Tag: ಮೆಜೆಸ್ಟಿಕ್

  • ಮಾರುತಿಗೆ ದರ್ಶನ್ ಸಾರಥಿ- ನಡೆದು ಬಂದ ದಾರಿ ಮರೆಯಲಿಲ್ಲ ಚಕ್ರವರ್ತಿ

    ಮಾರುತಿಗೆ ದರ್ಶನ್ ಸಾರಥಿ- ನಡೆದು ಬಂದ ದಾರಿ ಮರೆಯಲಿಲ್ಲ ಚಕ್ರವರ್ತಿ

    ಬೆಂಗಳೂರು: ಹಣ, ಹೆಸರು, ಶ್ರೀಮಂತಿಕೆ ಎಲ್ಲಾ ಬಂದ ಮೇಲೆ ಏನು ಬೇಕೋ ಸಿಗಬಹುದು. ಅವು ಹೆಚ್ಚು ದಿನ  ಸ್ಮೃತಿ ಪಟಲದಲ್ಲಿ ಉಳಿಯಲು ಸಾಧ್ಯವಿಲ್ಲ. ಆದರೆ ಏನೇನೂ ಇಲ್ಲದಿದ್ದಾಗಿನ ನೆನಪುಗಳು ಯಾವತ್ತಿಗೂ ಮರೆಯಲು ಕೂಡಾ ಸಾಧ್ಯವಿಲ್ಲ.

    ಅದು ದರ್ಶನ್ ಅವರ ಮೊದಲ ಸಿನಿಮಾ. `ಮೆಜೆಸ್ಟಿಕ್’ ಹೆಸರಿನ ಸಿನಿಮಾ ಶುರು ಮಾಡಿದಾಗ ದರ್ಶನ್ ಅವರ ಬಳಿ ಓಡಾಟಕ್ಕೆ ಸ್ವಂತಕ್ಕೊಂದು ಕಾರು ಸಹಾ ಇರಲಿಲ್ಲ. ಮೆಜೆಸ್ಟಿಕ್ ಸಿನಿಮಾದ ನಿರ್ಮಾಪಕ ಎಂ.ಜಿ. ರಾಮಮೂರ್ತಿ ಅವರ ಬಳಿ ಮಾರುತಿ 800 ಕಾರ್ ಇತ್ತು. ದರ್ಶನ್ ಶೂಟಿಂಗ್ ಗೆಂದು ಬೆಂಗಳೂರಿಗೆ ಬಂದಾಗ ಅನೇಕ ಸಲ ಇದೇ ಕಾರನ್ನೇ ಓಡಾಟಕ್ಕೆ ಬಳಸುತ್ತಿದ್ದರು. ಮಾರುತಿ 800 ಕಾರಲ್ಲಿ ಓಡಾಡುವುದೇ ಆಗಿನ ಕಾಲಕ್ಕೆ ದರ್ಶನ್ ರಂಥ ಹೊಸಾ ಹೀರೋಗೆ ಖುಷಿಯ ವಿಚಾರವಾಗಿತ್ತು. ಇವತ್ತು ದರ್ಶನ್ ಮನೆಯಲ್ಲಿ ಇಂಟರ್ ನ್ಯಾಷನಲ್ ಕಂಪೆನಿಯ ಕಾರುಗಳು ನಿಂತಿವೆ. ಇತ್ತೀಚೆಗೆ ತಾನೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಲ್ಯಾಂಬೋರ್ಗಿನಿ ಕಾರನ್ನು ಸಹ ದರ್ಶನ್ ಖರೀದಿಸಿದ್ದಾರೆ.

    ಇದೆಲ್ಲದರ ನಡುವೆ ಇತ್ತೀಚೆಗ ನೆಲಮಂಗಲದ ರೆಸಾರ್ಟ್ ವೊಂದರಲ್ಲಿ ಮೆಜೆಸ್ಟಿಕ್ ಸಿನಿಮಾ ಬಿಡುಗಡೆಯಾಗಿ 16 ವರ್ಷ ಕಳೆದ ನೆನಪಿಗೆ ನಿರ್ಮಾಪಕ ರಾಮಮೂರ್ತಿ ಸಣ್ಣದೊಂದು ಸಮಾರಂಭ ಆಯೋಜಿಸಿದ್ದರು. ಮೆಜೆಸ್ಟಿಕ್ ಸಿನಿಮಾಗಾಗಿ ದುಡಿದ ತಂತ್ರಜ್ಞರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ದರ್ಶನ್ ಅವರು ಮೆಜೆಸ್ಟಿಕ್ ಸಂದರ್ಭದಲ್ಲಿ ತಾವು ಓಡಾಡುತ್ತಿದ್ದ ಮಾರುತಿ ಕಾರಿನ 3483 ನಂಬರ್ ಸಮೇತ ನೆನಪು ಮಾಡಿಕೊಂಡರು. ಈ ಕಾರು ಕೊಟ್ಟರೆ ನಾನು ಮನೆಗೆ ತೆಗೆದುಕೊಂಡು ಹೋಗುತ್ತೇನೆ ಎನ್ನುವ ಬಯಕೆ ವ್ಯಕ್ತಪಡಿಸಿದರು. ಕೂಡಲೇ ನಿರ್ಮಾಪಕ ರಾಮಮೂರ್ತಿ ಮಾರು 800 ಕಾರಿನ ಕೀ ಸಮೇತ ಕಾರನ್ನು ದರ್ಶನ್ ಅವರಿಗೆ ನೀಡಿದರು. ತಕ್ಷಣ ಆ ಕಾರಲ್ಲಿ ಕೂತು ಒಂದು ರೌಂಡು ಹಾಕಿಕೊಂಡು ಬಂದ ದರ್ಶನ್ ಅವರ ಮುಖದಲ್ಲಿ ಕಂಡ ಸಂತಸ ನಿಜಕ್ಕೂ ದೊಡ್ಡದು. ಅದು ಯಾವ ಮಟ್ಟಿಗೆಂದರೆ, ಅವರು ಲ್ಯಾಂಬೋರ್ಗಿನಿಯಲ್ಲಿ ಕೂತು ಡ್ರೈವ್ ಮಾಡಿದ್ದಕ್ಕಿಂತಾ ಹೆಚ್ಚು!

  • ದೀಪಾವಳಿ ಪ್ರಯುಕ್ತ ಊರಿಗೆ ಹೊರಟ ಪ್ರಯಾಣಿಕರಿಂದ ಬಸ್, ರೈಲು ನಿಲ್ದಾಣ ಜಾಮ್

    ದೀಪಾವಳಿ ಪ್ರಯುಕ್ತ ಊರಿಗೆ ಹೊರಟ ಪ್ರಯಾಣಿಕರಿಂದ ಬಸ್, ರೈಲು ನಿಲ್ದಾಣ ಜಾಮ್

    ಬೆಂಗಳೂರು: ದೇಶಾದ್ಯಂತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಸಿಲಿಕಾನ್ ಸಿಟಿಯಿಂದ ಜನರು ಊರಿನ ಕಡೆ ಹೊರಟ ಪರಿಣಾಮ ನಗರದ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿದ್ದರು.

    ಪ್ರಯಾಣಿಕರು ಹಾಗೂ ಬಸ್ ಗಳಿಂದ ನಗರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ ಜನರು ನಿಲ್ದಾಣ ತಲುಪಲು ಹರಸಾಹಸ ಪಡಬೇಕಾಯಿತು. ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಮಂಗಳವಾರ ರಾತ್ರಿ ಮಳೆ ಇಲ್ಲದಿದ್ದರಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟಿಸುರು ಬಿಟ್ಟಿದ್ದರು. ಆದ್ರೆ ಸಂಜೆಯಿಂದಲೇ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಮುಗಿಬೀಳೂತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಅಧಿಕವಾಗಿತ್ತು.

    ಮೈಸೂರು ರಸ್ತೆಯ ಬಾಪೂಜಿನಗರ, ಯಶವಂತಪುರ, ಪೀಣ್ಯ, ಹೊಸೂರು ರಸ್ತೆ ಹಾಗೂ ಶಾಂತಿನಗರ ಆನಂದರಾವ್ ಸರ್ಕಲ್ ಸೇರಿದಂತೆ ಮೆಜೆಸ್ಟಿಕ್ ಸುತ್ತಮುತ್ತ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಹಬ್ಬದ ಹಿನ್ನೆಲೆಯಲ್ಲಿ ಸುಮಾರು 1500 ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕೆಎಸ್‍ಆರ್‍ಟಿಸಿ ಮಾಡಿದೆ. ಸರ್ಕಾರಿ ಬಸ್ ಮಾತ್ರವಲ್ಲದೇ ಖಾಸಗಿ ಬಸ್ ಗಳು ಕೂಡ ಅಧಿಕವಾಗಿದ್ದವು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಲು ಕಾರಣವಾಗಿತ್ತು. ಕೆ.ಜಿ ರಸ್ತೆ, ಯಶವಂತಪುರ, ಆನಂದ ರಾವ್ ಸರ್ಕಲ್, ಮೌರ್ಯ ವೃತ್ತ, ಶಾಂತಿ ನಗರ, ವಿಜಯನಗರ ಮೊದಲಾದ ಕಡೆಗಳಲ್ಲಿ ಖಾಸಗಿ ಬಸ್ ಏಜೆನ್ಸಿಗಳ ಕಚೇರಿ ಬಳಿ ಪ್ರಯಾಣಿಕರ ದಂಡೇ ನೆರೆದಿತ್ತು.

    ಖಾಸಗಿ ಬಸ್‍ಗಳು ರಸ್ತೆಯಲ್ಲಿಯೇ ನಿಂತಿದ್ದರಿಂದ ಪಾದಾಚಾರಿಗಳ ಓಡಾಟಕ್ಕೂ ತೊಂದರೆಯಾಗಿತ್ತು. ಅಲ್ಲದೇ ಇದರಿಂದ ವಾಹನ ಸವಾರರು ಕೂಡ ಪರದಾಡಬೇಕಾಯಿತು. ಒಟ್ಟಿನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಹರಸಾಹಸಪಡಬೇಕಾಯಿತು.

    ಇನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ ರೈಲು ನಿಲ್ದಾಣ, ಬೆಂಗಳೂರು ದಂಡು ನಿಲ್ದಾಣ, ಕೆಆರ್ ಪುರ ರೈಲು ನಿಲ್ದಾಣ ಸೇರಿದಂತೆ ಸಿಲಿಕಾನ್ ಸಿಟಿಯಲ್ಲಿರೋ ಎಲ್ಲಾ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು.

  • ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಚಿಂದಿ ಆಯುವವರ ನಡುವೆ ಜಗಳ- ತಲೆಗೆ ಕಲ್ಲಿನಿಂದ ಜಜ್ಜಿ ಹಲ್ಲೆ

    ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಚಿಂದಿ ಆಯುವವರ ನಡುವೆ ಜಗಳ- ತಲೆಗೆ ಕಲ್ಲಿನಿಂದ ಜಜ್ಜಿ ಹಲ್ಲೆ

    ಬೆಂಗಳೂರು: ಕುಡಿದ ಮತ್ತಿನಲ್ಲಿ ಚಿಂದಿ ಆಯುವವರ ನಡುವೆ ಜಗಳವಾಗಿ ಮಗೇಶ್ ಎಂಬಾತನ ತಲೆಗೆ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿರುವ ಘಟನೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಘಟನೆಯಲ್ಲಿ ಮಗೇಶನ ಮೇಲೆ ಆದ ಹಲ್ಲೆಯಿಂದ ವಿಪರೀತ ರಕ್ತಸ್ರಾವವಾಗಿ ರಸ್ತೆಯಲ್ಲಿ ಒದ್ದಾಡ್ತಾ ಇದ್ದ. ಇದನ್ನು ಅರಿತ ಸ್ಥಳೀಯರು ಹಲ್ಲೆ ನಡೆಸಿದ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಗೇಶ್‍ಗೆ ವಿಪರೀತ ರಕ್ತಸ್ರಾವವಾಗುತ್ತಿರುವುದನ್ನ ಕಂಡ ಸ್ಥಳೀಯರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದ್ರೆ ಘಟನೆ ನಡೆದು ಒಂದು ಗಂಟೆಯಾದ್ರೂ ಅಂಬುಲೆನ್ಸ್ ಬರಲೇ ಇಲ್ಲ.

    ಮಾನವೀಯತೆ ಮೆರೆದ ಬೀಟ್ ಪೊಲೀಸರು ಮತ್ತು ಆಟೋ ಚಾಲಕರು ಹಲ್ಲೆಗೊಳಗಾದ ವ್ಯಕ್ತಿಯನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಸಂಬಂಧ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

     

  • ದರ್ಶನ್ ಸಿನಿ ಲೈಫ್ ಬದಲಿಸಿದ `ಮೆಜೆಸ್ಟಿಕ್’

    ದರ್ಶನ್ ಸಿನಿ ಲೈಫ್ ಬದಲಿಸಿದ `ಮೆಜೆಸ್ಟಿಕ್’

    ಬೆಂಗಳೂರು: ನಟ ದರ್ಶನ್ ಅವರು ನಾಯಕ ನಟನಾಗಿ 15 ವರ್ಷಗಳೇ ಕಳೆದಿವೆ. ಇವರ ಮೆಜೆಸ್ಟಿಕ್ ಚಿತ್ರಕ್ಕೆ 15 ವರ್ಷ ತುಂಬಿದೆ. ಆದ್ರೆ ಇದೇ ಸಂದರ್ಭದಲ್ಲಿ ಸುದೀಪ್- ದರ್ಶನ್ ಮಧ್ಯೆ ಟ್ವಿಟ್ಟರ್ ವಾದ ನಡೆದಿರುವುದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ.

    ಹೌದು. 2002 ಫೆಬ್ರವರಿ 08ರಲ್ಲಿ ದರ್ಶನ್ ಅಭಿನಯದ ಮೆಜೆಸ್ಟಿಕ್ ಚಿತ್ರ ಸೂಪರ್ ಹಿಟ್ ಆಗಿತ್ತು. ಅದಾಗಲೇ ಚಿಗುರು ಮೀಸೆಯ ದರ್ಶನ್ ಕಟೌಟ್‍ಗಳು ಎಲ್ಲೆಡೆ ರಾರಾಜಿಸುತ್ತಿತ್ತು. ಆದ್ರೆ ಈ ಯುವಕ ಮುಂದೆ ಕನ್ನಡದ ಸೂಪರ್ ಸ್ಟಾರ್ ಆಗ್ತಾರೆ ಅಂತ ಯಾರೂ ಊಹೆ ಮಾಡಿರಲಿಲ್ಲ.

    ಆ ಎಲ್ಲಾ ಊಹೆಗಳಿಗೆ ಬ್ರೇಕ್ ಹಾಕುವಂತೆ ಇಂದು ಕನ್ನಡ ಚಿತ್ರರಂಗದಲ್ಲೇ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡಿದ್ದಾರೆ ಎಂದರೆ ಅದು ನಿಜಕ್ಕೂ ಹೆಮ್ಮೆಯ ವಿಷಯ. ಮೆಜೆಸ್ಟಿಕ್ ಚಿತ್ರದಲ್ಲಿ ನಾಯಕ ನಟನಾಗಿ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದು, ಸ್ಯಾಂಡಲ್‍ವುಡ್‍ನಲ್ಲಿ ದರ್ಶನ್ ಹೀರೋಯಿಸಂ ಶುರುವಾಗಿ 15 ವರ್ಷಗಳು ಆಗಿವೆ.

    `ಮೆಜೆಸ್ಟಿಕ್’ ಸಿನಿಮಾ 2002ರ ಫೆಬ್ರವರಿ 08 ರಂದು ಬಿಡುಗಡೆಯಾಗಿತ್ತು. ನಿರ್ದೇಶಕ ಪಿ.ಎನ್.ಸತ್ಯ ನಿರ್ದೇಶಿಸಿದ ಈ ಚಿತ್ರಕ್ಕೆ ಎಂ.ಜಿ.ರಾಮಮೂರ್ತಿ ಮತ್ತು ಭಾ.ಮಾ ಹರೀಶ್ ನಿರ್ಮಾಣ ಮಾಡಿದ್ದರು. ಸಾಧುಕೋಕಿಲಾ ಸಂಗೀತ ನೀಡಿದ್ದರು. ಅಣಜಿ ನಾಗರಾಜ್ ಅವರ ಛಾಯಗ್ರಹಣವಿತ್ತು. ಇನ್ನು ಚಿತ್ರದಲ್ಲಿ `ಸ್ವರ್ಶಾ’ ರೇಖಾ ನಾಯಕಿಯಾಗಿದ್ದರು. ಸುದೀಪ್ ಅವರ ಮೊದಲ ಸಿನಿಮಾದಲ್ಲಿ ನಾಯಕಿಯಾಗಿದ್ದ ರೇಖಾ, ದರ್ಶನ್ ಅವರ ಮೊದಲ ಚಿತ್ರಕ್ಕೂ ಹೀರೋಯಿನ್ ಆಗಿದ್ದರು ಎಂಬುವುದನ್ನ ಇಲ್ಲಿ ಸ್ಮರಿಸಬಹುದು.

    ಮೆಜೆಸ್ಟಿಕ್ ಸಿನಿಮಾ ತೆರೆ ಕಾಣುವುದಕ್ಕಿಂತ ಮೊದಲು ದರ್ಶನ್ ಸುಮಾರು 6-7 ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನ ನಿರ್ವಹಿಸಿದ್ದರು. ಆದ್ರೆ `ಮೆಜೆಸ್ಟಿಕ್’ ಸಿನಿಮಾದಲ್ಲಿ ನಟಿಸಿದ ಬಳಿಕ ದರ್ಶನ್ ಜೀವನವೇ ಬದಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ದರ್ಶನ್ ಅಭಿನಯಿಸಿದ್ದಾರೆ.

    `ಮೆಜೆಸ್ಟಿಕ್’ ಚಿತ್ರದಲ್ಲಿ ದರ್ಶನ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದರು. ಒಂದು ಕಡೆ ‘ದಾಸ’ ಎಂಬ ರೌಡಿ ಪಾತ್ರವಾದರೇ, ಮತ್ತೊಂದೆಡೆ ಪ್ರಜ್ವಲ್ ಎಂಬ ಲವರ್ ಬಾಯ್ ಕ್ಯಾರೆಕ್ಟರ್. ಆದ್ರೆ ದಾಸನ ಗೆಟಪ್‍ನಲ್ಲಿ ದರ್ಶನ್ ಅಬ್ಬರಿಸಿದ್ದರು. ಮುಂದೆ ‘ದಾಸ’ ಎಂಬ ಹೆಸರಿನಲ್ಲೇ ಸಿನಿಮಾ ಕೂಡ ಮಾಡಿದರು. ಈಗಲೂ ಚಾಲೆಂಜಿಂಗ್ ಸ್ಟಾರ್ ‘ದಾಸ ದರ್ಶನ್’ ಎಂದೇ ಗುರುತಿಸಿಕೊಳ್ಳುತ್ತಾರೆ.

    ಇದನ್ನೂ ಓದಿ: ಸುದೀಪ್ ಅವರ ಈ ಮಾತಿನಿಂದ ದರ್ಶನ್ ಮನಸ್ಸಿಗೆ ಘಾಸಿ!

    ಇದನ್ನೂ ಓದಿ: ದರ್ಶನ್ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಭಾನುವಾರ ಏನೇನಾಯ್ತು?

    ಇದನ್ನೂ ಓದಿ:  ದರ್ಶನ್-ಸುದೀಪ್ ವೈಮನಸ್ಸು ಹಿಂದೆ ದೊಡ್ಡ ಕಥೆಯಿದೆ-ಬುಲೆಟ್ ಪ್ರಕಾಶ್

    ಇದನ್ನೂ ಓದಿ: ಇಷ್ಟೆಲ್ಲಾ ಟ್ವೀಟ್ ಮಾಡಿದ್ದು ನಾನೇ, ಖಾತೆ ಹ್ಯಾಕ್ ಆಗಿಲ್ಲ: ದರ್ಶನ್