Tag: ಮುಸ್ಲಿಂ ಸಂಘಟನೆಗಳು

  • ಮುಸ್ಲಿಂ ಸಂಘಟನೆಗಳ ಪ್ರತಿಭಟನೆ – ಬೆಂಗಳೂರಿನ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ

    ಮುಸ್ಲಿಂ ಸಂಘಟನೆಗಳ ಪ್ರತಿಭಟನೆ – ಬೆಂಗಳೂರಿನ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ

    ಬೆಂಗಳೂರು: ದೇಶದೇಲ್ಲಡೆ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ.

    ನಗರದ ಸೂಕ್ಷ್ಮಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ ಕೆಎಸ್‍ಆರ್‌ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಹಿಜಬ್ ಸಂಘರ್ಷ ಮಧ್ಯೆ ಸಾವರ್ಕರ್ ಫೋಟೋ ವಿವಾದ – ವಿದ್ಯಾರ್ಥಿಗಳ ಮೇಲೆ ಹಲ್ಲೆ

    ನಗರದ ಯಶವಂತಪುರ ಸರ್ಕಲ್, ಗೋರಿಪಾಳ್ಯ, ಪಾದರಾಯನಪುರ, ಅಜಾದ್ ನಗರ, ಶಿವಾಜಿ ನಗರ, ನಿಲಸಂದ್ರ, ಬಕ್ಷಿ ಗಾರ್ಡನ್, ಕೆ.ಆರ್ ಮಾರ್ಕೆಟ್ ಸೇರಿದಂತೆ ಹಲವು ಕಡೆ ಬೀಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

    ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸ್ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

  • ಮಂಗ್ಳೂರಿನಲ್ಲಿ ಮುಸ್ಲಿಂ ಸಂಘಟನೆಗಳ ಶಕ್ತಿ ಪ್ರದರ್ಶನ: ನಗರದಾದ್ಯಂತ ಪೊಲೀಸ್ ಸರ್ಪಗಾವಲು

    ಮಂಗ್ಳೂರಿನಲ್ಲಿ ಮುಸ್ಲಿಂ ಸಂಘಟನೆಗಳ ಶಕ್ತಿ ಪ್ರದರ್ಶನ: ನಗರದಾದ್ಯಂತ ಪೊಲೀಸ್ ಸರ್ಪಗಾವಲು

    – ಒಂದು ಲಕ್ಷ ಜನ ಸೇರುವ ನಿರೀಕ್ಷೆ
    – 5,000 ಪೊಲೀಸರಿಂದ ಬಂದೋಬಸ್ತ್

    ಮಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆ ವಿಚಾರದಲ್ಲಿ ರಕ್ತಪಾತಕ್ಕೆ ಸಾಕ್ಷಿಯಾಗಿದ್ದ ಮಂಗಳೂರಿನಲ್ಲಿ ಮತ್ತೆ ಕದನದ ವಾತಾವರಣ ಏರ್ಪಡುತ್ತಿದೆ. ಮುಸ್ಲಿಂ ಸಂಘಟನೆಗಳು ಮಂಗಳೂರಿನಲ್ಲಿ ಮತ್ತೆ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ತಮ್ಮ ಶಕ್ತಿಪ್ರದರ್ಶನ ಮಾಡಲು ಮುಂದಾಗಿವೆ. ಸಮಾವೇಶದ ಹಿನ್ನೆಲೆ ಪೊಲೀಸರು ಮಂಗಳೂರಿನಲ್ಲಿ ಇನ್ನಿಲ್ಲದ ಕಟ್ಟೆಚ್ಚರ ವಹಿಸಿದ್ದಾರೆ.

    ಡಿಸೆಂಬರ್ 19ರ ಹಿಂಸಾಚಾರ, ಗೋಲಿಬಾರ್, ಕರ್ಫ್ಯೂ ಘಟನೆಯಿಂದ ಬೆಂದು ಹೋಗಿದ್ದ ಮಂಗಳೂರಿನಲ್ಲಿ ಮತ್ತೆ ಪೌರತ್ವ ಕಾಯ್ದೆಯ ಬಿಸಿ ಕಾಣಿಸಿಕೊಂಡಿದೆ. ವಿವಿಧ ಮುಸ್ಲಿಂ ಸಂಘಟನೆಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಪೌರತ್ವ ಬಿಸಿಯಿಂದಾಗಿ ಸಮಾವೇಶ ಶಕ್ತಿ ಪ್ರದರ್ಶನವಾಗಿ ಮಾರ್ಪಡುವ ಸಾಧ್ಯತೆಯಿದೆ.

    ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಯನ್ನು ವಿರೋಧಿಸಿ ಸಮಾವೇಶ ನಡೆಯಲಿದ್ದು, ಇದಕ್ಕಾಗಿ ನಗರದ ಹೊರವಲಯದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಯಾರ್ ಎಂಬಲ್ಲಿನ ಮೈದಾನದಲ್ಲಿ ಭಾರೀ ಸಿದ್ಧತೆ ನಡೆಸಲಾಗಿದೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ಆರ್‌ಪಿ, ಸಿಎಆರ್, ಆರ್‌ಎಎಫ್ ತುಕಡಿಗಳನ್ನು ಕರೆಸಲಾಗಿದ್ದು, ಸುಮಾರು ಐದು ಸಾವಿರ ಪೊಲೀಸರು ಬೀಡುಬಿಟ್ಟಿದ್ದಾರೆ.

    ಕಳೆದ ಬಾರಿ 144 ಸೆಕ್ಷನ್ ಉಲ್ಲಂಘಿಸಿ, ಮುಸ್ಲಿಂ ಗುಂಪು ಪ್ರತಿಭಟನೆಗೆ ಮುಂದಾಗಿದ್ದು ಹಿಂಸೆಗೆ ಕಾರಣವಾಗಿತ್ತು. ಬಳಿಕ ಹಿಂಸಾಚಾರ ನಿಗ್ರಹಕ್ಕಾಗಿ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆ ಪೊಲೀಸರ ವಿರುದ್ಧ ಭಾರೀ ಆಕ್ರೋಶವೂ ಕೇಳಿಬಂದಿತ್ತು. ಇದರಿಂದಾಗಿ ಮಂಗಳೂರು ನಗರದ ಒಳಗೆ ಪ್ರತಿಭಟನೆಗೆ ಪೊಲೀಸರು ಅವಕಾಶ ನಿರಾಕರಿಸಿದ್ದರು. ಆನಂತರ ಜಿಲ್ಲೆಯ ವಿವಿಧ ಕಡೆ ಮುಸ್ಲಿಂ ಸಂಘಟನೆಗಳು ಪ್ರತಿಭಟನಾ ಸಮಾವೇಶ ಏರ್ಪಡಿಸಿ, ಮೂಲೆ ಮೂಲೆಯ ಯುವ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದವು. ಇದೀಗ ಕೊನೆಯದಾಗಿ ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ಬೃಹತ್ ಮೈದಾನದಲ್ಲಿ ಸಮಾವೇಶ ಏರ್ಪಡಿಸಿದ್ದು ದಕ್ಷಿಣ ಕನ್ನಡ, ಉಡುಪಿಯಿಂದಲೂ ಜನ ಆಗಮಿಸಲಿದ್ದಾರೆ.

    ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರು ಮಂಗಳೂರಿನಲ್ಲೇ ಬೀಡು ಬಿಟ್ಟಿದ್ದು, ಸಮಾವೇಶ ನಡೆಯುವ ಮೈದಾನದ ಭಧ್ರತೆಯನ್ನು ಪರಿಶೀಲಿಸಿದ್ದಾರೆ. ಮೈದಾನದ ಪಾರ್ಕಿಂಗ್, ವೇದಿಕೆ, ಭಧ್ರತೆ ಬಗ್ಗೆ ಮಂಗಳೂರು ಕಮಿಷನರ್ ಪಿ.ಎಸ್.ಹರ್ಷ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಕೇಂದ್ರ ಅರೆಸೇನಾ ಪಡೆಗಳನ್ನು ಕರೆಸಿಕೊಳ್ಳಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಎಲ್ಲಾ ಕ್ರಮ ಕೈಗೊಂಡಿದ್ದಾಗಿ ಹೇಳಿದ್ದಾರೆ.

    ಒಂದುಕಡೆ ಶಕ್ತಿ ಪ್ರದರ್ಶನ, ಇನ್ನೊಂದೆಡೆ ಕೇಂದ್ರ ಸರ್ಕಾರದ ವಿರುದ್ಧ ಒತ್ತಡ ಹೇರುವ ನಿಟ್ಟಿನಲ್ಲಿ ಪ್ರತಿಭಟನಾ ಸಮಾವೇಶ ನಡೆಯುತ್ತಿದೆ. ಹೀಗಾಗಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಪೊಲೀಸರಿಗೆ ಸವಾಲಾಗಲಿದೆ ಎಂಬ ಮಾತು ಕೇಳಿ ಬಂದಿದೆ.

  • ಪೌರತ್ವ ಮಸೂದೆ ವಿರೋಧಿಸಿ ಮಂಗ್ಳೂರಿನಲ್ಲಿ ಮತ್ತೆ ಬೃಹತ್ ಪ್ರತಿಭಟನೆ

    ಪೌರತ್ವ ಮಸೂದೆ ವಿರೋಧಿಸಿ ಮಂಗ್ಳೂರಿನಲ್ಲಿ ಮತ್ತೆ ಬೃಹತ್ ಪ್ರತಿಭಟನೆ

    ಮಂಗಳೂರು: ಪೌರತ್ವ ಮಸೂದೆ ಜಾರಿ ವಿರೋಧಿಸಿ ಮಂಗಳೂರಿನಲ್ಲಿ ಡಿಸೆಂಬರ್ 19ರಂದು ನಡೆದಿದ್ದ ಪ್ರತಿಭಟನೆ ಗೋಲಿಬಾರ್ ವರೆಗೂ ತಿರುಗಿದ್ದು ಎಲ್ಲರಿಗೂ ತಿಳಿದಿದೆ. ಇದೀಗ ಮುಸ್ಲಿಂ ಸೆಂಟ್ರಲ್ ಕಮಿಟಿ ಜನವರಿ 4ರಂದು ನೆಹರು ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸುವುದಕ್ಕೆ ಮುಂದಾಗಿದೆ.

    ಈ ನಡುವೆ ಜನವರಿ 12ರಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮಸೂದೆ ಪರವಾಗಿ ಜಾಗೃತಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಆದರೆ ಈ ಎರಡು ಕಾರ್ಯಕ್ರಮಗಳು ನಡೆದರೆ ಮತ್ತೆ ಕಾನೂನು ಸುವ್ಯವಸ್ಥೆ ಹದಗೆಡುತ್ತೆ ಎಂದು ಸ್ವತಃ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರೇ ಮಂಗಳವಾರ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸುವ್ಯವಸ್ಥೆ ಸಭೆ ನಡೆಸಿದರು. ಇದನ್ನೂ ಓದಿ: ಗೋಲಿಬಾರ್‌ನಲ್ಲಿ ಸಾವನ್ನಪ್ಪಿದ ಇಬ್ಬರ ಮೇಲೂ ಎಫ್‍ಐಆರ್ ದಾಖಲು

    ಪೊಲೀಸ್ ಅಧಿಕಾರಿಗಳು, ಸರ್ವ ಪಕ್ಷಗಳ ಪ್ರಮುಖರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಎಂಟು ಶಾಸಕರು, ಸಂಘಟನೆ ಪ್ರಮುಖರ ಜೊತೆ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಗೃಹಸಚಿವರು ಕಾರ್ಯಕ್ರಮ ಮುಂದೂಡುವಂತೆ ಎರಡು ಸಂಘಟನೆಗಳಲ್ಲಿ ಮನವಿ ಮಾಡಿದ್ದೇವೆ. ಕಾನೂನು ಸುವ್ಯವಸ್ಥೆಗೆ ತೊಂದರೆ ಆಗದಂತೆ ಕಾರ್ಯಕ್ರಮ ಮಾಡುತ್ತೇವೆ ಎಂದು ಎರಡು ಕಡೆಯವರು ಒಪ್ಪಿಕೊಂಡಿದ್ದು, ಕಾನೂನು ಸುವ್ಯವಸ್ಥೆ ಅಡಿಯಲ್ಲಿ ತೀರ್ಮಾನ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಇದನ್ನೂ ಓದಿ: ಮಂಗ್ಳೂರು ಗಲಭೆಗೆ ಮೊದಲೇ ಪ್ಲಾನ್- ಗೂಡ್ಸ್ ಆಟೋದಲ್ಲಿ ಕಲ್ಲು ತಂದಿದ್ದ ಪ್ರತಿಭಟನಾಕಾರರು

    ಇದೇ ಸಂದರ್ಭ ಮಾತನಾಡಿದ ಶಾಸಕ ಯು.ಟಿ ಖಾದರ್, ಜನವರಿ 4ರಂದು ಮುಸ್ಲಿಂ ಸಂಘಟನೆ ಪ್ರತಿಭಟನೆಗೆ ತೀರ್ಮಾನಿಸಿವೆ. ಜನವರಿ 12ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಿಎಎ ಸಮರ್ಥನೆ ಮಾಡುವ ಸಭೆ ನಡೆಯಲಿದೆ. ಎರಡೂ ಕಾರ್ಯಕ್ರಮವನ್ನು ಸಚಿವರು ಪರಿಶೀಲಿಸುತ್ತೇವೆ ಎಂದು ಹೇಳಿದರು.

  • ಪೌರತ್ವ ಕಾಯ್ದೆ ವಿರೋಧಿಸಿ ಕೇಂದ್ರದ ವಿರುದ್ಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ

    ಪೌರತ್ವ ಕಾಯ್ದೆ ವಿರೋಧಿಸಿ ಕೇಂದ್ರದ ವಿರುದ್ಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ

    ಯಾದಗಿರಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಯಾದಗಿರಿ ನಗರದ ಗಾಂಧಿ ವೃತ್ತದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದರು.

    ಗಾಂಧಿ ಚೌಕ್‍ನಲ್ಲಿ ಜಮಾಯಿಸಿದ ನೂರಾರು ಮುಸ್ಲಿಂ ಯುವಕರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಬಾರದು ಎಂದು ಆಗ್ರಹಿಸಿದರು. ಪೌರತ್ವ ಕಾಯ್ದೆ ದೇಶದ ಹಿತಾಸಕ್ತಿ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ದೇಶದ ಜಾತ್ಯಾತೀತ ತತ್ವವನ್ನು ನಾಶ ಮಾಡುವ ಕಾಯ್ದೆಯನ್ನು ಯಾರು ಬೆಂಬಲಿಸುವುದಿಲ್ಲ ಎಂದು ಹೇಳಿದರು.

    ಪ್ರಜೆಗಳನ್ನು ಧರ್ಮ, ನಂಬಿಕೆಗಳ ನೆಲೆಯಲ್ಲಿ ವಿಭಜಿಸುವ ಕಾಯ್ದೆಗೆ ನಮ್ಮ ವಿರೋಧ ಇದೆ. ಕೂಡಲೇ ಕಾಯ್ದೆ ವಾಪಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆ ನೀಡಿದರು.

    ಈ ವೇಳೆ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಕೆಂಡಾಮಂಡಲವಾದ ಘಟನೆ ಸಹ ನಡೆಯಿತು. ಈ ವಿಚಾರಕ್ಕಾಗಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು, ಸ್ಥಳದಲ್ಲಿ ಕೆಲ ಹೊತ್ತು ಉದ್ವಿಗ್ನ ವಾತಾವರಣ ಸಹ ಏರ್ಪಟಿತ್ತು.

    ಪೌರತ್ವ ತಿದ್ದುಪಡಿ ಮಸೂದೆಯನ್ನು ಡಿಸೆಂಬರ್ 9 ರಂದು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ್ದು, 311 ಮತಗಳಿಂದ ಪಾಸ್ ಸಹ ಆಗಿತ್ತು. ಆದರೆ ಅಂದು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಭಾರೀ ಗದ್ದಲ ಎಬ್ಬಿಸಿದ್ದವು. ಈ ವೇಳೆ ಎಐಎಂಐಎಂ ಪಕ್ಷದ ನಾಯಕ ಅಸಾದುದ್ದಿನ್ ಓವೈಸಿ ಮಸೂದೆಯ ಪ್ರತಿಯನ್ನೇ ಹರಿದು ಹಾಕುವ ಮೂಲಕ ತೀವ್ರ ಚರ್ಚೆಗೆ ಕಾರಣರಾಗಿದ್ದರು. ಇದಾದ ಬಳಿಕ ಮಸೂದೆ ರಾಜ್ಯಸಭೆಯಲ್ಲೂ ಪಾಸ್ ಆಗಿತ್ತು. ಮಸೂದೆಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅಂಕಿತ ಹಾಕಿದ್ದು, ಶುಕ್ರವಾರ ಮಧ್ಯರಾತ್ರಿಯಿಂದಲೇ ಕಾಯ್ದೆ ಜಾರಿಗೆ ಬಂದಿತ್ತು. ಆ ಬಳಿಕ ದೇಶಾದ್ಯಂತ ಪರ ವಿರೋಧ ಚರ್ಚೆಗಳಾಗುತ್ತಿದ್ದು, ಹಲವೆಡೆ ಪ್ರತಿಭಟನೆಗಳು ಕೂಡ ನಡೆಯುತ್ತಿವೆ.