Tag: ಮೆಡಿಕಲ್ ಕಾಲೇಜು

  • ಸುಧಾಕರ್‌ಗೆ ಮಣೆ- ಬಿಜೆಪಿ ಕಾರ್ಯಕರ್ತರ ಅಸಮಾಧಾನ, ನಳಿನ್‌ಗೆ ದೂರು

    ಸುಧಾಕರ್‌ಗೆ ಮಣೆ- ಬಿಜೆಪಿ ಕಾರ್ಯಕರ್ತರ ಅಸಮಾಧಾನ, ನಳಿನ್‌ಗೆ ದೂರು

    ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಸುಧಾಕರ್ ಬೆಂಬಲಿಗರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಣೆ ಹಾಕುತ್ತಿದ್ದು, ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಂಜುನಾಥ್ ಕಾರ್ಯಕರ್ತರೊಂದಿಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದಲ್ಲಿ ನಳಿನ್ ಕುಮಾರ್ ಅವರನ್ನು ಮಂಜುನಾಥ್ ಭೇಟಿಯಾಗಿದ್ದಾರೆ. ಅನರ್ಹ ಶಾಸಕ ಸುಧಾಕರ್ ಬೆಂಬಲಿಗರಿಗೆ ಮುಖ್ಯಮಂತ್ರಿಗಳು ಮಣೆ ಹಾಕುತ್ತಿದ್ದಾರೆ. ಈ ಮೂಲಕ ಬಿಜೆಪಿಯ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಸುಧಾಕರ್ ಬೆಂಬಲಿಗರಿಗೆ ಹೆಚ್ಚು ಅಧಿಕಾರ ನೀಡುತ್ತಿದ್ದು, ಇದರಿಂದಾಗಿ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಅಧಿಕಾರ ಸಿಗದಂತಾಗಿದೆ ಎಂದು ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ.

    ಮುಖ್ಯಮಂತ್ರಿ ಹಾಗೂ ಸರ್ಕಾರದ ನಡೆ ವಿರುದ್ಧ ಕಟೀಲ್‌ಗೆ ದೂರು ನೀಡಿರುವ ಮಂಜುನಾಥ್, ಈ ಕುರಿತು ಚಿತ್ತ ಹರಿಸುವಂತೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನಂತರ ಮಂಜುನಾಥ್ ನೇತೃತ್ವದ ಬಿಜೆಪಿ ನಿಯೋಗ ಕಟೀಲ್ ಅವರನ್ನು ಭೇಟಿ ಮಾಡಿತ್ತು. ಈ ಮೂಲಕ ತಮ್ಮ ಅಹವಾಲನ್ನು ನಾಯಕರಿಗೆ ಸಲ್ಲಿಸಿದ್ದಾರೆ.

    ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಕಂದಾಯ ಸಚಿವ ಆರ್.ಆಶೋಕ್ ಕಾರಿನಲ್ಲೇ ಅನರ್ಹ ಶಾಸಕ ಸುಧಾಕರ್ ಸುತ್ತಾಡಿದ್ದಾರೆ. ವೈದ್ಯಕೀಯ ಕಾಲೇಜು ಜಾಗ ವೀಕ್ಷಣೆಗೆ ಆಗಮಿಸಿದ್ದ ಆರ್.ಆಶೋಕ್ ಜೊತೆಯಲ್ಲಿ ಸುಧಾಕರ್ ಸಹ ತೆರಳಿದ್ದಾರೆ. ಇಬ್ಬರೂ ಒಟ್ಟಿಗೆ ಕಾಲೇಜು ಜಾಗವನ್ನು ವೀಕ್ಷಣೆ ಮಾಡಿದರು. ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಬಳಿ ವೈದ್ಯಕೀಯ ಕಾಲೇಜಿಗೆ ಜಾಗ ಗುರುತಿಸಲಾಗಿದೆ.

    ಈ ವೇಳೆ ಮಾತನಾಡಿದ ಸಚಿವ ಆರ್.ಅಶೋಕ್, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿಗೆ ಜಾಗ ಮಂಜೂರು ಮಾಡಲಾಗಿದೆ. ಆರೂರು ಗ್ರಾಮದ ಸರ್ವೆ ನಂಬರ್ 201 ಹಾಗೂ 202 ರಲ್ಲಿ 60 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಕಾನೂನು ಪ್ರಕಾರ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ನೀಡಲಾಗಿದೆ. ಯಾವುದೇ ಅಡ್ಡದಾರಿ ಶಾರ್ಟ್ ಕಟ್ ಇಲ್ಲ. ಸುಧಾಕರ್ ಈ ಬಗ್ಗೆ ಹೋರಾಟ ಮಾಡಿದ್ದಾರೆ. ಜಿಲ್ಲಾ ಕೇಂದ್ರಗಳಿಗೆ ವೈದ್ಯಕೀಯ ಕಾಲೇಜು ನೀಡುವುದನ್ನು ಮೊದಲು ಪೂರ್ಣಗೊಳಿಸಬೇಕು ಎಂದರು.

    ತಾಲೂಕು ಮಟ್ಟಕ್ಕೆ ಮೆಡಿಕಲ್ ಕಾಲೇಜು ನೀಡುವುದು ಇನ್ನು ಬಂದಿಲ್ಲ. ಜಿಲ್ಲಾ ಕೇಂದ್ರಕ್ಕೆ ಮೆಡಿಕಲ್ ಕಾಲೇಜು ನೀಡಲು ಮಾತ್ರ ಶಕ್ತಿಯಿದೆ. ತಾಲೂಕು ಕೇಂದ್ರಕ್ಕೆ ಮೆಡಿಕಲ್ ಕಾಲೇಜು ಕೊಡುವ ಶಕ್ತಿ ಇಲ್ಲ. ಕಾನೂನು ಪ್ರಕಾರ ನೀಡಿದ್ದೇವೆ ಇದರಲ್ಲಿ ಯಾವುದೇ ದ್ವೇಷವಿಲ್ಲ. ಅಡ್ಡ ದಾರಿಯಲ್ಲಿ ಮಾಡುವ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಆಗಿದ್ದರೆ ಯಾವುದೇ ತೊಂದರೆ ಇರುತ್ತಿರಲಿಲ್ಲ. ಆದರೆ ಜಿಲ್ಲಾ ಕೇಂದ್ರ ಬಿಟ್ಟು ತಾಲೂಕು ಕೇಂದ್ರಕ್ಕೆ ಕಾಲೇಜು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.

  • ಮನೆಗೆ ಹೋಗಿ ಡಿಕೆಶಿಯ ಯೋಗಕ್ಷೇಮ ವಿಚಾರಿಸುತ್ತೇನೆ: ಸುಧಾಕರ್

    ಮನೆಗೆ ಹೋಗಿ ಡಿಕೆಶಿಯ ಯೋಗಕ್ಷೇಮ ವಿಚಾರಿಸುತ್ತೇನೆ: ಸುಧಾಕರ್

    ಚಿಕ್ಕಬಳ್ಳಾಪುರ: ಮೆಡಿಕಲ್ ಕಾಲೇಜು ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಜೊತೆಗೆ ಜಟಾಪಟಿ ನಡೆಸಿರುವ ಚಿಕ್ಕಬಳ್ಳಾಪುರ ಅನರ್ಹ ಶಾಸಕ ಸುಧಾಕರ್, ಇದೀಗ ಖುದ್ದು ಡಿಕೆ ಶಿವಕುಮಾರ್ ಅವರ ಮನೆಗೆ ಹೋಗಿ ಅವರ ಯೋಗಕ್ಷೇಮ ವಿಚಾರಿಸುವುದಾಗಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಧಾಕರ್, ವೈಯಕ್ತಿಕವಾಗಿ ನಾನು ಡಿಕೆಶಿ ಸ್ನೇಹಿತರಾಗಿದ್ದು, ಅಕ್ಕಪಕ್ಕದ ಮನೆಯವರಾಗಿದ್ದೇವೆ. ಅವರು ಜೈಲಿನಿಂದ ಬಂದ ಮೇಲೆ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಬೇಕೆಂದಿದ್ದೆ. ಆದರೆ ಮೆಡಿಕಲ್ ಕಾಲೇಜು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಉಂಟಾದ ಪರಿಣಾಮ ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಬಿಡುವಿನಲ್ಲಿದ್ದಾಗ ಅವರ ಮನೆಗೆ ಹೋಗಿ ಯೋಗಕ್ಷೇಮ ವಿಚಾರಿಸುವುದಾಗಿ ತಿಳಿಸಿದರು.

    ಚಿಕ್ಕಬಳ್ಳಾಪುರ ಜಿಲ್ಲೆಗೆ ಮಂಜೂರಾಗಿರುವ ಮೆಡಿಕಲ್ ಕಾಲೇಜು ವಿಚಾರದಲ್ಲಿ ಡಿಕೆಶಿ ಸ್ವತಂತ್ರರಾಗಿದ್ದು, ಈ ಕುರಿತು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ನ್ಯಾಯಬದ್ಧ ಹೋರಾಟ ಮಾಡಲಿ ನನ್ನದೇನು ತಕರಾರಿಲ್ಲ ಎಂದರು. ನಿನ್ನೆ ತಾನೇ ಸುಧಾಕರ್ ತಮ್ಮ ತಂದೆ ಕೇಶವರೆಡ್ಡಿ ಡಿಕೆಶಿ ವಿರುದ್ಧ ಮಾತನಾಡಿದ್ದ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಕ್ಷಮೆ ಕೋರಿದ್ದಕ್ಕೆ ಸ್ಪಷ್ಟನೆ ನೀಡಿದ ಸುಧಾಕರ್ ಇದೀಗ ಖುದ್ದು ತಾನೇ ಭೇಟಿಯಾಗುವುದಾಗಿ ಹೇಳಿದರು.

    ಇದೇ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜು ಘೋಷಣೆ ಮಾಡಿರುವ ಸಿಎಂ ಯಡಿಯೂರಪ್ಪ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಮೆಡಿಕಲ್ ಕಾಲೇಜು ಶಂಕುಸ್ಥಾಪನೆಗೆ ನವೆಂಬರ್ 8 ರಂದು ಜಿಲ್ಲೆಗೆ ಸಿಎಂ ಯಡಿಯೂರಪ್ಪ ಬರಲಿದ್ದಾರೆಂದು ಸುಧಾಕರ್ ತಿಳಿಸಿದರು.

  • ಹೊಡಿ, ಬಡಿ ಅನ್ನೋದು ಡಿಕೆಶಿ ಸಂಸ್ಕೃತಿ- ಬಂಡೆಗೆ ಸುಧಾಕರ್ ಸವಾಲ್

    ಹೊಡಿ, ಬಡಿ ಅನ್ನೋದು ಡಿಕೆಶಿ ಸಂಸ್ಕೃತಿ- ಬಂಡೆಗೆ ಸುಧಾಕರ್ ಸವಾಲ್

    ಚಿಕ್ಕಬಳ್ಳಾಪುರ: ತಮ್ಮ ಕ್ಷೇತ್ರ ಚಿಕ್ಕಬಳ್ಳಾಪರದಲ್ಲಿ ಮೆಡಿಕಲ್ ಕಾಲೇಜು ಶಂಕು ಸ್ಥಾಪನೆ ಮಾಡಿಯೇ ಮಾಡುತ್ತೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಅನರ್ಹ ಶಾಸಕ ಸುಧಾಕರ್ ಸವಾಲು ಹಾಕಿದ್ದಾರೆ.

    ಡಿ.ಕೆ.ಶಿವಕುಮಾರ್ ಓರ್ವ ಹೋರಾಟಗಾರ ಅನ್ನೋದನ್ನು ಒಪ್ಪುತ್ತೇನೆ. ಜೀವ ಉಳಿಸಲು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಆರಂಭಿಸಲಾಗುತ್ತದೆ. ಹಾಗಾಗಿ ಡಿಕೆ ಶಿವಕುಮಾರ್ ಪ್ರಾಣ ಬಿಡುವ ಮಾತನ್ನಾಡಬಾರದು. 2016-17ರ ಬಜೆಟ್ ನಲ್ಲಿ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಆಗಿತ್ತು. ಸಿದ್ದರಾಮಯ್ಯನವರ ಮನವಿ ಮಾಡಿಕೊಂಡಿದ್ದರಿಂದ ಮೆಡಿಕಲ್ ಕಾಲೇಜಿಗೆ ಒಪ್ಪಿಗೆ ಸೂಚಿಸಲಾಗಿತ್ತು.

    ರಾಜಕೀಯ ನಿವೃತ್ತಿ: ಸಮ್ಮಿಶ್ರ ಸರ್ಕಾರ ಬಂದ ಮೇಲೆ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಿಕೆ ಶಿವಕುಮಾರ್ ನಮ್ಮ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಉದ್ದೇಶಪೂರ್ವಕವಾಗಿ ಅನುದಾನ ಬಿಡುಗಡೆ ಮಾಡಿಲಿಲ್ಲ. ಆದರೆ ಕನಕಪುರ ಕಾಲೇಜಿಗೆ ಒಂದೇ ಸಾರಿ 450 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದೇನೆ. ಮೊದಲು ಜಿಲ್ಲೆಗೆ ಮೆಡಿಕಲ್ ಕಾಲೇಜು ಆಗಬೇಕೆಂದು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಉಪ ಚುನಾವಣೆಗೆ ಮುನ್ನವೇ ಚಿಕ್ಕಬಳ್ಳಾಪುರದ ಮೆಡಿಕಲ್ ಕಾಲೇಜಿಗೆ ಶಂಕು ಸ್ಥಾಪನೆ ಮಾಡಿಸುತ್ತೇನೆ. ಇಲ್ಲವಾದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.

    ಡಿ.ಕೆ.ಶಿವಕುಮಾರ್ ಕನಕಪುರವನ್ನು ಕರ್ನಾಟಕ ಎಂದು ತಿಳಿದುಕೊಂಡಿದ್ದಾರೆ. ಕನಕಪುರ ಕರ್ನಾಟಕದಲ್ಲಿ ಕೇವಲ ಒಂದು ತಾಲೂಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದಿನ ಸರ್ಕಾರ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಎಂದು ಹೇಳಿತ್ತು. ಈಗಾಗಲೇ ರಾಮನಗರಕ್ಕೆ ಆರೋಗ್ಯ ವಿಶ್ವವಿದ್ಯಾಲಯ ಮಂಜೂರು ಆಗಿದೆ. ಕನಕಪುರ ಮೆಡಿಕಲ್ ಕಾಲೇಜಿನ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು. ನಾನೇನು ಕನಕಪುರದ ಮೆಡಿಕಲ್ ಕಾಲೇಜು ಅನುಮತಿಯನ್ನು ರದ್ದುಗೊಳಿಸಿ ಎಂದು ಹೇಳಿಲ್ಲ ಎಂದರು.

    ನೇಣು ಹಾಕೋದು, ನೇಣು ಹಾಕಿಸಿಕೊಳ್ಳವ ಎಂಬಿತ್ಯಾದಿ ಮಾತುಗಳು ಡಿಕೆ ಶಿವಕುಮಾರ್ ಅವರ ಸಂಸ್ಕಾರವನ್ನು ತೋರಿಸುತ್ತದೆ. ಹಿರಿಯರಿಗೆ ಗೌರವ ಕೊಡುವುದು, ಎಲ್ಲರನ್ನು ಪ್ರೀತಿ ಭಾವನೆಯಿಂದ ಕಾಣೋದನ್ನು ನಮ್ಮ ಮನೆಯಲ್ಲಿ ಕಲಿಸಿಕೊಟ್ಟ ಸಂಸ್ಕಾರ. ಹೊಡೆಯೋದು, ಬಡಿಯೋದು, ಕೊಲ್ಲೋದು ಡಿ.ಕೆ.ಶಿವಕುಮಾರ್ ಅವರ ಸಂಸ್ಕೃತಿ. ಹೊಸ ಬಿಜೆಪಿ ಸರ್ಕಾರ ನಮ್ಮ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಸ್ತು ಎಂದಿದೆ. ಈ ಬಗ್ಗೆ ಕ್ಯಾಬಿನೆಟ್ ಸಹ ಒಪ್ಪಿಗೆ ಸೂಚಿಸಿದ್ದು, ಮುಖ್ಯಮಂತ್ರಿಗಳು ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ಪ್ರತಿಭಟನೆ: ಡಿಕೆ ಶಿವಕುಮಾರ್ ಹೇಳಿಕೆ ಖಂಡಿಸಿ ಅನರ್ಹ ಶಾಸಕ ಸುಧಾಕರ್ ಬೆಂಬಲಿಗರು ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ನಗರದ ಪಿ.ಎಲ್.ಡಿ.ಬ್ಯಾಂಕ್ ನಿಂದ ಶಿಡ್ಲಘಟ್ಟ ವೃತ್ತದ ವರೆಗೂ ಪ್ರತಿಭಟನಾ ಮೆರವಣಿಗೆ ಸಾಗಲಿದೆ.

  • ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಯಾದಗಿರಿ ಸಂಪೂರ್ಣ ಬಂದ್

    ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಯಾದಗಿರಿ ಸಂಪೂರ್ಣ ಬಂದ್

    ಯಾದಗಿರಿ: ಉದ್ದೇಶಿತ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಇಂದು ಯಾದಗಿರಿ ನಗರದಲ್ಲಿ ಸಂಪೂರ್ಣ ಬಂದ್ ಕರೆ ನೀಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಬಿಜೆಪಿ ಶಾಸಕ ವೆಂಕಟಗೌಡ ಮುದ್ನಾಳ್ ಕರೆ ನೀಡಿರುವ ಈ ಬಂದ್‍ಗೆ ಕನ್ನಡಪರ ಸಂಘಟನೆ ಸೇರಿದಂತೆ ಒಟ್ಟು 61 ಸಂಘಟನೆಗಳು ಬಂದ್ ಬೆಂಬಲ ನೀಡಿವೆ. ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಸಹ ಬಂದ್‍ಗೆ ಕೈ ಜೋಡಿಸಿದ್ದು, ನಗರದಲ್ಲಿ ವ್ಯಾಪಾರ- ವಹಿವಾಟು, ಆಟೋ ಮತ್ತು ಸರ್ಕಾರಿ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

    ಜಿಲ್ಲಾ ಬಿಜೆಪಿ ಮತ್ತು ಬಂದ್‍ಗೆ ಬೆಂಬಲ ನೀಡಿರುವ ವಿವಿಧ ಸಂಘಟನೆಗಳಿಂದ, ನಗರದ ಮೈಲಾಪುರ ಬೇಸ್ನಿಂದ ನಗರ ಸಭೆವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದು, ಈ ಮೆರವಣಿಗೆಯಲ್ಲಿ ಸಾವಿರಾರು ಪ್ರತಿಭಟನಾಕಾರರು ಪಾಲ್ಗೊಂಡಿದ್ದಾರೆ.

    ಕಳೆದ ತಿಂಗಳು ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದ ಮುಖ್ಯಮಂತ್ರಿಗಳೂ ಈಗಾಗಲೇ ಜಿಲ್ಲೆಗೆ ಮಂಜೂರಾಗಿರುವ ಮೆಡಿಕಲ್ ಕಾಲೇಜು ರದ್ದುಪಡಿಸಿ, 300 ಬೆಡ್ ಆಸ್ಪತ್ರೆ ಘೋಷಣೆ ಮಾಡಿದ್ದರು. ಅಲ್ಲದೆ ಇಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿದರೆ ಅದು ಜಿಲ್ಲೆಯ ಜನರಿಗಿಂತ ಹೊರಗಿನವರಿಗೆ ಅನುಕೂಲವಾಗತ್ತದೆ ಎಂಬ ಹೇಳಿಕೆ ಸಹ ನೀಡಿದ್ದರು.

    ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಸ್ಥಳೀಯ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಮತ್ತು ವಿವಿಧ ಸಂಘಟನೆಗಳು ಇಂದು ಬಂದ್‍ಗೆ ಕರೆ ನೀಡಿವೆ.

  • ಪರಿವರ್ತನಾಯಾತ್ರೆ ಮಾಡೋ ಮೊದ್ಲು ಬಿಜೆಪಿ ನಾಯಕರು ಪರಿವರ್ತನೆಯಾಗಲಿ: ಶರಣಪ್ರಕಾಶ್ ಪಾಟೀಲ್

    ಪರಿವರ್ತನಾಯಾತ್ರೆ ಮಾಡೋ ಮೊದ್ಲು ಬಿಜೆಪಿ ನಾಯಕರು ಪರಿವರ್ತನೆಯಾಗಲಿ: ಶರಣಪ್ರಕಾಶ್ ಪಾಟೀಲ್

    ಬಾಗಲಕೋಟೆ: ಪರಿವರ್ತನಾ ಯಾತ್ರೆ ಮಾಡುವ ಮೊದಲು ಬಿಜೆಪಿ ನಾಯಕರು ತಮ್ಮ ನಡುವಳಿಕೆ ತಿದ್ದುಕೊಳ್ಳಲಿ. ಅವರ ಆಚಾರ-ವಿಚಾರ ಹಾಗೂ ಸಿದ್ಧಾಂತಗಳಲ್ಲಿ ಪರಿವರ್ತನೆಯಾಗಲಿ. ಆಗ ಮಾತ್ರ ರಾಜ್ಯದ ಜನತೆ ಅವರಿಗೆ ಮನ್ನಣೆ ಕೊಡಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.

    ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಮಾತನಾಡಿದ ಶರಣಪ್ರಕಾಶ್, ಹಿಂದೆ 5 ವರ್ಷದ ಬಿಜೆಪಿ ಅಧಿಕಾರಾವಧಿಯಲ್ಲಿ ಹೇಗೆ ನಡೆದುಕೊಂಡಿದ್ದಾರೆಂದು ರಾಜ್ಯದ ಜನತೆ ನೋಡಿದ್ದಾರೆ. ಹೀಗಾಗಿ ಮೊದಲು ಬಿಜೆಪಿ ಮುಖಂಡರು ಪರಿವರ್ತನೆಯಾಗಲಿ ಎಂದು ವ್ಯಂಗ್ಯವಾಡಿದರು. ಅಲ್ಲದೇ ನಾನು ನೆಗೆಟೀವ್ ಹಾಗೂ ಟೀಕೆ ಮಾಡುವುದರಲ್ಲಿ ನನಗೆ ವಿಶ್ವಾಸವಿಲ್ಲ. ಆದರೆ ಬಿಜೆಪಿಯವರು ಬದಲಾಗಬೇಕು ಎಂದು ಹೇಳಿದ್ರು.

    ರಾಜ್ಯದಲ್ಲಿ ಶೀಘ್ರದಲ್ಲೇ ಮೆಡಿಕಲ್ ಕಾಲೇಜುಗಳು ಕಾರ್ಯಾರಂಭ ಮಾಡಲಿವೆ. ಇದರಿಂದ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟುಗಳು ಸಿಗುತ್ತವೆ. ಅಲ್ಲದೇ ರಾಜ್ಯದ ಜನರಿಗೆ ಗುಣಮಟ್ಟದ ಚಿಕಿತ್ಸೆ ಸಿಗಲು ಸಹಕಾರಿಯಾಗುತ್ತೆ. ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ ಇರೋದು ನಿಜ. ಅದೇ ಉದ್ದೇಶದಿಂದಲೇ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನಿಗದಿಗಾಗಿ ರೈತರೊಂದಿಗೆ ಉಪಸಮತಿ ಸಭೆ ಕರೆಯಲಾಗಿದೆ ಸಭೆಯಲ್ಲಿ ರೈತರ ಜೊತೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

  • ಹಾಸ್ಟೆಲ್‍ನಲ್ಲಿ ಕಿರಿಯರ ಮೇಲೆ ರ್‍ಯಾಗಿಂಗ್‌: 54 ಮೆಡಿಕಲ್ ವಿದ್ಯಾರ್ಥಿನಿಯರಿಗೆ ದಂಡ

    ಹಾಸ್ಟೆಲ್‍ನಲ್ಲಿ ಕಿರಿಯರ ಮೇಲೆ ರ್‍ಯಾಗಿಂಗ್‌: 54 ಮೆಡಿಕಲ್ ವಿದ್ಯಾರ್ಥಿನಿಯರಿಗೆ ದಂಡ

    ಪಾಟ್ನಾ: ವಿದ್ಯಾರ್ಥಿನಿಯರ ಮೇಲೆ ರ್‍ಯಾಗಿಂಗ್‌ ಎಸಗಿದ್ದಕ್ಕೆ 54 ವಿದ್ಯಾರ್ಥಿನಿಯರಿಗೆ ಬಿಹಾರದ ದರ್ಭಾಂಗ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತಲಾ 25 ಸಾವಿರ ರೂ. ದಂಡ ವಿಧಿಸಿದೆ. 54 ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ್ದನ್ನು ಒಪ್ಪಿಕೊಂಡ ಕಾಲೇಜು, ಎಲ್ಲ ವಿದ್ಯಾರ್ಥಿಗಳಿಂದ ಒಟ್ಟು 13.50 ಲಕ್ಷ ರೂ. ಹಣವನ್ನು ಸಂಗ್ರಹಿಸಿದೆ.

    ಹಾಸ್ಟೆಲ್ ನಲ್ಲಿದ್ದ ಪ್ರಥಮ ವರ್ಷದ ಸೆಮಿಸ್ಟರ್ ಓದುತ್ತಿದ್ದ ಓರ್ವ ಸಂತ್ರಸ್ತೆ ನವೆಂಬರ್ 11 ರಂದು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ)ಗೆ ತನಗೆ ಆಗುತ್ತಿರುವ ಅನ್ಯಾಯವನ್ನು ತೋಡಿಕೊಂಡು ಈ ಮೇಲ್ ಮೂಲಕ ದೂರನ್ನು ನೀಡಿದ್ದಳು.

    ವಿದ್ಯಾರ್ಥಿನಿಯ ವಿವರವನ್ನು ಬಹಿರಂಗ ಪಡಿಸದೇ ಈ ದೂರಿನ ಪ್ರತಿಯನ್ನು ಕಾಲೇಜಿನ ಆಡಳಿತ ಮಂಡಳಿಗೆ ಕಳುಹಿಸಿ ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಎಂಸಿಐ ಆದೇಶಿಸಿತ್ತು.

    ಎಂಸಿಐ ಆದೇಶದ ಅನ್ವಯ ಈಗ ಮೂರನೇ ಸೆಮಿಸ್ಟರ್ ಓದುತ್ತಿದ್ದ ಎಲ್ಲ ವಿದ್ಯಾರ್ಥಿನಿಯರಿಗೆ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೇ ಪ್ರಥಮ ವರ್ಷ ಓದುತ್ತಿರುವ 26 ಮಂದಿ ಈ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರಿಗೂ ದಂಡವನ್ನು ವಿಧಿಸಿದೆ.

    ರ್‍ಯಾಗಿಂಗ್‌ ಆಗುತ್ತಿರುವ ವಿಚಾರ ತಿಳಿದಿದ್ದರೂ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತರದೇ ಘಟನೆಯನ್ನು ಮರೆಮಾಚಲು ಯತ್ನಿಸಿದ್ದಕ್ಕೆ ಪ್ರಥಮ ಸೆಮಿಸ್ಟರ್ ಓದುತ್ತಿದ್ದ 26 ವಿದ್ಯಾರ್ಥಿನಿಯರಿಗೆ ದಂಡ ಹಾಕಲಾಗಿದೆ. ಒಂದು ವೇಳೆ ನವೆಂಬರ್ 25ರ ಒಳಗಡೆ ಈ ದಂಡವನ್ನು ಪಾವತಿಸದೇ ಇದ್ದಲ್ಲಿ ಆ ವಿದ್ಯಾರ್ಥಿನಿಯರ ಮೇಲೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಆಡಳಿತ ಮಂಡಳಿ ಮುಂದಾಗಿದೆ.

     

  • ಘೋಷಣೆಯಷ್ಟೇ, ಬಿಡಿಗಾಸು ಕೊಡದ ಸರ್ಕಾರ- 3 ವರ್ಷವಾದ್ರೂ ಮೆಡಿಕಲ್ ಕಾಲೇಜಿಗಿಲ್ಲ ಮುಹೂರ್ತ

    ಘೋಷಣೆಯಷ್ಟೇ, ಬಿಡಿಗಾಸು ಕೊಡದ ಸರ್ಕಾರ- 3 ವರ್ಷವಾದ್ರೂ ಮೆಡಿಕಲ್ ಕಾಲೇಜಿಗಿಲ್ಲ ಮುಹೂರ್ತ

    ಯಾದಗಿರಿ: ನಾಲ್ಕು ವರ್ಷ ಪೂರೈಸಿ ಮತ್ತೊಮ್ಮೆ ಅಧಿಕಾರ ಯುದ್ಧಕ್ಕೆ ಸನ್ನದ್ಧವಾಗಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ನಾವು ನುಡಿದಂತೆ ನಡೆದಿದ್ದೇವೆ ಅಂತಿದೆ. ಆದ್ರೆ ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷದ ಹಿಂದೆ ಘೋಷಿಸಿದ ಮಹತ್ವದ ಘೋಷಣೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

    ಹೌದು. ಸರ್ಕಾರಗಳು ಘೋಷಣೆ ಮಾಡುವಾಗ ಹಿಂದೆ ಮುಂದೆ ನೋಡಲ್ಲ. ಜನಪ್ರಿಯತೆಗಾಗಿ ಘೋಷಣೆ ಮಾಡಿದ ಬಳಿಕ ಅನುದಾನ ನೀಡುವಾಗ ಕೈ ಹಿಂದೆ ಮಾಡ್ತಾರೆ. ಅದೇ ರೀತಿ ಆಗಿದೆ ಯಾದಗಿರಿ ಮೆಡಿಕಲ್ ಕಾಲೇಜು ಸ್ಥಾಪನೆ. ಸಿದ್ದರಾಮಯ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಘೋಷಣೆ ಮಾಡಿದ್ದ ಮೆಡಿಕಲ್ ಕಾಲೇಜಿಗೆ ಇನ್ನೂ ಕಾಮಗಾರಿಯೇ ಆರಂಭವಾಗಿಲ್ಲ.


    ರಾಜ್ಯ ಸರ್ಕಾರ ಮೆಡಿಕಲ್ ಕಾಲೇಜು ಕ್ಯಾಂಪಸ್ ನಿರ್ಮಾಣಕ್ಕಾಗಿ ಮುದ್ನಾಳ ತಾಂಡಾ ಬಳಿ 30 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದು, ಅದೇ ಜಾಗದಲ್ಲಿ 56 ಕೋಟಿ ರೂಪಾಯಿ ವೆಚ್ಚದಲ್ಲಿ 300 ಹಾಸಿಗೆಯ ಸುಸಜ್ಜಿತ ಜಿಲ್ಲಾಸ್ಪತ್ರೆ ತಲೆ ಎತ್ತುತ್ತಿದೆ. ವಿಪರ್ಯಾಸ ಅಂದ್ರೆ ಮೆಡಿಕಲ್ ಕಾಲೇಜು ಕ್ಯಾಂಪಸ್‍ನಲ್ಲಿ ಜಿಲ್ಲಾಸ್ಪತ್ರೆ ಬರುತ್ತಿದೆ. ಆದ್ರೆ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಮಾತ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.

    2018-19ನೇ ಸಾಲಿನಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸೂಚಿಸಿದ್ದು, 150 ವಿದ್ಯಾರ್ಥಿಗಳಿಗೆ ಅಡ್ಮಿಷನ್ ಕೊಡುವಂತೆ ತಿಳಿಸಿದೆ. ಮುಂದಿನ ತಿಂಗಳು ನವೆಂಬರ್‍ನಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಕೂಡ ಯಾದಗಿರಿಗೆ ಭೇಟಿ ನೀಡುತ್ತಿದ್ದು, ಮೂಲಭೂತ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲಿದೆ. ಈ ಬಗ್ಗೆ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಅವರನ್ನು ಕೇಳಿದ್ರೆ ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ ಅವರ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ.

    ಈಗಿರುವ ಜಿಲ್ಲಾಸ್ಪತ್ರೆಯಲ್ಲಿ ನುರಿತ ವೈದ್ಯರ ಕೊರತೆಯಿದ್ದು, ವೈದ್ಯರು, ನರ್ಸ್ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ. ಹೀಗಾಗಿ ಜಿಲ್ಲೆಯ ಜನ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಜಿಲ್ಲೆಗಳತ್ತ ತೆರಳಬೇಕಿದೆ. ಮೆಡಿಕಲ್ ಕಾಲೇಜು ಆರಂಭವಾದ್ರೆ ಜಿಲ್ಲೆಯ ಜನರಿಗೆ ಸ್ಥಳೀಯವಾಗಿ ಆರೋಗ್ಯ ಭಾಗ್ಯ ಸಿಗಲಿದೆ ಅಂತ ಜನ ಹೇಳುತ್ತಿದ್ದಾರೆ.

     

  • ಎಂಬಿಬಿಎಸ್ ವಿದ್ಯಾರ್ಥಿನಿ ಹಾಸ್ಟೆಲ್ ಮಹಡಿಯಿಂದ ಜಿಗಿದು ಆತ್ಮಹತ್ಯೆ

    ಎಂಬಿಬಿಎಸ್ ವಿದ್ಯಾರ್ಥಿನಿ ಹಾಸ್ಟೆಲ್ ಮಹಡಿಯಿಂದ ಜಿಗಿದು ಆತ್ಮಹತ್ಯೆ

    ಬೀದರ್: ಎಂಬಿಬಿಎಸ್ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿನಿ ಹಾಸ್ಟೆಲ್‍ನ 4ನೇ ಮಹಡಿ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಘಟನೆ ಬೀದರ್ ಬ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದ್ದು, ಕೇರಳ ಮೂಲದ ಕೀರ್ತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣ ಎಂದು ಹೇಳಲಾಗುತ್ತಿದ್ದು ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ತಿಳಿಯಬೇಕಿದೆ.

    ಸ್ಥಳಕ್ಕೆ ನ್ಯೂಟೌನ್ ಪೊಲೀಸರು ಭೇಟಿ ಪರಿಶೀಲನೆ ಮಾಡುತ್ತಿದ್ದು ಮಾಹಿತಿ ಕಲೆಹಾಕುತ್ತಿದ್ದಾರೆ.