Tag: ಮುಸ್ಲಿಂ ಬೋರ್ಡ್‌

  • ವಕ್ಫ್ ಬೋರ್ಡ್ ವಿರುದ್ಧ ತಿರುಗಿ ಬಿದ್ದ ಅಥಣಿಯ 60 ಮುಸ್ಲಿಂ ಕುಟುಂಬಗಳು

    ವಕ್ಫ್ ಬೋರ್ಡ್ ವಿರುದ್ಧ ತಿರುಗಿ ಬಿದ್ದ ಅಥಣಿಯ 60 ಮುಸ್ಲಿಂ ಕುಟುಂಬಗಳು

    – ನೋಟಿಸ್‌ ರದ್ದು ಪಡಿಸದೇ ಇದ್ದರೆ ಅಹೋರಾತ್ರಿ ಧರಣಿಯ ಎಚ್ಚರಿಕೆ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ (Athani) ತಾಲೂಕಿನ ಅನಂತಪುರ ಗ್ರಾಮದಲ್ಲಿ ವಕ್ಫ್ ಬೋರ್ಡ್ (Waqf Board) ವಿರುದ್ಧ ಈಗ ಮುಸ್ಲಿಂ ಸಮುದಾಯವೇ (Muslim Community) ತಿರುಗಿಬಿದ್ದಿದೆ.

    ಅನಂತಪುರ ಗ್ರಾಮದ ದರ್ಗಾದಲ್ಲಿ ಸಭೆ ಮಾಡಿದ ರೈತರು, ಕಾಗವಾಡ ಹಾಗೂ ಅಥಣಿ ಶಾಸಕರಿಗೆ ಬರುವ ನವೆಂಬರ್‌ 25ರ ಒಳಗಾಗಿ ಅನಂತಪುರ, ಬಳ್ಳಿಗೇರಿ ಗ್ರಾಮದ 60 ಕ್ಕೂ ಅಧಿಕ ಜನ ರೈತರ ಜಮೀನಿನ (Farmers Land) ಪಹಣಿಯಲ್ಲಿ ನೊಂದಣಿಯಾದ ವಕ್ಫ್‌ ಹೆಸರು ತೆರವುಗೊಳಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸಿ ಹೋರಾಟ ಮಾಡುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಬಳ್ಳಾರಿಯಲ್ಲೂ ವಕ್ಫ್ ವಿವಾದ – ರೈತರ ಪಿತ್ರಾರ್ಜಿತ ಆಸ್ತಿಗೆ ನೋಟಿಸ್‌

     

    60ಕ್ಕೂ ಹೆಚ್ಚು ಮುಸ್ಲಿಂ ಹಾಗೂ ಇನ್ನುಳಿದ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. 2018 ರಲ್ಲಿ ರೈತರ ಜಾಗದ ಪಹಣಿಯಲ್ಲಿ ಇದ್ದಕ್ಕಿದ್ದಂತೆ ವಕ್ಫ್ ಎಂದು ಸೇರ್ಪಡೆಯಾಗಿದೆ ಎಂದು ದೂರಿದ್ದಾರೆ. ವಕ್ಫ್ ಹೆಸರು ಸೇರ್ಪಡೆಯಿಂದ ಸಾಲ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರ ಯೋಜನೆಯಿಂದ ನಾವು ವಂಚಿತರಾಗಿದ್ದೇವೆ. ಆದಷ್ಟು ಬೇಗನೆ ಪಹಣಿಯಲ್ಲಿ ವಕ್ಫ್ ಹೆಸರು ತೆರವು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಇಲ್ಲಿಯವರೆಗೆ ತಹಶೀಲ್ದಾರ್ ಕಚೇರಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಅವಧಿಯಲ್ಲಿ ನೀಡಲಾದ ನೋಟಿಸ್ ಮರಳಿ ಪಡೆಯಲು ತಿಳಿಸಿದ್ದಾರೆ. ಆದರೆ ಈ ಹಿಂದೆ ನೋಟಿಸ್‌ ಬಂದಿರುವ ನಮ್ಮ ಪಾಡೇನು? ನಾವು ಯಾರನ್ನು ಕೇಳಬೇಕು? ನಮಗೆ ನ್ಯಾಯ ಕೊಡಿಸುವವರು ಯಾರು ಎಂದು ಪ್ರಶ್ನಿಸಿದರು.

    ಸಭೆಯಲ್ಲಿ ಅಥಣಿ ಹಾಗೂ ಕಾಗವಾಡ ತಾಲೂಕಿನ ಅನೇಕ ಗ್ರಾಮಗಳ 60 ಕ್ಕೂ ಅಧಿಕ ಜನ ರೈತರು ಸಭೆ ಮಾಡಿ ನ. 25 ರವರೆಗೆ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಅವರಿಗೆ ಗಡುವು ನೀಡಿದ್ದಾರೆ. ಇಬ್ಬರು ಶಾಸಕರು ಸ್ಪಂದಿಸದೇ ಇದ್ದರೆ ಅಹೋರಾತ್ರಿ ಧರಣಿ ಮಾಡುವುದಾಗಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

     

  • ಮುಸ್ಲಿಂ ಮಹಿಳೆ ವಿಚ್ಚೇದನ ಜೀವನಾಂಶಕ್ಕೆ ಅರ್ಹಳು: ಸುಪ್ರೀಂ ತೀರ್ಪು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ ಎಂದ ಮುಸ್ಲಿಂ ಬೋರ್ಡ್‌

    ಮುಸ್ಲಿಂ ಮಹಿಳೆ ವಿಚ್ಚೇದನ ಜೀವನಾಂಶಕ್ಕೆ ಅರ್ಹಳು: ಸುಪ್ರೀಂ ತೀರ್ಪು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ ಎಂದ ಮುಸ್ಲಿಂ ಬೋರ್ಡ್‌

    – ಸುಪ್ರೀಂ ತೀರ್ಪನ್ನು ಪ್ರಶ್ನಿಸಲು ಮುಂದಾದ AIMPLB

    ನವದೆಹಲಿ: ಮುಸ್ಲಿಂ ಮಹಿಳೆಯೂ ವಿಚ್ಚೇದನ ಜೀವನಾಂಶ ಪಡೆಯಲು ಅರ್ಹಳು ಎಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ (Supreme Court) ಆದೇಶವನ್ನು ಪ್ರಶ್ನಿಸುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಹೇಳಿದೆ.

    ಎಐಎಂಪಿಎಲ್‌ಬಿ ಭಾನುವಾರ ತನ್ನ ಕಾರ್ಯಕಾರಿ ಸಮಿತಿಯ ಸಭೆ ನಡೆಸಿ ಮುಸ್ಲಿಂ ಮಹಿಳೆಯರಿಗೆ ಜೀವನಾಂಶಕ್ಕೆ ಸಂಬಂಧಿಸಿದಂತೆ (Supreme Court verdict on Muslim women’s Maintenance) ಸುಪ್ರೀಂ ನೀಡಿದ ತೀರ್ಪು ಇಸ್ಲಾಮಿಕ್ ಕಾನೂನಿಗೆ (ಷರಿಯಾ) ವಿರುದ್ಧವಾಗಿದೆ ಎಂದು ನಿರ್ಣಯವನ್ನು ಅಂಗೀಕರಿಸಿದೆ. ಈ ನಿರ್ಧಾರವನ್ನು ರದ್ದುಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಅನ್ವೇಷಿಸಲು ಅದರ ಅಧ್ಯಕ್ಷರಿಗೆ ಅಧಿಕಾರ ನೀಡಿದೆ. ಇದರೊಂದಿಗೆ ಉತ್ತರಾಖಂಡದಲ್ಲಿ ಜಾರಿಯಾಗಿರುವ ಏಕರೂಪದ ನಾಗರಿಕ ಸಂಹಿತೆ ಕಾಯ್ದೆಯನ್ನು (Uniform Civil Code) ಉತ್ತರಾಖಂಡ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಮಂಡಳಿ ನಿರ್ಧರಿಸಿದೆ.

    ಸಭೆಯ ನಂತರ ಎಐಎಂಪಿಎಲ್‌ಬಿ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ವಿಚ್ಛೇದನವು ಅತ್ಯಂತ ಅಸಹ್ಯಕರ ಎಂದು ಪವಿತ್ರ ಪ್ರವಾದಿ ಉಲ್ಲೇಖಿಸಿದ್ದಾರೆ. ಆದ್ದರಿಂದ ವಿವಾಹವನ್ನು ಮುಂದುವರಿಸುವುದು ಉತ್ತಮ. ಹೀಗಿದ್ದರೂ ವೈವಾಹಿಕ ಜೀವನ ನಿರ್ವಹಣೆ ಕಷ್ಟವಾಗಿದ್ದರೆ ವಿಚ್ಛೇದನವನ್ನು ಮನುಕುಲಕ್ಕೆ ಪರಿಹಾರವಾಗಿ ಸೂಚಿಸಲಾಗಿದೆ ಎಂದು ಕುರಾನ್‌ (Quran) ಹೇಳಿದೆ ಎಂದು ತಿಳಿಸಿದೆ. ಇದನ್ನೂ ಓದಿ: 46 ವರ್ಷಗಳ ಬಳಿಕ ತೆರೆದ ಪುರಿ ಜಗನ್ನಾಥ ‘ರತ್ನ ಭಂಡಾರ’ದ ಬಾಗಿಲು

    ವಿಚ್ಚೇದನದಿಂದ ಯಶಸ್ವಿಯಾಗಿ ಹೊರಬಂದ ಮಹಿಳೆಯರಿಗೆ ಈ ತೀರ್ಪು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.

    ಸಂವಿಧಾನದ 25ನೇ ವಿಧಿ ಪ್ರಕಾರ ಎಲ್ಲಾ ಧರ್ಮಗಳು ತಮ್ಮ ಧರ್ಮವನ್ನು ಆಚರಿಸುವ ಹಕ್ಕನ್ನು ಹೊಂದಿವೆ. ಇದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಮೂಲಭೂತ ಹಕ್ಕು. ನಮ್ಮ ಬಹು-ಧಾರ್ಮಿಕ ಮತ್ತು ಬಹು-ಸಾಂಸ್ಕೃತಿಕ ದೇಶದಲ್ಲಿ ಏಕರೂಪದ ನಾಗರೀಕ ಸಂಹಿತೆ ಅಪ್ರಸ್ತುತ. ಇದನ್ನು ಜಾರಿಗೊಳಿಸುವ ಯಾವುದೇ ಪ್ರಯತ್ನಗಳು ರಾಷ್ಟ್ರದ ಸ್ಫೂರ್ತಿ ಮತ್ತು ಅಲ್ಪಸಂಖ್ಯಾತರಿಗೆ ಖಾತರಿಪಡಿಸಿದ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಸುಪ್ರೀಂ ಕೋರ್ಟ್‌ ಹೇಳಿದ್ದೇನು?
    ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್​ 125ರ ಅಡಿ ಮುಸ್ಲಿಂ ಮಹಿಳೆಯೂ ವಿಚ್ಚೇದನ ಜೀವನಾಂಶ ಪಡೆಯಲು ಅರ್ಹಳು ಎಂದು ಸುಪ್ರೀಂ ನ್ಯಾ. ಬಿವಿ ನಾಗರತ್ನ ಮತ್ತು ನ್ಯಾ. ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಹೇಳಿತ್ತು. ವಿಚ್ಛೇದಿತ ಮಹಿಳೆಯೂ ತನ್ನ ಪರಿತ್ಯಕ್ತ ಪತಿಯಿಂದ ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶವನ್ನು ಕೋರಬಹುದು. ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ-1986ರ ನಿಯಮವು ಈ ಸೆಕ್ಷನ್‌ಗೆ ಅನ್ವಯವಾಗುವುದಿಲ್ಲ ಎಂದು ಹೇಳಿತ್ತು.