Tag: ಮೆಕ್ಕೆಜೋಳ

  • ಬೆಲೆ ಕುಸಿತ ಮೆಕ್ಕೆಜೋಳ ಬೆಳೆ ನಾಶ ಮಾಡಿದ ಅನ್ನದಾತ

    ಬೆಲೆ ಕುಸಿತ ಮೆಕ್ಕೆಜೋಳ ಬೆಳೆ ನಾಶ ಮಾಡಿದ ಅನ್ನದಾತ

    ಹಾವೇರಿ: ಮೆಕ್ಕೆಜೋಳದ ಬೆಲೆ ಕುಸಿತ ಕಂಡಿದ್ದರಿಂದ ತೆನೆಗಳಿರುವ, ಕೊಯ್ಯಲು ಬಂದಿದ್ದ ಮೆಕ್ಕೆಜೋಳದ ಫಸಲನ್ನು ರೈತ ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ.

    ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೊಸಶಿಡೇನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ರೈತ ಮಾದೇವಪ್ಪ ಒಡೇನಪುರ ಅವರು ಒಂದು ಎಕರೆ ಇಪ್ಪತ್ತು ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ನಾಶಪಡಿಸಿದ್ದಾರೆ.

    ಮೆಕ್ಕೆಜೋಳದ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದಿದ್ದರಿಂದ ರೈತ ಈ ರೀತಿ ಮಾಡಿದ್ದಾರೆ. ಒಂದು ಕ್ವಿಂಟಾಲ್ ಮೆಕ್ಕೆಜೋಳದ ಬೆಲೆ ಕೇವಲ ಒಂದು ಸಾವಿರ ರೂಪಾಯಿಗೆ ಕುಸಿದಿದ್ದರಿಂದ ಬೇಸತ್ತು ಬೆಳೆ ನಾಶ ಮಾಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಪ್ರತಿ ಕ್ವಿಂಟಾಲಿಗೆ ಎರಡು ಸಾವಿರ ರೂಪಾಯಿವರೆಗೆ ಮೆಕ್ಕೆಜೋಳ ಮಾರಾಟವಾಗಿತ್ತು. ಇದೀಗ ಬೆಲೆ ಒಂದು ಸಾವಿರ ರೂ.ಗೆ ಕುಸಿದಿದ್ದರಿಂದ ರೈತ ಬೆಳೆ ನಾಶ ಮಾಡಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಮೆಕ್ಕೆಜೋಳಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು- 1.5 ಲಕ್ಷಕ್ಕೂ ಅಧಿಕ ನಷ್ಟ ಅನುಭವಿಸಿದ ರೈತ

    ಮೆಕ್ಕೆಜೋಳಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು- 1.5 ಲಕ್ಷಕ್ಕೂ ಅಧಿಕ ನಷ್ಟ ಅನುಭವಿಸಿದ ರೈತ

    – ರಾಶಿ ಹಾಕಿದ್ದ 150 ಕ್ವಿಂಟಾಲ್ ಬೆಳೆ ಹಾನಿ

    ಶಿವಮೊಗ್ಗ: ಒಂದೆಡೆ ಅತಿವೃಷ್ಠಿ, ಮತ್ತೊಂದೆಡೆ ಅನಾವೃಷ್ಠಿ ಇದರ ನಡುವೆ ಕಷ್ಟಪಟ್ಟು ಸಾಲಸೋಲಾ ಮಾಡಿ ರೈತರೊಬ್ಬರು ಮೆಕ್ಕೆಜೋಳದ ಬೆಳೆ ಬೆಳೆದಿದ್ದರು. ಆದರೆ ಕಿಡಿಗೇಡಿಗಳು ಮೆಕ್ಕೆಜೋಳದ ರಾಶಿಗೆ ಬೆಂಕಿ ಹಾಕಿರುವ ಘಟನೆ ಶಿವಮೊಗ್ಗದ ಮಲವಗೊಪ್ಪದಲ್ಲಿ ನಡೆದಿದೆ.

    ಮಲವಗೊಪ್ಪದ ನಿವಾಸಿ ತಿಮ್ಮನಾಯ್ಕ ಅವರು ತಮ್ಮ ಐದು ಎಕರೆ ಜಮೀನಿನಲ್ಲಿ ಸಾಲಸೋಲಾ ಮಾಡಿ ಕಷ್ಟಪಟ್ಟು ಮೆಕ್ಕೆ ಜೋಳ ಬೆಳೆದಿದ್ದರು. ಮೆಕ್ಕೆಜೋಳಕ್ಕೆ ಮಾರುಕಟ್ಟೆಯಲ್ಲಿ ಕಡಿಮೆ ದರ ಇದ್ದಿದ್ದರಿಂದ ದರ ಏರಿಕೆಯಾದ ಬಳಿಕ ಮಾರಾಟ ಮಾಡಿದರಾಯ್ತು ಅಂದುಕೊಂಡು ತನ್ನ ಜಮೀನಿನಲ್ಲಿಯೇ ಜೋಳದ ರಾಶಿ ಹಾಕಿದ್ದರು. ಆದರೆ ಮಂಗಳವಾರ ತಡ ರಾತ್ರಿ ಯಾರೋ ಕಿಡಿಗೇಡಿಗಳು ಮೆಕ್ಕೆಜೋಳದ ರಾಶಿಗೆ ಬೆಂಕಿ ಹಾಕಿದ್ದಾರೆ.

    150 ಕ್ವಿಂಟಾಲ್‍ಗೂ ಅಧಿಕ ಮೆಕ್ಕೆಜೋಳದ ಬೆಳೆ ಸಂಪೂರ್ಣ ಹಾನಿಯಾಗಿದ್ದು, ಸುಮಾರು ಒಂದೂವರೆ ಲಕ್ಷ ರೂ.ದಷ್ಟು ಹಾನಿ ಸಂಭವಿಸಿದೆ. ಸಾಲ ಮಾಡಿ ಬೆಳೆ ಬೆಳೆದಿದ್ದೆ. ಆದರೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಬೆಳೆ ಹಾನಿಗೆ ಕಾರಣರಾದ ಕಿಡಿಗೇಡಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು. ಜೊತೆಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ನಮ್ಮ ಕುಟುಂಬಕ್ಕೆ ಆತ್ಮಹತ್ಯೆ ಒಂದೇ ದಾರಿ ಎಂದು ರೈತ ತಿಮ್ಮನಾಯ್ಕ ಅವರ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

  • ರೈತರಿಗೆ ಮೇಘರಾಜ್ ಕಂಪನಿ ಮೋಸ- ಪರಿಹಾರ ನೀಡದಿದ್ದರೆ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ

    ರೈತರಿಗೆ ಮೇಘರಾಜ್ ಕಂಪನಿ ಮೋಸ- ಪರಿಹಾರ ನೀಡದಿದ್ದರೆ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ

    ಗದಗ: ಎಲ್ಲಿ ತನಕ ಮೋಸ ಮಾಡೋರು ಇರುತ್ತಾರೋ ಅಲ್ಲಿ ತನಕ ಮೋಸ ಹೋಗೋರು ಇದ್ದೆ ಇರ್ತಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಉತ್ತಮ ಬೆಳೆ ಬರುತ್ತೆ ಎಂದು ರೈತರು ಸಾಲ ಸೋಲ ಮಾಡಿ ಮೆಕ್ಕೆಜೋಳ ಬೆಳೆದರು. ಮೇಘರಾಜ್ ಸೀಡ್ಸ್ ಕಂಪನಿ ಬೆಳೆ ಬೆಳೆಯೋಕೆ ಬೀಜ ನೀಡಿತ್ತು.

    ಈ ಕಂಪನಿ ರೈತರಿಗೆ ಇದು 4 ತಿಂಗಳ ಬೆಳೆ. ಗೊಬ್ಬರ, ಕ್ರಿಮಿನಾಶ ಔಷಧ ಸಿಂಪಡಿಸಿ, ಸರಿಯಾಗಿ ನೀರು ಹರಿಸಿದ್ರೆ ಎಕರೆಗೆ ಸುಮಾರು 25 ರಿಂದ 30 ಕ್ವಿಂಟಲ್ ಇಳುವರಿ ಬರುತ್ತೆ ಎಂದು ಕಥೆ ಹೇಳಿ ಕಳಪೆ ಗುಣಮಟ್ಟದ ಬೀಜ ನೀಡಿ ಟೋಪಿ ಹಾಕಿದೆ. ಈ ಆಸೆಗೆ ಬಿದ್ದ ರೈತರು ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದಾರೆ. ಬೆಳೆ ಏನೋ ಚೆನ್ನಾಗಿ ಬಂತು. ಆದರೆ ತೆನೆ ಬಿಡುತ್ತಿಲ್ಲ. ಬೆಳೆ ಬಾಡುತ್ತಿವೆ. ಹೀಗಾಗಿ ರೈತರು ಇದೀಗ ದಿಕ್ಕು ತೋಚದಂತಾಗಿದ್ದಾರೆ.

    ಮೋಸ ಮಾಡಿದ ಸೀಡ್ಸ್ ಕಂಪನಿ ಏಜೆಂಟರಿಗೆ ರೈತರು ಫೋನ್ ಮಾಡಿ ಏನ್ರಿ ಇದೆಲ್ಲಾ ಅಂತ ಕೇಳಿದ್ರೆ ಕ್ಲೈಮೆಟ್‍ನಿಂದ ಹೀಗೆ ಆಗಿದೆ ಎಂದು ಹಾರಿಕೆಯ ಉತ್ತರ ನೀಡಿದ್ದಾರಂತೆ. ಸಾಲ ಮಾಡಿ ಎಕರೆಗೆ 50 ರಿಂದ 60 ಸಾವಿರ ರೂಪಾಯಿ ಖರ್ಚು ಮಾಡಿದ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಪರಿಹಾರ ನೀಡದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಈಗಾಗಲೇ ಬರದಿಂದ ಅನ್ನದಾತರು ನೊಂದು ಬೆಂದಿದ್ದಾರೆ. ಈಗ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನಾದರೂ ನೊಂದಿರೋ ರೈತಾಪಿ ವರ್ಗಕ್ಕೆ ಸೂಕ್ತ ಪರಿಹಾರ ನೀಡಬೇಕಿದೆ.

  • ಕೋಟಿ ರೂ. ಮೆಕ್ಕೆಜೋಳ ಖರೀದಿಸಿ ರೈತರಿಗೆ ವ್ಯಾಪಾರಿಯಿಂದ ದೋಖಾ

    ಕೋಟಿ ರೂ. ಮೆಕ್ಕೆಜೋಳ ಖರೀದಿಸಿ ರೈತರಿಗೆ ವ್ಯಾಪಾರಿಯಿಂದ ದೋಖಾ

    – ಪೊಲೀಸರ ವಿರುದ್ಧವೇ ಡೆತ್‍ನೋಟ್ ಬರೆದು ಬೆದರಿಕೆ

    ಬಳ್ಳಾರಿ: ರೈತರು ಬರಗಾಲದಲ್ಲಿ ಕಷ್ಟಪಟ್ಟು ಬೆಳದಿದ್ದ ಮೆಕ್ಕೆಜೋಳವನ್ನು ಖರೀದಿ ಮಾಡಿದ್ದ ವ್ಯಾಪಾರಿಯೊಬ್ಬ ಹಣ ನೀಡದೇ ಮೋಸ ಮಾಡಿದ್ದಾನೆ. ರೈತರಿಗೆ ಹಣ ನೀಡಬೇಕೆಂದು ಪೊಲೀಸರು ಹೇಳಿದರೇ ಅವರ ವಿರುದ್ಧವೇ ಡೆತ್‍ನೋಟ್ ಬರೆದು ಬೆದರಿಕೆ ಹಾಕಿದ್ದಾನೆ.

    ಹಿರೇಹೆಗ್ಡಾಳ ಗ್ರಾಮ ಪಂಚಾಯತಿ ಸದಸ್ಯ, ದಲ್ಲಾಳಿ ಚಂದ್ರಪ್ಪ ಎಂಬವನೇ ರೈತರಿಗೆ ಹಣ ನೀಡದೇ ಸತಾಯಿಸುತ್ತಿರುವ ವ್ಯಕ್ತಿ. ಜಿಲ್ಲೆಯ ಕೂಡ್ಲಗಿ ತಾಲೂಕಿನ ಇಚಲ, ಬೊಮ್ಮನಹಳ್ಳಿ ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಿಂದ ನೂರಾರು ರೈತರ ಬಳಿ ಮೆಕ್ಕೆಜೋಳ ಖರೀದಿಸಿ ವ್ಯಾಪಾರಿ ಇದೂವರೆಗೂ ರೈತರಿಗೆ ಹಣ ನೀಡಿಲ್ಲ.

    ಚಂದ್ರಪ್ಪ ಕಲೆ ರೈತರಿಗೆ ಚೆಕ್ ನೀಡಿದ್ದಾನೆ.ಆದರೆ ಚಂದ್ರಪ್ಪ ನೀಡಿರುವ ಎಲ್ಲ ಚೆಕ್‍ಗಳು ಬೌನ್ಸ್ ಆಗಿವೆ. ಹೀಗಾಗಿ ಹಣ ಕೊಡಿಸುವಂತೆ ರೈತರು ಪೊಲೀಸ ಠಾಣೆ ಮೇಟ್ಟಿಲೇರಿದ್ರೆ, ಚಂದ್ರಪ್ಪ ಇದೀಗ ಪೊಲೀಸರನ್ನೆ ಬೆದರಿಸುತ್ತಿದ್ದಾನೆ. ರೈತರ ಹಣ ಕೊಡುವಂತೆ ತಾಕೀತೂ ಮಾಡಿದ ಕೂಡ್ಲಗಿ ಡಿವೈಎಸ್‍ಪಿ ತಮಗೆ ಕಿರುಕುಳ ನೀಡಿದ್ರೂ ಅಂತಾ ಪೊಲೀಸರ ವಿರುದ್ಧವೇ ವ್ಯಾಪಾರಿ ಚಂದ್ರಪ್ಪ ಡೆತ್‍ನೋಟ್ ಬರೆದಿಟ್ಟು ಪೊಲೀಸರನ್ನು ಬೆದರಿಸುತ್ತಿದ್ದಾನೆ.

    ರೈತರಿಂದ ಮೆಕ್ಕಜೋಳ ಖರೀದಿಸಿ ಹಣ ಕೊಡದೆ ಪೊಲೀಸರನ್ನೆ ಬೆದರಿಸುತ್ತಿರುವ ಚಂದ್ರಪ್ಪನಿಂದ ಹಣ ಪಡೆಯೋದೇಗೆ ಅಂತಾ ರೈತರು ಇದೀಗ ಕಂಗಾಲಾಗಿದ್ದಾರೆ. ಇತ್ತ ರೈತರು ನಮಗೆ ಹಣ ಕೊಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ.