Tag: ಮೇಯರ್ ಗೌತಮ್ ಕುಮಾರ್

  • ಬೆಂಗ್ಳೂರಿಗರ ಕುಂದು ಕೊರತೆ ನಿವಾರಣೆಗೆ ಬಿಬಿಎಂಪಿ ಹೊಸ ಆ್ಯಪ್ – ಏನಿದು ಆ್ಯಪ್? ಕೆಲಸ ಹೇಗೆ?

    ಬೆಂಗ್ಳೂರಿಗರ ಕುಂದು ಕೊರತೆ ನಿವಾರಣೆಗೆ ಬಿಬಿಎಂಪಿ ಹೊಸ ಆ್ಯಪ್ – ಏನಿದು ಆ್ಯಪ್? ಕೆಲಸ ಹೇಗೆ?

    ಬೆಂಗಳೂರು: ನಗರದ ನಾಗರೀಕರು ತಮ್ಮ ಕುಂದು ಕೊರತೆಗಳನ್ನು ದಾಖಲಿಸಲು ಹಾಗೂ ಪರಿಹರಿಸಲು ಸಹಾಯ ಎನ್ನುವ ತಂತ್ರಾಂಶವನ್ನ ಬಳಸಲಾಗುತ್ತಿದೆ. ಆದರೆ ಆ್ಯಪ್‍ನಿಂದ ನಿಗದಿತ ಸಮಯಕ್ಕೆ ಸಮಸ್ಯೆ ಪರಿಹಾರ ಸಿಗುತ್ತಿರಲಿಲ್ಲ ಮತ್ತು ಅಧಿಕಾರಿಗಳ ಗಮನಕ್ಕೆ ಬರುತ್ತಿರಲಿಲ್ಲ. ಸಮಸ್ಯೆ ಬಗೆಹರಿಸದಿದ್ದರೂ ಎಲ್ಲವೂ ಸರಿಯಾಗಿದೆ ಎಂದು ಸುಳ್ಳು ಮಾಹಿತಿಯನ್ನು ನೀಡುತ್ತಿದ್ದರು. ಆದರೆ ಈಗ ಬೆಂಗಳೂರು ನಗರದ ನಾಗರೀಕರ ಕುಂದು ಕೊರತೆ ನಿವಾರಣೆಗೆ ಅಂತಾ ಬಿಬಿಎಂಪಿ ‘ಸಹಾಯ 2.0’ ಎಂಬ ಹೊಸ ಅವತರಣಿಕೆಯ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರೇ ಈ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ತಂತ್ರಾಂಶ ಸ್ವಯಂಚಾಲಿತವಾಗಿದ್ದು, ಇದರ ಮೂಲಕ ದೂರುಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸ್ವಯಂಚಾಲಿತವಾಗಿ ತಲುಪಲಿದೆ ಎನ್ನಲಾಗಿದೆ.

    ರಸ್ತೆಗುಂಡಿ, ಕಾಮಗಾರಿ ವಿಳಂಬ, ಮರ ತೆರವು, ಮಳೆ, ಬೀದಿನಾಯಿ ಹಾವಳಿ, ಸೊಳ್ಳೆಕಾಟ, ಒಳ ಚರಂಡಿ ಸ್ವಚ್ಛತೆ ಇನ್ನಿತರೆ ಯಾವುದೇ ಸಮಸ್ಯೆಗಳು ಇದ್ದರು ಈ ಆ್ಯಪ್ ಮೂಲಕ ದೂರುಗಳನ್ನ ನೀಡಿ, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

    ಬೆಂಗಳೂರಿನ ನಾಗರೀಕರು ವಿವಿಧ ಇಲಾಖೆಗಳಿಗೆ ಸಲ್ಲಿಸಬೇಕಾದ ದೂರಗಳನ್ನು ಒಂದೇ ತಂತ್ರಾಂಶದ ಮೂಲಕ ದಾಖಲಿಸಲು ‘ನಮ್ಮ ಬೆಂಗಳೂರು’ ಎಂಬ ತಂತ್ರಾಂಶವನ್ನು ಪಾಲಿಕೆ ವತಿಯಿಂದ ಸಿದ್ಧಪಡಿಸಲಾಗಿದೆ. ಇದರಲ್ಲಿ ಬಿಬಿಎಂಪಿ ಸೇರಿದಂತೆ ಬೆಸ್ಕಾಂ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲುಎಸ್‍ಎಸ್‍ಬಿ), ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(ಬಿಎಂಆರ್‍ಸಿಎಲ್), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಇಲಾಖೆಯ ದೂರು ದಾಖಲಾತಿ ತಂತ್ರಾಂಶಗಳನ್ನು ಈ ನಮ್ಮ ಬೆಂಗಳೂರು ಆ್ಯಪ್‍ನಲ್ಲಿ ಸಮೀಕರಣಗೊಳಿಸಲಾಗಿದೆ. ಈ ಆ್ಯಪ್ ಮೂಲಕ ಸಾರ್ವಜನಿಕರು ಲಿಖಿತ ಛಾಯಾಚಿತ್ರ, ವಿಡಿಯೋ ಮತ್ತು ಸ್ಥಳಪರಿಸ್ಥಿತಿ ಬಗ್ಗೆ ವಿವರಣೆ ನೀಡುವ ಮೂಲಕ ಒಂದೇ ವೇದಿಕೆ ಮೂಲಕ ಹಲವಾರು ಇಲಾಖೆಗಳಿಗೆ ಸಂಬಂಧಿಸಿದ ದೂರಗಳನ್ನು ಈ ಆ್ಯಪ್ ಮೂಲಕ ನೀಡಬಹುದಾಗಿದೆ.

    ಪ್ರಮುಖ ವೈಶಿಷ್ಟಗಳೇನು?
    * ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದ ವಿವಿಧ ಮಾದರಿಯ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ವಯಂ ಚಾಲಿತವಾಗಿ ತಲುಪುವಂತೆ ಮಾಡುತ್ತದೆ.
    * ಪಾಲಿಕೆಯ ಅಧಿಕಾರಿಗಳು ನೋಂದಾಯಿತ ದೂರುಗಳನ್ನು ಪರಿಣಾಮಕಾರಿಯಾಗಿ ವಿಲೇವಾರಿ ಮಾಡಲು ಅನುಕೂಲ.

    * ಸಾರ್ವಜನಿಕರಿಂದ ದೂರು ದಾಖಲಾದ ತಕ್ಷಣದಿಂದಲೇ ಅಧಿಕಾರಿಗಳು ತಮ್ಮ ಮೋಬೈಲ್‍ನಲ್ಲಿ ದೂರಿನ ವಿವರವನ್ನು ವೀಕ್ಷಿಸಬಹುದು.* ದೂರನ್ನು ಪರಿಹರಿಸಿದ ನಂತರ ಛಾಯಾಚಿತ್ರವನ್ನು ಸಾರ್ವಜನಿಕರಿಗೆ ತಲುಪಿಸುವಂತಹ ಅವಕಾಶವನ್ನು ಕಲ್ಪಿಸಲಾಗಿದೆ.
    * ಅಧಿಕಾರಿಗಳಿಗೆ ದೂರಿನ ನಿರ್ಧಿಷ್ಟ ಸ್ಥಳವನ್ನು ಗೂಗಲ್ ನಕ್ಷೆಯ ಮೂಲಕ ಗುರುತಿಸುವ ವ್ಯವಸ್ಥೆ
    * ಸಮಯ ಮೀರಿದ ದೂರುಗಳನ್ನು ಮೇಲಾಧಿಕಾರಿಗಳಿಗೆ ತಲುಪಿಸುವ ವ್ಯವಸ್ಥೆ.

  • ಬೆಂಗಳೂರು ಆಸ್ತಿ ಮಾಲೀಕರಿಗೆ ಶಾಕ್!

    ಬೆಂಗಳೂರು ಆಸ್ತಿ ಮಾಲೀಕರಿಗೆ ಶಾಕ್!

    ಬೆಂಗಳೂರು: ನಗರದ ನಾಗರಿಕರಿಗೆ ಬಿಬಿಎಂಪಿ ತೆರಿಗೆ ಮೇಲೆ ಮತ್ತೆ ತೆರಿಗೆ ಬರೆ ಹಾಕಿದೆ. ಸಾರ್ವಜನಿಕರ ಜೇಬಿಗೆ ಪಾಲಿಕೆ ಕತ್ತರಿ ಹಾಕಿದ್ದು, ಶೇಕಡಾ ಎರಡರಷ್ಟು ಹೆಚ್ಚುವರಿ ಸೆಸ್ ಕಟ್ಟುವ ಬಗ್ಗೆ ಬಿಬಿಎಂಪಿ ಇಂದಿನ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ.

    ಆಸ್ತಿ ತೆರಿಗೆ ಜೊತೆಯಲ್ಲೇ, ಈಗಾಗಲೇ ಘನತ್ಯಾಜ್ಯ, ಭಿಕ್ಷುಕರ ಸೆಸ್, ಗ್ರಂಥಾಲಯ ಸೆಸ್‍ಗಳು ಇವೆ. ಇವುಗಳ ಸಾಲಿಗೆ ಭೂಸಾರಿಗೆ ಸೆಸ್ ಸೇರ್ಪಡೆಯಾಗಿದೆ. ಈ ಹಿಂದೆಯೇ ಸಾಕಷ್ಟು ವಿವಾದ ಸೃಷ್ಟಿಸಿದ್ದ, ಭೂಸಾರಿಗೆ ಸೆಸ್ ಕಾಂಗ್ರೆಸ್ ಅವಧಿಯಲ್ಲಿ ಜಾರಿಗೆ ತರದಂತೆ ಬಿಜೆಪಿಯೇ ವಿರೋಧಿಸಿತ್ತು.

    ರಸ್ತೆಯಲ್ಲಿ ಓಡಾಡುವ ವಾಹನಗಳಿಂದ ರಸ್ತೆಗಳು ಬೇಗ ಹಾಳಾಗುತ್ತಿವೆ. ಹೀಗಾಗಿ ರಸ್ತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಿಬಿಎಂಪಿ ಈ ಸೆಸ್ ಅಳವಡಿಸಲು ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವವರಿಗೆ ಇದು ನೇರವಾಗಿ ಹೊರೆಯಾಗಿ ಬೀಳಲಿದೆ. ಏಪ್ರಿಲ್ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿಸುವವರು ಇದರ ಜತೆಗೆ ಭೂ ಸಾರಿಗೆ ತೆರಿಗೆ ಸಹ ಕಟ್ಟಬೇಕಾಗುತ್ತದೆ.

    ಸದ್ಯ ಪ್ರಾಥಮಿಕ ಹಂತದಲ್ಲಿ ಸೆಸ್ ಮಾತ್ರ ಜಾರಿಗೆ ತರಲು ತೀರ್ಮಾನಿಸಿದ್ದು, ಅಧಿಕಾರಿಗಳ ತಂಡ ಭೂ ಸಾರಿಗೆ ತೆರಿಗೆಯ ರೂಪುರೇಷೆಯನ್ನು ಸಿದ್ಧಪಡಿಸಿದ್ದಾರೆ. ಬೆಂಗಳೂರಿನ ನಾಗರಿಕರಿಂದ ವಾರ್ಷಿಕ 150 ಕೋಟಿ ಹೆಚ್ಚಿನ ಆದಾಯದ ನಿರೀಕ್ಷೆ ಇದೆ. ಹೆಚ್ಚುವರಿ ಭೂಸಾರಿಗೆ ಕರವನ್ನು ಸರ್ಕಾರಕ್ಕೆ ಅಥವಾ ಸಾರಿಗೆ ಇಲಾಖೆಗೆ ನೀಡದೆ ಅದೇ ಹಣವನ್ನು ಮತ್ತೆ ರಸ್ತೆ ಅಭಿವೃದ್ಧಿಗೆ ಬಿಬಿಎಂಪಿಯೇ ಬಳಸಲು ನಿರ್ಧಾರಿಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.

    ಇನ್ನೊಂದೆಡೆ ಭೂಸಾರಿಗೆ ಸೆಸ್ ಅನ್ನು ವಿಪಕ್ಷ ತೀವ್ರವಾಗಿ ಖಂಡಿಸಿದೆ. ಜನರಿಗೆ ಟೋಪಿ ಹಾಕಿ ದರ್ಬಾರ್ ಮಾಡಲು ಬಿಬಿಎಂಪಿ ಆಡಳಿತ ಮುಂದಾಗಿದೆ. ಜನರಿಗೆ ಹೊರೆಹಾಕಲು ಕಾಂಗ್ರೆಸ್ ಬಿಡುವುದಿಲ್ಲ. ಭೂ ಸಾರಿಗೆ ಸೆಸ್ ವಿರೋಧಿಸಿ ಕಾಂಗ್ರೆಸ್ ನಾಳೆ ಪ್ರತಿಭಟನೆ ನಡೆಸಲಿದೆ. ಕೌನ್ಸಿಲ್ ಸಭೆ ಆರಂಭಕ್ಕೂ ಮೊದಲೇ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ವಿಪಕ್ಷ ನಾಯಕ ವಾಜಿದ್ ತಿಳಿಸಿದರು.

  • ಹೈಟೆಕ್ ಸ್ಕೈವಾಕ್‍ಗೆ ಚಾಲನೆ

    ಹೈಟೆಕ್ ಸ್ಕೈವಾಕ್‍ಗೆ ಚಾಲನೆ

    ಬೆಂಗಳೂರು: ಹೊಸೂರು ಮುಖ್ಯ ರಸ್ತೆಯ ಸರ್ಜಾಪುರ ಜಂಕ್ಷನ್ ಬಳಿ ನೂತನವಾಗಿ ನಿರ್ಮಾಣವಾದ ಸ್ಕೈವಾಕ್‍ಗೆ ಮೇಯರ್ ಗೌತಮ್ ಕುಮಾರ್, ಸ್ಥಳೀಯ ಶಾಸಕ ರಾಮಲಿಂಗಾರೆಡ್ಡಿ ಹಾಗೂ ಸಂಸದ ತೇಜಸ್ವಿ ಸೂರ್ಯ ಚಾಲನೆ ನೀಡಿದರು.

    ಬಿಬಿಎಂಪಿ ವತಿಯಿಂದ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಹೊಸೂರು ಮುಖ್ಯ ರಸ್ತೆಯ ಸರ್ಜಾಪುರ ಜಂಕ್ಷನ್ ಬಳಿ ನೂತನವಾಗಿ ಸ್ಕೈವಾಕ್ ನಿರ್ಮಿಸಲಾಗಿದೆ. ಹೊಸೂರು ಮುಖ್ಯರಸ್ತೆ ಸರ್ಜಾಪುರ ಜಂಕ್ಷನ್‍ನಲ್ಲಿ ಪಾದಚಾರಿ ಮೇಲ್ಸೇತುವೆಗೆ ಬಹಳ ದಿನಗಳಿಂದ ಬೇಡಿಕೆ ಇತ್ತು. ಸ್ಥಳೀಯರ ಮನವಿ ಮೇರೆಗೆ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲು ಖಾಸಗೀ ಸಂಸ್ಥೆಯ ಸಹಭಾಗಿತ್ವದಲ್ಲಿ ಸುಸಜ್ಜಿತ ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ.

    ವಿನೂತನ ರೀತಿಯಲ್ಲಿ ಸ್ಕೈವಾಕ್ ಅನ್ನು ನಿರ್ಮಿಸಿದ್ದು, ಸಿಸಿಟಿವಿ ಕ್ಯಾಮೆರಾ, ಎರಡೂ ಬದಿಯಲ್ಲಿ ಲಿಫ್ಟ್, ಸಾರ್ವಜನಿಕರು ರಾತ್ರಿ ವೇಳೆ ಸುರಕ್ಷಿತವಾಗಿ ತೆರಳಲು ಎಲ್‍ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ ಎಂದು ಉದ್ಘಾಟನೆ ಬಳಿಕ ಮೇಯರ್ ಗೌತಮ್ ಕುಮಾರ್ ತಿಳಿಸಿದರು.

  • ವಿವಾದಾತ್ಮಕ ಮದ್ಯ ಮಳಿಗೆಯನ್ನ ಬೆಂಬಲಿಸಿದ್ರಾ ಮೇಯರ್!

    ವಿವಾದಾತ್ಮಕ ಮದ್ಯ ಮಳಿಗೆಯನ್ನ ಬೆಂಬಲಿಸಿದ್ರಾ ಮೇಯರ್!

    ಬೆಂಗಳೂರು : ನಗರದ ಎಂಜಿ ರಸ್ತೆಯ ಉದ್ಯಾನವನದಲ್ಲಿರುವ ಗಾಂಧೀಜಿ ಪ್ರತಿಮೆ ಮುಂದೆ ಓಪನ್ ಆಗಿರುವ ಏಷ್ಯಾದ ಅತಿದೊಡ್ಡ ಟಾನಿಕ್ ಮದ್ಯ ಮಳಿಗೆಗೆ ಎಲ್ಲೆಲ್ಲದ ವಿರೋಧ ವ್ಯಕ್ತವಾಗ್ತಿದೆ. ಸಾಮಾಜಿಕ ಕಾರ್ಯಕರ್ತರು, ಚಿಂತಕರು ಎಲ್ಲರೂ ಕೂಡ ಮಳಿಗೆ ಓಪನ್ ಮಾಡಲು ನೀಡಿರುವ ಪರವಾನಗಿ ಪ್ರಶ್ನಿಸಿ ದೂರುಗಳು ಸುರಿಮಳೆ ಬಿಬಿಎಂಪಿಗೆ ನೀಡುತ್ತಿದ್ದಾರೆ. ಇದೀಗ ಮೇಯರ್ ಗೌತಮ್ ಕುಮಾರ್ ಅವರ ಟ್ವೀಟ್ ಮೂಲಕ ವಿವಾದಿತ ಮದ್ಯದ ಮಳಿಗೆಯ ಬೆಂಬಲಿಸಿದ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

    ಗಾಂಧಿ ಪ್ರತಿಮೆ ಮುಂದೆ ಮದ್ಯ ಮಳಿಗೆ ಓಪನ್ ಮಾಡಲು ನೀಡಿರುವ ಪರವಾನಗಿ ರದ್ದು ಕೋರಿ ಹೈಕೋರ್ಟ್ ವಕೀಲ ಎಂ.ವಿ ಅಮರನಾಥನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ರು. ಅರ್ಜಿಯನ್ನು ನ್ಯಾಯಾಮೂರ್ತಿ ರವಿ ಮಳಿಮಠ ಮತ್ತು ನ್ಯಾಯ ಮೂರ್ತಿ ಎಂ ನಾಗಪ್ರಸನ್ನ ಅವರ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.

    ಪ್ರಕರಣದ ಪ್ರತಿವಾದಿಗಳಾದ ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಜಿಲ್ಲಾ ಅಬಕಾರಿ ಆಯುಕ್ತರು, ಬಾರ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೆ ವಿವಾದಾತ್ಮಕ ಮದ್ಯ ಮಳಿಗೆಯ ಫೋಟೋವನ್ನ ಮೇಯರ್ ಗೌತಮ್ ಕುಮಾರ್ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ. ಟಾನಿಕ್ ಮದ್ಯಮಳಿಗೆಯ ಫೋಟೋ ಹಾಕಿಕೊಂಡು ಬೆಂಗಳೂರಿನಲ್ಲಿ ಇರುವ ಎಲ್ಲಾ ಉದ್ದಿಮೆಗಳ ನಾಮಫಲಕಗಳು ಕನ್ನಡದಲ್ಲೆ ಇರಲಿ ಅಂತಾ ಟ್ವಿಟ್ಟರ್ ನಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಕನ್ನಡದಲ್ಲಿ ನಾಮಫಲಕ ಹಾಕಿ ಅಂತಾ ಆದೇಶ ಪಾಲಿಸಿದ್ದಕ್ಕೆ ಮೇಯರ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಮದ್ಯ ಮಳಿಗೆಯ ಪರವಾನಗಿ ರದ್ದುಗೊಳಿಸಿ ಅಂತಾ ಬಿಬಿಎಂಪಿಗೆ ಸಾಕಷ್ಟು ದೂರುಗಳನ್ನ ನೀಡಿದ್ದಾರೆ. ದೂರುಗಳನ್ನ ಪರಿಗಣಿಸಿದೇ ಟ್ವಿಟ್ಟರ್ ನಲ್ಲಿ ಟಾನಿಕ್ ಮದ್ಯ ಮಳಿಗೆ ಫೋಟೋ ಹಾಕಿಕೊಂಡಿರುವುದು ಬೆಂಬಲ ವ್ಯಕ್ತಪಡಿಸಿದರಾ ಅಂತಾ ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ.