Tag: ಮುಳುಗಡೆ

  • ಅಲೆಗಳ ಹೊಡೆತಕ್ಕೆ ಸಿಲುಕಿ ಮಾರ್ಗಮಧ್ಯಯೇ ಕೆಟ್ಟು ನಿಂತ ದೋಣಿಗಳು: ಮೂವರ ರಕ್ಷಣೆ!

    ಅಲೆಗಳ ಹೊಡೆತಕ್ಕೆ ಸಿಲುಕಿ ಮಾರ್ಗಮಧ್ಯಯೇ ಕೆಟ್ಟು ನಿಂತ ದೋಣಿಗಳು: ಮೂವರ ರಕ್ಷಣೆ!

    ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿಯು ಕೋಡಿಬೆಂಗ್ರೆ ಸಮೀಪ ಮುಳುಗಡೆಯಾಗಿದ್ದು, ಮತ್ತೆರಡು ದೋಣಿಗಳು ಸುರತ್ಕಲ್ ಹಾಗೂ ಭಟ್ಕಳ ಸಮೀಪ ತಾಂತ್ರಿಕ ತೊಂದರೆಯಿಂದಾಗಿ ಸಮುದ್ರ ಮಧ್ಯೆಯೇ ಸಿಲುಕಿಕೊಂಡಿವೆ.

    ಮಲ್ಪೆ ತೊಟ್ಟಂನ ಶಕುಂತಲ ಕರ್ಕೇರ ಎಂಬವರ ಹನುಮ ಸಾನಿಧ್ಯ ಹೆಸರಿನ ದೋಣಿಯು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ್ಟಿದ್ದು, ಕೋಡಿಬೆಂಗ್ರೆಯ ಸುಮಾರು 12 ನಾಟಿಕಲ್ ಮೈಲಿ ದೂರದಲ್ಲಿ ತಾಂತ್ರಿಕ ದೋಷದಿಂದಾಗಿ ದೋಣಿಯು ಅಲ್ಲೇ ನಿಂತುಕೊಂಡಿದೆ. ಸಮುದ್ರದಲ್ಲಿನ ಭಾರೀ ಗಾಳಿಮಳೆಯ ಪರಿಣಾಮ ಕೆಟ್ಟು ನಿಂತ ದೋಣಿಯು ಏಳು ಮೈಲಿ ದೂರದವರೆಗೆ ದಡಕ್ಕೆ ಬಂದು ಕಲ್ಲಿಗೆ ಬಡಿದಿದೆ. ಈ ವೇಳೆ ದೋಣಿಯೊಳಗೆ ನೀರು ನುಗ್ಗಿ ನೋಡ ನೋಡುತ್ತಿದ್ದಂತೆ ಮುಳುಗುಡೆಯಾಗಿದೆ.

    ದೋಣಿಯಲ್ಲಿದ್ದ ಮೂವರು ಮೀನುಗಾರರನ್ನು ಸಮೀಪದಲ್ಲಿದ್ದ ಭವ್ಯತ ಮತ್ತು ಲಕ್ಷ್ಮೀ ಪಂಡರಿ ಎಂಬ ಹೆಸರಿನ ದೋಣಿಯ ಮೀನುಗಾರರು ರಕ್ಷಿಸಿದ್ದಾರೆ. ನಂತರ ಮುಳುಗಡೆಯಾಗುತ್ತಿದ್ದ ದೋಣಿಯನ್ನು ಇತರೆ ದೋಣಿಗಳ ಸಹಾಯದಿಂದ ಹಗ್ಗ ಕಟ್ಟಿ ದಡಕ್ಕೆ ಎಳೆದು ತರಲಾಗಿದೆ. ಈ ಅವಘಡದಿಂದಾಗಿ ಸುಮಾರು 9 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    ಇದಲ್ಲದೇ ಎರಡು ದಿನಗಳ ಹಿಂದೆ ಮಲ್ಪೆ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ವಿಶ್ವಾಸ್ ಎಂಬ ದೋಣಿ ಸುರತ್ಕಲ್ ಸಮೀಪದ 35 ನಾಟಿಕಲ್ ಹಾಗೂ ಲಕ್ಷ್ಮೀ ಜನಾರ್ದನ್ ಎಂಬ ದೋಣಿಯು ಭಟ್ಕಳ ಸಮೀಪದ 40 ನಾಟಿಕಲ್ ದೂರದ ಸಮುದ್ರದಲ್ಲಿ ಇಂಜಿನ್ ಸಮಸ್ಯೆ ಯಿಂದ ಕೆಟ್ಟು ನಿಂತಿರುವ ಬಗ್ಗೆ ವರದಿಯಾಗಿದೆ. ವಿಶ್ವಾಸ್ ಬೋಟಿನಲ್ಲಿ ಒಟ್ಟು 9 ಮಂದಿ ಮತ್ತು ಲಕ್ಷ್ಮೀ ಜನಾರ್ದನ್ ಬೋಟಿನಲ್ಲಿ ಎಂಟು ಮಂದಿ ಮೀನುಗಾರರಿದ್ದಾರೆ ಎಂದು ತಿಳಿದುಬಂದಿದೆ.

    ಈ ಬಗ್ಗೆ ದೋಣಿಯವರು ಹಾಗೂ ಮಲ್ಪೆ ಮೀನುಗಾರರ ಸಂಘದವರು ಈಗಾಗಲೇ ಕರಾವಳಿ ಕಾವಲು ಪಡೆಯವರಿಗೆ ಮಾಹಿತಿ ನೀಡಿದ್ದು, ಭಾರೀ ಮಳೆಯಿಂದ ಕಡಲ ಅಬ್ಬರ ತೀವ್ರಗೊಂಡಿರುವುದರಿಂದ ಈ ದೋಣಿಗಳ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಈ ಬೋಟಿನಲ್ಲಿರುವ ಮೀನುಗಾರರು ಇದೀಗ ಸಂರ್ಪಕದಲ್ಲಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿವೆ.

    ನಮ್ಮ ಕಾರ್ಯಾಚರಣೆಯ ವ್ಯಾಪ್ತಿ ಐದು ನಾಟಿಕಲ್ (9.25 ಕಿ.ಮೀ) ದೂರವಾಗಿರುವುದರಿಂದ ಈ ಕುರಿತು ಈಗಾಗಲೇ ಮಂಗಳೂರು ಹಾಗೂ ಕಾರವಾರ ಕೋಸ್ಟ್ ಗಾರ್ಡ್ ಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಮಲ್ಪೆ ಕರಾವಳಿ ಕಾವಲು ಪಡೆಯ ಡಿವೈಎಸ್ಪಿ ಜೈಶಂಕರ್ ತಿಳಿಸಿದ್ದಾರೆ.

    ಈಗಾಗಲೇ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿರುವ ದೋಣಿಗಳಲ್ಲಿರುವ ಮೀನುಗಾರರ ಸಂಪರ್ಕ ಮಾಡಿದ್ದು, ಕೆಟ್ಟು ನಿಂತಿರುವ ದೋಣಿಗಳಲ್ಲಿರುವ ಮೀನುಗಾರರನ್ನು ರಕ್ಷಿಸುವಂತೆ ಹೇಳಿದ್ದೇವೆ. ಅಲ್ಲದೇ ಸಮುದ್ರದಲ್ಲಿ ಸಾಕಷ್ಟು ಏರಿಳೀತ ಕಂಡುಬರುತ್ತಿರುವುದರಿಂದ ಯಾರಿಗೂ ಸಮುದ್ರಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಯಾರು ಕೂಡ ಮೀನುಗಾರಿಕೆಗೆ ತೆರಳದಂತೆ ಈಗಾಗಲೇ ಸೂಚನೆಯನ್ನು ನೀಡಲಾಗುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅರಬ್ಬಿ ಸಮುದ್ರದ ಹೊಡೆತಕ್ಕೆ ಸಿಲುಕಿ ಮುಳುಗಿದ 2 ದೋಣಿಗಳು: 16 ಮಂದಿಯ ರಕ್ಷಣೆ- ವಿಡಿಯೋ ವೈರಲ್

    ಅರಬ್ಬಿ ಸಮುದ್ರದ ಹೊಡೆತಕ್ಕೆ ಸಿಲುಕಿ ಮುಳುಗಿದ 2 ದೋಣಿಗಳು: 16 ಮಂದಿಯ ರಕ್ಷಣೆ- ವಿಡಿಯೋ ವೈರಲ್

    ಉಡುಪಿ: ಭಟ್ಕಳ ಹಾಗೂ ಗಂಗೊಳ್ಳಿಯ ನಡುವೆ ಮೀನುಗಾರಿಕೆ ಮುಗಿಸಿ ವಾಪಾಸ್ಸಾಗುತ್ತಿದ್ದ ಎರಡು ದೋಣಿಗಳು ಸಮುದ್ರ ನೀರಿನ ಅಲೆಗಳ ಹೊಡೆತಕ್ಕೆ ಸಿಲುಕ್ಕಿ ಮುಳುಗಿ ಹೋಗಿದ್ದು, ದೋಣಿಯಲ್ಲಿದ್ದ 16 ಮಂದಿ ಮೀನುಗಾರರನ್ನು ರಕ್ಷಿಸುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

    ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಮೀನುಗಾರಿಕೆ ದೋಣಿಗಳು ಭಟ್ಕಳದ ಗಂಗೊಳ್ಳಿ ನಡುವೆ ಮುಳುಗಡೆಯಾಗಿದೆ. ಎರಡು ಪ್ರತ್ಯೇಕ ದೋಣಿಗಳು ಮಲ್ಪೆಗೆ ಮರಳುವಾಗ ಮುಳುಗಡೆಯಾಗಿದ್ದು, ದೋಣಿಯಲ್ಲಿದ್ದ 16 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆಯ ವೀಡಿಯೊ ಬಹಳ ರೋಚಕವಾಗಿದ್ದು, ಕಣ್ಣೆದುರೇ ಎರಡು ಕೋಟಿ ಬೆಲೆಯ ದೋಣಿಗಳು ಮುಳುಗಡೆಯಾಗಿದೆ.

    ಅರಬ್ಬೀ ಸಮುದ್ರದಲ್ಲಿ ವಾತಾವರಣ ಏರುಪೇರಾದ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ. ಶನಿವಾರ ಬೆಳಗ್ಗೆ ಮಲ್ಪೆಯಿಂದ ತೆರಳಿದ 8 ಮಂದಿಯಿದ್ದ ಶಿವ-ಗಣೇಶ ದೋಣಿಯು ಸಂಜೆಯ ವೇಳೆಗೆ ತೀವ್ರವಾದ ಗಾಳಿ-ಮಳೆಯಿಂದಾಗಿ ಸಮುದ್ರದಲ್ಲಿ ನೀರಿನ ಅಲೆಗಳ ಆರ್ಭಟ ಜೋರಾಗಿದ್ದರಿಂದ ದೋಣಿಯಲ್ಲಿ ತೂತು ಬಿದ್ದು, ದೋಣಿ ಮುಳುಗಡೆಯಾಗಲು ಶುರುವಾಗಿದೆ. ದೋಣಿಯಲ್ಲಿದ್ದ ಮೀನುಗಾರರು ಮಲ್ಪೆಗೆ ಕರೆ ಮಾಡಿ ರಕ್ಷಣೆಗೆ ಕರೆದಿದ್ದಾರೆ. ಕೂಡಲೇ ಮಲ್ಪೆಯಿಂದ ತೆರಳಿದ ದೋಣಿಗಳ ಮೂಲಕ ಮುಳುಗಡೆಯಾಗುತ್ತಿದ್ದ ದೋಣಿಯಿಂದ 8 ಮಂದಿ ಮೀನುಗಾರರನ್ನು ರಕ್ಷಿಸಿ ಮಲ್ಪೆಗೆ ಕರೆತರಲಾಗಿದೆ.

    ಇದಲ್ಲದೇ ಇಂದು ಬೆಳಗ್ಗೆ ಮೀನುಗಾರಿಕೆ ಮುಗಿಸಿ ಮಲ್ಪೆಗೆ ಮರಳುತ್ತಿದ್ದ ಪದ್ಮದಾಸ್ ಎಂಬ ದೋಣಿಯು ಗಂಗೊಳ್ಳಿ ಹಾಗೂ ಭಟ್ಕಳದ ನಡುವೆ ಮುಳುಗಡೆಯಾಗಿದೆ. ದೋಣಿಯಲ್ಲಿದ್ದ ಮೀನುಗಾರರ ಮಾಹಿತಿಯಿಂದ ಸ್ಥಳಕ್ಕೆ ತೆರಳಿದ ಮಲ್ಪೆಯ ಭಜರಂಗಿ ದೋಣಿಯ ಮೀನುಗಾರರು 8 ಮಂದಿ ಮೀನುಗಾರರನ್ನು ರಕ್ಷಿಸಿ ಮಲ್ಪೆಗೆ ಕರೆತಂದಿದ್ದಾರೆ.

    ಸಮುದ್ರದ ನಡುವೆ ಗಾಳಿ ಮಳೆ ಬೀಸುತ್ತಿದ್ದರಿಂದ ಮುಳುಗುತ್ತಿದ್ದ ದೋಣಿಯಿಂದ ಮೀನುಗಾರರು ಸಮುದ್ರಕ್ಕೆ ಹಾರಿದ್ದಾರೆ. ರಕ್ಷಣೆಗೆ ತೆರಳಿದ ದೋಣಿಯಿಂದ ಹಗ್ಗ ಎಸೆದು ಅವರನ್ನು ರಕ್ಷಿಸಲಾಗಿದೆ. ಕೆಲ ಮೀನುಗಾರರಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗಿದ್ದು, ಅವರೆಲ್ಲರೂ ಈಗ ಚೇತರಿಸಿಕೊಂಡಿದ್ದಾರೆ. ಈ ಎರಡು ಮುಳುಗಡೆಯಾಗುವ ದೋಣಿಯಲ್ಲಿದ್ದವರ ರಕ್ಷಣೆಯ ವಿಡಿಯೋ ನೋಡುವವರ ಮೈ ಜುಂ ಎನಿಸುವಷ್ಟು ರೋಮಾಂಚನಕಾರಿಯಾಗಿದ್ದು, ಸಾಕಷ್ಟು ವೈರಲ್ ಆಗಿದೆ.

    https://www.youtube.com/watch?v=XqFcvZYNWYY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಹಳ್ಳ ತುಂಬಿ ಹರಿದು ಕೊಚ್ಚಿ ಹೋದ 2 ಟಂಟಂ- ನಾಲ್ವರು ಅಪಾಯದಿಂದ ಪಾರು

    ಹಳ್ಳ ತುಂಬಿ ಹರಿದು ಕೊಚ್ಚಿ ಹೋದ 2 ಟಂಟಂ- ನಾಲ್ವರು ಅಪಾಯದಿಂದ ಪಾರು

    ಧಾರವಾಡ: ಜಿಲ್ಲೆಯಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಶಿರೂರ ಗ್ರಾಮದ ದೊಡ್ಡಹಳ್ಳ ತುಂಬಿ ಹರಿದ ಕಾರಣ ಎರಡು ಟಂಟಂ ಕೊಚ್ಚಿ ಹೋಗಿ ನಾಲ್ವರು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.

    ಸಂತೋಷ, ಆನಂದ, ಹನುಮಂತ ಮತ್ತು ಮಕ್ತುಮ್ ಎಂಬವರು ಹಳ್ಳದಲ್ಲಿ ಸಂಕಷ್ಟಕ್ಕೆ ಸಿಲುಕಿದವರು. ಹಳ್ಳದಲ್ಲಿ ಸಿಲುಕಿದ್ದ ನಾಲ್ವರಲ್ಲಿ ಇಬ್ಬರು ತಕ್ಷಣ ನೀರಿನಿಂದ ಪಾರಾದ್ರೆ, ಇನ್ನುಳಿದ ಇಬ್ಬರು ಹೈಟೆನ್ಶನ್ ಕಂಬ ಹತ್ತಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಸದ್ಯ ಇಬ್ಬರು ಬೆಳಗಾವಿಯ ಇನಾಮಹೊಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಇನ್ನಿಬ್ಬರು ಮನೆ ಸೇರಿದ್ದಾರೆ.

    ಕಂಬ ಹತ್ತಿದ್ದ ಸಹೋದರರಾದ ಸಂತೋಷ ಹಾಗೂ ಆನಂದನನ್ನು ಶಿರೂರು ಗ್ರಾಮಸ್ಥರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕಾಪಾಡಿದ್ದಾರೆ. ನಂತರ ಅವರನ್ನು ಬೆಳಗಾವಿಯ ಇನಾಮಹೊಂಗಲ ಆಸ್ಪತ್ರೆಗೆ ಸೇರಿಸಿಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ ಹನುಮಂತ ಮತ್ತು ಮಕ್ತುಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

     

    ರಭಸದಿಂದ ಹರಿಯುತ್ತಿರುವ ನೀರಿನಿಂದ ಇನಾಮಹೊಂಗಲ ಶಿರೂರ ರಸ್ತೆ ಕಡಿತಗೊಂಡಿದ್ದು, ಇದರಿಂದ ಸಂಜೆ ಪ್ರಯಾಣಿಕರು ಹಾಗೂ ಸಾರಿಗೆ ಬಸ್‍ಗಳು ಸೇತುವೆಯನ್ನು ದಾಟಲಾಗದೇ ಪರದಾಡಿದ್ದಾರೆ.