Tag: ಮೇಯರ್

  • ಮಂಗ್ಳೂರು ಮೇಯರ್ ಚುನಾವಣೆಗೆ ಕೊನೆಗೂ ದಿನ ನಿಗದಿ

    ಮಂಗ್ಳೂರು ಮೇಯರ್ ಚುನಾವಣೆಗೆ ಕೊನೆಗೂ ದಿನ ನಿಗದಿ

    – ಪಾಲಿಕೆ ಚುನಾವಣೆಯಾದ 3 ತಿಂಗಳ ಬಳಿಕ ಮೇಯರ್ ಚುನಾವಣೆ

    ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಬಿಜೆಪಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬರೋಬ್ಬರಿ 3 ತಿಂಗಳು ಬೇಕಾಗಿದ್ದು, ಕೊನೆಗೂ ಮೇಯರ್ ಚುನಾವಣೆಗೆ ಸರ್ಕಾರ ದಿನ ನಿಗದಿ ಮಾಡಿದೆ.

    ಕಳೆದ ಮೂರು ತಿಂಗಳ ಹಿಂದೆ ಚುನಾವಣೆ ನಡೆದಿದ್ದ ಮಂಗಳೂರು ಮಹಾ ನಗರ ಪಾಲಿಕೆಯ ಒಟ್ಟು 60 ಸದಸ್ಯ ಬಲದಲ್ಲಿ ಬರೋಬ್ಬರಿ 44 ಸ್ಥಾನ ಪಡೆದ ಬಿಜೆಪಿ ಅಂದೇ ಪಾಲಿಕೆಯ ಗದ್ದುಗೆ ಹಿಡಿಯಬಹುದಿತ್ತು. ಆದರೆ ಮೀಸಲು ನಿಗದಿ ವಿಚಾರದಲ್ಲಿ ಬಿಜೆಪಿ ಒಳಗೆ ತಕರಾರು ಇದ್ದ ಹಿನ್ನೆಲೆಯಲ್ಲಿ ಮೀಸಲಾತಿ ಬದಲಾವಣೆಗೆ ಕೆಲವು ಸದಸ್ಯರು ಪ್ರಯತ್ನಿಸಿದ್ದರು. ಇದೀಗ ಈ ಹಿಂದೆ ನಿಗದಿಯಾದಂತೆ 21ನೇ ಅವಧಿಯ ಮೀಸಲು ಪ್ರಕಾರವೇ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿ ಆದೇಶ ಹೊರಡಿಸಿದೆ.

    ಫೆಬ್ರವರಿ 28ರಂದು ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಘೋಷಣೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ಇದ್ದರೂ ತಮ್ಮದೇ ಪಕ್ಷಕ್ಕೆ ಸಿಕ್ಕ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತವನ್ನು ಮೂರು ತಿಂಗಳ ಕಾಲ ಕಳೆದುಕೊಂಡಿರುವುದು ಮಾತ್ರ ವಿಪರ್ಯಾಸ.

  • ತುಮಕೂರು ಪಾಲಿಕೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ

    ತುಮಕೂರು ಪಾಲಿಕೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ

    – ಕೈ ಪಕ್ಷಕ್ಕೆ ಮೇಯರ್, ತೆನೆಗೆ ಉಪಮೇಯರ್ ಸ್ಥಾನ

    ತುಮಕೂರು: ಮಹಾನಗರ ಪಾಲಿಕೆಯ ಎರಡನೇ ಅವಧಿಯ ಮೇಯರ್ ಉಪಮೇಯರ್ ಚುನಾವಣೆ ನಡೆದಿದ್ದು, ಕಾಂಗ್ರೆಸ್ಸಿನ ಫರೀದಾ ಬೇಗಂ ಮೇಯರ್ ಆಗಿ ಹಾಗೂ ಜೆಡಿಎಸ್ಸಿನ ಶಶಿಕಲಾ ಉಪಮೇಯರ್ ಆಗಿ ಅವಿರೋಧ ಆಯ್ಕೆಯಾಗಿದ್ದಾರೆ.

    ಈ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುಂದುವರಿದಿದೆ. ಮೇಯರ್ ಸ್ಥಾನಕ್ಕೆ ಬಿಜೆಪಿಯ ವೀಣಾ ಮನೋಹರ ಗೌಡ ನಾಮಪತ್ರಸಲ್ಲಿದ್ದರು. ಆದರೆ ಕೊನೆ ಘಳಿಗೆಯಲ್ಲಿ ವಾಪಸ್ ಪಡೆದ ಪರಿಣಾಮ ಅವಿರೋಧ ಆಯ್ಕೆ ನಡೆದಿದೆ.

    ಒಟ್ಟು 35 ಸ್ಥಾನಗಳ ಬಲಾಬಲ ಹೊಂದಿರುವ ಪಾಲಿಕೆಯಲ್ಲಿ ಬಿಜೆಪಿ ಒಂದು ಪಕ್ಷೇತರ ಅಭ್ಯರ್ಥಿಯ ಬೆಂಬಲ ಹಾಗೂ ಶಾಸಕರು ಹಾಗೂ ಸಂಸದರ ಮತ ಸೇರಿ 15 ಸ್ಥಾನಗಳ ಬಲ ಇತ್ತು. ಕಾಂಗ್ರೆಸ್ 11, ಜೆಡಿಎಸ್ 12 ಮತ ಇತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸೇರಿ 23 ಮತಗಳಿತ್ತು. ಸೋಲಿನ ಮುನ್ಸೂಚನೆ ಇದ್ದ ಬಿಜೆಪಿ ಅಖಾಡದಿಂದ ಹಿಂದೆ ಸರಿದ ಪರಿಣಾಮ ಮುಖಭಂಗಕ್ಕೆ ಒಳಗಾಗಿದೆ.

  • ಅಕ್ರಮ ಮಾಡಿದರೆ ಎಚ್ಚರ: ಬಿಬಿಎಂಪಿ ಮೇಯರ್ ಗೌತಮ್

    ಅಕ್ರಮ ಮಾಡಿದರೆ ಎಚ್ಚರ: ಬಿಬಿಎಂಪಿ ಮೇಯರ್ ಗೌತಮ್

    ಬೆಂಗಳೂರು: ವಿವಿಧ ಕಾಮಗಾರಿಗಳನ್ನು ಬಿಬಿಎಂಪಿ ಮೇಯರ್ ಇಂದು ತಪಾಸಣೆ ನಡೆಸಿದರು.

    ನಗರದ ರಿಚ್ಮಂಡ್ ಸರ್ಕಲ್‍ನ ಜಂಕ್ಷನ್‍ನಲ್ಲಿ ಮೇಯರ್ ಒಂದು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು. ಫುಟ್‍ಪಾತ್, ರೋಡ್ ಕಟಿಂಗ್, ರಸ್ತೆ ಗುಂಡಿ ಸಮಸ್ಯೆ, ಡಾಂಬರೀಕರಣ ಅವ್ಯವಸ್ಥೆ, ರಸ್ತೆ ಹಾಳಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಆಗುತ್ತಿರುವ ಬಗ್ಗೆ ಪರಿಶೀಲನೆ ಮಾಡಲಾಯಿತು.

    ಮೇಯರ್ ತಪಾಸಣೆ ವೇಳೆ ಚರಂಡಿ ನೀರು ರಸ್ತೆಗೆ ಹರಿದು ಹೋಗುತ್ತಿತ್ತು. ಇದೇ ವೇಳೆ ಇಡೀ ರಿಚ್ಮಂಡ್ ಫ್ಲೈಓವರ್ ಓಎಫ್‍ಸಿ(ಆಪ್ಟಿಕಲ್ ಫೈಬರ್ ಕೇಬಲ್) ಎಲ್ಲೆಂದರಲ್ಲಿ ನೇತಾಡುತ್ತಿತ್ತು. ಈ ದೃಶ್ಯ ನೋಡಿದ ಮೇಯರ್ ಅಧಿಕಾರಿಗಳ ವಿರುದ್ಧ ಗರಂ ಆದರು.

    ಬಳಿಕ ಸ್ವತಃ ಮೇಯರ್ ಗೌತಮ್ ಅವರು ರಸ್ತೆ ಮಧ್ಯೆ ಭಾಗಕ್ಕೆ ತೂಗಾಡುತ್ತಿದ್ದ ಓಎಫ್‍ಸಿ ಕೇಬಲ್ ಕಟ್ ಮಾಡಿದರು. ಈ ವೇಳೆ ಸ್ಥಳೀಯ ಜಂಟಿ ಆಯುಕ್ತ ಪಲ್ಲವಿ ಹಾಗೂ ಬಹುತೇಕ ನಾಯಕರು ಹಾಜರಿದ್ದರು.

    ಇದೇ ವೇಳೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಇದು ಎಲ್ಲ ಅಕ್ರಮ ಓಎಫ್‍ಸಿ ಕೇಬಲ್‍ಗೆ ಎಚ್ಚರಿಕೆ. ಕೂಡಲೇ ರೋಡ್ ಚೆಂದವನ್ನು ಕೆಡಿಸುವ ಕೆಲಸ ನಿಲ್ಲಿಸಬೇಕಿದೆ. ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ ಭಾಗಕ್ಕೂ ನಾನು ಪರಿಶೀಲನೆ ಮಾಡುವೆ. ಆಗ ಈ ತಪ್ಪು ಕಂಡು ಬಂದರೆ ನೇರ ಕೇಬಲ್ ಕಟ್ ಮಾಡಲಾಗುತ್ತದೆ ಎಂದರು.

  • ಗಣರಾಜ್ಯೋತ್ಸವಕ್ಕೆ ಬಾರದ ಪಾಲಿಕೆ ಅಧಿಕಾರಿಗಳು-ಮೇಯರ್ ಫುಲ್ ಗರಂ

    ಗಣರಾಜ್ಯೋತ್ಸವಕ್ಕೆ ಬಾರದ ಪಾಲಿಕೆ ಅಧಿಕಾರಿಗಳು-ಮೇಯರ್ ಫುಲ್ ಗರಂ

    ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ನಿರಾಸಕ್ತಿ ಮತ್ತೆ ಎದ್ದು ಕಾಣುತ್ತಿದೆ. ಇಂದು ಪಾಲಿಕೆಯ ಆವರಣದಲ್ಲಿ ನಡೆದ ಗಣರಾಜೊತ್ಸವ ಆಚರಣೆಗೆ ಪಾಲಿಕೆಯ ಅಧಿಕಾರಿಗಳು ಭಾಗಿಯಾಗದೇ ನಿರಾಸಕ್ತಿ ತೋರಿಸಿದ್ದಾರೆ.

    ಪ್ರತಿ ವರ್ಷದ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಭಾಗಿಯಾಗದೇ ಪಾಲಿಕೆ ಅಧಿಕಾರಿಗಳು ನಾಪತ್ತೆಯಾಗುತ್ತಾರೆ. ಇದು ಸರಿಯಾದ ಕ್ರಮವಲ್ಲ. ಎಲ್ಲರೂ ಭಾಗಿಯಾಗಬೇಕು ಎಂದು ಮೇಯರ್, ಕಮಿಷನರ್ ಸೂಚಿಸಿದರೂ ಡೊಂಟ್ ಕೇರ್ ಎಂದಿದ್ದಾರೆ.

    ಇಂದು ಪಾಲಿಕೆಯ ಆವರಣದಲ್ಲಿ ನಡೆದ ಧ್ವಜಾರೋಹಣದಲ್ಲಿ ಬಹುತೇಕ ಪಾಲಿಕೆ ಅಧಿಕಾರಿಗಳು ಗೈರಾಗಿದ್ದರು. ಇದನ್ನ ಕಂಡ ಮೇಯರ್ ಗೌತಮ್ ಕುಮಾರ್ ಗೈರಾದ ಅಧಿಕಾರಿಗಳ ವಿರುದ್ಧ ಗರಂ ಆದರು. ಗೈರಾದ ಅಧಿಕಾರಿಗಳ ಒಂದು ದಿನದ ವೇತನ ಕಡಿತಗೊಳಿಸಲು ನಿರ್ಧಾರ ಮಾಡಿದ್ದಾರೆ. ಶನಿವಾರ ಮೇಯರ್ ಗೌತಮ್ ಕುಮಾರ್ ಎಲ್ಲಾ ಪಾಲಿಕೆ ಅಧಿಕಾರಿಗಳಿಗೆ ಗಣರಾಜ್ಯೋತ್ಸವ ಆಚರಣೆಗೆ ಬರುವಂತೆ ಸೂಚನೆಯನ್ನ ನೀಡಿದ್ದರು.

    ಮೇಯರ್ ಮಾತಿಗೆ ಸೊಪ್ಪು ಹಾಕದ ಪಾಲಿಕೆ ಅಧಿಕಾರಿಗಳು ಬೆಚ್ಚಗೆ ಮನೆಯಲ್ಲೇ ಮಲಗಿದ್ದಾರೆ. ಇನ್ನೂ ಈ ಬಗ್ಗೆ ಬಿಬಿಎಂಪಿ ಕಮಿಷನರ್ ಅನೀಲ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದು, ಇದೊಂದು ರೀತಿ ಪಾಲಿಕೆ ಅಧಿಕಾರಿಗಳ ನಿರಾಸಕ್ತಿ. ಎಲ್ಲರೂ ಹಾಜರಾಗುವಂತೆ ಸೂಚಿಸಿದ್ದರೂ ಹಾಜರಾಗಿಲ್ಲ. ಗೈರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

  • ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕೆಂದು ಕುಣಿದು ಕುಪ್ಪಳಿಸಿದ ಮೇಯರ್, ಕಮಿಷನರ್

    ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕೆಂದು ಕುಣಿದು ಕುಪ್ಪಳಿಸಿದ ಮೇಯರ್, ಕಮಿಷನರ್

    ಬೆಂಗಳೂರು: ಸಿಲಿಕಾನ್ ಸಿಟಿಯ ಮೇಯರ್ ಮತ್ತು ಕಮಿಷನರ್ ಕಬ್ಬನ್ ಪಾರ್ಕ್‍ನಲ್ಲಿ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.

    ಇಂದು ಸ್ವಚ್ಛ ಸರ್ವೇಕ್ಷಣಾ ಜಾಗೃತಿ ಅಭಿಯಾನ ಕಬ್ಬನ್ ಪಾರ್ಕ್ ನಲ್ಲಿ ನಡೆಯಿತು. ಬೆಂಗಳೂರು ನಗರಿಯ ಸ್ವಚ್ಛತೆಯ ಬಗ್ಗೆ ಸಾರ್ವಜನಿಕಕರಿಗೆ ಅರಿವು ಹಾಗೂ ಸ್ವಚ್ಛ ಅಭಿಯಾನದ ಆಪ್ ಬಿಡುಗಡೆ ಕಾರ್ಯಕ್ರಮವೂ ನಡೆಯಿತು.

    ಈ ವೇಳೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು ಹಾಕಿ ಕಬ್ಬನ್ ಪಾರ್ಕ್ ನಲ್ಲಿ ಮಸ್ತ್ ಮಸ್ತ್ ಸ್ಟೆಪ್ ಹಾಕಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಕಮಿಷನರ್ ಅನಿಲ್ ಕುಮಾರ್ ವಿಭಿನ್ನವಾಗಿ ಜಾಗೃತಿ ಅಭಿಯಾನ ನಡೆಸಿದರು. ಮೇಯರ್ ಕಮಿಷನರ್ ಭರ್ಜರಿ ಸ್ಟೆಪ್‍ಗೆ ಖುಷ್ ಆದ ಸಿಬ್ಬಂದಿ ವರ್ಗದವರು ಕೂಡ ಡ್ಯಾನ್ಸ್ ಗೆ ಸಾಥ್ ನೀಡಿದರು.

  • ಮೈಸೂರು ಮೇಯರ್ ಪಟ್ಟಕೇರಲಿದ್ದಾರೆ ಪ್ರಪ್ರಥಮ ಮುಸ್ಲಿಂ ಮಹಿಳೆ

    ಮೈಸೂರು ಮೇಯರ್ ಪಟ್ಟಕೇರಲಿದ್ದಾರೆ ಪ್ರಪ್ರಥಮ ಮುಸ್ಲಿಂ ಮಹಿಳೆ

    – ತಸ್ಲಿಂ ಮೇಯರ್, ಉಪ ಮೇಯರ್ ಶ್ರೀಧರ್

    ಮೈಸೂರು: ಶನಿವಾರ ಮೈಸೂರು ಮಹಾ ನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಮೇಯರ್ ಆಗಿ ಜೆಡಿಎಸ್‍ನ ತಸ್ಲಿಂ, ಉಪ ಮೇಯರ್ ಆಗಿ ಕಾಂಗ್ರೆಸ್ ನ ಶ್ರೀಧರ್ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ.

    ಪಾಲಿಕೆಯ ಮೇಯರ್, ಉಪ ಮೇಯರ್ ಸ್ಥಾನದ ಎರಡನೇ ಅವಧಿಯ ಚುನಾವಣೆಯಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಯುತ್ತಿದೆ. ಎರಡು ಪಕ್ಷಗಳ ಮೂಲಗಳ ಪ್ರಕಾರ, ಮೇಯರ್ ಸ್ಥಾನ ತಸ್ಲೀಂಗೆ ಹಾಗೂ ಉಪ ಮೇಯರ್ ಸ್ಥಾನ ಶ್ರೀಧರ್‍ಗೆ ಸಿಗುವುದು ಖಚಿತ ಎನ್ನಲಾಗುತ್ತಿದೆ. ಹಿಂದುಳಿದ ‘ಎ’ ವರ್ಗದ ಮಹಿಳೆಗೆ ಮೇಯರ್ ಸ್ಥಾನ ಮೀಸಲಾಗಿದ್ದು ಜೆಡಿಎಸ್‍ನಲ್ಲಿ ನಾಲ್ವರು ಆಕಾಂಕ್ಷಿಗಳಿದ್ದಾರೆ. ನಮ್ರತಾ ರಮೇಶ್, ತಸ್ಲಿಂ, ನಿರ್ಮಲಾ ಹರೀಶ್, ರೇಶ್ಮಾಭಾನು ರೇಸ್‍ನಲ್ಲಿ ಇದ್ದಾರೆ.

    ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಕಾಂಗ್ರೆಸ್ಸಿನಲ್ಲಿ ನಾಲ್ವರು ಸದಸ್ಯರ ನಡುವೆ ಪೈಪೋಟಿ ಏರ್ಪಟ್ಟಿದೆ. ಪ್ರದೀಪ್ ಚಂದ್ರ, ಆರ್ ಶ್ರೀಧರ್, ಸತ್ಯರಾಜು ಹಾಗೂ ಭುವನೇಶ್ವರಿ ಪ್ರಭುಮೂರ್ತಿ ಉಪಮೇಯರ್ ರೇಸ್‍ನಲ್ಲಿದ್ದಾರೆ.

    ಪಾಲಿಕೆಯಲ್ಲಿ 73 ಸದಸ್ಯರು ಮೇಯರ್ ಸ್ಥಾನಕ್ಕೆ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಜೆಡಿಎಸ್ 18 +ಬಿಎಸ್‍ಪಿ 1, ಕಾಂಗ್ರೆಸ್ 19, ಬಿಜೆಪಿ 21, ಪಕ್ಷೇತರರು 5, ಶಾಸಕರು 4(ಜಿಟಿ ದೇವೇಗೌಡ, ತನ್ವೀರ್ ಸೇಠ್, ಎಲ್ ನಾಗೇಂದ್ರ, ಎಸ್ ಎ ರಾಮದಾಸ್), ವಿಧಾನ ಪರಿಷತ್ ಸದಸ್ಯರು 4 (ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್ ,ಕೆಟಿ ಶ್ರೀಕಂಠೆಗೌಡ, ಹಾಗೂ ಆರ್ ಧರ್ಮಸೇನಾ), ಸಂಸದ 1(ಪ್ರತಾಪ್ ಸಿಂಹ) ಸೇರಿ ಒಟ್ಟು 73 ಸದಸ್ಯರಿದ್ದು, ಬಹುಮತ ಸಾಬೀತು ಪಡಿಸಲು 37 ಸದಸ್ಯರ ಬೆಂಬಲ ಬೇಕಾಗಿದೆ.

    18 ನೇ ವಾರ್ಡಿನ ಬಿಜೆಪಿ ಸದಸ್ಯ ಗುರುವಿನಯ ಸ್ಥಾನ ರದ್ದಾದ ಕಾರಣ ಪಾಲಿಕೆಯಲ್ಲಿ ಬಿಜೆಪಿ ಬಲ 22 ರಿಂದ 21 ಕ್ಕೆ ಕುಸಿದಿದೆ. ಪಾಲಿಕೆಯ 65 ಸ್ಥಾನಗಳ ಪೈಕಿ 64 ಸದಸ್ಯರು ಮಾತ್ರ ಮತ ಚಲಾಯಿಸಲಿದ್ದಾರೆ.

  • ಮೇಯರ್ ಆಯ್ಕೆವರೆಗೂ ಬೆಳಗಾವಿ ಪಾಲಿಕೆಯ ಮೇಲೆ ಡಿಸಿ ಆಡಳಿತ

    ಮೇಯರ್ ಆಯ್ಕೆವರೆಗೂ ಬೆಳಗಾವಿ ಪಾಲಿಕೆಯ ಮೇಲೆ ಡಿಸಿ ಆಡಳಿತ

    ಬೆಳಗಾವಿ: ರಾಜ್ಯದ ಐದು ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಮೇಯರ್ ಹಾಗೂ ಉಪಮೇಯರ್ ಅವರನ್ನು ಆಯ್ಕೆ ಮಾಡುವವರೆಗೆ ಆಯಾ ಜಿಲ್ಲಾಧಿಕಾರಿಗಳನ್ನು ಪಾಲಿಕೆಗೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಬಳ್ಳಾರಿ, ಬೆಳಗಾವಿ, ವಿಜಯಪುರ, ದಾವಣಗೆರೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜ. 6ರಂದು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಆಯಾ ವ್ಯಾಪ್ತಿಯ ಪ್ರಾದೇಶಿಕ ಆಯುಕ್ತರನ್ನು ಆಡಳಿತಾಧಿಕಾರಿಯನ್ನು ನೇಮಕ ಮಾಡುತ್ತಿದ್ದ ಸರ್ಕಾರ ತನ್ನ ಆದೇಶವನ್ನು ಮಾರ್ಪಡಿಸಿದ್ದು, ಇದೀಗ ಜಿಲ್ಲಾಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿರುವುದರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

    ಬೆಳಗಾವಿ ಪ್ರಾದೇಶಿಕ ವಿಭಾಗದ ಆಯುಕ್ತ ಅಮ್ಲಾನ ಆದಿತ್ಯ ಬಿಸ್ವಾಸ್ ಅವರು ಬೆಳಗಾವಿ ನಗರ ಪಾಲಿಕೆಯ ಆಡಳಿತಾಧಿಕಾರಿಯಾಗಿ ಅಧಿಕಾರಿ ವಹಿಸಿಕೊಂಡ ಅವಧಿಯಿಂದಲೂ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಪಾಲಿಕೆಯನ್ನು ಸಾರ್ವಜನಿಕರಿಗೆ ಹತ್ತಿರವಾಗುವಂತೆ ಕ್ರಮಕೈಗೊಂಡಿದ್ದಾರೆ. ಅಲ್ಲದೇ ನಗರ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಬಡಾವಣೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಭೂಮಾಫಿಯಾ ದಂಧೆಕೊರರ ವಿರುದ್ಧ ಸಮರ ಸಾರುವ ಜೊತೆಗೆ ಬಡಾವಣೆಗಳನ್ನು ತೆರವುಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜಿಡ್ಡು ಗಟ್ಟಿದ ಪಾಲಿಕೆ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಂತೆ ಮಾಡಿದರು.

    ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನೂರಾರು ಕೋಟಿ ರುಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಮುಂದಿನ ಹಲವು ವರ್ಷಗಳ ಅಭಿವೃದ್ಧಿ ಯೋಜನೆಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದ್ದಾರೆ.

  • ನಿಗದಿ ಪಡಿಸಿದ ಬಾಡಿಗೆಯನ್ನು ಸರಿಯಾಗಿ ಪಾವತಿಸಿ- ಮೇಯರ್ ಸೂಚನೆ

    ನಿಗದಿ ಪಡಿಸಿದ ಬಾಡಿಗೆಯನ್ನು ಸರಿಯಾಗಿ ಪಾವತಿಸಿ- ಮೇಯರ್ ಸೂಚನೆ

    – ಮಾರುಕಟ್ಟೆ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆ ಮೇಯರ್ ಸಭೆ

    ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿರುವ ಮಾರುಕಟ್ಟೆಗಳ ಸಮಸ್ಯೆಯನ್ನು ಪಾಲಿಕೆ ಇತ್ಯರ್ಥ ಮಾಡಲಿದೆ. ಕೆ.ಆರ್ ಮಾರ್ಕೆಟ್ ನಲ್ಲಿರುವ 24 ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿದ್ದು, ಅದಕ್ಕೆ ಯಾರು ಕೂಡ ಅಡ್ಡಿಪಡಿಸದೆ ಸಹಕಾರ ನೀಡುವಂತೆ ಮಾರುಕಟ್ಟೆ ಅಸೋಸಿಯೇಷನ್ ಪದಾಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಸೂಚನೆ ನೀಡಿದರು.

    ಮಾರುಕಟ್ಟೆ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆ ಇಂದು ಸಂಜೆ ನಡೆದ ಸಭೆಯಲ್ಲಿ ಮೇಯರ್ ಈ ಸೂಚನೆಯನ್ನು ಕೊಟ್ಟಿದ್ದು, ಉದ್ದಿಮೆ ಪರವಾನಗಿ ಇಲ್ಲದ ಮಳಿಗೆಗಳಿಗೆ ಕೂಡಲೇ ಪರವಾನಗಿ ಮಾಡಿಸಿಕೊಳ್ಳಬೇಕು. ಪಾಲಿಕೆ ನಿಗದಿಪಡಿಸಿರುವ ಬಾಡಿಗೆಯನ್ನು ಸರಿಯಾಗಿ ಪಾವತಿಸಬೇಕು ಅಂತ ಸೂಚಿಸಿದರು.

    ಮಾರುಕಟ್ಟೆಗಳ ವಿಚಾರವಾಗಿ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥ ಮಾಡುವ ಬಗ್ಗೆ ಪಾಲಿಕೆ, ಕಾನೂನು ಕೋಶ ವಿಭಾಗದವರ ಜೊತೆ ಚರ್ಚಿಸಲಾಗುವುದು. ಜೊತೆಗೆ 5 ವರ್ಷಗಳ ಕಾಲ ಮಾತ್ರ ವ್ಯಾಪಾರ ಮಾಡಲು ಅನುಮತಿ ನೀಡುವ ನಿಯಮವನ್ನು ತಿದ್ದುಪಡಿ ಮಾಡುವ ಬಗ್ಗೆ ಆಯುಕ್ತರ ಜೊತೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಅಂತ ತಿಳಿಸಿದರು.

    ಈ ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ಸಂಸದ ಪಿ.ಸಿ.ಮೋಹನ್ ಭಾಗಿಯಾಗಿದ್ದರಿ. ಸ್ಥಳದಲ್ಲಿಯೇ ಸಂಸದ ಪಿ.ಸಿ.ಮೋಹನ್, ಕೆ.ಆರ್.ಮಾರ್ಕೆಟ್, ರಸೆಲ್ ಮಾರ್ಕೆಟ್ ಸೇರಿದಂತೆ ಇನ್ನೂ ಕೆಲವು ಮಾರುಕಟ್ಟೆಗಳಲ್ಲಿ 5 ವರ್ಷಗಳ ಕಾಲ ಮಾತ್ರ ವ್ಯಾಪಾರ ಮಾಡಲು ಅನುಮತಿ ನೀಡುವ ನಿಯಮವನ್ನು ತಿದ್ದುಪಡಿ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

  • ದಾವಣಗೆರೆ ಪಾಲಿಕೆ – ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೂ ಅಧಿಕಾರ ನಮಗೆ ಎಂದ ಬಿಜೆಪಿ

    ದಾವಣಗೆರೆ ಪಾಲಿಕೆ – ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೂ ಅಧಿಕಾರ ನಮಗೆ ಎಂದ ಬಿಜೆಪಿ

    – ಅಧಿಕಾರ ಹಿಡಿಯಲು ಕಾಂಗ್ರೆಸ್, ಬಿಜೆಪಿ ಮಧ್ಯೆ ಪೈಪೋಟಿ
    – ಪಕ್ಷೇತರರು ಬೆಂಬಲ ನೀಡಿದ್ರೆ ಬಿಜೆಪಿ ಅಧಿಕಾರಕ್ಕೆ
    – ಕೈ ಬಂಡಾಯ ಅಭ್ಯರ್ಥಿ ಬೆಂಬಲ ನೀಡಿದ್ರೆ ಕಾಂಗ್ರೆಸ್ಸಿಗೆ ಪಾಲಿಕೆ

    ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯ ದಂಗಲ್ ತೆರೆಕಂಡಿದ್ದು, ಕಾಂಗ್ರೆಸ್ 22 ಸ್ಥಾನಗಳನ್ನು ಗಳಿಸುವ ಮೂಲಕ ಸರಳ ಬಹುಮತಕ್ಕೆ ಒಂದು ಸ್ಥಾನ ಕಡಿಮೆ ಗಳಿಸಿದೆ.

    ಒಟ್ಟು 45 ವಾರ್ಡ್ ಗಳು ಇರುವ ಪಾಲಿಕೆ ಗದ್ದಿಗೆ ಹಿಡಿಯಲು ಇದೀಗ ಸೆಣಸಾಟ ಪ್ರಾರಂಭವಾಗಿದೆ. ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ 1 ಹಾಗೂ, ಐದು ಮಂದಿ ಪಕ್ಷೇತರರು ಗೆಲುವು ಪಡೆದಿದ್ದಾರೆ.

    ಪಾಲಿಕೆ ಅಧಿಕಾರ ಹಿಡಿಯಲು 23 ಸ್ಥಾನಗಳ ಅಗತ್ಯವಿದ್ದು, ಕಾಂಗ್ರೆಸ್‍ಗೆ ಅಧಿಕಾರ ವಹಿಸಿಕೊಳ್ಳಲು ಎಲ್ಲ ಅವಶಾಶಗಳು ಇವೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 45 ನೇ ವಾರ್ಡ್ ನ ಉದಯ್ ಕುಮಾರ್ ಗೆಲುವು ಸಾಧಿಸಿದ್ದು, ಇವರು ಕಾಂಗ್ರೆಸ್ ಗೆ ಬೆಂಬಲ ನೀಡಿದರೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಗೆ ಸುಲಭದ ದಾರಿಯಾಗಲಿದೆ. ಅಲ್ಲದೆ ಕಳೆದ ಬಾರಿಯೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಹೀಗಾಗಿ ಶತಾಯ ಗತಾಯ ಅಧಿಕಾರ ಉಳಿಸಿಕೊಳ್ಳಬೇಕೆಂದು ಕಾಂಗ್ರೆಸ್ ಕಸರತ್ತು ನಡೆಸಿದೆ.

    ಕೇವಲ 17 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲಿದೆ. ಘಟಾನುಘಟಿಗಳು ಕಣಕ್ಕಿಳಿದಿದ್ದು ಈ ಬಾರಿ ಚುನಾವಣೆಯ ವಿಶೇಷವಾಗಿತ್ತು. ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ನವರ ಆಪ್ತ ದಿನೇಶ್.ಕೆ.ಶೆಟ್ಟಿ 17 ನೇ ವಾರ್ಡ್ ನಿಂದ ಸೋಲು ಅನುಭವಿಸಿದ್ದು, ಬಿಜೆಪಿಯ ಅಜಯ್ ಕುಮಾರ್ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಮಾಜಿ ಸಚಿವ ಹಾಗೂ ಶಾಸಕ ಎಸ್.ಎ.ರವೀಂದ್ರನಾಥ್ ಪುತ್ರಿ ವೀಣಾ ನಂಜಪ್ಪ 40ನೇ ವಾರ್ಡ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತಿದ್ದ ಪತಿ-ಪತ್ನಿ ಇಬ್ಬರೂ ಗೆಲುವು ಸಾಧಿಸಿದ್ದು, ಪತಿ 28 ನೇ ವಾರ್ಡ್ ಜೆ.ಎನ್.ಶ್ರೀನಿವಾಸ್ ಜಯ ಗಳಿಸಿದರೆ, ಅತ್ತ ಪತ್ನಿ ಶ್ವೇತಾ ಶ್ರೀನಿವಾಸ್ 37ನೇ ವಾರ್ಡ್ ನಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರ ಪುತ್ರ 26 ವರ್ಷದ ರಾಕೇಶ್ ಜಾಧವ್ ಜಯಗಳಿಸಿದ್ದಾರೆ. 10 ನೇ ವಾರ್ಡಿನಲ್ಲಿ ಮಾಜಿ ಮೇಯರ್ ಅನಿತಾಬಾಯಿ ಪತಿ ಮಾಲತೇಶ್ ರಾವ್ ಜಾಧವ್ ವಿರುದ್ಧ ಗೆಲುವು ಸಾಧಿಸಿ ಅತಿ ಚಿಕ್ಕ ವಯಸ್ಸಿನ ಪಾಲಿಕೆ ಸದಸ್ಯರಾಗಿದ್ದಾರೆ.

    ಇನ್ನು ಮೇಯರ್ ಪಟ್ಟಕ್ಕಾಗಿ ಎರಡು ಪಕ್ಷಗಳು ಕಸರತ್ತು ನಡೆಸುತ್ತಿವೆ. ಅಲ್ಲದೆ 17 ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಜಿ.ರವಿ ಕೇವಲ ಎರಡು ಮತಗಳನ್ನು ಪಡೆದ ಅಭ್ಯರ್ಥಿಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ರವಿ ಕೇವಲ ಎರಡು ಮತಗಳನ್ನು ಪಡೆಯುವ ಮೂಲಕ ಇಡೀ ಪಾಲಿಕೆ ಚುನಾವಣೆಯಲ್ಲಿ ಅತಿ ಕಡಿಮೆ ಮತ ಪಡೆದ ಅಭ್ಯರ್ಥಿಯಾಗಿದ್ದಾರೆ.

    ಮೇಯರ್ ಪಟ್ಟಕ್ಕಾಗಿ ಕಸರತ್ತು:
    ಮೇಯರ್ ಪಟ್ಟಕ್ಕಾಗಿ ಬಿಜೆಪಿ ಕಾಂಗ್ರೆಸ್ ನಡುವೇ ಪೈಪೋಟಿ ಜೋರಾಗಿದ್ದು, ಈ ಬಾರಿ ಮೇಯರ್ ಪಟ್ಟ ಬಿಜೆಪಿಗೆ ಸಿಗುವ ವಿಶ್ವಾಸವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದ್ದಾರೆ. 4 ಜನ ಪಕ್ಷೇತರರ ಬೆಂಬಲದಿಂದ ಬಿಜೆಪಿ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ 17, 4 ಪಕ್ಷೇತರರು ಹಾಗೂ ಮೂವರು ಶಾಸಕರು, ಒಬ್ಬ ಸಂಸದರ ಬಲಾಬಲ ಇಟ್ಟುಕೊಂಡು ಬಿಜೆಪಿ ಅಧಿಕಾರ ಹಿಡಯಲು ಕಸರತ್ತು ನಡೆಸಿದೆ.

    ಕಾಂಗ್ರೆಸ್‍ನಿಂದಲೂ ಪ್ರಯತ್ನ
    ಇತ್ತ ಪಾಲಿಕೆಯ ಆಡಳಿತ ನಡೆಸಲು ಕಾಂಗ್ರೆಸ್ ಸಹ ಸಿದ್ಧವಾಗಿದ್ದು, 22 ಸದಸ್ಯರು ಜಯಗಳಿಸಿದ್ದು, ಒಬ್ಬರು ಶಾಸಕರು, ಒಬ್ಬರು ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 24 ಸದಸ್ಯರ ಬಲ ಆಗುತ್ತದೆ. ಪಾಲಿಕೆ ಅಧಿಕಾರ ನಮ್ಮ ತೆಕ್ಕೆಗೆ ಬರಲಿದೆ ಎಂದು ಕಾಂಗ್ರೆಸ್ ಲೆಕ್ಕಾಚಾರ ಹಾಕಿದೆ. ಅಲ್ಲದೆ ಇಬ್ಬರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಗಳು ಕಾಂಗ್ರೆಸ್ ಗೆ ಸಪೋರ್ಟ್ ಮಾಡುವ ಸಾಧ್ಯತೆ ಇದೆ. ಇಬ್ಬರೂ ಸಹ ಆಡಳಿತದ ಚುಕ್ಕಾಣಿ ಹಿಡಿಯಲು ತುದಿಗಾಲಲ್ಲಿ ನಿಂತಿದ್ದು, ಯಾರು ಅಧಿಕಾರ ವಹಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ.

  • ‘ಆಯುಧಪೂಜೆ ನರಕಾಸುರರು’ ವರದಿ ಇಂಪ್ಯಾಕ್ಟ್ – ‘ಬಡವರ ರಕ್ತ ಹೀರುವ ಲಂಚ ಪಿಪಾಸು’ಗಳ ವಿರುದ್ಧ ಕ್ರಮ

    ‘ಆಯುಧಪೂಜೆ ನರಕಾಸುರರು’ ವರದಿ ಇಂಪ್ಯಾಕ್ಟ್ – ‘ಬಡವರ ರಕ್ತ ಹೀರುವ ಲಂಚ ಪಿಪಾಸು’ಗಳ ವಿರುದ್ಧ ಕ್ರಮ

    ಬೆಂಗಳೂರು: ವರ್ಷವಿಡೀ ವ್ಯಾಪಾರವಿಲ್ಲದೆ ಹಬ್ಬದ ಸಮಯದಲ್ಲಿಯಾದ್ರು ಸ್ವಲ್ಪ ವ್ಯಾಪಾರ ಮಾಡೋಣ ಎಂದು ಚಿಂತಿಸುವ ಕೆ.ಆರ್.ಮಾರ್ಕೆಟ್ ವ್ಯಾಪಾರಗಳಿಗೆ ಸಮಸ್ಯೆಯಾಗಿದ್ದ ಅಧಿಕಾರಿಗಳು, ಪುಡಿ ರೌಡಿಗಳ ಕಾಟದ ಸಮಸ್ಯೆಯನ್ನು ಪಬ್ಲಿಕ್ ಟಿವಿ ‘ಆಯುಧಪೂಜೆ ನರಕಾಸುರರು’ ಶೀರ್ಷಿಕೆಯಡಿ ಮೂಲಕ ವರದಿ ಬಿತ್ತರ ಮಾಡಿತ್ತು. ಸದ್ಯ ಈ ವರದಿಯನ್ನು ಗಮನಿಸಿರುವ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.

    ಪಬ್ಲಿಕ್ ಟಿವಿ ವರದಿಯನ್ನು ವೀಕ್ಷಿಸಿದ ಬಳಿಕ ಮೇಯರ್ ಅವರು, ಬಿಬಿಎಂಪಿ ಆಯುಕ್ತರಿಗೆ ನೇರ ಕರೆ ಮಾಡಿ ಇಂತಹ ಅಧಿಕಾರಿಗಳು ಹಾಗೂ ಹಣ ವಸೂಲಿ ಮಾಡುತ್ತಿದ್ದವರ ವಿರುದ್ಧ ಕ್ರಮಕೈಗೊಳ್ಳಲು ತಿಳಿಸಿದರು. ಅಲ್ಲದೇ ಈ ಸಂಬಂಧ ಪಬ್ಲಿಕ್ ಟಿವಿ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ವರದಿ ಮಾಡಿದ ಹಿನ್ನೆಲೆಯಲ್ಲಿ ನೇರ ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳುವುದಾಗಿ ಹೇಳಿದ ಅವರು, ನಾನು ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಅಲ್ಲದೇ ಬಿಬಿಎಂಪಿ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದ ಹಾಗೂ ಬಾಲಕನೊಂದಿಗೆ ಕೆಟ್ಟದಾಗಿ ಮಾತನಾಡಿದ ವ್ಯಕ್ತಿಯ ವಿರುದ್ಧವೂ ಕ್ರಮಕ್ಕೆ ಸೂಚಿಸಿದ್ದೇನೆ. ಮುಂದಿನ 2 ದಿನಗಳಲ್ಲಿ ಸ್ಥಳಕ್ಕೆ ತೆರಳಿ ವ್ಯಾಪಾರಿಗಳ ಬಳಿ ಸಮಸ್ಯೆಗಳನ್ನು ಅಲಿಸುತ್ತೇನೆ. ಅಲ್ಲಿ ನಡೆಯುತ್ತಿರುವ ಬೇರೆ ಬೇರೆ ದಂಧೆಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳುತ್ತೇನೆ ಎಂದರು.

    ಸದ್ಯ ವಿಡಿಯೋದಲ್ಲಿರುವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಹಾಗೂ ಕೂಡಲೇ ಆತನನ್ನು ಬಂಧನ ಕೂಡ ಮಾಡಲು ತಿಳಿಸಿದ್ದೇನೆ. ನಮ್ಮದೇ ಅಧಿಕಾರಿ ಪುಟ್ಟ ಬಾಲಕನ ಕೆಟ್ಟದಾಗಿ ಮಾತನಾಡಿದ್ದು, ಸಂಸ್ಥೆಯ ಗುರುತಿನ ಚೀಟಿ ಹಾಗೂ ವಾಕಿಟಾಕಿ ಕೂಡ ಆತನ ಕೈಯಲ್ಲಿದೆ. ಇವತ್ತಿನ ಘಟನೆಯಿಂದ ನನಗೆ ಮುಜುಕರವಾಗುತ್ತಿದೆ ಎಂದರು.

    https://www.youtube.com/watch?v=NhjMSwy23vg