Tag: ಮುಸ್ಲಿಂ ಕಾನೂನು ಮಂಡಳಿ

  • ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಯಾರಿ – ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡ

    ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಯಾರಿ – ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡ

    ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಗೆ ತರಲು ಕೇಂದ್ರ ಸರ್ಕಾರ (Union Government) ಭರ್ಜರಿ ತಯಾರಿ ನಡೆಸಿದೆ. ಈ ನಿಟ್ಟಿನಲ್ಲಿ ಆನ್ಲೈನ್ ಮೂಲಕ ರಾಷ್ಟ್ರೀಯ ಕಾನೂನು ಆಯೋಗ ಸಲಹೆಗಳನ್ನು ನೀಡಲು ಮನವಿ ಮಾಡಿದೆ. ಮಂಗಳವಾರ ಭೂಪಾಲ್ ನಲ್ಲೂ ಈ ಬಗ್ಗೆ ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಹೊಸ ಕಾನೂನು ಹೆಸರಿನಲ್ಲಿ ಜನರನ್ನ ಪ್ರಚೋದಿಸಲಾಗುತ್ತಿದೆ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬೆನ್ನಲ್ಲೇ ಏಕರೂಪ ನಾಗರಿಕ ಸಂಹಿತೆಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಲು ಆರಂಭಿಸಿವೆ. ಮಣಿಪುರದಲ್ಲಿನ ಹಿಂಸಾಚಾರ ವಿಷಯದಲ್ಲಿ ಪ್ರಧಾನಿ ಮೌನ, ಬೆಲೆ ಏರಿಕೆ ಮತ್ತು ನಿರುದ್ಯೋಗ ಪ್ರಸ್ತಾಪಿಸಿ ಕಾಂಗ್ರೆಸ್, ಡಿಎಂಕೆ ಮತ್ತು ಎಐಎಂಐಎಂ ಸೇರಿದಂತೆ ಹಲವು ವಿರೋಧ ಪಕ್ಷಗಳು ಪ್ರತ್ಯೇಕ ಹೇಳಿಕೆಗಳನ್ನು ನೀಡಿವೆ. ಇದನ್ನೂ ಓದಿ: ವಿಪಕ್ಷ ನಾಯಕರು 20 ಲಕ್ಷ ಕೋಟಿ ಹಗರಣದ ಗ್ಯಾರಂಟಿ ಕೊಡುತ್ತಿದ್ದಾರೆ – ವಿರೋಧ ಪಕ್ಷದ ವಿರುದ್ಧ ಮೋದಿ ಕಿಡಿ

    ಏಕರೂಪ ನಾಗರಿಕ ಸಂಹಿತೆ ಪ್ರಶ್ನಿಸಿರುವ ಕಾಂಗ್ರೆಸ್‌ನ (Congress) ಮಿತ್ರ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (DMK) ಮೊದಲು ಹಿಂದೂಗಳಿಗೆ ಏಕರೂಪದ ಕೋಡ್ ಅನ್ನು ಅನ್ವಯಿಸಬೇಕು ಎಂದು ಆಗ್ರಹಿಸಿದೆ. ದೇಶದ ಎಲ್ಲ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಪ್ರತಿಯೊಬ್ಬರಿಗೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಸಂವಿಧಾನವು (Constitution) ಪ್ರತಿಯೊಂದು ಧರ್ಮಕ್ಕೂ ರಕ್ಷಣೆ ನೀಡಿರುವುದರಿಂದ ನಮಗೆ UCC (ಏಕರೂಪ ನಾಗರಿಕ ಸಂಹಿತೆ) ಬೇಡ ಎಂದು ಡಿಎಂಕೆಯ ಟಿಕೆಎಸ್ ಇಳ್ಳಂಗೋವನ್ ಹೇಳಿದ್ದಾರೆ.

    ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರಧಾನಿ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ AICC ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (KC Venugopal), ಪ್ರಧಾನಿ ಇತರ ಸಮಸ್ಯೆಗಳಿಂದ ಜನರನ್ನು ವಿಚಲಿತಗೊಳಿಸುತ್ತಿದ್ದಾರೆ. ದೇಶದಲ್ಲಾಗುತ್ತಿರುವ ಬಡತನ, ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಅವರು ಮೊದಲು ಉತ್ತರಿಸಬೇಕು. ಅವರು ಮಣಿಪುರ ಸಮಸ್ಯೆಗಳ ಬಗ್ಗೆ ಎಂದಿಗೂ ಮಾತನಾಡಿಲ್ಲ, ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿದೆ. ಆದ್ರೆ ಅವರು ಈ ಎಲ್ಲಾ ಸಮಸ್ಯೆಗಳಿಂದ ಜನರನ್ನ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಕುಟುಂಬ ಮತ್ತು ರಾಷ್ಟ್ರದ ನಡುವಿನ ಹೋಲಿಕೆ ಸೂಕ್ತವಲ್ಲ ಮತ್ತು ಅದನ್ನ ಯಾರ ಮೇಲೂ ಬಲವಂತವಾಗಿ ಹೇರಲು ಸಾಧ್ಯವಿಲ್ಲ. ಕುಟುಂಬದಲ್ಲಿಯೂ ವೈವಿಧ್ಯತೆ ಇರುತ್ತದೆ. ಭಾರತದ ಸಂವಿಧಾನವು ದೇಶದ ಜನರಲ್ಲಿ ವೈವಿಧ್ಯತೆ ಮತ್ತು ಬಹುತ್ವವನ್ನ ಗುರುತಿಸಿದೆ. ಯುಸಿಸಿ ಒಂದು ಮಹತ್ವಾಕಾಂಕ್ಷಿಯಾಗಿದೆ. ಅಜೆಂಡಾ-ಚಾಲಿತ ಬಹುಮತದ ಸರ್ಕಾರದಿಂದ ಇದನ್ನು ಜನರ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ:  ಮಣಿಪುರ ಹಿಂಸಾಚಾರದ ಹಿಂದೆ ಇದೆ ವಿದೇಶಿ ಶಕ್ತಿಗಳ ಕೈವಾಡ

    ಇದು ದೇಶದ ಬಹುತ್ವ ಮತ್ತು ವೈವಿಧ್ಯತೆಯ ಮೇಲಿನ ದಾಳಿ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಭಾರತದ ಪ್ರಧಾನಿ ಭಾರತದ ವೈವಿಧ್ಯತೆ ಮತ್ತು ಅದರ ಬಹುತ್ವವನ್ನು ಒಂದು ಸಮಸ್ಯೆ ಎಂದು ಪರಿಗಣಿಸುತ್ತಾರೆ. UCC ಮೂಲಕ ದೇಶದ ಬಹುತ್ವ ಮತ್ತು ವೈವಿಧ್ಯತೆಯನ್ನು ಕಸಿದುಕೊಳ್ಳುತ್ತೀರಾ? UCC ಕುರಿತು ಮಾತನಾಡುವಾಗ ಅವರು ಹಿಂದೂಗಳ ಬಗ್ಗೆ ಮಾತನಾಡುತ್ತಾರೆ. ಅವರು ಹಿಂದೂ ಅವಿಭಜಿತ ಕುಟುಂಬವನ್ನ ರದ್ದುಗೊಳಿಸುತ್ತಾರಾ? ಹೋಗಿ ಪಂಜಾಬ್‌ನಲ್ಲಿರುವ ಸಿಖ್ಖರಿಗೆ ಯುಸಿಸಿ ಬಗ್ಗೆ ಹೇಳಿ, ಅಲ್ಲಿ ಪ್ರತಿಕ್ರಿಯೆ ಏನಾಗುತ್ತದೆ ಎಂದು ನೋಡಿ ಎಂದು ಓವೈಸಿ ಸವಾಲ್‌ ಹಾಕಿದ್ದಾರೆ.

    ಏಕರೂಪ ನಾಗರಿಕ ಸಂಹಿತೆ ಜಾರಿಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸಿದೆ. ಮಂಗಳವಾರ ರಾತ್ರಿ ನಡೆದ ಆನ್‌ಲೈನ್ ತುರ್ತು ಸಭೆಯಲ್ಲಿ ರಾಷ್ಟ್ರವ್ಯಾಪಿ UCC ಅನುಷ್ಠಾನ ವಿರೋಧಿಸಲು ನಿರ್ಧಾರ ಮಾಡಿದ್ದು, ಸಭೆಯಲ್ಲಿ ಷರಿಯಾದ ಪ್ರಮುಖ ಭಾಗಗಳೊಂದಿಗೆ ಕರಡನ್ನು ಕಾನೂನು ಆಯೋಗದ ಮುಂದೆ ಮಂಡಿಸಲು ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಕರಡು ಸಲ್ಲಿಕೆಗೆ ಕಾನೂನು ಆಯೋಗದ ಅಧ್ಯಕ್ಷರ ಭೇಟಿಗೂ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಮಯ ಕೇಳಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಏಕರೂಪ ನಾಗರಿಕ ಸಂಹಿತೆಯು ಅಲ್ಪಸಂಖ್ಯಾತರ ವಿರೋಧಿ ಕ್ರಮ: ಮುಸ್ಲಿಂ ಕಾನೂನು ಮಂಡಳಿ

    ಏಕರೂಪ ನಾಗರಿಕ ಸಂಹಿತೆಯು ಅಲ್ಪಸಂಖ್ಯಾತರ ವಿರೋಧಿ ಕ್ರಮ: ಮುಸ್ಲಿಂ ಕಾನೂನು ಮಂಡಳಿ

    ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಅಸಾಂವಿಧಾನಿಕ ಮತ್ತು ಅಲ್ಪಸಂಖ್ಯಾತರ ವಿರೋಧಿ ಕ್ರಮ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ವಿರೋಧ ವ್ಯಕ್ತಪಡಿಸಿದೆ.

    ಕೇಂದ್ರ ಸರ್ಕಾರ ಹಾಗೂ ಉತ್ತರಾಖಂಡ, ಉತ್ತರ ಪ್ರದೇಶ ಸರ್ಕಾರಗಳು ದೇಶದಲ್ಲಿನ ಹಣದುಬ್ಬರದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿವೆ. ದೇಶದಲ್ಲಿ ಆರ್ಥಿಕತೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ವಿಚಾರವಾಗಿ ಜನತೆ ಪ್ರಶ್ನೆ ಮಾಡುತ್ತಾರೆ ಎಂಬ ಕಾರಣಕ್ಕೆ ವಿಷಯ ದಿಕ್ಕುತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಟೀಕಿಸಿದೆ. ಅಲ್ಲದೇ ಏಕರೂಪ ನಾಗರಿಕ ಸಂಹಿತೆ ಕೈಬಿಡುವಂತೆ ಕೇಂದ್ರಕ್ಕೆ ಮನವಿ ಮಾಡಿದೆ. ಇದನ್ನೂ ಓದಿ: ಗಾಂಧಿ ಕುಟುಂಬ ರಜೆಯಲ್ಲಿ ತೆರಳಿದೆಯೇ: ಅನೂರಾಗ್ ಠಾಕೂರ್ ಪ್ರಶ್ನೆ

    ಭಾರತ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅವರ ಧರ್ಮದ ಪ್ರಕಾರ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದೆ. ಅದನ್ನು ಮೂಲಭೂತ ಹಕ್ಕುಗಳಲ್ಲಿ ಸೇರಿಸಲಾಗಿದೆ. ಈ ಹಕ್ಕಿನ ಅಡಿಯಲ್ಲಿ ಅಲ್ಪಸಂಖ್ಯಾತರು, ಬುಡಕಟ್ಟು ವರ್ಗಗಳಿಗೆ ಅವರ ಇಚ್ಛೆ ಮತ್ತು ಸಂಪ್ರದಾಯಗಳ ಪ್ರಕಾರ ವಿಭಿನ್ನ ವೈಯಕ್ತಿಕ ಕಾನೂನುಗಳನ್ನು ರೂಪಿಸಲಾಗಿದೆ. ಇದು ದೇಶಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ ಎಂದು ಎಐಎಂಪಿಎಲ್‌ಬಿ ಪ್ರಧಾನ ಕಾರ್ಯದರ್ಶಿ ಹಜರತ್ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ತಿಳಿಸಿದ್ದಾರೆ.

    ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವೆ ಪರಸ್ಪರ ಏಕತೆ, ನಂಬಿಕೆಯನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ – ಮೌಲ್ವಿ ವಾಸೀಂ ಪಠಾಣ್ ಇಂದು ಕೋರ್ಟ್‍ಗೆ

    ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಅವರು, ರಾಜ್ಯಕ್ಕೆ ಏಕರೂಪ ನಾಗರಿಕ ಸಂಹಿತೆ (UCC) ಕರಡು ತಯಾರಿಸಲು ಉನ್ನತ ಅಧಿಕಾರ ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದ್ದರು. ಅಂತೆಯೇ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಕೂಡ ರಾಜ್ಯದಲ್ಲಿ ಯುಸಿಸಿ ಅನುಷ್ಠಾನದ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದರು.

    ಏಕರೂಪ ನಾಗರಿಕ ಸಂಹಿತೆಯು ಭಾರತದಲ್ಲಿನ ನಾಗರಿಕರ ವೈಯಕ್ತಿಕ ಕಾನೂನುಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಒಂದು ಪ್ರಸ್ತಾಪವಾಗಿದೆ. ಅದು ಅವರ ಧರ್ಮ, ಲಿಂಗ, ಲೈಂಗಿಕ ದೃಷ್ಟಿಕೋನವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಸಮಾನವಾಗಿ ಅನ್ವಯಿಸುತ್ತದೆ. ಪ್ರಸ್ತುತ ವಿವಿಧ ಸಮುದಾಯಗಳ ವೈಯಕ್ತಿಕ ಕಾನೂನುಗಳು ಅವರ ಧಾರ್ಮಿಕ ಗ್ರಂಥಗಳಿಂದ ನಿಯಂತ್ರಿಸಲ್ಪಡುತ್ತವೆ ಎಂದು ಸಂಹಿತೆ ಪರವಾಗಿರುವವರ ಅಭಿಪ್ರಾಯವಾಗಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) 2019 ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಯುಸಿಸಿ ಅನುಷ್ಠಾನಕ್ಕೆ ಭರವಸೆ ನೀಡಿತ್ತು. ಇದನ್ನೂ ಓದಿ: ಸರ್ಕಾರಿ ಶಾಲೆ ಬಾಗಿಲು ಮುರಿದು ಪುಂಡರ ಎಣ್ಣೆ ಪಾರ್ಟಿ