Tag: ಮೆಕ್ಕೆ ಜೋಳ

  • ಆರೋಗ್ಯಕರ ಮೆಕ್ಕೆ ಜೋಳದ ಇಡ್ಲಿ ಮಾಡಿ ಸವಿಯಿರಿ

    ಆರೋಗ್ಯಕರ ಮೆಕ್ಕೆ ಜೋಳದ ಇಡ್ಲಿ ಮಾಡಿ ಸವಿಯಿರಿ

    ವಾರದಲ್ಲೊಮ್ಮೆಯಾದ್ರೂ ಮನೆಯಲ್ಲಿ ಇಡ್ಲಿ ಮಾಡುತ್ತೇವೆ. ಇಡ್ಲಿಯಲ್ಲಿ (Mekke Jowar Idli) ಹಲವಾರು ವಿಧಗಳಿವೆ. ರವೆ ಇಡ್ಲಿ, ಬಾಳೆ ಹಣ್ಣಿನ ಇಡ್ಲಿ, ಅಕ್ಕಿ ಇಡ್ಲಿ ಹೀಗೆ. ಆದ್ರೆ ಮೆಕ್ಕೆ ಜೋಳದ ಇಡ್ಲಿ ಹೆಚ್ಚು ವಿಶೇಷ. ಮೆಕ್ಕೆ ಜೋಳದಲ್ಲಿ ಹೆಚ್ಚಿನ ಪ್ರೊಟೀನ್ ಮತ್ತು ಪೋಷಕಾಂಶಗಳಿದ್ದು, ಇದು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು ಕೂಡ.

    mekke jowar idli

    ಬೇಕಾಗುವ ಸಾಮಗ್ರಿಗಳು:
    * ಮೆಕ್ಕೆ ಜೋಳ -2 ಕಪ್
    * ಉದ್ದಿನ ಬೇಳೆ – ಅರ್ಧ ಕಪ್
    * ಹುರಿದ ಕಡ್ಲೆಬೇಳೆ- 2 ಚಮಚ
    * ಇಂಗು -ಅರ್ಧ ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಅಡುಗೆ ಎಣ್ಣೆ- ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಹಸಿ ಮೆಣಸು – ಐದು
    * ತುರಿದ ತೆಂಗಿನಕಾಯಿ- ಅರ್ಧ ಚಮಚ
    * ಸಾಸಿವೆ- ಒಂದು ಚಮಚ

    ಮಾಡುವ ವಿಧಾನ:
    * ಮೆಕ್ಕೆಜೋಳ, ಉದ್ದಿನ ಬೇಳೆಗಳನ್ನು ಸುಮಾರು ಎರಡರಿಂದ 3 ಗಂಟೆಗಳ ಕಾಲ ನೆನೆಸಿಡಿ. ಬಳಿಕ ನೀರನ್ನು ಚೆನ್ನಾಗಿ ಸೋಸಿ ಹುರಿದ ಕಡಲೆ ಬೇಳೆ ಮತ್ತು ಹಸಿಮೆಣಸಿಕಾಯಿಯೊಂದಿಗೆ ಚೆನ್ನಾಗಿ ರುಬ್ಬಿಕೊಳ್ಳಬೇಕು.
    * ಇಡ್ಲಿಯ ಹಿಟ್ಟಿನ ಹದಕ್ಕೆ ಬರುವವರೆಗೂ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ.

    * ಈಗ ತೆಂಗಿನ ತುರಿ, ಉಪ್ಪು ಹಾಕಿ ಚನ್ನಾಗಿ ಕಲಸಿ. ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಎಣ್ಣೆ ಕಾದ ನಂತರ ಸಾಸಿವೆ ಹಾಕಿ ಸಿಡಿಸಿ, ಇಂಗು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ. ಇದನ್ನೂ ಓದಿ:  ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ
    * ಈ ಒಗ್ಗರಣೆಗೆ ರುಬ್ಬಿದ ಹಿಟ್ಟನ್ನು ಹಾಕಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ. ಎಲ್ಲವೂ ಚೆನ್ನಾಗಿ ಮಿಶ್ರವಾಗುವ ರೀತಿ ಕಲಸಿ. ಈ ಹಿಟ್ಟನ್ನು ಇಡ್ಲಿ ಪಾತ್ರೆಯಲ್ಲಿ ಹಾಕಿ ಬೇಯಿಸಿದರೆ ಮೆಕ್ಕೆ ಜೋಳದ ಇಡ್ಲಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

  • ಹಳೇ ವೈಷಮ್ಯ – ಹೊತ್ತಿ ಉರಿದ ಮೆಕ್ಕೆಜೋಳದ ರಾಶಿ

    ಹಳೇ ವೈಷಮ್ಯ – ಹೊತ್ತಿ ಉರಿದ ಮೆಕ್ಕೆಜೋಳದ ರಾಶಿ

    – ಮಾರುಕಟ್ಟೆಗೆ ಬರುವ ಮುನ್ನ ಬೆಂಕಿಗೆ ಆಹುತಿ

    ಚಿತ್ರದುರ್ಗ: ಕೈಗೆ ಬಂದಿರುವ ಮೆಕ್ಕೆಜೋಳದ ಬೆಳೆ ಮಾರುಕಟ್ಟೆಗೆ ಬರುವ ಮುನ್ನವೇ ಕಿಡಿಗೇಡಿಗಳು ಹಳೆ ವೈಷಮ್ಯಕ್ಕೆ ಬೆಂಕಿ ಇಟ್ಟು ಬೆಳೆ ನಾಶ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಗ್ರಾಮದ ರೈತ ಶಂಭುಲಿಂಗಪ್ಪ ಅವರು ಬೆಳೆದಿದ್ದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳದ ರಾಶಿಗೆ ಬೆಂಕಿ ಇಡಲಾಗಿದ್ದೂ, ಮೆಕ್ಕೆಜೋಳದ ತೆನೆಗಳು ಬೆಂಕಿಯಲ್ಲಿ ಹೊತ್ತಿ ಉರಿದಿದೆ.

    ನೋಡ ನೋಡುತ್ತಲೇ ಸುಟ್ಟು ಕರಕಲಾದ ಮೆಕ್ಕೆ ಜೊಳದ ರಾಶಿ ಕಂಡು ಕಷ್ಟಪಟ್ಟು ಬೆಳೆದ ರೈತನ ಆಕ್ರಂದನ ಮುಗಿಲು ಮುಟ್ಟಿದೆ. ಮೆಕ್ಕೆಜೋಳ ಬೆಳೆಯಲು ಮಾಡಿದ್ದ ಸಾಲ ಹಾಗೂ ಕಳೆದ ಮೂರು ವರ್ಷಗಳಿಂದ ಜಮೀನಿನಲ್ಲಿ ಉಳುಮೆ ಮಾಡಲು ಫೈನಾನ್ಸ್ ನಲ್ಲಿ ತರಲಾಗಿದ್ದ ಸಾಲವನ್ನು ತೀರಿಸಬೇಕೆಂಬ ನಿರೀಕ್ಷೆಯಲ್ಲಿದ್ದ ರೈತ ಶಂಭುಲಿಂಗಪ್ಪ ಅವರ ಬೆಳೆದಿರುವ ಬಳೆಗೆ ಕಿಡಿಗೇಡಿಗಳು ಮಾಡಿರುವ ಅವಾಂತರದಿಂದ ಬರಸಿಡಿಲು ಬಡಿದಂತಾಗಿದೆ. ಆದರೆ ಈ ರಾಶಿಯ ಪಕ್ಕದಲ್ಲೇ ಇರುವ ಇವರ ಸಹೋದರನ ಮೆಕ್ಕೆಜೋಳದ ರಾಶಿಗೆ ಮಾತ್ರ ಯಾವುದೇ ಹಾನಿಯಾಗಿಲ್ಲ.

    ಇವರು ಈ ವರ್ಷ ಉತ್ತಮವಾಗಿ ಸುರಿದ ಮಳೆಯಿಂದಾಗಿ 7 ಟ್ಯಾಕ್ಟರ್ ಲೋಡ್ ನಷ್ಟು ಮೆಕ್ಕೆಜೋಳ ಬೆಳೆದಿದ್ದರು. ಈ ಬಾರಿ ಅದನ್ನು ಮಾರಾಟ ಮಾಡಿ ಸಾಲವನ್ನು ತೀರಿಸಬೇಕು ಎಂದಿದ್ದರು. ಆದರೆ ಇವರ ಮೇಲಿನ ಹಳೇ ವೈಷಮ್ಯದಿಂದಾಗಿ ಯಾರೋ ಕಿಡಿಗೇಡಿಗಳು ಮನೆಯ ಮುಂದೆ ಹಾಕಲಾಗಿದ್ದ ಮೆಕ್ಕೆಜೋಳದ ರಾಶಿಗೆ ಬೆಂಕಿ ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.