನೆ. ಇಲ್ಲಿ ಬಂಡಾಯದ ಪ್ರಶ್ನೆಯೇ ಇಲ್ಲ ಎಂದು ಪದ್ಮನಾಭ ರೆಡ್ಡಿ ಹೇಳಿದ್ದಾರೆ.

    ಗೌತಮ್ ನನ್ನ ಸಹೋದರ. ಅಂತಿಮವಾಗಿ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಅಷ್ಟಕ್ಕೂ ಇಬ್ಬರು ನಾಮಪತ್ರ ಸಲ್ಲಿಸಬಾರದೆಂದು ಕಾನೂನಿನಲ್ಲಿ ಇಲ್ಲವಲ್ವ. ಇಲ್ಲಿ ಬಂಡಾಯದ ಪ್ರಶ್ನೆ ಉದ್ಭವವಾಗಲ್ಲ. ನನ್ನ ಪಕ್ಷ ನಾಮಪತ್ರ ಸಲ್ಲಿಸಿ ಎಂದು ಹೇಳಿದೆ, ಅದಕ್ಕೆ ಸಲ್ಲಿಕೆ ಮಾಡಿದ್ದೇನೆ ಪದ್ಮನಾಭ ರೆಡ್ಡಿ ತಿಳಿಸಿದರು. ಇಡೀ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ನಮ್ಮ ಬಿಜೆಪಿ ಪಕ್ಷವನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ಸಿನವರು ಇದರಿಂದ ಲಾಭ ಪಡೆಯುತ್ತಾರೆ ಅಂದುಕೊಂಡರೆ ಅದು ತಿರುಕನ ಕನಸಾಗಿರುತ್ತದೆ ಎಂದರು.

    ಒಟ್ಟಿನಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಗೌತಮ್ ಜೈನ್ ಅವರನ್ನು ನಾಮಪತ್ರ ಸಲ್ಲಿಕೆ ಮಾಡಲು ತಿಳಿಸಿದ್ರೆ, ಇತ್ತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪದ್ಮನಾಭ ರೆಡ್ಡಿಯವರನ್ನು ನಾಮ ಪತ್ರ ಸಲ್ಲಿಸುವಂತೆ ಸೂಚಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸತ್ಯನಾರಾಯಣ ನಾಮಪತ್ರ ಸಲ್ಲಿಕೆ ಮಾಡಿದರೆ ಉಪಮೇಯರ್ ಸ್ಥಾನಕ್ಕೆ ಗಂಗಮ್ಮ ನಾಮಪತ್ರ ಸಲ್ಲಿಸಿದ್ದಾರೆ.

  • ಬಿಬಿಎಂಪಿ ಮೇಯರ್ ಚುನಾವಣೆ – ತಡರಾತ್ರಿಯವರೆಗೂ ಬಿಜೆಪಿ ಸಭೆ

    ಬಿಬಿಎಂಪಿ ಮೇಯರ್ ಚುನಾವಣೆ – ತಡರಾತ್ರಿಯವರೆಗೂ ಬಿಜೆಪಿ ಸಭೆ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಇಂದು ನಡೆಯಲಿದ್ದೂ, ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ.

    ಸೋಮವಾರ ತಡರಾತ್ರಿಯವರೆಗೆ ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮೇಯರ್ ಸ್ಥಾನಕ್ಕೆ ಸರ್ವಜ್ಞನಗರದ ಪದ್ಮನಾಭರೆಡ್ಡಿ, ಶಾಂತಿನಗರ ಗೌತಮ್ ಹೆಸರು ಕೇಳಿ ಬಂದಿದ್ದರೆ ಉಪಮೇಯರ್ ಸ್ಥಾನಕ್ಕೆ ವಿಜಯನಗರದ ಮಹಾಲಕ್ಷ್ಮಿ, ಬೊಮ್ಮನಹಳ್ಳಿಯ ಗುರುಮೂರ್ತಿ ಹೆಸರು ಕೇಳಿಬಂದಿದೆ. ಒಟ್ಟು ನಾಲ್ಕು ಮಂದಿಯಲ್ಲಿ ಅಂತಿಮವಾಗಿ ಯಾರು ಆಯ್ಕೆ ಆಗಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

    ಮೋದಿ, ಅಮಿತ್ ಶಾ ಅಧಿಕಾರದ ಸಮಯದಲ್ಲಿ ಹಲವು ಬಾರಿ ಕೊನೆ ಕ್ಷಣದಲ್ಲಿ ಹೊಸ ವ್ಯಕ್ತಿಗೆ ಮಣೆ ಹಾಕಿದ್ದು ಇದೆ. ಹೀಗಾಗಿ ಕೊನೆ ಕ್ಷಣದಲ್ಲಿ ಮೇಯರ್, ಉಪಮೇಯರ್ ಹುದ್ದೆ ಬೇರೆ ವ್ಯಕ್ತಿ ಆಯ್ಕೆಯಾದರೂ ಅಚ್ಚರಿ ಇಲ್ಲ ಎನ್ನುವ ಮಾತು ಕೇಳಿಬಂದಿದೆ.

    ಇಂದು ಬೆಳಗ್ಗೆ 8.30ರಿಂದ ನಾಮಪತ್ರ ಸಲ್ಲಿಕೆಯಾಗಲಿದ್ದು, ಈ ಬಾರಿಯೂ ಬಿಬಿಎಂಪಿಯಲ್ಲಿ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಿರ್ಧರಿಸಿದೆ. ಮೈತ್ರಿ ಅನ್ವಯ ಕಾಂಗ್ರೆಸ್‍ಗೆ ಮೇಯರ್ ಸ್ಥಾನ ಹಾಗೂ ಜೆಡಿಎಸ್‍ಗೆ ಉಪ ಮೇಯರ್ ಸ್ಥಾನ ಹಂಚಿಕೆ ಮಾಡಿಕೊಳ್ಳಲಾಗಿದೆ.

    ಮೈತ್ರಿ ಅನ್ವಯ ಕಾಂಗ್ರೆಸ್, ಜೆಡಿಎಸ್‍ನಿಂದ ಮೇಯರ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ದತ್ತಾತ್ರೇಯ ವಾರ್ಡ್ ಸದಸ್ಯರಾದ ಸತ್ಯನಾರಾಯಣರನ್ನು ಆಯ್ಕೆ ಮಾಡಲಾಗಿದ್ದು, ಕೆಪಿಸಿಸಿ ಅಧಿಕೃತವಾಗಿ ಪ್ರಕಟಿಸಿದೆ. ಮಂಗಳವಾರ ಸತ್ಯನಾರಾಯಣ ಅವರು ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.  ಇದನ್ನೂ ಓದಿ: ಸಿಎಂ ಮಾತಿಗೂ ಡೋಂಟ್ ಕೇರ್ – ಸರ್ಕಾರಕ್ಕೆ ಸವಾಲೆಸೆದ ನಿಷ್ಠಾವಂತ ಅಧಿಕಾರಿ

    ಇತ್ತ ಉಪಮೇಯರ್ ಸ್ಥಾನಕ್ಕೆ ಅಂತಿಮ ಕ್ಷಣದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಬದಲಿಸಿದ್ದು, ಶಕ್ತಿ ಗಣಪತಿ ವಾರ್ಡ್ 74ರ ಪಾಲಿಕೆ ಸದಸ್ಯೆ ಗಂಗಮ್ಮ ರಾಜಣ್ಣ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಲು ಜೆಡಿಎಸ್ ವರಿಷ್ಠರು ಸೂಚನೆ ನೀಡಿದ್ದಾರೆ. ಇದಕ್ಕೂ ಮುನ್ನ ವಾರ್ಡ್ 32 ಕಾವಲಭೈರಸಂದ್ರ ಪಾಲಿಕೆ ಸದಸ್ಯೆ ನೇತ್ರಾ ನಾರಾಯಣ ಅಥವಾ ಇಮ್ರಾನ್ ಪಾಷಾ ಅವರಿಗೆ ಉಪಮೇಯರ್ ಸ್ಥಾನಕ್ಕೆ ಸ್ಪರ್ಧೆ ನಡೆಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿತ್ತು.

  • ಬಿಜೆಪಿ ತೆಕ್ಕೆಗೆ ಬಿಬಿಎಂಪಿ ಮೇಯರ್ ಪಟ್ಟ – ಕಾಂಗ್ರೆಸ್, ಜೆಡಿಎಸ್ ಬಲಾಬಲ ಹೇಗಿದೆ?

    ಬಿಜೆಪಿ ತೆಕ್ಕೆಗೆ ಬಿಬಿಎಂಪಿ ಮೇಯರ್ ಪಟ್ಟ – ಕಾಂಗ್ರೆಸ್, ಜೆಡಿಎಸ್ ಬಲಾಬಲ ಹೇಗಿದೆ?

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಲೆಕ್ಷನ್ ಮುಂದೂಡಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದ ಪ್ಲ್ಯಾನ್ ವಿಫಲವಾಗಿದೆ. ಆದರೂ ಈ ಬಾರಿ ಮೇಯರ್ ಪಟ್ಟ ಬಿಜೆಪಿಗೆ ಲಭಿಸುವುದು ಬಹುತೇಕ ಖಚಿತವಾಗಿದೆ.

    ಮೇಯರ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರೊಂದಿಗಿನ ವೈಮನಸ್ಸಿನ ಕಾರಣದಿಂದ ಚುನಾವಣೆ ಮುಂದೂಡಲು ಸಿಎಂ ಸಿದ್ಧತೆ ನಡೆಸಿದ್ದರು. ಇಂದು ಬೆಳಗ್ಗೆ ಇನ್ನೊಂದು ತಿಂಗಳು ಎಲೆಕ್ಷನ್ ಮುಂದೂಡಿಕೆಯಾಗಿದೆ ಎಂದೂ ಹೇಳಿಕೆ ನೀಡಿದ್ದರು. ಆದರೆ ಮಧ್ಯಾಹ್ನ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿ ಬೆಂಗಳೂರು ಪ್ರಾದೇಶಿಕ ಆಯುಕ್ತ ಹರ್ಷಾಗುಪ್ತ, ಮಂಗಳವಾರವೇ ಎಲೆಕ್ಷನ್ ನಡೆಸುವುದಾಗಿ ಘೋಷಿಸಿದ್ದಾರೆ.

    ಬಿಬಿಎಂಪಿ ಮೇಯರ್ ಚುನಾವಣೆಗೆ ಯಾರಿಗೂ ಅಗತ್ಯ ಸಂಖ್ಯಾಬಲವಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿದ್ದು, ಕಾಂಗ್ರೆಸ್‍ಗೆ ಮೇಯರ್ ಸ್ಥಾನ ಬಿಟ್ಟು ಕೊಡಲು ಜೆಡಿಎಸ್ ಒಪ್ಪಿದೆ. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಸಂಖ್ಯಾ ಬಲವೆರಡೂ ಸೇರಿದರೆ ಸಂಖ್ಯೆ 125 ಆಗುತ್ತದೆ. ಪರಿಣಾಮ 7 ಮಂದಿ ಪಕ್ಷೇತರ ಸದಸ್ಯರು ಕೈ ಹಿಡಿದರಷ್ಟೇ ಗೆಲುವು ಸುಲಭವಾಗಲಿದೆ.

    ಪಾಲಿಕೆಯ 198 ಮಂದಿಯ ಜೊತೆಗೆ ಶಾಸಕರು, ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು ಸೇರಿದಂತೆ ಒಟ್ಟು 257 ಮಂದಿ ಮತದಾನ ಮಾಡಲಿದ್ದಾರೆ. ಮೇಯರ್ ಸ್ಥಾನ ಪಡೆಯಲು 129 ಮತಗಳ ಅಗತ್ಯವಿದೆ.

    ಕಾಂಗ್ರೆಸ್, ಜೆಡಿಎಸ್ ಬಲಾಬಲ:
    76 ಸದಸ್ಯರಿದ್ದು, 1 ಸಂಸದ, 11 ಎಂಎಲ್‍ಎ, 6 ಎಂಎಲ್‍ಸಿ, 6 ರಾಜ್ಯ ಸಭೆ ಸದಸ್ಯರು ಸೇರಿದರೆ 104 ಮತಗಳು ಕಾಂಗ್ರೆಸ್ ಪರ ಇದೆ. ಇತ್ತ ಜೆಡಿಎಸ್ 14 ಸದಸ್ಯರು ಹಾಗೂ 1 ಎಂಎಲ್‍ಎ, 5 ಎಂಎಲ್‍ಸಿ, 1 ರಾಜ್ಯಸಭಾ ಸದಸ್ಯರು ಸೇರಿದರೆ 21 ಮತಗಳನ್ನು ಹೊಂದಿದೆ. ಸದ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿರುವುದರಿಂದ ಒಟ್ಟು 125 ಮತಗಳು ಲಭ್ಯವಾಗಲಿದೆ.

    ಬಿಜೆಪಿ ಎಷ್ಟಿದೆ?
    101 ಸದಸ್ಯರು ಸೇರಿದಂತೆ 4 ಎಂಪಿ, 11 ಎಂಎಲ್‍ಎ, 7 ಎಂಎಲ್‍ಸಿ, 2 ರಾಜ್ಯ ಸಭಾ ಸದಸ್ಯರು ಸೇರಿ ಒಟ್ಟು 125 ಮತಗಳು ಬಿಜೆಪಿ ಬಳಿಯಿದೆ. ಪರಿಣಾಮ ಉಳಿದಿರುವ 7 ಪಕ್ಷೇತರ ಸದಸ್ಯರ ಬೆಂಬಲ ನಿರ್ಣಯಕವಾಗಿದ್ದು, ಇದರಲ್ಲಿ ಈಗಾಗಲೇ ಐವರು ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡಿರುವುದರಿಂದ ಈ ಬಾರಿ ಬಿಜೆಪಿಗೆ ಮೇಯರ್ ಪಟ್ಟ ಲಭಿಸುವುದು ಬಹುತೇಕ ಖಚಿತವಾಗಿದೆ.

    ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೂ ಅಂತಿಮ ಕ್ಷಣದಲ್ಲಿ ಬಿಜೆಪಿ ನಾಯಕರು ಮೈಮರೆತ ಕಾರಣ ಮೇಯರ್ ಪಟ್ಟ ಕೈ ತಪ್ಪಿತ್ತು. ಹೀಗಾಗಿ, ಕೇಂದ್ರ, ರಾಜ್ಯದಲ್ಲಿ ಅಧಿಕಾರದ ಜೊತೆಗೆ ಬೆಂಗಳೂರಲ್ಲಿ ಅಧಿಕಾರ ಪಡೆಯಲು ವಿಧಾನಸಭೆಯಂತೆ ಬಿಬಿಎಂಪಿಯಲ್ಲೂ ಗೆಲುವು ಪಡೆಯಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಐವರು ಅನರ್ಹ ಶಾಸಕರ ಬೆಂಬಲಿಗ ಪಾಲಿಕೆ ಸದಸ್ಯರು ಗೈರಾಗುವಂತೆ ನೋಡಿಕೊಳ್ಳುವ ಮೂಲಕ 7 ಪಕ್ಷೇತರ ಕಾರ್ಪೊರೇಟರ್‍ಗಳನ್ನು ಸೆಳೆದು ಅಧಿಕಾರ ಪಡೆಯುವ ಸಿದ್ಧತೆಯಲ್ಲಿ ಬಿಜೆಪಿ ನಾಯಕರಿದ್ದಾರೆ.

  • ನಾಳೆಯೇ ಬಿಬಿಎಂಪಿ ಮೇಯರ್ ಚುನಾವಣೆ – ಚುನಾವಣಾಧಿಕಾರಿ ಹರ್ಷಗುಪ್ತ

    ನಾಳೆಯೇ ಬಿಬಿಎಂಪಿ ಮೇಯರ್ ಚುನಾವಣೆ – ಚುನಾವಣಾಧಿಕಾರಿ ಹರ್ಷಗುಪ್ತ

    ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆ ನಾಳೆ ನಡೆಯುತ್ತಾ ಇಲ್ಲವೋ ಎನ್ನುವ ಗೊಂದಲದ ಮಧ್ಯೆ ನಾಳೆಯೇ ನಡೆಯಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಈಗಾಗಲೇ ನಿಗದಿಪಡಿಸಿದಂತೆ ಅಕ್ಟೋಬರ್ ಒಂದರಂದು ಮೇಯರ್-ಉಪಮೇಯರ್ ಹಾಗೂ ನಾಲ್ಕು ಸ್ಥಾಯಿಸಮಿತಿಗಳ ಚುನಾವಣೆ ನಡೆಯುತ್ತದೆ ಎಂದು ಪ್ರಾದೇಶಿಕ ಚುನಾವಣಾ ಆಯುಕ್ತರಾದ ಹರ್ಷಗುಪ್ತ ತಿಳಿಸಿದ್ದಾರೆ.

    ನಗರಾಭಿವೃದ್ಧಿ ಇಲಾಖೆ ಪತ್ರದಲ್ಲಿ ತಿಳಿಸಿರುವಂತೆ, ಕೆಎಮ್‍ಸಿ ಕಾಯ್ದೆ 10(1), 11(2), (ಬಿ) ಹಾಗೂ ಉಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ಕಾನೂನಿನ ಪ್ರಕಾರವೇ ನಾಳೆ ಚುನಾವಣೆ ನಡೆಯಲಿದೆ. ಚುನಾವಣೆ ಮುಂದೂಡುವ ಅಗತ್ಯವಿಲ್ಲ. ಮೇಯರ್ ಅವಧಿ ಸೆಪ್ಟೆಂಬರ್ 27ಕ್ಕೆ ಮುಗಿದಿರುವುದರಿಂದ ಚುನಾವಣೆ ನಡೆಸುವುದು ಚುನಾವಣಾಧಿಕಾರಿಯಾಗಿ ನನ್ನ ಕರ್ತವ್ಯ ಎಂದು ಹರ್ಷಗುಪ್ತ ತಿಳಿಸಿದರು.

    ಒಟ್ಟಿನಲ್ಲಿ ಮೇಯರ್, ಉಪಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಮಾರುಕಟ್ಟೆ, ಲೆಕ್ಕಪತ್ರ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಚುನಾವಣೆ ನಡೆಯಲಿದೆ. ಬೆಳಗ್ಗೆ 8:30 ನಾಮಪತ್ರ ಸಲ್ಲಿಕೆಗೆ ನಡೆಯಲಿದ್ದು, 11:30 ಕ್ಕೆ ಚುನಾವಣೆ ನಡೆಯಲಿದೆ. ಆದರೆ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾದರೂ, ಮೇಯರ್ ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಮೇಯರ್ ಆಯ್ಕೆ ಬಿಜೆಪಿ ಪಕ್ಷದೊಳಗೇ ಅಸಮಾಧಾನ ಉಂಟುಮಾಡಿದೆ.

    ಇಂದು ಮಧ್ಯಾಹ್ನ ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ವಿಜಯ್‍ಕುಮಾರ್ ಅವರು ಪ್ರಾದೇಶಿಕ ಆಯುಕ್ತರಿಗೆ ಚುನಾವಣೆ ಮುಂದೂಡುವಂತೆ ಸೂಚಿಸಿದ್ದರು. ಬಿಬಿಎಂಪಿ ಮೇಯರ್/ ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಸುವ ಸಂದರ್ಭದಲ್ಲೇ ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸುವ ಬಗ್ಗೆ ಹೈಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸಿದೆ. ಹೀಗಾಗಿ ಮೇಯರ್ ಉಪಮೇಯರ್ ಚುನಾವಣೆಯಂದ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸಬೇಕೆಂದು ವಿಜಯ್ ಕುಮಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದರು.

    ಈ ಸಂಬಂಧ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿ, ಬಿಬಿಎಂಪಿ ಚುನಾವಣೆ ಮಾಡಲು ಸಿಎಂ ಆದೇಶ ಮಾಡಿದ್ದರು. ಆದರೆ ಸಮಿತಿಗಳ ಚುನಾವಣೆ ಕೂಡ ಮಾಡಬೇಕು ಎಂದು ನ್ಯಾಯಾಲಯದ ಆದೇಶ ಇದೆ. ಮತ್ತೊಂದು ಕಡೆ ಕೆಲವು ಸಮಿತಿ ಚುನಾವಣೆ ಬೇಡ ಎಂದು ಮತ್ತೊಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಚುನಾವಣೆ ಮುಂದೂಡಲಾಗಿದೆ ಎಂದು ತಿಳಿಸಿದ್ದರು. ಆದರೆ ಸಂಜೆಯ ವೇಳೆ ಚುನಾವಣೆ ನಡೆಸಲಾಗುವುದು ಎಂದು ಹರ್ಷಗುಪ್ತ ತಿಳಿಸಿದ್ದಾರೆ.

  • ಬೆಂಗ್ಳೂರಲ್ಲಿ ಬೃಹತ್ ಆಪರೇಷನ್ ಕಮಲ – ನಾಲ್ವರು ಕಾರ್ಪೋರೇಟರ್‌ಗಳ ಫೋನ್ ಸ್ವಿಚ್‍ಆಫ್

    ಬೆಂಗ್ಳೂರಲ್ಲಿ ಬೃಹತ್ ಆಪರೇಷನ್ ಕಮಲ – ನಾಲ್ವರು ಕಾರ್ಪೋರೇಟರ್‌ಗಳ ಫೋನ್ ಸ್ವಿಚ್‍ಆಫ್

    ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯಿಂದ ಇದೀಗ ಬಿಬಿಎಂಪಿಯಲ್ಲೂ ಅಧಿಕಾರಕ್ಕೇರಲು ಮೇಯರ್ ಚುನಾವಣೆಗೆ ವಾರಕ್ಕೂ ಮುನ್ನವೇ ಪಕ್ಷೇತರ ಸದಸ್ಯರಿಗೆ ಗಾಳ ಹಾಕಲಾಗಿದೆ.

    ಈ ಬಾರಿಯ ಮೇಯರ್ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರೇ ಗೆಲುವಿಗೆ ನಿರ್ಣಾಯಕರಾಗಿರುವುದರಿಂದ ಮೂವರು ಪಕ್ಷೇತರ ಸದಸ್ಯರನ್ನು ನಗರದ ಬಿಜೆಪಿ ಶಾಸಕರೊಬ್ಬರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

    ಪಕ್ಷೇತರ ಸದಸ್ಯರಾದ ಲಕ್ಷ್ಮಿನಾರಾಯಣ್ (ಗುಂಡಣ್ಣ), ರಮೇಶ್,ಗಾಯತ್ರಿ ಹಾಗೂ ಆನಂದ್ ಅವರಿಗೆ ಬೊಮ್ಮನಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಗಾಳ ಹಾಕಿ ಗೋವಾಗೆ ಕರೆದೊಯ್ದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಪಕ್ಷೇತರ ಸದಸ್ಯರ ಮೊಬೈಲ್ ಫೋನ್‍ಗಳು ಸಂಪರ್ಕ ದೊರೆಯದಿರುವುದು ಇದನ್ನು ಪುಷ್ಠಿಕರಿಸಿದೆ.

    ಬಿಬಿಎಂಪಿಯಲ್ಲಿ ಕಾಂಗ್ರೆಸ್ ನಾಲ್ಕು ಬಾರಿ ಅಧಿಕಾರ ಹಿಡಿಯಲು ಅನರ್ಹ ಶಾಸಕ ಮುನಿರತ್ನವರ ಶ್ರಮವಿತ್ತು. ಡಿಕೆ ಸೋದರರು ಮುನಿರತ್ನವರ ಮೂಲಕ ಮೇಯರ್ ಸ್ಥಾನ ಕಾಂಗ್ರೆಸ್ ತೆಕ್ಕಗೆ ತೆಗೆದುಕೊಳ್ಳಲು ಯಶಸ್ವಿಯಾಗುತ್ತಿದ್ದರು. ಆದರೀಗ ಡಿಕೆ ಸೋದರರು ತಮ್ಮದೇ ಆದ ಸಮಸ್ಯೆಯಲ್ಲಿ ಸಿಲುಕಿದ್ದು, ದೆಹಲಿಯಲ್ಲಿದ್ದಾರೆ. ಇತ್ತ ಶಾಸಕ ಮುನಿರತ್ನ ಕಾಂಗ್ರೆಸ್ ನಿಂದ ಅನರ್ಹಗೊಂಡಿದ್ದಾರೆ. ಉಳಿದಿರುವ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಮೈತ್ರಿ ಸರ್ಕಾರದಲ್ಲಿ ಸ್ಥಾನ ನೀಡದಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಈಗಾಗಲೇ ತಮ್ಮ ಕ್ಷೇತ್ರದ ಗಂಗಾಬಿಕೆ ಅವರನ್ನು ಮೇಯರ್ ಮಾಡಲಾಗಿದೆ. ಹಾಗಾಗಿ ಸೋತು ಕೈ ಸುಟ್ಟುಕೊಳ್ಳುವದಕ್ಕಿಂತ ದೂರ ಉಳಿಯಲು ರಾಮಲಿಂಗಾ ರೆಡ್ಡಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿತ್ತು.

    ಇತ್ತ ಕಳೆದ ನಾಲ್ಕು ಬಾರಿ ಅಧಿಕಾರ ಅನುಭವಿಸಿರುವ ಜೆಡಿಎಸ್ ದೂರ ಉಳಿದುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಜೆಡಿಎಸ್ ಶಾಸಕ ಗೋಪಾಲಯ್ಯ ಅನರ್ಹಗೊಂಡಿದ್ದಾರೆ. ಅನರ್ಹ ಶಾಸಕ ಪತ್ನಿ ಹೇಮಲತಾರನ್ನ ಮೇಯರ್ ಮಾಡಿಸಲು ಪೈಪೋಟಿ ನಡೆಸಿದ್ದಾರೆ ಎನ್ನಲಾಗಿತ್ತು.

  • ಸಭೆಯಲ್ಲಿ ಕೌನ್ಸಿಲರ್ ನೋಡಿ ಕಣ್ಣು ಮಿಟುಕಿಸಿದ ಮೇಯರ್ ಪುತ್ರ

    ಸಭೆಯಲ್ಲಿ ಕೌನ್ಸಿಲರ್ ನೋಡಿ ಕಣ್ಣು ಮಿಟುಕಿಸಿದ ಮೇಯರ್ ಪುತ್ರ

    -ನ್ಯಾಯಕ್ಕಾಗಿ ಸಿಎಂ ಮೊರೆಹೋದ ಕೌನ್ಸಿಲರ್

    ಪಾಟ್ನಾ: ಬಿಹಾರದ ಪಾಟ್ನಾದ ವಾರ್ಡ್ ಕೌನ್ಸಿಲರ್ ಗೆ ಮೇಯರ್ ಪುತ್ರನೋರ್ವ ಹೊಡೆಯುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಸಂಬಂಧ ಕೌನ್ಸಿಲರ್ ನ್ಯಾಯಕ್ಕಾಗಿ ಸಿಎಂ ಮೊರೆ ಹೋಗಿದ್ದಾರೆ.

    ಪಾಟ್ನಾ ನಗರ ನಿಗಮ ಮಂಡಳಿಯ ಸಭೆಯಲ್ಲಿ ಮೇಯರ್ ಸೀತಾ ಸಾಹು ಪುತ್ರ ಶಿಶಿರ್ ನನ್ನನ್ನು ನೋಡಿ ಕಣ್ಣು ಹೊಡೆಯುತ್ತಿದ್ದನು. ಈ ರೀತಿಯ ವರ್ತನೆ ತಪ್ಪು ಎಂದು ತಿಳಿ ಹೇಳಿದ್ರೂ ಆತನ ಯಾವ ಬದಲಾವಣೆಯೂ ಆಗಿಲ್ಲ ಎಂದು ವಾರ್ಡ್ ಸದಸ್ಯೆ ಪಿಂಕಿ ದೇವಿ ಆರೋಪಿಸಿದ್ದಾರೆ.

    ನಗರ ನಿಗಮ ಮಂಡಳಿ ಸಭೆಯಲ್ಲಿ ಮೇಯರ್ ಪುತ್ರ ಶಿಶಿರ್ ನನ್ನನ್ನು ನೋಡಿ ಮೊದಲಿಗೆ ಮುಗುಳ್ನಗೆ ಬೀರಿ ಕಣ್ಣು ಹೊಡೆದನು. ಹೀಗೆ ಸತತವಾಗಿ ಕಣ್ಣು ಮಿಟುಕಿಸತೊಡಗಿದನು. ನಾನು ಆತನಿಗೆ ಎಚ್ಚರಿಕೆ ನೀಡಿದ್ರೂ ಆತ ಬದಲಾಗಿಲ್ಲ. ಹಾಗಾಗಿ ಮೇಯರ್ ಅವರಿಗೆ ದೂರು ನೀಡಿದೆ. ನಾನು ದೂರು ನೀಡಿದರೂ ಆತನ ಮುಖದಲ್ಲಿ ಯಾವುದೇ ಭಯ ಕಾಣಿಸಿಲಿಲ್ಲ ಎಂದಿದ್ದಾರೆ.

    ದೂರು ಸಲ್ಲಿಸಿದ ಬಳಿಕ ಶಿಶಿರ್ ನಿಮಗೆ ತೋಚಿದ ಹಾಗೆ ನನಗೆ ಯಾವುದೇ ಭಯವಿಲ್ಲ ಎಂದು ಹೇಳಿದ. ಇತ್ತ ಮೇಯರ್ ಸಹ ನನ್ನ ಮೇಲೆಯೇ ಗಂಭೀರ ಆರೋಪ ಮಾಡಲಾರಂಭಿಸಿದರು. ಹಾಗಾಗಿ ಈ ಪ್ರಕರಣದಲ್ಲಿ ಸಿಎಂ ನಿತೀಶ್ ಕುಮಾರ್ ಮಧ್ಯಸ್ಥಿಕೆ ವಹಿಸಬೇಕೆಂದು ಪಿಂಕಿ ದೇವಿ ಮನವಿ ಮಾಡಿಕೊಂಡಿದ್ದಾರೆ.

  • ಬಿಜೆಪಿ ಮುಂದೆ ದುಬಾರಿ ಬೇಡಿಕೆ ಇಟ್ಟ ಜೆಡಿಎಸ್ ಅನರ್ಹ ಶಾಸಕ ಗೋಪಾಲಯ್ಯ!

    ಬಿಜೆಪಿ ಮುಂದೆ ದುಬಾರಿ ಬೇಡಿಕೆ ಇಟ್ಟ ಜೆಡಿಎಸ್ ಅನರ್ಹ ಶಾಸಕ ಗೋಪಾಲಯ್ಯ!

    -ಬಿಜೆಪಿಗೆ ಹೊಸ ತಲೆನೋವು ಆರಂಭ

    ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಗೋಪಾಲಯ್ಯ ವಿಪ್ ಉಲ್ಲಂಘಿಸಿ ಮತ ಹಾಕದೇ ಉಳಿದಿದಕ್ಕೆ ಬಿಜೆಪಿ ಬಳಿ ದುಬಾರಿ ಬೇಡಿಕೆಯೊಂದನ್ನು ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ನನ್ನ ಪತ್ನಿಯನ್ನ ಮುಂದಿನ ಮೇಯರ್ ಮಾಡಿ ಎಂದು ಬಾರಿ ಬೇಡಿಕೆಯನ್ನ ಗೋಪಾಲಯ್ಯ ಇಟ್ಟಿದ್ದಾರೆ. ಸದ್ಯ ಬಿಬಿಎಂಪಿಯಲ್ಲಿ ಹೇಮಲತಾ ಗೋಪಾಲಯ್ಯರಿಗೆ ಮೇಯರ್ ಪಟ್ಟ ಎಂಬ ವಿಚಾರ ಬಾರಿ ಸದ್ದು ಮಾಡುತ್ತಿದೆ. ಅನರ್ಹ ಶಾಸಕ ಗೋಪಾಲಯ್ಯ ಪತ್ನಿಗಾಗಿ ಕಾದಾಟ ಶುರು ಮಾಡಿದ್ದಾರೆ. ಬಿಜೆಪಿ ಲೀಡರ್‍ಗಳಿಗೆ ಈ ಮಹಾ ಬೇಡಿಕೆ ಕೇಳಿ ತಲೆಬಿಸಿಯಾಗಿದೆ ಎಂಬ ಮಾಹಿತಿಯೂ ಇದೆ.

    ಜೆಡಿಎಸ್ ಕಾರ್ಪೋರೇಟರ್ ಹೇಮಲತಾ ಗೋಪಾಲಯ್ಯ ಮೇಯರ್ ಆಗ್ತಾರೆ ಎಂಬ ವಿಚಾರ ಬಿಜೆಪಿಗೆ ತಲೆಕೆಡಿಸಿದೆ. ಇತ್ತ ಬಿಜೆಪಿಗೆ ಸದ್ಯ ಪಾಲಿಕೆಯಲ್ಲಿ ಹೆಚ್ಚು ಸಂಖ್ಯಾಬಲವಿದ್ರು ಅಧಿಕಾರ ಸಿಗದೇ ದೂರ ಉಳಿಯಬೇಕಾಗುತ್ತದೆ. ಇತ್ತ ಬಿಜೆಪಿ ಅವಧಿಯಲ್ಲಿ ಹೇಮಲತಾರಿಗೆ ಮೇಯರ್ ಪಟ್ಟ ಎಂಬ ಗೋಪಾಲಯ್ಯರ ದುಬಾರಿ ಡಿಮ್ಯಾಂಡ್‍ಗೆ ಬಿಜೆಪಿ ಕಾರ್ಪೋರೇಟರ್ಸ್, ಶಾಸಕರು ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.

    ಈಗಾಗಲೇ ಬಿಜೆಪಿ ನಾಯಕರ ಜೊತೆ ಮಾತನಾಡಿರುವ ಗೋಪಾಲಯ್ಯ, ನನಗೆ ಸಚಿವ ಸ್ಥಾನ ಬೇಡ. ನನ್ನ ಪತ್ನಿ ಮೇಯರ್ ಮಾಡಿ ಎಂಬ ಡಿಮ್ಯಾಂಡ್ ಇಟ್ಟಿದ್ದಾರೆ. ಗೋಪಾಲಯ್ಯ ರಾಜೀನಾಮೆ ನೀಡಿ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡಿರುವ ಪ್ರತಿಯಾಗಿ ದುಬಾರಿ ಉಡುಗೊರೆಯನ್ನೇ ನಿರೀಕ್ಷೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸದ್ಯ 4 ವರ್ಷದಲ್ಲಿ ಗೋಪಾಲಯ್ಯ ಪತ್ನಿಗೆ ಒಲಿದಿರೊ ಅಧಿಕಾರಗಳು ಹೀಗಿದೆ. ಉಪಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೀಗೆ ಅನುದಾನ ಎಲ್ಲವೂ ಹೇಮಲತಾ ಗೋಪಾಲಯ್ಯರಿಗೆ ಸಿಕ್ಕಿದೆ. ಹಲವು ಅಧಿಕಾರ ಅನುಭವಿಸಿರೊ ಹೇಮಲತಾ ಗೋಪಾಲಯ್ಯ, ಮೇಯರ್ ಗದ್ದುಗೆ ಏರಲು ನಿಂತಿದ್ದು ಬಿಜೆಪಿ ಕಾರ್ಪೋರೇಟರ್ ಗಳನ್ನು ತಬ್ಬಿಬ್ಬು ಮಾಡಿದೆ. ಸಂಖ್ಯಾಬಲವಿದ್ರು, ಅಧಿಕಾರ ಮಾತ್ರ ಇಲ್ಲ. ಬಿಜೆಪಿ ಕಾರ್ಪೋರೇಟರ್ಸ್ ಗೆ ಅನರ್ಹ ಶಾಸಕ ಗೋಪಾಲಯ್ಯ ಡಿಮ್ಯಾಂಡ್‍ದೇ ಚಿಂತೆಯಾಗಿದೆ. ಇತ್ತ ಸೆಪ್ಟೆಂಬರ್ 28ಕ್ಕೆ ಗಂಗಾಬಿಕೆ ಅವರ ಮೇಯರ್ ಅವಧಿ ಮುಕ್ತಾಯ ಆಗಲಿದೆ.

  • ಅಧಿಕಾರಿಯನ್ನು ಭ್ರಷ್ಟ ಎಂದ ಬಿಜೆಪಿ ಮೇಯರ್ ವಿರುದ್ಧ ಕೇಸ್

    ಅಧಿಕಾರಿಯನ್ನು ಭ್ರಷ್ಟ ಎಂದ ಬಿಜೆಪಿ ಮೇಯರ್ ವಿರುದ್ಧ ಕೇಸ್

    ಲಕ್ನೋ: ಅಧಿಕಾರಿಯನ್ನು ಭ್ರಷ್ಟ ಎಂದು ಕರೆದಿದ್ದಕ್ಕೆ ಉತ್ತರ ಪ್ರದೇಶದ ಬರೇಲಿಯ ಮೇಯರ್ ವಿರುದ್ಧ ಕೇಸ್ ದಾಖಲಾಗಿದೆ.

    ಬರೇಲಿಯ ಬಿಜೆಪಿ ಮೇಯರ್ ಉಮೇಶ್ ಗೌತಮ್ ಅವರು, ನಗರ ಆರೋಗ್ಯ ಅಧಿಕಾರಿ ಸಂಜೀವ್ ಪ್ರಾದ್ ಅವರಿಗೆ ಬಾಯಿಗೆ ಬಂದಂತೆ ಬೈದು, ಭ್ರಷ್ಟ ಎಂದು ಕರೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಅಧಿಕಾರಿ ಸಂಜೀವ್ ಪ್ರಾದ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮೇಯರ್ ಸೇರಿದಂತೆ 50 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

    ಬರೇಲಿಯ ಆಯುಕ್ತ ಕಚೇರಿಗೆ ಮೇಯರ್ ಉಮೇಶ್ ಗೌತಮ್ ಸೋಮವಾರ ಆಗಮಿಸಿದ್ದರು. ಈ ವೇಳೆ ಆಯುಕ್ತರ ಎದುರೇ, ನೀವು ಎಷ್ಟು ಹಣವನ್ನು ಪಡದಿದ್ದೀರಾ? ಏನು ನೋಡುತ್ತಿದ್ದೀರಾ ಎಂದು ಸಂಜೀವ್ ಪ್ರಾದ್ ಅವರಿಗೆ ಕೇಳಿದರು. ಆಗ ಆಯುಕ್ತರು ಮಧ್ಯಪ್ರವೇಶಿಸಿ ಉತ್ತರ ನೀಡುತ್ತಿದ್ದರೂ ಆಲಿಸದ ಮೇಯರ್, ಸಂಜೀವ್ ಪ್ರಾದ್ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ನಾವು ನೀವು ಕೂಡಿ ಇಂತಹ ಅಧಿಕಾರಿಗೆ ಭ್ರಷ್ಟಾಚಾರ ನಡೆಸಲು ದಾರಿ ಮಾಡಿಕೊಡಬೇಕೆ ಎಂದು ಆಯುಕ್ತರನ್ನು ಪ್ರಶ್ನಿಸಿದರು.

    ಇಂತಹ ಅಧಿಕಾರಿಗಳು ಸೇರಿ ಬರೇಲಿಯನ್ನು ಹಾಳು ಮಾಡುತ್ತಿದ್ದಾರೆ. ಏನು ಮಾಡಬೇಕು, ಏನು ಮಾಡಬಾರದು ಎನ್ನುವ ನಿರ್ಧಾರ ಕೈಗೊಳ್ಳಲು ಜನರು ನನಗೆ ಮತ ಹಾಕಿ ಕಳುಹಿಸಿದ್ದಾರೆ ಎಂದು ಹೇಳಿ ಸಂಜೀವ್ ಅವರ ಕೈ ಹಿಡಿದು ಎಳೆದಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೇಯರ್ ವಿರುದ್ಧ ಟೀಕೆ ವ್ಯಕ್ತವಾಗಿದೆ.

    ಈ ಘಟನೆಯ ಕುರಿತು ಅಧಿಕಾರು ಸಂಜೀವ್ ಪ್ರಾದ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಹಿರಿಯ ಮುಖಂಡ ಕೈಲಾಶ್ ವಿಜಯ್‍ವರ್ಗೀಯ ಅವರ ಪುತ್ರ, ಶಾಸಕ ಆಕಾಶ್ ವಿಜಯ್‍ವರ್ಗಿಯ ಅವರು ಅಧಿಕಾರಿಯ ಮೇಲೆ ಬ್ಯಾಟ್‍ನಿಂದ ಹಲ್ಲೆ ಮಾಡಿದ್ದರು.

  • ಟೀ ಮಾರುತ್ತಿದ್ದ ಅವತಾರ್ ಸಿಂಗ್ ಉತ್ತರ ದೆಹಲಿಯ ಮೇಯರ್

    ಟೀ ಮಾರುತ್ತಿದ್ದ ಅವತಾರ್ ಸಿಂಗ್ ಉತ್ತರ ದೆಹಲಿಯ ಮೇಯರ್

    ನವದೆಹಲಿ: ಜೀವನ ನಿರ್ವಹಣೆಗಾಗಿ ಟೀ ಮಾರುತ್ತಿದ್ದ ಬಿಜೆಪಿಯ ಕಾರ್ಪೋರೇಟರ್ ಅವತಾರ್ ಸಿಂಗ್ ಅವಿರೋಧವಾಗಿ ಉತ್ತರ ದೆಹಲಿಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

    ಉತ್ತರ ದೆಹಲಿ ಮೇಯರ್ ಸ್ಥಾನಕ್ಕೇರಿದ ಮೊದಲ ದಲಿತ ಸಿಖ್ ನಾಯಕ ಎಂಬ ಹೆಗ್ಗಳಿಕೆಗೆ ಅವತಾರ್ ಸಿಂಗ್ ಪಾತ್ರರಾಗಿದ್ದಾರೆ.

    ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಅವರು ಅವತಾರ್ ಸಿಂಗ್ ಹೆಸರನ್ನು ನಾಮನಿರ್ದೆಶನ ಮಾಡಿದ್ದರು. ಸೋಮವಾರ ನಡೆದ ಚುನಾವಣೆಯಲ್ಲಿ ಸಿಂಗ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ನಗರ ನಿಗಮದ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

    ಈ ವಿಚಾರವಾಗಿ ದೆಹಲಿ ಬಿಜೆಪಿಯ ಹಿರಿಯ ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿ, ಅವತಾರ್ ಸಿಂಗ್ ಅವರು ಬಿಜೆಪಿಯ ಅತ್ಯಂತ ಶ್ರಮಜೀವಿ ಕಾರ್ಯಕರ್ತರು. ಚಹಾ ಮಾರುತ್ತಿದ್ದ ಸಿಂಗ್ ಅವರು ಕಠಿಣ ಪರಿಶ್ರಮದಿಂದ ಮೇಯರ್ ಸ್ಥಾನಕ್ಕೇರಿದ್ದಾರೆ ಎಂದು ಹೇಳಿ ಶ್ಲಾಘಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಅವತಾರ್ ಸಿಂಗ್ ಅವರಿಗೆ ಶುಭಕೋರಿದ್ದಾರೆ. ಅಷ್ಟೇ ಅಲ್ಲದೆ ದಕ್ಷಿಣ ದೆಹಲಿ ಹಾಗೂ ಪೂರ್ವ ದೆಹಲಿಗೆ ಕ್ರಮವಾಗಿ ಮೇರಯ್ ಆಗಿ ಆಯ್ಕೆಯಾದ ಸುನಿತಾ ಕಾಂಗ್ರಾ ಮತ್ತು ಅಂಜು ಕಮಲ್‍ನಾಥ್ ಅವರಿಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

    ಮೇಯರ್ ಆಯ್ಕೆಯಾದವರು ಒಂದು ವರ್ಷ ಅಧಿಕಾರ ನಡೆಸಲಿದ್ದಾರೆ. ದೆಹಲಿ ಕಾರ್ಪೋರೇಷನ್‍ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದಿದೆ. ಮೂರನೇ ವರ್ಷ ಪರಿಶಿಷ್ಟ ಜಾತಿಯ ಅಭ್ಯರ್ಥಿಯನ್ನು ಮೇಯರ್ ಮಾಡಬೇಕಿತ್ತು. ಹೀಗಾಗಿ ಬಿಜೆಪಿಯು ಅವತಾರ್ ಸಿಂಗ್ ಸೇರಿದಂತೆ ಮೂವರು ಪರಿಶಿಷ್ಟ ಜಾತಿಯ ನಾಯಕರಿಗೆ ಮೇಯರ್ ಅವಕಾಶ ಕಲ್ಪಿಸಿದೆ.