Tag: ಮೇಯರ್

  • ಕುದುರೆ ಸವಾರಿ ಮಾಡಿಕೊಂಡೇ ಜನರ ಸಮಸ್ಯೆ ಆಲಿಸಿದ ಮೈಸೂರು ಮೇಯರ್

    ಕುದುರೆ ಸವಾರಿ ಮಾಡಿಕೊಂಡೇ ಜನರ ಸಮಸ್ಯೆ ಆಲಿಸಿದ ಮೈಸೂರು ಮೇಯರ್

    ಮೈಸೂರು: ನಗರದಲ್ಲಿ ಇಂದು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಎಂ.ಜೆ ರವಿಕುಮಾರ್ ಕುದುರೆ ಸವಾರಿ ಮಾಡುತ್ತಾ ನಗರದ ಸಮಸ್ಯೆ ಆಲಿಸಿದರು.

    ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಮೇಯರ್ ಕುದುರೆ ಓಡಿಸುವ ತರಬೇತಿ ಪಡೆಯುತ್ತಿದ್ದಾರೆ. ಜಂಬೂಸವಾರಿ ಮೆರವಣಿಗೆಯಲ್ಲಿ ಮೇಯರ್ ಹಾಗೂ ಜಿ.ಪಂ ಅಧ್ಯಕ್ಷರು ಭಾಗವಹಿಸುವುದು ಸಂಪ್ರದಾಯವಾಗಿದೆ. ಇದಕ್ಕಾಗಿ ಮೇಯರ್ ಕುದುರೆ ಸವಾರಿ ತಾಲೀಮು ನಡೆಸುತ್ತಿದ್ದಾರೆ. ಹೀಗೆ ಕುದುರೆ ಸವಾರಿ ಮಾಡುತ್ತಾ ನಗರ ಪ್ರದಕ್ಷಿಣೆ ಕೂಡ ಮಾಡಿದರು.

    ಮೈಸೂರಿನ ಕೆ.ಆರ್ ವೃತ್ತ ಸಯ್ಯಾಜಿರಾವ್ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಪರಿಶೀಲನೆ ನಡೆಸಿ ಫುಟ್‍ಪಾತ್ ತೆರವುಗೊಳಿಸುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಿದರು. ಕುದುರೆ ಮೇಲೆ ಕುಳಿತು ವಾಕಿ ಟಾಕಿಯಲ್ಲಿ ಅಧಿಕಾರಿಗಳಿಗೂ ಖಡಕ್ ಎಚ್ಚರಿಕೆ ನೀಡಿದರು. ಕಾರಿನಲ್ಲಿ ಓಡಾಡುತ್ತಾ ನಗರ ಪ್ರದಕ್ಷಿಣೆ ಮಾಡುತ್ತಿದ್ದ ಮೇಯರ್ ಹೀಗೆ ಕುದುರೆಯಲ್ಲಿ ಓಡಾಡುತ್ತಾ ಜನರ ಸಮಸ್ಯೆ ಆಲಿಸಿದ್ದನ್ನು ಜನರು ಕುತೂಹಲದಿಂದ ನೋಡುತ್ತಿದ್ದರು.

  • ಬಿಬಿಎಂಪಿ ತ್ರಿಭಜನೆಗೆ ಸರ್ಕಾರದ ಭರ್ಜರಿ ತಯಾರಿ

    ಬಿಬಿಎಂಪಿ ತ್ರಿಭಜನೆಗೆ ಸರ್ಕಾರದ ಭರ್ಜರಿ ತಯಾರಿ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಅವಧಿ ಸೆಪ್ಟೆಂಬರ್ 28 ಕ್ಕೆ ಅಂತ್ಯವಾಗಲಿದೆ. ಜಿ ಪದ್ಮಾವತಿ ಬಿಬಿಎಂಪಿಯ ಕೊನೆಯ ಮೇಯರ್ ಅಂತಾ ಹೇಳಲಾಗ್ತಿದೆ. ಯಾಕಂದ್ರೆ ಇನ್ಮುಂದೆ ಬಿಬಿಎಂಪಿ ಇರೋದಿಲ್ಲ. ಬದಲಿಗೆ ಬೆಂಗಳೂರಿಗೆ ಮೂರು ಕಾರ್ಪೊರೇಷನ್‍ಗಳು ಬರಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

    ಹೌದು. ಬಿಬಿಎಂಪಿ ಅಂಗಳದ ಸದ್ಯದ ಬಿಸಿಬಿಸಿ ಚರ್ಚೆ ಅಂದ್ರೆ ಬಿಬಿಎಂಪಿ ಮೂರು ಭಾಗವಾಗುತ್ತೆ ಅನ್ನೋದು. ಎರಡು ವರ್ಷಗಳಿಂದ ಬಿಬಿಎಂಪಿಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡ್ಕೊಂಡು ಅಡಳಿತ ಮಾಡ್ತಿರೋ ಕಾಂಗ್ರೆಸ್, ಬಿಬಿಎಂಪಿ ತ್ರಿಭಜನೆಗೆ ಸ್ಕೆಚ್ ಹಾಕಿದೆ. ಅದಕ್ಕಾಗಿ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಬಿಬಿಎಂಪಿ ವಿಸರ್ಜಿಸದೆ ಈಗಿರುವ ಸದಸ್ಯರನ್ನೊಳಗೊಂಡಂತೆ ಮೂರು ಪಾಲಿಕೆ ರಚನೆ ಮಾಡಲಿದೆ.

    ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರೋ ಸರ್ಕಾರ ಈಗಾಗಲೇ 8 ವಲಯಗಳನ್ನು 10 ವಲಯಗಳನ್ನಾಗಿ ಮರುವಿಂಗಡಣೆ ಮಾಡಿ ಆದೇಶಿಸಿದೆ. ಇನ್ನು 198 ವಾರ್ಡ್‍ಗಳನ್ನು ಜನಸಂಖ್ಯೆ ಆಧಾರದಲ್ಲಿ ವಿಂಗಡಿಸಲು ಸರ್ಕಾರ ತಜ್ಞರ ಸಮಿತಿಗೆ ಸೂಚಿಸಿದೆ. ಜನಸಂಖ್ಯೆ ಅಧಾರದಲ್ಲಿ ವಾರ್ಡ್ ಗಳ ಪುನರ್ ರಚನೆ ಬಿ.ಎ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿದೆ. ಜೆಡಿಎಸ್ ಕೈಕೊಡೋ ಸಾಧ್ಯತೆಯಿದ್ದು, ಅಧಿಕಾರ ಉಳಿಸಿಕೊಳೋ ನಿಟ್ಟಿನಲ್ಲಿ ಈ ವಿಂಗಡನೆ ಕಾಂಗ್ರೆಸ್ ಗೆ ನೆರವಾಗಲಿದೆ.

    ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರ್ನಾಟಕ ಮುನ್ಸಿಪಲ್ ತಿದ್ದುಪಡಿ ಕಾಯ್ದೆಗೆ ಅನುಮತಿ ಕೋರಿ ರಾಷ್ಟ್ರಪತಿಗೆ ಕಳುಹಿಸಿದೆ. ಅದಕ್ಕೆ ಇನ್ನೂ ಅನುಮತಿ ದೊರೆತಿಲ್ಲ. ಹೀಗಿರುವಾಗಲೇ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ (ಕೆಎಂಸಿ)ಯಲ್ಲಿ ಅವಕಾಶವಿರುವಂತೆ ಬಿಬಿಎಂಪಿ ವಿಂಗಡಿಸಲು ಸರ್ಕಾರ ಮುಂದಾಗಿದೆ. ಆದ್ರೇ ಈ ಬಗ್ಗೆ ನಗರಾಭಿವೃದ್ಧಿ ಸಚಿವ ಜಾರ್ಜ್ ಅವರನ್ನ ಕೇಳಿದ್ರೆ ಅದೆಲ್ಲ ನಮ್ಮ ವ್ಯಾಪ್ತಿಗಿಲ್ಲ ಅಂತಾರೆ.

    ಕೇಂದ್ರ ಸರ್ಕಾರ ತಿದ್ದುಪಡಿ ಕಾಯ್ದೆಯ ಬಗೆಗಿನ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರದೊಂದಿಗೆ ನಡೆಸಲಾದ ಪತ್ರ ವ್ಯವಹಾರದಲ್ಲಿ ಬಿಬಿಎಂಪಿ ಸೂಪರ್‍ಸೀಡ್ ಮಾಡದಂತೆ ತಿಳಿಸಿದೆ. ಅದಕ್ಕೆ ಸರ್ಕಾರವೂ ಒಪ್ಪಿಗೆ ಸೂಚಿಸಿದ್ದು, ಬಿಬಿಎಂಪಿ ವಿಸರ್ಜಿಸದೆ ತ್ರಿಭಜನೆ ಮಾಡಲು ನಿರ್ಧರಿಸಿದೆ. ಬಿಬಿಎಂಪಿ ತ್ರಿಭಜನೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಬೆಂಗಳೂರು ವ್ಯಾಪ್ತಿಯ ಶಾಸಕರಿಗೆ ಮತ್ತು ಬಿಬಿಎಂಪಿ ಜನಪ್ರತಿನಿಧಿಗಳಿಗೂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ತ್ರಿಭಜನೆ ಯಾರಿಗೆ ವರವಾಗುತ್ತೋ, ಯಾರಿಗೆ ಮುಳ್ಳುವಾಗುತ್ತೋ ಕಾದು ನೋಡ್ಬೇಕಿದೆ.

  • ಮತ್ತೆ ಮೇಷ್ಟ್ರಾದ ಸಿಎಂ- ಮೇಯರ್, ಶಾಸಕರಿಗೆ ಪ್ರಜಾಪ್ರಭುತ್ವದ ಪಾಠ

    ಮತ್ತೆ ಮೇಷ್ಟ್ರಾದ ಸಿಎಂ- ಮೇಯರ್, ಶಾಸಕರಿಗೆ ಪ್ರಜಾಪ್ರಭುತ್ವದ ಪಾಠ

    ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಪಾಠ ಮಾಡೋಕೆ ಶುರುಮಾಡಿದ್ದಾರೆ. ವಿಧಾನಸಭೆ ಕಲಾಪ ಇರಲಿ, ಸಾರ್ವಜನಿಕ ಸಭೆ ಇರಲಿ ಎಲ್ಲಾ ಕಡೆಯೂ ಇದ್ದಕ್ಕಿಂದಂತೆ ಮೇಷ್ಟ್ರಾಗಿ ಬಿಡುತ್ತಾರೆ. ಇವತ್ತು ಕೂಡ ಮೈಸೂರಿನಲ್ಲಿ ಮೇಷ್ಟ್ರಾಗಿದ್ದರು.

    ಮೈಸೂರಿನ ತಮ್ಮ ನಿವಾಸದಲ್ಲಿ ಮೈಸೂರು ಪಾಲಿಕೆ ಮೇಯರ್ ಹಾಗೂ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಅವರು ರಾಜಾತ್ವ-ಪ್ರಜಾಪ್ರಭುತ್ವದ ಕುರಿತು ಪಾಠ ಮಾಡಿದರು. ಮೈಸೂರಿನ ದೇವರಾಜ ಮಾರ್ಕೆಟ್ ದುರಸ್ಥಿ ಕುರಿತು ಮನವಿ ಮಾಡಿದ್ದಕ್ಕೆ ಪಾಠ ಶುರು ಮಾಡಿದ್ರು.

    ರಾಜರು ಎಂದರೆ ಅವರು ದೇವರಲ್ಲ. ಅವರು ಸಹ ಅಂದಿನ ದಿನದಲ್ಲಿ ಸರ್ಕಾರ ನಡೆಸುತ್ತಿದ್ದರು. ಆ ಸರ್ಕಾರಗಳು ವಂಶಪಾರಂಪರ್ಯವಾಗಿದ್ದವು. ಈಗ ಪ್ರಜಾಪ್ರಭುತ್ವದ ಸರ್ಕಾರ ಇದ್ದು ಇಲ್ಲಿ ಜನರಿಂದ ಆಯ್ಕೆ ಆಗುತ್ತಾರೆ ಅಷ್ಟೆ. ಮಹಾರಾಜರು ಜನರಿಗೆ ಹಣವನ್ನ ತಮ್ಮ ಮನೆಯಿಂದ ತಂದುಕೊಡುತ್ತಿರಲಿಲ್ಲ. ಅಂದು ಸಹ ಜನರ ದುಡ್ಡನ್ನೆ ಜನರಿಗೆ ನೀಡುತ್ತಿದ್ದರು. ಮಹಾರಾಜರು ಅದನ್ನು ಕೊಡದೆ ಅವರೇ ಇಟ್ಟುಕೊಳ್ಳೋಕ್ಕೆ ಆಗುತ್ತಿತ್ತಾ? ಎಂದು ಮೇಯರ್ ರವಿಕುಮಾರ್ ಅವರಿಗೆ ಸಿಎಂ ಪ್ರಶ್ನೆ ಹಾಕಿದರು.

    ಈ ಮಧ್ಯೆ ಪಾಲಿಕೆ ಸದಸ್ಯರೊಬ್ಬರು ಈಗ ನೀವೇ ನಮ್ಮ ಮಹಾರಾಜರು ಎಂದಿದ್ದಕ್ಕೆ ಇಲ್ಲ, ನಾನು ಮಹಾರಾಜನಲ್ಲ. ಅಂದು ಮಹಾರಾಜರನ್ನು ಗೌರವದಿಂದ ನೋಡುತ್ತಿದ್ದರು. ಈಗ ನಾವು ರಸ್ತೆಯಲ್ಲಿ ಹೋಗುತ್ತಿದ್ದರೂ ಜನರು ಬೈಯುತ್ತಾರೆ. ಆಗ ದಸರಾ ಮೆರವಣಿಗೆಯಲ್ಲಿ ಮಹಾರಾಜರು ಬಂದಾಗ ಎಲ್ಲರೂ ಎದ್ದು ಕೈ ಮಗಿಯುತ್ತಿದ್ದರು. ಈಗ ಅದೆಲ್ಲ ಆಗುತ್ತಾ? ನಾವು ಜನರ ಪ್ರತಿನಿಧಿಗಳಷ್ಟೇ ಎಂದು ತಮ್ಮ ಮನೆಗೆ ಬಂದು ಜನಪ್ರತಿನಿಧಿಗಳಿಗೆ ರಾಜತ್ವ, ಪ್ರಜಾಪ್ರಭುತ್ವದ ಪಾಠ ಮಾಡಿದರು.

  • 50 ವರ್ಷ ಇತಿಹಾಸವಿರೋ ಬೆಂಗ್ಳೂರಿನ ಈ ರಸ್ತೆಗೆ ತಂದೆಯ ಹೆಸರಿಡಲು ಮುಂದಾದ ಮೇಯರ್

    50 ವರ್ಷ ಇತಿಹಾಸವಿರೋ ಬೆಂಗ್ಳೂರಿನ ಈ ರಸ್ತೆಗೆ ತಂದೆಯ ಹೆಸರಿಡಲು ಮುಂದಾದ ಮೇಯರ್

    – ಪದ್ಮಾವತಿ ವಿರುದ್ಧ ಸಹಿ ಸಂಗ್ರಹ ಅಭಿಯಾನ

    ಬೆಂಗಳೂರು: 50 ವರ್ಷ ಇತಿಹಾಸವಿರೋ ಬೆಂಗಳೂರಿನ ರಸ್ತೆಗೆ ಮೇಯರ್ ಪದ್ಮಾವತಿ ತಮ್ಮ ತಂದೆಯ ಹೆಸರನ್ನ ನಾಮಕರಣ ಮಾಡಲು ಮುಂದಾಗಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯರು ಮೇಯರ್ ವಿರುದ್ಧ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.

    ಮೇಯರ್ ಪದ್ಮಾವತಿ ಅವರು ರಾಜಾಜಿನಗರದ ರಾಮಮಂದಿರ ವಾರ್ಡ್‍ನ ರಸ್ತೆಗೆ ಮರುನಾಮಕರಣ ಮಾಡಲು ಮುಂದಾಗಿದ್ದಾರೆ. ಸುಮಾರು 40 ರಿಂದ 50 ವರ್ಷ ಇತಿಹಾಸವಿರೋ ರಾಮಮಂದಿರ ವಾರ್ಡ್‍ನ 10ನೇ ಮುಖ್ಯರಸ್ತೆಗೆ ಹೊಸ ಹೆಸರು ನಾಮಕರಣ ಮಾಡಲು ಸಿದ್ಧತೆಯಲ್ಲಿದ್ದಾರೆ.

    ಈಗಾಗ್ಲೇ ರಾಮಮಂದಿರ ರಸ್ತೆ ಅಂತ ಫೇಮಸ್ ಆಗಿರೋ ಈ 10ನೇ ಮುಖ್ಯರಸ್ತೆಗೆ ಮೇಯರ್ ಪದ್ಮಾವತಿ ತಮ್ಮ ತಂದೆ ಗೋಪಾಲ್ ಅವ್ರ ಹೆಸರಿಡಲು ಮುಂದಾಗಿದ್ದಾರೆ. ಈ ನಾಮಕರಣ ಪ್ರಕ್ರಿಯೆಗೆ ಶಾಸಕ ಸುರೇಶ್ ಕುಮಾರ್ ಸೇರಿದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

    ಪದ್ಮಾವತಿ ಅವರ ನಡೆ ವಿರೋಧಿಸಿ `ಬೃಹತ್ ಬೆಂಗಳೂರು ನಗರ ನಾಗರೀಕರ ಹಕ್ಕು ಹೋರಾಟ ವೇದಿಕೆ’ ಸಹಿ ಸಂಗ್ರಹ ಮಾಡಿದೆ. ಗೋಪಾಲ್ ರಸ್ತೆ ಅಂತ ಹೆಸರಿಡೋ ಬದಲು ಶ್ರೀ ಕೈಲಾಸ ವೈಕುಂಠ ದೇವಸ್ಥಾನ ರಸ್ತೆ ಅಂತ ನಾಮಕರಣ ಮಾಡಲಿ ಅನ್ನೋದು ಸ್ಥಳೀಯರ ಅಭಿಪ್ರಾಯವಾಗಿದೆ.

    ಮೇಯರ್ ಪದ್ಮಾವತಿ ರಸ್ತೆ ನಾಮಕರಣಕ್ಕೆ ಮುಂದಾಗಿರೋದು ಇದೇ ಮೊದಲಲ್ಲ. ಚಾಮರಾಜಪೇಟೆಯ ಮೊದಲನೇ ಮುಖ್ಯರಸ್ತೆಗೆ ಕರ್ನಾಟಕ ಏಕಿಕರಣಕ್ಕೆ ಶ್ರಮಿಸಿದ ಆಲೂರು ವೆಂಕಟರಾಯರ ಹೆಸರನ್ನ ಇಡಲಾಗಿತ್ತು. ಈ ರಸ್ತೆಗೆ ಟಿಪ್ಪುಸುಲ್ತಾನ್ ರಸ್ತೆ ಅಂತ ಮರುನಾಮಕರಣಕ್ಕೆ ಮೇಯರ್ ಮುಂದಾಗಿದ್ದರು ಎಂದು ಹೇಳಲಾಗಿದೆ.

    ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ರಸ್ತೆ ಮರುನಾಮಕರಣ ಕೈಬಿಟ್ಟ ಪದ್ಮಾವತಿ ಅವರು ಈಗ ಅವರ ತಂದೆ ಗೋಪಾಲ್ ಅವರ ಹೆಸರನ್ನ ರಾಮಮಂದಿರದ ಮುಖ್ಯರಸ್ತೆಗೆ ಇಡಲು ಮುಂದಾಗಿದ್ದಾರೆ.