Tag: ಮೂರನೇ ಟೆಸ್ಟ್ ಪಂದ್ಯ

  • ರಾಷ್ಟ್ರಗೀತೆ ಹಾಡುವ ವೇಳೆ ಕಣ್ಣೀರು ಹಾಕಿದ ಮೊಹಮ್ಮದ್ ಸಿರಾಜ್

    ರಾಷ್ಟ್ರಗೀತೆ ಹಾಡುವ ವೇಳೆ ಕಣ್ಣೀರು ಹಾಕಿದ ಮೊಹಮ್ಮದ್ ಸಿರಾಜ್

    ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕಣ್ಣೀರು ಹಾಕಿದ್ದಾರೆ.

    ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಮಳೆ ಕಾರಣ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಕೊಂಚ ತಡವಾಗಿ ಆರಂಭವಾದರೂ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದೀಗ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 55 ಓವರ್ ಗಳಲ್ಲಿ 2 ವಿಕೆಟ್‍ಗಳ ನಷ್ಟಕ್ಕೆ 166 ರನ್‍ಗಳನ್ನು ಗಳಿಸಿದೆ.

    ಇದಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವ ವೇಳೆ ಮೊಹಮ್ಮದ್ ಸಿರಾಜ್ ಕ್ರೀಡಾಂಗಣದಲ್ಲಿ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಈ ಬಗ್ಗೆ ಪಂದ್ಯದ ಮೊದಲ ದಿನದಾಟದ ಅಂತ್ಯದ ಬಳಿಕ ಮಾತನಾಡಿದ ಸಿರಾಜ್, ರಾಷ್ಟ್ರಗೀತೆ ಮೊಳಗುತ್ತಿದ್ದ ಸಮಯದಲ್ಲಿ ಅಗಲಿದ ತಂದೆಯ ನೆನಪಾಗಿ ಕಣ್ಣೀರು ಹರಿಯಿತು ಎಂದಿದ್ದಾರೆ.

    ಹೈದರಾಬಾದ್ ಮೂಲದ 26 ವರ್ಷದ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ರಾಷ್ಟ್ರಗೀತೆ ಹಾಡುವ ವೇಳೆ ಕಣ್ಣೀರಿಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಹೀಗಾಗಿ ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಪರ ಆನ್‍ಲೈನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲು ಸಿರಾಜ್ ಅವರನ್ನೇ ಕಳುಹಿಸಲಾಗಿತ್ತು.

    ರಾಷ್ಟ್ರಗೀತೆ ಹಾಡುವಾಗ ನನ್ನ ತಂದೆಯ ನೆನಪಾಯಿತು. ಹೀಗಾಗಿ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಾನು ಟೆಸ್ಟ್ ಕ್ರಿಕೆಟ್ ಆಡಬೇಕು ಎಂಬುದು ನನ್ನ ತಂದೆಯ ಆಸೆಯಾಗಿತ್ತು. ಇಂದು ಅವರು ಬದುಕಿದ್ದರೆ ನಾನು ಟೆಸ್ಟ್ ಆಡುವುದನ್ನು ಕಣ್ತುಂಬಿಕೊಳ್ಳುತ್ತಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

    ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದ ಸಲುವಾಗಿ ಕಾಂಗರೂ ನಾಡಿಗೆ ತೆರಳಿದ್ದ ವೇಳೆ ಸಿರಾಜ್ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ನವೆಂಬರ್ 20ರಂದು ಸಿರಾಜ್ ಅವರ ತಂದೆ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದರು. ಆಸೀಸ್‍ಗೆ ಬಂದು ಕ್ವಾರಂಟೈನ್‍ನಲ್ಲಿ ಇದ್ದ ಕಾರಣ ಸಿರಾಜ್ ತಮ್ಮ ತಂದೆಯ ಅಂತ್ಯಕ್ರಿಯೆಗೆ ತಾಯ್ನಾಡಿಗೆ ಹಿಂದಿರುಗಲು ಸಾಧ್ಯವಾಗಿರಲಿಲ್ಲ.

    ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹಿಂದಿರುಗುವಂತೆ ಸಿರಾಜ್‍ಗೆ ತಿಳಿಸಿತ್ತು. ಆದರೂ ಅವರು ಭಾರತಕ್ಕೆ ಮರಳದೆ ತಂಡದಲ್ಲೇ ಉಳಿಯುವ ನಿರ್ಧಾರ ಮಾಡಿದ್ದರು.