Tag: ಮೆಣಸಿನಕಾಯಿ

  • 68 ಸೆಕೆಂಡ್‍ನಲ್ಲಿ 50 ಮೆಣಸಿನಕಾಯಿ ತಿಂದ ಚೀನಾದ ಶೂರ!

    68 ಸೆಕೆಂಡ್‍ನಲ್ಲಿ 50 ಮೆಣಸಿನಕಾಯಿ ತಿಂದ ಚೀನಾದ ಶೂರ!

    ಬೀಜಿಂಗ್: ಚೀನಾದಲ್ಲಿ ನಡೆದ ಮೆಣಸಿನಕಾಯಿ ತಿನ್ನುವ ಸ್ಪರ್ಧೆಯಲ್ಲಿ ಯುವಕನೊಬ್ಬ ಒಂದು ನಿಮಿಷದಲ್ಲಿ ಸುಮಾರು 50 ಮೆಣಸಿನಕಾಯಿ ತಿಂದು ಗೆಲುವನ್ನು ಸಾಧಿಸಿದ್ದಾನೆ.

    ಟ್ಯಾಂಗ್ ಶುಯಿಹುಯಿ ಸ್ಪರ್ಧೆ ಗೆದ್ದ ಸ್ಥಳೀಯ ಯುವಕ. ನಿಂಗ್ಕ್ಸಿಯಾಂಗ್‍ನ ಕೌಂಟೀಯ ಸ್ಥಳೀಯ ಉದ್ಯಾನವನದಲ್ಲಿ ನಡೆದ ಎರಡನೇ ವರ್ಷದ ವಾರ್ಷಿಕ ಕಾರ್ಯಕ್ರಮದಲ್ಲಿ ಮೆಣಸು ತಿನ್ನುವ ಸ್ಪರ್ಧೆಯಲ್ಲಿ ಗೆದ್ದು ಟ್ಯಾಂಗ್ 3 ಗ್ರಾಂ ಚಿನ್ನದ ನಾಣ್ಯವನ್ನು ತನ್ನದಾಗಿಸಿಕೊಂಡನು.

    ಸ್ಪರ್ಧೆಯನ್ನು ವೈದ್ಯರ ಸಮ್ಮುಖದಲ್ಲಿ, ಪ್ರತಿ ಸ್ಪರ್ಧಿಗಳಿಗೆ ತಲಾ 50 ಟಬಾಸ್ಕೋ ಮೆಣಸಿನಕಾಯಿಗಳನ್ನು ಪ್ಲೇಟ್‍ನಲ್ಲಿ ಕೊಟ್ಟಿದ್ದರು. ಯಾರು ಮೊದಲು ಎಲ್ಲವನ್ನು ತಿಂದು ಮುಗಿಸುತ್ತಾರೋ ಅವರು ಜಯಶಾಲಿಯಾಗುತ್ತಾರೆ ಎಂದು ಘೋಷಿಸಲಾಗಿತ್ತು.

    ಬರೋಬ್ಬರಿ ಮೂರು ಟನ್‍ಗಳಷ್ಟು ತೇಲುತ್ತಿದ್ದ ಮೆಣಸಿನಕಾಯಿಗಳ ಕೊಳದಲ್ಲಿ ಸ್ಪರ್ಧಿಗಳು ಕುಳಿತು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಟ್ಯಾಂಗ್ ಕೇವಲ 68 ಸೆಕೆಂಡ್‍ಗಳಲ್ಲಿ ಪೂರ್ತಿ ಪ್ಲೇಟ್ ಕಾಲಿ ಮಾಡಿದ್ದಾನೆ.  ದಾಖಲೆಯ ವೇಗದಲ್ಲಿ ಸ್ಪರ್ಧೆಯನ್ನು ಟ್ಯಾಂಗ್ ಮುಗಿಸಿದ್ದಾನೆ ಎಂದು ತಾನ್ಹೆ ಉದ್ಯಾನವನದ ಸಿಬ್ಬಂದಿ ಸನ್ ಮಿನಿಯಾಂಗ್ ಹೇಳಿದರು.

    ಮೆಣಸಿನ ಖಾರವನ್ನು ಅಳೆಯುವ ಮಾಪನವಾದ ಸ್ಕೋವಿಲ್ಲೆಯಲ್ಲಿ ಈ ಮೆಣಸಿನಕಾಯಿ 30,000- 50,000 ಹೀಟ್ ಯೂನಿಟ್ ಹೊಂದಿದೆ. ಸ್ಪರ್ಧಿಗಳಿಗೆ ತೊಂದರೆ ಆಗಬಾರದು, ಸ್ಪರ್ಧಿಗಳ ಚರ್ಮಕ್ಕೆ ಯಾವುದೇ ಹಾನಿ ಆಗಬಾರದು ಎಂದು ಕಡಿಮೆ ಗುಣಮಟ್ಟದ ಮೆಣಸುಗಳನ್ನು ಕೊಳದಲ್ಲಿ ಹಾಕಲಾಗಿತ್ತು.

    ಹುನಾನ್ ಕಸೀನ್ ಮಾರುಕಟ್ಟೆಯ ಮೆಣಸಿನಕಾಯಿಗಳನ್ನು ಚೀನಾದ 8 ವಿವಿಧ ಖಾದ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಸಿಚೌನ್, ಕ್ಯಾಂಟೋನಿಸ್ ಸೇರಿದಂತೆ ಹಲವು ಆಹಾರ ಖಾದ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಈ ಮೆಣಸಿನಕಾಯಿಗಳು ಗುಣಮಟ್ಟತೆಯನ್ನು ಹೊಂದುವದರ ಜೊತೆಗೆ ಬಣ್ಣವನ್ನು ಸಹ ಹೊಂದಿರುತ್ತವೆ.

    ಈ ಉತ್ಸವವು ಆಗಸ್ಟ್ ತಿಂಗಳ ಅಂತ್ಯದವರೆಗೂ ನಡೆಯಲಿದ್ದು, ಪ್ರತಿ ದಿನವು ಮೆಣಸಿನಕಾಯಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗುತ್ತದೆ.

  • ಈ ವ್ಯಕ್ತಿಗೆ ಪ್ರತಿದಿನ ತಿನ್ನಲು ಬೇಕು 3 ಕೆಜಿ ಮೆಣಸಿನಕಾಯಿ: ವಿಡಿಯೋ ನೋಡಿ

    ಈ ವ್ಯಕ್ತಿಗೆ ಪ್ರತಿದಿನ ತಿನ್ನಲು ಬೇಕು 3 ಕೆಜಿ ಮೆಣಸಿನಕಾಯಿ: ವಿಡಿಯೋ ನೋಡಿ

    ಭೋಪಾಲ್: ಊಟದ ಮಧ್ಯದಲ್ಲಿ ಒಂದು ಮೆಣಸಿನಕಾಯಿ ಬಂದರೆ ಅಬ್ಬಾ ಎಂದು ಕಣ್ಣು ಮೇಲೆ ಮಾಡುವುದುಂಟು. ಆದರೆ ಇಲ್ಲೊಬ್ಬ ವ್ಯಕ್ತಿಗೆ ಪ್ರತಿದಿನ ತಿನ್ನಲು 3 ಕೆಜಿ ಮೆಣಸಿನಕಾಯಿ ಬೇಕು.

    ಹೌದು, ನೀವು ನಂಬ್ಲೇಬೇಕು. ಮಧ್ಯ ಪ್ರದೇಶ ರಾಜ್ಯದ 40 ವರ್ಷದ ಪ್ಯಾರೇ ಮೋಹನ್ ಅವರು ಪ್ರತಿದಿನ 3 ಕೆ.ಜಿ. ಮೆಣಸಿಕಾಯಿ ಅಥವಾ ಮೆಣಸಿನ ಪುಡಿಯನ್ನು ತಿನ್ನುತ್ತಾರೆ. ಹಸಿ ಮೆಣಸಿನಕಾಯಿ ಅಥವಾ ಕೆಂಪು ಮೆಣಸಿನಕಾಯಿ ಅಥವಾ ಕರಿ ಮೆಣಸು ಪುಡಿಯನ್ನು ತಿಂದು ಜೀರ್ಣಿಸಿಕೊಳ್ತಾರೆ.

    ಮೋಹನ್ ಮೆಣಸಿನಕಾಯಿ ತಿನ್ನುವ ಮೂಲಕ ಸುತ್ತಮುತ್ತಲಿನ ಹಳ್ಳಿಯಲ್ಲಿ ಫೇಮಸ್ ಆಗಿದ್ದಾರೆ. ಮೋಹನ್ ಮೆಣಸಿನಕಾಯಿಗಳನ್ನು ತಿನ್ನುವುದನ್ನು ನೋಡುವುದಕ್ಕಾಗಿ ಜನರು ಗ್ರಾಮಕ್ಕೆ ಆಗಮಿಸುತ್ತಾರೆ. ಮೂರು ಮಕ್ಕಳ ತಂದೆಯಾಗಿರುವ ಮೋಹನ್ ಇದೂವರೆಗೂ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬಂದಿಲ್ಲ. ಪ್ರತಿದಿನ ಇಷ್ಟು ಖಾರ ತಿಂದ್ರೂ ಮೋಹನ್ ಆರೋಗ್ಯವಾಗಿದ್ದಾರೆ.

    ಇವನು ಚಿಲ್ಲಿ ಕಿಂಗ್: ಮೋಹನ್ ಭಾರತದಲ್ಲಿ 3 ಕೆಜಿ ಮೆಣಸಿಕಾಯಿಗಳನ್ನು ತಿಂದು ಫೇಮಸ್ ಆಗಿದ್ದರೆ, ಚೀನಾದಲ್ಲಿರುವ ಲೀ ಯೋಂಗಿಜಿ ಎಂಬವರು ಪ್ರತಿದಿನ 2.5 ಕೆಜಿ ಮೆಣಸಿನಾಯಿಗಳನ್ನು ತಿನ್ನುವ ಮೂಲಕ ಫೇಮಸ್ ಆಗಿದ್ದಾರೆ.

    ಲೀ ಯೋಂಗಿಜಿ ಮೆಣಸಿನ ಕಾಯಿ ತಿನ್ನುವುದರಿಂದ ಜನ ಅವರಿಗೆ ‘ಚಿಲ್ಲಿ ಕಿಂಗ್’ ಎಂದು ಬಿರುದು ನೀಡಿದ್ದಾರೆ. 10 ವರ್ಷಗಳ ಹಿಂದೆ ಯೋಂಗಿಜಿ ಎರಡು ಬೌಲ್ ಮೆಣಸಿನ ಪುಡಿ ತಿಂದು ನೀರು ಕುಡಿದು ಆಸ್ಪತ್ರೆಗೆ ಹೋಗಿದ್ದರಂತೆ, ಆದರೆ ವೈದ್ಯರು ಮಾತ್ರ ಎಲ್ಲರಂತೆ ಇದ್ದಿಯಾ ಎಂದು ಹೇಳಿದ್ದರು ಎಂದು ಲೀ ಯೋಂಗಿಜಿ ಹೇಳ್ತಾರೆ.

    ಅಂದಿನಿಂದ ಯೋಂಗಿಜಿ ಅವ್ರಿಗೆ ಸ್ನ್ಯಾಕ್ ರೂಪದಲ್ಲಿ ಪ್ರತಿದಿನ ಮೆಣಸಿಣಕಾಯಿ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

    https://www.youtube.com/watch?v=KgvkJvzqY94

     

     

     

     

     

  • ಮೆಣಸಿನಕಾಯಿ ಬೆಲೆ ಕುಸಿತ: ನಷ್ಟದಲ್ಲಿ ರಾಯಚೂರು ರೈತರು

    ಮೆಣಸಿನಕಾಯಿ ಬೆಲೆ ಕುಸಿತ: ನಷ್ಟದಲ್ಲಿ ರಾಯಚೂರು ರೈತರು

    -ಎಕರೆಗೆ 30 ಸಾವಿರ ರೂಪಾಯಿ ನಷ್ಟ

    -ಮಳೆ, ನೀರಿಲ್ಲದೆ ಇಳುವರಿ ಕುಂಠಿತ

    ರಾಯಚೂರು: ಜಿಲ್ಲೆಯ ಸಾವಿರಾರು ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದ ರೈತರಿಗೆ ಈ ಬಾರಿ ಖಾರ ತಟ್ಟಿದೆ. ನದಿ, ಕಾಲುವೆಗಳಲ್ಲಿ ನೀರು ಬತ್ತಿರುವುದು ಒಂದೆಡೆಯಾದ್ರೆ, ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ದೊಡ್ಡ ಹೊಡೆತ ನೀಡಿದೆ. ಪ್ರತಿಯೊಬ್ಬ ರೈತ ಕೂಡ ಲಕ್ಷಾಂತರ ರೂಪಾಯಿ ನಷ್ಟ ಹೊಂದಿ ಬೀದಿಗೆ ಬಂದಿದ್ದಾನೆ.

    ರಾಯಚೂರು ಜಿಲ್ಲೆಯ ಜೀವಜಲದ ಮೂಲಗಳಾದ ತುಂಗಾಭದ್ರ, ಕೃಷ್ಣ ನದಿಗಳು ಈಗ ರೈತರನ್ನ ಕೈ ಬಿಟ್ಟಿವೆ. ಇನ್ನು ಅಂತರ್ಜಲದ ಮಟ್ಟ ಕೂಡ ಕುಸಿಯುತ್ತಿದೆ. ಹೀಗಾಗಿ ಜಿಲ್ಲೆಯ ಸುಮಾರು 60 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಗೆ ನೀರಿಲ್ಲದೆ ಇಳುವರಿ ಕುಗ್ಗಿದೆ. ಪ್ರತೀ ವರ್ಷ ಎಕರೆಗೆ 25 ರಿಂದ 30 ಕ್ವಿಂಟಾಲ್‍ನಷ್ಟು ಬರುತ್ತಿದ್ದ ಬೆಳೆ ಈ ವರ್ಷ ಕೇವಲ 10 ರಿಂದ 13 ಕ್ವಿಂಟಾಲ್ ಬಂದಿದೆ. ಅಲ್ಲಿಗೆ ಎಕರೆಗೆ ಒಂದು ಲಕ್ಷದ ರೂ.ವರೆಗೆ ಖರ್ಚು ಮಾಡಿರುವ ರೈತರಿಗೆ ಎಕರೆಗೆ ಸುಮಾರು 30 ಸಾವಿರ ರೂಪಾಯಿ ನಷ್ಟವಾಗಿದೆ.

    ಮಾರುಕಟ್ಟೆಯಲ್ಲಿ ಕ್ವಿಂಟಾಲ್‍ಗೆ 12 ಸಾವಿರ ರೂಪಾಯಿಯಿದ್ದ ಬೆಲೆ ಈಗ 3 ರಿಂದ 5 ಸಾವಿರ ರೂಪಾಯಿಯಿದೆ. ಅಂದ್ರೆ ಪ್ರತಿ ಕ್ವಿಂಟಾಲ್‍ಗೆ ಸುಮಾರು 7 ಸಾವಿರ ರೂಪಾಯಿ ಇಳಿದಿದೆ. ಒಂದೆಡೆ ಮಳೆ ಕೈಕೊಟ್ಟರೆ, ಮತ್ತೊಂದೆಡೆ ಬೋರ್‍ವೆಲ್‍ನಿಂದ ನೀರು ಹಾಯಿಸಲು ರೈತರಿಗೆ ವಿದ್ಯುತ್ ಸಮಸ್ಯೆ ಕೂಡ ಇದೆ.

    ಕಳೆದ ಎಂಟತ್ತು ವರ್ಷಗಳಲ್ಲಿ ಅನುಭವಿಸದ ನಷ್ಟವನ್ನ ಮೆಣಸಿನಕಾಯಿ ಬೆಳೆಗಾರರು ಈ ವರ್ಷ ಅನುಭವಿಸಿದ್ದಾರೆ. ಬೆಲೆ ಪಾತಾಳಕ್ಕೆ ಕುಸಿದಿದ್ದರೂ ಸರ್ಕಾರ ಇದುವರೆಗೂ ಬೆಂಬಲ ಬೆಲೆ ಘೋಷಿಸಿಲ್ಲ. ಅಲ್ಲದೆ ಇತ್ತೀಚಿಗೆ ಸುರಿದ ಮಳೆಗೆ ಒಣಗಲು ಬಿಟ್ಟಿದ್ದ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ. ಹೀಗಾಗಿ ಮೆಣಸಿನಕಾಯಿ ಸಂಗ್ರಹಕ್ಕೆ ಗೋದಾಮುಗಳ ವ್ಯವಸ್ಥೆ ಮಾಡಬೇಕು ಹಾಗೂ ಬೆಳೆ ನಷ್ಟ ಪರಿಹಾರ ನೀಡಬೇಕು ಅಂತ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಒಟ್ನಲ್ಲಿ, ಬರಗಾಲದ ನಡುವೆಯೂ ಅಷ್ಟೋ ಇಷ್ಟೋ ಲಾಭದ ನಿರೀಕ್ಷೆಯಲ್ಲಿದ್ದ ಮೆಣಸಿನಕಾಯಿ ಬೆಳೆಗಾರರು ಭಾರೀ ನಷ್ಟವನ್ನೇ ಅನುಭವಿಸಿದ್ದಾರೆ. ಈಗಲಾದ್ರೂ ಸರ್ಕಾರ ರೈತರ ಕಡೆ ಗಮನಹರಿಸಬೇಕಿದೆ.