Tag: ಮೂರ್ತಿ

  • ದೇವಸ್ಥಾನಕ್ಕೆ ಕನ್ನ – ಗರ್ಭಗುಡಿಯಲ್ಲಿದ್ದ ದೇವರ ಮೂರ್ತಿಯನ್ನೇ ಕದ್ದರು

    ದೇವಸ್ಥಾನಕ್ಕೆ ಕನ್ನ – ಗರ್ಭಗುಡಿಯಲ್ಲಿದ್ದ ದೇವರ ಮೂರ್ತಿಯನ್ನೇ ಕದ್ದರು

    ಯಾದಗಿರಿ: ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು, ಗರ್ಭಗುಡಿಯಲ್ಲಿದ್ದ ದೇವರ ಬೆಳ್ಳಿಯ ಮೂರ್ತಿಯನ್ನೇ ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಸಂಗಮ ಗ್ರಾಮದ ಸಂಗಮೇಶ್ವರ ದೇವಸ್ಥಾನದಲ್ಲಿ ನಡೆದಿದೆ.

    ಯಾದಗಿರಿ ಜಿಲ್ಲೆಯ ಸಂಗಮ ಗ್ರಾಮದ ಕೃಷ್ಣಾ ಮತ್ತು ಭೀಮಾ ಸಂಗಮ ನದಿ ದಡದಲ್ಲಿರುವ ಸಂಗಮೇಶ್ವರ ದೇವಸ್ಥಾನದ ಮೂರ್ತಿಯನ್ನು ಕಳ್ಳತನ ಮಾಡಲಾಗಿದೆ. ತಡರಾತ್ರಿ ದೇವಸ್ಥಾನದ ಬೀಗ ಮುರಿದು ಗರ್ಭಗುಡಿಗೆ ನುಗ್ಗಿದ ಕಳ್ಳರು, ಎರಡೂವರೆ ಕೆಜಿಯ ಬೆಳ್ಳಿಯ ಮೂರ್ತಿಯನ್ನು ಕದ್ದು ಪರಾರಿ ಆಗಿದ್ದಾರೆ. ಬೆಳಗ್ಗೆ ಅರ್ಚಕರು ಪೂಜೆಗೆಂದು ಬಂದಾಗ ದೇವಸ್ಥಾನದಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಿಎಸ್‍ವೈಗೆ ಆಡಳಿತ ನಡೆಸಲು ಆಗುತ್ತಿಲ್ಲ,ಅವರ ಪುತ್ರ ಆಡಳಿತ ನಡೆಸುತ್ತಿದ್ದಾರೆ: ಶಾಸಕ ಶರಣಬಸಪ್ಪ ದರ್ಶನಾಪುರ

    ಸಂಗಮೇಶ್ವರ ದೇವಸ್ಥಾನ ಕೃಷ್ಣ ಮತ್ತು ಭೀಮಾ ನದಿ ಸಂಗಮ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿತ್ತು. ಇದೀಗ ದೇವಸ್ಥಾನದ ಮೂರ್ತಿಯನ್ನೇ ಕಳ್ಳರು ಕದ್ದೊಯ್ದಿದ್ದಾರೆ. ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೂರ್ತಿ ಕದ್ದ ಕಳ್ಳರಿಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ್ದಾರೆ.

  • ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಜೈನ ಬಸದಿಯ ಅವಶೇಷಗಳು ಪತ್ತೆ

    ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಜೈನ ಬಸದಿಯ ಅವಶೇಷಗಳು ಪತ್ತೆ

    ಮಂಡ್ಯ: ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಜಾಗಿನಕೆರೆ ಗ್ರಾಮದಲ್ಲಿ ಪುರಾತನ ಜೈನ ಬಸದಿಯ ಅವಶೇಷಗಳ ಜೊತೆಗೆ ಐತಿಹಾಸಿಕ ಜಿನ ಬಿಂಬ(ಜೈನರ ಮೂರ್ತಿ) ದೊರೆತಿವೆ.

    ಇವು 7 ತೀಥರ್ಂಕರ ಸುಪಾರ್ಶ್ವನಾಥ ಅಥವಾ 23ನೇ ತೀಥರ್ಂಕರ ಪಾಶ್ರ್ವನಾಥನ ಬಿಂಬ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಈ ಬಿಂಬ ಹಾವಿನ ಹೆಡೆ (ನಾಗಾತಪತ್ರ) ಇರುವುದರಿಂದ ಪಾರ್ಶ್ವನಾಥನ ಎನ್ನಲಾಗತ್ತಿದೆ. ಬಿಂಬದ ಪೀಠ ಮಾಸಿರುವುದರಿಂದ ಅಲ್ಲಿ ಸ್ವಸ್ತಿಕ್ ಚಿಹ್ನೆ ಇದೆಯೋ ಅಥವಾ ಸರ್ಪ ಚಿಹ್ನೆ ಇದೆಯೋ ಎಂಬುದು ಸ್ಪಷ್ಟವಾಗಿ ಕಾಣುತ್ತಿಲ್ಲ. ಸ್ವಸ್ತಿಕ್ ಚಿಹ್ನೆ ಇದ್ದರೆ ಸುಪಾರ್ಶ್ವನಾಥ ಎಂತಲೂ, ಪೀಠದಲ್ಲಿ ಸರ್ಪ ಚಿಹ್ನೆ ಇದ್ದರೆ, ಪಾರ್ಶ್ವನಾಥನ ಬಿಂಬ ಎಂದು ಹೇಳಬಹುದಿತ್ತು. ಇದನ್ನೂ ಓದಿ: ಅಕ್ರಮವಾಗಿ ಮದ್ಯ ಮಾರಾಟ -ದಂಧೆಕೋರ ಅಂದರ್

    ಬಿಂಬ ಖಡ್ಗಾಸನ ಅಥವಾ ಕಾರ್ಯೋಗಾಸದ ಸ್ಥಿತಿಯಲ್ಲಿದೆ. ಬಿಂಬದ ಸ್ಥಿತಿ 12ನೇ ಶತಮಾನದ ಹಿಂದಿನದಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಊರಿನಲ್ಲಿ ಜೈನ ಬಸದಿ ಇಲ್ಲ. ತುಂಬಾ ಹಳೆಯದಾಗಿರುವುದರಿಂದ ನೆಲಸಮವಾಗಿದೆ. ಈ ಬಗ್ಗೆ ಕುರುಹಗಳು ಸಿಗುತ್ತವೆ. ಈ ಸಂಬಂಧ ಗ್ರಾಮಸ್ಥರು ಬಸದಿ ಇದ್ದ ಬಗ್ಗೆ ತಮ್ಮ ಪೂರ್ವಜರು ಹೇಳುತ್ತಿದ್ದರು ಎಂಬ ಮಾತುಗಳಿವೆ. ಬಸದಿಯಲ್ಲಿದ್ದ ಕೆತ್ತನೆಯ ಕಲ್ಲುಗಳು ಗ್ರಾಮದ ಶಿವನ ದೇವಾಲಯದ ಬಳಿ ಪತ್ತೆಯಾಗಿವೆ. ಬಸದಿ ಬಗ್ಗೆ ಸಂಶೋಧನೆ ನಡೆಸಿ, ಉತ್ಖನನ ಮಾಡಿದರೆ ಮತ್ತಷ್ಟು ಮಾಹಿತಿ ಮತ್ತು ಮೂರ್ತಿಗಳು ಸಿಗಬಹುದೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದಕ್ಕೆ ಸರ್ಕಾರ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ:  ಲಾಕ್ ವಿಸ್ತರಣೆಯಾದ ಜಿಲ್ಲೆಗಳಲ್ಲಿ ಕಂಟ್ರೋಲ್‍ಗೆ ಬಾರದ ಪಾಸಿಟಿವಿಟಿ ರೇಟ್

    ಮೂರ್ತಿ ಸುಮಾರು 5.5 ಅಡಿ ಎತ್ತರವಿದ್ದು, ಇದು ತುಂಬಾ ಹಳೆಯದಾಗಿದೆ. ಪೀಠದಲ್ಲಿನ ಚಿಹ್ನೆಗಳು ಮಾಸಿದ್ದು, ಅಸ್ಪಷ್ಟವಾಗಿ ಕಾಣುತ್ತಿವೆ. ಖಡ್ಗಾಸನ ಭಂಗಿಯಲ್ಲಿ ತಪಸ್ಸು ಮಾಡುತ್ತಿದ್ದಾರೆ. ಶಿರದ ಹಿಂಬದಿಯಲ್ಲಿ ಪ್ರಭಾಮಂಡಲ ಮತ್ತು ಮೇಲ್ಭಾಗದಲ್ಲಿ ಎಡೆ ಬಿಚ್ಚಿದ್ದ ಸರ್ಪದ ಚಿತ್ರವಿದೆ. ಇದನ್ನೂ ಓದಿ: ತಮ್ಮ ವಿರುದ್ಧದ ಆರೋಪಕ್ಕೆ ರೇಣುಕಾಚಾರ್ಯ ಸ್ಪಷ್ಟನೆ

    ಪತ್ತೆ ಹೇಗೆ:
    ಹವ್ಯಾಸಿ ಸಂಶೋಧಕ, ಶಿಕ್ಷಕ ರಂಗಸ್ವಾಮಿ, ಸಂತೇಬಾಚಹಳ್ಳಿ ಮಾರ್ಗ ಸಂಚರಿಸುವಾಗ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಕಲ್ಲನ್ನು ವೀಕ್ಷಣೆ ಮಾಡುತ್ತಿದ್ದರು. ಅಲ್ಲಿದ್ದ ಕುರಿಗಾಯಿಯನ್ನು ವಿಚಾರಿಸಿ ಇದು ಶಿಲಾಯುಗದ ಕಲ್ಲು. ಇಲ್ಲಿ ಮತ್ಯಾವಾದರೂ ಮೂರ್ತಿಗಳಿವೆಯಾ ಎಂದು ಪ್ರಶ್ನಿಸಿದಾಗ, ಆತ ಶಿಕ್ಷಕನನ್ನು ಜೈನ್ ಮೂರ್ತಿ ಬಳಿಗೆ ಕರೆದೊಯ್ದಿದ್ದಾನೆ. ಮೂರ್ತಿ ಗ್ರಾಮದ ಬೆಟ್ಟಪ್ಪಗೌಡರ ಜಮೀನಿನ ಬದಿಯಲ್ಲಿತ್ತು. ಅವರ ಜಮೀನಿನ ಉಳುಮೆ ಮಾಡುವಾಗ ಕಂಡ ಕಾರಣ ಅದನ್ನು ಬದಿಗಿರಿಸಿದ್ದಾರೆ. ಈ ಮೂರ್ತಿಯ ಫೋಟೋವನ್ನು ಶಿಕ್ಷಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದರ ಐತಿಹ್ಯವನ್ನು ಅಡಿಬರಹದಲ್ಲಿ ಬರೆದಿದ್ದಾರೆ. ಇದು ವೈರಲ್ ಆದ ಬಳಿಕ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿದೆ. ನಂತರ ಮೂರ್ತಿ ವೀಕ್ಷಣೆಗೆ ಗ್ರಾಮಸ್ಥರು ಮುಂದಾಗಿದ್ದಾರೆ.

  • ಕದ್ರಂಜೆಯಲ್ಲಿ ಗರ್ಭಗುಡಿ ಶೋಧ- ಪ್ರಾಚೀನ ಶಿವಲಿಂಗ ಪತ್ತೆ

    ಕದ್ರಂಜೆಯಲ್ಲಿ ಗರ್ಭಗುಡಿ ಶೋಧ- ಪ್ರಾಚೀನ ಶಿವಲಿಂಗ ಪತ್ತೆ

    ಉಡುಪಿ: ದೇಗುಲ ನವೀಕರಣದ ಸಂದರ್ಭ ಭೂಗರ್ಭದಲ್ಲಿ ಶಿವಲಿಂಗ ಪತ್ತೆ ಆಗಿದೆ. ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಸಂದರ್ಭ ಶಿವಲಿಂಗ ಕಂಡುಬಂದಿರುವುದು ಭಕ್ತ ಸಮೂಹಕ್ಕೆ ಅಚ್ಚರಿ ತಂದಿದೆ.

    ಜಿಲ್ಲೆಯ ಕುಂದಾಪುರ ತಾಲೂಕು ಬಿಲ್ಲಾಡಿಯ ಕದ್ರಂಜೆಯಲ್ಲಿ 50 ವರ್ಷಗಳ ಹಿಂದೆ ಬಿದ್ದು ಹೋಗಿದ್ದ ಪ್ರಾಚೀನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಈಗಾಗಲೇ ಪ್ರಶ್ನಾ ಚಿಂತನೆಗಳು ನಡೆದಿವೆ. ದೇವಸ್ಥಾನದ ನವೀಕರಣಾರ್ಥ ಪ್ರಕ್ರಿಯೆಗಳು ಆರಂಭವಾಗಿರುವ ಹೊತ್ತಲ್ಲೇ ನೆಲಸಮವಾಗಿದ್ದ ಗರ್ಭಗುಡಿಯಲ್ಲಿ ಶೋಧ ನಡೆಸಿದಾಗ ಪ್ರಾಚೀನ ಶಿವಲಿಂಗ ಪತ್ತೆಯಾಗಿದೆ. ಇದರಿಂದ ಮಂದಿರ ಪುನರುತ್ಥಾನಕ್ಕೆ ನವೋತ್ಸಾಹ ಕಳೆಕಟ್ಟಿದೆ.

    ಕಳೆದ ನಾಲ್ಕೂವರೆ ದಶಕಗಳಿಗೆ ಮಿಕ್ಕಿ ಪಾಳು ಬಿದ್ದ ಕದ್ರಂಜೆ ಶ್ರೀಮಹಾಲಿಂಗೇಶ್ವರ ದೇವಾಲಯವನ್ನು ಯುವಕರೆಲ್ಲ ಸೇರಿ ಜೀರ್ಣೋದ್ಧಾರ ಮಾಡಲು ಮುಂದಾಗಿದ್ದಾರೆ. ಈ ದೇವಳದ ಪ್ರಾಂಗಣ ಹಿಂದೊಮ್ಮೆ ಶಾಲೆಯಾಗಿತ್ತು. ನೂರಾರು ವಿದ್ಯಾರ್ಥಿಗಳಿಗೆ ಇಲ್ಲಿ ವಿದ್ಯಾ ದಾನ ಮಾಡಲಾಗಿತ್ತು. ಕ್ರಮೇಣ ಈ ದೇವಸ್ಥಾನದಲ್ಲಿ ಪೂಜೆ, ಧಾರ್ಮಿಕ ಕಾರ್ಯಗಳು ನಿಂತು ದೇಗುಲ ಪಾಳು ಬಿದ್ದಿದೆ. ಯುವಕರು ಒಟ್ಟಾಗಿ ಸಹೃದಯಿಗಳ ಸಹಕಾರದೊಂದಿಗೆ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೇ ವೇಳೆ ಮಣ್ಣಿನ ಅಡಿಯಲ್ಲಿ ಹೂತು ಹೋಗಿದ್ದ ಶಿವಲಿಂಗವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಹೊರಗೆ ತೆಗೆದಿದ್ದು, ಪೂಜೆ ಸಲ್ಲಿಸಿದ್ದಾರೆ.

    ಇನ್ನೂ ಒಂದು ವಾರಗಳ ಕಾಲ ಧಾರ್ಮಿಕ ಕಾರ್ಯಕ್ರಮ ಇದೆ. ಈ ಬೆಳವಣಿಗೆ ನಮ್ಮಲ್ಲಿ ಹೊಸ ಉತ್ಸಾಹವನ್ನು ತಂದಿದೆ. ದಾನಿಗಳ, ಊರ ಭಕ್ತರ ಸಹಕಾರದಿಂದ ದೇಗುಲದ ಜೀರ್ಣೋದ್ಧಾರ ನಡೆಯಲಿದೆ ಎಂದು ಸ್ಥಳೀಯ ಅಜಿತ್ ಮಡಿವಾಳ ಹೇಳಿದ್ದಾರೆ.

  • ತಂದೆ ತಾಯಿಯ ನೆನಪಿಗಾಗಿ ಗುಡಿ ಕಟ್ಟಿ ಮೂರ್ತಿ ಪ್ರತಿಷ್ಠಾಪಿಸಿದ ಮಗ

    ತಂದೆ ತಾಯಿಯ ನೆನಪಿಗಾಗಿ ಗುಡಿ ಕಟ್ಟಿ ಮೂರ್ತಿ ಪ್ರತಿಷ್ಠಾಪಿಸಿದ ಮಗ

    ಕಲಬುರಗಿ: ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳಲಾರದೇ ಅನಾಥಾಶ್ರಮಕ್ಕೆ ಕಲಿಸುವ ಈ ಕಾಲದಲ್ಲಿ ಇಲ್ಲೂಬ್ಬ ಆಧುನಿಕ ದಶರಥ ತಂದೆ ತಾಯಿಯ ಗುಡಿ ಕಟ್ಟಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಿದ್ದಾರೆ.

     

    ಇಂದಿನ ದಿನಗಳಲ್ಲಿ ಕೆಲವರಿಗೆ ವಯಸ್ಸಾದ್ದರೆ ತಂದೆ ತಾಯಿಯನ್ನು ನೋಡಿಕೊಳ್ಳುವುದೆ ಒಂದು ದೊಡ್ಡ ಕಷ್ಟದ ಕೆಲಸ ಅಂತ ಕೆಲ ಮಕ್ಕಳ ಅಂತಾರೆ. ಆಳಂದ ತಾಲೂಕಿನ ನಿರಗೂಡಿ ಗ್ರಾಮದ ದಶರಥ ಪಾತ್ರೆ ತಮ್ಮ ಪೋಷಕರ ನೆನಪಿಗಾಗಿ ಸುಮಾರು 2 ಲಕ್ಷ ರೂ. ಹಣ ಖರ್ಚು ಮಾಡಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.

    ನಿರಗುಡಿ ಗ್ರಾಮದ ದಶರಥ ಪಾತ್ರೆ ಅವರ ತಂದೆ ವಿಶ್ವನಾಥ್ ಹಾಗೂ ತಾಯಿ ಲಕ್ಷ್ಮಿಬಾಯಿ ಇಬ್ಬರೂ ಕೂಡ ನಾಲ್ಕು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಇವರ ಪುಣ್ಯ ಸ್ಮರಣಾರ್ಥವಾಗಿ ಇಂದು ಗ್ರಾಮದಲ್ಲಿ ಗುಡಿ ಕಟ್ಟಿ ಮೂರ್ತಿ ಕೂರಿಸಿದ್ದಾರೆ.

    ತನ್ನ ಪೋಷಕರು ಜೊತೆಗೆ ಇಲ್ಲದೆ ಇದ್ದರು ಕಣ್ಣಿಗೆ ಕಾಣುವ ದೇವರಾಗಿರಬೇಕೆಂಬ ಮಹದಾಸೆಯಿಂದ ಗುಡಿ ಕಟ್ಟಿ ಮೂರ್ತಿ ಪ್ರತಿಷ್ಠಾಪಿಸಿರುವ ದಶರಥ ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಸುಂದರವಾದ ಮೂರ್ತಿ ಕೆತ್ತೆನೆಗಾಗಿ ದಶರಥ ನೆರೆಯ ರಾಜ್ಯ ಮಹಾರಾಷ್ಟ್ರದ ಪಂಡರಾಪೂರದ ಶಿಲ್ಪಿಗಳನ್ನು ಸಂಪರ್ಕಿಸಿ ಮೂರ್ತಿ ಕೆತ್ತನೆ ಮಾಡಿಸಿಕೊಂಡಿದ್ದಾರೆ.

  • ಕುದ್ರೋಳಿಯಲ್ಲಿ ನವರಾತ್ರಿ ಮೂರ್ತಿಗಳಿಗೆ ಜೀವ ತುಂಬೋ ಕಲಾವಿದರು ಯಾರು ಗೊತ್ತಾ?

    ಕುದ್ರೋಳಿಯಲ್ಲಿ ನವರಾತ್ರಿ ಮೂರ್ತಿಗಳಿಗೆ ಜೀವ ತುಂಬೋ ಕಲಾವಿದರು ಯಾರು ಗೊತ್ತಾ?

    ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಸಂಭ್ರಮಕ್ಕೆ ಮೆರುಗು ನೀಡುವ ಗಣಪತಿ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾಮಾತೆಯ ಮಣ್ಣಿನ ಮೂರ್ತಿಗಳಿಗೆ ಜೀವ ತುಂಬುವ ಕಲೆಗಾರರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳನ್ನು ನೋಡಿ ಕಲಾವಿದನ ಕೈಚಳಕಕ್ಕೆ ಎಲ್ಲರೂ ಸೈ ಅನ್ನುತ್ತಾರೆ.

    ಆ ಕಲಾವಿದರು ಕಲೆಯ ಹಿಂದೆ ಇರುತ್ತಾರೆಯೇ ಹೊರತು ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಕುದ್ರೋಳಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಆರಂಭದ ದಿನಗಳಲ್ಲಿ ರಾಜಶೇಖರ್ ಹಾಗೂ ಅವರ ತಂಡದವರು ಮೂರ್ತಿ ರಚನೆ ಮಾಡುತ್ತಿದ್ದರು. ಅದೇ ತಂಡದಲ್ಲಿ ಕಲಾವಿದನಾಗಿ ತನ್ನ 13 ವರ್ಷದ ಪ್ರಾಯದಲ್ಲೇ ಕೆಲಸ ಆರಂಭಿಸಿದ್ದ ಅದ್ಭುತ ಕಲಾವಿದ ಶಿವಮೊಗ್ಗದ ಕುಬೇರ ಹಾಗೂ ಅವರ ಬಳಗ ಕಳೆದ ನಾಲ್ಕು ವರ್ಷದಿಂದ ನವರಾತ್ರಿಯ ಎಲ್ಲಾ 12 ಮೂರ್ತಿಗಳನ್ನು ರಚಿಸುತ್ತಾರೆ.

    ದೇವತಾ ಸ್ವರೂಪವಾದ ಈ ಮೂರ್ತಿಗಳನ್ನು ರಚಿಸುವಾಗ ಈ ಎಲ್ಲಾ ಕಲಾವಿದರು ಶ್ರದ್ಧೆ, ನಿಷ್ಠೆ, ಭಕ್ತಿಯ ಜೊತೆ ವೃತಾಚರಣೆ , ಜಪವನ್ನು ಮಾಡಿ ಮೂರ್ತಿಗಳನ್ನು ರಚಿಸುತ್ತಾರೆ. ಸುಮಾರು 40 ದಿನಗಳ ಕಾಲ ರಾತ್ರಿ-ಹಗಲು ಈ 12 ಮೂರ್ತಿಗಳನ್ನು 15 ಮಂದಿ ಕಲಾವಿದರು ಸೇರಿ ಮೂರ್ತಿಗಳ ರಚನೆ ಮಾಡುತ್ತಾರೆ. ಪ್ರತೀ ವರ್ಷವೂ ವಿಸರ್ಜನೆಗೊಳ್ಳುವ ಈ ಮೂರ್ತಿಗಳು ಮತ್ತೆ ಮುಂದಿನ ವರ್ಷ ಪ್ರತ್ಯಕ್ಷವಾಗಿದೆಯೇ ಅನ್ನುವಷ್ಟರ ಮಟ್ಟಿಗೆ ಅಷ್ಟೇ ಸುಂದರವಾಗಿ ಈ ಕಲಾವಿದರ ತಂಡ ಮೂರ್ತಿಗಳನ್ನು ರಚಿಸುತ್ತಾರೆ. ಇಂತಹ ಅದ್ಭುತ ಕಲಾವಿದರಿಗೊಂದು ಸೆಲ್ಯೂಟ್.

  • ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗಾಗಿ ಗಲಾಟೆ- ಎಸಿ, ಡಿವೈಎಸ್‍ಪಿ ಕಾರು ಜಖಂ

    ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗಾಗಿ ಗಲಾಟೆ- ಎಸಿ, ಡಿವೈಎಸ್‍ಪಿ ಕಾರು ಜಖಂ

    ಗದಗ: ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ ಪ್ರತಿಷ್ಠೆಗಾಗಿ 2 ಸಮುದಾಯದ ನಡುವೆ ಗಲಾಟೆ ನಡೆದಿರುವ ಘಟನೆ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ.

    ಬಳಗಾನೂರ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಜಾಗದಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಅಂತ ಹಾಲುಮತ ಕುರುಬ ಸಮಾಜದವರು. ಅದೇ ಜಾಗದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಅಂತ ಪಂಚಮಸಾಲಿ ಸಮುದಾಯವರ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಎರಡು ಸಮುದಾಯದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದ್ದು, ಈ ಹಿಂದೆ ಹಾಕಿದ್ದ ರಾಣಿ ಚೆನ್ನಮ್ಮ ನಾಮ ಫಲಕವನ್ನು ತೆರವುಗೊಳಿಸಲಾಗಿತ್ತು. ಈಗ ರಾತ್ರೋರಾತ್ರಿ ನಿರ್ಮಾಣವಾಗಿದ್ದ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ತೆರವುಗೊಳಿಸಿದ್ದಾರೆ.

    ಇದರಿಂದ ರಾಯಣ್ಣ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಈ ವೇಳೆ ಪೊಲೀಸರು ಗುಂಪು ಚದುರಿಸಲು ಮುಂದಾದವ ಹಂತದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಗುಂಪು ಚದುರಿಸಲು ಲಘುಲಾಠಿ ಪ್ರಹಾರ ಮಾಡಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳು ಗದಗ ಎಸಿ ರಾಯಪ್ಪ ಹಾಗೂ ಡಿವೈಎಸ್‍ಪಿ ಪ್ರಹ್ಲಾದ್ ಅವರ ಎರಡು ವಾಹನಕ್ಕೆ ಕಲ್ಲು ಹೊಡೆದು ಜಖಂ ಗೊಳಿಸಿದ್ದಾರೆ.

    ಘಟನೆಯಲ್ಲಿ ಸಂಬಂಧ ಎರಡು ಸಮುದಾಯದ ಹತ್ತಾರು ಜನರ ಬಂಧನ ಮಾಡಲಾಗಿದೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಬೀಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಘಟನೆಗೆ ಕಾರಣ ಸಚಿವ ಸಿ.ಸಿ ಪಾಟೀಲ್ ಎಂಬುದು ರಾಯಣ್ಣ ಬ್ರಿಗೇಡ್ ಸಂಘಟಿಕರ ಆರೋಪವಾಗಿದೆ. ಸಚಿವ ಸಿ.ಸಿ ಪಾಟೀಲ್ ಒಂದು ಸಮುದಾಯಕ್ಕೆ ಮಾತ್ರ ಪ್ರೋತ್ಸಾಹಿಸಿ ಅಧಿಕಾರಿಗಳನ್ನು ಬಳಸಿಕೊಂಡು ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸಿದ್ದಾರೆ ಎಂಬ ಆರೋಪಿಸಲಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿ ಪರಸ್ಥಿತಿ ತಿಳಿಗೊಳಿಸಲು ಮುಂದಾಗಿದ್ದಾರೆ. ಬಳಗಾನೂರ ಗ್ರಾಮದಲ್ಲಿ ಸದ್ಯಕ್ಕೆ ಬೂದಿಮುಚ್ಚಿದ ಕೆಂಡದಂತಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಪೀರಣವಾಡಿ ಗ್ರಾಮದಲ್ಲಿನ ಸಂಗೋಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಂಗೋಳಿ ರಾಯಣ್ಣ ವೃತ್ತದಲ್ಲಿ ಕನ್ನಡಪರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಮರು ಸ್ಥಾಪನೆಗೆ ಆಗ್ರಹಿಸಲಾಯಿತು.

    ಸಂಕೇಶ್ವರ ಪಟ್ಟಣದ ಬೀರದೇವರ ದೇವಸ್ಥಾನದಿಂದ ಸಂಗೋಳಿ ರಾಯಣ್ಣ ವೃತ್ತದವರೆಗೆ ರಾಯಣ್ಣ ಅಭಿಮಾನಿಗಳು ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು. ಸ್ವಾತಂತ್ರ್ಯ ದಿನಾಚರಣೆ ದಿನದಂದು ಪೀರಣವಾಡಿಯಲ್ಲಿ ರಾಯಣ್ಣ ಪ್ರತಿಮೆಯನ್ನು ಜಿಲ್ಲಾಡಳಿತ ತೆರವುಗೊಳಿಸಿರುವುದು ಕನ್ನಡಿಗರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರನಿಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅಪಮಾನ ಮಾಡಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತಕೊಂಡು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮರು ಸ್ಥಾಪನೆ ಮಾಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

    ಉಪ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳು, ವಾಲ್ಮೀಕಿ ಸಂಘ, ಹಾಲುಮತ ಸಮಾಜ ಸೇರಿದಂತೆ ರಾಯಣ್ಣ ಅಭಿಮಾನಿಗಳು ಪಾಲ್ಗೊಂಡಿದ್ದರು.

  • ಕಾಫಿನಾಡಿನಲ್ಲಿ ಚರ್ಚೆಗೆ ಗ್ರಾಸವಾಗಿದ್ದ ವಿವೇಕಾನಂದ ಮೂರ್ತಿಗೆ ಮುಕ್ತಿ

    ಕಾಫಿನಾಡಿನಲ್ಲಿ ಚರ್ಚೆಗೆ ಗ್ರಾಸವಾಗಿದ್ದ ವಿವೇಕಾನಂದ ಮೂರ್ತಿಗೆ ಮುಕ್ತಿ

    ಚಿಕ್ಕಮಗಳೂರು: ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನಗರದ ದಂಟರಮಕ್ಕಿ ಕೆರೆ ಮಧ್ಯೆಯಲ್ಲಿದ್ದ ಸ್ವಾಮಿ ವಿವೇಕಾನಂದರ ಮೂರ್ತಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.

    ಸ್ವಾಮಿ ವಿವೇಕಾನಂದ ಮೂರ್ತಿ ನಿರ್ಮಾಣಗೊಂಡು ವರ್ಷಗಳೇ ಕಳೆದಿದ್ದರೂ ವಿರೂಪಗೊಂಡಿದ್ದ ಮೂರ್ತಿಯನ್ನು ಬದಲಿಸಲು ಯಾರೂ ಮುಂದಾಗಿರಲಿಲ್ಲ. ಅಲ್ಲಲ್ಲೇ ಪ್ಯಾಚ್ ವರ್ಕ್ ಮೂಲಕ ಅದೇ ಮೂರ್ತಿಯನ್ನು ಪುನಃ ಸರಿ ಮಾಡಿದ್ದರು. ಆದರೆ ಆ ಮೂರ್ತಿಯ ಬಣ್ಣ, ನಿಂತ ಭಂಗಿ ನೋಡಿ ವಿವೇಕಾನಂದರದ್ದು ಎಂದಷ್ಟೇ ಹೇಳಬಹುದಿತ್ತೋ ವಿನಃ. ಅದನ್ನು ಯಾರೂ ಕೂಡ ವಿವೇಕಾನಂದರು ಎಂದು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.

    ಈ ಮೂರ್ತಿಯನ್ನು ಕಂಡ ಸ್ಥಳೀಯರು ಹಾಗೂ ಪ್ರವಾಸಿಗರು ವಿವೇಕಾನಂದರ ಮೂರ್ತಿಗೆ ಮನಬಂದತೆ ವಿಶ್ಲೇಷಿಸಿದ್ದರು. ಕಳೆದೊಂದು ವಾರದಿಂದಂತೂ ಸಾಮಾಜಿಕ ಜಾಲತಾಣದಲ್ಲಿ ಯುವಸಮೂಹ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಹಾಗಾಗಿ ಇಂದು ಆ ಮೂರ್ತಿಯನ್ನು ನೆಲಸಮಗೊಳಿಸಿದ್ದು ಫೈಬರ್ ನಿಂದ ಸಿದ್ಧಗೊಂಡಿರೋ ಹೊಸ ಮೂರ್ತಿಯನ್ನು ಅದೇ ಜಾಗದಲ್ಲಿ ಪ್ರತಿಷ್ಠಾಪಿಸುವುದಾಗಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ವಿವೇಕಾನಂದರ ಮೂರ್ತಿ ನಿರ್ಮಾಣದಲ್ಲಿ ಮುಂದಾಳತ್ವ ವಹಿಸಿದ್ದ ಮುತ್ತಯ್ಯ ಸ್ಪಷ್ಟಪಡಿಸಿದ್ದಾರೆ.

    ಸರ್ಕಾರದ ಹಣ ಬಳಸಿಲ್ಲ ಸಿ.ಟಿ.ರವಿ: ಯಾವಾಗ ಸಾಮಾಜಿಕ ಜಾಲತಾಣದಲ್ಲಿ ವಿವೇಕಾನಂದರ ಮೂರ್ತಿ ಬಗ್ಗೆ ಯುವಸಮೂಹ ತೀವ್ರ ಆಕ್ರೋಶ ವ್ಯಕ್ತಪಡಿಸಲು ಮುಂದಾದರೋ ಸಚಿವ ಸಿ.ಟಿ.ರವಿ ಕೂಡ ಫೇಸ್‍ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದರು. ಈ ಪ್ರತಿಮೆ ಖಾಸಗಿ ಸಹಭಾಗಿತ್ವ ಹಾಗೂ ಸ್ಥಳೀಯ ದಾನಿಗಳಿಂದ ನಿರ್ಮಾಣಗೊಂಡಿದ್ದು. ಇದಕ್ಕೆ ಸರ್ಕಾರದ ಒಂದೇ ಒಂದು ರೂಪಾಯಿ ಕೂಡ ಬಳಸಿಲ್ಲ. ಕಳಪೆ ಕಾಮಗಾರಿ ಹಾಗೂ ಮೂರ್ತಿಯ ರೂಪದ ಬಗ್ಗೆ ಎಲ್ಲರಲ್ಲೂ ಅಸಮಾಧಾನವಿದೆ. ಆದರೆ ಕೆಲಸ ಮಾಡಲು ಬಂದ ಗುತ್ತಿಗೆದಾರ ಹಣ ಪಡೆದು ಪರಾರಿಯಾಗಿದ್ದಾನೆ. ಕಂಟ್ರಾಕ್ಟರ್, ಸಬ್ ಕಂಟ್ರಾಕ್ಟರ್ ಗಳು ಕೆಲಸ ಮಾಡಿಲ್ಲ. ಹಾಗಾಗಿ ಇಂದು ಮೂರ್ತಿ ಈ ಹಂತ ತಲುಪಿದೆ. ಇದರಲ್ಲಿ ಸರ್ಕಾರದ ಹಣ ನಯಾ ಪೈಸೆಯೂ ಖರ್ಚಾಗಿಲ್ಲ. ಅಷ್ಟೆ ಅಲ್ಲದೆ ಮೂರ್ತಿಯ ಬಗೆಗಿನಿ ನಿಮ್ಮ ಮನದಾಳದ ಸೂಕ್ಷ್ಮತೆ ನನಗೂ ಗೊತ್ತು ಎಂದಿದ್ದರು.

    ಮೂರ್ತಿ ನಿರ್ಮಾಣದಲ್ಲಿ ಸಿ.ಟಿ.ರವಿ ಪಾತ್ರವಿಲ್ಲ: ಪ್ರವಾಸೋದ್ಯಮ ಸಚಿವರ ತವರಲ್ಲಿ ಊರ ಮಧ್ಯೆ ಇರೋ ಕೆರೆಯಲ್ಲಿನ ಮೂರ್ತಿಗೆ ಬಗ್ಗೆ ಸ್ಥಳಿಯರು ಹಾಗೂ ಪ್ರವಾಸಿಗರು ಸರ್ಕಾರ ಹಾಗೂ ಸಚಿವ ಸಿ.ಟಿ.ರವಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯೂಥ್ ಐಕಾನ್ ವಿವೇಕಾನಂದರ ವಿರೂಪ ನಿರ್ಮಾಣದ ವಿರುದ್ಧ ಸಚಿವರ ವಿರುದ್ಧವೂ ಜನ ಆಕ್ರೋಶ ಹೊರಹಾಕಿದ್ದರು. ಆದರೆ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ಈ ಮೂರ್ತಿ ನಿರ್ಮಾಣದಲ್ಲಿ ಸಚಿವರ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಊರಿಗೆ ಒಳ್ಳೆಯದಾಗಿ ಎಂದು ನಾನೇ ಈ ಮೂರ್ತಿ ನಿರ್ಮಾಣಕ್ಕೆ ಮುಂದಾಗಿದ್ದು. ಮೂರ್ತಿಯ ಸ್ಥಿತಿ ಕಂಡು ನನಗೂ ನೋವಾಗಿದೆ. ಇದರಿಂದ ನಾನು ವೈಯಕ್ತಿಕವಾಗಿಯೂ ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ಶೀಘ್ರದಲ್ಲೇ ಆ ಜಾಗದಲ್ಲಿ ಹೊಸ ಮೂರ್ತಿ ಪ್ರತಿಷ್ಠಾಪಿಸುದುವುದಾಗಿ ಸ್ಪಷ್ಟನೆ ನೀಡಿದ್ದಾರೆ.

  • ವಿಶ್ವದ ಅತೀ ಎತ್ತರದ ಸ್ವಾಮಿ ವಿವೇಕಾನಂದ ಮೂರ್ತಿ ಲೋಕಾರ್ಪಣೆ – ಧ್ಯಾನದ ಜೊತೆ ಚಿಕಿತ್ಸೆಯೂ ಲಭ್ಯ

    ವಿಶ್ವದ ಅತೀ ಎತ್ತರದ ಸ್ವಾಮಿ ವಿವೇಕಾನಂದ ಮೂರ್ತಿ ಲೋಕಾರ್ಪಣೆ – ಧ್ಯಾನದ ಜೊತೆ ಚಿಕಿತ್ಸೆಯೂ ಲಭ್ಯ

    ಉಡುಪಿ: ವಿಶ್ವದ ಅತೀ ಎತ್ತರದ ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಉಡುಪಿ ಜಿಲ್ಲೆ ಕೋಟದ ಮೂಡುಗಿಳಿಯಾರಿನಲ್ಲಿ ಸ್ಥಾಪಿಸಲಾಗಿದೆ. ಪ್ರತಿಮೆ 35 ಅಡಿ ಎತ್ತರವಿದ್ದು ಕನ್ಯಾಕುಮಾರಿಯಲ್ಲಿ ಇರುವ ವಿವೇಕಾನಂದ ಮೂರ್ತಿಯ ಎತ್ತರದ ದಾಖಲೆಯನ್ನು ಮೀರಿದೆ.

    ಉಡುಪಿಯ ಕೋಟದಲ್ಲಿರುವ ಡಿವೈನ್ ಪಾರ್ಕ್ ಟ್ರಸ್ಟ್ ಸರ್ವ ಕ್ಷೇಮ ಆಸ್ಪತ್ರೆ ನಿರ್ಮಿಸಿದೆ. ಚಿಕಿತ್ಸಾಕೇಂದ್ರ- ಧ್ಯಾನಕೇಂದ್ರದ ಆವರಣದಲ್ಲಿ ಅತೀ ಎತ್ತರದ ವಿವೇಕಾನಂದ ಮೂರ್ತಿ ನಿರ್ಮಾಣ ಮಾಡಲಾಗಿದೆ. ಆಸ್ಪತ್ರೆ ಪ್ರಾಚೀನ ದೇಗುಲದ ವಾಸ್ತು ವಿನ್ಯಾಸವನ್ನು ಹೊಂದಿದ್ದು, ಆಯುಷ್ ವಿಭಾಗ ಕೂಡ ಬಹಳ ವಿಶಿಷ್ಟವಾಗಿದೆ.

    ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು ಕರಾವಳಿಯ ಪ್ರಾಚೀನ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಪ್ರಕೃತಿ, ಯೋಗ, ಆಹಾರ, ಆಧ್ಯಾತ್ಮಿಕ, ಸಂಗೀತ, ಹಸಿರು, ಹಾಸ್ಯ, ಮೌನ ಚಿಕಿತ್ಸೆ ಹೀಗೆ ಬೇರೆ ಬೇರೆ ವಿಭಾಗಗಳನ್ನು ಮಾಡಿ ಎಲ್ಲಾ ಚಿಕಿತ್ಸೆಯನ್ನು ಒದಗಿಸುವ ಉದ್ದೇಶವನ್ನು ಆಸ್ಪತ್ರೆ ಇಟ್ಟುಕೊಂಡಿದೆ. ಪರಿಸರ ಸ್ನೇಹಿ ಆಸ್ಪತ್ರೆ ಇದಾಗಿದ್ದು, ಸೋಲಾರ್ ವ್ಯವಸ್ಥೆ ಇದೆ. ಸೈಕಲ್ ಟ್ರ್ಯಾಕ್ ಕೂಡ ನಿರ್ಮಾಣಗೊಂಡಿದೆ.

    ವ್ಯಕ್ತಿತ್ವ ನಿರ್ಮಾಣ ಹಾಗೂ ರಾಷ್ಟ್ರೋತ್ಥಾನದ ಬೇರೆ ಬೇರೆ ಯೋಜನೆಗಳಲ್ಲಿ ಆಧ್ಯಾತ್ಮ, ಆರೋಗ್ಯ, ಯೋಗದ ಮಹಿಮೆಯನ್ನು ತಿಳಿಸಿಕೊಡುವ ಕಾರ್ಯಕ್ರಮಗಳನ್ನು ಇವರೆಗೆ ಡಿವೈನ್ ಪಾರ್ಕ್ ಹಮ್ಮಿಕೊಳ್ಳಲಾಗುತ್ತಿತ್ತು. ಇದೀಗ ಈ ವಿಭಾಗ ಸೇರಿಕೊಂಡಿದೆ.

    ಜಗತ್ತಿನಲ್ಲೇ ಅತಿ ಎತ್ತರದ ಸ್ವಾಮಿ ವಿವೇಕಾನಂದ ಪ್ರತಿಮೆಯಾಗಿದ್ದು, 35 ಅಡಿ ಎತ್ತರ ಇದೆ. ಪ್ರತಿಮೆಗೆ ವಿಶೇಷವಾದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಹಸಿರು ಹುಲ್ಲು ಹಾಸಿನ ನಡುವೆ ಹೂವಿನ ದಳವಿರುವ ಡಿಸೈನ್ ಕೊಳದ ನಡುವೆ ಮೂರ್ತಿ ಇರಿಸಲಾಗಿದೆ. ವಿವೇಕಾನಂದರ ಮೂರ್ತಿ ಸುತ್ತ ವಿಶಾಲವಾದ ಜಾಗವಿದ್ದು, ಅಲ್ಲಿ ಸಂಗೀತ, ಧ್ಯಾನ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ಸಂಸ್ಥೆಯ ಮುಖ್ಯಸ್ಥ ವಿವೇಕ್ ಉಡುಪ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

  • ಮದುವೆ ಮಾಡಿಸಿಲ್ಲ ಎಂದು ಹನುಮನ ಮೂರ್ತಿಯನ್ನು ಧ್ವಂಸಗೊಳಿಸಿದ ಯುವಕ

    ಮದುವೆ ಮಾಡಿಸಿಲ್ಲ ಎಂದು ಹನುಮನ ಮೂರ್ತಿಯನ್ನು ಧ್ವಂಸಗೊಳಿಸಿದ ಯುವಕ

    ಜೈಪುರ: ತನಗೆ ಮದುವೆ ಮಾಡಿಸಿಲ್ಲ ಎಂದು ಯುವಕನೋರ್ವ ಗುಡಿಯಲ್ಲಿದ್ದ ಹನುಮನ ಮೂರ್ತಿಯನ್ನು ಧ್ವಂಸಗೊಳಿಸಿರುವ ಘಟನೆ ರಾಜಸ್ಥಾನ ಜೈಪುರ ಜಿಲ್ಲೆಯ ಛೊಮು ಪಟ್ಟಣದಲ್ಲಿ ನಡೆದಿದೆ.

    ಭೂಷಣ್ ಹನುಮನ ಮೂರ್ತಿ ಧ್ವಂಸಗೊಳಿಸಿದ ಯುವಕ. ಮದುವೆ ಮಾಡಿಸು ಎಂದು ಹನುಮಂತನನ್ನು ಭೂಷಣ್ ಪ್ರತಿದಿನ ಪೂಜಿಸುತ್ತಿದ್ದನು. ತನ್ನ ಪಾರ್ಥನೆಗೆ ದೇವರು ಸ್ಪಂದಿಸಲಿಲ್ಲವೆಂಬ ಹತಾಶೆಯಿಂದ ಮೂರ್ತಿಯನ್ನು ಧ್ವಂಸ ಮಾಡಿದ್ದಾನೆ. ಮಾನಸಿಕ ಅಸ್ವಸ್ಥನಾಗಿರುವ ಭೂಷಣ್ ನನಗೆ ಮದುವೆಯಾಗಿಲ್ಲ ಎಂದು ಈ ರೀತಿ ಮಾಡಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ಹೇಳಿದ್ದಾನೆ.

    ರಾತ್ರೋರಾತ್ರಿ ಯಾರೋ ಕಿಡಿಗೇಡಿಗಳು ಹನುಮನ ಮೂರ್ತಿಯನ್ನು ಧ್ವಂಸ ಮಾಡಿದ್ದಾರೆ ಎಂದು ಊರಿನ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಶ್ವಾನದಳದ ಸಹಾಯದಿಂದ ಈ ಕೆಲಸವನ್ನು ಮಾಡಿರುವುದು ದೇವಸ್ಥಾನ ಮಾಲೀಕನ ಮೊಮ್ಮಗ ಭೂಷಣ್ ಎಂದು ಎರಡು ಗಂಟೆಯೊಳಗೆ ಕಂಡುಹಿಡಿದಿದ್ದಾರೆ.

    ಪೊಲೀಸರು ಭೂಷಣ್ ವಿಚಾರಣೆ ನಡೆಸಿದಾಗ ಕಳೆದ ಮೂರು ತಿಂಗಳಿನಿಂದ ತನ್ನ ಮದುವೆಗಾಗಿ ಹನುಮನಲ್ಲಿ ಪಾರ್ಥಿಸುತ್ತಿದೆ ಎಂದು ಹೇಳಿದ್ದಾನೆ. ಅದರೂ ನನಗೆ ಮದುವೆಯಾಗಿಲ್ಲ. ಆದ್ದರಿಂದ ತನ್ನ ಪಾರ್ಥನೆಗೆ ಸ್ಪಂದಿಸದೇ ಇದ್ದ ಹನುಮನನ್ನು ಶನಿವಾರ ಕಬ್ಬಿಣದ ರಾಡ್ ಅನ್ನು ತೆಗೆದುಕೊಂಡು ಒಡೆದು ಹಾಕಿದೆ. ನಂತರ ನಾನು ಮನಗೆ ಹೋಗಿ ಮಲಗಿಕೊಂಡೆ ಎಂದು ಹೇಳಿದ್ದಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಬೆಗಾರಾಮ್, ಈ ಘಟನೆಯಲ್ಲಿ ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದಾನೆ. ಅಲ್ಲದೇ ಈ ದೇವಸ್ಥಾನ ಆತನ ಮನೆಯವರದೇ ಆದ ಕಾರಣ ಅವರು ದೂರನ್ನು ವಾಪಸ್ ಪಡೆದಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಯಾವುದೇ ರೀತಿಯ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ.