Tag: ಮೂತ್ರಪಿಂಡ

  • ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಡಾ.ಪ್ರವೀಣ್ ಸೋನಿ ಜಾಮೀನು ನಿರಾಕರಿಸಿದ ಕೋರ್ಟ್

    ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಡಾ.ಪ್ರವೀಣ್ ಸೋನಿ ಜಾಮೀನು ನಿರಾಕರಿಸಿದ ಕೋರ್ಟ್

    ಭೋಪಾಲ್: ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಮಕ್ಕಳ ತಜ್ಞ ಡಾ.ಪ್ರವೀಣ್ ಸೋನಿ ಜಾಮೀನು ಅರ್ಜಿಯನ್ನು ಮಧ್ಯಪ್ರದೇಶ (Madhya Pradesh) ಜಿಲ್ಲಾ ನ್ಯಾಯಾಲಯ ನಿರಾಕರಿಸಿದೆ.

    ಮಧ್ಯಪ್ರದೇಶ ಜಿಲ್ಲಾ ನ್ಯಾಯಾಲಯ ಮಂಗಳವಾರ (ಅ.14) ಡಾ.ಪ್ರವೀಣ್ ಸೋನಿ (Dr.Praveen Soni) ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ತನಿಖೆಯ ಸಂದರ್ಭದಲ್ಲಿ ಔಷಧಿ ಶಿಫಾರಸು ಮಾಡಿದ್ದಕ್ಕಾಗಿ 10% ಕಮಿಷನ್ ಪಡೆದಿರುವುದಾಗಿ ಡಾ.ಪ್ರವೀಣ್ ಸೋನಿ ಒಪ್ಪಿಕೊಂಡಿದ್ದಾರೆ. ಜೊತೆಗೆ ಸಿರಪ್ ಸೇವಿಸಿದ ಮಕ್ಕಳು ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರೂ ಕೂಡ ಡಾ.ಸೋನಿ ಸೇರಿದಂತೆ ಇತರ ವೈದ್ಯರುಗಳು ಸಿರಪ್ ಶಿಫಾರಸು ಮಾಡುವುದನ್ನು ನಿಲ್ಲಿಸಿರಲಿಲ್ಲ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಸ್ರೇಸನ್ ಲೈಸೆನ್ಸ್ ರದ್ದು, ಕಂಪನಿ ಬಂದ್

    ಪ್ರಕರಣ ಸಂಬಂಧ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿದ್ದು, ಕೆಮ್ಮಿನ ಸಿರಪ್ ಶಿಫಾರಸು ಮಾಡಿದ ನಂತರ ಕನಿಷ್ಠ ಏಳು ಮಕ್ಕಳು ಸಾವನ್ನಪ್ಪಿದರೆ, ಇನ್ನೂ ಆರು ಮಕ್ಕಳು ನಾಗ್ಪುರ ಆಸ್ಪತ್ರೆಯಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಿರಪ್‌ನ್ನು ಚಿಕ್ಕ ಮಕ್ಕಳಿಗೆ ನೀಡಬಾರದು ಎಂದು ತಿಳಿದಿದ್ದರೂ ಕೂಡ ಡಾ.ಸೋನಿಯವರು ಆ.24ರಿಂದ ಅ.4ರವರೆಗೆ ಹಲವು ಮಕ್ಕಳಿಗೆ ಸಿರಪ್ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದ್ದಾರೆ ಎಂದು ತನಿಖೆ ವೇಳೆ ಬಯಲಾಗಿದೆ.

    ಪೊಲೀಸರ ಮಾಹಿತಿ ಪ್ರಕಾರ, ಸಿರಪ್ ಶಿಫಾರಸು ಮಾಡಿದ ಬಳಿಕ ಆ.29ರಂದು ಮೊದಲ ಮಗು ಸಾವನ್ನಪ್ಪಿತು. ಅದಾದ ನಂತರ ಸೆ.5ರಂದು 3 ವರ್ಷದ ಬಾಲಕಿ ಮೂತ್ರಪಿಂಡ ವೈಫಲ್ಯದೊಂದಿಗೆ ಸಾವನ್ನಪ್ಪಿದ್ದಳು ಎಂದು ತಿಳಿಸಿದ್ದಾರೆ.

    2023ರ ಡಿಸೆಂಬರ್ 18ರಂದು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸ್ಥಿರ ಡೋಸ್ ಹೊಂದಿರುವ ಔಷಧಿಗಳನ್ನು ನೀಡಬಾರದು ಎಂದು ಸಲಹೆ ನೀಡಿತ್ತು. ಈ ನಿರ್ದೇಶನದ ಹೊರತಾಗಿಯೂ ಡಾ.ಸೋನಿ ಮಕ್ಕಳಿಗೆ ಸಿರಪ್‌ನ್ನು ಶಿಫಾರಸು ಮಾಡಿದ್ದಾರೆ. ಮಕ್ಕಳ ಸಾವಿನ ತನಿಖೆಗಾಗಿ ನ್ಯಾಯಾಲಯ ಜಾಮೀನು ಅರ್ಜಿ ನಿರಾಕರಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಚೆನ್ನೈನ 7 ಸ್ಥಳಗಳ ಮೇಲೆ ಇಡಿ ದಾಳಿ

  • 56 ವರ್ಷದ ವ್ಯಕ್ತಿಯ ಮೂತ್ರಪಿಂಡದಿಂದ 206 ಕಲ್ಲುಗಳನ್ನು ಹೊರ ತೆಗೆದ ವೈದ್ಯರು

    56 ವರ್ಷದ ವ್ಯಕ್ತಿಯ ಮೂತ್ರಪಿಂಡದಿಂದ 206 ಕಲ್ಲುಗಳನ್ನು ಹೊರ ತೆಗೆದ ವೈದ್ಯರು

    ಹೈದರಾಬಾದ್: ಶಸ್ತ್ರ ಚಿಕಿತ್ಸೆ ಮೂಲಕ ರೋಗಿಯೊಬ್ಬರ ಮೂತ್ರಪಿಂಡದಲ್ಲಿದ್ದ 206 ಕಲ್ಲುಗಳನ್ನು ಒಂದು ಗಂಟೆಯಲ್ಲಿಯೇ ತೆಲಂಗಾಣದ ಹೈದರಾಬಾದ್‍ನಲ್ಲಿರುವ ಅವೇರ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ತೆಗೆದು ಹಾಕಿದ್ದಾರೆ.

    ಕಳೆದ ಆರು ತಿಂಗಳಿನಿಂದ ಎಡ ಭಾಗದ ಸೊಂಟದ ನೋವಿನಿಂದ ಬಳಲುತ್ತಿದ್ದ ನಲ್ಗೊಂಡ ನಿವಾಸಿ 56 ವರ್ಷದ ವೀರಮಲ್ಲ ರಾಮಲಕ್ಷ್ಮಯ್ಯ ಅವರಿಗೆ ಬೇಸಿಗೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಇದರಿಂದ ಏಪ್ರಿಲ್ 22 ರಂದು ವೀರಮಲ್ಲ ಅವರು ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ್ದಾರೆ. ನಂತರ ಕೆಲವು ಔಷಧಿಗಳನ್ನು ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದರು. ಅದರಿಂದ ಅಲ್ಪಾವಧಿಯ ಪರಿಹಾರ ಮಾತ್ರ ದೊರೆಯಿತು. ಆದರೆ ದಿನದಿಂದ ದಿನೇ ನೋವು ವಿಪರೀತಗೊಂಡಿತು. ಇದನ್ನೂ ಓದಿ: ಚಾರ್ ಧಾಮ್ ಯಾತ್ರೆ – ಇಲ್ಲಿ ವರೆಗೆ 46 ಯಾತ್ರಿಕರು ಹೃದಯಾಘಾತದಿಂದ ಸಾವು

    ನಂತರ ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಹಿರಿಯ ಸಮಾಲೋಚಕ ಮೂತ್ರಶಾಸ್ತ್ರಜ್ಞ ಡಾ.ಪೂಲಾ ನವೀನ್ ಕುಮಾರ್ ಅವರು, ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿದಾಗ ರೋಗಿಯ ಎಡ ಮೂತ್ರಪಿಂಡದಲ್ಲಿ ಕಲ್ಲುಗಳಿರುವುದು ಕಂಡು ಬಂದಿದೆ. ಕೊನೆಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು.

    ಬಳಿಕ ಒಂದು ಗಂಟೆಯ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ 206 ಕಲ್ಲುಗಳನ್ನು ಹೊರಗೆ ತೆಗೆದುಹಾಕಿದ್ದಾರೆ. ನಂತರ ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆ ಎರಡೇ ದಿನಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿರುವುದು ಹೆಮ್ಮೆ ಎನಿಸಿತು: ನಿಖತ್ ಜರೀನ್

    ಬೇಸಿಗೆಯಲ್ಲಿ ಹೆಚ್ಚು ಬಿಸಿಲಿರೋ ಕಾರಣ ಅನೇಕ ಬಹುತೇಕರು ನಿರ್ಜಲೀಕರಣದಿಂದ ಬಳಲುತ್ತಿರುತ್ತಾರೆ. ಇದರಿಂದ ಮೂತ್ರಪಿಂಡದಲ್ಲಿ ಕಲ್ಲು ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಹೀಗಾಗಿ ಮುನ್ನೆಚ್ಚರಿಕೆಯಿಂದ ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವುದು ಮತ್ತು ಎಳನೀರು ಕುಡಿಯುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

  • ಮೊದಲ ಬಾರಿಗೆ ಮಾನವನಿಗೆ ಹಂದಿ ಕಿಡ್ನಿ ಅಳವಡಿಕೆ

    ಮೊದಲ ಬಾರಿಗೆ ಮಾನವನಿಗೆ ಹಂದಿ ಕಿಡ್ನಿ ಅಳವಡಿಕೆ

    ವಾಷಿಂಗ್ಟನ್: ಇದೇ ಮೊದಲ ಬಾರಿಗೆ ಹಂದಿಯ ಮೂತ್ರಪಿಂಡ(ಕಿಡ್ನಿ)ಯನ್ನು ಮಾನವನಿಗೆ ಕಸಿ ಮಾಡಲಾಗಿದೆ. ಕಿಡ್ನಿ ಅಳವಡಿಸಿದ ರೋಗಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಆಗಿಲ್ಲ ಎಂದು ನ್ಯೂಯಾರ್ಕ್ ವೈದ್ಯರು ಹೇಳಿದ್ದಾರೆ.

    ನ್ಯೂಯಾರ್ಕ್ ಲಾಂಗ್‍ಒನ್ ಹೆಲ್ತ್(ಎನ್‍ವೈಎಲ್) ಸಂಸ್ಥೆಯಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಿದುಳು ನಿಷ್ಕ್ರಿಯವಾಗಿ ಜೀವರಕ್ಷಕ ಸಾಧನದ ಮೇಲೆ ಜೀವಂತವಿರುವ ಮಹಿಳೆಗೆ ವಂಶವಾಹಿ ಪರಿವರ್ತಿಸಲಾದ ಹಂದಿ ಕಿಡ್ನಿ ಕಸಿ ಮಾಡಲಾಗಿದೆ. ಇದರಿಂದ ಹಂದಿಯ ಕಿಡ್ನಿಯನ್ನು ಮಾನವ ದೇಹ ತಕ್ಷಣಕ್ಕೆ ತಿರಸ್ಕರಿಸುವುದಿಲ್ಲ ಎಂಬುದು ಗೊತ್ತಾಗಿದೆ ಎಂದು ಎನ್‍ವೈಎಲ್ ಸಂಸ್ಥೆ ತಿಳಿಸಿವೆ.

    ಕಿಡ್ನಿ ಕಸಿಯಾದ ಮೇಲೆ ಮೂರು ದಿನ ಅದನ್ನು ಆಕೆಯ ದೇಹದ ಹೊರಗೆ ನಿರ್ವಹಿಸಲಾಯಿತು. ಆಕೆಗೆ ಮೂತ್ರ ಮಾಡಲು ಯಾವುದೇ ಕಷ್ಟವಾಗಿಲ್ಲ ಎಂಬುದನ್ನು ನಾವು ಖಚಿತ ಮಾಡಿಕೊಂಡೆವು. ಈ ಪ್ರಯೋಗಾತ್ಮಕ ಚಿಕಿತ್ಸೆ ನಡೆಸುವುದಕ್ಕೂ ಮುದಲು ಮಿದುಳು ನಿಷ್ಕ್ರಿಯವಾದ ಮಹಿಳೆಯ ಕುಟುಂಬಸ್ಥರಿಂದ ಒಪ್ಪಿಗೆ ಪಡೆದುಕೊಂಡಿದ್ದೇವೆ ಎಂದು ಎನ್‍ವೈಎಲ್ ವಿವರಿಸಿದೆ. ಇದನ್ನೂ ಓದಿ: 100 ಕೋಟಿ ಕೇವಲ ಅಂಕಿಯಲ್ಲ, ಇತಿಹಾಸದಲ್ಲಿ ದಾಖಲಾದ ಹೊಸ ಅಧ್ಯಾಯ: ಮೋದಿ

    ಪ್ರಯೋಗ: ಮುದುಳು ನಿಷ್ಕ್ರಿಯವಾದ ಮಹಿಳೆಯ ಮೂತ್ರಪಿಂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹಂದಿ ಕಿಡ್ನಿ ಅಳವಡಿಸಿದ ನಂತರ ಕಾರ್ಯ ಸಹಜವಾಗಿ ನಡೆಸಲು ಆರಂಭವಾಯಿತ್ತು ಎಂದು ನ್ಯೂಯಾರ್ಕ್ ಲಾಂಗ್‍ಒನ್ ಹೆಲ್ತ್ ಸಂಶೋಧನಾ ತಂಡದ ಮುಖ್ಯಸ್ಥ ಡಾ. ರಾಬರ್ಟ್ ಮಾಂಟ್ಗೊಮೆರಿ ಹೇಳಿದ್ದಾರೆ. ದನ್ನೂ ಓದಿ: 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದ : ಸಿದ್ದರಾಮಯ್ಯ

    ಮಾನವರಿಗೆ ಪ್ರಾಣಿಗಳ ಅಂಗಗಳನ್ನು ಜೋಡಿಸುವ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಆದರೆ ಕಸಿ ಮಾಡಿದ ತಕ್ಷಣ ಮಾನವ ದೇಹ ಸ್ಪಂದನೆ ನೀಡುತ್ತಿದೆ. ರಾಬರ್ಟ್ ಅವರ ತಂಡ ಈ ನಿಟ್ಟಿನಲ್ಲಿ ಮೊದಲ ಹಂತದ ಯಶಸ್ಸುಗಳಿಸಿದೆ. ಈ ಪ್ರಯೋಗವನ್ನು ಥೇರಪ್ಯೂಟಿಕ್ಸ್ ಕಾಪ್ರ್ಸ್ ರಿವಿವಿಕಾರ್ ಯುನಿಟ್ ಮಾಡಿದೆ.

  • ವ್ಯಕ್ತಿ ದೇಹದಲ್ಲಿತ್ತು ಬರೋಬ್ಬರಿ 7.4 ಕೆಜಿ ತೂಕದ ಕಿಡ್ನಿ

    ವ್ಯಕ್ತಿ ದೇಹದಲ್ಲಿತ್ತು ಬರೋಬ್ಬರಿ 7.4 ಕೆಜಿ ತೂಕದ ಕಿಡ್ನಿ

    ನವದೆಹಲಿ: ರಾಷ್ಟ್ರ ರಾಜಧಾನಿಯ ಆಸ್ಪತ್ರೆಯೊಂದರಲ್ಲಿ ವೈದ್ಯರ ತಂಡ ವ್ಯಕ್ತಿಯೊಬ್ಬರ ದೇಹದಿಂದ ಬರೋಬ್ಬರಿ 7.4 ಕೆಜಿ ತೂಕದ ರೋಗಪೀಡಿತ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

    56 ವರ್ಷದ ವ್ಯಕ್ತಿಯೊಬ್ಬರ ದೇಹದಲ್ಲಿ ಬರೋಬ್ಬರಿ 7.4 ಕೆಜಿ ತೂಕದ ರೋಗಪೀಡಿತ ಮೂತ್ರಪಿಂಡ ಇತ್ತು. ಇದು ರೋಗಿಯ ಇಡೀ ಹೊಟ್ಟೆ ಭಾಗವನ್ನು ಆಕ್ರಮಿಸಿಕೊಂಡಿದ್ದು, ತೀವ್ರ ನೋವು ಅನುಭವಿಸುತ್ತಿದ್ದ ರೋಗಿ ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಮೂತ್ರಪಿಂಡದ ಸಮಸ್ಯೆ ಬಗ್ಗೆ ತಿಳಿದು ಬಂದಿದೆ. ರೋಗಿಯ ದೇಹದಲ್ಲಿ 2 ನವಜಾತ ಶಿಶುಗಳ ತೂಕದ ಮೂತ್ರಪಿಂಡ ಇರುವುದು ಪತ್ತೆಯಾಗಿದೆ. ಹೀಗಾಗಿ ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಕೊನೆಗೂ ಈ ರೋಗಪೀಡಿತ ಮೂತ್ರಪಿಂಡವನ್ನು ರೋಗಿ ದೇಹದಿಂದ ಹೊರತೆಗೆದಿದ್ದಾರೆ.

    ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿರುವ ಮೂತ್ರಪಿಂಡ ಸಾಮಾನ್ಯವಾಗಿ 120 ರಿಂದ 150 ಗ್ರಾಂ ಇರುತ್ತದೆ. ಆದರೆ ಈ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಮೂತ್ರಪಿಂಡ ಮಾತ್ರ ಬರೋಬ್ಬರಿ 7.4 ಕೆಜಿಯಷ್ಟು ತೂಕ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಬಗ್ಗೆ ವೈದ್ಯರಾದ ಡಾ.ಸಚಿನ್ ಕಥುರಿಯಾ ಮಾತನಾಡಿ, ಭಾರತದಲ್ಲಿ ಈವರೆಗೆ ಇಂತಹ ದೊಡ್ಡ ಪ್ರಮಾಣದ ರೋಗಪೀಡಿತ ಮೂತ್ರಪಿಂಡ ಹೊರತೆಗೆದ ನಿದರ್ಶನ ಇಲ್ಲ. ಇಷ್ಟು ತೂಕದ ಮೂತ್ರಪಿಂಡ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿರುವುದು ಪ್ರಪಂಚದಲ್ಲೇ ಇದು ಮೂರನೇ ಪ್ರಕರಣವಾಗಿದೆ ಎಂದು ಹೇಳಿದ್ದಾರೆ.

    ರೋಗಿಯು ನಿವೃತ್ತ ಸರ್ಕಾರಿ ಉದ್ಯೋಗಿಯಾಗಿದ್ದು, ಈ ಹಿಂದೆ 2006ರಲ್ಲಿ ಅವರಿಗೆ ಆಟೋಸೋಮಲ್ ಡಾಮಿನೆಂಟ್ ಪಾಲಿಸಿಸ್ಟಿಕ್ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಸಮಸ್ಯೆ ಬಂದರೆ ಮೂತ್ರಪಿಂಡದ ತುಂಬ ದ್ರವ ತುಂಬಿ, ಅದು ದೊಡ್ಡ ಗಾತ್ರದಲ್ಲಿ ಬೆಳೆಯುತ್ತವೆ ಮತ್ತು ಅವುಗಳು ಊದಿಕೊಳ್ಳುತ್ತವೆ. ಬಳಿಕ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಸಾಮಾನ್ಯವಾಗಿ ಈ ಸಮಸ್ಯೆ ಇರುವವರಿಗೆ 40 ವಯಸ್ಸಿಗೆ ಮೂತ್ರಪಿಂಡ ವೈಫಲ್ಯವಾಗುತ್ತದೆ.

    ಸದ್ಯ ನಾವು ರೋಗಿಯ ಎಡ ಭಾಗದ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದೇವೆ. ಬಲಗಡೆಯ ಮೂತ್ರಪಿಂಡದಲ್ಲೂ ಸಮಸ್ಯೆ ಇದೆ, ಆದರೆ ಸದ್ಯ ರೋಗಿಗೆ ಅದರಿಂದ ಯಾವುದೇ ಸಮಸ್ಯೆ ಆಗುತ್ತಿಲ್ಲ. ಒಂದು ವೇಳೆ ಬಲ ಭಾಗದ ಮೂತ್ರಪಿಂಡದಲ್ಲೂ ಸಮಸ್ಯೆ ಹೆಚ್ಚಾದರೆ ಅದನ್ನು ಕೂಡ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಬೇಕಾಗುತ್ತದೆ. ಆಗ ರೋಗಿಗೆ ಮೂತ್ರಪಿಂಡ ಕಸಿ ಮಾಡುವವರೆಗೂ ಅವರು ಸಂಪೂರ್ಣ ಡಯಾಲಿಸಿಸ್ ಮೇಲೆಯೇ ಅವಲಂಬಿಸಿರಬೇಕು ಎಂದು ವೈದ್ಯರು ಮಾಹಿತಿ ಕೊಟ್ಟಿದ್ದಾರೆ.

    ಈ ಹಿಂದೆ ವೈದ್ಯರ ತಂಡ ಬಾರೀ ತೂಕದ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಎರಡು ಪ್ರಕರಣ ನಡೆದಿತ್ತು. ಅಮೆರಿಕದಲ್ಲಿ ಓರ್ವ ರೋಗಿಯ ದೇಹದಿಂದ ಬರೋಬ್ಬರಿ 9 ಕೆಜಿ ತೂಕದ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿತ್ತು. ಬಳಿಕ ನೆದರ್‌ಲ್ಯಾಂಡ್ಸ್‌ನಲ್ಲಿ ರೋಗಿಯೋರ್ವನ ದೇಹದಲ್ಲಿದ್ದ 8.7 ಕೆಜಿ ತೂಕದ ಮೂತ್ರಪಿಂಡ ಹೊರತೆಗೆಯಲಾಗಿತ್ತು.

  • 9 ತಿಂಗಳ ಕಂದಮ್ಮನಿಗಾಗಿ ಮೂತ್ರಪಿಂಡ ದಾನ ಮಾಡಿದ ಮಹಾತಾಯಿ!

    9 ತಿಂಗಳ ಕಂದಮ್ಮನಿಗಾಗಿ ಮೂತ್ರಪಿಂಡ ದಾನ ಮಾಡಿದ ಮಹಾತಾಯಿ!

    ಮುಂಬೈ: 9 ತಿಂಗಳ ಮಗುವಿಗೆ ತಾಯಿಯ ಮೂತ್ರಪಿಂಡ ಜೋಡಣೆ ಶಸ್ತ್ರಚಿಕಿತ್ಸೆಯನ್ನು ಮುಂಬೈಯ ವೊಕಾರ್ಡ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ.

    ಪಾಲ್ಗರ್ ಜಿಲ್ಲೆಯ ಗೋಲ್ವಾಡ್ ಗ್ರಾಮದ ನಿವಾಸಿಗಳಾದ ವಿವೇಕ್ ಹಾಗೂ ನಿಶಾ ದಂಪತಿಯ 9 ತಿಂಗಳ ಮೊದಲನೇ ಗಂಡು ಮಗು ಸದ್ಯ ಆರೋಗ್ಯವಾಗಿದ್ದು, ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದೆ ಎಂದು ವೊಕಾರ್ಡ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ವೊಕಾರ್ಡ್ ಆಸ್ಪತ್ರೆಯ ಮುಖ್ಯ ವೈದ್ಯರಾದ ಅನುರಾಗ್ ಶ್ರೀಮಾಲ್, ಇದು ಭಾರತದಲ್ಲೇ ಮೊದಲ ಶಸ್ತ್ರಚಿಕಿತ್ಸೆಯಾಗಿದ್ದು, ತಜ್ಞವೈದ್ಯರಿಂದ ಸುಮಾರು 14 ಗಂಟೆಗಳ ಕಾಲ 9 ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಗೊಳಿಸಿದ್ದೇವೆ. ಮಗುವಿಗೆ ತಾಯಿಯ ಮೂತ್ರಪಿಂಡವನ್ನು ಜೋಡಣೆಮಾಡುವುದು ನಮಗೆ ಸವಾಲಿನ ಸಂಗತಿಯಾಗಿತ್ತು ಎಂದು ತಿಳಿಸಿದರು.

    ನಾವು ಸ್ವಲ್ಪ ಎಚ್ಚರ ತಪ್ಪಿದ್ದರೂ ಮಗುವಿನ ಜೀವಕ್ಕೆ ಆಪತ್ತು ಬರಬಹುದಾಗಿದ್ದರಿಂದ ತೀವ್ರ ನಿಗಾ ವಹಿಸಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಮಗು ತುಂಬಾ ಗಟ್ಟಿಯಾಗಿದ್ದು, ತನ್ನ 9ನೇ ತಿಂಗಳಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಗೆ ಸ್ಪಂದಿಸಿದೆ. ಮೂತ್ರಪಿಂಡ ಬದಲಾವಣೆಗಾಗಿ ತಾಯಿಯ ಮೂತ್ರಪಿಂಡದ ತೂಕವನ್ನು 260 ಗ್ರಾಂಗಳಿಂದ 210 ಗ್ರಾಂಗೆ ಇಳಿಸಿ ಜೋಡಿಸಲಾಗಿದೆ. ಈ ಶಸ್ತ್ರಚಿಕಿತ್ಸೆಗೆ ಮಗುವಿನ ದೇಹ ಸ್ಪಂದಿಸಿದ್ದು ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಗಳಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ದಂಪತಿಯ ಮಗು ಹುಟ್ಟಿನಿಂದಲೇ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಮಗುವಿಗೆ ಮೂತ್ರಪಿಂಡ ಕಸಿ ಮಾಡುವ ವಿಚಾರವನ್ನು ವೈದ್ಯರು ಪೋಷಕರಿಗೆ ತಿಳಿಸಿದ್ದರು. ಆದರೆ ಇಷ್ಟು ದೊಡ್ಡ ಮೊತ್ತದ ಶಸ್ತ್ರಚಿಕಿತ್ಸೆಯನ್ನು ಪೋಷಕರು ಭರಿಸುವಲ್ಲಿ ಶಕ್ತರಾಗಿರಲಿಲ್ಲ. ವೊಕಾರ್ಡ್ ಆಸ್ಪತ್ರೆಯು ಮುಂದೆ ಬಂದು ಮಗುವಿನ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದೆ.

    ಮಗುವಿಗೆ ಮೂತ್ರಪಿಂಡದ ಅವಶ್ಯಕತೆ ಹಿನ್ನೆಲೆಯಲ್ಲಿ ದಂಪತಿಗಳು ತಮ್ಮದೇ ಮೂತ್ರಪಿಂಡವನ್ನು ನೀಡಲು ಮುಂದಾಗಿದ್ದರು. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ತಾಯಿಯ ಮೂತ್ರಪಿಂಡ ಹೊಂದಾಣಿಕೆಯಾಗುತ್ತದೆ ಎಂದು ಹೇಳಿದಾಗ, ತಾಯಿಯು ತನ್ನ ಪುಟ್ಟ ಕಂದಮ್ಮನಿಗಾಗಿ ಹಿಂದೆಮುಂದು ನೋಡದೆ ಶಸ್ತ್ರಚಿಕಿತ್ಸೆಗೆ ಸಿದ್ಧರಾಗಿದ್ದರು. ಈ ಶಸ್ತ್ರಚಿಕಿತ್ಸೆಗಾಗಿ ತಮ್ಮ ತೂಕವನ್ನು ಸಹ ಇಳಿಸಿಕೊಂಡಿದ್ದರು.

  • ರಾಯಚೂರಿನ 50% ಜನರಿಗೆ ಮೂತ್ರಪಿಂಡ ಸಮಸ್ಯೆ: ಬೇಸಿಗೆಯಲ್ಲಿ ಮತ್ತಷ್ಟು ಉಲ್ಬಣ

    ರಾಯಚೂರಿನ 50% ಜನರಿಗೆ ಮೂತ್ರಪಿಂಡ ಸಮಸ್ಯೆ: ಬೇಸಿಗೆಯಲ್ಲಿ ಮತ್ತಷ್ಟು ಉಲ್ಬಣ

    -ಹೆಚ್ಚು ನೀರು ಕುಡಿಯದ ಜನರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ

    -ಬಿಸಿಲು ಹಾಗೂ ಅಶುದ್ಧ ನೀರು ಕಾಯಿಲೆಗೆ ಕಾರಣ

    -ಬೇಕರಿ, ಹೋಟೆಲ್ ಅಡುಗೆಮನೆ ಕೆಲಸಗಾರರು ಹಾಗೂ ರೈತರು ಹೆಚ್ಚು ಬಾಧಿತರು

    ರಾಯಚೂರು: ಕರ್ನಾಟಕ ರಾಜ್ಯದ ಬಿಸಿಲನಾಡು ಎಂದು ರಾಯಚೂರು ಜಿಲ್ಲೆಯನ್ನು ಕರೆಯುತ್ತಾರೆ. ನಿಜ, ಆದ್ರೆ ಆ ಬಿಸಿಲು ರಾಯಚೂರಿನ ಜನರ ಮೇಲೆ ಏನೆಲ್ಲಾ ಪರಿಣಾಮಗಳನ್ನ ಬೀರುತ್ತಿದೆ ಗೊತ್ತಾ? ಇಲ್ಲಿನ ಬಿಸಿಲಿನಿಂದಾಗಿಯೇ ಜನ ಮೂತ್ರಪಿಂಡದ ಸಮಸ್ಯೆ ಎದುರಿಸುತ್ತಿದ್ದಾರೆ. ಬೇಸಿಗೆಯ ಮೂರು ತಿಂಗಳಲ್ಲಿ ಸಾವಿರಾರು ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ರೋಗಿಗಳಲ್ಲಿ ರೈತರ ಸಂಖ್ಯೆಯೇ ಹೆಚ್ಚಾಗಿರುವುದು ದುರಂತ.

    ವೈದ್ಯರೇ ಹೇಳುವ ಹಾಗೇ ಬೇಸಿಗೆಯಲ್ಲಿ ರೋಗಿಗಳ ಸಂಖ್ಯೆ ಇತರೆ ದಿನಗಳಿಗಿಂದ ಶೇಕಡಾ 100 ರಷ್ಟು ಹೆಚ್ಚಾಗಿರುತ್ತದೆ. ಜಿಲ್ಲೆಯ ಶೇಕಡಾ 50 ರಷ್ಟು ಜನರಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ದೇಹದ ನಿರ್ಜಲೀಕರಣ. ಬೇಸಿಗೆಯಲ್ಲಿ ದೇಹದಿಂದ ಬೆವರು, ಮೂತ್ರ, ಉಸಿರಾಟದ ಮೂಲಕ ಹೆಚ್ಚು ನೀರು ಹೊರಹೋಗುತ್ತದೆ. ಹೆಚ್ಚೆಚ್ಚು ನೀರು ಕುಡಿಯದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಬೇಸಿಗೆ ಆರಂಭದಿಂದ ಪ್ರತೀ ವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಸರಿಸುಮಾರು ಮೂರದಿಂದ ನಾಲ್ಕು ಸಾವಿರ ಜನ ಮೂತ್ರಪಿಂಡ ಸಮಸ್ಯೆ ಹಾಗೂ ಕಿಡ್ನಿ ಸ್ಟೋನ್‍ನಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ರಾಯಚೂರು ಸೇರಿದಂತೆ ಹೈದ್ರಬಾದ್ ಕರ್ನಾಟಕ ಭಾಗದಲ್ಲಿ ಈ ಸಮಸ್ಯೆ ವಿಪರೀತ ಮಟ್ಟಕ್ಕೆ ಮುಟ್ಟಿದೆ.

    ಹೊಲದಲ್ಲಿ ಕೆಲಸ ಮಾಡುವ ರೈತರು, ಕೃಷಿ ಕೂಲಿ ಕಾರ್ಮಿಕರು, ಬೇಕರಿಗಳಲ್ಲಿ, ಹೋಟೆಲ್ ಅಡುಗೆ ಕೋಣೆಯಲ್ಲಿ ಕೆಲಸ ಮಾಡುವವರಲ್ಲಿ ಹಾಗೂ ಹೆಚ್ಚು ಮಾಂಸ ಪದಾರ್ಥ ಸೇವೆನೆ ಮಾಡುವವರನ್ನ ಮೂತ್ರಪಿಂಡ ಸಮಸ್ಯೆ ಕಾಡುತ್ತಿದೆ. ಕಾಲ್ಶಿಯಂ ಹಾಗೂ ಯೂರಿಕ್ ಆಸಿಡ್ ಸ್ಟೋನ್‍ಗಳು ಮೂತ್ರಪಿಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಿರ್ಲಕ್ಷ್ಯ ಮಾಡುವವರು ಮೂತ್ರಪಿಂಡಗಳನ್ನೇ ಕಳೆದುಕೊಳ್ಳುತ್ತಿದ್ದಾರೆ.

    ಬಿಸಿಲಿನ ಜೊತೆ ಗ್ರಾಮೀಣ ಭಾಗದಲ್ಲಿನ ಶುದ್ಧ ಕುಡಿಯುವ ನೀರಿನ ಕೊರತೆ ಸಹ ಕಿಡ್ನಿ ಸ್ಟೋನ್‍ಗೆ ಕಾರಣವಾಗಿದೆ. ಕೆಲ ರೋಗಿಗಳಿಗೆ ಹೊಟ್ಟೆ ನೋವು, ಜ್ವರದಂತ ಲಕ್ಷಣಗಳು ಕಾಣಿಸಿಕೊಂಡರೆ, ಇನ್ನೂ ಕೆಲವರಲ್ಲಿ ಯಾವುದೇ ಲಕ್ಷಣಗಳು ಗೋಚರಿಸದೇ ಮೂತ್ರಪಿಂಡಗಳ ಗಂಭೀರ ಸಮಸ್ಯೆ ಒಮ್ಮೆಲೆ ಎದುರಾಗುತ್ತಿದೆ ಎಂದು ಮೂತ್ರಪಿಂಡ ತಜ್ಞ ಡಾ.ತಾನಾಜಿ ಕಲ್ಯಾಣಕರ್ ಹೇಳಿದ್ದಾರೆ.

    ಅಷ್ಟೇ ಅಲ್ಲದೆ ಬಿಸಿಲೂರ ಜನರಿಗೆ ಬಿಸಿಲಿನಿಂದ ಕಿಡ್ನಿ ಸ್ಟೋನ್ ಜೊತೆ ಜೊತೆಗೆ ಸನ್ ಸ್ಟ್ರೋಕ್, ರಕ್ತದೊತ್ತಡ ಸಮಸ್ಯೆಗಳು ಇನ್ನಿಲ್ಲದಂತೆ ಕಾಡುತ್ತಿವೆ. ಬಿಸಿಲಿನ ತಾಪ ಹಾಗೂ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಹೆಚ್ಚೆಚ್ಚು ನೀರು, ತಂಪು ಪಾನೀಯ, ಎಳನೀರು ಕುಡಿಯಲು ವೈದ್ಯರು ಸಲಹೆ ನೀಡಿದ್ದಾರೆ.