Tag: ಮೂಕಾಂಬಿಕೆ

  • ಮೂಕಾಂಬಿಕೆಯ ಉತ್ಸವಕ್ಕೆ ಕೊರೊನಾ ಕರಿಛಾಯೆ

    ಮೂಕಾಂಬಿಕೆಯ ಉತ್ಸವಕ್ಕೆ ಕೊರೊನಾ ಕರಿಛಾಯೆ

    -ಕೊಲ್ಲೂರಲ್ಲಿ ಸಾಂಪ್ರದಾಯಿಕ ರಥಾರೋಹಣ ಸಂಪನ್ನ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಿಯ ದೇವಸ್ಥಾನದ ವಾರ್ಷಿಕ ರಥೋತ್ಸವಕ್ಕೆ ಕೊರೊನಾ ವೈರಸ್ ಅಡ್ಡಿಯಾಗಿದೆ. ಕರ್ನಾಟಕದಲ್ಲಿ ಕೊರೊನಾ ಹೈ ಅಲರ್ಟ್ ಇರುವುದರಿಂದ ಈ ಬಾರಿ ಅದ್ಧೂರಿ ರಥೋತ್ಸವ ನಡೆಯಲಿಲ್ಲ. ಸಾಂಪ್ರದಾಯಿಕ ಉತ್ಸವ ಮತ್ತು ರಥಾರೋಹಣ ನಡೆಸಿ ಈ ಬಾರಿ ವಾರ್ಷಿಕ ಜಾತ್ರೆಯನ್ನು ಮುಗಿಸಲಾಯಿತು.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಮೂಕಾಂಬಿಕೆಯ ಕ್ಷೇತ್ರ ದಕ್ಷಿಣ ಭಾರತದ ದೇವಿ ದೇವಸ್ಥಾನಗಳಲ್ಲಿ ಬಹಳ ಪ್ರಸಿದ್ಧಿ ಕ್ಷೇತ್ರ. ಮೂಕಾಂಬಿಕೆಯ ವಾರ್ಷಿಕ ರಥೋತ್ಸವಕ್ಕೆ ಸಾವಿರಾರು ಮಂದಿ ಸ್ಥಳೀಯ, ರಾಜ್ಯದ ಬೇರೆ ಬೇರೆ ಭಾಗದ ಮತ್ತು ಹೊರ ರಾಜ್ಯದ ಭಕ್ತರು ಸೇರುತ್ತಾರೆ. ರಾಜ್ಯದಲ್ಲಿ ಕೊರೊನಾ ಎಮರ್ಜೆನ್ಸಿ ಇರೋದ್ರಿಂದ ಸರಳವಾಗಿ ದೇವಿಯ ಉತ್ಸವ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದರು. ಅದರಂತೆ ಇಂದು ಆರಂಭದಲ್ಲಿ ದೇಗುಲದ ಒಳ ಸುತ್ತುಪೌಳಿಯಲ್ಲಿ ಬಲಿ ಉತ್ಸವ, ನೆರವೇರಿಸಲಾಯಿತು.

    ದೇವಸ್ಥಾನದ ಅರ್ಚಕರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಸುತ್ತಮುತ್ತಲಿನ ಮನೆಯವರು ಸಾಂಪ್ರದಾಯಿಕ ಉತ್ಸವದಲ್ಲಿ ಪಾಲ್ಗೊಂಡರು. ದೇವಸ್ಥಾನಕ್ಕೆ ಇಂದು ಎಂದಿನಂತೆ ಎಲ್ಲರಿಗೂ ಪ್ರವೇಶ ಇರಲಿಲ್ಲ. ಸರ್ಕಾರದ ಸೂಚನೆಯಂತೆ ಕಡಿಮೆ ಜನ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡರು. ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಿ ಆರತಿಯೆತ್ತಿ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಸಿಬ್ಬಂದಿ, ಭಕ್ತರು ನಿಲ್ಲಿಸಿದ್ದ ರಥವನ್ನು 20 ಮೀ.ನಷ್ಟು ದೂರ ಎಳೆದು ಸಾಂಪ್ರದಾಯಕ್ಕೆ ಚ್ಯುತಿ ಬಾರದಂತೆ ಉತ್ಸವ ನೆರವೇರಿಸಿದರು.

    ಭಗವದ್ಬಕ್ತರು ಮನೆಯಲ್ಲೇ ಇದ್ದು ಪ್ರಾರ್ಥನೆ ಮಾಡಿ ಭೂಮಿಗೆರಗಿದ ಕಂಟಕಗಳು ನಿವಾರಣೆಯಾದ ಮೇಲೆ ದೇವಸ್ಥಾನ ಪೂಜೆ, ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವಿನಂತಿಸಿದೆ. ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಶೆಟ್ಟಿ ಮಾತನಾಡಿ, ದೇವಸ್ಥಾನದ ಇತಿಹಾಸದಲ್ಲಿ ಹೀಗಾಗಿದ್ದಿಲ್ಲ ಎಂದು ತಿಳಿದಿದ್ದೇವೆ. ಸಂಪ್ರದಾಯ ಕಟ್ಟು ಕಟ್ಟಳೆಗೆ ಅಪಚಾರ ಆಗದಂತೆ ನಾವು ಉತ್ಸವಾದಿ ಪ್ರಕ್ರಿಯೆ ಮಾಡಿದ್ದೇವೆ. ಭಕ್ತರ ಸಹಕಾರಕ್ಕೆ ಪಬ್ಲಿಕ್ ಟಿವಿ ಮೂಲಕ ಧನ್ಯವಾದ ಅರ್ಪಿಸುತ್ತೇನೆ ಎಂದರು.

  • ಹರಕೆ ತೀರಿಸಲು ಕೊಲ್ಲೂರಿಗೆ ಆಗಮಿಸಿದ ಲಂಕಾ ಪ್ರಧಾನಿ

    ಹರಕೆ ತೀರಿಸಲು ಕೊಲ್ಲೂರಿಗೆ ಆಗಮಿಸಿದ ಲಂಕಾ ಪ್ರಧಾನಿ

    ಉಡುಪಿ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಇಂದು ಕೊಲ್ಲೂರಿಗೆ ಭೇಟಿ ನೀಡಿದ್ದಾರೆ.

    ಬೆಳಗ್ಗೆಯೇ ನೂರಾರು ಭಕ್ತರು ದೇವರ ದರ್ಶನ ಪೂಜೆ ಕೈಗೊಂಡರು. ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಆಗಮನ ಹಿನ್ನೆಲೆಯಲ್ಲಿ ಕೊಲ್ಲೂರು ದೇವಳದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭಾರತೀಯ ಸೇನೆ ಲಂಕಾ ಪ್ರಧಾನಿಗೆ ಭದ್ರತೆ ಕೊಟ್ಟಿದೆ. ದೇವಸ್ಥಾನ ಭದ್ರತೆಯ ಮೇಲೂ ನಿಗಾ ವಹಿಸಿದೆ. ಲಂಕಾ ಪ್ರಧಾನಿ ದೇವಳ ಭೇಟಿ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ.

    ಕೊಲಂಬೋ ಟು ಕೊಲ್ಲೂರು:
    ಕೊಲಂಬೋದಿಂದ ಬೆಂಗಳೂರಿಗೆ ಬಂದಿರುವ ಸಿಂಘೆ, ಅಲ್ಲಿಂದ ಮಂಗಳೂರಿಗೆ ವಿಮಾನದಲ್ಲಿ ಬಂದಿದ್ದಾರೆ. ಹೆಲಿಕಾಪ್ಟರ್ ಮೂಲಕ ಲಂಕಾ ಪ್ರಧಾನಿ ಬೈಂದೂರು ತಾಲೂಕಿನ ಅರೆ ಶೀರೂರಿಗೆ ಬಂದಿಳಿಯಬೇಕಿತ್ತು. ಉಡುಪಿಯಲ್ಲಿ ಬೆಳಗ್ಗೆಯಿಂದ ಧಾರಾಕಾರ ಮಳೆ. ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ಅಧಿಕಾರಿಗಳು ನಿರಾಕರಿಸಿದ್ದಾರೆ.

    ಹೀಗಾಗಿ ರಸ್ತೆ ಮೂಲಕ ಕೊಲ್ಲೂರಿಗೆ ತೆರಳುವಂತೆ ಸೂಚಿಸಿದ್ದಾರೆ. ಮಂಗಳೂರಿಂದ ಕೊಲ್ಲೂರು ವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುಮಾರು 130 ಕೀ.ಮಿ. ರಸ್ತೆ ಮಾರ್ಗದ ಮೂಲಕ ಪ್ರಯಾಣ ಮಾಡಲಿದ್ದಾರೆ.

    ಈ ನಡುವೆ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ನವಚಂಡಿಕಾ ಯಾಗ ಆರಂಭವಾಗಿದ್ದು, ದೇವಸ್ಥಾನದ ಋತ್ವಿಜರಿಂದ ಹೋಮದ ವಿಧಿ ವಿಧಾನ ನಡೆದಿದೆ. ವಿಶೇಷ ಪೂಜೆಯ ಜೊತೆ ಯಜ್ಞಶಾಲೆಯಲ್ಲಿ ಹೋಮ ಆರಂಭವಾಗಿದೆ. ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಮಧ್ಯಾಹ್ನ 12.30 ರ ಸುಮಾರಿಗೆ ನಡೆಯಲಿರುವ ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಲಂಕಾ ಪ್ರಧಾನಿ ನವಚಂಡಿಕಾಯಾಗದ ಹರಕೆಯನ್ನು ಈ ಹಿಂದೆಯೇ ಹೇಳಿದ್ದರು.