Tag: ಮೆಗ್ಗಾನ್ ಆಸ್ಪತ್ರೆ

  • ಸೋಂಕಿತರ ಸಾವು ಹೆಚ್ಚಾಗಲು ಕಾರಣವೇನು?- ಅಧಿಕಾರಿಗಳ ವಿರುದ್ಧ ಸಚಿವ ಈಶ್ವರಪ್ಪ ಸಿಡಿಮಿಡಿ

    ಸೋಂಕಿತರ ಸಾವು ಹೆಚ್ಚಾಗಲು ಕಾರಣವೇನು?- ಅಧಿಕಾರಿಗಳ ವಿರುದ್ಧ ಸಚಿವ ಈಶ್ವರಪ್ಪ ಸಿಡಿಮಿಡಿ

    ಶಿವಮೊಗ್ಗ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಜೊತೆಗೆ ಕಳೆದೊಂದು ವಾರಗಳಿಂದ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವೇನು ಎಂದು ಸಚಿವ ಈಶ್ವರಪ್ಪ ವೈದ್ಯರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಮತ್ತು ವೈದ್ಯರು ಹಾಗೂ ನಿರ್ದೇಶಕರ ಜೊತೆ ಸಭೆ ನಡೆಸಿದ ಸಚಿವರು, ಸೋಂಕಿತ ಚಿಕಿತ್ಸೆ ಹಾಗೂ ಸಾವಿನ ಸಂಖ್ಯೆ ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ವೈದ್ಯರು ಸಲಹೆ, ಸೂಚನೆ ನೀಡಿ, ಸಿಬ್ಬಂದಿ ಕೊರತೆ ನೀಗಿಸಿ. ಡಿ ಗ್ರೂಪ್ ಸಿಬ್ಬಂದಿ ಮತ್ತು ಸ್ಟಾಫ್ ನರ್ಸ್ ಗಳು, ವೆಂಟಿಲೇಟರ್ ಗಳ ಕೊರತೆ, ಆಕ್ಸಿಜನ್, ಬೆಡ್‍ಗಳ ಕೊರತೆ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಈಶ್ವರಪ್ಪ ಸೂಚನೆ ನೀಡಿದರು.

    ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಮೂಲಭೂತ ಸೌಲಭ್ಯದ ಕೊರತೆ ಮತ್ತು ವೈದ್ಯರಿಂದ ನಿರ್ಲಕ್ಷ್ಯ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಯಾವ ರೀತಿ ಕ್ರಮಕೈಗೊಳ್ಳಬೇಕೆಂಬ ಬಗ್ಗೆ ಸಲಹೆ ಪಡೆದು ಕ್ರಮ ತೆಗೆದುಕೊಳ್ಳಲು ಸೂಚಿಸಲಾಯಿತು.

    ಕೊರೊನಾ ವಾರಿಯರ್ಸ್ ಗಳಾದ ವೈದ್ಯರು ಮತ್ತು ವೈದ್ಯಕೀಯ, ವೈದ್ಯಕೀಯೇತರ ಸಿಬ್ಬಂದಿಗೆ ಪಾಸಿಟಿವ್ ಬಂದಾಗ ಚಿಕಿತ್ಸೆ ಪಡೆಯಲು ಪ್ರತ್ಯೇಕ ವಾರ್ಡ್ ಅವಶ್ಯಕತೆ ಇದೆ. ಈ ಬಗ್ಗೆ ಸಭೆಯಲ್ಲಿ ಸಿಮ್ಸ್ ಸಿಬ್ಬಂದಿ ಸಚಿವರ ಗಮನಕ್ಕೆ ತಂದರು. ಲೋಪದೋಷಗಳು ಸೇರಿದಂತೆ, ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಮ್ಸ್ ಆಡಳಿತ ಮಂಡಳಿ ಮತ್ತು ಜಿಲ್ಲಾ ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು.

    ಕೋವಿಡ್ ರೋಗಿಗಳು ಮತ್ತು ಅವರ ಸಂಬಂಧಿಕರಿಂದ ಹಲವಾರು ದೂರು ಬರುತ್ತಿರುವ ಹಿನ್ನಲೆಯಲ್ಲಿ ಪ್ರತಿ ದೂರನ್ನು ಶಾಸಕರೇ ಬಗೆಹರಿಸಲು ಸಾಧ್ಯವಿಲ್ಲ. ಸಂಬಂಧಿಸಿದ ಅಧಿಕಾರಿಗಳು ಮತ್ತು ವೈದ್ಯರು ತಮ್ಮ ಆತ್ಮ ಸಾಕ್ಷಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

    ಈಗಾಗಲೇ 450 ಬೆಡ್ ಗಳ ವ್ಯವಸ್ಥೆ ಕೋವಿಡ್ ಮತ್ತು ನಾನ್ ಕೋವಿಡ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದೆ. ಹೆಚ್ಚಿನ ಅಗತ್ಯವಿದ್ದರೆ ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಬೆಡ್ ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಸದ್ಯಕ್ಕೆ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ 100 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಸಚಿವರಿಗೆ ಮಾಹಿತಿ ನೀಡಿದರು.

  • ಮೆಗ್ಗಾನ್ ಆಸ್ಪತ್ರೆ ಮಕ್ಕಳ ವಾರ್ಡಿನಲ್ಲಿ ಬೆಂಕಿ ಅವಘಡ ಪ್ರಕರಣ – ತನಿಖೆಗೆ ಈಶ್ವರಪ್ಪ ಸೂಚನೆ

    ಮೆಗ್ಗಾನ್ ಆಸ್ಪತ್ರೆ ಮಕ್ಕಳ ವಾರ್ಡಿನಲ್ಲಿ ಬೆಂಕಿ ಅವಘಡ ಪ್ರಕರಣ – ತನಿಖೆಗೆ ಈಶ್ವರಪ್ಪ ಸೂಚನೆ

    ಶಿವಮೊಗ್ಗ: ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಾರ್ಡಿನಲ್ಲಿ ಕಾಣಿಸಿಕೊಂಡ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

    ಸರ್ಜಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳು ಹಾಗೂ ತಾಯಂದಿರ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಸಚಿವರು, ಭಾನುವಾರ ಅನಾಮಿಕ ವ್ಯಕ್ತಿಯೊಬ್ಬರು ನನಗೆ ದೂರವಾಣಿ ಕರೆ ಮಾಡಿದ್ದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ಈ ಹಿಂದೆಯೇ ಎಲೆಕ್ಟ್ರಿಕ್ ಸಮಸ್ಯೆ ಇದೆ ಸರಿಪಡಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವು. ಆದರೆ ಈ ಬಗ್ಗೆ ಯಾವೊಬ್ಬ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದೇ ಇಂತಹ ಅವಘಡ ಸಂಭವಿಸಲು ಕಾರಣವಾಗಿದೆ ಎಂದು ದೂರು ನೀಡಿದ್ದರು ಎಂದು ಹೇಳಿದರು.

    ಹೀಗಾಗಿ ಆಸ್ಪತ್ರೆಯಲ್ಲಿ ವಿದ್ಯುತ್‍ಗೆ ಸಂಬಂಧಿಸಿದಂತೆ ಏನು ಸಮಸ್ಯೆ ಇತ್ತು? ಸಮಸ್ಯೆ ಇದ್ದರೂ ಅಧಿಕಾರಿಗಳು ಯಾಕೆ ದುರಸ್ಥಿಗೊಳಿಸಲು ಕ್ರಮ ಕೈಗೊಳ್ಳಲಿಲ್ಲ? ಭಾನುವಾರ ಏನಾದರೂ ದೊಡ್ಡ ಅವಘಡ ಸಂಭವಿಸಿದ್ದರೇ ಯಾರು ಹೊಣೆ ಆಗುತ್ತಿದ್ದರು ಎಂದು ಕಿಡಿಕಾರಿದರು. ಹೀಗಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ಈಶ್ವರಪ್ಪ ತಿಳಿಸಿದರು.

    ಏನಿದು ಪ್ರಕರಣ?
    ಶಿವಮೊಗ್ಗದಲ್ಲಿ ಭಾನುವಾರ ಸಂಜೆ ಗುಡುಗು ಸಿಡಿಲು ಸಹಿತ ಭಾರೀ ಗಾಳಿ ಮಳೆಯಾಗಿತ್ತು. ವರುಣನ ಅಬ್ಬರದಿಂದಾಗಿ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿತ್ತು.

    ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಎಲ್ಲಾ 33 ಕಂದಮ್ಮಗಳು ಸುರಕ್ಷಿತವಾಗಿದ್ದು, ಮಹಿಳೆಯ ಆರ್ಭಟಕ ಕಡಿಮೆಯಾಗುತ್ತಿದ್ದಂತೆ ಮಕ್ಕಳು ಹಾಗೂ ಬಾಣಂತಿಯರನ್ನು ನಗರದ ಸರ್ಜಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದರು. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

  • ಕೆಎಫ್‍ಡಿ ಸೋಂಕಿತ ಮಹಿಳೆ ಮೆಗ್ಗಾನ್ ಆಸ್ಪತ್ರೆಯಿಂದ ಎಸ್ಕೇಪ್

    ಕೆಎಫ್‍ಡಿ ಸೋಂಕಿತ ಮಹಿಳೆ ಮೆಗ್ಗಾನ್ ಆಸ್ಪತ್ರೆಯಿಂದ ಎಸ್ಕೇಪ್

    – ಹೇಳದೆ ಕೇಳದೇ ಆಸ್ಪತ್ರೆಯಿಂದ ಓಡಿ ಹೋದ ಮಹಿಳೆ

    ಶಿವಮೊಗ್ಗ: ಮಂಗನಕಾಯಿಲೆ ಸೋಂಕು ತಗುಲಿದ್ದ ಮಹಿಳೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿರುವ ಆಘಾತಕಾರಿ ಘಟನೆ ನಡೆದಿದೆ.

    ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮದ ಸುಮಿತ್ರಮ್ಮ ಮೆಗ್ಗಾನ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ವೈದ್ಯರು ಪರೀಕ್ಷಿಸಿದ ನಂತರ ಮಹಿಳೆಗೆ ಕೆಎಫ್‍ಡಿ ಪಾಸಿಟಿವ್ ಇರುವ ಅಂಶ ದೃಢಪಟ್ಟಿತ್ತು. ಹೀಗಾಗಿ ಮಹಿಳೆಯ ಕುಟುಂಬಸ್ಥರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳೆದ ನಾಲ್ಕು ದಿನದ ಚಿಕಿತ್ಸೆಗೆ ದಾಖಲಿಸಿದ್ದರು.

    ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸುಮಿತ್ರಮ್ಮ ಅವರಿಗೆ ಖಾಯಿಲೆ ಸ್ವಲ್ಪ ವಾಸಿಯಾಗಿತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ಖಾಯಿಲೆ ವಾಸಿಯಾಗದ ಕಾರಣ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಯಾರಿಗೂ ಹೇಳದೆ ಕೇಳದೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

    ಘಟನೆಯಿಂದಾಗಿ ಪೇಚಿಗೆ ಸಿಲುಕಿದ ಆಸ್ಪತ್ರೆ ಸಿಬ್ಬಂದಿ ಸುಮಿತ್ರಮ್ಮ ಮನೆಗೆ ಅಂಬುಲೆನ್ಸ್ ತೆಗೆದುಕೊಂಡು ಹೋಗಿ ನಿಮಗೆ ಇನ್ನೂ ಚಿಕಿತ್ಸೆ ಅವಶ್ಯಕತೆ ಇದೆ. ಹೆಚ್ಚಿನ ಚಿಕಿತ್ಸೆಗೆ ನಿಮ್ಮನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸುತ್ತೇವೆ ಬನ್ನಿ ಎಂದು ಬೇಡಿಕೊಂಡಿದ್ದಾರೆ. ಆದರೆ ಈ ಮಹಿಳೆ ಮಾತ್ರ ನಾನು ಎಲ್ಲಿಗೂ ಬರುವುದಿಲ್ಲ ಎಂದು ಹಠ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

  • ಮೆಗ್ಗಾನ್ ಆಸ್ಪತ್ರೆಗೆ ಸಚಿವ ಈಶ್ವರಪ್ಪ ಭೇಟಿ, ಕೊರೊನಾ ವಾರ್ಡ್ ವೀಕ್ಷಣೆ

    ಮೆಗ್ಗಾನ್ ಆಸ್ಪತ್ರೆಗೆ ಸಚಿವ ಈಶ್ವರಪ್ಪ ಭೇಟಿ, ಕೊರೊನಾ ವಾರ್ಡ್ ವೀಕ್ಷಣೆ

    – ಕೊರೊನಾ ಎದುರಿಸಲು ಜಿಲ್ಲಾಡಳಿತ ಸನ್ನದ್ಧ

    ಶಿವಮೊಗ್ಗ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸಭೆ ನಡೆಸಿದರು. ಬಳಿಕ ಮೆಗ್ಗಾನ್ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಕೊರೊನಾ ವಾರ್ಡ್ ವೀಕ್ಷಿಸಿ, ಕೊರೊನಾ ವೈರಸ್ ಪ್ರಕರಣಗಳ ನಿರ್ವಹಣೆಗೆ ಕೈಗೊಳ್ಳಲಾಗಿರುವ ಕ್ರಮಗಳನ್ನು ಪರಿಶೀಲಿಸಿದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದ್ದು, ಜನ ಗಾಬರಿಯಾಗುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಈ ವರೆಗೆ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಮೂರು ಶಂಕಿತ ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿವೆ. ಜಿಲ್ಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಿಮ್ಸ್ ನಲ್ಲಿ 30 ಹಾಸಿಗೆಯ ಪ್ರತ್ಯೇಕ ವಾರ್ಡ್ ಸಜ್ಜುಗೊಳಿಸಲಾಗಿದೆ. ವೈದ್ಯಾಧಿಕಾರಿಗಳ ತಂಡ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

    ಕೊರೊನಾ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರುವ ಎಲ್ಲ ಕಾರ್ಯಕ್ರಮಗಳನ್ನು ಕೈಬಿಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಮುಂದಿನ 15 ದಿನಗಳ ಕಾಲ ಯಾವುದೇ ಜಾತ್ರೆಗಳನ್ನು ನಡೆಸದಂತೆ ತಿಳಿಸಲಾಗಿದ್ದು, ಈ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ಮಾಹಿತಿಯನ್ನು ನೀಡಬೇಕು. ದೊಡ್ಡ ಪ್ರಮಾಣದ ಯಾವುದೇ ಸಭೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ತಿಳಿಸಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಹಾಗೂ ಇತರರು ಇದ್ದರು.

  • ಕ್ಷೇಮವಾಗಿ 7 ದಿನದ ಮಗುವನ್ನು ಶಿವಮೊಗ್ಗದಿಂದ ಬೆಂಗ್ಳೂರಿಗೆ ತಲುಪಿಸಿದ ಅಂಬುಲೆನ್ಸ್ ಚಾಲಕ

    ಕ್ಷೇಮವಾಗಿ 7 ದಿನದ ಮಗುವನ್ನು ಶಿವಮೊಗ್ಗದಿಂದ ಬೆಂಗ್ಳೂರಿಗೆ ತಲುಪಿಸಿದ ಅಂಬುಲೆನ್ಸ್ ಚಾಲಕ

    – 3 ಗಂಟೆಯಲ್ಲಿ 250 ಕಿ.ಮೀ ಪಯಣ

    ಬೆಂಗಳೂರು: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 7 ದಿನದ ಮಗುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸುರಕ್ಷಿತವಾಗಿ ಅಂಬುಲೆನ್ಸ್‌ನಲ್ಲಿ ಕರೆತರಲಾಗಿದೆ. ಕೇವಲ 3 ಗಂಟೆಯಲ್ಲಿ 350 ಕಿ.ಮೀ ಪಯಣ ಮಾಡಿ ಮಗುವಿನ ಜೀವ ಉಳಿಸಿದ ಚಾಲಕ ಸದ್ದಾಂ ಹುಸೇನ್ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅಂಬುಲೆನ್ಸ್ ಚಾಲಕ ಸದ್ದಾಂ ಹುಸೇನ್, ಮಗುವನ್ನ ಯಶಸ್ವಿಯಾಗಿ ಆಸ್ಪತ್ರೆಗೆ ತಲುಪಿಸಿರುವ ಖುಷಿಯಿದೆ. ಬೆಳಗ್ಗೆ 9:15ಕ್ಕೆ ಶಿವಮೊಗ್ಗದಿಂದ ಹೊರಟು 12:25ಕ್ಕೆ ಬೆಂಗಳೂರಿಗೆ ತಂದಿದ್ದೇವೆ. ಮಗುವನ್ನು ಅಂಬುಲೆನ್ಸ್‌ನಲ್ಲಿ ಇಲ್ಲಿಯವರೆಗೆ ಕರೆತರುವುದು ತುಂಬಾ ಚಾಲೆಂಜಿಂಗ್ ಆಗಿತ್ತು. ಮಗುವನ್ನು ಸುರಕ್ಷಿತವಾಗಿ ಕರೆತರಬೇಕು ಜೊತೆಗೆ ಸ್ಪೀಡ್ ಆಗಿಯೂ ಬರಬೇಕು. ದೇವರ ದಯೆ ಮಗು ಉಳಿಯಲಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಕ್ಲಿಯರ್ ಮಾಡಿದ್ದರೆ ಇನ್ನಷ್ಟು ಬೇಗ ಆಸ್ಪತ್ರೆಗೆ ಬರಬಹುದಿತ್ತು. ಸ್ವಲ್ಪ ಸಿಟಿಯಲ್ಲಿ ತಡವಾಗಿದೆ. ಮಗು ಆರೋಗ್ಯವಾಗಿರಲಿದೆ ಅನ್ನೋ ನಂಬಿಕೆಯಿದೆ ಎಂದು ಹೇಳಿದರು.

    ಅರ್ಧ ಗಂಟೆ ಆಸ್ಪತ್ರೆ ಹೊರಗಿದ್ದ ಮಗು:
    ಶಿವಮೊಗ್ಗದಿಂದ ಇಂದು ಜಯದೇವ ಆಸ್ಪತ್ರೆಗೆ ಹೋಗುವ ಮೊದಲು ಮಗುವನ್ನು ಇಂದಿರಾಗಾಂಧಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಮಗುವನ್ನು ಸುಮಾರು ಅರ್ಧ ಗಂಟೆ ಆಸ್ಪತ್ರೆ ಹೊರಗೆಯೇ ಇರಿಸಲಾಗಿತ್ತು. ಬೇಡ್ ಇಲ್ಲವೆಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವುದು ತಡವಾಯ್ತು.

    ಈ ಬಗ್ಗೆ ಅಂಬುಲೆನ್ಸ್ ಚಾಲಕ ಮಾತನಾಡಿ, ಝೀರೋ ಟ್ರಾಫಿಕ್ ಯಾಕೆ ಬೇಕಿತ್ತು? ಪೊಲೀಸನವರು ಹಾಗೂ ಜನರು ಸಹಾಯ ಮಾಡಿದ್ದಾರೆ. ಆದರೆ ಬೆಡ್ ಇಲ್ಲವೆಂದು ವೈದ್ಯರು ಅರ್ಧ ಗಂಟೆ ಮಗುವನ್ನು ಹೊರಗಡೆ ನಿಲ್ಲಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಗುವನ್ನು ದಾಖಲಿಸಿಕೊಂಡ ಬಳಿಕ ಇಂದಿರಾಗಾಂಧಿ ಆಸ್ಪತ್ರೆಯ ವೈದ್ಯ ಪ್ರಹ್ಲಾದ್ ಅವರು ಮಾತನಾಡಿ, ಮಗು ತೂಕ 1.8 ಕೆಜಿ ಇರುವುದರಿಂದ ಎನ್‍ಐಸಿಯುನಲ್ಲಿ ದಾಖಲು ಮಾಡಿಕೊಂಡಿದ್ದೇವೆ. ಮಗುವಿಗೆ ಹೃದಯದಲ್ಲಿ ರಂಧ್ರ ಇರುವ ಹಿನ್ನೆಲೆ ಕೆಟ್ಟ ರಕ್ತ ಮತ್ತು ಶುದ್ಧ ರಕ್ತ ಮಿಶ್ರಣವಾಗಿದೆ. ಹೀಗಾಗಿ ಮಗುವಿನ ದೇಹದ ಎಲ್ಲ ಅವಯವಗಳಿಗೆ ಆಮ್ಲಜನಕದ ಸಹಿತ ರಕ್ತ ಕೊರತೆಯಿದೆ. ಇದಕ್ಕಾಗಿ ಮಗುವಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯ ಅಗತ್ಯ ಇದೆ ಎಂದು ತಿಳಿಸಿದರು.

    ಎನ್‍ಐಸಿಯುವಿನಲ್ಲಿ ಮಗುವಿಗೆ ಸತತ 7ರಿಂದ 10ದಿನಗಳ ಕಾಲ ಹಾರೈಕೆ ಮಾಡಲು ನಿರ್ಧಾರ ಮಾಡಲಾಗಿದೆ. ಹಾರೈಕೆ ನಂತರ ಹೃದಯ ಸಂಬಂಧ ಚಿಕಿತ್ಸೆ ಮತ್ತು ಸರ್ಜರಿಗೆ ಜಯದೇವ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗುತ್ತದೆ. ಸದ್ಯ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಮಗುವಿಗೆ ಸೂಕ್ತ ಹಾರೈಕೆ ಆರಂಭವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದರು.

  • 7 ದಿನದ ಹಸುಗೂಸಿಗೆ ಹೃದಯ ಸಮಸ್ಯೆ – ಝೀರೋ ಟ್ರಾಫಿಕ್‍ನಲ್ಲಿ ಶಿವಮೊಗ್ಗದಿಂದ ಬೆಂಗ್ಳೂರಿಗೆ ರವಾನೆ

    7 ದಿನದ ಹಸುಗೂಸಿಗೆ ಹೃದಯ ಸಮಸ್ಯೆ – ಝೀರೋ ಟ್ರಾಫಿಕ್‍ನಲ್ಲಿ ಶಿವಮೊಗ್ಗದಿಂದ ಬೆಂಗ್ಳೂರಿಗೆ ರವಾನೆ

    ಶಿವಮೊಗ್ಗ: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 7 ದಿನದ ಹಸುಗೂಸಿನ ಜೀವ ಉಳಿಸಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಂಬುಲೆನ್ಸ್‌ನಲ್ಲಿ ರವಾನಿಸಲಾಗಿದೆ.

    ಮೆಗ್ಗಾನ್ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗದಿಂದ ಜೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕಂದಮ್ಮನನ್ನು ಅಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮದ ಸ್ವಾಮಿ ಹಾಗೂ ಸುಧಾ ದಂಪತಿಗೆ ಫೆ. 4ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಜನನದ ನಂತರ ಮಗುವನ್ನು ಪರೀಕ್ಷಿಸಿದ ವೈದ್ಯರಿಗೆ ಮಗುವಿನ ಹೃದಯದಲ್ಲಿ ಸಣ್ಣ ರಂಧ್ರವಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿ.ಮೀ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಅಂಬುಲೆನ್ಸ್ ಚಾಲಕ

    ಸ್ಕ್ಯಾನಿಂಗ್ ವರದಿಯಲ್ಲಿ ಸಹ ಹೃದಯದಲ್ಲಿ ರಂಧ್ರ ಇರುವುದು ದೃಢಪಟ್ಟಿದೆ. ಹೀಗಾಗಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಪೋಷಕರಿಗೆ ಸಲಹೆ ನೀಡಿದ್ದಾರೆ.

    ಈ ಹಿನ್ನೆಲೆ ಇಂದು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಅಂಬುಲೆನ್ಸ್‌ನಲ್ಲಿ ಕಳುಹಿಸಲಾಯಿತು. ನಗರದ ದೊಡ್ಡಪೇಟೆ ಠಾಣೆ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಜೊತೆಗೆ ಎಸ್ಕಾರ್ಟ್ ವಾಹನವನ್ನು ಅಂಬುಲೆನ್ಸ್ ಜೊತೆ ಕಳುಹಿಸಿದ್ದಾರೆ.

  • ಸಕಾಲಕ್ಕೆ ವೇತನ, ಹುದ್ದೆ ಖಾಯಂಗೊಳಿಸಲು ಆಗ್ರಹ : ಮೆಗ್ಗಾನ್ ಆಸ್ಪತ್ರೆ ನೌಕರರ ಪ್ರತಿಭಟನೆ

    ಸಕಾಲಕ್ಕೆ ವೇತನ, ಹುದ್ದೆ ಖಾಯಂಗೊಳಿಸಲು ಆಗ್ರಹ : ಮೆಗ್ಗಾನ್ ಆಸ್ಪತ್ರೆ ನೌಕರರ ಪ್ರತಿಭಟನೆ

    ಶಿವಮೊಗ್ಗ: ಸಕಾಲಕ್ಕೆ ವೇತನ ನೀಡುವಂತೆ ಹಾಗೂ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಶಿವಮೊಗ್ಗದಲ್ಲಿ ಇಂದು ಮೆಗ್ಗಾನ್ ಆಸ್ಪತ್ರೆಯ ಹೊರಗುತ್ತಿಗೆಯ ನೂರಾರು ಸಿಬ್ಬಂದಿ ಪ್ರತಿಭಟನೆ ನಡೆಸಿದರು.

    ಕರ್ತವ್ಯಕ್ಕೆ ಗೈರು ಹಾಜರಾಗಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ ಸಿಬ್ಬಂದಿಯವರು ನಮಗೆ ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ ಹಾಗೂ ಕೆಲಸದಿಂದ ತೆಗೆಯುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ ಎಂದು ಆರೋಪಿಸಿದರು.

    ಅಲ್ಲದೇ ಹಲವು ವರ್ಷದಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನಮ್ಮನ್ನೆ ಖಾಯಂಗೊಳಿಸಬೇಕು ಇಲ್ಲದಿದ್ದರೆ ಹೊರಗುತ್ತಿಗೆ ತೆಗೆದು ಹಾಕಿ ಸರ್ಕಾರವೇ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸಿಬ್ಬಂದಿ ಆಗ್ರಹಿಸಿದರು.

    ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ್ದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ರಾಜ್ಯದಲ್ಲಿ ಹೊರ ಗುತ್ತಿಗೆಯದ್ದು ಒಂದು ದೊಡ್ಡ ಮಾಫಿಯವೇ ಇದೆ. ಸರ್ಕಾರವೇ ವೇತನ ನೀಡುತ್ತಿರಬೇಕಾದರೆ ಹೊರಗುತ್ತಿಗೆ ಏಕೆ ಬೇಕು ಎಂದು ಪ್ರಶ್ನಿಸಿದರು. ಈ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಿ ಹೊರಗುತ್ತಿಗೆ ತೆಗೆದುಹಾಕಿ ನೇರ ನೇಮಕಾತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದರು.

  • ಕೋಟಿಗಟ್ಟಲೇ ವೆಚ್ಚದಲ್ಲಿ ಕಟ್ಟಿ 5 ವರ್ಷವಾದ್ರೂ ಉದ್ಘಾಟನೆಯಾಗದ ಆಸ್ಪತ್ರೆ ಕಟ್ಟಡ

    ಕೋಟಿಗಟ್ಟಲೇ ವೆಚ್ಚದಲ್ಲಿ ಕಟ್ಟಿ 5 ವರ್ಷವಾದ್ರೂ ಉದ್ಘಾಟನೆಯಾಗದ ಆಸ್ಪತ್ರೆ ಕಟ್ಟಡ

    -ಸಮಸ್ಯೆಗಳ ಆಗರವಾಗಿದೆ ಶಿವಮೊಗ್ಗದ ಮೆಗ್ಗಾನ್

    ಶಿವಮೊಗ್ಗ: ಹೈಟೆಕ್ ಬೋಧನಾ ಆಸ್ಪತ್ರೆ ವೈದ್ಯಕೀಯ ಕಾಲೇಜಿನ ಅಧೀನದಲ್ಲಿದ್ದು, ಆಧುನೀಕರಣಗೊಂಡಿದ್ದರೂ ಕೂಡ ಸಮಸ್ಯೆಗಳ ಸರಮಾಲೆ ಮಾತ್ರ ಸರಿಯಾಗಿಲ್ಲ. ಈ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿದಿನ ಸಾವಿರಾರು ರೋಗಿಗಳು ಆಗಮಿಸುತ್ತಿದ್ದರೂ ಕೂಡ ತಜ್ಞರು, ವೈದ್ಯರ ಕೊರತೆಯಿಂದಾಗಿ ಸಾರ್ವಜನಿಕರು ಪರಿತಪಿಸುವಂತಾಗಿದೆ. ಆಧುನಿಕ ಯಂತ್ರಗಳು ಆಸ್ಪತ್ರೆಯಲ್ಲಿದ್ದರೂ ಕೂಡ ಇದನ್ನು ನಿರ್ವಹಿಸುವವರಿಲ್ಲವಾಗಿದೆ. ಕೋಟಿಗಟ್ಟಲೇ ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡು 5 ವರ್ಷ ಕಳೆದಿದ್ದರೂ ಇನ್ನೂ ಅದಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದ ಐತಿಹಾಸಿಕ ಸರ್ಕಾರಿ ಆಸ್ಪತ್ರೆಯ ಗೋಳು ಕೇಳೋರಿಲ್ಲ. ಮೆಕ್ ಗ್ಯಾನ್ ಎಂಬ ಬ್ರಿಟಿಷ್ ಅಧಿಕಾರಿ ಬಡರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆ ನಿರ್ಮಾಣಕ್ಕೆ ನೀಡಿದ್ದ ಬರೋಬ್ಬರಿ 50 ಎಕರೆಗೂ ಅಧಿಕ ಪ್ರದೇಶ ನೀಡಿದ್ದರು. ಈ ಪ್ರದೇಶದಲ್ಲಿ ಇತ್ತೀಚಿನ ಹೈಟೆಕ್ ಆಸ್ಪತ್ರೆಯಾಗಿ ರೂಪಗೊಂಡಿರುವ ಈ ಆಸ್ಪತ್ರೆ ಎಲ್ಲವೂ ಇದ್ದು ಇಲ್ಲಗಳ ನಡುವೆ ಸಾಗುತ್ತಿದೆ ಎಂದರೆ ತಪ್ಪಾಗಲಾರದು. ಹೌದು ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಆಗಿರುವ ಸಿಮ್ಸ್ ವೈದ್ಯಕೀಯ ಕಾಲೇಜಿನ ಅಧೀನದಲ್ಲಿದ್ದು, ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ್ದರೂ ಕೂಡ ರೋಗಿಗಳು ಯಮಯಾತನೆ ನೀಡುವಂತಹ ಆಸ್ಪತ್ರೆಯಾಗಿರುವುದು ಅಕ್ಷರಶಃ ಸತ್ಯವಾಗಿದೆ. ಇದನ್ನೂ ಓದಿ: ಲಿಫ್ಟ್ ಬೇಕು ಲಿಫ್ಟ್- ಶಿವಮೊಗ್ಗ ಸಿಮ್ಸ್ ಡಾಕ್ಟರ್‍ಗಳ ಗೋಳು

    ಕೋಟಿಗಟ್ಟಲೆ ಸುರಿದು ಹೈಟೆಕ್ ಆಗಿ ಈ ಸರ್ಕಾರಿ ಆಸ್ಪತ್ರೆ ರೂಪಗೊಂಡಿದ್ದರೂ ಕೂಡ ಸಮಸ್ಯೆಗಳ ಸರಮಾಲೆ ಬೆಳೆಯುತ್ತಲೇ ಇದೆ. ಮೆಗ್ಗಾನ್ ಆಸ್ಪತ್ರೆಗೆ ಶಿವಮೊಗ್ಗ ಸುತ್ತಮುತ್ತಲಿನ ಇತರೆ ಜಿಲ್ಲೆಗಳಿಂದಲೂ ರೋಗಿಗಳು ಭಾರೀ ಸಂಖ್ಯೆಯಲ್ಲಿ ಬರುತ್ತಾರೆ. ಈ ಆಸ್ಪತ್ರೆಗೆ ಸುಸಜ್ಜಿತವಾದ ಕಟ್ಟಡ, ಯಂತ್ರಗಳು ಇದ್ದರೂ ಕೂಡ ರೋಗಿಗಳು ಸೂಕ್ತ ಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ಪರಿತಪಿಸುವಂತಾಗಿದೆ. ಈ ಆಸ್ಪತ್ರೆಯಲ್ಲಿ ತಜ್ಞ, ವೈದ್ಯರ ಕೊರತೆ ಇದ್ದು ಇದುವರೆಗೂ ವೈದ್ಯರ ನೇಮಕವಾಗದಿರುವುದು ರೋಗಿಗಳಿಗೆ ತೊಂದರೆಯಾಗಿದೆ. ಇದನ್ನೂ ಓದಿ: ವ್ಹೀಲ್‍ಚೇರ್ ಕೊಡದ ಆಸ್ಪತ್ರೆ ಸಿಬ್ಬಂದಿ- ಪತಿಯನ್ನು ನೆಲದ ಮೇಲೆಯೇ ಎಳೆದುಕೊಂಡು ಹೋದ ಪತ್ನಿ

    ಅಷ್ಟೇ ಅಲ್ಲದೇ ಈ ಆಸ್ಪತ್ರೆಗೆ ಇತ್ತೀಚೆಗಷ್ಟೆ ಎಂ.ಆರ್.ಐ. ಸ್ಕ್ಯಾನಿಂಗ್ ಯಂತ್ರ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಇದನ್ನು ಉದ್ಘಾಟಿಸಿದ್ದರು. ಜೊತೆಗೆ ಇಲ್ಲಿ ಡಯಾಲಿಸಿಸ್ ಯಂತ್ರಗಳಿವೆ, ಸಿ.ಟಿ. ಸ್ಕ್ಯಾನಿಂಗ್ ಯಂತ್ರಗಳಿವೆ. ಆದರೆ ಎಲ್ಲವೂ ಇದ್ದು ಇಲ್ಲಿ ಈ ಯಂತ್ರಗಳನ್ನು ಕಾರ್ಯ ನಿರ್ವಹಿಸುವ ಸೂಕ್ತ ತಜ್ಞರಿಲ್ಲದೆ ರೋಗಿಗಳು ಇದರ ಉಪಯೋಗ ಪಡೆದುಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೋಗಿಗಳು ಸ್ಕ್ಯಾನಿಂಗ್ ಗಾಗಿ ಮತ್ತೆ ಹೊರಗಿನ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಿದೆ. ಅಲ್ಲದೇ ಇದರ ವೆಚ್ಚ ಕೂಡ ರೋಗಿಗಳೇ ಭರಿಸಬೇಕಿದ್ದು, ಇದು ರೋಗಿಗಳ ಕಡೆಯವರಿಗೆ ನುಂಗಲಾರದ ತುತ್ತಾಗಿದೆ.

    ಅಷ್ಟಕ್ಕೂ ಈ ಆಸ್ಪತ್ರೆಯಲ್ಲಿ ಕೋಟಿಗಟ್ಟಲೆ ವೆಚ್ಚದ ಸ್ಕ್ಯಾನಿಂಗ್ ಯಂತ್ರಗಳು, ಅದಕ್ಕಾಗಿ ಹೈಟೆಕ್ ಕೊಠಡಿಗಳು ಇದ್ದರೂ ಕೂಡ ಸೂಕ್ತ ತಜ್ಞರಿಲ್ಲದೇ ಈ ಯಂತ್ರಗಳು ಎ.ಸಿ ರೂಂನಲ್ಲಿ ಕೊಳೆಯುವಂತಾಗಿದೆ. ರೋಗಿಗಳಿಗೆ ಅಗತ್ಯವಿದ್ದರೂ ಕೂಡ ಈ ಯಂತ್ರಗಳು ಬಳಕೆಯಾಗದೆ ಹಾಗೆಯೇ ಉಳಿದುಕೊಂಡಿದ್ದು ಸಿಮ್ಸ್ ನಿರ್ದೇಶಕರು ಕೂಡಲೇ ಇದಕ್ಕಾಗಿ ತಜ್ಞರನ್ನು ನೇಮಿಸಿಕೊಳ್ಳಬೇಕಿದೆ. ಇಷ್ಟೇ ಅಲ್ಲ ವಿಭಾಗ ನಿರ್ವಹಣೆಯಲ್ಲಿಯೂ ಕೂಡ ಸಾಕಷ್ಟು ಸಮಸ್ಯೆಗಳಿವೆ. ಮೆಗ್ಗಾನ್ ಆಸ್ಪತ್ರೆ ಅವರಣದಲ್ಲಿಯೇ ಸುಮಾರು 36 ಕೋಟಿ ರೂಪಾಯಿ ವೆಚ್ಚದಲ್ಲಿ ಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ನಿರ್ಮಾಣಗೊಂಡು 5 ವರ್ಷಗಳು ಕಳೆದಿದೆ. ಆದರೆ ಈ ಕಟ್ಟಡ ಪಾಳು ಬಿದ್ದಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇದನ್ನೂ ಓದಿ: ಅಮಾನವೀಯ ಘಟನೆ: ರೋಗಿಯ ಪತ್ನಿಯನ್ನೇ ಆರೋಪಿಯನ್ನಾಗಿಸಿದ ಮೆಗ್ಗಾನ್ ಆಸ್ಪತ್ರೆ

    2009-10ರಲ್ಲಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಈ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ್ದರು. 2013-14ರಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿ ಮುಗಿದಿದೆ. ಆದರೆ ಓವರೆಗೂ ಈ ಕಟ್ಟಡಕ್ಕೆ ಉದ್ಘಾಟನಾ ಭಾಗ್ಯ ದೊರಕಿಲ್ಲ. ಕಟ್ಟಡದ ಅಲ್ಲಲ್ಲಿ ಮದ್ಯದ ಪ್ಯಾಕೇಟ್‌ಗಳು, ಬಾಟಲಿಗಳು ಕಾಣಸಿಗುತ್ತಿರುವುದು ಇಲ್ಲಿನ ಅವ್ಯವಸ್ಥೆ ಎತ್ತಿ ತೋರಿಸುತ್ತಿದೆ. ಇದನ್ನ ಗಮನಹರಿಸಬೇಕಾದ ಸಿಮ್ಸ್ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ಅಧಿಕಾರಿಗಳು ಎನೂ ತೊಂದರೆ ಎಲ್ಲವೆನ್ನುವ ಹಾಗೆ ಪ್ರತಿಕ್ರಿಯಿಸಿದ್ದಾರೆ.

    ಸಮಸ್ಯೆಗಳ ಆಗರವಾಗಿರುವ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಈ ಕೂಡಲೇ ಪರಿಹಾರ ದೊರೆಯಬೇಕಿದೆ. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿನಿಧಿಸುವ ಜಿಲ್ಲಾ ಕೇಂದ್ರದಲ್ಲೇ ಈ ರೀತಿ ಸಮಸ್ಯೆಯಾದರೆ ಇನ್ನು ಇತರೆ ಆಸ್ಪತ್ರೆಗಳ ಸ್ಥಿತಿ ಹೇಗಪ್ಪಾ ಅಂತಾ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

  • ನೆಲದ ಮೇಲೆಯೇ ಪತಿಯನ್ನು ಎಳೆದೊಯ್ದ ಪ್ರಕರಣ – ವೃದ್ಧ ಅಮೀರ್ ಸಾಬ್ ಆರೋಗ್ಯ ಸ್ಥಿತಿ ಗಂಭೀರ

    ನೆಲದ ಮೇಲೆಯೇ ಪತಿಯನ್ನು ಎಳೆದೊಯ್ದ ಪ್ರಕರಣ – ವೃದ್ಧ ಅಮೀರ್ ಸಾಬ್ ಆರೋಗ್ಯ ಸ್ಥಿತಿ ಗಂಭೀರ

    ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಸಿಗದೆ ಮಹಿಳೆಯೊಬ್ಬರು ತನ್ನ ವೃದ್ಧ ಪತಿಯನ್ನು ನೆಲದ ಮೇಲೆ ಎಳೆದೊಯ್ದ ಪ್ರಕರಣದ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಮೀರಸಾಬ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೆಗ್ಗಾನ್ ಆಸ್ಪತ್ರೆಯ ವೈದ್ಯ ಡಾ. ರಘುನಂದನ್ ತಿಳಿಸಿದ್ದಾರೆ.

    ಬೆಳಗ್ಗಿನವರೆಗೂ ಅಮೀರ್ ಸಾಬ್ ಆರೋಗ್ಯ ಚೆನ್ನಾಗಿತ್ತು ಹಾಗು ಚೇತರಿಸಿಕೊಳ್ಳುತ್ತಿದ್ದರು. ಆದರೆ ಬೆಳಗ್ಗೆ 9.30ರ ವೇಳೆಯಲ್ಲಿ ಅರೆಪ್ರಜ್ಞಾವಸ್ಥೆ ತಲುಪಿದ್ದಾರೆ. ಎಂಅರ್‍ಐ ಸ್ಕ್ಯಾನಿಂಗ್ ಮಾಡಿಸಿದಾಗ ಸ್ಟ್ರೋಕ್ ಆಗಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ದೃಢಪಟ್ಟಿದೆ. ಇದಕ್ಕೆ ಚಿಕೆತ್ಸೆ ನೀಡಲು ನ್ಯೂರೋ ಸರ್ಜನ್ ಬೇಕು. ಈ ವ್ಯವಸ್ಥೆ ಮೆಗ್ಗಾನ್ ನಲ್ಲಿ ಇಲ್ಲದ ಕಾರಣ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲು ಸೂಚಿಸಿದ್ದೇವೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

    ಗುರುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮೀರಸಾಬ್ ಅವರಿಗೆ ಎಕ್ಸ್ ರೇ ಕೊಠಡಿಗೆ ಕರೆದುಕೊಂಡು ಹೋಗಲು ವೀಲ್ ಚೇರ್ ಸಿಗದೇ ಇದ್ದಾಗ ಅವರ ಪತ್ನಿ ಫಮೀದಾ ಪತಿಯನ್ನು ನೆಲದ ಮೇಲೆಯೇ ಎಳೆದುಕೊಂಡು ಹೋಗಿದ್ದರು.

    ಇದನ್ನೂ ಓದಿ: ಅಮಾನವೀಯ ದೃಶ್ಯದ ವಿಡಿಯೋ ಮಾಡಿದ್ದು ಯಾಕೆ? ನೋವಿನ ಕಥೆಯನ್ನು ಮುರಳಿ ನಾಯಕ್ ಹೇಳ್ತಾರೆ ಓದಿ

    ಇದನ್ನೂ ಓದಿ: ಅಮಾನವೀಯ ಘಟನೆ: ರೋಗಿಯ ಪತ್ನಿಯನ್ನೇ ಆರೋಪಿಯನ್ನಾಗಿಸಿದ ಮೆಗ್ಗಾನ್ ಆಸ್ಪತ್ರೆ

    https://www.youtube.com/watch?v=FIfROhD1LVc

     

  • ಅಮಾನವೀಯ ದೃಶ್ಯದ ವಿಡಿಯೋ ಮಾಡಿದ್ದು ಯಾಕೆ? ನೋವಿನ ಕಥೆಯನ್ನು ಮುರಳಿ ನಾಯಕ್ ಹೇಳ್ತಾರೆ ಓದಿ

    ಅಮಾನವೀಯ ದೃಶ್ಯದ ವಿಡಿಯೋ ಮಾಡಿದ್ದು ಯಾಕೆ? ನೋವಿನ ಕಥೆಯನ್ನು ಮುರಳಿ ನಾಯಕ್ ಹೇಳ್ತಾರೆ ಓದಿ

    ಬೆಂಗಳೂರು: ರೋಗಿಗಳನ್ನು ಆಸ್ಪತ್ರೆ ಹೇಗೆ ನಿರ್ಲಕ್ಷ್ಯದಿಂದ ನೋಡುತ್ತದೆ ಎನ್ನುವುದನ್ನು ತಿಳಿಸುವುದಕ್ಕಾಗಿ ಈ ವಿಡಿಯೋವನ್ನು ನಾನು ಸೆರೆ ಹಿಡಿದಿದ್ದೇನೆ ಹೊರತು ಬೇರೆ ಯಾವುದೇ ಉದ್ದೇಶ ಇದರಲ್ಲಿ ಇಲ್ಲ ಎಂದು ಮುರಳಿ ನಾಯಕ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು ಈ ಘಟನೆ ಹೇಗಾಯ್ತು ಎನ್ನುವುದನ್ನು ವಿವರಿಸಿದ್ದು ಹೀಗೆ

    ಮೇ 31 ರಂದು ಮಧ್ಯಾಹ್ನ ನಾನು ನಮ್ಮ ಸಂಬಂಧಿಯನ್ನು ನೋಡಲು ಆಸ್ಪತ್ರೆಗೆ ಹೋಗಿದ್ದೆ. ಈ ವೇಳೆ ಮಹಿಳೆಯೊಬ್ಬರು ಧರಧರನೇ ವ್ಯಕ್ತಿಯೊಬ್ಬರನ್ನು ಎಳೆದುಕೊಂಡು ಬರುವುದನ್ನು ನಾನು ನೋಡಿದೆ.

    ಇದನ್ನು ನೋಡಿ ನಾನು ಶಾಕ್ ಆದೆ. ನಾನು ನೋಡುವವರೆಗೆ ಆಗಲೇ ಅವರು ಬಹಳ ದೂರದವರೆಗೆ ಎಳೆದುಕೊಂಡು ಬಂದಿದ್ದರು. ಈ ದೃಶ್ಯವನ್ನು ನಾನು ನೋಡಿದ ಕೂಡಲೇ ಅವರ ಬಳಿ ಹೋಗಿ ಯಾಕೆ ಈ ರೀತಿ ಎಳೆದುಕೊಂಡು ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಇದಕ್ಕೆ ಅವರು, ಪತಿಗೆ ಎಕ್ಸ್ ರೇ ಮಾಡಿಸಬೇಕು. ಡಾಕ್ಟರ್ ಕರೆದುಕೊಂಡು ಬನ್ನಿ ಎಂದು ಹೇಳಿದ್ದಾರೆ. ಆದರೆ ಪತಿಯನ್ನು ಕರೆದುಕೊಂಡು ಹೋಗಲು ವೀಲ್ ಚೇರ್ ಕೊಡಿ ಎಂದು ಕೇಳಿದ್ದಕ್ಕೆ ಯಾರು ಕೊಟ್ಟಿಲ್ಲ. ಸಾಕಷ್ಟು ಬಾರಿ ಕೇಳಿದರೂ ವೀಲ್ ಚೇರ್ ಇಲ್ಲ ಎಂದೇ ಹೇಳಿದರು. ಹೀಗಾಗಿ ಅನಿವಾರ್ಯವಾಗಿ ಎಳೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದರು.

    ಈ ಮಾತನ್ನು ಕೇಳಿ ನನಗೆ ಶಾಕ್ ಆಯ್ತು. ಈ ಆಸ್ಪತ್ರೆಯಲ್ಲಿ ವ್ಯವಸ್ಥೆ ಇಷ್ಟೊಂದು ಹಾಳಾಗಿದ್ಯಾ ಎಂದು ತಿಳಿದು ನಾನು ವಿಡಿಯೋ ಮಾಡಿದೆ. ಈ ವೇಳೆಗೆ ಅಲ್ಲಿದ್ದ ಜನರು ನನ್ನ ಜೊತೆಗೆ ಸೇರಿ ಧೈರ್ಯ ತುಂಬಿದರು.

    ಈ ವಿಚಾರವನ್ನು ನಾನು ನರ್ಸ್ ಜೊತೆ ತಿಳಿಸಿದಾಗ ಅವರು ನಮ್ಮ ಜೊತೆ ಗಲಾಟೆ ಮಾಡಿದರು. ನಂತರ ಎಂಡಿ ಸತ್ಯನಾರಾಯಣ ಅವರ ಬಳಿ ಈ ವಿಡಿಯೋವನ್ನು ತೋರಿಸಿದಾಗ ಕೂಡಲೇ ಅವರು ಫೋನ್ ಮಾಡಿ ನರ್ಸ್ ಗಳಿಗೆ ವಿಷಯ ಮುಟ್ಟಿಸಿದರು. ಈ ವೇಳೆ ನನ್ನ ಜೊತೆ ಬಂದಿದ್ದ ಜನರು ವೀಲ್ ಚೇರ್ ಗಳು ಎಲ್ಲ ಎಮರ್ಜೆನ್ಸಿಗೆ ಬಳಕೆ ಆಗುತ್ತಿದೆ. ನಮ್ಮ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸಿಗುವುದಿಲ್ಲ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಆಸ್ಪತ್ರೆಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಹೇಳಿಕೊಂಡರು.

    ಈ ವೇಳೆ ಪಬ್ಲಿಕ್ ಟಿವಿ ನೀವು ಯಾವುದೋ ದುರುದ್ದೇಶವನ್ನು ಇಟ್ಟಕೊಂಡು ವಿಡಿಯೋ ಮಾಡಿದ್ದೀರಿ ಎನ್ನುವ ಸುದ್ದಿ ಬಂದಿದೆ ಎಂದು ಪ್ರಶ್ನಿಸಿದ್ದಕ್ಕೆ, ವ್ಯವಸ್ಥೆ ಎಷ್ಟು ಹಾಳಾಗಿದೆ ಎನ್ನುವುದನ್ನು ತೋರಿಸಲು ಈ ವಿಡಿಯೋ ಮಾಡಿದ್ದೇನೆ. ನಾನು ನೋಡುವ ಮೊದಲೇ ಅವರು ವಾರ್ಡ್ ರೂಮಿನಿಂದ ಪತಿಯನ್ನು ಎಳೆದುಕೊಂಡೇ ಬಂದಿದ್ದರು. ಎಕ್ಸ್ ರೇ ಮಾಡಿಸಲು ವೀಲ್  ಚೇರ್ ಕೊಡಿ ಎಂದು ಅವರು ಸಾಕಷ್ಟು ಬಾರಿ ಮನವಿ ಮಾಡಿದರೂ ನೀಡದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳಿಗೆ ತೋರಿಸಲು ಈ ವಿಡಿಯೋ ಮಾಡಿದ್ದೇನೆ ಹೊರತು ಬೇರೆ ಯಾವುದೇ ಉದ್ದೇಶ ಇದರಲ್ಲಿ ಇಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.

    ಇದನ್ನೂ ಓದಿ: ಅಮಾನವೀಯ ಘಟನೆ: ರೋಗಿಯ ಪತ್ನಿಯನ್ನೇ ಆರೋಪಿಯನ್ನಾಗಿಸಿದ ಮೆಗ್ಗಾನ್ ಆಸ್ಪತ್ರೆ

    https://www.youtube.com/watch?v=zvOMuW_nmN8

    https://www.youtube.com/watch?v=FIfROhD1LVc

    https://www.youtube.com/watch?v=u4vG0bvZ8Eg