Tag: ಮೆಕುನು ಚಂಡಮಾರುತ

  • ಉಡುಪಿ, ಮಂಗ್ಳೂರಲ್ಲಿ ಮತ್ತೆ ಮಳೆ- ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ

    ಉಡುಪಿ, ಮಂಗ್ಳೂರಲ್ಲಿ ಮತ್ತೆ ಮಳೆ- ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ

    ಉಡುಪಿ/ಮಂಗಳೂರು: ಮಂಗಳವಾರ ಭಾರೀ ಅವಾಂತರ ಸೃಷ್ಟಿಸಿದ್ದ ಮಳೆ ಉಡುಪಿ ಹಾಗೂ ದಕ್ಷಿಣ ಕ್ನಡ ಜಿಲ್ಲೆಯಲ್ಲಿ ಇಂದೂ ಕೂಡ ಮುಂದುವರೆದಿದೆ. ಕಳೆದ ರಾತ್ರಿ ಕೊಂಚ ಕಡಿಮೆಯಾಗಿದ್ದ ಮಳೆ ಆರ್ಭಟ ಬೆಳಗ್ಗೆ ಮತ್ತೆ ಶುರುವಾಗಿದೆ.

    ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಕಾರ್ಮೋಡದ ಆವರಿಸಿದೆ. ವಾತಾವರಣ ನೋಡುವಾಗ ದಿನಪೂರ್ತಿ ಮಳೆಯಾಗುವ ಸಾಧ್ಯತೆಯಿದೆ. ಕಾರ್ಕಳ ತಾಲೂಕಿನಲ್ಲಿ ವಿಪರೀತ ಜಡಿಮಳೆಯಾಗುತ್ತಿದ್ದು, ನದಿಗಳಲ್ಲಿ ನೀರು ಹರಿಯುತ್ತಿದೆ. ಮೀನುಗಾರರಿಗೆ ಹಾಗೂ ಸಾರ್ವಜನಿಕರಿಗೆ ಜಿಲ್ಲಾಡಳಿತದಿಂದ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ. ಇದನ್ನೂ ಓದಿ: ನೀರುಪಾಲಾದ ಬಾಲೆ ಶವವಾಗಿ ಪತ್ತೆ – ಮುಗಿಲುಮುಟ್ಟಿದ ಹೆತ್ತವರ ಆಕ್ರಂದನ

    ಮುಂದಿನ ಸೂಚನೆ ನೀಡುವವರೆಗೆ ಕಡಲಿಗೆ ಇಳಿಯಕೂಡದು ಅಂತ ಆದೇಶ ಮಾಡಿದೆ. ಸಾರ್ವಜನಿಕರು ಅಪಾಯವಿರುವಲ್ಲಿ ಜಾಗರೂಕತೆ ವಹಿಸಬೇಕು ಅಂತ ಪ್ರಕಟಣೆ ಹೊರಡಿಸಿದೆ. ಕುಂದಾಪುರ, ಕಾಪು ಬೈಂದೂರಲ್ಲಿ ಭಾರೀ ಮಳೆ ಸುರಿಯುತ್ತಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಉಡುಪಿಯ ಬೈಲಕರೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದಾಗಿ ತೊರೆಗಳು ತುಂಬಿ ಹರಿಯುತ್ತಿವೆ.


    ಮಂಗಳೂರಲ್ಲಿ ಕೂಡ ಮತ್ತೆ ಮಳೆ ಆರಂಭವಾಗಿದ್ದು, ತಗ್ಗು ಪ್ರದೇಶಗಳಿಗೆ ಮತ್ತೆ ನೀರು ನುಗ್ಗುವ ಆತಂಕ ಎದುರಾಗಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹದ ನೀರು ಇನ್ನೂ ಹರಿದು ಹೋಗಿಲ್ಲ. ಹೀಗಾಗಿ ಇದೀಗ ಮತ್ತೆ ಮಳೆ ಸುರಿಯಲಾರಂಭಿಸಿದ್ದು, ನಗರವಾಸಿಗಳು ಆತಂಕಕ್ಕೀಡಾಗಿದ್ದಾರೆ. ಮಳೆ ನಡುವೆಯೇ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸುತ್ತಿದೆ.  ಇದನ್ನೂ ಓದಿ: ಭಾರೀ ಮಳೆಯಿಂದಾಗಿ ರೈಲು ಹಳಿಗಳಲ್ಲಿ ಭೂಕುಸಿತ- ವಿಮಾನ ಹಾರಾಟದಲ್ಲಿ ವ್ಯತ್ಯಯ

    ನಿನ್ನೆಯ ಮಹಾ ಮಳೆಗೆ ಇಬ್ಬರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕುಟುಂಬಗಳಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ತಲಾ 5 ಲಕ್ಷ ಪರಿಹಾರ ನೀಡಲಾಗಿದೆ. ಕೆಪಿಟಿ ಬಳಿಯ ಉದಯನಗರದಲ್ಲಿಧರೆ ಕುಸಿದು ಸಾವನ್ನಪ್ಪಿದ್ದ ಮೋಹಿನಿ (55) ಹಾಗೂ ಮನೆಗೆ ನೀರು ನುಗ್ಗಿ ನೀರಲ್ಲಿ ಮುಳುಗಿ ಸಾವನ್ನಪ್ಪದ್ದ ವೃದ್ಧೆ ಮುಕ್ತಾ ಭಾಯಿ(80) ಇಬ್ಬರಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪರಿಹಾರ ನೀಡಿದ್ದಾರೆ. ಇದನ್ನೂ ಓದಿ: ಕರಾವಳಿ ಮಳೆ – ಅಧಿಕಾರಿಗಳ ಜೊತೆ ಮಾತನಾಡಿದ ಮೋದಿ

  • ಕುಂಭದ್ರೋಣ ಮಳೆಗೆ ಮುಳುಗಿದ ಕಡಲೂರು – ರಸ್ತೆ, ಮನೆಗಳು ಜಲಾವೃತ, ಕಟ್ಟಡ ಕುಸಿತ – ಮಹಾಮಳೆಗೆ 9 ಮಂದಿ ಮರಣ

    ಕುಂಭದ್ರೋಣ ಮಳೆಗೆ ಮುಳುಗಿದ ಕಡಲೂರು – ರಸ್ತೆ, ಮನೆಗಳು ಜಲಾವೃತ, ಕಟ್ಟಡ ಕುಸಿತ – ಮಹಾಮಳೆಗೆ 9 ಮಂದಿ ಮರಣ

    ಬೆಂಗಳೂರು: ಮೆಕುನು ಚಂಡಮಾರುತದಿಂದಾಗಿ ಕಡಲ ಕಿನಾರೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಉಡುಪಿ, ಮಂಗಳೂರು, ಕಾರವಾರ ಸೇರಿದಂತೆ ಕರಾವಳಿ ಭಾಗದ ಜನರು ಮೆಕುನು ಚಂಡಮಾರುತಕ್ಕೆ ನಲುಗಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಒಮಾನ್ ದೇಶಕ್ಕೆ ಅಪ್ಪಳಿಸಿದ್ದ ಮೆಕುನು ಚಂಡಮಾರುತ ಈಗ ಭಾರತೀಯ ಕರಾವಳಿಯತ್ತ ವ್ಯಾಪಿಸಿದ್ದು ಮಂಗಳೂರು ಸೇರಿ ಕರ್ನಾಟಕ ಮತ್ತು ಕೇರಳ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ.

    ಉಡುಪಿ: ಉಡುಪಿಯಲ್ಲಿ ಮಳೆಯ ರೌದ್ರನರ್ತನಕ್ಕೆ ಬಾಲಕಿಯೊಬ್ಬಳು ಕಣ್ಮೆರೆಯಾಗಿದ್ದಾರೆ. 9 ವರ್ಷದ ನಿಧಿ ತನ್ನ ಅಕ್ಕನೊಂದಿಗೆ ಸೈಕಲ್‍ನಲ್ಲಿ ಶಾಲೆಯಿಂದ ಮನೆಗೆ ತೆರಳುವಾಗ ಪಟ್ಲದ ಕಿರು ಸೇತುವೆ ದಾಟುವ ಸಂದರ್ಭದಲ್ಲಿ ಮಕ್ಕಳಿಬ್ಬರು ಕೊಚ್ಚಿ ಹೋಗಿದ್ದಾರೆ. ಘಟನೆ ಕಂಡ ಸ್ಥಳೀಯರು ನಿಧಿ ಅಕ್ಕ ನಿಶಾಳನ್ನು ಕಾಪಾಡಿದ್ದಾರೆ. ಕಣ್ಮರೆಯಾಗಿರುವ ನಿಧಿ ಆಚಾರ್ಯಳಿಗಾಗಿ ಮಳೆಯ ನಡುವೆಯೂ ಅಗ್ನಿ ಶಾಮಕ ಸಿಬ್ಬಂದಿ ಶೋಧಕಾರ್ಯ ಮುಂದುವರಿಸಿದ್ದಾರೆ. ಇನ್ನು ಕಾರ್ಕಳದ ಬೈಲೂರಿನಲ್ಲಿ ಸಿಡಿಲು ಬಡಿದು ಗ್ರಾಮ ಪಂಚಾಯತ್ ಸದಸ್ಯೆ ಶೀಲಾ ನಲ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಸುನೀಲ್ ಕುಮಾರ್ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಕಾರ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಮಂಗಳೂರು: ಆರಂಭಿಕ ಮಹಾಮಳೆ ಮರಣ ಮೃದಂಗ ಬಾರಿಸಿದ್ದು. ಕೆಪಿಟಿ ಬಳಿಯ ಉದಯನಗರದಲ್ಲಿ ಗುಡ್ಡ ಕುಸಿದ ಪರಿಣಾಮ 61 ವರ್ಷದ ಮೋಹಿನಿ ಎಂಬವರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ವಿಳಂಬ ಆಗಿದ್ದರಿಂದಾಗಿ ಮಹಿಳೆ ಮೃತಪಟ್ಟಿದ್ದು ಸಂಜೆ 8 ಗಂಟೆ ಸುಮಾರಿಗೆ ಶವ ಹೊರತೆಗೆಯಲಾಯ್ತು. ಕೊಡಿಯಾಲ್ ಬೈಲಿನಲ್ಲಿಯೂ ತಗ್ಗು ಪ್ರದೇಶ ಜಲಾವೃತಗೊಂಡಿದ್ದು ಅಲ್ಲಿ ಒಬ್ಬಂಟಿ ವಾಸವಿದ್ದ ಮುಕ್ತಾ ಬಾಯಿ ಎಂಬ 80 ವರ್ಷದ ವೃದ್ಧೆ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ. ನೂರಾರು ಮನೆ, ವಾಣಿಜ್ಯ ಸಂಕೀರ್ಣಗಳಿಗೆ ಮಳೆ ನೀರು ನುಗ್ಗಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳೂರಿನ ಅತ್ತಾವರ, ಅಳಕೆ, ಕುದ್ರೋಳಿ, ಕೊಟ್ಟಾರ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಳಕೆ ಪ್ರದೇಶದಲ್ಲಿ ನೀರಿನಿಂದ ಆವೃತಗೊಂಡಿದ್ದ ಗುಜರಾತಿ ಸ್ಕೂಲ್ ಮಕ್ಕಳನ್ನು ಬೋಟ್ ಮೂಲಕ ಸ್ಥಳಾಂತರ ಮಾಡಲಾಯ್ತು.

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಅಲೆಗಳ ಏರಿಳಿತ ತೀವ್ರವಾಗಿದೆ. ಕಾರವಾರದಿಂದ 20 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಿದೆ. ತಮಿಳುನಾಡು ಮೂಲದ 2 ಬೋಟ್‍ಗಳಲ್ಲಿ ಒಂದು ಮುಳುಗಿದ್ದು, ಮುಳುಗುವ ಹಂತದಲ್ಲಿದ್ದ ಮತ್ತೊಂದು ಬೋಟ್ ಮತ್ತು ನಾಲ್ವರು ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಕರಾವಳಿ ರಕ್ಷಣಾ ತಂಡದಿಂದ ಕಾಣೆಯಾದ ಮೀನುಗಾರರಿಗಾಗಿ ಶೋಧ ನಡೆಸಲಾಗ್ತಿದೆ. ಚಿಕ್ಕಮಗಳೂರಿನ ಮಲೆನಾಡಿನ ಭಾಗ ಹಾಗೂ ಶಿವಮೊಗ್ಗದ ಆಯನೂರಿನಲ್ಲೂ ಭಾರೀ ಮಳೆಯಾಗಿದೆ.

    ಹಾವೇರಿ: ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿದ್ದು ಸಿಡಿಲು ಬಡಿದು ಓರ್ವ ಕುರಿಗಾಹಿ ಸಾವನ್ನಪ್ಪಿರುವ ಘಟನೆ ಹಾನಗಲ್ ತಾಲೂಕಿನ ಅಜಗುಂಡಿಕೊಪ್ಪ ಗ್ರಾಮದ ಬಳಿ ನಡೆದಿದೆ. ಚಿಕ್ಕೋಡಿ ನಿವಾಸಿ 22 ವರ್ಷದ ಮಾಳಪ್ಪ ಪೂಜಾರಿ ಮೃತ ದುರ್ದೈವಿ. ಮೃತನ ಕುಟುಂಬಕ್ಕೆ ಜಿಲ್ಲಾಡಳಿತ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದು. ಪ್ರಕೃತಿ ವಿಕೋಪ ಪರಿಹಾರ ನಿಧಿ ಮತ್ತು ಸಿಎಂ ಪರಿಹಾರ ನಿಧಿಯಿಂದ ಹಣ ನೀಡುವುದಾಗಿ ಹಾವೇರಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಹೇಳಿದ್ದಾರೆ.

  • ಕರಾವಳಿ ಮಳೆಗೆ ನೀರಿನಲ್ಲಿ ಕೊಚ್ಚಿ ಹೋದ್ಳು ಬಾಲಕಿ, ಗುಡ್ಡ ಕುಸಿತಕ್ಕೆ ಮಹಿಳೆ ಬಲಿ

    ಕರಾವಳಿ ಮಳೆಗೆ ನೀರಿನಲ್ಲಿ ಕೊಚ್ಚಿ ಹೋದ್ಳು ಬಾಲಕಿ, ಗುಡ್ಡ ಕುಸಿತಕ್ಕೆ ಮಹಿಳೆ ಬಲಿ

    ಉಡುಪಿ/ಮಂಗಳೂರು/ಬೆಂಗಳೂರು: ಗಲ್ಫ್ ರಾಷ್ಟ್ರಗಳನ್ನು ಬೆಚ್ಚಿಬೀಳಿಸಿರುವ ಮೆಕುನು ಚಂಡಮಾರುತ ಕಾರವಳಿಯಲ್ಲೂ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದ್ದು, ಶಾಲೆಯಿಂದ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿ ನೆರೆ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ನಡೆದಿದೆ.

    ಇಲ್ಲಿನ ಪಾದೆಬೆಟ್ಟು ಎಂಬಲ್ಲಿ ನಿಧಿ ಆಚಾರ್ಯ ಎಂಬ 9 ವರ್ಷದ ಬಾಲಕಿ ಕಣ್ಮರೆಯಾಗಿದ್ದಾಳೆ. ನಿಧಿ ಆಚಾರ್ಯ ತನ್ನ ಅಕ್ಕ ನಿಶಾ ಆಚಾರ್ಯ ಜೊತೆ ಸೈಕಲ್ ನಲ್ಲಿ ಮನೆಗೆ ತೆರಳುತ್ತಿದ್ದಳು. ಪಟ್ಲ ಎಂಬಲ್ಲಿ ಕಿರು ಸೇತುವೆ ದಾಟುವಾಗ ಅವಘಡವಾಗಿದೆ. ರಭಸವಾಗಿ ಹರಿಯುತ್ತಿದ್ದ ನೀರು ಸೇತುವೆ ಮೇಲೆ ಬಂದಿತ್ತು. ಆ ರಭಸಕ್ಕೆ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ. ನಿಶಾ ಆಚಾರ್ಯಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಕಣ್ಮರೆಯಾದ ನಿಧಿ ಆಚಾರ್ಯಳಿಗೆ ಶೋಧಕಾರ್ಯ ಮುಂದುವರಿದಿದೆ.

    ಪಡುಬಿದ್ರೆಯ ಗಣಪತಿ ಸ್ಕೂಲ್ ನ ವಿದ್ಯಾರ್ಥಿನಿಯಾಗಿರುವ ನಿಧಿ ಮೂರು ಗಂಟೆಗೆ ಶಾಲೆ ಬಿಟ್ಟಿದ್ದು, ಮಳೆಯಿದ್ದ ಕಾರಣ ಮಕ್ಕಳಿಬ್ಬರು ತಡವಾಗಿ ಶಾಲೆಯಿಂದ ಹೊರಟಿದ್ದಾರೆ. ಕುಟುಂಬಸ್ಥರು, ಸ್ಥಳೀಯರು ಬಾಲಕಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ. ವಿಪರೀತ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.

    ಗುಡ್ಡ ಕುಸಿದು ಮಹಿಳೆ ಸಾವು: ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮಂಗಳೂರಿನ ಕೆಪಿಟಿ ಬಳಿ ಮನೆಗೆ ಗುಡ್ದ ಕುಸಿದ ಪರಿಣಾಮ ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ. ಮೋಹಿನಿ (55) ಮಣ್ಣಿನ ಅಡಿ ಸಿಲುಕಿ ಮೃತಪಟ್ಟಿದ್ದಾರೆ. ಬೆಳಗ್ಗೆ 10 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಸತತ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಹಿಳೆಯ ದೇಹವನ್ನು ಹೊರತೆಗೆಯಲಾಗಿದೆ.

    ಭಾರೀ ಮಳೆ ಸಾಧ್ಯತೆ: ಇನ್ನು ಮೆಕುನು ಚಂಡಮಾರುತ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಮುದ್ರದ ನೀರು ಬಣ್ಣ ಬದಲಾಯಿಸಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಕಡಲ ಅಬ್ಬರ ತೀರದಿಂದ ಅರ್ಧ ಕಿ.ಮೀ ದೂರದಿಂದಲೇ ಮೇಲೇರಿ ಬರುತ್ತಿದೆ. ಕಡಲಿನ ಅಬ್ಬರ ಕಂಡು ಕರಾವಳಿಗರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾಪು, ಮಲ್ಪೆ, ಮರವಂತೆ, ಪಡುಬಿದ್ರೆ ಬೀಚ್ ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಇನ್ನು 24 ಗಂಟೆಗಳ ಕಾಲ ಭಾರೀ ಮಳೆ ಆಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಸಿಎಂ ಸೂಚನೆ: ಉಡುಪಿ, ದಕ್ಷಿಣ ಕನ್ನಡದಲ್ಲಿ ಭೀಕರ ಮಳೆ ಹಿನ್ನಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಪ್ರವಾಹದಿಂದ ಸಾರ್ವಜನಿಕರನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ. ಅಲ್ಲದೇ ರಕ್ಷಣಾ ಕಾರ್ಯಾಚರಣೆಗೆ ಕೋಸ್ಟ್ ಗಾರ್ಡ್ ಪಡೆಯ ನೆರವು ಪಡೆದು ಹೆಚ್ಚಿನ ಅನಾಹುತಗಳಾಗದಂತೆ ಮುನ್ನೆಚ್ಚರಿಕೆ ವಹಿಸಲು ಆದೇಶ ನೀಡಿದ್ದಾರೆ.

    3 ದಿನ ಮುನ್ನವೇ ಮುಂಗಾರು ಆಗಮನ: ದೇಶಕ್ಕೆ ನೈರುತ್ಯ ಮುಂಗಾರು ಮಳೆ 3 ದಿನ ಮುನ್ನವೇ ಕೇರಳದ ಭಾಗಕ್ಕೆ ಆಗಮಿಸಿದ್ದು, ಇನ್ನೂ ಎರಡು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಅಗಮನ ಸಾಧ್ಯತೆ ಇರುವುದಾಗಿ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ವಿಜ್ಞಾನಿ ಗವಾಸ್ಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಕೇರಳ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನಲೆಯಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ಮುಂದಿನ ಎರಡು ದಿನಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಭಾರೀ ಮಳೆಯಾಗುವ ಸಂಭವಿದೆ ಎಂದು ತಿಳಿಸಿದ್ದಾರೆ.

    https://www.youtube.com/watch?v=-TAoAb4cibM