Tag: ಮೆಲ್ಬರ್ನ್

  • ಜಡೇಜಾ ಬುಲೆಟ್ ಥ್ರೋಗೆ ಸ್ಮಿತ್ ರನೌಟ್ – ಮತ್ತೆ ಮಿಂಚಿದ ಗಿಲ್

    ಜಡೇಜಾ ಬುಲೆಟ್ ಥ್ರೋಗೆ ಸ್ಮಿತ್ ರನೌಟ್ – ಮತ್ತೆ ಮಿಂಚಿದ ಗಿಲ್

    ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ 2ನೇ ದಿನವಾದ ಇಂದು ರವೀಂದ್ರ ಜಡೇಜಾ ಬುಲೆಟ್ ಥ್ರೋ ಮಾಡುವ ಮೂಲಕ ಶತಕದ ಆಟವಾಡಿ ಮುನ್ನುಗುತ್ತಿದ್ದ ಸ್ಟೀವನ್ ಸ್ಮಿತ್ ಅವರನ್ನು ರನೌಟ್ ಮಾಡಿದ್ದಾರೆ. ಈ ವೇಗವಾದ ರನೌಟ್‍ನಿಂದಾಗಿ ತಾನೂ ವಿಶ್ವದ ಅತ್ಯುತ್ತಮ ಫೀಲ್ಡರ್ ಎಂಬುದನ್ನು ಜಡೇಜಾ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

    ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ಮೊದಲ ದಿನದ ಮಳೆಯ ನಡುವೆ ಉತ್ತಮ ಮೊತ್ತ ಕಲೆಹಾಕಿದ್ದ ಆಸೀಸ್ ದಿನದಂತ್ಯಕ್ಕೆ 166 ರನ್ ಮಾಡಿ 2 ವಿಕೆಟ್ ಕಳೆದುಕೊಂಡಿತ್ತು. ಅಲ್ಲಿಂದ 2 ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ಲಬುಶೇನ್, ಮತ್ತು ಸ್ಟೀವನ್ ಸ್ಮಿತ್ ಅವರ ಉತ್ತಮ ಜೊತೆಯಾಟದಿಂದಾಗಿ 338 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಗಿದೆ. ನಿನ್ನೆಯ 166 ರನ್‍ಗೆ ಇಂದು 172ರನ್ ಸೇರಿಸಿ ಆಸ್ಟ್ರೇಲಿಯಾ ಆಲೌಟ್ ಆಯ್ತು.

    ಮೊದಲ ದಿನದಾಟದಲ್ಲಿ 67 ರನ್‍ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮಾರ್ನಸ್ ಲಬುಶೇನ್ 91 ರನ್(196 ಎಸೆತ, 11 ಬೌಂಡರಿ) ಹೊಡೆದು ಶತಕ ವಂಚಿತರಾದರೂ ಇನ್ನೂ 31 ರನ್ ಮಾಡಿ ಲಬುಶೇನ್‍ಗೆ ಜೊತೆಯಾಗಿದ್ದ ಸ್ಮಿತ್ 2ನೇ ದಿನ ಶತಕ ಸಿಡಿಸಿದರು.

    ಆಸ್ಟ್ರೇಲಿಯಾದ ರನ್ ಹೆಚ್ಚಿಸಲು ಬ್ಯಾಟ್ ಬಿಸುತ್ತಿದ್ದ ಸ್ಮಿತ್ 130 ರನ್(226 ಎಸೆತ, 16 ಬೌಂಡರಿ) ಗಳಿಸಿ ಆಟವಾಡುತ್ತಿದ್ದರು. 105ನೇ ಓವರ್ ಎಸೆಯಲು ದಾಳಿಗಿಳಿದ ಬುಮ್ರಾರ 4ನೇ ಎಸೆತವನ್ನು ಆಫ್ ಸೈಡ್‍ನತ್ತ ಹೊಡೆಯಲು ಮುಂದಾದ ಸ್ಮಿತ್ ಬ್ಯಾಟ್‍ಗೆ ಇನ್ ಸೈಡ್ ಎಡ್ಜ್ ಆದ ಚೆಂಡು ಸ್ವೇರ್ ಲೆಗ್‍ನತ್ತ ಹೋಗಿ ಜಡೇಜಾ ಅವರ ಕೈ ಸೇರಿತ್ತು. ಆದರೂ ಎರಡು ರನ್ ಕದಿಯುವ ಸಾಹಸಕ್ಕಿಳಿದ ಸ್ಮಿತ್, ಜಡೇಜಾ ಅವರ ಅತ್ಯುತ್ತಮ ಕ್ಷೇತ್ರ ರಕ್ಷಣೆಗೆ ದಂಡ ತೆರಬೇಕಾಯಿತು. ಇದರೊಂದಿಗೆ ಸ್ಮಿತ್ ಅವರ ಭರ್ಜರಿ ಇನ್ನಿಂಗ್ಸ್ ಕೊನೆಗೊಂಡಿತು.

    ಭಾರತದ ಪರ ಫೀಲ್ಡಂಗ್ ಜೊತೆಗೆ ಬೌಲಿಂಗ್‍ನಲ್ಲಿ ಮಿಂಚಿದ ರವೀಂದ್ರ ಜಡೇಜಾ 4 ವಿಕೆಟ್ ಕಿತ್ತರೆ, ಬುಮ್ರಾ ಮತ್ತು ಸೈನಿ ತಲಾ ಎರಡು ವಿಕೆಟ್ ಪಡೆದರು, ಸಿರಾಜ್ ಒಂದು ವಿಕೆಟ್ ಕಿತ್ತರು.

    ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಮೊದಲ ವಿಕೆಟ್‍ಗೆ 70 ರನ್ ಪೇರಿಸಿತ್ತು ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ 26 ರನ್‍ಗಳಿಸಿ ಔಟಾಗಿ ನಿರಾಸೆ ಮೂಡಿಸಿದರೆ ಇನ್ನೂರ್ವ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ತಮ್ಮ ಮೊದಲ ಅರ್ಧಶತಕ ಸಿಡಿಸಿ ಪ್ಯಾಟ್ ಕಮಿನ್ಸ್‍ಗೆ ವಿಕೆಟ್ ಒಪ್ಪಿಸಿದರು. ಎರಡನೇ ದಿನದಾಟದ ಅಂತ್ಯದ ವೇಳೆ ಭಾರತ 96 ರನ್ ಮಾಡಿ 2 ವಿಕೆಟ್ ಕಳೆದುಕೊಂಡಿದೆ 9 ರನ್ ಮಾಡಿರುವ ಪೂಜಾರ ಮತ್ತು 5 ರನ್ ಗಳಿಸಿ ರಹಾನೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    https://twitter.com/Naveen99688812/status/1347392326637809667

     

  • ಆಸ್ಟ್ರೇಲಿಯಾದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ರಾ ಕೊಹ್ಲಿ, ಪಾಂಡ್ಯ?

    ಆಸ್ಟ್ರೇಲಿಯಾದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ರಾ ಕೊಹ್ಲಿ, ಪಾಂಡ್ಯ?

    ಮೆಲ್ಬರ್ನ್: ರೋಹಿತ್ ಶರ್ಮಾ ಮತ್ತು 4 ಸಹ ಆಟಗಾರರರು ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆಂದು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಟಾರ್ ಅಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಸಿಡ್ನಿಯಲ್ಲಿ ಒಂದು ಬೇಬಿ ಶಾಪ್‍ಗೆ ತೆರಳಿ ಮಾಸ್ಕ್ ಧರಿಸದೆ ಇದ್ದ ಫೋಟೊ ವೈರಲ್ ಆಗುತ್ತಿದೆ. ಇದನ್ನು ನೋಡುತ್ತಿದ್ದಂತೆ ಈ ಇಬ್ಬರು ಆಟಗಾರರು ಕೋವಿಡ್ ನಿಯಮ ಉಲ್ಲಂಘಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ

    ಹೊಸ ವರ್ಷದಂದು ರೆಸ್ಟೂೀರೆಂಟ್‍ಗೆ ತೆರಳಿ ಊಟ ಮಾಡಿದ್ದಾರೆಂಬ ಕಾರಣಕ್ಕೆ ರೋಹಿತ್ ಶರ್ಮಾ ಮತ್ತು 4 ಜನ ಸಹ ಆಟಗಾರರನ್ನು ಉಳಿದ ಆಟಗಾರರಿಂದ ದೂರ ಇರಿಸಲಾಗಿದೆ. ಇವರು ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆಂದು ಕಾರಣ ಕೊಡಲಾಗಿತ್ತು. ಆದರೆ ಭಾರತ ತಂಡ ಸಿಡ್ನಿಯಲ್ಲಿ ಟಿ20 ಸರಣಿ ಆಡುತ್ತಿದ್ದಾಗ ಕೊಹ್ಲಿ ಮತ್ತು ಪಾಂಡ್ಯ ಸಿಡ್ನಿಯ ಬೇಬಿ ಶಾಪ್‍ಗೆ ತೆರಳಿದ್ದರು.

    ಕೊಹ್ಲಿ ಒಂದು ಬ್ಯಾಗ್ ಪೂರ್ತಿ ಗೊಂಬೆಗಳನ್ನು ಮತ್ತು ಪಾಂಡ್ಯ ಮಕ್ಕಳ ಆಟಿಕೆಗಳನ್ನು ಖರೀದಿಸಿದ್ದರು. ನಂತರ ಅಲ್ಲಿನ ಮಹಿಳಾ ಸಿಬ್ಬಂದಿ ಜೊತೆ ನಿಂತು ಫೋಟೊಗೆ ಪೋಸ್ ನೀಡಿದ್ದರು. ಆ ಸಂದರ್ಭ ಯಾರೂ ಕೂಡ ಮಾಸ್ಕ್ ಕೂಡ ಧರಿಸಿರಲಿಲ್ಲ ಈ ಚಿತ್ರಗಳು ಇನ್‍ಸ್ಟಾಗ್ರಾಮ್‍ನಲ್ಲಿ ಹರಿದಾಡುತ್ತಿದ್ದಂತೆ ಇದು ಕೋವಿಡ್ ನಿಯಮ ಉಲ್ಲಂಘನೆಯಂತೆ ಕಾಣಿಸಿಲ್ಲವೇ ಅವರಿಗೊಂದು ನ್ಯಾಯ ಇವರಿಗೊಂದು ನ್ಯಾಯವೇ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

    ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಶೀಘ್ರದಲ್ಲೇ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರೆ, ಪಾಂಡ್ಯ ಐಪಿಎಲ್ ಆಡಲು ಯುಎಇಗೆ ತೆರಳುವ ಮುನ್ನ ಗಂಡು ಮಗುವಿನ ತಂದೆಯಾಗಿದ್ದರು. ಹಾಗಾಗಿ ಬೇಬಿ ಶಾಪ್‍ಗೆ ತೆರಳಿ ಶಾಪಿಂಗ್ ನಡೆಸಿದ್ದರು.

  • ಅಭಿಮಾನಿಯ ವಿಡಿಯೋದಿಂದ ತೊಂದರೆಗೊಳಗಾದ ರೋಹಿತ್ ಆ್ಯಂಡ್ ಟೀಂ

    ಅಭಿಮಾನಿಯ ವಿಡಿಯೋದಿಂದ ತೊಂದರೆಗೊಳಗಾದ ರೋಹಿತ್ ಆ್ಯಂಡ್ ಟೀಂ

    ಮೆಲ್ಬರ್ನ್: ಹೊಸ ವರ್ಷದಂದು ರೆಸ್ಟೋರೆಂಟ್‍ಗೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರಿಗೆ ಅಭಿಮಾನಿಯೋರ್ವ ಬಿಲ್ ನೀಡಿ ಔತಣಕೂಟ ಕೊಟ್ಟ ವಿಡಿಯೋ ವೈರಲ್ ಆಗಿತ್ತು. ಆದರೆ ಅದೇ ವಿಡಿಯೋ ಇದೀಗ ರೋಹಿತ್ ಶರ್ಮಾ ಮತ್ತು 4 ಜನ ಸಹ ಆಟಗಾರರಿಗೆ ತೊಂದರೆಗೊಳಗಾಗುವಂತೆ ಮಾಡಿದೆ.

    ಆಸ್ಟ್ರೇಲಿಯಾದ ವಿರುದ್ಧ ಟೆಸ್ಟ್ ಸರಣಿಗೆಂದು ಹೋಗಿರುವ ಭಾರತೀಯ ಆಟಗಾರರು ಅಲ್ಲಿನ ರೆಸ್ಟೋರೆಂಟ್ ಒಂದಕ್ಕೆ ಭೇಟಿ ನೀಡಿದ ಸಂದರ್ಭ ಅಲ್ಲಿಗೆ ಪತ್ನಿ ಜೊತೆ ಅಭಿಮಾನಿ ನವಲ್‍ದೀಪ್ ಸಿಂಗ್ ಬಂದಿದ್ದರು. ಅವರ ಟೇಬಲ್‍ನ ಮುಂದಿನ ಟೇಬಲ್‍ನಲ್ಲಿ ಕುಳಿತಿದ್ದ ಆಟಗಾರರನ್ನು ನೋಡಿ ಸಂತಸ ಪಟ್ಟ ನವಲ್‍ದೀಪ್ ಕೊನೆಯಲ್ಲಿ ಆಟಗಾರರ ಬಿಲ್ ಪಾವತಿಸಿ ಅವರೊಂದಿಗೆ ಫೋಟೋ ತೆಗಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನವಲ್‍ದೀಪ್ ಸಿಂಗ್ ಹಂಚಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು.

    ಇದನ್ನು ಗಮನಿಸಿದ ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಮುನ್ನೆಚ್ಚರಿಕಾ ಕ್ರಮವಾಗಿ ರೆಸ್ಟೋರೆಂಟ್‍ಗೆ ಭೇಟಿ ನೀಡಿದ ಆಟಗಾರರಾದ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭಮನ್ ಗಿಲ್, ಪೃಥ್ವಿ ಶಾ ಮತ್ತು ನವದೀಪ್ ಸೈನಿ ಅವರನ್ನು ಭಾರತೀಯ ಮತ್ತು ಆಸ್ಟ್ರೇಲಿಯಾ ತಂಡಗಳಿಂದ ದೂರ ಇರುವಂತೆ ಸೂಚಿಸಿದೆ. ಎರಡು ತಂಡಗಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

    ಬಿಸಿಸಿಐ ಮತ್ತು ಸಿಎ ಈ ಬಗ್ಗೆ ತನಿಖೆ ನಡೆಸುತ್ತಿದ್ದು. ಐವರು ಆಟಗಾರರು ಜೀವ ಸುರಕ್ಷತಾ ವಲಯದ(ಬಯೋ ಬಬಲ್) ನಿಯಮವನ್ನು ಉಲ್ಲಂಘನೆ ನಡೆಸಿದ್ದಾರೆಯೇ ಎಂದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದೆ.

     

  • ಅಜಿಂಕ್ಯ ರಹಾನೆಯನ್ನು ಗುಣಗಾನ ಮಾಡಿದ ಸೌರವ್ ಗಂಗೂಲಿ

    ಅಜಿಂಕ್ಯ ರಹಾನೆಯನ್ನು ಗುಣಗಾನ ಮಾಡಿದ ಸೌರವ್ ಗಂಗೂಲಿ

    ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಅಜಿಂಕ್ಯ ರಹಾನೆ ಮತ್ತು ಬಳಗವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೊಲಿ ಗುಣಗಾನ ಮಾಡಿದ್ದಾರೆ.

    ಪ್ರಥಮ ಟೆಸ್ಟ್ ಸೋತು ಕಂಗಾಲಾಗಿದ್ದ ಭಾರತ ಎರಡನೇ ಟೆಸ್ಟ್‍ನಲ್ಲಿ ಕಮ್‍ಬ್ಯಾಕ್ ಮಾಡಿತ್ತು. ಇದರಲ್ಲಿ ಪ್ರಮುಖವಾಗಿ ಅಜಿಂಕ್ಯ ರಹಾನೆ ತಮ್ಮ ನಾಯಕತ್ವದ ಜೊತೆಗೆ ಅಮೋಘ ಶತಕದ ಆಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದನ್ನು ಕಂಡು ಸಂತೋಷಗೊಂಡಿರುವ ಗಂಗೂಲಿ ಅಜಿಂಕ್ಯ ರಹಾನೆ ಮತ್ತು ಇಡೀ ತಂಡವನ್ನು ಶ್ಲಾಘಿಸಿ ವಿಶೇಷ ಪ್ರಯತ್ನದ ಮುಖಾಂತರ ಗೆಲುವು ತಮ್ಮದಾಗಿಸಿಕೊಂಡಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.

    ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ವಿಶೇಷವಾದ ಗೆಲುವು. ಭಾರತ ಇಲ್ಲಿ ಆಟವಾಡಲು ತುಂಬಾ ಇಷ್ಟಪಡುತ್ತದೆ. ಈ ಮೈದಾನದಲ್ಲಿ ಉತ್ತಮವಾಗಿ ಆಡಿದ ಅಜಿಂಕ್ಯ ರಹಾನೆ ಪಡೆಗೆ ಮುಂದಿನ ಎರಡು ಪಂದ್ಯಗಳಿಗೆ ಶುಭವಾಗಲಿ ಎಂದು ಟ್ವೀಟ್‍ನಲ್ಲಿ ಗಂಗೂಲಿ ಶ್ಲಾಘಿಸಿದ್ದಾರೆ.

    ವಿಶೇಷವಾಗಿ ಇದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತಕ್ಕೆ ಸಿಕ್ಕ 4ನೇ ಟೆಸ್ಟ್ ಗೆಲುವು. ವಿದೇಶಿ ನೆಲದಲ್ಲಿ ಭಾರತ ಆಟವಾಡಿ ಹೆಚ್ಚುಬಾರಿ ಗೆದ್ದ ನೆಲಕ್ಕೆ ಮೆಲ್ಬರ್ನ್ ಸಾಕ್ಷಿಯಾಗಿದೆ. ಈ ಹಿಂದೆ ಕ್ವೀನ್ಸ್ ಪಾರ್ಕ್ ಓವೆಲ್ ಟ್ರೆನಿಡಾಡ್, ಸಬಿನಾ ಪಾರ್ಕ್ ಜಮೈಕಾ ಮತ್ತು ಕೊಲಂಬೊದ ಎಸ್‍ಎಸ್‍ಸಿಯಲ್ಲಿ ತಲಾ 3 ಟೆಸ್ಟ್‍ಗಳನ್ನು ಗೆದ್ದಿದ್ದ ದಾಖಲೆಗೆ ಸಾಕ್ಷಿಯಾಗಿತ್ತು

    ಸಂಪೂರ್ಣವಾಗಿ ಈ ಪಂದ್ಯ ರಹಾನೆಯ ಪಾಲಾಗಿತ್ತು. ಆಡಿಲೇಡ್‍ನಲ್ಲಿ ಮೊದಲನೇ ಟೆಸ್ಟ್ ಸೋತು ನಿರಾಸೆ ಅನುಭವಿಸಿದ್ದ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ರಹಾನೆ, ವಿರಾಟ್ ಕೊಹ್ಲಿಯ ಅನುಪಸ್ಥಿತಿಯನ್ನು ಮರೆಮಾಚಿದರು. ಭಾರತದ ಮೊದಲ ಇನ್ನಿಂಗ್ಸ್‍ನಲ್ಲಿ 326 ರನ್ ಗಳಿಸಿತ್ತು. ಈ ಇನ್ನಿಂಗ್ಸ್‍ನಲ್ಲಿ ರಹಾನೆ ಉತ್ತಮವಾಗಿ ಬ್ಯಾಟ್ ಬೀಸಿ 112ರನ್ ಗಳಿಸಿದ್ದರು. ಅಷ್ಟೇ ಅಲ್ಲದೇ ಆಡಿಲೇಡ್‍ನ ಮುಖಭಂಗದಿಂದ ಹೊರಬರಲು ಅಡುವ ಬಳಗದಲ್ಲಿ ಪ್ರಮುಖ ನಾಲ್ಕು ಬದಲಾವಣೆ ಮಾಡಿಕೊಂಡು ಅಂಕಣಕ್ಕೆ ಇಳಿದಿದ್ದ ರಹಾನೆ ತಂಡವನ್ನು ಉತ್ತಮವಾಗಿ ನಿರ್ವಹಿಸಿದರು.

    ಸರ್ವಾಂಗೀಣ ಪ್ರದರ್ಶನವನ್ನು ನೀಡಿದ್ದ ತಂಡಕ್ಕೆ ಬೌಲರ್‍ಗಳಾದ ಜಸ್‍ಪ್ರೀತ್ ಬುಮ್ರಾ, ಆರ್ ಅಶ್ವಿನ್ ಮತ್ತು ಇತರ ಬೌಲರ್‍ಗಳು ಮೇಲುಗೈ ಒದಗಿಸಿಕೊಟ್ಟರೆ, ಬ್ಯಾಟಿಂಗ್ ವಿಭಾಗದಲ್ಲಿ ಅಜಿಂಕ್ಯ ರಹಾನೆ, ಶುಭಮನ್ ಗಿಲ್ ಮತ್ತು ರವೀಂದ್ರ ಜಡೇಜಾ ಭಾರತಕ್ಕೆ ನೆರವಾಗಿದ್ದರು.

    ಬಾಕ್ಸಿಂಗ್ ಡೇ ಟೆಸ್ಟ್‍ನಲ್ಲಿ ಭಾರತ ಗೆಲುವಿನೊಂದಿಗೆ ಸರಣಿಯನ್ನು 1-1 ರಲ್ಲಿ ಸಮಬಲವಾಗಿಸಿದೆ. ಮೂರನೇ ಟೆಸ್ಟ್ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಜನವರಿ 7ರಂದು ಅರಂಭಗೊಳ್ಳಲಿದೆ.

  • ಅರ್ಧದಲ್ಲೇ ಮೈದಾನ ತೊರೆದ ಉಮೇಶ್ ಯಾದವ್

    ಅರ್ಧದಲ್ಲೇ ಮೈದಾನ ತೊರೆದ ಉಮೇಶ್ ಯಾದವ್

    ಮೆಲ್ಬರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಇದೀಗ ಮತ್ತೊಂದು ಅಘಾತ ಎದುರಾಗಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಭಾರತದ ಬಲಗೈ ವೇಗದ ಬೌಲರ್ ಉಮೇಶ್ ಯಾದವ್ ಗಾಯಕ್ಕೆ ತುತ್ತಾಗಿ ಮೈದಾನ ತೊರೆದಿದ್ದಾರೆ.

    ಮೂರನೇ ದಿನದಾಟದ ಆರಂಭದಲ್ಲಿ ಬೌಲಿಂಗ್‍ಗಿಳಿದ ಉಮೇಶ್ ಯಾದವ್ ತಮ್ಮ 4ನೇ ಓವರ್ ಪೂರ್ಣಗೊಳಿಸಲಾಗದೆ ಪೆವಿಲಿಯನ್ ಸೇರಿಕೊಂಡರು. ಮೀನಖಂಡದ ನೋವಿಗೆ ಒಳಗಾದ ಉಮೇಶ್ ಫಿಸಿಯೋ ನಿತೀನ್ ಪಟೇಲ್ ಅವರ ಸಲಹೆಯ ಮೆರೆಗೆ ತಕ್ಷಣ ಮೈದಾನ ತೊರೆಯಬೇಕಾಯಿತು.

    ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ, ಉಮೇಶ್ ಯಾದವ್ ತಮ್ಮ ನಾಲ್ಕನೇ ಓವರ್ ಬೌಲಿಂಗ್ ಮಾಡುತ್ತಿದ್ದಾಗ ಮೀನಖಂಡದ ನೋವಿಗೊಳಗಾಗಿದ್ದಾರೆ. ತಕ್ಷಣ ಬಿಸಿಸಿಐ ವೈದ್ಯಕೀಯ ತಂಡವು ಅವರನ್ನು ಪರೀಕ್ಷಿಸಿದ್ದು, ಸ್ಕ್ಯಾನ್ ಮಾಡಲು ಕರೆದೊಯ್ಯಲಾಗಿದೆ ಎಂದು ಹೇಳಿಕೆ ನೀಡಿದೆ.  ಇದನ್ನೂ ಓದಿ: ಒಂದೇ ದಿನದಲ್ಲಿ 11 ವಿಕೆಟ್‌ ಪತನ – ಆಸ್ಟ್ರೇಲಿಯಾಗೆ 2 ರನ್‌ ಮುನ್ನಡೆ

    ದ್ವಿತಿಯ ಇನ್ನಿಂಗ್ಸ್ ಬ್ಯಾಟಿಂಗ್‍ಗಿಳಿದ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಜೋ ಬ‌ರ್ನ್ಸ್‌ ವಿಕೆಟ್ ಪಡೆದು ಭಾರತಕ್ಕೆ ಆರಂಭಿಕ ಯಶಸ್ಸು ತಂದು ಕೊಟ್ಟ ಯಾದವ್, 3.3 ಓವರ್‍ಗಳಲ್ಲಿ 5 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ತಮ್ಮ ನಾಲ್ಕನೇ ಓವರ್‍ನ ಮೂರು ಬಾಲ್ ಬಾಕಿ ಇರುವಂತೆ ಮೈದಾನದಿಂದ ಹೊರ ನಡೆದ ಉಮೇಶ್ ಯಾದವ್ ಅವರ ಓವರ್‍ನ ಮುಂದಿನ ಮೂರು ಎಸೆತವನ್ನು ಮೊದಲ ಪಂದ್ಯವಾಡುತ್ತಿರುವ ವೇಗಿ ಸಿರಾಜ್ ಪೂರ್ಣಗೊಳಿಸಿದರು.

    ಆಸ್ಟ್ರೇಲಿಯಾ ಸರಣಿಯ ಆರಂಭದಲ್ಲಿ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಹೊರಗುಳಿದಿದ್ದರೆ, ಟೂರ್ನಿಯ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡ ಶಮಿ ತಂಡದಿಂದ ಈಗಾಗಲೇ ಬೇರ್ಪಟ್ಟಿದ್ದಾರೆ. ಇದೀಗ ಉಮೇಶ್ ಯಾದವ್ ಅವರ ಗಾಯದಿಂದಾಗಿ ಟೀ ಇಂಡಿಯಾದ ಗಾಯದ ಮೇಲೆ ಬರೆ ಎಳೆದಂತಾಗಿದೆ.

  • ಬಾಕ್ಸಿಂಗ್‌ ಡೇ ಟೆಸ್ಟ್‌ – 11 ವಿಕೆಟ್‌ ಪತನ, ಚರ್ಚೆಗೆ ಗ್ರಾಸವಾದ ರನೌಟ್‌ ನಿರ್ಧಾರ

    ಬಾಕ್ಸಿಂಗ್‌ ಡೇ ಟೆಸ್ಟ್‌ – 11 ವಿಕೆಟ್‌ ಪತನ, ಚರ್ಚೆಗೆ ಗ್ರಾಸವಾದ ರನೌಟ್‌ ನಿರ್ಧಾರ

    – ಆಸ್ಟ್ರೇಲಿಯಾ 195 ರನ್‌ಗಳಿಗೆ ಆಲೌಟ್‌
    – ಭಾರತ 1 ವಿಕೆಟ್‌ ನಷ್ಟಕ್ಕೆ 36 ರನ್‌

    ಮೆಲ್ಬರ್ನ್‌: ಬಾಕ್ಸಿಂಗ್‌ ಡೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ಮೊದಲ ದಿನವೇ 11 ವಿಕೆಟ್‌ಗಳು ಪತನಗೊಂಡಿದೆ. ಈ ಮೂಲಕ ಎರಡನೇ ಟೆಸ್ಟ್‌ ಪಂದ್ಯದಲ್ಲೂ ಬೌಲರ್‌ಗಳ ಆರ್ಭಟ ಮುಂದುವರಿದಿದೆ.

    ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಟಿಮ್ ಪೈನೆ ರನೌಟ್‌ ನೀಡದಿರುವ ನಿರ್ಧಾರ ಚರ್ಚೆಗೆ ಗ್ರಾಸವಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 72.3 ಓವರ್‌ಗಳಲ್ಲಿ 195 ರನ್‌ಗಳಿಗೆ ಆಲೌಟ್‌ ಆಯ್ತು.

    ಬುಮ್ರಾ 56 ರನ್‌ ನೀಡಿ 4 ವಿಕೆಟ್‌ ಕಿತ್ತರೆ ಅಶ್ವಿನ್‌ 35 ರನ್‌ ನೀಡಿ 3 ವಿಕೆಟ್‌ ಕಿತ್ತರು. ಮೊದಲ ಟೆಸ್ಟ್‌ ಪಂದ್ಯವಾಡಿದ ಮೊಹಮ್ಮದ್‌ ಸಿರಾಜ್‌ 40 ರನ್‌ ನೀಡಿ 2 ವಿಕೆಟ್‌ ಕಿತ್ತರು. ಇದನ್ನೂ ಓದಿ: ಬಾಕ್ಸಿಂಗ್‌ ಡೇ ಟೆಸ್ಟ್‌ ಎಂದರೇನು? ಯಾಕೆ ಈ ಹೆಸರು ಬಂತು?

    ಆಸ್ಟ್ರೇಲಿಯಾದ ಪರವಾಗಿ ಮ್ಯಾಥ್ಯೂ ವೇಡ್‌ 30 ರನ್‌, ಮಾರ್ನಸ್‌ ಲಬುಶೇನ್‌ 48 ರನ್‌, ಟ್ರಾವಿಸ್‌ ಹೆಡ್‌ 38 ರನ್‌, ನಥನ್‌ ಲಿಯಾನ್‌ 20 ರನ್‌ ಹೊಡೆದರು.

    ಅಶ್ವಿನ್‌ ಎಸೆದ 55ನೇ ಓವರಿನ ಕೊನೆಯ ಎಸೆತವನ್ನು ಕ್ಯಾಮರಾನ್‌ ಗ್ರೀನ್‌ ಆಫ್‌ ಸೈಡಿಗೆ ಹೊಡೆದು ಓಡಿದರು. ಈ ವೇಳೆ ಬಾಲ್‌ ಉಮೇಶ್‌ ಯಾದವ್‌ ಕೈ ಸೇರಿತ್ತು. ಯಾದವ್‌ ನೇರವಾಗಿ ಕೀಪರ್‌ ರಿಷಬ್‌ಪಂತ್‌ಗೆ ಎಸೆದರು. ಮೂರನೇ ಅಂಪೈರ್‌ ಔಟ್‌ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೇಳಿ ನಾಟೌಟ್‌ ತೀರ್ಪು ನೀಡಿದರು.

    ರಿಪ್ಲೇಯಲ್ಲಿ ಬೇಲ್ಸ್‌ ಹಾರುವ ಸಮಯದಲ್ಲಿ ಬ್ಯಾಟ್‌ ಗೆರೆಯಿಂದ ಹಿಂದೆ ಇರುವುದು ಸ್ಪಷ್ಟವಾಗಿತ್ತು. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆ ನಡೆಯುತ್ತಿದೆ.

    ಆರಂಭದಲ್ಲೇ ಕುಸಿತ:
    ಮೊದಲ ಇನ್ನಿಂಗ್ಸ್‌ ಆರಂಭಿಸಿದ ಭಾರತ ಆರಂಭದಲ್ಲೇ ಕುಸಿತ ಕಂಡಿದ್ದು 11 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 36 ರನ್‌ ಗಳಿಸಿದೆ. ಆರಂಭಿಕ ಆಟಗಾರ ಮಾಯಂಕ್‌ ಅಗರವ್‌ವಾಲ್‌ ಮೊದಲ ಓವರಿನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಮೊದಲ ಪಂದ್ಯ ಆಡುತ್ತಿರುವ ಶುಭಮನ್‌ ಗಿಲ್‌ 28 ರನ್‌ ಚೇತೇಶ್ವರ ಪೂಜಾರ 7 ರನ್‌ಗಳಿಸಿ ನಾಳೆ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

  • ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗೆ ಕೊರೊನಾ

    ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗೆ ಕೊರೊನಾ

    ಮೆಲ್ಬರ್ನ್: ಇತಿಹಾಸ ಸೃಷ್ಟಿಸಿದ್ದ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ಈಗ ಅಪಖ್ಯಾತಿಗೆ ಗುರಿಯಾಗಿದೆ.

    ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ಮಾರ್ಚ್ 8ರಂದು ಮೆಲ್ಬರ್ನ್ ನಲ್ಲಿ ನಡೆದಿತ್ತು. ಈ ವೇಳೆ ಪಂದ್ಯ ನೋಡಲು ಬಂದಿದ್ದ ಓರ್ವ ಕ್ರಿಕೆಟ್ ಅಭಿಮಾನಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.

    ಮೆಲ್ಬರ್ನ್ ಸ್ಟೇಡಿಯಂನ ಉತ್ತರ ಭಾಗದ 2ನೇ ಹಂತದ ಸ್ಟ್ಯಾಂಡ್‍ನ ಎನ್ 42 ಸೀಟ್‍ನಲ್ಲಿ ಕುಳಿತಿದ್ದ ವ್ಯಕ್ತಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ (ಡಿಎಚ್‍ಹೆಚ್‍ಎಸ್)ಯು ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಪ್ರೇಕ್ಷಕರು ದಯವಿಟ್ಟು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡಿದೆ ಎಂದು ವರದಿಯಾಗಿದೆ.

    ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಪಂದ್ಯ ವೀಕ್ಷಿಸಲು 86,174 ಮಂದಿ ಆಗಮಿಸಿದ್ದರು. ಈ ಮೂಲಕ ಅತಿ ಹೆಚ್ಚು ಮಂದಿ ವೀಕ್ಷಿಸಿದ ಮಹಿಳಾ ಕ್ರಿಕೆಟ್ ಪಂದ್ಯ ಎಂಬ ದಾಖಲೆಯನ್ನು ಬರೆದಿದೆ. ಇದರ ಜೊತೆಗೆ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಅಭಿಮಾನಿಗಳು ವೀಕ್ಷಿಸಿದ ಮಹಿಳಾ ಪಂದ್ಯ ಎಂಬ ಮತ್ತೊಂದು ದಾಖಲೆಯನ್ನು ಬರೆದಿದೆ.

    ಮೆಲ್ಬರ್ನ್ ಸ್ಟೇಡಿಯಂ 1,00,024 ಆಸನ ಸಾಮರ್ಥ್ಯ ಹೊಂದಿದ್ದು ಇಲ್ಲಿಯವರೆಗೆ ವಿಶ್ವದ ಅತಿ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು. ಈಗ ಗುಜರಾತಿನ ಅಹಮದಾಬಾದಿನ ಮೊಟೆರಾ ಸ್ಟೇಡಿಯಂ ವಿಶ್ವದ ನಂಬರ್ ಒನ್ ಸ್ಟೇಡಿಯಂ ಆಗಿದ್ದು, 1.10 ಲಕ್ಷ ಮಂದಿ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ.

    185 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 19.1 ಓವರಿನಲ್ಲಿ 99 ರನ್‍ಗಳಿಗೆ ಸರ್ವಪತನ ಕಂಡಿತು. 85 ರನ್ ಗಳಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯಾ 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಭಾರತ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.

  • 4 ಓವರ್‌ಗಳಲ್ಲಿ 24 ರನ್ ನೀಡಿ, 4 ವಿಕೆಟ್ ಕಿತ್ತ ರಾಧಾ- ಶ್ರೀಲಂಕಾಗೆ 7 ವಿಕೆಟ್ ಸೋಲು

    4 ಓವರ್‌ಗಳಲ್ಲಿ 24 ರನ್ ನೀಡಿ, 4 ವಿಕೆಟ್ ಕಿತ್ತ ರಾಧಾ- ಶ್ರೀಲಂಕಾಗೆ 7 ವಿಕೆಟ್ ಸೋಲು

    – ಗೆಲುವಿನ ಓಟ ಮುಂದುವರಿಸಿದ ಭಾರತ
    – ಅರ್ಧ ಶತಕ ಕೈಚೆಲ್ಲಿಕೊಂಡ ಶೆಫಾಲಿ
    – ಕೊನೆಗೂ ಎರಡಂಕಿ ರನ್ ದಾಟಿದ ಕೌರ್

    ಮೆಲ್ಬರ್ನ್: ಶೆಫಾಲಿ ವರ್ಮಾ ಬ್ಯಾಟಿಂಗ್ ಹಾಗೂ ರಾಧಾ ಯಾದವ್ ಬೌಲಿಂಗ್ ಸಹಾಯದಿಂದ ಭಾರತ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ 7 ವಿಕೆಟ್‍ಗಳಿಂದ ಗೆದ್ದು ಬೀಗಿದೆ.

    ಮೆಲ್ಬರ್ನ್ ನ ಜಂಕ್ಷನ್ ಓವಲ್‍ನಲ್ಲಿ ನಡೆದ ಎ ಗುಂಪಿನ ತನ್ನ ಕೊನೆ ಪಂದ್ಯದಲ್ಲಿ ಭಾರತದ 32 ಎಸೆತಗಳು ಬಾಕಿ ಇರುವಂತೆ ಶ್ರೀಲಂಕಾವನ್ನು ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಭಾರತಕ್ಕೆ 114 ರನ್‍ಗಳ ಗುರಿ ನೀಡಿತ್ತು. ಭಾರತ ತಂಡ 14.4 ಓವರ್‌ಗಳಲ್ಲಿ 3 ವಿಕೆಟ್‍ಗಳನ್ನು ಕಳೆದುಕೊಂಡು ಗುರಿಯನ್ನು ತಲುಪಿತು.

    ಭಾರತದ ಓಪನರ್ ಶೆಫಾಲಿ ವರ್ಮಾ 47 ರನ್ (34 ಎಸೆತ, 7 ಬೌಂಡರಿ, 1 ಸಿಕ್ಸ್) ಗಳಿಸಿದರು. ಅವರು ಈ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಅರ್ಧಶತಕ ಕೈಚೆಲ್ಲಿಕೊಂಡರು. ಕ್ಯಾಪ್ಟನ್ ಹರ್ಮನ್‍ಪ್ರೀತ್ ಕೌರ್ ಕೊನೆಗೂ ಈ ಪಂದ್ಯದಲ್ಲಿ ಎರಡಂಕಿ ರನ್ ದಾಟಿದ್ದಾರೆ. ಆದರೆ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸ್ಮೃತಿ ಮಂದನಾ 17 ರನ್ ಗಳಿಸಿದರು.

    ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 9 ವಿಕೆಟ್ ನಷ್ಟದಲ್ಲಿ 113 ರನ್ ಗಳಿಸಿತ್ತು. ಕ್ಯಾಪ್ಟನ್ ಚಮರಿ ಅಟ್ಟಪಟ್ಟ್ 33 ರನ್ (24 ಎಸೆತ, 5 ಬೌಂಡರಿ, 1 ಸಿಕ್ಸ್) ಹಾಗೂ ಕವಿಶಾ ಡೆಲ್ಹಾರಿ 25 ರನ್ (16 ಎಸೆತ, 2 ಬೌಂಡರಿ) ಗಳಿಸಿದರು. ಉಳಿದಂತೆ 6 ಆಟಗಾರರು ಎರಡಂಕಿ ರನ್ ಗಳಿಸುವಲ್ಲಿ ವಿಫಲರಾದರು.

    ರಾಧಾ ಯಾದವ್ ಭಾರತ ಪರ ಅದ್ಭುತ ಬೌಲಿಂಗ್ ಮಾಡಿದರು. ಅವರು 4 ಓವರ್‌ಗಳಲ್ಲಿ 23 ರನ್ ನೀಡಿ, 4 ವಿಕೆಟ್ ಪಡೆದರು. ಉಳಿದಂತೆ ರಾಜೇಶ್ವರಿ 2 ವಿಕೆಟ್ ಪಡೆದರೆ, ಶಿಖಾ ಪಾಂಡೆ, ದೀಪ್ತಿ ಶರ್ಮಾ ಹಾಗೂ ಪೂನಂ ಯಾದವ್ ತಲಾ ಒಂದು ವಿಕೆಟ್ ಕಿತ್ತರು.

    ಕೌರ್, ಮಂದನಾ ವೈಫಲ್ಯ:
    ಸ್ಮೃತಿ ಮಂದನಾ ಮತ್ತು ನಾಯಕಿ ಹರ್ಮನ್‍ಪ್ರೀತ್ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದ್ದಾರೆ. ಸ್ಮೃತಿ 17 ರನ್ ಮತ್ತು ಕೌರ್ 15 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಈ ಟೂರ್ನಿಯಲ್ಲಿ ಇದುವರೆಗೆ ಉತ್ತಮ ಪ್ರದರ್ಶನ ನೀಡುತ್ತಿರುವ ಶೆಫಾಲಿ, ಮತ್ತೆ ಬ್ಯಾಟ್‍ನ ಮ್ಯಾಜಿಕ್ ತೋರಿಸಿದರು. ಅವರು 47 ರನ್ ಗಳಿಸಿದರು. ಆದರೆ ಶೆಫಾಲಿ ಸತತ ಎರಡನೇ ಬಾರಿ ಅರ್ಧಶತಕವನ್ನು ಕಳೆದುಕೊಂಡಿದ್ದಾರೆ.

    ಈಗಾಗಲೇ ಸೆಮಿ ತಲುಪಿರುವ ಭಾರತ:
    ಈ ಟೂರ್ನಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ, ಎರಡೂ ಪಂದ್ಯಗಳಲ್ಲಿ ಸೋಲು ಕಂಡ ಶ್ರೀಲಂಕಾ ಸೆಮಿಫೈನಲ್‍ನಿಂದ ಹೊರಬಿದ್ದಿದೆ. ಮೊದಲ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು 17 ರನ್, ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 18 ರನ್‍ಗಳಿಂದ ಸೋಲಿಸಿತ್ತು. ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್‍ನ್ನು 3 ರನ್‍ಗಳಿಂದ ಮಣಿಸಿತ್ತು.

    ಶೆಫಾಲಿ, ಪೂನಂ ಅದ್ಭುತ ಪ್ರದರ್ಶನ:
    ಓಪನರ್ ಸ್ಮೃತಿ ಮಂದಾನಾ ಮತ್ತು ಹರ್ಮನ್‍ಪ್ರೀತ್ ಅವರು ಈವರೆಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲತೆ ತೋರಿದರು. ಅಂತಹ ಪರಿಸ್ಥಿತಿಯಲ್ಲಿ ಈ ಆಟಗಾರರಿಗೆ ಸೆಮಿಫೈನಲ್ ಪಂದ್ಯದ ಮೊದಲು ಶ್ರೀಲಂಕಾ ವಿರುದ್ಧ ಅವಕಾಶವಿತ್ತು. ಓಪನರ್ ಶೆಫಾಲಿ ವರ್ಮಾ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಉತ್ತಮ ಆರಂಭವನ್ನು ಹೊಂದಿದ್ದಾರೆ. ಲೆಗ್ ಸ್ಪಿನ್ನರ್ ಪೂನಂ ಯಾದವ್ ಟೂರ್ನಿಯಲ್ಲಿ ಒಟ್ಟು 9 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

  • ‘ವಾವ್ ಸಹೋದರ ವಾವ್’- ಶೆಫಾಲಿ ವರ್ಮಾ ರಾಕ್‍ಸ್ಟಾರ್ ಎಂದ ಸೆಹ್ವಾಗ್

    ‘ವಾವ್ ಸಹೋದರ ವಾವ್’- ಶೆಫಾಲಿ ವರ್ಮಾ ರಾಕ್‍ಸ್ಟಾರ್ ಎಂದ ಸೆಹ್ವಾಗ್

    – ಶೆಫಾಲಿ ಸೆಹ್ವಾಗ್‍ರನ್ನು ನೆನಪಿಸುತ್ತಾಳೆ: ಡಯಾನಾ ಎಡುಲ್ಜಿ

    ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ತಂಡವು ಹ್ಯಾಟ್ರಿಕ್ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಿದೆ. ಈ ಪ್ರಯಾಣದಲ್ಲಿ ಹರಿಯಾಣದ 16 ವರ್ಷದ ಶೆಫಾಲಿ ವರ್ಮಾ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ, ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶೆಫಾಲಿ ವರ್ಮಾ ಬಗ್ಗೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಹಾಗೂ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ವಿರೇಂದ್ರ ಸೆಹ್ವಾಗ್, ಶೆಫಾಲಿ ಅವರನ್ನು ರಾಕ್‍ಸ್ಟಾರ್ ಎಂದು ಬಣ್ಣಿಸಿದ್ದಾರೆ. ಜೊತೆಗೆ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟ ಭಾರತ ಮಹಿಳಾ ತಂಡಕ್ಕೆ ಅಭಿನಂದನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 34 ಎಸೆತಗಳಲ್ಲಿ 46 ರನ್- ಟಿ20 ವಿಶ್ವಕಪ್‍ನಲ್ಲಿ ವಿಶ್ವದಾಖಲೆ ಬರೆದ 16ರ ಶೆಫಾಲಿ

    ಶೆಫಾಲಿ ಅದ್ಭುತಗಳನ್ನು ಮಾಡಬಹುದು:
    ಭಾರತದ ಶೆಫಾಲಿ ವರ್ಮಾ ನ್ಯೂಜಿಲೆಂಡ್ ವಿರುದ್ಧ ಫೆಬ್ರವರಿ 27ರ ಗುರುವಾರ ನಡೆದ ಪಂದ್ಯದಲ್ಲಿ 34 ಎಸೆತಗಳಲ್ಲಿ 46 ರನ್ ಗಳಿಸಿದರು. ಈ ಪಂದ್ಯದಲ್ಲಿ ಉಳಿದ ಯಾವುದೇ ಆಟಗಾರರು ಉತ್ತಮ ಬ್ಯಾಟಿಂಗ್ ತೋರಲಿಲ್ಲ. ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಶೆಫಾಲಿ ವರ್ಮಾ ಇದುವರೆಗೆ ಒಟ್ಟು ಮೂರು ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ ಎರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ, ಪಂದ್ಯಶ್ರೇಷ್ಠಕ್ಕೆ ಭಾಜನರಾಗಿದ್ದಾರೆ.

    ಶೆಫಾಲಿ ಬ್ಯಾಟಿಂಗ್ ಬಗ್ಗೆ ಮಾತನಾಡಿರುವ ಇಂಗ್ಲೆಂಡ್‍ನ ಮಾಜಿ ನಾಯಕ ನಾಸಿರ್ ಹುಸೇನ್, ಶೆಫಾಲಿ ತುಂಬಾ ಗಂಭೀರವಾಗಿ ಆಡುತ್ತಾರೆ. ಜೊತೆಗೆ ಅವರು ಅದ್ಭುತಗಳನ್ನು ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕೊನೆಯ ಓವರಿನಲ್ಲಿ 3 ರನ್‍ಗಳ ರೋಚಕ ಜಯ- ಹ್ಯಾಟ್ರಿಕ್ ಗೆಲುವು, ಸೆಮಿಗೆ ಟೀಂ ಇಂಡಿಯಾ

    ಭಾರತೀಯ ಮಹಿಳಾ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಮಾತನಾಡಿ, ಮಹಿಳಾ ಕ್ರಿಕೆಟ್ ವೀಕ್ಷಿಸಲು ಜನರನ್ನು ಕ್ರೀಡಾಂಗಣಕ್ಕೆ ಕರೆತರುವ ಶಕ್ತಿ ಶೆಫಾಲಿಗೆ ಇದೆ. ಅವರನ್ನು ಬೇರೆಯವರಿಗೆ ಹೋಲಿಸಲು ನಾನು ಬಯಸುವುದಿಲ್ಲ. ಆದರೆ ಶೆಫಾಲಿ ಖಂಡಿತವಾಗಿಯೂ ವೀರೇಂದ್ರ ಸೆಹ್ವಾಗ್ ಅವರನ್ನು ನೆನಪಿಸುತ್ತಾಳೆ ಎಂದು ನಾನು ಹೇಳುತ್ತೇನೆ. ಆಕ್ರಮಣಕಾರಿ ಬ್ಯಾಟಿಂಗ್ ಶೆಫಾಲಿ ಹೊಂದಿದ್ದಾರೆ ಎಂದು ಬಣ್ಣಿಸಿದ್ದಾರೆ.

    ರಾಕ್‍ಸ್ಟಾರ್ ಶಫಾಲಿ:
    ಮಹಿಳಾ ವಿಶ್ವಕಪ್‍ನಲ್ಲಿ ಭಾರತ ತಂಡದ ಕ್ಯಾಪ್ಟನ್ ಹರ್ಮನ್‍ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಾನ ಅವರ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಶೆಫಾಲಿ ವರ್ಮಾ ಉತ್ತಮ ಬ್ಯಾಟಿಂಗ್ ನಡೆಸಿದ್ದಾರೆ. ವಿರೇಂದ್ರ ಸೆಹ್ವಾಗ್ ಕೂಡ ಶೆಫಾಲಿ ವರ್ಮಾ ಅಭಿಮಾನಿ. ಗುರುವಾರ ನ್ಯೂಜಿಲೆಂಡ್ ವಿರುದ್ಧದ ಶೆಫಾಲಿ ಅವರ ಇನ್ನಿಂಗ್ಸ್ ವೀಕ್ಷಿಸಿದ ನಂತರ ವೀರು ಟ್ವೀಟ್ ಮಾಡಿದ್ದಾರೆ. ‘ವಾವ್, ಸಹೋದರ. ವಾವ್’ ಶೆಫಾಲಿ ವರ್ಮಾ ರಾಕ್‍ಸ್ಟಾರ್ ಎಂದು ಹೊಗಳಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಶೆಫಾಲಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹುಡುಗರೊಂದಿಗೆ ಅಭ್ಯಾಸ:
    16 ವರ್ಷದ ಶೆಫಾಲಿ ಎರಡು ವರ್ಷಗಳ ಹಿಂದೆ ರೋಹ್ಟಕ್‍ನ ಕ್ರಿಕೆಟ್ ಅಕಾಡೆಮಿಯಲ್ಲಿ ಹುಡುಗರೊಂದಿಗೆ ಅಭ್ಯಾಸ ಮಾಡುತ್ತಿದ್ದಳು. 130 ಕಿ.ಮೀ ವೇಗದಲ್ಲಿ ಬರುವ ಹರಿಯಾಣ ವೇಗದ ಬೌಲರ್ ಆಶಿಶ್ ಹೂಡಾ ಅವರ ಬಾಲ್‍ಗಳನ್ನು ಸುಲಭವಾಗಿ ನೆಟ್‍ನಲ್ಲಿ ಶೆಫಾಲಿ ಆಡಬಹುದೆಂದು ತರಬೇತುದಾರ ಅಶ್ವಿನಿ ಕುಮಾರ್ ಹೇಳಿದ್ದಾರೆ. ಟಿ20 ವಿಶ್ವಕಪ್‍ನಲ್ಲಿ ಶೆಫಾಲಿ ಉತ್ತಮ ಆಟವನ್ನು ತೋರಿಸುತ್ತಾರೆ ಎಂದು ನನಗೆ ಬಹಳ ಖಚಿತವಾಗಿತ್ತು ಎಂದು ಅಶ್ವಿನಿ ಕುಮಾರ್ ತಿಳಿಸಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಶೆಫಾಲಿ ವರ್ಮಾ 34 ಎಸೆತಗಳಲ್ಲಿ 46 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿ, ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಇದರೊಂದಿಗೆ ಶೆಫಾಲಿ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ.

    ಐಸಿಸಿ ಮಹಿಳಾ ಟಿ20 ವಿಶ್ವಕಪ್ 2020ರಲ್ಲಿ ಉತ್ತಮ ಬ್ಯಾಟಿಂಗ್ ಶೆಫಾಲಿ ವರ್ಮಾ ತೋರುತ್ತಿದ್ದಾರೆ. ಕಳೆದ ಮೂರು ಪಂದ್ಯಗಳಿಂದ ಶೆಫಾಲಿ ವರ್ಮಾ 172.72 ರ ಸರಾಸರಿಯಲ್ಲಿ ಒಟ್ಟು 114 ರನ್ ಗಳಿಸಿದ್ದರು. ಈ ಮೂಲಕ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಒಂದೇ ಟೂರ್ನಿಯಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಪಡೆದ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ.

    16 ವರ್ಷದ ಶೆಫಾಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ 29 ರನ್ (19 ಎಸೆತ, 5 ಬೌಂಡರಿ, 1 ಸಿಕ್ಸ್) ಹಾಗೂ ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಲ್ಲಿ 39 ರನ್ (17 ಎಸೆತ, 2 ಬೌಂಡರಿ, 4 ಸಿಕ್ಸರ್) ಸಿಡಿಸಿದ್ದರು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ತೋರಿದ್ದ ಶೆಫಾಲಿ 46 ರನ್ (34 ಎಸೆತ, 4 ಬೌಂಡರಿ, 3 ಸಿಕ್ಸರ್) ಚಚ್ಚಿದ್ದರು.

  • 34 ಎಸೆತಗಳಲ್ಲಿ 46 ರನ್- ಟಿ20 ವಿಶ್ವಕಪ್‍ನಲ್ಲಿ ವಿಶ್ವದಾಖಲೆ ಬರೆದ 16ರ ಶೆಫಾಲಿ

    34 ಎಸೆತಗಳಲ್ಲಿ 46 ರನ್- ಟಿ20 ವಿಶ್ವಕಪ್‍ನಲ್ಲಿ ವಿಶ್ವದಾಖಲೆ ಬರೆದ 16ರ ಶೆಫಾಲಿ

    ಮೆಲ್ಬರ್ನ್: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಶೆಫಾಲಿ ವರ್ಮಾ 34 ಎಸೆತಗಳಲ್ಲಿ 46 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿ, ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಇದರೊಂದಿಗೆ ಶೆಫಾಲಿ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ.

    ಐಸಿಸಿ ಮಹಿಳಾ ಟಿ20 ವಿಶ್ವಕಪ್ 2020ರಲ್ಲಿ ಉತ್ತಮ ಬ್ಯಾಟಿಂಗ್ ಶೆಫಾಲಿ ವರ್ಮಾ ತೋರುತ್ತಿದ್ದಾರೆ. ಕಳೆದ ಮೂರು ಪಂದ್ಯಗಳಿಂದ ಶೆಫಾಲಿ ವರ್ಮಾ 172.72 ರ ಸರಾಸರಿಯಲ್ಲಿ ಒಟ್ಟು 114 ರನ್ ಗಳಿಸಿದ್ದಾರೆ. ಈ ಮೂಲಕ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಒಂದೇ ಟೂರ್ನಿಯಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಪಡೆದ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ.

    16 ವರ್ಷದ ಶೆಫಾಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ 29 ರನ್ (19 ಎಸೆತ, 5 ಬೌಂಡರಿ, 1 ಸಿಕ್ಸ್) ಹಾಗೂ ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಲ್ಲಿ 39 ರನ್ (17 ಎಸೆತ, 2 ಬೌಂಡರಿ, 4 ಸಿಕ್ಸರ್) ಸಿಡಿಸಿದ್ದರು. ಇಂದಿನ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ತೋರಿದ ಶೆಫಾಲಿ 46 ರನ್ (34 ಎಸೆತ, 4 ಬೌಂಡರಿ, 3 ಸಿಕ್ಸರ್) ಚಚ್ಚಿದರು.

    ಮೆಲ್ಬರ್ನ್ ನಲ್ಲಿ ಮಹಿಳೆಯರ ಟಿ20 ವಿಶ್ವಕಪ್ ಭಾಗವಾಗಿ ನ್ಯೂಜಿಲೆಂಡ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಕೊನೆಯ ಓವರಿನಲ್ಲಿ ಗೆದ್ದು ಬೀಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 8 ವಿಕೆಟ್‍ಗೆ 133 ರನ್ ಗಳಿಸಿತ್ತು. ಆದರೆ ನ್ಯೂಜಿಲೆಂಡ್ ತಂಡವು 6 ವಿಕೆಟ್‍ಗೆ 130 ರನ್ ಗಳಿಸಿ ಸೋಲು ಕಂಡಿತು. ಈ ಮೂಲಕ ಭಾರತದ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

    ಹುಡುಗರೊಂದಿಗೆ ಕ್ರಿಕೆಟ್:
    ಟಿ20 ವಿಶ್ವಕಪ್ ಪಂದ್ಯದ ಸತತ ಎರಡನೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿ ಶೆಫಾಲಿ ತಮ್ಮ ಬ್ಯಾಟಿಂಗ್ ಪ್ರದರ್ಶನದ ಗುಟ್ಟನ್ನು ರಿವೀಲ್ ಮಾಡಿದ್ದಾರೆ. ಹುಡುಗರೊಂದಿಗೆ ಕ್ರಿಕೆಟ್ ಆಡಿರುವುದು ಹೆಚ್ಚು ಸಹಾಯಕವಾಯಿತು. ಈ ವೇಳೆ ಬಾಲ್ ಅನ್ನು ಹೇಗೆ ಬೌಂಡರಿ, ಸಿಕ್ಸರ್‍ಗೆ ಅಟ್ಟುವುದು ಎಂಬ ಕೌಶಲ್ಯ ತಿಳಿಯಿತು ಎಂದು ಶೆಫಾಲಿ ತಿಳಿಸಿದರು.

    ‘ನಾನು ಹುಡುಗರೊಂದಿಗೆ ಸಾಕಷ್ಟು ಅಭ್ಯಾಸ ಮಾಡಿದ್ದೇನೆ. ನನ್ನ ತಂದೆ ಹಾಗೂ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಅಭ್ಯಾಸದ ವೇಳೆ ಹುಡುಗರು ನನಗೆ ಬ್ಯಾಟಿಂಗ್‍ನಲ್ಲಿ ಉತ್ತಮ ತರಬೇತಿ ನೀಡಲು ಸಹಾಯ ಮಾಡಿದರು’ ಎಂದು ತಮ್ಮ ಸಾಧನೆಯ ಹಿಂದಿನ ಬಲವನ್ನು ರಿವೀಲ್ ಮಾಡಿದರು.

    ‘ನನ್ನ ಬ್ಯಾಟಿಂಗ್ ಪ್ರದರ್ಶನದಿಂದ ಸಂತೋಷಗೊಂಡಿದ್ದೇನೆ. ಪವರ್ ಪ್ಲೇನಲ್ಲಿ ಉತ್ತಮ ಆರಂಭವನ್ನು ನೀಡಲು ಬಯಸಿದ್ದೆ. ಹಾಗೆ ಸ್ಪಿನ್ನರ್ ಗಳಿಗಾಗಿ ನಾನು ಕಾಯುತ್ತಿದ್ದೆ’ ಎಂದು ಶೆಫಾಲಿ ವರ್ಮಾ ತಿಳಿಸಿದ್ದಾರೆ.

    ಹರ್ಮನ್‍ಪ್ರೀತ್ ವೈಫಲ್ಯ:
    ಈ ಟೂರ್ನಿಯಲ್ಲಿ ಹರ್ಮನ್‍ಪ್ರೀತ್ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಎರಡಂಕಿ ಅಂಕಿ ರನ್ ದಾಟುವಲ್ಲಿ ಹರ್ಮನ್‍ಪ್ರೀತ್ ವಿಫಲರಾಗಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 2 ರನ್ ಗಳಿಸಿದೆ, ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಲ್ಲಿ 8 ರನ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಇಂದಿನ ಪಂದ್ಯದಲ್ಲಿ 1 ರನ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

    ಎ ಗುಂಪಿನಲ್ಲಿ ಭಾರತಕ್ಕೆ ಅಗ್ರಸ್ಥಾನ:
    ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ 6 ಅಂಕಗಳೊಂದಿಗೆ ಗ್ರೂಪ್-ಎ ಯಲ್ಲಿ ಅಗ್ರಸ್ಥಾನದಲ್ಲಿದೆ. ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯವನ್ನು 7 ವಿಕೆಟ್‍ಗಳಿಂದ ಗೆದ್ದಿದ್ದ ನ್ಯೂಜಿಲೆಂಡ್, ಭಾರತದ ವಿರುದ್ಧದ ಎರಡದಲ್ಲಿ ಸೋಲು ಕಂಡು 2 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ.