Tag: ಮೇಘನಾ ಶಾನಭೋಗ್

  • ಕರ್ನಾಟಕದ ಮೊದಲ ಫೈಟರ್ ಪೈಲಟ್ – ಕನ್ನಡತಿ ಮೇಘನಾ ಶಾನಭೋಗ್ ಸಾಧನೆ

    ಕರ್ನಾಟಕದ ಮೊದಲ ಫೈಟರ್ ಪೈಲಟ್ – ಕನ್ನಡತಿ ಮೇಘನಾ ಶಾನಭೋಗ್ ಸಾಧನೆ

    ನವದೆಹಲಿ: ಕರ್ನಾಟಕ ಮೊದಲ ಯುದ್ಧ ವಿಮಾನ ಮಹಿಳಾ ಪೈಲಟ್ ಆಗಿ ಮೇಘನಾ ಶಾನಭೋಗ್ ಶನಿವಾರ ಆಯ್ಕೆ ಆಗಿದ್ದು, ಇಂತಹ ಸಾಧನೆ ಮಾಡಿದ ಮೊದಲ ಕನ್ನಡತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಮೂಲತಃ ಕರ್ನಾಟಕ ಚಿಕ್ಕಮಗಳೂರಿನ ಜಿಲ್ಲೆಯವರಾದ ಮೇಘನಾ ಅವರ ಹೆಸರನ್ನು ಹೈದರಾಬಾದ್ ದುಂಡಿಗಲ್ ವಾಯುಪಡೆ ಅಕಾಡೆಮಿಯಲ್ಲಿ ನಡೆದ ಪದವಿ ಪಥಸಂಚಲನ ಕಾರ್ಯಕ್ರಮದ ಬಳಿಕ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಮೇಘನಾರೊಂದಿಗೆ ಮತ್ತೊಬ್ಬ ಯುವತಿಯನ್ನು ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆ ಮಾಡಿರುವ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೇಘನಾ ಅವರು, ಭಾರತೀಯ ವಾಯುಪಡೆಯ ಮೊದಲ ಮಹಿಳಾ ಪೈಲಟ್ ಆದ ಅವನಿ ಚತುರ್ವೇದಿ ಸೇರಿದಂತೆ ಭವನ ಕಾಂತ್, ಮೋಹನಾ ಸಿಂಗ್ ಅವರ ಕಥೆಗಳನ್ನು ಓದಿ 2016 ರಲ್ಲಿ ಫೈಟರ್ ಪೈಲಟ್ ಆಗಲು ಸ್ಫೂರ್ತಿ ಪಡೆದಿದ್ದಾಗಿ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಮೇಘನಾ ಅವರ ತಂದೆ ಎಂಕೆ ರಮೇಶ್ ವಕೀಲರಾಗಿದ್ದು, ತಾಯಿ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಅಂದಹಾಗೆ ಮೇಘನಾ ಅವರು ಹೈದರಾಬಾದ್‍ನ ದುಂಡುಗಲ್ ಏರ್ ಫೋರ್ಸ್ ಗೆ 2017 ರ ಜನವರಿಯಲ್ಲಿ ಪ್ರವೇಶ ಪಡೆದಿದ್ದರು. ಇವರೊಂದಿಗೆ ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಉತ್ತರ ಪ್ರದೇಶದ ಯುವತಿಯರು ಸಹ ಸೇರಿದ್ದರು. ಮೇಘನಾ ಅವರು ಮೈಸೂರಿನ ಶ್ರೀ ಜಯ ಚಾಮರಾಜೇಂದ್ರ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಯನ್ನು 2011 ರಿಂದ 2015 ರ ಅವಧಿಯಲ್ಲಿ ಓದಿದ್ದರು. ಬಳಿಕ ಮನಾಲಿ ಯಲ್ಲಿ ಪರ್ವತಾರೋಹಣ ಮತ್ತು ಗೋವಾ ದಲ್ಲಿ ಪ್ಯಾರಾಗ್ಲೈಡಿಂಗ್ ಕೋರ್ಸ್ ಅನ್ನು 2016 ರಲ್ಲಿ ಪೂರ್ಣಗೊಳಿಸಿದ್ದರು. ಹೈದರಾಬಾದ್ ಆಕಾಡೆಮಿಗೆ ಸೇರುವ ಮುನ್ನ ಏರ್ ಫೋರ್ಸ್ ಆಕಾಡೆಮಿಯ ಫ್ಲೈಯಿಂಗ್ ಬ್ರಾಂಚ್ ನ ನಲ್ಲಿ ಫೈಟರ್ ಸ್ಟ್ರೀಮ್ ತರಬೇತಿ ಪೂರ್ಣಗೊಳಿಸಿದ್ದರು.