Tag: ಮೆಪ್ಪಾಡಿ

  • Wayanad Landslides | ಪ್ರತಿ ವರ್ಷ ಮೆಪ್ಪಾಡಿಯಲ್ಲಿ ತಲೆ ಎತ್ತುತ್ತಿವೆ 380 ಹೊಸ ಕಟ್ಟಡಗಳು

    Wayanad Landslides | ಪ್ರತಿ ವರ್ಷ ಮೆಪ್ಪಾಡಿಯಲ್ಲಿ ತಲೆ ಎತ್ತುತ್ತಿವೆ 380 ಹೊಸ ಕಟ್ಟಡಗಳು

    ತಿರುವನಂತಪುರಂ: ವಯನಾಡು ಜಲ ಪ್ರಳಯಕ್ಕೆ (Wayanad Landslides) ಅರಣ್ಯ ನಾಶ, ಅಕ್ರಮ ರೆಸಾರ್ಟ್‌ಗಳು ಕಾರಣ ಎಂದು ವಿಜ್ಞಾನಿಗಳು ತಿಳಿಸುತ್ತಿದ್ದರೂ ಈ ಅಂಶಗಳಿಗೆ ಪುಷ್ಟಿ ನೀಡುವ ಹಲವಾರು ವಿಚಾರಗಳು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.

    ಭೂಕುಸಿತ ಸಂಭವಿಸಿದ ಮೆಪ್ಪಾಡಿ (Meppadi) ಪಂಚಾಯತ್‌ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಅಂದಾಜು 380 ಹೊಸ ಕಟ್ಟಡಗಳು ತಲೆ ಎತ್ತುತ್ತಿವೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಸ್ಥಳೀಯ ಸಂಸ್ಥೆಯಿಂದ ನೋಂದಾಯಿಸಲ್ಪಟ್ಟ ವಸತಿ ಮತ್ತು ವಸತಿಯೇತರ ಕಟ್ಟಡಗಳು ಸೇರಿದಂತೆ 380 ಕ್ಕೂ ಹೆಚ್ಚು ಕಟ್ಟಡಗಳು ಪ್ರತಿ ವರ್ಷ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿವೆ. ಇದನ್ನೂ ಓದಿ:ಮಹಿಳೆಗೆ ಮಳೆ ನೀರು ಎರಚಿ ಕಿರುಕುಳ; ಯುಪಿಯಲ್ಲಿ ಪೊಲೀಸ್‌ ಠಾಣೆಯ ಎಲ್ಲಾ ಸಿಬ್ಬಂದಿ ಅಮಾನತು

    ಯಾವ ವರ್ಷ ಎಷ್ಟು?
    ಮೆಪ್ಪಾಡಿ ಪಂಚಾಯತ್‌ ವ್ಯಾಪ್ತಿಯಲ್ಲಿ 2016-17 ರಲ್ಲಿ 385 ಹೊಸ ಕಟ್ಟಡಗಳು ತಲೆ ಎತ್ತಿದ್ದರೆ 2017-18ರ ಅವಧಿಯಲ್ಲಿ  ಈ ಸಂಖ್ಯೆ 406ಕ್ಕೆ ಏರಿಕೆಯಾಗಿತ್ತು. 2018-19 ರ ಅವಧಿಯಲ್ಲಿ 338 ಆಗಿದ್ದರೆ 2019-20 ರಲ್ಲಿ 366 ಕಟ್ಟಡ ನಿರ್ಮಾಣವಾಗಿತ್ತು. ಕೋವಿಡ್‌ನಿಂದಾಗಿ 2020-21 ರಲ್ಲಿ ಈ ಸಂಖ್ಯೆ 225ಕ್ಕೆ ಇಳಿಕೆಯಾಗಿದ್ದರೆ 2021-22 ರಲ್ಲಿ ಇದು 431ಕ್ಕೆ ಏರಿಕೆಯಾಗಿತ್ತು.

    ವಯನಾಡು ಜಿಲ್ಲೆಯಲ್ಲಿ 2016-17 ರಲ್ಲಿ10,471 ಹೊಸ ಕಟ್ಟಡಗಳು ನಿರ್ಮಾಣವಾಗಿದ್ದರೆ 2021-22 ರಲ್ಲಿ ಇದು 12,171ಕ್ಕೆ ಏರಿತ್ತು. ಈಗ ಸಿಕ್ಕಿರುವ ಮಾಹಿತಿ 2021-22 ವರೆಗೆ ಮಾತ್ರ. ಕಳೆದ ವರ್ಷ ಮತ್ತು ಈ ವರ್ಷದ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ:ಕ್ಷಿಪ್ರಗತಿಯ ಸೇತುವೆ ನಿರ್ಮಾಣ ಕಾರ್ಯಾಚರಣೆಯಲ್ಲಿ ಮಹಿಳಾ ಸೇನಾಧಿಕಾರಿಯ ಸಾಹಸಗಾಥೆ!

    ವಯನಾಡು ಪ್ರಕೃತಿ ಸೌಂದರ್ಯದ ಬೀಡಾಗಿರುವ ಕಾರಣ ಪ್ರವಾಸೋದ್ಯಮ (Tourism) ದೊಡ್ಡ ಅದಾಯದ ಮೂಲ. ಮೆಪ್ಪಾಡಿ ಪಂಚಾಯತ್‌ ವ್ಯಾಪ್ತಿಯಲ್ಲಿ 44 ಅಕ್ರಮ ರೆಸಾರ್ಟ್‌ಗಳು (Illegal Resorts) ತಲೆ ಎತ್ತಿವೆ ಎಂದು ವರದಿ ತಿಳಿಸಿದೆ.

    ಸೋಮವಾರವೂ ಮುಂಡಕ್ಕೈಗೆ (Mundakai) ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ಹಿಂಬಾಲಿಸಿದ್ದ ಪಂಚಾಯತ್ ಅಧಿಕಾರಿಗಳು ಭಾರೀ ಮಳೆಯ ಕಾರಣ ನೀಡಿ ಬಲವಂತವಾಗಿ ವಾಪಸ್ ಕಳುಹಿಸಿದ್ದರು.

     

    ಮುಂಡಕ್ಕೈನಲ್ಲಿ ಮೊದಲು ಕಾಡಾನೆಗಳು ಮತ್ತು ಇತರ ಕಾಡು ಪ್ರಾಣಿಗಳು ಸಂಚರಿಸುತ್ತಿದ್ದವು. ಆದರೆ ರೆಸಾರ್ಟ್‌ ನಡೆಸುವ ವ್ಯಕ್ತಿಗಳು ಪಟಾಕಿ ಸಿಡಿಸುವ ಮೂಲಕ ಮತ್ತು ರಬ್ಬರ್ ಗುಂಡುಗಳನ್ನು ಹಾರಿಸುವ ಮೂಲಕ ಓಡಿಸುತ್ತಿದ್ದಾರೆ.

    ಅಧ್ಯಯನಗಳ ಪ್ರಕಾರ 1950 ರವರೆಗೆ ವಯನಾಡು ಜಿಲ್ಲೆಯ 85% ಭಾಗ ಅರಣ್ಯ ವಾಪ್ತಿಯಲ್ಲಿತ್ತು. 2018ರ ವೇಳೆಗೆ 62% ಅರಣ್ಯ ನಾಶವಾಗಿದೆ. ಪ್ರವಾಸೋದ್ಯಮಕ್ಕೆ ಆದ್ಯತೆ ಮತ್ತು ಟೀ ತೋಟ ನಿರ್ಮಿಸಲು ಕಾಡಿನಲ್ಲಿದ್ದ ಮರಗಳನ್ನು ಕಡಿಯಲಾಗಿದೆ. ಪ್ರಶ್ನೆ ಮಾಡಿದರೆ ರೆಸಾರ್ಟ್‌ ಮಾಲೀಕರು ಬೆದರಿಕೆ ಒಡ್ಡುತ್ತಾರೆ ಎಂದು ವರದಿಯಾಗಿದೆ.

  • Wayanad Landslide| ವಯನಾಡು ಜಲಪ್ರಳಯಕ್ಕೆ ಕೊಡಗಿನ ಬಾಲಕ ಬಲಿ

    Wayanad Landslide| ವಯನಾಡು ಜಲಪ್ರಳಯಕ್ಕೆ ಕೊಡಗಿನ ಬಾಲಕ ಬಲಿ

    ಮಡಿಕೇರಿ: ವಯನಾಡು ಜಲಪ್ರಳಯಕ್ಕೆ (Wayanad Landslide) ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಲಕ ಬಲಿಯಾಗಿದ್ದಾನೆ.

    ಗುಹ್ಯ ಗ್ರಾಮದ ರೋಹಿತ್(9) ಮೃತ ಬಾಲಕ. ಪಳ್ಳಕ್ಕರೆ ಗೇಟ್ ಸಮೀಪದ ಖಾಸಗಿ ತೋಟದ ಲೈನ್ ಮನೆಯಲ್ಲಿ ರವಿ ಹಾಗೂ ಕವಿತಾ ದಂಪತಿ ತನ್ನ ಮೂವರು ಗಂಡು ಮಕ್ಕಳೊಂದಿಗೆ ವಾಸವಾಗಿದ್ದರು. ಇದನ್ನೂ ಓದಿ: Wayanad Landslide| ಆರು ಕೈ, ಮೂರು ತಲೆ, ಎಂಟು ಕಾಲು, ಐದು ತಲೆ ಇರದ ದೇಹ!

     

    ಒಂದು ತಿಂಗಳ ಹಿಂದೆ ಕವಿತಾ ತನ್ನ ಕಿರಿಯ ಮಗ ರೋಹಿತ್ ಜೊತೆ ವಯನಾಡುವಿನ ಮೆಪ್ಪಾಡಿಯಲ್ಲಿರುವ ಅಕ್ಕನ ಮನೆಗೆ ತೆರಳಿದ್ದರು. ನಂತರ ರೋಹಿತ್‌ನನ್ನು ಅಕ್ಕನ ಮನೆಯಲ್ಲೇ ಬಿಟ್ಟು ಕ್ಯಾಲಿಕಟ್‌ನಲ್ಲಿರುವ ಮನೆಯೊಂದರ ಕೆಲಸಕ್ಕೆ ಕವಿತಾ ಹೋಗಿದ್ದರು. ಇದನ್ನೂ ಓದಿ: Wayanad Landslide | ದಯವಿಟ್ಟು ಅಳಿಯನ ಮೃತ ದೇಹ ಹುಡುಕಿ, ಕೊನೆ ಬಾರಿ ನೋಡ್ತಿವಿ!

    ವಯನಾಡು ಜಲ ಪ್ರಳಯದಲ್ಲಿ ರೋಹಿತ್ ಈಗ ಜೀವ ಕಳೆದುಕೊಂಡಿದ್ದಾನೆ. ತಂದೆ ರವಿ ಮೆಪ್ಪಾಡಿಗೆ ತೆರಳಿದ್ದಾರೆ. ಮಗ ನಾಪತ್ತೆಯಾಗಿರುವ ಬಗ್ಗೆ ರವಿ ಅವರು ಸಮೀಪದ ನಿವಾಸಿಗಳಿಗೆ ಮಾಹಿತಿ ನೀಡಿ ಹೋಗಿದ್ದಾರೆ ಎಂದು ಸ್ಥಳೀಯರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • Wayanad Landslide : ರಕ್ಷಣಾ ಕಾರ್ಯಾಚರಣೆ ಯಾಕೆ ಕಷ್ಟವಾಗುತ್ತಿದೆ?

    Wayanad Landslide : ರಕ್ಷಣಾ ಕಾರ್ಯಾಚರಣೆ ಯಾಕೆ ಕಷ್ಟವಾಗುತ್ತಿದೆ?

    – ರೋಪ್‌ ವೇ ಬಳಸಿ ಸಂತ್ರಸ್ತರನ್ನು ತಲುಪಿತ್ತಿವೆ ರಕ್ಷಣಾ ತಂಡಗಳು
    – ಕೊಚ್ಚಿ ಹೋಗಿದೆ ನಗರಗಳ ಮಧ್ಯೆ ಇದ್ದ ಏಕೈಕ ಸೇತುವೆ

    ವಯನಾಡು: ಭೀಕರ ಜಲಪ್ರಳಯಕ್ಕೆ 143 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರಿಕೆ ಆಗುತ್ತಲೇ ಇದೆ. ಸೇತುವೆ (Bridge) ಕೊಚ್ಚಿ ಹೋಗಿದ್ದರಿಂದ ಗ್ರಾಮಗಳು ನಡುಗಡ್ಡೆಯಾಗಿವೆ.

    ಭಾರತೀಯ ಸೇನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ಸೇರಿದಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳು ಒಗ್ಗೂಡಿ ಕಾರ್ಯಾಚರಣೆ ಮಾಡುತ್ತಿದ್ದರೂ ನಡುಗಡ್ಡೆಯಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲು ಭಾರೀ ಕಷ್ಟವಾಗುತ್ತಿದೆ. ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಕಾರಣ ಮರದಿಂದ ಮರಕ್ಕೆ ಹಗ್ಗ ಕಟ್ಟಿ ರೋಪ್ ವೇ ನಿರ್ಮಿಸಿ ಆ ರೋಪ್ ವೇ ಮೂಲಕ ಒಂದು ಕಡೆಯಿಂದ ಮತ್ತೊಂದು ಕಡೆಗೆ ಶವ ಸಾಗಿಸಲಾಗುತ್ತಿದೆ.

    ಯಾಕೆ ಕಷ್ಟವಾಗುತ್ತಿದೆ?
    ಮುಂಡಕ್ಕೈ(Mundakkai), ಅಟ್ಟಮಲಾ ನಗರ ಮತ್ತು ಚೂರಲ್ ಮಲೈ (Chooralmala) ನಗರವನ್ನು ಸಂಪರ್ಕಿಸಲು ಇದ್ದ ಏಕೈಕ ದೊಡ್ಡ ಸೇತುವೆ ಕೊಚ್ಚಿ ಹೋಗಿದೆ. ಪರಿಣಾಮ ಈಗ ರಕ್ಷಣಾ ತಂಡಗಳು ರೋಪ್‌ವೇ ಬಳಸಿಕೊಂಡು ಸಂತ್ರಸ್ತರನ್ನು ತಲುಪಿ ರಕ್ಷಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: Wayanad Landslide : ಅರ್ಧ ಸೆಕೆಂಡ್‌ನಲ್ಲಿ ನೂರು ಜನ ಸಮಾಧಿ!

    ಮಂಗಳವಾರ ಬೆಳಗ್ಗೆ ದುರಂತ ನಡೆದ ಬಳಿಕ ಮಂಡಕ್ಕೈಯಲ್ಲಿ ಸಿಲುಕಿದ್ದ ಜನರನ್ನು ತಲುಪಲು 13 ಗಂಟೆ ಬೇಕಾಗಿತ್ತು. ಮೆಪ್ಪಾಡಿ (Meppadi) ಮತ್ತು ಚೂರಲ್ ಮಲೈ ಹೊರ ಜಗತ್ತಿನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ಹೆಲಿಕಾಪ್ಟರ್‌ ಬಳಸಿ ಕಾರ್ಯಾಚರಣೆಗೆ ಸೇನೆ ಸಿದ್ಧವಾಗಿದ್ದರೂ ನಿರಂತರ ಮಳೆ ಸುರಿಯುತ್ತಿದೆ. ಕೆಟ್ಟ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆ ದುಸ್ತರವಾಗಿದೆ. ಇದನ್ನೂ ಓದಿ: Wayanad Landslides: ನಾಲ್ವರು ಕನ್ನಡಿಗರು ದುರ್ಮರಣ – ಬೆಂಗಳೂರಿನ ಇಬ್ಬರು ಪ್ರವಾಸಿಗರು ಕಣ್ಮರೆ!

    ಮೆಪ್ಪಾಡಿ ಎಲೆಕ್ಟ್ರಿಕಲ್‌ ಸ್ಟೇಷನ್‌ 3 ಕಿ.ಮೀ ಹೈ ಟೆನ್ಷನ್‌ ಲೈನ್‌, 8 ಕಿ.ಮೀ ಲೋ ಟೆನ್ಷನ್‌ ಲೈನ್‌, 2 ಟ್ರಾನ್ಸ್‌ಫಾರಂಗಳು ನೀರಿನ ಅಬ್ಬರಕ್ಕೆ ಕೊಚ್ಚಿ ಹೋಗಿದೆ. 3 ಟ್ರಾನ್ಸ್‌ಫಾರಂಗಳು ಹಾಳಾಗಿದೆ. ಪಟ್ಟಣದಲ್ಲಿ ವಿದ್ಯುತ್‌ ಸಂಪರ್ಕ ಇಲ್ಲದ ಕಾರಣ ಮೊಬೈಲ್‌ ಮೂಲಕ ಜನರ ಜೊತೆ ಸಂಪರ್ಕ ಸಾಧಿಸಲು ಕಷ್ಟವಾಗುತ್ತಿದೆ.

    ಚೂರಲ್ ಮಲೈ ಸೇತುವೆ ಕಡಿತದಿಂದ ಅಂದಾಜು 500 ಕುಟುಂಬಗಳು ಸಂಪರ್ಕ ಕಡಿತಕೊಂಡಿದೆ ಎಂದು ವರದಿಯಾಗಿದೆ.

  • ವಯನಾಡಿನ ಬೆಟ್ಟದಲ್ಲಿ ಜಲಸ್ಫೋಟ – 19 ಮಂದಿ ಸಾವು, ನೂರಾರು ಮಂದಿ ಸಿಲುಕಿರುವ ಸಾಧ್ಯತೆ

    ವಯನಾಡಿನ ಬೆಟ್ಟದಲ್ಲಿ ಜಲಸ್ಫೋಟ – 19 ಮಂದಿ ಸಾವು, ನೂರಾರು ಮಂದಿ ಸಿಲುಕಿರುವ ಸಾಧ್ಯತೆ

    – 2018ರಲ್ಲಿ ಕೊಡಗಿನಲ್ಲಿ ನಡೆದ ಭೂಕುಸಿತದಂತೆ ಕುಸಿದ ಭೂಮಿ

    ತಿರುವನಂತಪುರಂ: ಕೊಡಗಿನಲ್ಲಿ 2018ರಲ್ಲಿ ನಡೆದ ಜಲಸ್ಫೋಟದಂತೆ ಕೇರಳದಲ್ಲೂ (Kerala) ದುರಂತ ಸಂಭವಿಸಿದೆ. ಮಂಗಳವಾರ ಮುಂಜಾನೆ ವಯನಾಡ್ (Wayanad) ಜಿಲ್ಲೆಯ ಮೆಪ್ಪಾಡಿಯಲ್ಲಿ(Meppadi) ಗುಡ್ಡ ಕುಸಿದಿದೆ. ಈ ದುರಂತದಲ್ಲಿ 19 ಮಂದಿ ಸಾವನ್ನಪ್ಪಿ ನೂರಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

    ನಸುಕಿನ ಜಾವ 2 ಗಂಟೆಗೆ ಮೊದಲ ಭೂಕುಸಿತ ಸಂಭವಿಸಿದರೆ ಮುಂಜಾನೆ 4:10ರ ವೇಳೆ ಎರಡನೇ ಬಾರಿ ಸಂಭವಿಸಿದೆ. ಜಲಸ್ಫೋಟದಿಂದಾಗಿ ಗುಡ್ಡದಿಂದ ನೀರು ರಭಸವಾಗಿ ಮನೆಗಳ ಮೇಲೆ ಹರಿದು ಹೋಗಿದ್ದರಿಂದ ಸಾವು ನೋವಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ.

     

    ವಯನಾಡು ಜಿಲ್ಲೆಯ ಅಧಿಕಾರಿಗಳ ಪ್ರಕಾರ ತೊಂಡರ್ನಾಡ್ ಗ್ರಾಮದಲ್ಲಿ ವಾಸಿಸುತ್ತಿದ್ದ ನೇಪಾಳಿ ಕುಟುಂಬದ ಒಂದು ವರ್ಷದ ಮಗು ಭೂಕುಸಿತವೊಂದರಲ್ಲಿ ಸಾವನ್ನಪ್ಪಿದೆ.

    ಭಾರೀ ಭೂಕುಸಿತದ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳನ್ನು ಪೀಡಿತ ಪ್ರದೇಶಕ್ಕೆ ನಿಯೋಜಿಸಲಾಗಿದೆ.

    ಎನ್‌ಡಿಆರ್‌ಎಫ್‌ನ ಹೆಚ್ಚುವರಿ ತಂಡ ವಯನಾಡ್‌ಗೆ ತೆರಳುತ್ತಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ವಯನಾಡ್‌ಗೆ ತೆರಳಲು ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳಿಗೆ ಸೂಚನೆ ನೀಡಲಾಗಿದೆ.

    ನಿರಂತರ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಮುಂದಿನ 3 ಗಂಟೆಗಳಲ್ಲಿ ಕೇರಳ, ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಪ್ರತ್ಯೇಕವಾದ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.