Tag: ಮೆದುಳು

  • ಕೊಳಕು ಮನಸ್ಸಿಗೆ ʻಮೆದುಳಿನಲ್ಲಿ ಕಸʼವೇ ಕಾರಣವೇ? – ಇದಕ್ಕೆ ಪರಿಹಾರವೇನು?

    ಕೊಳಕು ಮನಸ್ಸಿಗೆ ʻಮೆದುಳಿನಲ್ಲಿ ಕಸʼವೇ ಕಾರಣವೇ? – ಇದಕ್ಕೆ ಪರಿಹಾರವೇನು?

    ಇತ್ತೀಚೆಗಷ್ಟೇ ʻಇಂಡಿಯಾಸ್‌ ಗಾಟ್‌ ಲ್ಯಾಟೆಂಟ್ʼ (India’s Got Latent) ಎಂಬ ಕಾರ್ಯಕ್ರಮದ ಸಂಚಿಕೆಯೊಂದರಲ್ಲಿ ಯುಟ್ಯೂಬರ್‌ ಅಲಹಬಾದಿಯಾ ಅವರು ಅಶ್ಲೀಲ ಹೇಳಿಕೆ ನೀಡಿದ್ದರ ಸಂಬಂಧ ಸುಪ್ರೀಂ ಕೋರ್ಟ್‌ (Supreme Court) ವಿಚಾರಣೆ ನಡೆಸಿತು. ಈ ವೇಳೆ ರಣವೀರ್‌ ಅಲಹಬಾದಿಯ (Ranveer Allahbadia) ಅವರು ನಡೆಸುವ ಕಾರ್ಯಕ್ರಮದಲ್ಲಿ ಆಡಿದ ಕೆಲವು ಮಾತುಗಳು ಅವರ ಕೊಳಕು ಮನಸ್ಸನ್ನು ತೋರಿಸಿದೆ. ಈ ವ್ಯಕ್ತಿಯ ಮನಸ್ಸಿನಲ್ಲಿ ಏನು ಕೊಳಕಿದೆಯೋ ಅದನ್ನು ಈ ಕಾರ್ಯಕ್ರಮದ ಮೂಲಕ ಹರಡಲಾಗುತ್ತಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದರು.

    ಈ ಬೆನ್ನಲ್ಲೇ ಮನೋತಜ್ಞರು ಒಂದಿಷ್ಟು ವಿಶ್ಲೇಷಣೆ ನಡೆಸಿದ್ದರು. ಮೂರು ಪೌಂಡ್‌ಗಳಷ್ಟು ತೂಕವಿರುವ ಮೆದುಳಿನಲ್ಲಿ ಅದೆಷ್ಟು ಕಸ (ಕೊಳಕು) ತುಂಬಿರುತ್ತದೆ? ಈ ಮೆದುಳಿನಲ್ಲಿ ಕಸ ಬರೋದಾದ್ರೂ ಹೇಗೆ? ಮೆದುಳಿನ ಕಸ (Brain Garbage) ಅಂದ್ರೆ ಏನು? ಕಸ ತುಂಬಿಕೊಂಡಷ್ಟು ಮನುಷ್ಯನಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ? ಈ ಮೆದುಳಿನ ಕಸ ತೆಗೆದುಹಾಕೋದು ಹೇಗೆ? ಎಂಬುದನ್ನು ವಿಶ್ಲೇಷಣೆ ಮಾಡಿದ್ದಾರೆ ಅದೇನೆಂಬುದನ್ನು ನೋಡೋಣ…

    ಮೆದುಳಿನಲ್ಲಿ ತ್ಯಾಜ್ಯ ಏಕೆ ಸಂಗ್ರಹವಾಗುತ್ತೆ?
    ನಮ್ಮ ಮನಸ್ಸು ಮೆಟ್ರೋ ರೈಲಿಗಿಂತಲೂ ಸ್ಪೀಡು, ನಿತ್ಯ ಒಂದಿಲ್ಲೊಂದು ವಿಷಯಗಳ ಹಿಂದೆ ಓಡುತ್ತಲೇ ಇರುತ್ತದೆ. ಹೀಗಾಗಿ ಜೀವ ರಾಸಾಯನಿಕ ಕ್ರಿಯೆ ನಡೆಯುತ್ತಲೇ ಇರುತ್ತದೆ, ಹೀಗಾದಾಗ ಮೆದುಳಿನ ಮೇಲೆ ಒಂದೊಂದೇ ಪದರಗಳು ಸೇರುತ್ತಾ ಹೋಗುತ್ತದೆ. ಜೊತೆಗೆ ಹಾರ್ಮೂನ್‌ಗಳಲ್ಲಿ ಅಸಮತೋಲನ ಉಂಟಾಗುತ್ತದೆ. ಇದನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಮೆದುಳಿನಲ್ಲಿ ಒತ್ತಡ ರೂಪದಲ್ಲಿ ಕಸ ಸಂಗ್ರಹವಾಗುತ್ತದೆ. ಅಲ್ಲದೇ ವಾಯುಮಾಲಿನ್ಯ, ನಮಗೇ ಗೊತ್ತಿಲ್ಲದೇ ದೇಹ ಸೇರುವ ಮೈಕ್ರೋ ಪ್ಲಾಸ್ಟಿಕ್‌, ಮೆದುಳಿಗೆ ತುಂಬಾ ಅಪಾಯಕಾರಿ. ಇವು ದೇಹವನ್ನು ಪ್ರವೇಶಿಸಿ ಮೆದುಳಿಗೆ ಹಾನಿಯುಂಟು ಮಾಡುತ್ತದೆ.

    ಸಾಮಾನ್ಯವಾಗಿ ಜನ ಇದನ್ನು ಸಹವಾಸ ದೋಷ ಎನ್ನುತ್ತಾರೆ. ಉದಾಹರಣೆಗೆ ಈ ಹಿಂದೆಲ್ಲ ಮನುಷ್ಯನಲ್ಲಿ ಹಾಸ್ಯಪ್ರಜ್ಞೆ ಇರುತ್ತಿತ್ತು. ನೈಸರ್ಗಿಕವಾಗಿ ನಕ್ಕಷ್ಟು ಮೆದುಳು, ಮನಸ್ಸು ಹಗುರವಾಗುತ್ತಿತ್ತು. ಕೆಲ ವಿಜ್ಞಾನಿಗಳು ಇದನ್ನು ನಿಜ ಎಂದು ಒಪ್ಪಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಮುಖದಲ್ಲಿ ಹ್ಯಾಸ್ಯ ರಸವೇ ಇಲ್ಲದೇ ಸದಾ ಜಡವಸ್ತುಗಳಂತೆ ವರ್ತಿಸುತ್ತಾರೆ, ಇನ್ನೂ ಕೆಲವರು ಡಬಲ್‌ ಮೀನಿಂಗ್‌ ಹಾಸ್ಯಗಳಲ್ಲೇ ಮುಳುಗುತ್ತಾರೆ. ಇಂತಹ ಹಾಸ್ಯಗಳಿಂದ ಕೆಲವರ ಮೆದುಳಿನಲ್ಲಿ ಕೆಟ್ಟ ಆಲೋಚನೆಗಳು ಬೆಳೆಯುತ್ತಾ ಹೋಗುತ್ತದೆ, ಬಳಿಕ ಮನಸ್ಥಿತಿ ಇದ್ದಂತೆ ಮಾತನಾಡುತ್ತಾರೆ. ರಣವೀರ್‌ ಅಲಹಾಬಾದಿಯಾ ಅವರ ವಿಚಾರದಲ್ಲಿ ಆಗಿರುವುದೂ ಸಹ ಇದೆ ಎನ್ನುತ್ತಾರೆ ವಿಶ್ಲೇಷಕರು.

     

    ಮೆದುಳಿನಲ್ಲಿ ಕೊಳಕು ಸಂಗ್ರಹವಾಗುವುದರಿಂದ ಏನಾಗುತ್ತದೆ?
    ಮೂರು ಪೌಂಡ್‌ಗಳಷ್ಟು ತೂಕವಿರುವ ಮೆದುಳಿನಲ್ಲಿ ಕಸ ಸ್ವಚ್ಛಗೊಳಿಸದಿದ್ದರೆ, ಅದು ಮೆದುಳನ್ನು ಹಾನಿ ಮಾಡುತ್ತಾ ಹೋಗುತ್ತದೆ. ಮೆದುಳಿನಲ್ಲಿ ಊತ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ, ಇದರಿಂದ ತಲೆ ಭಾರವಾಗುತ್ತದೆ. ನಂತರ ನೆನಪಿನ ಶಕ್ತಿ, ಆಲೋಚನಾ ಶಕ್ತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಎಲ್ಲವೂ ಕಡಿಮೆಯಾಗುತ್ತದೆ. ಈ ಬೆಳವಣಿಗೆ ಮತ್ತೂ ಮುಂದುವರಿದರೆ ಆಲ್ಝಮೈರ್‌ ಮತ್ತು ಬುದ್ಧಿಮಾಂದ್ಯತೆಯಂತಹ ನರವೈಜ್ಞಾನಿಕ ಕಾಯಿಲೆಗಳೂ ಸಂಭವಿಸಬಹುದು. ಉದ್ವೇಗ, ಆತಂಕ ಮತ್ತು ಖಿನ್ನತೆಯ ಸಮಸ್ಯೆಯನ್ನು ತಂದೊಡ್ಡಬಹುದು ಎನ್ನುತ್ತಾರೆ ತಜ್ಞರು.

    ಮೆದುಳು ಶುಚಿಯಾಗಬೇಕಾದ್ರೆ ನಾವೇನು ಮಾಡಬೇಕು?
    ಈ ಎಲೆಕ್ಟ್ರಾನಿಕ್‌ ಯುಗದಲ್ಲಿ ನಮ್ಮ ಮೆದುಳನ್ನು ಸ್ವಚ್ಛಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇರಬೇಕು. ಅದಕ್ಕೆ ಒಂದು ಮಾರ್ಗವಿದೆ, ಅದನ್ನ ಗ್ಲಿಂಫಾಟಿಕ್ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಕುತೂಹಲಕಾರಿ ವಿಷಯವೆಂದರೆ ಈ ಪ್ರಕ್ರಿಯೆಯು ನಿದ್ರೆಯ ಸಮಯದಲ್ಲಿ ಮಾತ್ರ ಸಕ್ರಿಯವಾಗಿರುತ್ತದೆ. ನಿಯಮಿತವಾಗಿ ಮನುಷ್ಯನ ದೇಹಕ್ಕೆ ಅಗತ್ಯವಿರುವಷ್ಟು ಸಮಯ ನಿದ್ರೆ ಮಾಡುವುದರಿಂದ ಮೆದುಳಿನಲ್ಲಿನ ಕಸ ಸ್ವಚ್ಛವಾಗುತ್ತದೆ.

    ನಾವು ಗಾಢ ನಿದ್ರೆಯಲ್ಲಿದಷ್ಟು ಮೆದುಳಿನ ಶುದ್ಧೀಕರಣ ಕ್ರಿಯೆ ಸಾಧಾರಣಕ್ಕಿಂತ 10 ಪಟ್ಟು ವೇಗವಾಗಿ ನಡೆಯುತ್ತದೆ. 2013ರಲ್ಲಿ ಅಮೆರಿಕದ ರೋಚೆಸ್ಟರ್‌ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ. ಏಕೆಂದರೆ ನಾವು ನಿದ್ರಿಸುವಾಗ ನಮ್ಮ ಮೆದುಳಿನ ಕೋಶಗಳು ಶೇ.60 ರಷ್ಟು ಕುಗ್ಗುತ್ತವೆ. ಇದರಿಂದಾಗಿ ಗ್ಲಿಂಫಾಟಿಕ್ ವ್ಯವಸ್ಥೆಯು ಮೆದುಳಿನಲ್ಲಿ ಸಂಗ್ರಹವಾಗುವ ಕಸವನ್ನು ಹೊರಹಾಕಲು ಅವಕಾಶ ಮಾಡಿಕೊಡುತ್ತದೆ ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.

  • ಮನುಷ್ಯನ ಮೆದುಳಿನಲ್ಲಿ ಉತ್ಪತ್ತಿಯಾದ ತ್ಯಾಜ್ಯವನ್ನು ಅದು ಹೇಗೆ ಹೊರಹಾಕುತ್ತದೆ? 

    ಮನುಷ್ಯನ ಮೆದುಳಿನಲ್ಲಿ ಉತ್ಪತ್ತಿಯಾದ ತ್ಯಾಜ್ಯವನ್ನು ಅದು ಹೇಗೆ ಹೊರಹಾಕುತ್ತದೆ? 

    ಬೆಳಕಿಗಿಂತ ವೇಗವಾಗಿ ಕಾರ್ಯನಿರ್ವಹಿಸುವುದು ಮೆದುಳು..! ಇಷ್ಟೆಲ್ಲ ವೇಗವಾಗಿ ಕಾರ್ಯ ನಿರ್ವಹಿಸಲು ಮೆದುಳು ಅಪಾರವಾದ ಪ್ರೋಟಿನ್‌ನ್ನು ಬಳಸಿಕೊಳ್ಳುತ್ತದೆ. ಹೌದು! ಹಾಗೇ ಬಳಕೆ ಮಾಡಿದ ಪ್ರೋಟಿನ್‌ನ್ನು ತ್ಯಾಜ್ಯವಾದ ಬಳಿಕ ಮೆದುಳು ತನ್ನದೇ ಆದ ವಿಶೇಷ ವ್ಯವಸ್ಥೆಯ ಮೂಲಕ ಮೆದುಳಿನಿಂದ ಹೊರಹಾಕುತ್ತದೆ ಎಂಬುದನ್ನು ವಿಜ್ಞಾನಿಗಳು ಸಂಶೋಧನೆ ಮೂಲಕ ಪತ್ತೆ ಹಚ್ಚಿದ್ದಾರೆ.  

    ಮೆದುಳಿನ ಜೀವಕೋಶಗಳು ಬಹಳಷ್ಟು ಪೋಷಕಾಂಶಗಳನ್ನು ಬಳಸುತ್ತವೆ. ಹಾಗೇ ಅವು ಬಹಳಷ್ಟು ತ್ಯಾಜ್ಯವನ್ನು ಉತ್ಪತ್ತಿ ಮಾಡುತ್ತವೆ. ಸೆಲ್ಯುಲಾರ್ ಕಸವನ್ನು ಹೊರಹಾಕಲು ಮೆದುಳು ವಿಶೇಷ ಕೊಳಾಯಿಗಳನ್ನು ಹೊಂದಿದೆ ಎಂದು ವಿಜ್ಞಾನಿಗಳು ದೀರ್ಘಕಾಲದ ಅಧ್ಯಯನದ ಬಳಿಕ ಕಂಡುಕೊಂಡಿದ್ದಾರೆ. ಮೆದುಳು ಸಣ್ಣ ತ್ಯಾಜ್ಯ-ತೆರವು ಚಾನಲ್‌ಗಳ ಜಾಲವನ್ನು ಹೊಂದಿದೆ. ಈ ಚಾನಲ್‌ಗಳ ಮೂಲಕ ಮೆದುಳು ತ್ಯಾಜ್ಯವನ್ನು ಹೊರಹಾಕುತ್ತದೆ.  

    ಇಲಿಗಳ ಮೆದುಳಿನಲ್ಲಿ ಈ ತ್ಯಾಜ್ಯ ಹೊರಹಾಕುವ ಜಾಲವನ್ನು ವಿಜ್ಞಾನಿಗಳು ಮೊದಲು ಪತ್ತೆ ಮಾಡಿದ್ದರು. ಇಲಿಗಳಲ್ಲಿ ಈ ಕ್ರಿಯೆ ಜರುಗುವುದನ್ನು ಬಹಳ ಸುಲಭವಾಗಿ ಪತ್ತೆ ಮಾಡಬಹುದು. ಅಲ್ಲದೇ ಸ್ಕ್ಯಾನಿಂಗ್‌ ಮೂಲಕ ಇದನ್ನು ನೋಡಬಹುದಾಗಿದೆ. ಈಗ ರೋಚೆಸ್ಟರ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅಂತಿಮವಾಗಿ ಮನುಷ್ಯರ ಜೀವಂತ ಮೆದುಳಿನಲ್ಲಿರುವ ಸಣ್ಣ ತ್ಯಾಜ್ಯ-ತೆರವು ಚಾನಲ್‌ಗಳ ಜಾಲವನ್ನು ಗುರುತಿಸಿದ್ದಾರೆ. ಮನುಷ್ಯರ ಮೆದುಳಿನಲ್ಲಿ ಅಷ್ಟು ಸುಲಭವಾಗಿ ಈ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಈಗಿನ ತಂತ್ರಜ್ಞಾನಗಳು ಸಾಲುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಈ ಬಗ್ಗೆ ಅಧ್ಯಯನ ವರದಿಯು ಜರ್ನಲ್ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಮ್ಯಾಗಝಿನ್‌ನಲ್ಲಿ ಪ್ರಕಟವಾಗಿದೆ.

    ಮೆದುಳು ನಿದ್ರೆಯ ಸಮಯದಲ್ಲಿ ಸಕ್ರಿಯವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಅದು ಮೆದುಳನ್ನು ಆಳವಾಗಿ ಕ್ಲೀನ್ ಮಾಡುವ ಸಮಯವಾಗಿದೆ. ಇದರಿಂದಾಗಿ ಮನುಷ್ಯನಿಗೆ ಒಳ್ಳೆಯ ನಿದ್ರೆ ಅವಶ್ಯಕವಾಗಿರುತ್ತದೆ. ಮನುಷ್ಯನಿಗೆ ನಿದ್ರೆ ಸರಿಯಾಗದೇ, ಮೆದುಳಿಗೆ ಸರಿಯಾದ ವಿಶ್ರಾಂತಿ ಸಿಗದೆ ತ್ಯಾಜ್ಯವನ್ನು ಹೊರಹಾಕಲು ಸಾಧ್ಯವಾಗದೇ ಇದ್ದರೆ ಬುದ್ಧಿಮಾಂದ್ಯತೆ ಹಾಗೂ ಆಲ್ಝೈಮರ್ನ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. 

    ಹಾಗಾದರೆ ಮೆದುಳು ತನ್ನನ್ನು ಹೇಗೆ ಶುದ್ಧೀಕರಿಸುತ್ತದೆ?

    ವಿಜ್ಞಾನಿಗಳು ಮೆದುಳಿನಲ್ಲಿ ʻಗ್ಲಿಂಫಾಟಿಕ್ ಸಿಸ್ಟಮ್ʼ ಎಂದು ಕರೆಯಲ್ಪಡುವ ಜಾಲವನ್ನು ಪತ್ತೆ ಮಾಡಿದ್ದಾರೆ. ಈ ಜಾಲವು ಸೆರೆಬ್ರೊಸ್ಪೈನಲ್ ಎಂಬ ದ್ರವವವನ್ನು ಮೆದುಳಿನ ರಕ್ತನಾಳಗಳ ಸುತ್ತಲಿನ ಚಾನಲ್‌ಗಳ ಅಂಗಾಂಶಕ್ಕೆ ಕಳಿಸಲು ಮತ್ತು ಮೆದುಳಿನಿಂದ ನಿರ್ಗಮಿಸುವವರೆಗೆ ತ್ಯಾಜ್ಯವನ್ನು ಚಲಿಸಲು ಬಳಸುತ್ತದೆ. ಈ ಕಾರ್ಯ ಪ್ರಾಣಿಗಳು ಹಾಗೂ ಮನುಷ್ಯರು ಮಲಗಿರುವ ಸಮಯದಲ್ಲಿ ವೇಗವಾಗಿ ನಡೆಯುತ್ತದೆ. 

    ಮೆದುಳಿನ ಈ ಜಾಲ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇನ್ನೂ ಸಹ ಸ್ಪಷ್ಟವಾಗಿಲ್ಲ. ಯಾಕೆಂದರೆ ಜನರಲ್ಲಿ ಅಂತಹ ವ್ಯವಸ್ಥೆಯನ್ನು ಕಂಡುಹಿಡಿಯುವುದು ಕಷ್ಟ. ನಿಯಮಿತ ಎಂಆರ್‌ಐ ಸ್ಕ್ಯಾನ್‌ಗಳು ಕೆಲವು ದ್ರವ ತುಂಬಿದ ಚಾನಲ್‌ಗಳನ್ನು ಗುರುತಿಸಲಷ್ಟೇ ಶಕ್ತವಾಗಿವೆ. ಅವುಗಳ ಕಾರ್ಯವನ್ನು ಪತ್ತೆ ಮಾಡಲು ಇದರಿಂದ ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. 

    ಇಲ್ಲಿಯವರೆಗೂ ಅಧ್ಯಯನ ಮಾಡಿರುವ ಮೆದುಳು ಆರೋಗ್ಯವಂತರದ್ದಲ್ಲ. ಮೆದುಳಿನ ಶಸ್ತ್ರಚಿಕಿತ್ಸೆಗೆ ಬಂದವರನ್ನು ಅಧ್ಯಯನ ಮಾಡಲಾಗಿದೆ. ಈ ಬಗ್ಗೆ ಇನ್ನಷ್ಟು ಸ್ಪಷ್ಟೀಕರಣಕ್ಕೆ ಆರೋಗ್ಯವಂತ ಜನರ ಮೆದುಳಿನ ಅಧ್ಯಯನ ಅಗತ್ಯ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

    ಮೆದುಳಿನ ಭಾಗಗಳು ಯಾವುವು? 

    ಮೆದುಳು ಪ್ರಮುಖವಾಗಿ ಮೇಲ್ಮೆದುಳು, ಕಿರುಮೆದುಳು ಮತ್ತು ಮೆದುಳಿನ ಕಾಂಡವನ್ನು ಒಳಗೊಂಡಿರುತ್ತದೆ. ಹೆಚ್ಚಿನ ಭಾಗವನ್ನು ಮೇಲ್ಮೆದುಳು ಆಕ್ರಮಿಸಿರುತ್ತದೆ. ಇದು ನಿಯಂತ್ರಣದ ಕೇಂದ್ರ ಬಿಂದುವಾಗಿದೆ ಇದು ಎರಡು ಗೋಳಾರ್ಧವಾಗಿದ್ದು, ಆಳವಾದ ಸಂದಿನಿಂದ ಬೇರ್ಪಟ್ಟಿರುತ್ತದೆ. ಎರಡೂ ಅರ್ಧಭಾಗಗಳು ಕಾರ್ಪಸ್ ಕೊಲೊಸಮ್ ಎಂಬ ಬಿಳಿ ನಾರಿನಂತಹ ವಸ್ತುವಿನಿಂದ ಸಂಪರ್ಕ ಹೊಂದಿರುತ್ತವೆ. ಮೃದು ರಚನೆಗಳನ್ನು ಹೊಂದಿರುವ ಈ ಎರಡೂ ಅರ್ಧಭಾಗಗಳು ಒಂದೇ ಗಾತ್ರ ಮತ್ತು ಆಕಾರವನ್ನು ಹೊಂದಿರುತ್ತವೆ. ಈ ಗೋಳಾರ್ಧಗಳು ಅನೇಕ ಸಂಕೀರ್ಣ ಮಡಿಕೆಗಳು ಮತ್ತು ಆಳವಾದ ಕೊರಕಲುಗಳನ್ನು ಹೊಂದಿವೆ.

    ಮೆದುಳು ದೇಹದಲ್ಲಿ ಅತ್ಯಂತ ಜಟಿಲ ರಚನೆ!

    ಮಾನವನ ಮೆದುಳು ದೇಹದಲ್ಲಿ ಅತ್ಯಂತ ಜಟಿಲ ರಚನೆಯಾಗಿದ್ದು, ಅದರ ಸಂಕೀರ್ಣ ಬೆಳವಣಿಗೆಯು ಮನುಷ್ಯನನ್ನು ವಿಶ್ವದ ಅತ್ಯುನ್ನತ ಸ್ಥಾನಕ್ಕೆ ಏರಲು ಅನುವು ಮಾಡಿಕೊಟ್ಟಿದೆ. ಇದು ಅಸಂಖ್ಯಾತ ನರ ಕೋಶಗಳು ಮತ್ತು ನರಜಾಲಗಳನ್ನು ಒಳಗೊಂಡಿದೆ. ಇದು ಸುಮಾರು 1300 ಗ್ರಾಂ ತೂಕವಿದ್ದು, ವ್ಯಕ್ತಿಯ ಮಾನಸಿಕ ಸಾಮರ್ಥ್ಯಕ್ಕೂ ಅದರ ತೂಕಕ್ಕೂ ಯಾವುದೇ ಸಂಬಂಧವಿರುವುದಿಲ್ಲ.

    ಮೆದುಳಿನ ತೂಕ ನಮ್ಮ ದೇಹದ ಒಟ್ಟು ತೂಕದ ಕೇವಲ 1/50 ರಷ್ಟಿದ್ದರೂ ಸಹ ಪ್ರತಿ ಬಡಿತದಲ್ಲಿ ಹೃದಯದಿಂದ ಪಂಪ್ ಮಾಡಲಾದ ರಕ್ತದ 1/5 ರಷ್ಟು ರಕ್ತವು ಇದಕ್ಕೆ ಅತ್ಯವಶ್ಯಕ. ಆಮ್ಲಜನಕ ಮತ್ತು ಗ್ಲೂಕೋಸ್ ಅವಶ್ಯಕತೆ ತುಂಬಾ ಹೆಚ್ಚಾಗಿ ಬೇಕಾಗಿದ್ದು, ಈ ಪ್ರಮುಖ ವಸ್ತುಗಳ ನಿರಂತರ ಪೂರೈಕೆ ಮೆದುಳಿನ ಚಟುವಟಿಕೆಗೆ ಇರಲೇ ಬೇಕು. ಇವುಗಳ ಯಾವುದೇ ಕೊರತೆಯು ಜೀವಕೋಶಗಳ ಸಾವಿಗೆ ಕಾರಣವಾಗುತ್ತದೆ. ಇಷ್ಟೇ ಅಲ್ಲದೇ ಪ್ರಜ್ಞಾಹೀನತೆ ಮತ್ತು ದೇಹದ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಮೆದುಳಿಗೆ ನಿರಂತರ ರಕ್ತ ಪೂರೈಕೆಯನ್ನು ಕಾಪಾಡಿಕೊಳ್ಳಲು ಪ್ರಕೃತಿಯೇ ಸಾಕಷ್ಟು ಸುವ್ಯವಸ್ಥೆಯನ್ನು ಮಾಡಿದೆ.

     

    ಕಣ್ಣುಗಳು, ಕಿವಿಗಳು, ನಾಲಿಗೆ, ಮೂಗು ಮತ್ತು ಚರ್ಮದಿಂದ ವಿವಿಧ ಮಾಹಿತಿಗಳು ಮೆದುಳನ್ನು ತಲುಪುತ್ತವೆ ಮತ್ತು ಮೆದುಳು ಅವುಗಳನ್ನು ಅರ್ಥೈಸುತ್ತದೆ. ನಂತರ ದೃಷ್ಟಿ, ಶಬ್ದ, ರುಚಿ, ವಾಸನೆ ಅಥವಾ ಸ್ಪರ್ಶ, ನೋವು ಅಥವಾ ತಾಪಮಾನದ ಸಂವೇದನೆ ಎಂದು ಪ್ರತ್ಯೇಕವಾಗಿ ನಮ್ಮ ಅನುಭವಕ್ಕೆ ಬರುತ್ತದೆ.

    ಮೆದುಳಿನ ಆರೋಗ್ಯಕ್ಕೆ ಸಮಸ್ಯೆ ಕೊಡುವ ಅಭ್ಯಾಸಗಳು ಯಾವುವು? 

    ​ಸಾಕಷ್ಟು ನಿದ್ರೆ ಮಾಡದಿರುವುದು​

    ನಮ್ಮ ಒತ್ತಡದ ಜೀವನದಲ್ಲಿ ನಿದ್ರೆಯನ್ನು ಕಡೆಗಣಿಸುತ್ತೇವೆ. ನಿದ್ರೆಯ ಅಭಾವವು ಅರಿವಿನ ಸಾಮರ್ಥ್ಯಗಳನ್ನು ದುರ್ಬಲಗೊಳಿಸುತ್ತದೆ. ನೆನಪು, ತಾರ್ಕಿಕತೆ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳ ಮೇಲೆ ಪರಿಣಾಮ ಬೀರುತ್ತದೆ.

    ಒಂದು ಗಂಟೆ ಮುಂಚಿತವಾಗಿ ಮಲಗುವುದು, ಮಲಗುವ ಒಂದು ಗಂಟೆ ಮೊದಲು ಆಲ್ಕೋಹಾಲ್ ಮತ್ತು ಕೆಫೀನ್‌ನಿಂದ ದೂರವಿರುವುದು ಮತ್ತು ಮೊಬೈಲ್‌, ಕಂಪ್ಯೂಟರ್‌ ಬೆಳಕನ್ನು ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವುದು ಇವೆಲ್ಲವೂ ಮೆದುಳಿನ ರಕ್ಷಣಾತ್ಮಕ ತಡೆಗೋಡೆಗಳಾಗಿ ಕಾರ್ಯನಿರ್ವಹಿಸುತ್ತವೆ. 

    ದೀರ್ಘಕಾಲ ಕುಳಿತುಕೊಳ್ಳುವುದು​

    UCLA ಹೆಲ್ತ್ ಅಧ್ಯಯನದ ಪ್ರಕಾರ ದೀರ್ಘಕಾಲ ಕುಳಿತುಕೊಳ್ಳುವುದು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಕನಿಷ್ಠ 150 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಒಳಗೊಂಡಿರುವ ವ್ಯಾಯಾಮವನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.

    ಅಸಮರ್ಪಕ ನೀರಿನ ಸೇವನೆ

    ನೀರು ಮೆದುಳಿನ ಪ್ರಮುಖ ಅಂಶವಾಗಿದೆ. ಆದರೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಇದನ್ನು ಮರೆತುಬಿಡುತ್ತೇವೆ. ನಿರ್ಜಲೀಕರಣವು ಪ್ರತಿಕ್ರಿಯೆಯ ಸಮಯ, ಸ್ಮರಣೆ ಮತ್ತು ಗಮನದ ಮೇಲೆ ಪರಿಣಾಮ ಬೀರಬಹುದು.

    ಉಪಹಾರವನ್ನು ಬಿಟ್ಟುಬಿಡುವುದು​

    ಬೆಳಗಿನ ಉಪಾಹಾರವು ದಿನದ ಅತ್ಯಂತ ಮಹತ್ವದ ಎಂದು ಪರಿಗಣಿಸಲ್ಪಟ್ಟಿದೆ. ಇದು ಮೆದುಳಿಗೆ ಅಗತ್ಯವಾದ ಪ್ರಮುಖ ಶಕ್ತಿಯನ್ನು ನೀಡುತ್ತದೆ. ಉಪಾಹಾರವನ್ನು ಬಿಟ್ಟುಬಿಡುವುದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

  • ರಾಜ್ಯದ 33 ಸರ್ಕಾರಿ ಆಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಕೇಂದ್ರಗಳಿಗೆ ಚಾಲನೆ: ದಿನೇಶ್ ಗುಂಡೂರಾವ್

    ರಾಜ್ಯದ 33 ಸರ್ಕಾರಿ ಆಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಕೇಂದ್ರಗಳಿಗೆ ಚಾಲನೆ: ದಿನೇಶ್ ಗುಂಡೂರಾವ್

    ಬೆಂಗಳೂರು: ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಸೇವೆಗೆ (Brain Health Services) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  (Dinesh Gundu Rao)ಇಂದು ಚಾಲನೆ ನೀಡಿದರು.

    ನಿಮ್ಹಾನ್ಸ್ (NIMHANS) ಸಂಸ್ಥೆಯ ಸಹಯೋಗದಲ್ಲಿ ರಾಜ್ಯದ 33 ಸರ್ಕಾರಿ ಆಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಕೇಂದ್ರಗಳನ್ನ ತೆರೆಯಲಾಗಿದೆ.‌ ಈ ಮೂಲಕ ನಿಮ್ಹಾನ್ಸ್ ಮೇಲಿನ ಒತ್ತಡ ಕಡಿಮೆ ಮಾಡುವುದರೊಂದಿಗೆ, ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿಯೇ ಮೆದುಳು ಹಾಗೂ ನರ ಸಮಸ್ಯೆಗಳನ್ನ ಹೊಂದಿರುವ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸುವತ್ತ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.

    ಬೆಂಗಳೂರಿನ (Bengaluru) ನಿಮ್ಹಾನ್ಸ್ ನಲ್ಲಿ ಇಂದು ನೂತನ ಮೆದುಳು ಆರೋಗ್ಯ ಕೇಂದ್ರಗಳಿಗೆ ಚಾಲನೆ ನೀಡಿದ ಬಳಿಕ ದಿನೇಶ್ ಗುಂಡೂರಾವ್, ದೇಶದಲ್ಲಿ ಇದೊಂದು ಮಾದರಿ ಕಾರ್ಯಕ್ರಮವಾಗಲಿದೆ. ಮೆದುಳು ಆರೋಗ್ಯದ ವಿಚಾರದಲ್ಲಿ ಹೆಚ್ಚು ಒತ್ತು ನೀಡಬೇಕಾಗಿದೆ. ಕರ್ನಾಟಕ ಸರ್ಕಾರ ಹಾಗೂ ಆರೋಗ್ಯ ಇಲಾಖೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ಎಂದರು. ಇದನ್ನೂ ಓದಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ – ಕೇಂದ್ರದಿಂದ ಅಧಿಸೂಚನೆ ಪ್ರಕಟ

     

    ಮೆದುಳು ಹಾಗೂ ನರ ಸಮಸ್ಯೆಗಳಿಗೆ ರಾಜ್ಯದ ಜನರು ಬೆಂಗಳೂರಿನ ನಿಮ್ಹಾನ್ಸ್ ಗೆ ಆಗಮಿಸಬೇಕಾಗಿತ್ತು. ನಿಮ್ಹಾನ್ಸ್ ಮೇಲೆ ಹೆಚ್ಚಿನ ಒತ್ತಡ ಇತ್ತು‌. ಈ ಒತ್ತಡವನ್ನ ಕಡಿಮೆ ಮಾಡುವುದರ ಜೊತೆಗೆ, ಜಿಲ್ಲಾ ಮಟ್ಟದಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲು 33 ಮೆದುಳು ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ನಿಮ್ಹಾನ್ಸ್ ಸಹಯೋಗ ಹಾಗೂ ಸಲಹೆಗಳೊಂದಿಗೆ ಈ ಕೇಂದ್ರಗಳಲ್ಲಿ ಇನ್ಮುಂದೆ ಚಿಕಿತ್ಸೆ ದೊರೆಯಲಿದೆ ಎಂದರು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ನಿಮ್ಹಾನ್ಸ್ ತಜ್ಞ ವೈದ್ಯರ ಸಲಹೆ ಪಡೆದುಕೊಂಡು ಜಿಲ್ಲಾ ಕೇಂದ್ರಗಳಲ್ಲಿಯೇ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

    ಪಾರ್ಶ್ವವಾಯು, ಅಪಸ್ಮಾರ, ಮರೆವಿನ ಕಾಯಿಲೆ ಮತ್ತು ತಲೆನೋವು ಸೇರಿದಂತೆ ನರವೈಜ್ಞಾನಿಕ ಕಾಯಿಲೆಗಳ ಹೊರ ಭಾರತದಲ್ಲಿ ಹೆಚ್ಚಾಗುತ್ತಿದೆ. ಇವು ಮರಣ ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿವೆ. ಇದನ್ನು ಸಮರ್ಥವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಆರೋಗ್ಯ ಕೇಂದ್ರಗಳು ಸಹಕಾರಿಯಾಗಲಿವೆ. ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಪಿಸಿಯೋಥೆರಪಿಸ್ಟ್, ಸ್ಪೀಚ್ ಥೆರಪಿಸ್ಟ್, ಮನಶ್ಯಾಸ್ತ್ರಜ್ಞರು, ನರ್ಸ್ ಮತ್ತು ಜಿಲ್ಲಾ ಸಂಯೋಜಕರನ್ನು ಒಳಗೊಂಡಿರುತ್ತದೆ.  ಇದನ್ನೂ ಓದಿ: ಡಿಕೆಸು Vs ಡಾ.ಮಂಜುನಾಥ್‌ ಸ್ಪರ್ಧೆ ಫಿಕ್ಸ್‌, ಅಧಿಕೃತ ಘೋಷಣೆ ಮಾತ್ರ ಬಾಕಿ – ಜೆಡಿಎಸ್‌ ಸಭೆಯಲ್ಲಿ ಏನು ಚರ್ಚೆ ನಡೆದಿದೆ?

     
    ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಪ್ರಮುಖ ಅಂಶಗಳು
    1. ಮೆದುಳು ಆರೋಗ್ಯ ಚಿಕಿತ್ಸಾಲಯಗಳ ಸ್ಥಾಪನೆ: ಕರ್ನಾಟಕದ 31 ಜಿಲ್ಲೆ ಮತ್ತು ಬಿಬಿಎಂಪಿಯ ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ. ನರರೋಗಿಗಳಿಗೆ ಸಕಾಲಿಕ ಚಿಕಿತ್ಸೆಯನ್ನು ಖಾತ್ರಿಪಡಿಸುವ ಮತ್ತು ಆರೈಕೆಗಾಗಿ ನೋಡಲ್ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ.

    2. ಸಾಮರ್ಥ್ಯ ವೃದ್ಧಿ: ನರವೈಜ್ಞಾನಿಕ ಅಸ್ವಸ್ಥತೆಗಳ ನಿರ್ವಹಣೆಯನ್ನು ಹೆಚ್ಚಿಸಲು ರಾಜ್ಯಾದ್ಯಂತ ಆಶಾ ಕಾರ್ಯಕರ್ತರು, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೈಕೆ ವೈದ್ಯರು ಮತ್ತು ಫಿಜಿಷಿಯನ್ಸ್ ಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

    3. ನರರೋಗತಜ್ಞರ ರಾಜ್ಯವ್ಯಾಪಿ ನೆಟ್ವರ್ಕ್: ಪ್ರಾಥಮಿಕ ಹಂತದಲ್ಲಿ ವಿಶೇಷ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ತಜ್ಞರ ಸಮಾಲೋಚನೆ, ಟೆಲಿನ್ಯೂರಾಲಜಿ ಮತ್ತು ಟೆಲಿಮೆಂಟರಿಂಗ್ ಸೇವೆಗಳನ್ನು ಒದಗಿಸುವ ನರರೋಗತಜ್ಞರುಗಳನ್ನು ಸಂಯೋಜಿಸಲಾಗಿದೆ.

     

    4. ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳ ನಡುವೆ ಸಂಬಂಧವನ್ನು ಬಲಪಡಿಸುವ ಮತ್ತು ಪ್ರಾಥಮಿಕ ಹಂತದಲ್ಲಿ ರೋಗನಿರ್ಣಯ, ಸಕಾಲಿಕ ಚಿಕಿತ್ಸೆಯನ್ನು ಸುಲಭಗೊಳಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಯೋಜಕರ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

    5. ಅಂತರ್ವಿಭಾಗಿಯ ಸಮನ್ವಯ: ಅಸಾಂಕ್ರಾಮಿಕ ರೋಗಗಳು, ಮಾನಸಿಕ ಆರೋಗ್ಯ, ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಾಲ್ತಿಯಲ್ಲಿರುವ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳೊಂದಿಗೆ ನಿಬಂಧನೆಗಳ ಏಕೀಕರಣಗೊಳಿಸಿದೆ.

    6. ಮೆದುಳಿನ ಆರೋಗ್ಯ ಜಾಗೃತಿ ಅಭಿಯಾನಗಳು: ಮೆದುಳಿನ ಆರೋಗ್ಯವನ್ನು ಉತ್ತೇಜಿಸಲು ವ್ಯಾಪಕವಾದ ಅಭಿಯಾನಗಳು, ತಡೆಗಟ್ಟುವಿಕೆ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳ ಆರಂಭಿಕ ಗುರುತಿಸುವಿಕೆಯ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸುವುದು.

    7. ಡಿಜಿಟಲ್ ಡೇಟಾ ಮತ್ತು ಮಾಹಿತಿ ವ್ಯವಸ್ಥೆ : ಸಂವಹನ, ಕೆಲಸದ ಹರಿವು ಮತ್ತು ಪ್ರಭಾವದ ಮೌಲ್ಯಮಾಪನವನ್ನು ಸುಗಮಗೊಳಿಸುವ ಅತ್ಯಾಧುನಿಕ ವ್ಯವಸ್ಥೆ.

    8. ಅನುಷ್ಠಾನ ಸಂಶೋಧನೆ: ರಾಜ್ಯಾದ್ಯಂತ ನರರೋಗ ಉತ್ತಮಗೊಳಿಸಲು ಸಂಶೋಧನೆಯನ್ನು ಕೂಡ ಅಡವಳಿಸಲಾಗುತ್ತಿದೆ.

  • ‘ಬಿಗ್ ಬಾಸ್’ ಮನೆಯಲ್ಲಿ ಭಯಾನಕ ಸೌಂಡ್ : ದಿಕ್ಕೆಟ್ಟು ಓಡಿದ ಸ್ಪರ್ಧಿಗಳು

    ‘ಬಿಗ್ ಬಾಸ್’ ಮನೆಯಲ್ಲಿ ಭಯಾನಕ ಸೌಂಡ್ : ದಿಕ್ಕೆಟ್ಟು ಓಡಿದ ಸ್ಪರ್ಧಿಗಳು

    ಬಿಗ್ ಬಾಸ್ (Bigg Boss Season 9) ಮನೆಯ ಅಷ್ಟೂ ಸದಸ್ಯರು ಬೆಚ್ಚಿ ಬಿದ್ದಿದ್ದಾರೆ. ಸವಿ ನಿದ್ರೆಯಲ್ಲಿ ಮೈ ಮರೆತು ಮಲಗಿದ್ದವರು, ಬಿಗ್ ಬಾಸ್ ಮನೆಯಲ್ಲಿ ಕೇಳಿ ಬಂದ ಭಯಾನಕ ಸೌಂಡ್‍ಗೆ ದಿಕ್ಕೆಟ್ಟು ಗಾರ್ಡನ್ ಏರಿಯಾದತ್ತ ಓಡಿದ ಪ್ರಸಂಗ ನಡೆದಿದೆ. ಶಬ್ದ ಕೇಳುತ್ತಿದ್ದಂತೆಯೇ ಜೀವವೇ ಬಾಯಿಗೆ ಬಂದಂತಾಗಿ, ಪ್ರಾಣ ರಕ್ಷಣೆಗಾಗಿ ಅತ್ತಿತ್ತ ಓಡಿದ ಘಟನೆ ನಡೆದಿದೆ. ಭಯಾನಕ ಹಾಗೂ ವಿಚಿತ್ರ ಸೌಂಡ್ ಜೊತೆಗೆ ಮನೆಯ ಲೈಟ್ ಕೂಡ ವಿಚಿತ್ರವಾಗಿ ಕುಣಿದು ಆತಂಕದ ವಾತಾವರಣ ಸೃಷ್ಟಿಯಾಗಿದೆ.

    ಒಬ್ಬರಿಗೊಬ್ಬರು ಕಾಲೆಳೆದುಕೊಂಡು, ಕಚಗುಳಿ ಇಡ್ತಾ, ಆಗೊಮ್ಮೆ ಈಗೊಮ್ಮೆ ರೊಮ್ಯಾಂಟಿಕ್ ಆಗಿ ಮಾತಾಡ್ತಾ, ಸವಿ ನಿದ್ದೆಗೆ ಜಾರೋದು ಬಿಗ್ ಬಾಸ್ ಮನೆಯಲ್ಲಿದ್ದವರ ದಿನಚರಿ. ರಾತ್ರಿ ಹಾಯಾಗಿ ಮಲಗಿ, ಬೆಳಗ್ಗೆ ‘ಎದ್ದೇಳು ಮಂಜುನಾಥ’ ಹಾಡಿಗೆ ಕುಣಿಯುತ್ತಾ ಹೊಸ ದಿನ ಶುರು ಮಾಡೋ ಹೊತ್ತಲ್ಲಿ ಈ ಭಾರೀ ಕೆಲ ಹೊತ್ತು ಆತಂಕ ಸೃಷ್ಟಿ ಮಾಡಿತ್ತು. ಕೆಲವರು ನಿಂತಲ್ಲಿಯೇ ಬೆಚ್ಚಿದರೆ, ಕೆಲವರು ಬಿಗ್ ಬಾಸ್ ಮನೆಯಿಂದ ಓಡಿ ಹೋಗುವ ಪ್ರಯತ್ನ ಮಾಡಿದ್ದಾರೆ. ಇನ್ನೂ ಕೆಲವರು ಗಾರ್ಡನ್ ಏರಿಯಾಗೆ ಬಂದು ಸುಧಾರಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಸಂಸ್ಕಾರ ಭಾರತ’ದಲ್ಲಿ ಅನಾಮಿಕನ ರೋಚಕ ಸ್ಟೋರಿ

    ಅಷ್ಟಕ್ಕೂ ಆ ಶಬ್ದ ಬಂದಿದ್ದು ಎಲ್ಲಿಂದ ಎನ್ನುವುದೇ ಇಂಟ್ರಸ್ಟಿಂಗ್ ವಿಷ್ಯ. ಸಾಮಾನ್ಯವಾಗಿ ಬೆಳಗ್ಗೆ ಸ್ಪರ್ಧಿಗಳನ್ನು ಎಬ್ಬಿಸೋಕೆ ‘ಎದ್ದೇಳು ಮಂಜುನಾಥ’ ಹಾಡು ಹಾಕಲಾಗತ್ತೆ. ಅದರ ಬಲು ಭಾರೀ ಶಬ್ದ ಮಾಡಿ ಎಬ್ಬಿಸುವ ಪ್ರಯತ್ನ ನೆನ್ನೆ ನಡೆದಿದೆ. ಶಬ್ದ ಕೇಳಿ ಭಯಗೊಂಡು ಗಾರ್ಡನ್ ಏರಿಯಾಗೆ ಬಂದವರಿಗೆ ಅಲ್ಲೊಂದು ಸರ್ ಪ್ರೈಸ್ ಕಾದಿತ್ತು. ಗಾರ್ಡನ್ ಏರಿಯಾದಲ್ಲಿ ಮೆದುಳಿನ ಮಾದರಿಯನ್ನು ಇಡಲಾಗಿತ್ತು. ಈ ಮೆದುಳಿಗೆ ಲೈಟ್ ಕೂಡ ಹಾಕಿ ಡೆಕಾರೇಟ್ ಮಾಡಲಾಗಿದೆ.

    ಬಿಗ್ ಬಾಸ್ ಮನೆಯಲ್ಲಿ ಕೇಳಿ ಬಂದ, ಭಯಾನಕ ಶಬ್ದಕ್ಕೂ ಈ ಮೆದುಳಿನಾಕೃತಿಗೂ ಏನಾದರೂ ಸಂಬಂಧ ಇದೆಯಾ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಹೌದು, ಈ ವಾರದಲ್ಲಿ ಮೆದುಳಿಗೆ ಸಂಬಂಧಿಸಿದ ಟಾಸ್ಟ್ ಇರಲಿದೆ ಎಂದು ಹೇಳಲಾಗುತ್ತಿದೆ. ಶಕ್ತಿ ಮತ್ತು ಯುಕ್ತಿಗಳ ಸಮ್ಮಿಲನವೇ ಈ ವಾರದ ಟಾಸ್ಕ್ ಎಂದು ಹೇಳಲಾಗುತ್ತಿದೆ. ಅದನ್ನು ತಿಳಿಸುವುದಕ್ಕಾಗಿಯೇ ಬಿಗ್ ಬಾಸ್ ಈ ರೀತಿ ಆಟವಾಡಿದ್ದಾರೆ ಎನ್ನುವುದು ಮನೆ ಒಳಗಿದ್ದವರು ಲೆಕ್ಕಾಚಾರ. ಆದರೆ, ಬಿಗ್ ಬಾಸ್ ಲೆಕ್ಕಾಚಾರ ಅದೇನಿದೆಯೋ, ಅವನೇ ಬಲ್ಲ.

    Live Tv
    [brid partner=56869869 player=32851 video=960834 autoplay=true]

  • ಬಾಕ್ಸ್‌ನಲ್ಲಿ ಕಣ್ಣು, ಕಿವಿ ಮೆದುಳು ಸಂಗ್ರಹಿಸಿಟ್ಟ ದುಷ್ಕರ್ಮಿಗಳು

    ಬಾಕ್ಸ್‌ನಲ್ಲಿ ಕಣ್ಣು, ಕಿವಿ ಮೆದುಳು ಸಂಗ್ರಹಿಸಿಟ್ಟ ದುಷ್ಕರ್ಮಿಗಳು

    ಮುಂಬೈ: ಕಟ್ಟಡದ ನೆಲಮಾಳಿಗೆಯಲ್ಲಿ ಬೀಗ ಹಾಕಲಾಗಿದ್ದ ಅಂಗಡಿಯೊಂದರಲ್ಲಿ ಮೃತ ದೇಹದ ಭಾಗಗಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

    ಕಳೆದೆರಡು ದಿನಗಳಿಂದ ಅಂಗಡಿಯಿಂದ ದುರ್ವಾಸನೆ ಬರುತ್ತಿತ್ತು. ಈ ಕುರಿತಾಗಿ ಮಹಾರಾಷ್ಟ್ರದ ನಾಸಿಕ್ ನಗರದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಪರಿಶೀಲನೆ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

    ನಡೆದಿದ್ದೇನು?: ಮೂರ್ನಾಲ್ಕು ದಿನಗಳಿಂದ ಬೀಗ ಹಾಕಲಾಗಿದ್ದ ಅಂಗಡಿಯೊಂದರಿಂದ ದುರ್ನಾತ ಬರುತ್ತಿತ್ತು. ಅಕ್ಕಪಕ್ಕದವರಿಗೆ ಅನುಮಾನ ಉಂಟಾಗಿ ಪೊಲೀಸರಿಗೆ ಈ ವಿಷಯ ತಿಳಿಸಿದ್ದರು. ಆಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂಗಡಿಯ ಬಾಗಿಲು ಒಡೆದು ನೆಲಮಾಳಿಗೆಯನ್ನು ಪರಿಶೀಲನೆ ಮಾಡಿದ್ದಾರೆ.

    ತುಂಬಿಡಲಾಗಿದ್ದ ಗುಜರಿ ವಸ್ತುಗಳ ಮಧ್ಯೆ ಒಂದು ಬಾಕ್ಸ್‌ನಲ್ಲಿ ಮನುಷ್ಯರ ಕಣ್ಣು, ಕಿವಿ, ಮೆದುಳು, ಮುಖದ ಕೆಲವು ಭಾಗಗಳು ಪತ್ತೆಯಾಗಿವೆ. ಮಾನವನ ದೇಹದ ಭಾಗಗಳನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಅಂಗಡಿಯ ಮಾಲೀಕನ ಇಬ್ಬರು ಪುತ್ರರು ವೈದ್ಯರಾಗಿದ್ದಾರೆ. ವೈದ್ಯಕೀಯ ಉದ್ದೇಶಗಳಿಗಾಗಿ ಸಂರಕ್ಷಿಸಿಟ್ಟಿರುವ ಸಾಧ್ಯತೆಯಿದೆ. ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮುಂಬೈ ನಾಕಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

  • ಪ್ರಣಬ್ ಮುಖರ್ಜಿ ಸ್ಥಿತಿ ಗಂಭೀರ, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಪ್ರಣಬ್ ಮುಖರ್ಜಿ ಸ್ಥಿತಿ ಗಂಭೀರ, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ನವದೆಹಲಿ: ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಹೌದು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿಯವರಿಗೆ ಸೋಮವಾರ ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೂ ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ನಿನ್ನೆ ಮಧ್ಯಾಹ್ನದ ಬಳಿಕ ಟ್ವೀಟ್ ಮಾಡಿದ್ದ ಪ್ರಣಬ್ ಮುಖರ್ಜಿ, ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿ ಪಾಸಿಟಿವ್ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರೂ ಪರೀಕ್ಷೆ ಮಾಡಿಸಿಕೊಂಡು ಐಸೋಲೇಷನ್ ಗೆ ಒಳಗಾಗಿ ಎಂದು ತಿಳಿಸಿದ್ದರು.

    ಮಾಜಿ ರಾಷ್ಟ್ರಪತಿಗಳಿಗೂ ಕೊರೊನಾ ಸೋಂಕು ಹರಡಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ರಾಷ್ಟ್ರಪತಿ ರಮಾನಾಥ್ ಕೋವಿಂದ್, ಕೇಂದ್ರ ಸಚಿವ ರಾಜನಾಥ್ ಸಿಂಗ್, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಸಚಿವ ಸುಧಾಕರ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರದಂತೆ ಹಲವಾರು ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ್ದಾರೆ.