Tag: ಮೂರು ಸಾವಿರ ಮಠ

  • ಮೂಜಗಂ-ದಿಂಗಾಲೇಶ್ವರ ಶ್ರೀಗಳು ಪರಸ್ಪರ ಭೇಟಿ- ಕುತೂಹಲ ಮೂಡಿಸಿದ ಸ್ವಾಮೀಜಿಗಳ ಮಾತುಕತೆ

    ಮೂಜಗಂ-ದಿಂಗಾಲೇಶ್ವರ ಶ್ರೀಗಳು ಪರಸ್ಪರ ಭೇಟಿ- ಕುತೂಹಲ ಮೂಡಿಸಿದ ಸ್ವಾಮೀಜಿಗಳ ಮಾತುಕತೆ

    ಹುಬ್ಬಳ್ಳಿ: ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಹಾಗೂ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹಲವು ವರ್ಷದ ನಂತರ ಭಕ್ತರೊಬ್ಬರ ಮನೆಯಲ್ಲಿ ಮುಖಾಮುಖಿಯಾಗಿ ಚರ್ಚಿಸಿರುವುದು ವಿಶೇಷವಾಗಿದೆ. ಇಬ್ಬರು ಶ್ರೀಗಳು ಸುಮಾರು ಹೊತ್ತು ಚರ್ಚೆ ಕೂಡ ನಡೆಸಿದ ಪರಿಣಾಮ ಮತ್ತೆ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದ ಮುನ್ನೆಲೆಗೆ ಬಂದಿದೆಯಾ ಎಂಬ ಪ್ರಶ್ನೆ ಮೂಡಿದೆ.

    ಶ್ರೀಮಠದ ಉತ್ತರಾಧಿಕಾರಿ ವಿವಾದ ಹಾಗೂ ಶ್ರೀಮಠದ ಜಮೀನು ಪರಭಾರೆ ವಿರುದ್ಧದ ಹೋರಾಟ ಶುರುವಾದಾಗಿನಿಂದ ಈವರೆಗೆ ಉಭಯ ಶ್ರೀಗಳು ಮುಖಾಮುಖಿ ಆಗಿರಲಿಲ್ಲ. ಒಬ್ಬರಿಗೊಬ್ಬರು ಮಾತನಾಡಿರಲಿಲ್ಲ, ದಿಂಗಾಲೇಶ್ವರ ಶ್ರೀಗಳು ಮಠಕ್ಕೆ ಹೋದರೂ ಗುರುಸಿದ್ಧ ರಾಜಯೋಗಿಂದ್ರರು ಹೊರಬಂದಿರಲಿಲ್ಲ. ಭೇಟಿ ಕೂಡ ಆಗಿರಲಿಲ್ಲ. ಉಭಯ ಶ್ರೀಗಳು ಬಹಿರಂಗವಾಗಿ ಆರೋಪ ಪ್ರತ್ಯಾರೋಪ ಮಾಡಿದ್ದ ಪ್ರಸಂಗಗಳು ನಡೆದಿದ್ದುಂಟು. ಇದೀಗ ಏಕಾಏಕಿ ಇಬ್ಬರು ಶ್ರೀಗಳು ಒಂದೆಡೆ ಕುಳಿತು ಮಾತುಕತೆ ನಡೆಸುವ ಮೂಲಕ ಅಲ್ಲಿ ಸೇರಿದ್ದ ಭಕ್ತ ಸಮೂಹದಲ್ಲಿ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್‌ ಸದಸ್ಯನಾಗಿದ್ದ ಡಿಕೆಶಿಯವರೇ ಸಿದ್ದರಾಮಯ್ಯನವರ ಮಾತನ್ನು ಒಪ್ಪುತ್ತೀರಾ – ಬಿಜೆಪಿ ಪ್ರಶ್ನೆ

    ಬಿಡ್ನಾಳದ ದಿ.ವೀರಭದ್ರಪ್ಪ ಅಸುಂಡಿ ಅವರ ಪುಣ್ಯಸ್ತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಉಭಯ ಶ್ರೀಗಳು, ಮುಖಾಮುಖಿ ಭೇಟಿಯಾಗಿ ಅಸುಂಡಿ ಅವರ ಮನೆಯಲ್ಲೇ ಒಂದಡೆ ಅಕ್ಕಪಕ್ಕ ಕುಳಿತು ಕೆಲ ಕಾಲ ಮಾತುಕತೆ ನಡೆಸಿದರು. ಅದೇ ಸಮಯಕ್ಕೆ ಶ್ರೀಮಠದ ಉನ್ನತ ಸಮಿತಿ ಸದಸ್ಯ ಸಭಾಪತಿ ಬಸವರಾಜ ಹೊರಟ್ಟಿಯವರು ಆಗಮಿಸಿದರು. ಶ್ರೀಗಳ ನಡುವಿನ ಮಾತುಕತೆಗೆ ಅಡ್ಡಿ ಮಾಡದೇ ಅವರು ಹೊರನಡೆದರು. ಆದರೆ ಶ್ರೀಗಳ ಮಾತುಕತೆ ಸಾಕಷ್ಟು ಕುತೂಹಲ ಮೂಡಿಸಿದೆ.

  • ಮೂರುಸಾವಿರ ಮಠದ ಆಸ್ತಿ ಕೆಎಲ್ಇಗೆ ದಾನ – ಲಿಂಗಾಯತ ಮುಖಂಡರ ವಿಶೇಷ ಸಭೆ

    ಮೂರುಸಾವಿರ ಮಠದ ಆಸ್ತಿ ಕೆಎಲ್ಇಗೆ ದಾನ – ಲಿಂಗಾಯತ ಮುಖಂಡರ ವಿಶೇಷ ಸಭೆ

    ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಗೆ ಮೂರು ಸಾವಿರ ಮಠದ ಆಸ್ತಿ ಪರಭಾರೆ ಮಾಡಿರುವುದಕ್ಕೆ ಲಿಂಗಾಯತ ಸಮುದಾಯದ ನಾಯಕರು ಈಗ ಜಾಗೃತರಾಗುತ್ತಿದ್ದಾರೆ. ನೂರಾರು ಕೋಟಿ‌ ರೂಪಾಯಿ ಬೆಲೆಬಾಳುವ ಮೂರುಸಾವಿರ ಮಠದ ಆಸ್ತಿಯನ್ನು ಮರಳಿ ಶ್ರೀ ಮಠಕ್ಕೆ ಪಡೆಯಬೇಕೆಂಬ ಉದ್ದೇಶದಿಂದ ಲಿಂಗಾಯತ ಮುಖಂಡರು ಗೋಕುಲ ರಸ್ತೆಯಲ್ಲಿರುವ ಮಾಜಿ‌‌ ಎಂಎಲ್‌ಸಿ ನಾಗರಾಜ ಛಬ್ಬಿ ಅವರ ಕಾರ್ಯಾಲಯದಲ್ಲಿ ವಿಶೇಷ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

    ಮೂರುಸಾವಿರ ಮಠದ ಆಸ್ತಿ ಕೆಎಲ್‌ಇ ಸಂಸ್ಥೆಗೆ ಪರಭಾರೆ ಮಾಡುವುದರಿಂದ ಶ್ರೀಮಠಕ್ಕೆ ಆಗುವ ಒಳಿತಾದರೂ ಏನು ಎಂಬುದರ ಬಗ್ಗೆ ಮುಖಂಡರು ವಿಸ್ತೃತವಾಗಿ ಚರ್ಚಿಸಿದರು. ಶ್ರೀಮಠದ ಆಸ್ತಿ ಉಳಿಸಿಕೊಂಡು ಹೋಗುವುದು ಕೇವಲ ಮಠಾಧಿಪತಿಗಳಿಗೆ ಸೇರಿದ ವಿಷಯ ಮಾತ್ರವಲ್ಲ. ಇದಕ್ಕೆ ಎಲ್ಲ ಭಕ್ತರೂ ಸಹಕಾರ ಅತ್ಯವಶ್ಯ. ಶ್ರೀಮಠದ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕೈಂಕರ್ಯಗಳು ದೊಡ್ಡ ಪ್ರಮಾಣದಲ್ಲಿ ನಡೆಯಬೇಕಿದೆ. ಇದಕ್ಕೆ ಶ್ರೀಮಠದ ಆಸ್ತಿ ಸಂದಾಯವಾಗುವ ಹಣದಿಂದ ಈ ಎಲ್ಲ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದೂ ಅನೇಕರು ಅನಿಸಿಕೆ ವ್ಯಕ್ತಪಡಿಸಿದರು.

    ಯಾವುದೇ ಒಂದು ಸಂಸ್ಥೆಗೆ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ದಾನದ ರೂಪದಲ್ಲಿ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಅನೇಕರು ಮುಂದಿಟ್ಟರೇ, ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಶ್ರೀಮಠದಿಂದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅವರುಗಳ ಬದುಕು ಕಟ್ಟಿಕೊಡುವ ಕೆಲಸ ಮುಂಬರುವ ದಿನಗಳಲ್ಲಿ ಶ್ರೀಮಠದಿಂದ ಮಾಡಬೇಕಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

    ಸದ್ಯ ಕೆಎಲ್‌ಇ ಸಂಸ್ಥೆಗೆ ದಾನದ ರೂಪದಲ್ಲಿ ನೀಡಿರುವ ಕೋಟ್ಯಂತರ ರೂ. ಬೆಲೆಬಾಳುವ ಶ್ರೀಮಠದ ಆಸ್ತಿಯನ್ನು ಮರಳಿ ಮಠಕ್ಕೆ ಹಸ್ತಾಂತರಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರು ಒತ್ತಾಯಿಸಿದರು.

     

    ಸಭೆಯಲ್ಲಿ ಮುಖಂಡರಾದ ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಪ್ರಫುಚಂದ್ರ ರಾಯನಗೌಡ್ರ, ಎಂ.ಎಸ್. ಅಕ್ಕಿ, ಅನಿಲಕುಮಾರ ಪಾಟೀಲ್, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಬಳಿಗಾರ, ನಾಗರಾಜ ಗೌರಿ, ಪ್ರಕಾಶ ಬೆಂಡಿಗೇರಿ, ಜಗನಾಥ್‌ಗೌಡ ಪಾಟೀಲ್, ವಿಜಯನ್‌ಗೌಡ ಪಾಟೀಲ್, ಬಾಬು ಬಟ್ಟೂರ, ನ್ಯಾಯವಾದಿಗಳಾದ ನೀರಲಗಿ, ವಿ.ಕೆ. ಪಾಟೀಲ್, ರಜತ್ ಉಳ್ಳಾಗಡ್ಡಿಮಠ, ರವಿ ದಾಸನೂರ ಸೇರಿದಂತೆ ಇನ್ನೂ ಅನೇಕ ಮುಖಂಡರು ಪಾಲ್ಗೊಂಡಿದ್ದರು.

  • ರಾಜಕಾರಣಿಗಳು ಮಠ ಪ್ರವೇಶಿಸಿದರೆ ಅಶಾಂತಿ: ದಿಂಗಾಲೇಶ್ವರ ಶ್ರೀ

    ರಾಜಕಾರಣಿಗಳು ಮಠ ಪ್ರವೇಶಿಸಿದರೆ ಅಶಾಂತಿ: ದಿಂಗಾಲೇಶ್ವರ ಶ್ರೀ

    ಧಾರವಾಡ: ಮಠಗಳಲ್ಲಿ ಭಕ್ತರು ಹೊರ ಹೋಗಿ, ರಾಜಕಾರಣಿಗಳು ಒಳ ಹೋದರೆ ಅಲ್ಲಿ ಅಶಾಂತಿ ಗ್ಯಾರಂಟಿ ಎಂದು ಬಾಲೇಹೊಸೂರು ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಮೂರು ಸಾವಿರ ಮಠದ ಆಸ್ತಿಯನ್ನು ಕೆಲವರಿಗೆ ದಾನವಾಗಿ, ಇನ್ನೂ ಕೆಲವರಿಗೆ ಕರೆದು ಕೊಡಲಾಗಿದೆ. ಅಲ್ಲದೆ ಹಲವರಿಗೆ ಕೆಲವು ಅಗ್ರಿಮೆಂಟ್ ಮೇಲೆ ಜಮೀನು ಕೊಡಲಾಗಿದೆ. ಈ ಎಲ್ಲ ಆಸ್ತಿ ಮಠಕ್ಕೆ ಉಳಿಯಬೇಕು, ಅದಕ್ಕೆ ನಾವು ಎಲ್ಲ ಕಡೆ ಜನಜಾಗೃತಿ ಮಾಡುತಿದ್ದೇವೆ ಎಂದು ತಿಳಿಸಿದರು.

    ನಮ್ಮ ಹೋರಾಟ ತೀವ್ರಗೊಳ್ಳುವ ಮೊದಲು ಯಾರು ಮಠದ ಭೂಮಿ ತೆಗೆದುಕೊಂಡಿದ್ದಾರೆ ಅವರೇ ಸ್ವ ಇಚ್ಛೆಯಿಂದ ವಾಪಸ್ ಮಾಡುತ್ತೇವೆ ಎಂದು ಘೋಷಣೆ ಮಾಡಬೇಕು. ಮಠದ ಆಸ್ತಿ ವಾಪಸ್ ಬರುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

    ಯಾವಾಗ ಮಠಗಳಲ್ಲಿ ಭಕ್ತರು ಹೊರ ಹೋಗಿ, ರಾಜಕಾರಣಿಗಳು ಒಳ ಹೋಗುತ್ತಾರೋ ಅಲ್ಲಿ ಅಶಾಂತಿ ಗ್ಯಾರಂಟಿ ಎಂದು ರಾಜಕಾರಣಿಗಳ ಮೇಲೆ ಹರಿಹಾಯ್ದರು. ರಾಜಕಾರಣಿಗಳು ಇರುವ ಜಾಗ ವಿಧಾನಸೌಧವೇ ಹೊರತು ಮಠ ಅಲ್ಲ. ಮಠದಲ್ಲಿ ಸ್ವಾಮಿಗಳು ಇರಬೇಕು, ವಿಧಾನಸೌಧದಲ್ಲಿ ರಾಜಕಾರಣಿಗಳು ಇರಬೇಕು. ಬಹಳಷ್ಟು ಮಠಗಳಲ್ಲಿ ರಾಜಕಾರಣಿಗಳ ಪ್ರವೇಶ ಆಗಿ, ಇಡೀ ಮಠದ ಆಸ್ತಿ ಕಬಳಿಸುವ ಹಾಗೂ ಮಠದ ಆಸ್ತಿ ನಾಶ ಮಾಡುವ ಪ್ರಯತ್ನ ನಡೆದಿದೆ. ಇದು ಒಳ್ಳೆಯದಲ್ಲ ಎಂದು ಶ್ರೀಗಳು ಹೇಳಿದರು.

  • ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದಕ್ಕೆ ತೆರೆ ಎಳೆದರಾ ಮೂಜಗು ಶ್ರೀಗಳು?

    ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದಕ್ಕೆ ತೆರೆ ಎಳೆದರಾ ಮೂಜಗು ಶ್ರೀಗಳು?

    – ಮಲ್ಲಿಕಾರ್ಜುನ ಶ್ರೀಗಳ ಪಕ್ಕಕ್ಕೆ ಕುಳಿತ ಮೂಜಗು ಶ್ರೀಗಳು
    – ಕಾರ್ಯಕ್ರಮಕ್ಕೆ ದಿಂಗಾಲೇಶ್ವರ ಶ್ರೀ ಗೈರು

    ಹುಬ್ಬಳ್ಳಿ: ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರುವ ಹುಬ್ಬಳ್ಳಿಯ ಮೂರುಸಾವಿರ ಮಠದ ವಿವಾದಕ್ಕೆ ಸದ್ದಿಲ್ಲದೇ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ತೆರೆ ಎಳೆದಿದ್ದು, ಸಾರ್ವಜನಿಕ ವಲಯದಲ್ಲಿ ಕುತೂಹಲ ಮನೆ ಮಾಡಿದೆ.

    ಕೆಲವು ದಿನಗಳ ಹಿಂದೆ ಬಾಲೇಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳು ಹಾಗೂ ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಧ್ಯೆ ಉತ್ತರಾಧಿಕಾರಿ ವಿಚಾರವಾಗಿ ಜಟಾಪಟಿ ನಡೆದಿತ್ತು. ಮೊನ್ನೆಯಷ್ಟೇ ಇಬ್ಬರೂ ಸ್ವಾಮೀಜಿಗಳು ಮೂರುಸಾವಿರ ಮಠದಲ್ಲಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದರು. ಆಗ ಏನೂ ಹೇಳದೆ ಮೌನಕ್ಕೆ ಶರಣಾಗಿದ್ದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಇದೀಗ ಉತ್ತರಾಧಿಕಾರ ವಿವಾದಕ್ಕೆ ಸದ್ದಿಲ್ಲದೆ ತೆರೆ ಎಳೆದಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

    ಈಗ ಏಕಾ ಏಕಿ ಜಗದ್ಗುರುಗಳ ನಡೆ ಬದಲಾಗಿದ್ದು, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿಯತ್ತ ಚಿತ್ತ ನೆಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಸಾಕ್ಷಿಯಾಗಿದ್ದು ಹಲಗೆ ಹಬ್ಬದ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಮೂಜಗು ಜಗದ್ಗುರುಗಳು ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ಪಕ್ಕದಲ್ಲೇ ಕುಳಿತಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹೀಗೆ ಅಕ್ಕ ಪಕ್ಕ ಕುಳಿತುಕೊಳ್ಳುವ ಮೂಲಕ ಸೂಕ್ಷ್ಮ ಸಂದೇಶ ಸಾರಿದ್ದಾರೆ.

    ವೇದಿಕೆಯ ಮೇಲಿದ್ದ ಹಲವು ಮಠಾಧೀಶರು, ಮೂಜಗು ಶ್ರೀಗಳು ಆಮಂತ್ರಣದ ಮೇಲೆಯೇ ಬಂದಿದ್ದರು. ಅದೇ ರೀತಿ ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗೂ ಆಮಂತ್ರಣ ನೀಡಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ದಿಂಗಾಲೇಶ್ವರ ಶ್ರೀಗಳು ಮಾತ್ರ ಕಾಣಲೇ ಇಲ್ಲ. ಈ ಬೆಳವಣಿಗೆ ಭಕ್ತರಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿದೆ.

  • ಉತ್ತರಾಧಿಕಾರ ವಿವಾದ – ಸಿಎಂ ಮಧ್ಯಸ್ಥಿಕೆಗೆ ದಿಂಗಾಲೇಶ್ವರ ಬೆಂಬಲಿಗರ ಒತ್ತಾಯ

    ಉತ್ತರಾಧಿಕಾರ ವಿವಾದ – ಸಿಎಂ ಮಧ್ಯಸ್ಥಿಕೆಗೆ ದಿಂಗಾಲೇಶ್ವರ ಬೆಂಬಲಿಗರ ಒತ್ತಾಯ

    ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಮ್ಮೆಯ ಮಠದಲ್ಲಿ ಒಂದಾಗಿರುವ ಮೂರು ಸಾವಿರ ಮಠದ ಉತ್ತರಾಧಿಕಾರ ವಿವಾದ ಮುಗಿಯದ ಅಧ್ಯಾಯದಂತಾಗಿದ್ದು, ದಿನದಿಂದ ದಿನಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಲೆ ಇದೆ.

    ಒಂದು ಕಡೆ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ನಾನೇ ಉತ್ತರಾಧಿಕಾರ ಎಂದು ಹೇಳುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ನಾನು ಶ್ರೀ ಮಠದ ಉತ್ತರಾಧಿಕಾರ ಎಂದು ಹೇಳುತ್ತಿದ್ದಾರೆ. ಅಲ್ಲದೇ ಮೂಜಗು ಅವರು ಉತ್ತರಾಧಿಕಾರದ ಕುರಿತು ಯಾವುದೇ ಸ್ಪಷ್ಟನೆ ನೀಡದಿರುವುದು ಗೊಂದಲಕ್ಕೆ ಕಾರಣವಾಗಿದ್ದು, ದಿಂಗಾಲೇಶ್ವರ ಬೆಂಬಲಿಗರು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಿ ದಿಂಗಾಲೇಶ್ವರ ಸ್ವಾಮೀಜಿಯವರನ್ನು ಶ್ರೀ ಮಠದ ಉತ್ತರಾಧಿಕಾರ ಎಂದು ಘೋಷಣೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಸೋಶಿಯಲ್ ವಾರ್ ನಡೆಸಿದ್ದಾರೆ. ಇದನ್ನೂ ಓದಿ: ಸತ್ಯ ಮುಚ್ಚಿ ಹಾಕುವ ಯತ್ನ ನಡೀತಿದೆ: ದಿಂಗಾಲೇಶ್ವರ ಸ್ವಾಮೀಜಿ

    ದಿಂಗಾಲೇಶ್ವರ ಸ್ವಾಮೀಜಿಯವರ ಸತ್ಯ ದರ್ಶನ ಯಾವುದೇ ಪ್ರಭಾವ ಬೀರಿಲ್ಲ ಎಂಬುವಂತ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬರುತ್ತಿರುವ ಬೆನ್ನಲ್ಲೇ ಸೋಶಿಯಲ್ ವಾರ್ ಪ್ರಾರಂಭಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಮೂರುಸಾವಿರ ಮಠದ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಇದನ್ನೂ ಓದಿ: ನನ್ನ ಮೇಲಿನ ಆರೋಪ ಸಾಬೀತು ಮಾಡ್ಲಿ, ಮಠದ ಗದ್ದುಗೆ ಎದುರೇ ಪ್ರಾಣ ಬಿಡ್ತೇನೆ: ದಿಂಗಾಲೇಶ್ವರ ಶ್ರೀ

  • ಸತ್ಯ ಮುಚ್ಚಿ ಹಾಕುವ ಯತ್ನ ನಡೀತಿದೆ: ದಿಂಗಾಲೇಶ್ವರ ಸ್ವಾಮೀಜಿ

    ಸತ್ಯ ಮುಚ್ಚಿ ಹಾಕುವ ಯತ್ನ ನಡೀತಿದೆ: ದಿಂಗಾಲೇಶ್ವರ ಸ್ವಾಮೀಜಿ

    – ನಡು ರಸ್ತೆಯಲ್ಲೇ ಶ್ರೀಗಳ ಭಾಷಣ
    – 45 ದಿನದ ಗಡವು ನೀಡಿದ ದಿಂಗಾಲೇಶ್ವರ ಶ್ರೀ

    ಹುಬ್ಬಳ್ಳಿ: ಮೂರುಸಾವಿರ ಮಠ ಉತ್ತರಾಧಿಕಾರವಾಗಿ ಇಂದು ಕೂಡ ಸತ್ಯ ದರ್ಶನವಾಗಲಿಲ್ಲ. ಸತ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.

    ಮೂರು ಸಾವಿರ ಮಠದಲ್ಲಿ ಇಂದು ದತ್ತದರ್ಶನಕ್ಕೆ ಆಹ್ವಾನ ನೀಡಿದ್ದರು. ಆದರೆ ಅವರಿಗೆ ಮಠ ಪ್ರವೇಶಿಸಿದಂತೆ ಬ್ಯಾರಿಕೇಡ್ ಹಾಕಲಾಗಿತ್ತು. ಹೀಗಾಗಿ ಮೂರು ಸಾವಿರ ಮಠದ ಹೊರಭಾಗದಲ್ಲಿಯೇ ಭಕ್ತರನ್ನು ಉದ್ದೇಶಿಸಿ ದಿಂಗಾಲೇಶ್ವರ ಸ್ವಾಮೀಜಿಗಳು ಮಾತನಾಡಿದರು.

    ಬಳಿಕ ಮಠ ಪ್ರವೇಶಿಸಿದ ಅವರು, ಜಗದ್ಗುರು ಗುರುಸಿದ್ದೇಶ್ವರ ಮಹಾಶಿವಯೋಗಿಗಳ ಗದ್ದುಗೆ ದರ್ಶನ ಪಡೆದುಕೊಂಡರು. ಬಳಿಕ ಮಾತನಾಡಿದ ಅವರು, ನಾವು ಯಾವುದೇ ಗಲಾಟೆ ಮಾಡಲು ಬಂದಿಲ್ಲ. ಮಠದ ಮೇಲೆ ಅಭಿಮಾನ ಉಳ್ಳವರು. ಮುಂದಿನ 45 ದಿನಗಳಲ್ಲಿ ವ್ಯಾಜ್ಯ ಇತ್ಯರ್ಥವಾಗಬೇಕು. ಅಲ್ಲಿಯವರೆಗೆ ಬಾಯಿ ಮೆಚ್ಚಿಕೊಂಡು ಕೂರುತ್ತೇನೆ. ಜಗದ್ಗುರುಗಳು, ಮಠದ ಶ್ರೀಗಳು ಇತ್ಯರ್ಥ ಪಡಿಸಬೇಕು ಎಂಬ ಗಡುವು ನೀಡಿದರು.

    ಶನಿವಾರ ರಾತ್ರಿ ಕೆಲವರು ನಮ್ಮ ಬಳಿ ಬಂದಿದ್ದರು. ಸತ್ಯ ದರ್ಶನ ನಿಲ್ಲಿಸಲು ಒತ್ತಡ ಹೇರಿದ್ದರು. ನಮ್ಮ ಗುರುಗಳನ್ನು ಕಟ್ಟಿಹಾಕುವ ಯತ್ನ ನಡೆದಿದೆ. ಇದರಲ್ಲಿ ಕೆಲ ಕಾವಿಧಾರಿಗಳ ಕುತಂತ್ರವಿದೆ. ಈ ಭಾರೀ ಸತ್ಯ ದರ್ಶನ ಆಗಿಲ್ಲ. ಕೋರ್ಟಿನಲ್ಲಿ ಇತ್ಯರ್ಥ ಬೇಡ ಎಂದರು.

    ಆಸ್ತಿ, ಅಧಿಕಾರ, ಪಟ್ಟಕ್ಕಾಗಿ ಪಟ್ಟಾಧಿಕಾರ ಬೇಡ:
    ನಾನು ಮೂರುಸಾವಿರ ಮಠದ ಆಸ್ತಿಗೆ ಆಸೆ ಪಟ್ಟಿಲ್ಲ. ಆದರೆ ನಾನು ಉತ್ತರಾಧಿಕಾರಿ ಎಂದು ಗೊತ್ತಾದ ಮೇಲೆಯೇ ನನ್ನ ಮೇಲೆ ಕೊಲೆ ಪ್ರಕರಣ ಹೊರಿಸಲಾಗಿತ್ತು. ಅಷ್ಟೇ ಅಲ್ಲದೆ ಕೊಲೆಗೂ ಪ್ರಯತ್ನ ನಡೆದಿವೆ. ನಾನು ದೊಡ್ಡ ಮಠದ ಸ್ವಾಮೀಜಿಯಾಗಬೇಕು ಅಂದುಕೊಂಡಿಲ್ಲ. ದೊಡ್ಡ ಮಟ್ಟದ ಸ್ವಾಮೀಜಿಯಾಗಬೇಕು ಅಂದುಕೊಂಡಿದ್ದೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

    ನಾನು ಸ್ವಯಂ ಪ್ರೇರಣೆಯಿಂದ ಸನ್ಯಾಸಿಯಾಗಿದ್ದೇನೆ. ನನ್ನನ್ನು ಯಾರೂ ಕೂಡ ಸನ್ಯಾಸಿಯನ್ನಾಗಿ ಮಾಡಿಲ್ಲ. ಬಾಲೇಹೊಸೂರಿನ ಮಠಕ್ಕೆ ನೇಮಕ ಮಾಡಿದಾಗ ಮಠದ ಆರ್ಥಿಕ ಸ್ಥಿತಿ ಸರಿಯಿರಲಿಲ್ಲ. ಆ ಪರಿಸ್ಥಿತಿಯಲ್ಲಿ ನಾನು ಮಠದ ಅಧಿಕಾರ ವಹಿಸಿಕೊಂಡೆ. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡು ತಿಂಗಳು ಗಂಜಿ ತಿಂದು ಬದುಕಿದ್ದೇನೆ. ಔಷದ ತರಲು ಕೂಡ ಹಣ ವಿರಲಿಲ್ಲ. ಇಂದು ಕರ್ನಾಟಕವೇ ಗಮನ ಹರಿಸುವಂತೆ ಮಠವನ್ನು ಬೆಳೆಸಿದ್ದೇನೆ ಎಂದು ಹೇಳಿದರು.

    2006ರಲ್ಲಿ ಮೂಜಗು ಶ್ರೀಗಳು ದೂರವಾಣಿ ಕರೆ ಮಾಡಿ ಆರ್ಥಿಕ ಹಾಗೂ ಕಾನೂನು ಮುಗಟ್ಟಿನಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹೇಳಿದ್ದರು. ತಕ್ಷಣವೇ ಮುಂಬೈ ಕಾರ್ಯಕ್ರಮ ಮೊಟಕುಗೊಳಿಸಿ ಮೂರುಸಾವಿರ ಮಠಕ್ಕೆ ಬಂದೆ. ಮೂರು ಸಾವಿರ ಮಠದ ಅಭಿವೃದ್ಧಿಗೆ ಸಾಕಷ್ಟು ದುಡಿದಿದ್ದೇನೆ. ಸಿರಗೇರಿ ಜಗದ್ಗುರು ಕರೆದುಕೊಂಡು ಹೋಗಿ ಮೂರು ಸಾವಿರ ಮಠದ ಇತ್ಯರ್ಥಕ್ಕೆ ಅಂಗಲಾಚಿದ್ದೇವೆ. ಮಠದ ನ್ಯಾಯ ನಿರ್ಣಯ ಸುಪ್ರೀಂಕೋರ್ಟ್ ವೆರೆಗೂ ಹೋಯಿತು. ರುದ್ರಮುನಿ ಸ್ವಾಮೀಜಿ ಉತ್ತರಾಧಿಕಾರ ವಿವಾದದಲ್ಲಿ ಒಂದು ಕೋಟಿ ರೂ.ವನ್ನು ನೀಡುವಂತಾಗಿತ್ತು. ಕೂಡಲೇ ಫೋನ್ ಮಾಡಿ ವಿವಿಧ ಪ್ರದೇಶದ ಭಕ್ತರಿಂದ ಹಣ ಪಡೆದೆ. ಅದರಲ್ಲಿ ಹಾವೇರಿ ಬ್ಯಾಡಗಿ 50 ಲಕ್ಷ ರೂ., ಲಕ್ಷ್ಮೇಶ್ವರದ ಭಕ್ತರು 15 ಲಕ್ಷ ರೂ., ಬೆಳಗಾವಿ 5 ಲಕ್ಷ ರೂ., ಹಾವನೂರ 5 ಲಕ್ಷ ರೂ., ಬಾಲೆಹೊಸೂರಿನ 5 ಲಕ್ಷ ರೂ., ಸಿಕ್ಕಿದೆ. ಆ ಹಣವನ್ನು ಪಡೆದು ವ್ಯವಹಾರವನ್ನು ನಿಭಾಯಿಸಿದ್ದೆ ಎಂದು ನೆನೆದರು.

    ಅಲ್ಲದೇ ಕೋಲ್ಕತ್ತಾಗೆ ಹೋಗಲು ಬಾಲೆಹೊಸೂರಿನ ಸ್ವಂತ ಹಣವನ್ನು 25 ಲಕ್ಷ ನೀಡಿದ್ದೇವೆ. 2006ರಿಂದ ಮೂಜಗು ಶ್ರೀಗಳು, ಈ ಮಠಕ್ಕೆ ನೀವೇ ಕುಳಿತು ಕೊಳ್ಳಿ ಎಂದಿದ್ದರು. ಆ ಸಂದರ್ಭದಲ್ಲಿ ನಾನು ಒಪ್ಪಲಿಲ್ಲ. ಆದರೂ ಒಪ್ಪಿಸಲು ಮುಂದಾದರೂ ಎಂದರು.

    ದಾಖಲೆಗಳ ಸಮೇತವಾಗಿ ಮಾತನಾಡಲು ವಕೀಲರನ್ನು ಕರೆದುಕೊಂಡು ಬಂದಿದ್ದೇನೆ. ನನ್ನನ್ನು ಮಠಾಧಿಪತಿ ಮಾಡಬಾರದು ಎಂದು ಕುತಂತ್ರ ಮಾಡಿದ್ದಾರೆ. ಅಲ್ಲದೇ ಸುಮಾರು ಬಾರಿ ನಾನು ಹುಬ್ಬಳ್ಳಿಗೆ ಬಂದಾಗ ಎಲ್ಲಿಯೂ ನನ್ನನ್ನು ಮಠಾಧಿಪತಿ ಮಾಡಲು ಹೇಳಿಲ್ಲ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಶಾಸಕ ನೆಹರು ಓಲೇಕಾರ, ಜಿ.ಎಸ್.ಗಡ್ಡದೇವರಮಠ, ಪ್ರಕಾಶ ಬೆಂಡಿಗೇರಿ, ಮಾಂತೇಶ ಗಿರಿಮಠ, ಸಿದ್ದಣ್ಣ ಶೆಟ್ಟರ್, ಡಿ.ಟಿ.ಪಾಟೀಲ, ಶಿವಾನಂದ ಮುತ್ತಣ್ಣವರ ಸೇರಿದಂತೆ ಇತರರು ಇದ್ದರು.

    ಸ್ವಚ್ಛತಾ ಕಾರ್ಯ:
    ದಿಂಗಾಲೇಶ್ವರ ಸ್ವಾಮೀಜಿಗಳು ನೇತೃತ್ವದಲ್ಲಿ ಇಂದು ಮೂರು ಸಾವಿರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಸತ್ಯದರ್ಶನ ಸಭೆಗೆ ಆಗಮಿಸಿದ್ದ ಭಕ್ತರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸಭೆಯ ನಂತರದಲ್ಲಿ ದಿಂಗಾಲೇಶ್ವರ ಸ್ವಾಮೀಜಿಯವರು ಕಸ ಗೂಡಿಸುವ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡರು.

    ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತಾಧಿಗಳಿಗೆ ಹಾಗೂ ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಬೆಂಬಲಿಗರಿಗೆ ಮಠದ ಹೊರಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಪ್ರಸಾದ ವ್ಯವಸ್ಥೆ ನಂತರದಲ್ಲಿ ಬಿದ್ದಿರುವ ಕಸವನ್ನು ದಿಂಗಾಲೇಶ್ವರ ಸ್ವಾಮೀಜಿ ಅವರು ಗೂಡಿಸುವ ಮೂಲಕ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದರು.

  • ಉತ್ತರಾಧಿಕಾರಿ ವಿವಾದ – ಮೂರು ಸಾವಿರ ಮಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

    ಉತ್ತರಾಧಿಕಾರಿ ವಿವಾದ – ಮೂರು ಸಾವಿರ ಮಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

    ಹುಬ್ಬಳ್ಳಿ: ಜಿಲ್ಲೆಯ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದ ತಾರಕಕ್ಕೇರಿದ್ದು, ಉತ್ತರಾಧಿಕಾರಿ ದಿಂಗಾಲೇಶ್ವರ ಸ್ವಾಮೀಜಿ ತಮ್ಮನ್ನ ಉತ್ತರಾಧಿಕಾರಿಯಾಗಿ ನೇಮಕ ಮಾಡಿದ್ದು ಸತ್ಯವೋ ಸುಳ್ಳೋ ಅನ್ನೋ ಬಗ್ಗೆ ಇಂದು ಸತ್ಯ ದರ್ಶನಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

    ದಿಂಗಾಲೇಶ್ವರ ಸ್ವಾಮೀಜಿ ಇಂದು ಸತ್ಯ ದರ್ಶನಕ್ಕೆ ಮುಂದಾಗಿದ್ದು. ಬೆಳಗ್ಗೆ 11 ಗಂಟೆಗೆ ನೆಹರು ಮೈದಾನದಿಂದ ಮೆರವಣಿಗೆ ಮೂಲಕ ಆಗಮಿಸಿ ಮಠದ ಆವರಣದಲ್ಲಿ ಸತ್ಯ ದರ್ಶನ ಸಭೆ ನಡೆಸಲಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಕರೆ ನೀಡಿದ ಹಿನ್ನೆಲೆಯಲ್ಲಿ ಮಠಕ್ಕೆ ಇಂದು ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಮಠದ ಆವರಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ದಿಂಗಾಲೇಶ್ವರ ಸ್ವಾಮೀಜಿ ನಡೆಸಲು ಮುಂದಾಗಿರುವ ಸತ್ಯ ದರ್ಶನ ಸಭೆಗೆ ಮಠದ ಆಡಳಿತ ಅನುಮತಿ ನಿರಾಕರಿಸಿದ್ದು, ಮಧ್ಯ ರಾತ್ರಿವರೆಗೂ ನಡೆದ ಸಂಧಾನ ಸಭೆ ವಿಫಲವಾಗಿದೆ. ಈ ಹಿನ್ನೆಲೆ ಮಠದ ಕತೃ ಗದ್ದುಗೆಗೆ ಬರೋ ಭಕ್ತರ ದರ್ಶನಕ್ಕಾಗಿ ವಿಶೇಷ ಬ್ಯಾರಿಕೇಡ್ ಹಾಕಲಾಗಿದೆ. ಅಲ್ಲದೇ ಮಠದ ಆವರಣದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಸತ್ಯ ದರ್ಶನಕ್ಕೆ ಮುಂದಾಗಿರುವುದರಿಂದ ಇಂದು ಎನಾಗುತ್ತೋ ಎನೋ ಎನ್ನುವ ಆತಂಕ ಮಠದ ಭಕ್ತರದ್ದಾಗಿದೆ.

    ಮೂರು ಸಾವಿರ ಮಠದ ಜಗದ್ಗುರುಗಳಾದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿಗಳು ಸಹ ಸದ್ಯಕ್ಕೆ ಉತ್ತರಾಧಿಕಾರಿ ಅವಶ್ಯಕತೆಯಿಲ್ಲ. ಮಠವನ್ನು ನೋಡಿಕೊಂಡು ಹೋಗುವ ಸಾಮರ್ಥ್ಯ ತಮಗಿದ್ದು, ಉತ್ತರಾಧಿಕಾರಿ ವಿವಾದ ತಮ್ಮ ಮನಸ್ಸಿಗೆ ನೋವುಂಟು ಮಾಡಿದೆ ಎಂದಿದ್ದಾರೆ.

    ಈ ಮಧ್ಯೆ ಇಂದು ದಿಂಗಾಲೇಶ್ವರ ಸ್ವಾಮೀಜಿಗಳು ಮಠದಲ್ಲಿ ತಮ್ಮನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದು ಸುಳ್ಳೋ? ಸತ್ಯವೋ? ಅನ್ನೋದು ಬಹಿರಂಗವಾಗಲಿ ಎಂದು ದಾಖಲೆಗಳ ಪ್ರದರ್ಶನಕ್ಕೆ ಮುಂದಾದರೆ, ಇತ್ತ ಬೆಳಗಾವಿ ಜಿಲ್ಲೆಯ ಘಟಪ್ರಭಾದ ಮಲ್ಲಿಕಾರ್ಜುನ ದೇವರು ಸ್ವಾಮೀಜಿ ಸಹ ಇಂದು ಮಠಕ್ಕೆ ಭೇಟಿ ನೀಡುವುದಾಗಿ ತಿಳಿಸಿದ ಪರಿಣಾಮ ಮಠದ ಆವರಣದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ.

  • ಸತ್ಯದರ್ಶನ ಸಭೆ ನಡೆಸಲು ಬಿಡಲ್ಲ: ಮೋಹನ್ ಲಿಂಬಿಕಾಯಿ

    ಸತ್ಯದರ್ಶನ ಸಭೆ ನಡೆಸಲು ಬಿಡಲ್ಲ: ಮೋಹನ್ ಲಿಂಬಿಕಾಯಿ

    ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿ ವಿಚಾರಕ್ಕೆ ಸಂಬಂಧಿಸಿದಂತೆ ಫೆ. 23ರಂದು ಸತ್ಯದರ್ಶನ ಸಭೆ ನಡೆಸಲು ವಿರೋಧ ವ್ಯಕ್ತವಾಗುತ್ತಿದ್ದು, ಮೂರುಸಾವಿರ ಮಠದ ಉನ್ನತಾಧಿಕಾರ ಸಮಿತಿ ಸದಸ್ಯರೂ ಆಗಿರುವ ಮೋಹನ್ ಲಿಂಬಿಕಾಯಿ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಈ ಕುರಿತು ಪ್ರತಿಕ್ರಿಯಸಿದ ಅವರು, ಮೂರು ಸಾವಿರ ಮಠದ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಯಾರೋ ಬಂದು ಸಭೆ ನಡೆಸುತ್ತೇವೆ ಅಂದರೆ ಅವಕಾಶ ಕೊಡುವುದಿಲ್ಲ. ಫೆ.23ರಂದು ಸತ್ಯದರ್ಶನ ಸಭೆ ನಡೆಸಲು ಬಿಡುವುದಿಲ್ಲ ಎಂದು ಮೋಹನ್ ಲಿಂಬಿಕಾಯಿ ಹೇಳಿದ್ದಾರೆ.

    ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿಯನ್ನಾಗಿ ತಮ್ಮನ್ನೇ ನೇಮಕ ಮಾಡಬೇಕೆಂಬುದರ ಕುರಿತು ಬಾಲೇಹೊಸುರಿನ ದಿಂಗಾಲೇಶ್ವರ ಸ್ವಾಮೀಜಿ ಇದೇ ಭಾನುವಾರ ಮಠದ ಆವರಣದಲ್ಲಿ ಸತ್ಯ ದರ್ಶನ ಸಭೆ ಕರೆದಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಸಭೆ ನಡೆಸಲು ಅವಕಾಶ ನೀಡುವುದಿಲ್ಲವೆಂದು ಹಲವರು ಪಟ್ಟು ಹಿಡಿದಿದ್ದಾರೆ. ಇದೀಗ ಮೋಹನ್ ಲಿಂಬಿಕಾಯಿಯವರು ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಹಾಲಿ ಪೀಠಾಧ್ಯಕ್ಷ ಮೂಜಗು ಸ್ವಾಮೀಜಿ ಮಠವನ್ನು ನಡೆಸಲು ಸಮರ್ಥರಿದ್ದಾರೆ. ಯಾರೋ 52 ಜನ ಸಹಿ ಹಾಕಿದ ತಕ್ಷಣ ಉತ್ತರಾಧಿಕಾರಿ ನೇಮಕ ಆಗುವುದಿಲ್ಲ. ಸರ್ವಾಧಿಕಾರಿಯಂತೆ ಉತ್ತರಾಧಿಕಾರಿ ನೇಮಕ ನಡೆಯುವುದಿಲ್ಲ ಎಂದು ಮೋಹನ್ ಲಿಂಬಿಕಾಯಿ ಸ್ಪಷ್ಟಪಡಿಸಿದ್ದಾರೆ.