ಮೈಸೂರು: ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಜೆಡಿಎಸ್ ಗೆ ಸಿಕ್ಕಿದ್ದು ಬಯಸದೇ ಬಂದ ಭಾಗ್ಯ ಎಂದು ಖುದ್ದು ಮಾಜಿ ಸಚಿವ ಸಾರಾ ಮಹೇಶ್ ಒಪ್ಪಿಕೊಂಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಾ ಮಹೇಶ್, ಸುಮ್ನೆ ನಾಮಪತ್ರ ಸಲ್ಲಿಸಿ. ನೀವೇನೂ ಗೆಲ್ಲೋಕೆ ಆಗಲ್ಲ ಅಂತಾ ನಮ್ಮ ಮೇಯರ್ ಅಭ್ಯರ್ಥಿಗೆ ಹೇಳಿದ್ದೆವು. ನೋಡಿದ್ರೆ ಕಾಂಗ್ರೆಸ್‌ನವರು ಕ್ಷಣಾರ್ಧದಲ್ಲಿ ನಮ್ಮ ಅಭ್ಯರ್ಥಿ ಬೆಂಬಲಿಸಿ ಬಿಟ್ಟರು ಎಂದು ಪ್ರತಿಕ್ರಿಯಿಸಿದರು.
ನಮಗೆ ಮೇಯರ್ ಸ್ಥಾನ ಸಿಗುತ್ತೆ ಅಂತಾ ನಾವು ಮಧ್ಯಾಹ್ನ 12 ಗಂಟೆಯವರೆಗೂ ಅಂದುಕೊಂಡಿರಲಿಲ್ಲ. ಬಿಜೆಪಿಗೆ ಮೇಯರ್ ಸ್ಥಾನ ಸಿಗಬಹುದು ಎಂದು ಊಹಿಸಿದ್ದೆವು. ನಮಗೆ 22 ಮತ ಬರಬಹುದು ಅಂದುಕೊಂಡಿದ್ದೆವು. ಅದರಲ್ಲೂ ಇಬ್ಬರು ನಮ್ಮ ಶಾಸಕರು ಗೈರಾದ ಮೇಲೆ ಆ ಮತ ಇನ್ನೂ ಕಡಿಮೆ ಆಗಲಿದೆ ಅಂದುಕೊಂಡಿದ್ದೆವು. ಆದರೆ ಕಾಂಗ್ರೆಸ್‌ನವರು ದಿಢೀರ್ ನಮ್ಮ ಬೆಂಬಲಿಸಿ ಬಿಟ್ಟರು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿರಬಹುದು ಎಂದು ಅಭಿಪ್ರಾಯಪಟ್ಟರು.
– ಬಿಎಸ್‍ಸಿ ಮಾಡುತ್ತಿರುವ ಯುವತಿ
– ತಿರುವನಂತಪುರಂ ಮೇಯರ್ ಆಗಿ ಆಯ್ಕೆ
ತಿರುವನಂತಪುರಂ: ಭಾರತದ ಅತೀ ಕಿರಿಯ ಮೇಯರ್ ಆಗಿ 21 ವರ್ಷದ ಆರ್ಯ ರಾಜೇಂದ್ರನ್ ಆಯ್ಕೆಯಾಗಿದ್ದಾರೆ. ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಇತ್ತೀಚೆಗೆ ತಿರುವನಂತಪುರಂ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಸಿಪಿಎಂ ಪಕ್ಷದಿಂದ ಮುಡವನ್‍ಮುಗಳ್ ವಾರ್ಡ್‍ನಿಂದ ಆರ್ಯ ರಾಜೇಂದ್ರ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಬಳಿಕ ಸಿಪಿಎಂ ಜಿಲ್ಲಾ ಕಾರ್ಯಾಲಯ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಶಿಫಾರಸು ಮಾಡಿತ್ತು.
ಇದೀಗ ರಾಜ್ಯ ಸಮಿತಿಯೂ ಸಹ ಆರ್ಯ ರಾಜೇಂದ್ರನ್ ಅವರನ್ನು ಕೇರಳದ ರಾಜಧಾನಿ ತಿರುವನಂತಪುರಂ ಮೇಯರ್ ಆಗಿ ಆಯ್ಕೆ ಮಾಡಿದೆ. ಈ ಮೂಲಕ ಅತೀ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರ್ಯ ಅವರ ತಂದೆ ಎಲೆಕ್ಟ್ರಿಷಿಯನ್ ಆಗಿದ್ದು, ತಾಯಿ ಗೃಹಣಿಯಾಗಿದ್ದಾರೆ.
ತಿರುವನಂತಪುರಂನ ಆಲ್ ಸೇಂಟ್ಸ್ ಕಾಲೇಜಿನಲ್ಲಿ ಬಿಎಸ್‍ಸಿ ಮ್ಯಾಥ್ಸ್ ವಿದ್ಯಾರ್ಥಿನಿಯಾಗಿರುವ ಆರ್ಯ ಎಸ್‍ಎಫ್‍ಐ ಸದಸ್ಯೆಯಾಗಿದ್ದಾರೆ.
ಮಂಗಳೂರು: ನಗರದ ಕೆಲವು ಕುರಿ ಮಾಂಸದ ಅಂಗಡಿಯಲ್ಲಿ ಗೋಮಾಂಸ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದಾರೆ ಅನ್ನೋ ಆರೋಪ ಹಿನ್ನೆಲೆಯಲ್ಲಿ ಇಂದು ಮೇಯರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಇತ್ತೀಚೆಗೆ ಕೆಲವು ಮಟನ್ ಅಂಗಡಿಗಳಲ್ಲಿ ಕುರಿ ಮಾಂಸದ ಜೊತೆಗೆ ಗೋಮಾಂಸ ಮಿಶ್ರಣ ಮಾಡಿ ಕೊಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇಂದು ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ ಅವರ ನೇತೃತ್ವದಲ್ಲಿ ಅಧಿಕಾರಿಗಳು ನಗರದ ಕಸಾಯಿಖಾನೆ, ಉರ್ವಾ ಮಾರ್ಕೆಟ್, ಉರ್ವಾ ಸ್ಟೋರ್ ಮಾರ್ಕೆಟ್‍ಗಳಿಗೆ ದಾಳಿ ನಡೆಸಿದ್ದಾರೆ.
ಈ ವೇಳೆ ಮಳಿಗೆಗಳ ಪರವಾನಗಿ ಮತ್ತು ಬಿಲ್‍ಗಳ ಪರಿಶೀಲನೆ ನಡೆಸಿದ ಮೇಯರ್, ಅಕ್ರಮ ಮಾರಾಟ ಮತ್ತು ವಧೆಗಳ ಬಗ್ಗೆ ನಿಗಾ ಇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಮಾಂಸದಲ್ಲಿ ಕಡ್ಡಾಯ ಸೀಲ್ ಮತ್ತು ಬಿಲ್ ನೀಡಲು ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಅಕ್ರಮ ಮಾಂಸ ಮಾರಾಟ ನಡೆಸಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಈ ಸಂದರ್ಭ ನೀಡಲಾಯಿತು.
ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮೇಯರ್ 18 ವರ್ಷಗಳ ನಂತರ ಮತ್ತೆ ನರ್ಸ್ ಆಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.
ಮೇಯರ್ ಕಿಶೋರಿ ಪೆಡ್ನೇಕರ್ ಅವರು ಕೊರೊನಾ ವಿರುದ್ಧದ ಹೋರಾಟದಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಈ ಮೂಲಕ ವೈದ್ಯಕೀಯ ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಕಿಶೋರಿ ಪೆಡ್ನೇಕರ್ ರಾಜಕೀಯಕ್ಕೆ ಬರುವ ಮೊದಲು ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಕೊರೊನಾ ವೈರಸ್ ವಿರುದ್ಧ ಹೋರಾಡಲು ಮತ್ತೆ ನರ್ಸ್ ಸಮವಸ್ತ್ರ ಧರಿಸುವ ಮೂಲಕ ವೈದ್ಯಕೀಯ ಸಿಬ್ಬಂದಿಗಳಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರಿದ್ದಾರೆ. ನರ್ಸ್ ಉಡುಪು ತೊಟ್ಟು ಬಿಎಂಸಿಯ ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಮತ್ತೆ ಸೇರಿಕೊಂಡಿದ್ದಾರೆ.
ಮುಂಬೈನಲ್ಲಿ 1036 ಕಂಟೈನ್‍ಮೆಂಟ್ ಝೋನ್‍ಗಳ ಪೈಕಿ 231 ಝೋನ್‍ಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕಳೆದ 14 ದಿನಗಳಿಂದ ಒಂದೇ ಒಂದು ಕೊರೊನಾ ಪಾಸಿಟಿವ್ ದಾಖಲಾಗದ ಕಾರಣ 231 ವಲಯಗಳನ್ನು ಕಂಟೈನ್‍ಮೆಂಟ್ ಝೋನ್ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಮೇಯರ್ ಮಾಹಿತಿ ನೀಡಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಮೇಯರ್, “ನಾವು ಕೂಡ ಮನೆಯಲ್ಲಿ ಕೂತು ಕೆಲಸ ಮಾಡಬಹುದು. ಆದರೆ ನಾವು ನೀಮಗಾಗಿ ಮನೆಯಿಂದ ಹೊರ ಬಂದು ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ನೀವು ಮನೆಯಲ್ಲಿರಿ, ಸುರಕ್ಷಿತವಾಗಿ ಇರಿ. ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಗಳಿಗೆ ಬೆಂಬಲ ನೀಡಲು ಇಚ್ಚಿಸುತ್ತೇನೆ” ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8,068 ಏರಿಕೆಯಾಗಿದ್ದು, ಈ ಪೈಕಿ 1,076 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. 342 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ದಾವಣಗೆರೆ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ಅಗತ್ಯ ಸೇವೆಗಳಿಗೆ ಮನೆಯಿಂದ ಹೊರಬರಬೇಕಾದರೆ ಪಾಸ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸರಿಂದ ಪಾಸ್ ತೆಗೆದುಕೊಂಡು ಮನೆಯಿಂದ ಹೊರಬರಬಹುದು. ಆದರೆ ಈ ಪಾಸ್ ವಿಚಾರದಲ್ಲಿ ದಾವಣಗೆರೆಯ ಮೇಯರ್ ಮತ್ತು ಡಿಸಿ ನಡುವೆ ಫೈಟ್ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಸೇವೆಗಳಿಗೆ ಪಾಸ್ ವಿತರಣೆ ಮಾಡಿದ್ದರು. ಮೇಯರ್ ಕೂಡ ಪಾಲಿಕೆ ವತಿಯಿಂದ ವ್ಯಾಪಾರಸ್ಥರಿಗೆ ಸಾವಿರಾರು ಪಾಸ್ ವಿತರಿಸಿದ್ದರು. ಆದರೆ ಮೇಯರ್ ನೀಡಿದ ಪಾಸ್ ದುರ್ಬಳಕೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದ್ದರಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮೇಯರ್ ನೀಡಿದ್ದ ಪಾಸ್‍ಗಳನ್ನು ಅಸಿಂಧು ಮಾಡಿದ್ದಾರೆ. ಈ ವಿಚಾರದಲ್ಲಿ ಮೇಯರ್ ಬಿ.ಜಿ.ಅಜಯ್‍ಕುಮಾರ್ ಮತ್ತು ಡಿಸಿ ಮಹಾಂತೇಶ್ ಬೀಳಗಿ ನಡುವೆ ಜಗಳ ನಡೆದಿದೆ.
ನಾನು ಪುಂಡಪೋಕರಿಗಳಿಗೆ ಪಾಸ್ ಕೊಟ್ಟಿಲ್ಲ. ಕಳೆದ 15 ದಿನಗಳಿಂದ ಪಾಸ್‍ಗಾಗಿ ಪಾಲಿಕೆ ಪರದಾಡಿದೆ. ಆದರೆ ಜಿಲ್ಲಾಡಳಿತ ಪಾಸ್ ಕೊಡಲಿಲ್ಲ. ನಾನು ವ್ಯಾಪಾರಿಗಳ ಕಷ್ಟ ನೋಡಲಾಗದೆ ಪಾಸ್ ನೀಡಿರುವೆ. ಆದರೆ ನಾನು ಪಾಸ್ ಮಾರಾಟ ಮಾಡಿಕೊಂಡಿಲ್ಲ. ಮೇಯರ್ ಸ್ಥಾನದಲ್ಲಿ ಕುಳಿತ ನನಗೆ ಕನಿಷ್ಠ ಜ್ಞಾನ ಇದೆ ಎಂದು ಡಿಸಿಗೆ ಮೇಯರ್ ಬಿ.ಜಿ. ಅಜಯ್‍ಕುಮಾರ್ ತಿರುಗೇಟು ನೀಡಿದ್ದಾರೆ.
ನಾನು ಸಣ್ಣ ಹುಡುಗ ಅಲ್ಲ, ಪಾಲಿಕೆ ಸದಸ್ಯರ ಆಗ್ರಹದ ಮೇಲೆ ಪಾಸ್ ನೀಡಲಾಗಿದೆ. ಅಷ್ಟೇ ಅಲ್ಲದೇ ಎಲ್ಲ ದಾಖಲೆ ಪಡೆದು ಪಾಸ್ ನೀಡಲಾಗಿದೆ. ನಾನು ಕೊಟ್ಟ ಪಾಸ್ ಅಸಿಂಧು ಮಾಡಿ. ಆದರೆ ಬೇಕಾದಷ್ಟು ಪಾಸ್ ಜಿಲ್ಲಾಡಳಿತ ನೀಡಲಿ ಎಂದು ಮೇಯರ್ ಗರಂ ಆಗಿ ಮಾತನಾಡಿದರು.
ಬೆಂಗಳೂರು: ಕೊರೊನಾ, ಕಾಲರಾ ಸೋಂಕು ತಡೆಗಟ್ಟುವ ಕುರಿತು ಕ್ರಮ ವಹಿಸಲು ನಿತ್ಯ ಹಲವು ಸಭೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇಂದು ಆರೋಗ್ಯ ಅಧಿಕಾರಿಗಳ ಸಭೆ ಇತ್ತು. ಇದನ್ನು ತಿಳಿದ ಮೇಯರ್, ಈ ಸಭೆ ಕುರಿತು ಮಾಹಿತಿ ನೀಡದ್ದಕ್ಕೆ ಫುಲ್ ಗರಂ ಆಗಿದ್ದಾರೆ.
ಆರೋಗ್ಯ ಸಂಬಂಧಿತ ಏನೇ ಕೆಲಸ ಮಾಡಿದರೂ ಮಾಹಿತಿ ಕೊಡಿ, ಏನ್ ಮೀಟಿಂಗ್ ಇದು? ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ, ನನಗೂ ಮಾಹಿತಿ ಇಲ್ಲ ಎಂದು ಗರಂ ಆದರು. ಕೊರೊನಾ ವೈರಸ್, ಕಾಲರಾ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳ ಸಬ್ ಕಮಿಟಿ ಮೀಟಿಂಗ್ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆಯುವ ಮುನ್ನ ಈ ಘಟನೆ ನಡೆಯಿತು.
ಈ ಬಗ್ಗೆ ಮೇಯರ್ ಗೆ, ಸಮಿತಿಗೆ ಮಾಹಿತಿಯೇ ನೀಡಿರಲಿಲ್ಲ. ಹೀಗಾಗಿ ಸಿಬ್ಬಂದಿ ತರಾಟೆಗೆ ತೆಗೆದುಕೊಂಡ ಮೇಯರ್, ನಾವಲ್ಲ ಕಮಿಟಿ ಮಾಡಿದ್ದು ಸಿಎಸ್ ಎಂದ ಸಿಬ್ಬಂದಿಗೂ ಬೈದರು. ಕೂಡಲೇ ಸಿಎಸ್ ಯಾರ್ ರೀ, ರಾತ್ರಿ ಆಗಿದ್ದರೂ ನಮಗೆ ಹೇಳಬೇಕಿತ್ತು ಎಂದು ಗರಂ ಆದರು. ಈ ಸಂಬಂಧ ಕಮೀಷನರ್ ಹಾಗೂ ಅಧಿಕಾರಿಗಳ ವರ್ಗಕ್ಕೆ ಮತ್ತೊಂದು ಪತ್ರ ಬರೆಯಿರಿ ಎಂದು ತಮ್ಮ ಸಿಬ್ಬಂದಿಗೂ ಸೂಚನೆ ನೀಡಿದರು.
ಈ ಹಿಂದೆ ಸಹ ಅಧಿಕಾರಿಗಳು ನ್ಯಾಯಾಲಯದ ವಿಚಾರಗಳ ಮಾಹಿತಿ ಕೊಟ್ಟಿಲ್ಲ, ಇನ್ನು ಮುಂದೆ ಎಲ್ಲ ಮಾಹಿತಿ ನೀಡಬೇಕು ಎಂದು ಮೇಯರ್ ಪತ್ರ ಬರೆದಿದ್ದರು.
ಬೆಂಗಳೂರು: ಕಸ ಗುಡಿಸಿ ನಗರವನ್ನು ಸ್ವಚ್ಛವಾಗಿ ಇಡುವ ಪೌರಕಾರ್ಮಿಕರ ಬಳಿ ಕೆಲ ಅಧಿಕಾರಿಗಳು ಹಣ ಕೀಳುತ್ತಿದ್ದಾರೆ ಎಂದು ಇಂದು ಬೆಳಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈಗ ಪಬ್ಲಿಕ್ ಟಿವಿ ವರದಿಗೆ ಫಲ ಸಿಕ್ಕಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವುದಾಗಿ ಮೇಯರ್ ಗೌತಮ್ ಕುಮಾರ್ ಮತ್ತು ಕಮಿಷನರ್ ಅನಿಲ್ ಕುಮಾರ್ ಹೇಳಿದ್ದಾರೆ.
ಪೌರಕಾರ್ಮಿಕರಿಂದ ತಿಂಗಳಿಗೆ 80 ಲಕ್ಷ ಹಫ್ತಾ ವಸೂಲಿಯಾಗುವುದನ್ನು ಕಂಡು ಬಿಬಿಎಂಪಿ ಮೇಯರ್, ಕಮಿಷನರ್ ಹಾಗೂ ವಿರೋಧ ಪಕ್ಷ ಬೆಚ್ಚಿಬಿದ್ದಿದೆ. ಹಣ ವಸೂಲಿ ಮಾಡುತ್ತಿದ್ದ ಅಧಿಕಾರಿಗಳ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ಇದು ಪಬ್ಲಿಕ್ ಟಿವಿ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ. ಈ ಸಂಬಂಧ ನಗರದ 198 ವಾರ್ಡ್ ಗಳಲ್ಲೂ ತನಿಖೆ ಮಾಡಲು ಸೂಚಿಸಿದ್ದು, ಸಂಪಂಗಿರಾಮನಗರ ವಾರ್ಡ್ ನ ಕಿರಿಯ ಆರೋಗ್ಯಾಧಿಕಾರಿ ಶ್ರೀನಿವಾಸ್ ಅನ್ನು ಕೆಲಸದಿಂದ ವಜಾಗೊಳಿಸಿ ಕಮಿಷನರ್ ಅನಿಲ್ ಕುಮಾರ್ ಆದೇಶಿಸಿದ್ದಾರೆ.
ಈ ವಿಚಾರವಾಗಿ ಭ್ರಷ್ಟರ ವಿರುದ್ಧ ಎಫ್‍ಐಆರ್ ದಾಖಲಿಸಲು ಸೂಚಿಸಲಾಗಿದ್ದು, ಇತ್ತ ಪಬ್ಲಿಕ್ ಟಿವಿ ಮುಂದೆ ಸತ್ಯ ಬಾಯಿಬಿಟ್ಟಿದಕ್ಕೆ ಇಂದು ಪೌರಕಾರ್ಮಿಕರ ಬಯೋಮೆಟ್ರಿಕ್ ಹಾಜರಾತಿಯನ್ನು ಕದಿರೇನಹಳ್ಳಿ ವಾರ್ಡ್‍ನಲ್ಲಿ ತಡೆಹಿಡಿದಿದ್ದರು. ಇದನ್ನೂ ತನಿಖೆಗೆ ಒಳಪಡಿಸಿದ್ದು, ಪೌರಕಾರ್ಮಿಕರ ದುಡ್ಡು ವಸೂಲಿ ಹೀನಾಯ, ಅವಮಾನೀಯ ಕೃತ್ಯ ಎಂದು ಮೇಯರ್ ಮತ್ತು ಕಮಿಷನರ್ ಬೇಸರ ಹೊರಹಾಕಿದರು.
ಈ ಮೂಲಕ ಪೌರಕಾರ್ಮಿಕರ ಸುಲಿಗೆ ಮಾಡುತ್ತಿದ್ದ ಕೆಲ ಅಧಿಕಾರಿಗಳಿಗೆ ವಜಾದ ಶಿಕ್ಷೆಯಾಗಿದೆ. ಇದು ಪಬ್ಲಿಕ್ ಟಿವಿ ವರದಿಯ ಬಿಗ್ ಇಂಪ್ಯಾಕ್ಟ್ ಅಗಿದ್ದು, ಈ ಹಣ ವಸೂಲಿ ದಂಧೆಯ ಬಗ್ಗೆ ಬಿಬಿಎಂಪಿ ಮಾಸಿಕ ಸಭೆಯಲ್ಲೂ ಪ್ರಸ್ತಾಪ ಮಾಡಲಾಗಿದೆ.
ಬೆಂಗಳೂರು: ನನಗೆ ಮುಜುಗರವಾಗುತ್ತಿದೆ ಎಂದು ಸಾರ್ವಜನಿಕವಾಗಿ ಅಧಿಕಾರಿಗಳಿಗೆ ಪತ್ರ ಬರೆದು ಬಿಬಿಎಂಪಿ ಮೇಯರ್ ಸುದ್ದಿ ಆಗಿದ್ದಾರೆ.
ಬಿಬಿಎಂಪಿಯ ಆಗುಹೋಗು, ಬಿಬಿಎಂಪಿಯಿಂದ ಸರ್ಕಾರಕ್ಕೆ ಹೋಗುವ ಕಡತ ಸೇರಿದಂತೆ ಬಿಬಿಎಂಪಿಯಲ್ಲಿ ಆಗುವ ಯಾವ ಕೆಲಸದ ಬಗ್ಗೆಯೂ ಮೇಯರ್ ಗೌತಮ್ ಕುಮಾರ್ ಅವರಿಗೆ ಮಾಹಿತಿ ಹೋಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಮೇಯರ್ ನನಗೆ ಮುಜುಗರವಾಗುತ್ತಿದೆ. ಮಾಧ್ಯಮದ ಜೊತೆ ಮಾತಾನಾಡುವಾಗ ನನ್ನ ಬಳಿ ಮಾಹಿತಿಯೇ ಇರಲ್ಲ, ನನಗೆ ಇನ್ಮುಂದೆ ಎಲ್ಲಾ ಬಿಬಿಎಂಪಿಯ ಮಾಹಿತಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸಿಟ್ಟಿಗೆದ್ದು ಪತ್ರ ಬರೆದಿದ್ದಾರೆ. ಈ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹೊರಗೆ ಚನ್ನಾಗಿ ನಗುನಗುತ್ತಾ ಪೋಸ್ ಕೊಡುವ ಬೆಂಗಳೂರು ಮೇಯರ್ ಕಮೀಷನರ್ ಒಳಗೊಳಗೆ ಕಿತ್ತಾಡ್ತಾರೆ ಎನ್ನುವ ಸುದ್ದಿ ಬಿಬಿಎಂಪಿಯಲ್ಲಿ ಹೆಚ್ಚಾಗಿದೆ. ಹೀಗಾಗಿ ಯೋಜನೆ ವಿವರ, ಗುತ್ತಿಗೆ ಮಾಹಿತಿ, ಅದರ ವ್ಯಾಜ್ಯಗಳು, ಕಾನೂನು ಕೋಶದ ಮಾಹಿತಿ ಯಾವುದು ಇರಲ್ಲ ಎಂದು ಪತ್ರವನ್ನು ಕಮೀಷನರ್‍ಗೂ ರವಾನಿಸಿದ್ದಾರೆ.
ಮೇಯರ್ ಬಹಿರಂಗ ಪತ್ರ ಈಗ ನಾನಾ ವಿವಾದವನ್ನು ಸೃಷ್ಟಿಸಿದೆ. ಬಿಬಿಎಂಪಿಯಲ್ಲಿ ಮೇಯರ್ ಮಾತೇ ನಡೆಯಲ್ಲ. ಇನ್ನು ಈ ಅಧಿಕಾರಿಗಳು ನಮ್ಮ ಮಾತು ಕೇಳ್ಳುತ್ತಾರಾ ಎಂದು ಬೆಂಗಳೂರು ಜನ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾರೆ.
ದಾವಣಗೆರೆ: ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಸದಸ್ಯ ಬಿ.ಜಿ.ಅಜಯ್ ಕುಮಾರ್ ಮೇಯರ್ ಆಗಿ ಹಾಗೂ ಸೌಮ್ಯ ನರೇಂದ್ರ ಕುಮಾರ್ ಉಪಮೇಯರ್ ಆಗಿ ಆಯ್ಕೆಯಾದರು. ಈ ಮೂಲಕ ಪಾಲಿಕೆ ಅಧಿಕಾರ ಬಿಜೆಪಿ ತೆಕ್ಕೆಗೆ ಜಾರಿತು.
ಗದ್ದಲದ ನಡುವೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್‍ನ ಮೇಯರ್ ಹಾಗೂ ಉಪಮೇಯರ್ ಕೋಪಗೊಂಡರು. ಇತ್ತ ಕಾಂಗ್ರೆಸ್ ನಾಯಕರು ಮತದಾನ ಬಹಿಷ್ಕರಿಸಿದರು. ಅಲ್ಲದೆ ಜಿಲ್ಲಾ ಚುನಾವಣಾಧಿಕಾರಿ ವಿ.ಪಿ.ಇಕ್ಕೇರಿ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್‍ನ ಆರು ಜನ ವಿಧಾನ ಪರಿಷತ್ ಸದಸ್ಯರು, 19 ಕಾರ್ಪೊರೇಟರ್‍ಗಳು ಮತದಾನದಲ್ಲಿ ಭಾಗವಹಿಸಿದ್ದರು. ಕೈ ಸದಸ್ಯರಾದ ಶ್ರೀನಿವಾಸ್, ಶ್ವೇತಾ ಶ್ರೀನಿವಾಸ್, ಯಶೋದಾ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿತ್ತು. ಇಕ್ಕೇರಿಯವರ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಯಿತು. ಈ ವೇಳೆ ಕಾಂಗ್ರೆಸ್ ಮುಖಂಡರು ಚುನಾವಣಾ ಪಟ್ಟಿಯಲ್ಲಿ ಸ್ಥಳೀಯರಲ್ಲದ ಎಂಎಲ್‍ಸಿಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಈ ಬಗ್ಗೆ ತನಿಖೆ ನಡೆಸಿದ್ದಾರೆ. ಚುನಾವಣೆಗೆ ಮಾತ್ರ ಸೇರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾದರೂ ಮತದಾನಕ್ಕೆ ಅವಕಾಶ ಕೊಟ್ಟಿರುವುದು ಕಾನೂನು ಬಾಹಿರ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿ, ಸಭಾತ್ಯಾಗ ಮಾಡಿದರು. ನಂತರ ಗದ್ದಲದ ನಡುವೆಯೇ ಚುನಾವಣೆ ನಡೆಯಿತು.
ಈ ಕುರಿತು ಶಾಮನೂರು ಶಿವಶಂಕರಪ್ಪ ಮಾತನಾಡಿ, ಕಾಂಗ್ರೆಸ್‍ನ ಮೂವರು ಸದಸ್ಯರನ್ನು ಬಿಜೆಪಿ ಹಣ ಕೊಟ್ಟು ಖರೀದಿಸಿದೆ. ಈ ಮೂಲಕ ವಾಮಮಾರ್ಗದಿಂದ ಅಧಿಕಾರಕ್ಕೇರಿದೆ. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಬೆಳ್ಳಂಬೆಳ್ಳಗ್ಗೆ ಚಿಕ್ಕಪೇಟೆ ಮತ್ತು ಗಾಂಧಿನಗರ ವಾರ್ಡ್ ನಲ್ಲಿ ಮೇಯರ್ ಗೌತಮ್ ಕುಮಾರ್ ಮತ್ತು ಕಮಿಷನರ್ ಅನಿಲ್ ಕುಮಾರ್ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸಮಸ್ಯೆ ಹೇಳಲು ಬಂದ ಸಾರ್ವಜನಿಕರ ವಿರುದ್ಧ ಮೇಯರ್ ಗರಂ ಆದ ಘಟನೆ ನಡೆದಿದೆ.
ಸಾರ್ವಜನಿಕರು ಮ್ಯಾನ್ ಹೋಲ್ ವಿಚಾರಕ್ಕೆ ಗಾಂಧಿನಗರ ವಾರ್ಡ್ ದೂರು ನೀಡಿದರು. ದೂರಿನಲ್ಲಿ, ಮ್ಯಾನ್ ಹೋಲ್ ಸರಿಯಿಲ್ಲ. ಹಾಗೇ ಹೀಗೆ ಎಂದು ಸಾರ್ವಜನಿಕರು ಕೂಗಾಡಿದರು. ಸಾರ್ವಜನಿಕರ ಏರುಧ್ವನಿಯಲ್ಲಿ ಸಮಸ್ಯೆ ಪ್ರಶ್ನಿಸಿದ್ದಕ್ಕೆ, ನಮಗೆ ಕೆಲಸ ಮಾಡೋದು ಗೊತ್ತಿದೆ. ಜಾಸ್ತಿ ಎಕ್ಸಪ್ಲೈನ್ ಮಾಡಬೇಡಿ. ನಾವು ಕೆಲಸ ಮಾಡೋಕೆ ಬಂದಿರೋದು. ಹೀಗೆ ಮಾತಾಡ್ತಾ ಇದ್ರೆ ನೀವೇ ಮಾಡ್ಕೋಳಿ ನಾವು ಹೋಗ್ತೀವಿ ಎಂದು ಮೇಯರ್ ಕಿಡಿಕಾರಿದರು. ಮೇಯರ್ ಮಾತಿಗೆ ಸಾರ್ವಜನಿಕರು ಸುಮ್ಮನಾದರು.
ತಪಾಸಣೆ ವೇಳೆ ಮೇಯರ್ ಗೆ ಸಮಸ್ಯೆಗಳ ಸುರಿಮಳೆಗಳೇ ಬಂದಿವೆ. ಸಾರ್ವಜನಿಕರ ಸಮಸ್ಯೆಗಳ ದೂರಿನ ಹಿನ್ನೆಲೆ ಜಲಮಂಡಳಿ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡ ಪ್ರಸಂಗವೂ ನಡೆಯಿತು. ಬರೀ ನೀರಿನ ಸಮಸ್ಯೆನೇ ಮನೆಗೆ ನೀರು ನುಗ್ಗುತ್ತೆ. ರೋಡಲ್ಲಿ ನೀರು ನಿಲ್ಲುತ್ತೆ ಅಂತ. ನಿಮ್ಮಿಂದ ನಾವು ಬೈಯಿಸಿಕೊಳ್ಳುವಂತಾಯ್ತು. ಕೆಲಸ ಮಾಡೋಕೆ ಏನ್ರಿ ಅಂತ ಮೇಯರ್ ಅಧಿಕಾರಿಗಳ ವಿರುದ್ಧ ಗರಂ ಆದರು. ಅಲ್ಲದೆ ಜಲಮಂಡಳಿಯಿಂದ ಸರಿಯಾಗಿ ಕೆಲಸ ಮಾಡಿ ಅಂತ ಅಧಿಕಾರಿಗೆ ಸೂಚನೆ ನೀಡಿದರು.
ಸುಭಾಷಿತ ಬರೆದು ಮೇಯರ್‍ಗೆ ಟಾಂಗ್:
ಮೇಯರ್ ಆಗಮನಕ್ಕೆ ಸುಭಾಷಿತ ಬರೆದು ಬಿವಿಕೆ ಅಯ್ಯಂಗಾರ್ ರಸ್ತೆಯ ಸಾರ್ವಜನಿಕರು ಬೋರ್ಡ್ ನೇತು ಹಾಕಿದರು. ಈ ಮೂಲಕ ಮೇಯರ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಮೇಯರ್ ಬಂದರೆ ಬೀದಿಗಳು ಸ್ವಚ್ಛವಾಗುತ್ತೆ, ಮಳೆ ಬಂದರೆ ಊರು ಸ್ವಚ್ಛವಾಗುತ್ತೆ ಎಂದು ಸುಭಾಷಿತ ಬರೆಯುವ ಮೂಲಕ ಮೇಯರ್ ತಪಾಸಣೆಗೆ ವಿರೋಧ ವ್ಯಕ್ತಪಡಿಸಲಾಗಿತ್ತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ತಪಾಸಣೆಯಲ್ಲಿ ಹಲವಾರು ಸಮಸ್ಯೆಗಳು ಕಂಡು ಬಂದಿದೆ. ಇಲ್ಲೇ ಹುಟ್ಟಿ ಬೆಳೆದಿರುವ ಸಂಸದ ಮೋಹನ್ ಅವರ ಸಲಹೆ ಪಡೆದಿದ್ದೇವೆ. ಯಾವ ರೀತಿ ಕಾಮಗಾರಿ ನಡೆಸಬೇಕು. ಕಸ ವಿಲೇವಾರಿ ಸೇರಿದಂತೆ ಹಲವು ಕೆಲಸಗಳ ಬಗ್ಗೆ ಸಲಹೆ ನೀಡಿದ್ದಾರೆ. 10 ರಿಂದ 15 ದಿನಗಳಲ್ಲಿ ಮೀಟಿಂಗ್ ಮಾಡಿ ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.
ಇದೇ ವೇಳೆ ಮೇಯರ್ ಬಂದ್ರೆ ರಸ್ತೆ ಸ್ವಚ್ಛ ಆಗುತ್ತೆ ವಿಚಾರಕ್ಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಜನ ಎಷ್ಟು ಬೈತರೊ ಅಷ್ಟು ನಾವು ಕಲೀತಿವಿ. ಜನ ಹೇಳಿರೋದನ್ನು ಮನಸಲ್ಲಿ ಇಟ್ಟಕೊಂಡು ಕೆಲಸ ಮಾಡುವುದಾಗಿ ತಿಳಿಸಿದರು.