Tag: ಮೆಣಸಿನ ಕಾಯಿ

  • ಎಪಿಎಂಸಿನಲ್ಲಿ ಖರೀದಿದಾರರಿಂದ ರೈತರಿಗೆ ಮಕ್ಮಲ್ ಟೋಪಿ

    ಎಪಿಎಂಸಿನಲ್ಲಿ ಖರೀದಿದಾರರಿಂದ ರೈತರಿಗೆ ಮಕ್ಮಲ್ ಟೋಪಿ

    ಗದಗ: ಒಣ ಮೆಣಸಿನಕಾಯಿ ಖರೀದಿಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿ ಗದಗ ಎಪಿಎಂಸಿನಲ್ಲಿ ರೈತರು ರಾತ್ರಿ ಗಲಾಟೆ ಮಾಡಿದ್ದಾರೆ. ಇ-ಟೆಂಡರ್‍ನ ಬೆಲೆಗಿಂತ ಕಡಿಮೆ ಬೆಲೆ ನೀಡಲು ಖರೀದಿದಾರರು ಮುಂದಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

    ಗದಗ ಜಿಲ್ಲೆ ರೋಣ ತಾಲೂಕಿನ ಚಿಕ್ಕಮಣ್ಣೂರು ಗ್ರಾಮದ ಬಸವಲಿಂಗಪ್ಪ ಮೇಟಿ ಎಂಬ ರೈತನಿಗೆ ಖರೀದಾರನಿಂದ ಮೋಸವಾಗಿದೆ. ಇ-ಟೆಂಡರ್‍ನಲ್ಲಿ ಒಂದು ಕ್ವಿಂಟಾಲ್‍ಗೆ 13,175 ರೂ. ಆಗಿದೆ. ಆದರೆ ಕೇವಲ 12,170 ರೂಪಾಯಿ ಹಣ ನೀಡಲು ಬಂದಿದ್ದಾರೆ. ಅದೇ ರೀತಿ ಮತ್ತೊಂದು ಲಾಟ್ ನಲ್ಲಿ 11,250 ಇ-ಟೆಂಡರ್ ಬೆಲೆಯಾಗಿದೆ. ಆದರೆ ಖರೀದಿದಾರ ಕೇವಲ 7,200 ರೂಪಾಯಿ ಹಣವನ್ನ ರೈತನಿಗೆ ನೀಡಲು ಬಂದಿದ್ದರು. ಅದು ಇ-ಟೆಂಡರ್ ಪ್ರಿಂಟೆಡ್ ಚೀಟಿ ಆಗಿರಲಿಲ್ಲ. ತಾವೇ ಕೈನಲ್ಲಿ ಬರೆದುಕೊಂಡು ಬಂದ ಚೀಟಿಯಾಗಿತ್ತು. ಆಗ ರೈತನಿಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ, ಗೋಲ್ಮಾಲ್ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಮೆಣಸಿನಕಾಯಿ ಮಾಲೀಕ ಹಾಗೂ ಖರೀದಿದಾರ ನಡುವೆ ಮಾತಿನ ಚಕಮಕಿ ನಡೆದಿದೆ. ಟೆಂಡರ್ ಆದ ಬೆಲೆಯ ಪಟ್ಟಿಯನ್ನ ಅಥವಾ ರಸೀದಿ ನೀಡುವಂತೆ ರೈತರ ಆಗ್ರಹವಾಗಿದೆ.

    ಗದಗ ಎಪಿಎಂಸಿನಲ್ಲಿ ಹಗಲು ದರೋಡೆ ನಡೆಯುತ್ತಿದೆ. ಟೆಂಡರ್‍ನಲ್ಲಿ ಆದ ಬೆಲೆಯೇ ಬೇರೆಯಾಗಿರುತ್ತದೆ. ನಂತರ ರೈತರಿಗೆ ನೀಡುವ ಪಟ್ಟಿಯೇ ಬೇರೆಯಾಗಿರುತ್ತದೆ. ಅದಕ್ಕೆ ಸರಿಯಾದ ದಾಖಲೆ ನೀಡುವುದಿಲ್ಲ. ಜೊತೆಗೆ ತೂಕದಲ್ಲೂ ಗೋಲ್ಮಾಲ್ ಮಾಡುತ್ತಾರೆ. ಒಂದು ಚೀಲ 35 ಕೆ.ಜಿ ತೂಕಕ್ಕಿಂತ ಕಡಿಮೆ ಬಂದರೆ ಒಂದೂವರೆ ಕೆಜಿ ನಷ್ಟು ತೂಕ ಲೆಸ್ ಮಾಡುತ್ತಾರೆ. ಆಕಸ್ಮಾತ್ ಒಂದು ಚೀಲ 35 ಕೆ.ಜಿಗೂ ಮೇಲ್ಪಟ್ಟರೆ ಎರಡು ಕೆಜಿಯಷ್ಟು ಕಡಿತಗೊಳಿಸ್ತಾರೆ. ಇ-ಟೆಂಡರ್ ಆದ್ರೂ ನ್ಯಾಯಯುತ ಬೆಲೆಸಿಗುತ್ತಿಲ್ಲ. ಹೊರಗಿನ ಜಿಲ್ಲೆಯ ಖರೀದಿದಾರರಿಗೆ ಈ ಎಪಿಎಂಸಿನಲ್ಲಿ ಖರೀದಿ ಮಾಡಲು ಅನುಮತಿ ನೀಡ್ತಿಲ್ಲ. ಇದರಿಂದ ನಮಗೆ ಅನ್ಯಾಯವಾಗ್ತಿದೆ ಎಂದು ರೈತರು ಆರೋಪಿಸಿದ್ದಾರೆ.

    ರಾತ್ರಿಯಾದ್ರೂ ಸಹ ರೈತರು ಅಂಗಡಿಗಳ ಮುಂದೆ ಗಲಾಟೆಗೆ ಮುಂದಾದರು. ನಂತರ ಬೆಟಗೇರಿ ಬಡಾವಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಲು ಮುಂದಾದರು.

  • ಸಿಲಿಂಡರ್ ಸಾಗಾಟ ಲಾರಿ, ಟಿಪ್ಪರ್ ಮಧ್ಯೆ ಡಿಕ್ಕಿ – ಅಪಘಾತದ ರಭಸಕ್ಕೆ ಒಂದೊಂದಾಗಿ ಸಿಲಿಂಡರ್ ಸ್ಫೋಟ

    ಸಿಲಿಂಡರ್ ಸಾಗಾಟ ಲಾರಿ, ಟಿಪ್ಪರ್ ಮಧ್ಯೆ ಡಿಕ್ಕಿ – ಅಪಘಾತದ ರಭಸಕ್ಕೆ ಒಂದೊಂದಾಗಿ ಸಿಲಿಂಡರ್ ಸ್ಫೋಟ

    ಹುಬ್ಬಳ್ಳಿ: ಅಡುಗೆ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಮತ್ತು ಟಿಪ್ಪರ್ ನಡುವೆ ಮಾಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೊಂದಾಗಿ ಸಿಲಿಂಡರ್ ಸ್ಫೋಟಗೊಂಡ ಘಟನೆ ಹುಬ್ಬಳ್ಳಿಯ ಭಂಡಿವಾಡ ಗ್ರಾಮದ ಬಳಿ ನಡೆದಿದೆ.

    ಡಿಕ್ಕಿಯ ರಭಸಕ್ಕೆ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ರಸ್ತೆ ಮಧ್ಯೆ ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡು, ಈ ಬೆಂಕಿಯಿಂದ ಲಾರಿಯಲ್ಲಿದ್ದ ಸಿಲಿಂಡರ್ ಗಳು ಒಂದೊಂದಾಗಿ ಸ್ಫೋಟಗೊಂಡಿವೆ. ಪರಿಣಾಮ ಅಕ್ಕಪಕ್ಕದ ಹೊಲದಲ್ಲಿ ಸಿಲಿಂಡರ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹೀಗಾಗಿ ರಸ್ತೆಯಲ್ಲಿ ನಿಲ್ಲಿಸಿರುವ ವಾಹನ ಸವಾರರಲ್ಲಿಯೂ ಭಯದ ವಾತಾವರಣ ನಿರ್ಮಾಣವಾಗಿದೆ.

    300 ಕ್ಕೂ ಹೆಚ್ಚು ಸಿಲಿಂಡರ್ ಪೈಕಿ ಸುಮಾರು 180 ಕ್ಕೂ ಹೆಚ್ಚು ಸಿಲಿಂಡರ್ ಸ್ಫೋಟಗೊಂಡಿವೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ, ಕೆಲಹೊತ್ತು ಕಾರ್ಯಚರಣೆ ಮಾಡಲು ಆಗದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲಾಯಿತು. ಇದರಿಂದ ಹುಬ್ಬಳ್ಳಿ- ಗದಗ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ವಾಹನ ಸವಾರರು ಪರದಾಡುವಂತಹ ಸ್ಥಿತಿಯಿತ್ತು.

    ಘಟನೆಯಿಂದ ಲಾರಿ ಮತ್ತು ಟಿಪ್ಪರ್ ಚಾಲಕರು ಹಾಗೂ ಕ್ಲೀನರ್ ಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.