Tag: ಮುಸ್ಲಿಂ ದಂಪತಿ

  • ಮಹಿಳೆಯೊಬ್ಬರ ಮಗುವನ್ನು ಮುಸ್ಲಿಂ ದಂಪತಿಗೆ ನೀಡಿದ್ದಕ್ಕೆ ಹಿಂದೂ ಸಂಘಟನೆಯಿಂದ ಪ್ರತಿಭಟನೆ – ಆಸ್ಪತ್ರೆ ಸೀಲ್

    ಮಹಿಳೆಯೊಬ್ಬರ ಮಗುವನ್ನು ಮುಸ್ಲಿಂ ದಂಪತಿಗೆ ನೀಡಿದ್ದಕ್ಕೆ ಹಿಂದೂ ಸಂಘಟನೆಯಿಂದ ಪ್ರತಿಭಟನೆ – ಆಸ್ಪತ್ರೆ ಸೀಲ್

    ಲಕ್ನೋ: ಮಹಿಳೆಯೊಬ್ಬರು ಜನ್ಮ ನೀಡಿದ ನವಜಾತ ಶಿಶುವನ್ನು ಮತ್ತೊಂದು ದಂಪತಿಗೆ ಹಸ್ತಾಂತರಿಸಿದ ಆರೋಪದ ಮೇಲೆ ಶಹಜಹಾನ್‌ಪುರದ ಖಾಸಗಿ ಆಸ್ಪತ್ರೆಯನ್ನು ಸ್ಥಳೀಯ ಅಧಿಕಾರಿಗಳು ಸೀಲ್ ಮಾಡಿದ್ದಾರೆ.

    ಮಹಿಳೆಯೊಬ್ಬರ ಶಿಶುವನ್ನು ಮುಸ್ಲಿಂ ದಂಪತಿಗೆ ನೀಡಲಾಗಿತ್ತು. ಇದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್‌ (Vishwa Hindu Parishad) ಪ್ರತಿಭಟನೆ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ನೋಂದಣಿಯಾಗದ ಕಾರಣ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಡಾ.ಆರ್.ಕೆ.ಗೌತಮ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹಿಮಾಂತ ಬಿಸ್ವಾ ಶರ್ಮಾ ರ‍್ಯಾಲಿಯಲ್ಲಿ ಮೈಕ್ ಕಿತ್ತುಕೊಂಡ ಅಪರಿಚಿತ ವ್ಯಕ್ತಿ – ವೀಡಿಯೋ ವೈರಲ್

    ನಿಗೋಹಿ ಪೊಲೀಸ್ ಠಾಣೆ ವ್ಯಾಪ್ತಿಯ ಟ್ರಾಲೋಕ್‌ಪುರ ಗ್ರಾಮದ ನಿವಾಸಿ ಸಂಗೀತಾ ಬುಧವಾರ ರಾತ್ರಿ ಹೆರಿಗೆ ನೋವಿನಿಂದ ಶಹಜಹಾನ್‌ಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಸಂಜಯ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.

    ಇಲ್ಲಿ ಸಂಗೀತಾ ಎಂಬ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸಂಗೀತಾ ಅವರಿಗೆ ಈಗಾಗಲೇ ಐದು ಹೆಣ್ಣು ಮಕ್ಕಳಿರುವುದರಿಂದ ಆರನೆಯ ಮಗುವನ್ನು ನೋಡಿಕೊಳ್ಳಲು ಅಥವಾ ಆಸ್ಪತ್ರೆಯ ಶುಲ್ಕವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ಆ ಮಗುವನ್ನು ಮುಸ್ಲಿಂ ದಂಪತಿಗೆ ಹಸ್ತಾಂತರಿಸಲಾಗಿತ್ತು ಎಂದು ಆಸ್ಪತ್ರೆಯ ಮಾಲೀಕ ಡಾ. ಅಶೋಕ್ ರಾಥೋಡ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಧರಿಸಿದ್ದ 41 ಸಾವಿರ ರೂ.ನ ಟೀಶರ್ಟ್ ಕುರಿತು ಬಿಜೆಪಿ ವ್ಯಂಗ್ಯ

    ವಿಷಯ ತಿಳಿದ ನಂತರ ಹಿಂದೂ ಸಂಘಟನೆಯ ಮುಖಂಡ ರಾಜೇಶ್ ಅವಸ್ತಿ ಗುರುವಾರ ಸಂಜೆ ನಿಗೋಹಿ ಪೊಲೀಸ್ ಠಾಣೆಗೆ ಆಗಮಿಸಿ ಆಸ್ಪತ್ರೆ ಮಾಲೀಕನ ಪ್ರತಿಕೃತಿಯನ್ನು ಸುಟ್ಟುಹಾಕಿದ್ದರು. ಘಟನೆಯ ಬಗ್ಗೆ ತಿಳಿದ ತಕ್ಷಣ ನಿಗೋಹಿಯ ಖಾಸಗಿ ಆಸ್ಪತ್ರೆಗೆ ಹೆಚ್ಚುವರಿ ಸಿಎಂಒ ಡಾ.ರೋಹ್ತಾಸ್ ನೇತೃತ್ವದ ತಂಡವನ್ನು ಕಳುಹಿಸಿದ್ದೇವೆ ಎಂದು ಸಿಎಂಒ ಗೌತಮ್ ಹೇಳಿದ್ದಾರೆ. ಆದರೆ ಅಷ್ಟರಲ್ಲಿ ಆಸ್ಪತ್ರೆಯ ಮಾಲೀಕ ಪರಾರಿಯಾಗಿದ್ದ.

    ದಾಖಲಾತಿ ಇಲ್ಲದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ. ಹೆಚ್ಚುವರಿಯಾಗಿ ಪ್ರಕರಣದ ತನಿಖೆಗೆ ತಂಡವನ್ನು ರಚಿಸಲಾಗಿದೆ. ಗುರುವಾರ ಆಸ್ಪತ್ರೆ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಹಿಡಿಯುವ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾಕು ಮಗಳನ್ನ ಹಿಂದೂ ಯುವಕನೊಂದಿಗೆ ಮದ್ವೆ ಮಾಡಿದ ಮುಸ್ಲಿಂ ದಂಪತಿ

    ಸಾಕು ಮಗಳನ್ನ ಹಿಂದೂ ಯುವಕನೊಂದಿಗೆ ಮದ್ವೆ ಮಾಡಿದ ಮುಸ್ಲಿಂ ದಂಪತಿ

    – ಪೋಷಕರಿಲ್ಲದೇ ಅನಾಥಳಾಗಿದ್ದಾಗ ದತ್ತು ಪಡೆದಿದ್ದ ದಂಪತಿ

    ತಿರುವನಂತಪುರಂ: ಮುಸ್ಲಿಂ ದಂಪತಿ ತಮ್ಮ ಸಾಕು ಮಗಳನ್ನು ಸ್ವಂತ ಮಗಳಂತೆ ಸಾಕಿ-ಸಲಹಿದ್ದರು. ಕೊನೆಗೆ ಆಕೆಯ ಇಷ್ಟದಂತೆ ಹಿಂದೂ ಹುಡುಗನ ಜೊತೆಯಲ್ಲಿಯೇ ವಿವಾಹ ಮಾಡಿರುವ ಅಪರೂಪದ ಕೋಮು ಸೌಹಾರ್ದತೆಯ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.

    ಅಬ್ದುಲ್ಲಾ ಮತ್ತು ಖದೀಜಾ ಮುಸ್ಲಿಂ ದಂಪತಿ ತಮ್ಮ ಸಾಕು ಮಗಳು ರಾಜೇಶ್ವರಿಗೆ ಹಿಂದೂ ಹುಡುಗನ ಜೊತೆ ವಿವಾಹ ಮಾಡಿದ್ದಾರೆ. ಕೇರಳದ ಭಾಗವತಿ ದೇವಸ್ಥಾನದಲ್ಲಿ ಭಾನುವಾರ ಈ ವಿವಾಹ ಸಮಾರಂಭ ನಡೆದಿದೆ. ಮುಸ್ಲಿಂ ದಂಪತಿಯ ಮಗಳು ರಾಜೇಶ್ವರಿ ಹಿಂದೂ ಸಂಪ್ರದಾಯದಂತೆ ವಿಷ್ಣು ಪ್ರಸಾದ್ ಜೊತೆ ಮದುವೆಯಾಗಿದ್ದಾಳೆ. ಇದನ್ನೂ ಓದಿ: ಪ್ರಿಯತಮೆಗೆ ಕ್ಯಾನ್ಸರ್- MA ಕನಸು ಬಿಟ್ಟು ದಿನ ಕೂಲಿ ಕೆಲಸಗಾರನಾದ

    ಈ ಅಪರೂಪದ ಮದುವೆಗೆ ಹಿಂದೂ ಮತ್ತು ಮುಸ್ಲಿಂ ಕುಟುಂಬದವರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ವಧು ರಾಜೇಶ್ವರಿ ತಂದೆ, ಅಬ್ದುಲ್ಲಾ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮೃತಪಟ್ಟಿದ್ದರು. ಆಕೆಯ ತಾಯಿಯೂ ಕೂಡ ರಾಜೇಶ್ವರಿ ಮಗುವಾಗಿದ್ದಾಗ ಸಾವನ್ನಪ್ಪಿದ್ದರು. ಕೊನೆಗೆ ರಾಜೇಶ್ವರಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದಳು. ಕೊನೆಗೆ ಅಬ್ದುಲ್ಲಾ ಮತ್ತು ಖದೀಜಾ ರಾಜೇಶ್ವರಿಯನ್ನು ದತ್ತು ಪಡೆದರು.

    ರಾಜೇಶ್ವರಿ, ಅಬ್ದುಲ್ಲಾ ಮತ್ತು ಖದೀಜಾ ಅವರ ಮೂವರು ಗಂಡು ಮಕ್ಕಳಾದ ಶಮೀಮ್, ನಜೀಬ್ ಮತ್ತು ಶೆರೀಫ್ ಅವರೊಂದಿಗೆ ಬೆಳೆದಿದ್ದಳು. ಮುಸ್ಲಿಂ ದಂಪತಿ ಸಾಕು ಮಗಳನ್ನು ಚೆನ್ನಾಗಿ ಸಾಕಿ, ಶಿಕ್ಷಣವನ್ನೂ ಕೊಡಿಸಿದ್ದರು. ಕೊನೆಗೆ ಆಕೆಯ ಇಷ್ಟದಂತೆ ಹಿಂದೂ ಹುಡುಗನ ಜೊತೆ ವಿವಾಹ ಕೂಡ ಮಾಡಿಸಿದ್ದಾರೆ.

    ಜಾತಿ, ಧರ್ಮವನ್ನು ಮೀರಿ ಕೇರಳದ ಕಾಯಂಕುಲಂನ ಮಸೀದಿಯಲ್ಲಿ ರಾಜೇಶ್ವರಿ ಮತ್ತು ವಿಷ್ಣು ಪ್ರಸಾದ್ ಜೋಡಿಯ ಹಿಂದೂ ವಿವಾಹ ಸಮಾರಂಭವನ್ನು ಆಯೋಜಿಸಿತ್ತು.

  • ಮೋದಿ ಮಂದಿರ ನಿರ್ಮಾಣಕ್ಕೆ ಮುಂದಾದ ಮುಸ್ಲಿಂ ದಂಪತಿ

    ಮೋದಿ ಮಂದಿರ ನಿರ್ಮಾಣಕ್ಕೆ ಮುಂದಾದ ಮುಸ್ಲಿಂ ದಂಪತಿ

    ಲಕ್ನೋ: ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಮೋದಿ ಮಂದಿರ ಎಂಬ ಮ್ಯೂಸಿಯಂ ಕಟ್ಟಲು ಮುಜಪ್ಫರ್‍ನಗರದ ಮುಸ್ಲಿಂ ದಂಪತಿ ತೀರ್ಮಾನಿಸಿದ್ದಾರೆ.

    ಬಿಜೆಪಿಯ ಕಾರ್ಯಕರ್ತರಾದ ಸಮರ್ ಗಜ್ನಿ ಮತ್ತು ನಗರದ ಅಲ್ಪಸಂಖ್ಯಾತ ಬಿಜೆಪಿ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆಯಾದ ಸಮರ್ ಪತ್ನಿ ರೂಬಿ ಗಜ್ನಿ ಸೇರಿದಂತೆ ಹಲವು ಕಾರ್ಯಕರ್ತರು ಮೋದಿ ಮಂದಿರ ಕಟ್ಟಲು ಅನುಮತಿ ಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಸಮರ್ ಗಜ್ನಿ, ಪ್ರಧಾನಿ ಮೋದಿ ಅವರು ದೇಶದಲ್ಲಿ ಉತ್ತಮವಾದ ಆಡಳಿತ ನಡೆಸಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಕಂಟಕವಾದ ತ್ರಿವಳಿ ತಲಾಖ್ ಅನ್ನು ರದ್ದು ಮಾಡಿದ್ದಾರೆ. ಹೊರ ದೇಶಗಳಲ್ಲೂ ಮೋದಿ ಅವರ ಸಾಧನೆ ಗುರುತಿಸಿ ಪ್ರಶಸ್ತಿ ನೀಡುತ್ತಿದ್ದಾರೆ. ಅದ್ದರಿಂದ ನಾವು ನಮ್ಮ ಪ್ರದೇಶದಲ್ಲಿ ಮೋದಿ ಮಂದಿರ ಎಂಬ ಹೆಸರಿನ ಮ್ಯೂಸಿಯಂ ಅನ್ನು ಕಟ್ಟಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

    ಯುಎಇ ಸರ್ಕಾರ ತಮ್ಮ ದೇಶದ ಅತ್ಯುತ್ತಮ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ಜಾಯದ್’ ಪ್ರಶಸ್ತಿ ನೀಡಿ ಗೌರವಿಸಿದ ಮೇಲೆ ನಮಗೂ ಈ ರೀತಿಯಲ್ಲಿ ಮೋದಿ ಅವರಿಗೇ ಏನಾದರೂ ಕಾಣಿಕೆ ನೀಡಬೇಕು ಎಂದು ನಾವು ತೀರ್ಮಾನ ಮಾಡಿದ್ದೆವು. ಈಗ ಅದರಂತೆ ನಮ್ಮ ಸ್ವಂತ ಜಾಗದಲ್ಲೇ ಮೋದಿ ಮಂದಿರ ಎಂಬ ಹೆಸರಿನಲ್ಲಿ ಒಂದು ಮ್ಯೂಸಿಯಂ ಕಟ್ಟಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಈ ಯೋಜನೆಯ ಬಗ್ಗೆ ಮಾಹಿತಿ ನೀಡಿರುವ ಸಮರ್ ಅವರ ಪತ್ನಿ ರೂಬಿ ಗಜ್ನಿ, ನಾವು ಮೋದಿ ಅವರ ಹೆಸರಿನಲ್ಲಿ ಮ್ಯೂಸಿಯಂ ಕಟ್ಟಲು ತೀರ್ಮಾನ ಮಾಡಿದ್ದೇವೆ. ಈ ಮ್ಯೂಸಿಯಂಗೆ ಮೋದಿ ಮಂದಿರ್ ಎಂಬ ಹೆಸರು ಇಡುತ್ತೇವೆ. ಈ ಮ್ಯೂಸಿಯಂನಲ್ಲಿ ಮೋದಿಗೆ ಸಂಬಂಧ ಪಟ್ಟ ಮಾಹಿತಿ ಎಲ್ಲವನ್ನು ಇಲ್ಲಿ ಪ್ರದರ್ಶನ ಮಾಡುತ್ತೇವೆ ಎಂದು ಹೇಳಿದ್ದಾರೆ.

  • ಮಗುವಿಗೆ `ನರೇಂದ್ರ ಮೋದಿ’ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ

    ಮಗುವಿಗೆ `ನರೇಂದ್ರ ಮೋದಿ’ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ

    ಲಕ್ನೋ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟಬಹುಮತಗಳೊಂದಿಗೆ ಗೆದ್ದು ಮತ್ತೆ ಸರ್ಕಾರ ರಚಿಸಲು ಸಜ್ಜಾಗಿದೆ. ಈ ನಡುವೆ ಉತ್ತರ ಪ್ರದೇಶದಲ್ಲಿ ಮುಸ್ಲಿಂ ದಂಪತಿ ತಮ್ಮ ಮಗುವಿಗೆ `ನರೇಂದ್ರ ಮೋದಿ’ ಎಂದು ನಾಮಕರಣ ಮಾಡುವ ಮೂಲಕ ಅಭಿಮಾನವನ್ನು ಮೆರೆದಿದ್ದಾರೆ.

    ಇಡೀ ದೇಶದ ಜನತೆ ಪ್ರಧಾನಿ ಮೋದಿ ಅವರ ಕಾರ್ಯವೈಖರಿಗೆ, ದೇಶದ ಅಭಿವೃದ್ಧಿಗಾಗಿ ಕೈಗೊಂಡ ಯೋಜನೆಗಳನ್ನು ಕಂಡು ಮನಸೋತು, ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲೆಡೆ ಮೋದಿ ಹವಾ ಬಹಳ ಜೋರಾಗಿಯೇ ಇದೆ. ಈ ಮಧ್ಯೆ ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ಮುಸ್ಲಿಂ ಪರಿವಾರ ತಮ್ಮ ಮಗುವಿಗೆ ಮೋದಿ ಹೆಸರಿಟ್ಟಿದ್ದಾರೆ. ಬಿಜೆಪಿ ಗೆಲುವನ್ನು ಸಂಭ್ರಮಿಸುವ ಸಲುವಾಗಿ ಮುಸ್ಲಿಂ ದಂಪತಿ ಮೇ 23ರಂದು ಹುಟ್ಟಿದ ತಮ್ಮ ಗಂಡು ಮಗುವಿಗೆ `ನರೇಂದ್ರ ಮೋದಿ’ ಎಂದು ನಾಮಕರಣ ಮಾಡಿ, ಮೋದಿ ಮೇಲಿನ ಅಭಿಮಾನ, ಪ್ರೀತಿಯನ್ನು ತೋರಿಸಿದ್ದಾರೆ.

    ಎಎನ್‍ಐ ಜೊತೆ ಮಗುವಿನ ತಾಯಿ ಮಿನಾಜ್ ಬೇಗಂ ಮಾತನಾಡಿ, ಪ್ರಧಾನಿ ಮೋದಿ ಅವರ ಆದರ್ಶಗಳನ್ನು ನನ್ನ ಮಗನೂ ಪಾಲಿಸಬೇಕು. ಅವರಂತೆ ನನ್ನ ಮಗನೂ ದೊಡ್ಡ ವ್ಯಕ್ತಿಯಾಗಬೇಕು. ನಮ್ಮ ಮಗು ಮೇ 23ರಂದು ಜನಿಸಿದೆ, ಕೂಡಲೇ ನಾನು ದುಬೈನಲ್ಲಿರುವ ನನ್ನ ಪತಿಗೆ ಕರೆ ಮಾಡಿದ್ದೆ. ಆಗ ಅವರು ಮೋದಿ ಚುನಾವಣೆಯಲ್ಲಿ ಗೆದ್ದಿದ್ದಾರಾ ಎಂದು ಕೇಳಿದರು. ನಮ್ಮ ಮನೆಯವರು ಮೋದಿ ಅಭಮಾನಿ. ಹೀಗಾಗಿ ನಾನು ಮೋದಿ ಅವರ ಹೆಸರನ್ನೇ ಮಗನಿಗೆ ಇಟ್ಟಿದ್ದೇನೆ. ನನ್ನ ಮಗ ಸಹ ನರೇಂದ್ರ ಮೋದಿ ಅವರ ತರಹ ಒಳ್ಳೆಯ ಕೆಲಸಗಳನ್ನು ಮಾಡಿ, ಯಶಸ್ಸು ಗಳಿಸಿ ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ನಾನೋಬ್ಬ ಚೌಕಿದಾರ್ ಎಂದಿದ್ದರು. ಆದರೆ ಶನಿವಾರ “ನರ” ಎಂಬ ಪದವನ್ನು ಘೋಷಣೆ ಮಾಡಿದ್ದಾರೆ. “ರಾಷ್ಟ್ರೀಯ ಮಹತ್ವಾಕಾಂಕ್ಷೆ” ಮತ್ತು “ಪ್ರಾದೇಶಿಕ ಮಹತ್ವಾಕಾಂಕ್ಷೆ” (national ambition and regional aspiration) ಎಂದು ನರ ಪದವನ್ನು ಅರ್ಥೈಸಿದ್ದರು. ನೂತನವಾಗಿ ಅಧಿಕಾರಕ್ಕೆ ಬರಲಿರುವ ಎನ್‍ಡಿಎ ಸರ್ಕಾರ, ಪ್ರಾದೇಶಿಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಜನರ ಅಭಿವೃದ್ಧಿಗಾಗಿ ಶ್ರಮಿಸಲಿದೆ ಎಂದು ಜನರಿಗೆ ಮತ್ತೊಮ್ಮೆ ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಮೋದಿ ಭರವಸೆ ನೀಡಿದರು.

  • ದಂಪತಿಗೆ ಠಾಣೆಯಲ್ಲೇ ಪೊಲೀಸ್ ಅಧಿಕಾರಿಯಿಂದ ಹಿಗ್ಗಾಮುಗ್ಗಾ ಥಳಿತ..!

    ದಂಪತಿಗೆ ಠಾಣೆಯಲ್ಲೇ ಪೊಲೀಸ್ ಅಧಿಕಾರಿಯಿಂದ ಹಿಗ್ಗಾಮುಗ್ಗಾ ಥಳಿತ..!

    ಲಕ್ನೋ: ಉತ್ತರ ಪ್ರದೇಶದ ಡೆಪ್ಯೂಟಿ ಸೂಪರಿಟೆಂಡೆಂಟ್ ಪೊಲೀಸ್ ಅಧಿಕಾರಿಯೊಬ್ಬರು ಮುಸ್ಲಿಂ ದಂಪತಿಗೆ ಪೊಲೀಸ್ ಠಾಣೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಡಿಎಸ್‍ಪಿ ಅಶೋಕ್ ಕುಮಾರ್ ದೀಕ್ಷಿತ್ ಈ ರೀತಿ ಮುಸ್ಲಿಂ ದಂಪತಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸಹರಾನ್ಪುರದ ಸರ್ಕಾರಿ ರೈಲ್ವೆ ಪೊಲೀಸ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

    ಅಕ್ಟೋಬರ್ 12 ರಂದು ಈ ಘಟನೆ ಸಂಭವಿಸಿದೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಮುಸ್ಲಿಂ ದಂಪತಿಗೆ ಲಾಠಿ ಮೂಲಕ ಹೊಡೆಯುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ. ಮೊರಾದಾಬಾದ್ ನ ಪೊಲೀಸ್ ಅಧಿಕಾರಿಗಳಿಗೆ ಈ ಕುರಿತು ತನಿಖೆ ಮಾಡುವಂತೆ ರೈಲ್ವೆ ಅಧಿಕಾರಿ ಸಂಜಯ್ ಸಿಂಘಾಲ್ ಆದೇಶಿಸಿದ್ದಾರೆ.

    ಮುಸ್ಲಿಂ ದಂಪತಿಯ ಮೇಲೆ ಹಲ್ಲೆ ಮಾಡಿದ್ದ ಅಶೋಕ್ ಕುಮಾರ್ ದೀಕ್ಷಿತ್ ಅಕ್ಟೋಬರ್ 31 ರಂದು ನಿವೃತ್ತರಾಗಿದ್ದಾರೆ. ಈ ಬಗ್ಗೆ ನಿವೃತ್ತಿ ಅಧಿಕಾರಿಯನ್ನು ವಿಚಾರಣೆ ಮಾಡಲಾಗುತ್ತದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಂಘಾಲ್ ಹೇಳಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ದೀಕ್ಷಿತ್ ಅವರು ಸಹರಾನ್ಪುರದ ರೈಲ್ವೆ ರಕ್ಷಣಾ ಪಡೆ(ಜಿಆರ್ ಪಿ) ನಿಲ್ದಾಣದಲ್ಲಿ ಕುರ್ಚಿಯ ಮೇಲೆ ಕುಳಿತುಕೊಂಡು ಮುಸ್ಲಿಂ ದಂಪತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಅವರು ಕೈಯಲ್ಲಿ ಲಾಠಿ ಹಿಡಿದಿರುವುದನ್ನು ನೋಡಬಹುದಾಗಿದೆ. ಬಳಿಕ ಯುವಕ ಮೊದಲು ಕುಳಿತಿದ್ದು, ಬಳಿಕ ಎದ್ದು ನಿಂತಿದ್ದಾನೆ. ಈ ವೇಳೆ ಪೊಲೀಸ್ ಯುವತಿಗೆ ಲಾಠಿಯಿಂದ ಹಲ್ಲೆ ಮಾಡಿ ಬೈದಿದ್ದಾರೆ. ನಂತರ ಯುವಕನ ಮೇಲೂ ಹಲ್ಲೆ ಮಾಡಿದ್ದಾರೆ. ಈ ಎಲ್ಲ ದೃಶ್ಯ ನಡೆಯುತ್ತಿದ್ದಾಗ ಇಬ್ಬರು ಪೊಲೀಸ್ ಅಧಿಕಾರಿಗಳು ಠಾಣೆಯ ಒಳಗೆ ಇರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವನ್ನು ನಾವು ನೋಡಿದ್ದೇವೆ. ಘಟನೆಯ ಬಗ್ಗೆ ತಿಳಿಯಲು ತನಿಖೆ ಮಾಡುತ್ತಿದ್ದೇವೆ. ವಿಡಿಯೋದಲ್ಲಿರುವ ವ್ಯಕ್ತಿಯನ್ನು ಗುರುತಿಸಲಾಗಿದೆ. ಆದರೆ ಈ ಬಗ್ಗೆ ಹಲ್ಲೆಗೊಳಗಾದವರಿಂದ ಯಾವುದೇ ಅಧಿಕೃತ ದೂರನ್ನು ಇನ್ನೂ ಸ್ವೀಕರಿಸಿಲ್ಲ ಎಂದು ರೈಲ್ವೆ ರಕ್ಷಣಾ ಪಡೆಯ ಎಸ್‍ಪಿ ಸುಭಾಷ್ ಚಂದ್ರ ದುಬೆ ಹೇಳಿದ್ದಾರೆ.

    ದೀಕ್ಷಿತ್ ತಪ್ಪಿತಸ್ಥರೆಂದು ಪರಿಗಣಿಸಿದರೆ ಅವರ ವಿರುದ್ಧ ಇಲಾಖೆಯ ಕ್ರಮ ತೆಗೆದುಕೊಳ್ಳಲಾಗುವುದು. ಸದ್ಯಕ್ಕೆ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಿಂಘಾಲ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv