Tag: ಮುಳಬಾಗಿಲು

  • ಗ್ರಾಮಕ್ಕೆ ಅಷ್ಟದಿಗ್ಬಂಧನ ಹಾಕಿ ಮಾದರಿಯಾದ ಗ್ರಾಮಸ್ಥರು

    ಗ್ರಾಮಕ್ಕೆ ಅಷ್ಟದಿಗ್ಬಂಧನ ಹಾಕಿ ಮಾದರಿಯಾದ ಗ್ರಾಮಸ್ಥರು

    ಕೋಲಾರ: ಇಡೀ ವಿಶ್ವವೇ ಕೊರೊನಾ ವೈರಸ್‍ನಿಂದ ದೂರ ಇರಲು ಹರಸಾಹಸ ಪಡುತ್ತಿದೆ. ಹೀಗಾಗಿ ಮುಳಬಾಗಿಲು ತಾಲೂಕಿನ ಎಂ.ಗೊಲ್ಲಹಳ್ಳಿಯ ಜನರು ಗ್ರಾಮಕ್ಕೆ ಅಷ್ಟದಿಗ್ಬಂಧನ ಹಾಕಿಕೊಂಡು ಮಾದರಿಯಾಗಿದ್ದಾರೆ.

    ಎಂ.ಗೊಲ್ಲಹಳ್ಳಿಯ ಜನರು ಸ್ವಯಂ ದಿಗ್ಬಂಧನ ಮಾಡಿಕೊಳ್ಳುವ ಮೂಲಕ ಗ್ರಾಮಕ್ಕೆ ಕೊರೊನಾ ಕಾಲಿಡದಂತೆ ಕೊರೊನಾಗೆ ಎಚ್ಚರಿಕೆ ವಹಿಸಿದ್ದಾರೆ. ಎರಡು ತಿಂಗಳ ಕಾಲ ಗ್ರಾಮದಿಂದ ಯಾರೂ ಹೊರ ಹೋಗದಂತೆ, ಹೊರಗಿನಿಂದ ಗ್ರಾಮಕ್ಕೆ ಯಾರೂ ಬಾರದಂತೆ ನಿರ್ಬಂಧ ವಿಧಿಸಲಾಗಿದೆ. ಅಷ್ಟೇ ಅಲ್ಲದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಐದು ರಸ್ತೆಗಳಲ್ಲಿ ಗ್ರಾಮಸ್ಥರೇ ಚೆಕ್ ಪೋಸ್ಟ್ ಹಾಕಿದ್ದಾರೆ. ಜೊತೆಗೆ ಗ್ರಾಮಸ್ಥರೇ ಚೆಕ್ ಪೋಸ್ಟ್‍ಗಳಲ್ಲಿ ಕಾವಲು ಕಾಯುವ ಕೆಲಸ ಮಾಡುತ್ತಿದ್ದಾರೆ.

    ನಮ್ಮೂರು ನೆರೆಯ ರಾಜ್ಯ ಆಂಧ್ರಪ್ರದೇಶಕ್ಕೆ ಕೇವಲ ಕೂಗಳತೆ ದೂರದಲ್ಲಿದೆ. ಅಲ್ಲಿಂದಲೂ ಜನರು ಬರುತ್ತಾರೆ. ಹಾಗಾಗಿ ಕರ್ನಾಟಕ ಅಥವಾ ಆಂಧ್ರ ಪ್ರದೇಶ ಎರಡೂ ರಾಜ್ಯಗಳಿಂದಲೂ ಗ್ರಾಮಸ್ಥರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಎಲ್ಲಾ ಸಮಸ್ಯೆಗಳನ್ನು ಸರ್ಕಾರವೇ ಬಗೆಹರಿಸಬೇಕು ಎನ್ನುವುದು ಸರಿಯಲ್ಲ. ಮೊದಲು ನಮ್ಮ ಗ್ರಾಮವನ್ನು ನಾವು ಕಾಪಾಡಿಕೊಳ್ಳಬೇಕು. ಅದಕ್ಕಾಗಿಯೇ ಗ್ರಾಮಕ್ಕೆ ದಿಗ್ಬಂಧನ ಹಾಕಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಕೊರೊನಾ ವೈರಸ್‍ನಿಂದ ಗ್ರಾಮಸ್ಥರನ್ನು ಕಾಪಾಡಲು ಮುಖಂಡರು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಮೊದಲಿಗೆ ಅವಶ್ಯಕತೆ ಇರುವ ವಸ್ತುಗಳನ್ನು ತಂದು ಸಂಗ್ರಹಿಸಿಟ್ಟುಕೊಳ್ಳುವುದು, ನಂತರ ಬೇರೆ ಗ್ರಾಮದಲ್ಲಿರುವ ಕುಟುಂಬದ ಸದಸ್ಯರನ್ನು ವಾಪಸ್ ಕರೆಸಿಕೊಳ್ಳಲು ಯೋಚಿಸಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಹಾಕಿರುವ ಚೆಕ್ ಪೋಸ್ಟ್ ಗಳಲ್ಲಿ ಗ್ರಾಮದವರೇ ಕಾವಲು ಕಾಯುವುದು, ಗ್ರಾಮದಲ್ಲಿ ಉತ್ಪಾದನೆಯಾದ ಹಾಲು, ತರಕಾರಿಯನ್ನು ಗ್ರಾಮದಲ್ಲೇ ಹಂಚಿಕೆ ಮಾಡಿಕೊಳ್ಳುವಂತೆ ಗ್ರಾಮದ ಮುಖಂಡರು ತಿಳಿಸಿದ್ದಾರೆ.

    ಎಲ್ಲರೂ ಸೇರಿ ಗ್ರಾಮವನ್ನು ಪ್ರತಿದಿನ ಸ್ವಚ್ಛಗೊಳಿಸುವುದು, ಗ್ರಾಮದಲ್ಲಿ ಸಂಗ್ರಹವಾಗುವ ಹಸುವಿನ ಗಂಜಲವನ್ನು ಗ್ರಾಮದಲ್ಲಿ ಸಿಂಪಡಿಸುವುದು ಸೇರಿದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಲಾಗಿದೆ.

  • 16 ದಿನದಲ್ಲಿ ಒಂದೇ ಗ್ರಾಮದ 11 ಜನರ ನಿಗೂಢ ಸಾವು- ಗ್ರಾಮಸ್ಥರಲ್ಲಿ ಶುರುವಾಯ್ತು ಆತಂಕ

    16 ದಿನದಲ್ಲಿ ಒಂದೇ ಗ್ರಾಮದ 11 ಜನರ ನಿಗೂಢ ಸಾವು- ಗ್ರಾಮಸ್ಥರಲ್ಲಿ ಶುರುವಾಯ್ತು ಆತಂಕ

    ಕೋಲಾರ: ಗ್ರಾಮದಲ್ಲಿ ಕಳೆದ 16 ದಿನಗಳಿಂದ ನಡೆಯುತ್ತಿರುವ ಸರಣಿ ನಿಗೂಢ ಸಾವು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ ಘಟನೆ ಮುಳಬಾಗಿಲು ತಾಲೂಕಿನಲ್ಲಿ ನಡೆದಿದೆ.

    ಆಂಧ್ರಪ್ರದೇಶ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಮಕಲಹಳ್ಳಿಯಲ್ಲಿ 16 ದಿನದಲ್ಲಿ 11 ಜನರು ನಿಗೂಢವಾಗಿ ಮೃತಪಟ್ಟಿದ್ದಾರೆ. ಆರೋಗ್ಯವಾಗಿದ್ದ ಜನರೇ ಕೆಲವು ದಿನಗಳ ಹಿಂದೆ ಕಾಣಿಸಿಕೊಂಡ ಸಣ್ಣ-ಪುಟ್ಟ ಕಾಯಿಲೆ ನೆಪ ಹೇಳಿಕೊಂಡು ಆಸ್ಪತ್ರೆಗಳಿಗೆ ಹೋಗುವ ಮುನ್ನವೇ ಜನರು ಸಾವನ್ನಪ್ಪುತ್ತಿದ್ದಾರೆ.

    ಮುಳಬಾಗಿಲು ತಾಲೂಕಿನಲ್ಲಿ ಚಮಕಲಹಳ್ಳಿಯ ನಿವಾಸಿ ನಿಸ್ಸಾರ್ (38), ಖಾದರ್ (46), ಶಹೀದಾ (23), ಅಕ್ಬರ್ ಬೇಗ್ (40), ಮಂಜುನಾಥ್ (28), ಹೈದರ್ (90), ಅಮೀನ್ ತಾಜ್ (95), ಖಾದರ್ ಪಾಷಾ (65), ನಜೀಬ್ (68), ನವಾಜ್ ಬೇಗ್ (52), ಫಯಾಜ್ (37) ಮೃತ ದುರ್ದೈವಿಗಳು. ಈ ಪೈಕಿ ಕೆಲವರು ಹೊಟ್ಟೆನೋವು ಬಂದು ಪ್ರಾಣಬಿಟ್ಟರೆ, ಮತ್ತೆ ಕೆಲವರು ವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಇಬ್ಬರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

    ಗ್ರಾಮದಲ್ಲಿ ನಡೆಯುತ್ತಿರುವ ನಿಗೂಢ ಸರಣಿ ಸಾವಿನಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಯಾವಾಗ ಯಾರ ಮನೆಯಲ್ಲಿ ಸಾವು ಸಂಭವಿಸುತ್ತದೆಯೋ ಎನ್ನುವ ಭಯದಲ್ಲಿ ಜೀವನ ಕಳೆಯುತ್ತಿದ್ದಾರೆ. ಸಂಜೆಯಾದರೆ ಮನೆಯಿಂದ ಹೊರಗೆ ಹೋಗಲು ಚಮಕಲಹಳ್ಳಿಯ ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ.

    ಜಿಲ್ಲಾ ಆರೋಗ್ಯಾಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿ ಚಮಕಲಹಳ್ಳಿಯ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಅವರ ಕ್ಷೇತ್ರವಾದ ಚಮಕಲಹಳ್ಳಿ ಗ್ರಾಮದಲ್ಲಿ ಸುಮಾರು 800 ಮನೆಗಳಿವೆ. ಅಲ್ಪಸಂಖ್ಯಾತರೆ ಹೆಚ್ಚಿರುವ ಈ ಗ್ರಾಮದಲ್ಲಿ, ಮೃತಪಟ್ಟವರಲ್ಲಿ ಹೆಚ್ಚಿನ ಜನರು ಕೂಡ ಮುಸ್ಲಿಂ ಸಮುದಾಯದವರೇ ಆಗಿದ್ದಾರೆ.

    ಗ್ರಾಮದಲ್ಲಿ ಸ್ವಚ್ಛತೆ ಕೊರತೆ ಅಥವಾ ಬೇರೆ ಯಾವುದೋ ಸಾಂಕ್ರಾಮಿಕ ರೋಗದಿಂದ ಸಾವು ಸಂಭವಿಸುತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿಲ್ಲ. ಈ ವಿಷಯ ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಸೇರಿದಂತೆ ವೈದ್ಯರ ತಂಡ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಗ್ರಾಮದಲ್ಲಿ ಸಣ್ಣ ಪುಟ್ಟ ರೋಗ ಲಕ್ಷಣ ಇರುವವರ ರಕ್ತ ಹಾಗೂ ನೀರಿನ ಮಾದರಿಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ. ಜೊತೆಗೆ ನಾಳೆಯಿಂದ ಗ್ರಾಮದಲ್ಲಿ ವೈದ್ಯರ ತಂಡ ಕಳಿಸಿ ಸಂಪೂರ್ಣ ಪರೀಕ್ಷೆ ನಡೆಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

  • ಮುಳಬಾಗಿಲು ತಾಲೂಕು ಕಚೇರಿಗೆ ದನಕರು, ಕೊಳಿ ನಾಯಿ ನುಗ್ಗಿಸಿ ಪ್ರತಿಭಟನೆ

    ಮುಳಬಾಗಿಲು ತಾಲೂಕು ಕಚೇರಿಗೆ ದನಕರು, ಕೊಳಿ ನಾಯಿ ನುಗ್ಗಿಸಿ ಪ್ರತಿಭಟನೆ

    -ತಹಶೀಲ್ದಾರ್ ಸೇರಿದಂತೆ ಖಾಲಿಯಿರುವ ಹುದ್ದೆಗಳ ನೇಮಕಕ್ಕೆ ಒತ್ತಾಯ

    ಕೋಲಾರ: ಮುಳಬಾಗಿಲು ತಾಲೂಕು ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕ ಮಾಡುವಂತೆ ಒತ್ತಾಯಿಸಿ, ಕಿಸಾನ್ ವೇದಿಕೆ ಕಾರ್ಯಕರ್ತರು ದನಕರು, ಕೋಳಿ ಮತ್ತು ನಾಯಿಗಳೊಂದಿಗೆ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.

    ಮುಳಬಾಗಿಲು ತಾಲೂಕು ಕಚೇರಿ ಎದುರು ಪ್ರತಿಭಟನೆ ಪ್ರಾರಂಭಿಸಿದ ಕಿಸಾನ್ ಕಾರ್ಯಕರ್ತರು, ತಾಲೂಕು ಕಚೇರಿಯಲ್ಲಿ ಕಳೆದ 6 ತಿಂಗಳುಗಳಿಂದ ತಹಶೀಲ್ದಾರ್ ಹುದ್ದೆ ಖಾಲಿ ಇದೆ. ಜೊತೆಗೆ ಸುಮಾರು ಕಚೇರಿಯ ವಿವಿಧ 36 ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ದಿನನಿತ್ಯವೂ ಪಹಣಿ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಕಿಡಿಕಾರಿದರು.

    ಸರ್ಕಾರ ಕೂಡಲೇ ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಬಳಿಕ ಪ್ರತಿಭಟನಾಕಾರರ ಸಮ್ಮುಖದಲ್ಲಿ ಉನ್ನತ ಅಧಿಕಾರಿಗಳಿಗೆ ಕರೆ ಮಾಡಿ, ಸಮಸ್ಯೆಯನ್ನು ತಿಳಿಸಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಂಬಾರ್ ಬಡಿಸುವ ವೇಳೆ ಅನ್ನದ ತಟ್ಟೆ ಕಿತ್ಕೊಂಡ್ರು- ಪಕ್ಷೇತರ ಶಾಸಕ ನಾಗೇಶ್ ಸಿಟ್ಟು

    ಸಾಂಬಾರ್ ಬಡಿಸುವ ವೇಳೆ ಅನ್ನದ ತಟ್ಟೆ ಕಿತ್ಕೊಂಡ್ರು- ಪಕ್ಷೇತರ ಶಾಸಕ ನಾಗೇಶ್ ಸಿಟ್ಟು

    ಕೋಲಾರ: ಸಮ್ಮಿಶ್ರ ಸರ್ಕಾರದ ಅಸ್ತಿತ್ವದ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದರೆ, ಇತ್ತ ಕೋಲಾರ ಜಿಲ್ಲೆಯ ಮುಳಬಾಗಿಲು ಶಾಸಕ ಎಚ್ ನಾಗೇಶ್ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ನಾಗೇಶ್, ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ  ಸರಿಯಾಗಿ ಆಗುತ್ತಿಲ್ಲ. ಒಳ್ಳೆಯ ಕೆಲಸ ಮಾಡಲು ನಮಗೆ ಅವಕಾಶ ನೀಡಬೇಕು. ಆದರೆ ಇಲ್ಲಿ ಸೂಕ್ತ ಸ್ಥಾನಮಾನ ನೀಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಮತ್ತೆ ಗೆದ್ದು ಬರಲು ನಾವು ಜನರ ನಿರೀಕ್ಷೆಯನ್ನು ಈಡೇರಿಸುವ ಅಗತ್ಯವಿದೆ. ಸರ್ಕಾರದಲ್ಲಿ ನಮ್ಮ ಮಾತಿಗೆ ಬೆಲೆಯೇ ಇಲ್ಲವಾಗಿದೆ. ನಾನೇನು ಪಾಪ ಮಾಡಿದ್ದೇನೆ ಗೊತ್ತಿಲ್ಲ, ಈಗಲಾದ್ರು ನಮಗೇ ಸೂಕ್ತ ಜವಾಬ್ದಾರಿ ನೀಡಿ ನಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಅವಕಾಶ ನೀಡಬೇಕು ಎಂದರು.

    ಬೆಣ್ಣೆ ಮಾತುಗಳಿಂದಲೇ ಕೆಲಸ:
    ಶಾಸಕರಾಗಿ ನಾವು ಯಾವುದೇ ಒಂದು ಮನವಿಯನ್ನ ಸರ್ಕಾರ ಮುಂದಿಟ್ಟರೆ ಅದನ್ನು ಮಾಡಿಕೊಡಬೇಕು. ಆದರೆ ಇಲ್ಲಿ ಬೆಣ್ಣೆ ಮಾತುಗಳ ಮೂಲಕವೇ ಎಲ್ಲವನ್ನು ಮಾಡುವುದಾಗಿ ಹೇಳುತ್ತಾರೆ. ಅನ್ನ ಬಡಿಸಿ ಸಾಂಬಾರ್ ಹಾಕುವ ವೇಳೆಗೆ ತಟ್ಟೆ ಕಿತ್ತುಕೊಳ್ಳುತ್ತಾರೆ. ಈ ಕುರಿತು ಅವರೇ ಆತ್ಮವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಈ ರೀತಿ ಅನೇಕರು ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಆದರೆ ಅವರಿಗೆ ಹೇಳಲು ಧೈರ್ಯವಿಲ್ಲ. ಆದರೆ ನಾನು ಹೇಳುತ್ತಿದ್ದೇನೆ. ಸರ್ಕಾರದ ನಡೆ ಸರಿ ಅನಿಸುತ್ತಿಲ್ಲ ಎಂದು ನೇರವಾಗಿಯೇ ಹೇಳಿದರು.

    ಇದೇ ವೇಳೆ ಒಂದು ತಾಲೂಕು ಅಧಿಕಾರಿಯನ್ನು ವರ್ಗಾವಣೆ ಮಾಡಿ ಅಂದರು ಆಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಯಾರು ನಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ. ಆದರೆ ನಾನು ಕಾಂಗ್ರೆಸ್ ಪಕ್ಷದ ವಿರೋಧಿ ಅಲ್ಲ. ಆದರೆ ಅವರು ತಮ್ಮ ಸಿದ್ಧಾಂತ ಬಗ್ಗೆ ಜಂಬ ಪಡುತ್ತಾರೆ. ಒಬ್ಬ ಶಾಸಕನ ಕಷ್ಟ ಏನು ಎಂದು ಅರ್ಥೈಸಿಕೊಳ್ಳದೇ ಇದ್ದರೆ ಏನು ಪ್ರಯೋಜನ? ನಮ್ಮ ಮಾತಿಗೆ ಬೆಲೆ ಕೊಟ್ಟರೆ ಮಾತ್ರ ಸರ್ಕಾರಕ್ಕೆ ಬೆಲೆ ಇರುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುಖ್ಯಶಿಕ್ಷಕರನ್ನ ತರಾಟೆಗೆ ತಗೆದುಕೊಂಡ ಕೋಲಾರ ಸಿಇಓ

    ಮುಖ್ಯಶಿಕ್ಷಕರನ್ನ ತರಾಟೆಗೆ ತಗೆದುಕೊಂಡ ಕೋಲಾರ ಸಿಇಓ

    ಕೋಲಾರ: ಶಾಲೆಯೊಂದಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸಿಇಓ ಲತಾಕುಮಾರಿ ಬಿಸಿಯೂಟ ಸೇವಿಸಿ, ಬಳಿಕ ಮುಖ್ಯಶಿಕ್ಷಕರನ್ನು ತರಾಟೆಗೆ ತಗೆದುಕೊಂಡ ಘಟನೆ ಜಿಲ್ಲೆ ಮುಳಬಾಗಿಲು ಪಟ್ಟಣದಲ್ಲಿ ನಡೆದಿದೆ.

    ಮುಳುಬಾಗಿಲು ಪಟ್ಟಣದ ಬಳೆ ಚಂಗಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಸಿಇಓ ಲತಾಕುಮಾರಿ ಅವರು, ಶಾಲೆಯ ಅವ್ಯವಸ್ಥೆ ನೋಡಿ, ಮಕ್ಕಳು ಹೇಗೆ ಊಟ ಮಾಡಬೇಕು. ವಿದ್ಯಾರ್ಥಿಗಳು ಒಂದು ಕಡೆಕುಳಿತು ಊಟ ಮಾಡಲು ವ್ಯವಸ್ಥೆ ಕಲ್ಪಿಸಿಲ್ಲ. ಪಠ್ಯ ಪುಸ್ತಕ, ಸಮವಸ್ತ್ರ ವಿತರಿಸಿಲ್ಲ, ಮುಖ್ಯಶಿಕ್ಷಕರಾಗಿ ನೀವು ಏನು ಮಾಡುತ್ತಿರುವಿರಿ ಎಂದು ತರಾಟೆಗೆ ತಗೆದುಕೊಂಡಿದ್ದಾರೆ.

    ಬಿಸಿಯೂಟ ಸೇವಿಸಿ, ಪರಿಶೀಲಿಸಿದ ಸಿಇಓ ಲತಾಕುಮಾರಿ ಅವರು, ಅಡುಗೆಯಲ್ಲಿ ರುಚಿ ಮತ್ತು ಶುಚಿ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಅಡುಗೆ ಸಹಾಯಕರು ನೆಲದ ಮೇಲೆ ಪಾತ್ರೆ ಇಟ್ಟು ಮಕ್ಕಳಿಗೆ ಊಟ ಬಡಿಸುತ್ತಿದ್ದರು. ಇದರಿಂದ ಸಮಾಧಾನ ವ್ಯಕ್ತಪಡಿಸಿದ ಲತಾಕುಮಾರಿ ಅವರು, ಅಡುಗೆ ಸಹಾಯಕರನ್ನು ಅಮಾನತು ಮಾಡಬೇಕು ಹಾಗೂ ವಿದ್ಯಾರ್ಥಿಗಳಿಗೆ ರುಚಿ ಹಾಗೂ ಶುಚಿಯಾದ ಊಟ ನೀಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದರು.

  • ನಾನೇನು ಸಾಧಾರಣ ಮನುಷ್ಯ ಅಲ್ಲ, ನನಗಾಗಿ ಮೂರು ದೇಶದ ಪ್ರಧಾನಿಗಳು ಕಾಯುತ್ತಿದ್ರು- ಕೊತ್ತೂರು ಮಂಜುನಾಥ್

    ನಾನೇನು ಸಾಧಾರಣ ಮನುಷ್ಯ ಅಲ್ಲ, ನನಗಾಗಿ ಮೂರು ದೇಶದ ಪ್ರಧಾನಿಗಳು ಕಾಯುತ್ತಿದ್ರು- ಕೊತ್ತೂರು ಮಂಜುನಾಥ್

    ಕೋಲಾರ: ಅಧಿಕಾರವನ್ನು ಕೇಳಿ ಪಡೆಯಲು ನಾನೇನು ಸಾಧಾರಣ ಮನುಷ್ಯನಲ್ಲ. ನನಗಾಗಿ ಮೂರು ದೇಶದ ಪ್ರಧಾನಿಗಳು ಕಾಯುತ್ತಿದ್ದರು. ಅಧಿಕಾರ ಕೇಳಿಕೊಂಡು ಬರುವ ಸಣ್ಣ ವ್ಯಕ್ತಿ ನಾನಲ್ಲ ಎಂದು ಮುಳುಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ ಹೇಳಿದ್ದಾರೆ.

    ಅಧಿಕಾರಕ್ಕಾಗಿ ನಾನು ಯಾರ ಮನೆಯ ಬಾಗಿಲಿಗೂ ಹೋಗುವವನಲ್ಲ. ನಾನಾಗಿಯೇ ವಿಧಾನ ಪರಿಷತ್ ಸ್ಥಾನ ಕೊಡಿ ಎಂದು ಯಾರನ್ನೂ ಕೇಳಿಲ್ಲ. ಅದಾಗೆ ಬಂದರೆ ಸ್ವೀಕರಿಸುತ್ತೇನೆ ಎಂದು ತಮ್ಮ ಮನದಾಳದ ಇಂಗಿತವನ್ನು ಹೊರಹಾಕಿದ್ದಾರೆ.

    ನನಗೊಂದು ಸ್ಪೇಶಲ್ ಕ್ಯಾರೆಕ್ಟರ್ ಇದೆ. ನನಗಾಗಿ ಕಾಯುವವರು ಬೇರೆ ಇದ್ದಾರೆ, ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೈಕಮಾಂಡ್ ಗೆ ಟಾಂಗ್ ನೀಡಿದ ಮಂಜುನಾಥ್, ಮುಂದಿನ ಚುನಾವಣೆಯಲ್ಲಿ ಹೈಕಮಾಂಡ್ ಒಪ್ಪಿದ್ರೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವೆ ಅಂತಾ ಹೇಳಿದರು.

  • ಕೋಲಾರ ಜಿಲ್ಲೆಯ ವಿಶೇಷತೆ ಏನು? ಅಖಾಡದಲ್ಲಿ ಯಾರಿದ್ದಾರೆ?

    ಕೋಲಾರ ಜಿಲ್ಲೆಯ ವಿಶೇಷತೆ ಏನು? ಅಖಾಡದಲ್ಲಿ ಯಾರಿದ್ದಾರೆ?

    ಕೋಲಾರ: ಹೆಸರು ಕೇಳಿದ ತಕ್ಷಣ ನೆನಪಾಗುವುದು ಚಿನ್ನದ ಗಣಿಗಳು. ಈ ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧವಾಗಿದ್ದು, ಈ ಹಿಂದೆ ಕೋಲಾರವನ್ನು ಕುವಲಾಲಪುರ ಎಂದು ಕರೆಯುತ್ತಿದ್ದರು.

    ಪ್ರಮುಖ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕೋಲಾರ ಗಂಗರ ಆಳ್ವಿಕೆಯಲ್ಲಿ ರಾಜಧಾನಿಯಾಗಿತ್ತು. ನಂತರ ಚೋಳರ ಆಳ್ವಿಕೆಗೆ ಒಳಪಟ್ಟಿತ್ತು. 4 ರಿಂದ 19ನೇ ಶತಮಾನದವರೆಗೆ ಕದಂಬ, ಗಂಗ, ಪಲ್ಲವ, ಚೋಳ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಅರಸರು, ಮೈಸೂರಿನ ಅರಸರು, ಪಾಳೇಗಾರರು, ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. ಗಂಗರ ಕಾಲದಲ್ಲಿ ನಿರ್ಮಾಣವಾದ ಹಲವು ದೇವಾಲಯಗಳು ಇಂದಿಗೂ ಪ್ರಸಿದ್ಧಿ ಪಡೆದಿದೆ. ಮುಖ್ಯವಾಗಿ ಕೋಲಾರ ನಗರದ ಹೃದಯ ಭಾಗದಲ್ಲಿರುವ ಕೋಲಾರಮ್ಮ ದೇವಾಲಯ ಹಾಗೂ ಸೋಮನಾಥ ದೇವಾಲಯ ಪ್ರಮುಖವಾದದ್ದು. ಉಳಿದಂತೆ ಅಂತರಗಂಗೆ ಬೆಟ್ಟ, ಕೋಟಿ ಲಿಂಗ, ಮುಳಬಾಗಿಲು ಅಂಜನೇಯಸ್ವಾಮಿ ದೇವಾಲಯ, ಚಿಕ್ಕ ತಿರುಪತಿ, ಬಂಗಾರ ತಿರುಪತಿ ಸ್ಥಳಗಳು ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿದೆ.

    ರಾಜಕೀಯವಾಗಿ ರಾಜ್ಯಕ್ಕೆ ಮೊದಲ ಸಿಎಂ ಕೆ ಚಂಗಲರಾಯರೆಡ್ಡಿ ಕೋಲಾರದವರು ಎಂಬ ಹೆಗ್ಗಳಿಯೂ ಪಡೆದಿದೆ. ಇನ್ನು 2008ರಲ್ಲಿ ಕೋಲಾರದಿಂದ ಚಿಕ್ಕಬಳ್ಳಾಪುರವನ್ನು ವಿಭಜನೆ ಮಾಡಿ ಸ್ವತಂತ್ರ್ಯ ಜಿಲ್ಲೆಯಾಗಿ ಘೋಷಿಸಲಾಯಿತು. 2011 ರ ಜನಗಣತಿ ಪ್ರಕಾರ ಕೋಲಾರ ಜಿಲ್ಲೆ 1,536,401 ಜನಸಂಖ್ಯೆ ಹೊಂದಿದೆ.

    ಜಿಲ್ಲೆಯ ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು, ಶ್ರೀನಿವಾಸಪುರ, ಮಾಲೂರು, ಕೋಲಾರ ತಾಲೂಕು ಕೇಂದ್ರಗಳಾಗಿವೆ. ಜಿಲ್ಲೆಯಲ್ಲಿ ಕುರುಬ, ಒಕ್ಕಲಿಗ, ಪರಿಶಿಷ್ಟ ಜಾತಿ ಸೇರಿದಂತೆ ಮುಸ್ಲಿಂ ಮತಗಳು ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಡಿಕೆ ರವಿ ಆತ್ಮಹತ್ಯೆ ಪ್ರಕರಣ ಹಾಗೂ ಶಾಶ್ವತ ನೀರಾವರಿ ಯೋಜನೆ ಜಾರಿ ಪ್ರಮುಖ ಚರ್ಚೆಯ ವಿಷಯಗಳಾಗಿದೆ.

    ಕೋಲಾರ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಪ್ರಮುಖ ಕೇಂದ್ರವಾಗಿದ್ದು, ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ವರ್ತೂರ್ ಪ್ರಕಾಶ್ ಜಯಗಳಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು. ಬಳಿಕ ಉಂಟಾದ ರಾಜಕೀಯ ಬೆಳವಣಿಗೆಗಳಲ್ಲಿ ವರ್ತೂರ್ ಪ್ರಕಾಶ್ ಸ್ವತಃ `ನಮ್ಮ ಕಾಂಗ್ರೆಸ್’ ಪಕ್ಷ ಸ್ಥಾಪಿಸಿ ಕಣಕ್ಕೆ ಇಳಿದಿದ್ದಾರೆ.

    ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ನಿವೃತ್ತ ಐಎಎಸ್ ಅಧಿಕಾರಿ ಸೈಯದ್ ಜಮೀರ್ ಪಾಷ ಕಣಕ್ಕೆ ಇಳಿದಿದ್ದಾರೆ. ಆದರೆ ಅಭ್ಯರ್ಥಿ ಆಯ್ಕೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಸುದರ್ಶನ್ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಜೆಡಿಎಸ್ ನಿಂದ ಕೆ ಶ್ರೀನಿವಾಸ್ ಗೌಡ ಅವರು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಬಿಜೆಪಿ ಯಿಂದ ಓಂ ಶಕ್ತಿ ಚಲಪತಿ ಕಣ್ಣಕ್ಕೆ ಇಳಿದಿದ್ದಾರೆ. 2013 ಚುನಾವಣೆಯಲ್ಲಿ ವರ್ತೂರ್ ಪ್ರಕಾಶ್ 62,957 ಮತ ಹಾಗೂ ಜೆಡಿಎಸ್ ನ ಕೆ ಶ್ರೀನಿವಾಸ ಗೌಡ 50,366 ಮತ ಪಡೆದಿದ್ದರು.

    ಕ್ಷೇತ್ರದಲ್ಲಿ ಈ ಬಾರಿ ಕೋಲಾರ ಜಿಲ್ಲೆಯಲ್ಲಿ ಡಿಸಿ ಆಗಿ ಕಾರ್ಯನಿರ್ವಹಿಸಿದ್ದ ಡಿಕೆ ರವಿ ಅವರ ತಾಯಿ ಗೌರಮ್ಮ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಸದ್ಯ ಕ್ಷೇತ್ರದ ಹಾಲಿ ಶಾಸಕರಾಗಿರುವ ವರ್ತೂರ್ಪ್ರಕಾಶ್ ಅವರಿಗೆ ಜೆಡಿಎಸ್ ನ ಶ್ರೀನಿವಾಸಗೌಡ ಪ್ರಬಲ ಪೈಪೋಟಿ ಜೊತೆಗೆ ಟಾಂಗ್ ನೀಡಲು ಮುಂದಾಗಿದ್ದಾರೆ. ಡಿ.ಕೆ.ರವಿ ತಾಯಿ ಗೌರಮ್ಮ ಅವರು ಪರೀಕ್ಷೆ ಗಿಳಿದಿದ್ದಾರೆ.

    ಬಂಗಾರಪೇಟೆ ಕ್ಷೇತ್ರವು ಬೆಂಗಳೂರು ನಗರ ಸೇರಿದಂತೆ ಇತರೇ ಪ್ರದೇಶಗಳಿಗೆ ಹೊಂದಿರುವ ರೈಲ್ವೇ ಸಂಪರ್ಕದ ಹಿನ್ನೆಲೆ ಹೆಚ್ಚು ಹೆಸರು ಪಡೆದಿದೆ. ಆದರೆ ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾದ್ದ ಬಂಗಾರಪೇಟೆ ಡಿ.ಕೆ.ರವಿ ಅವರ ಸಾವಿನ ಬಳಿಕ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಕ್ಷೇತ್ರದ ಅಭಿವೃದ್ಧಿಯೂ ಪ್ರಮುಖ ಚುನಾವಣಾ ವಿಷಯವಾಗಿದೆ. ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಜಯ ಪಡೆದಿದ್ದ ಎಸ್‍.ಎನ್ ನಾರಾಯಣಸ್ವಾಮಿ 71,570 ಮತ ಪಡೆದಿದ್ದರು. ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಇಎಂ ನಾರಾಯಣಸ್ವಾಮಿ 43,193 ಮತ ಪಡೆದಿದ್ದರು. 2011 ರಲ್ಲಿ ನಡೆದ ಉಪಚುನಾವಣೆಯಲ್ಲಿ ಇಎಂ ನಾರಾಯಣಸ್ವಾಮಿ ಜಯ ಗಳಿಸಿದ್ದರು. ಸದ್ಯ ಈ ಬಾರಿ ಎಂ. ನಾರಾಯಣಸ್ವಾಮಿಗೆ ಟಿಕೇಟ್ ಸಿಗದ ಹಿನ್ನೆಲೆ ಬಿಜೆಪಿ ತೊರೆದು ಜೆಡಿಎಸ್ ಬೆಂಬಲ ಸೂಚಿಸಿದ್ದಾರೆ. ಸಧ್ಯ ಜೆಡಿಎಸ್ ನ ಮಲ್ಲೇಶ್ ಬಾಬು ಹಾಗೂ ಬಿಜೆಪಿ ಬಿ.ಪಿ.ವೆಂಕಟಮುನಿಯಪ್ಪ ನಡುವೆ ಎರಡನೇ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.

    ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆಯ ಕಣವಾಗಿರುವ ಶ್ರೀನಿವಾಸಪುರ ಕ್ಷೇತ್ರ ಪ್ರತಿ ಬಾರಿ ಚುನಾವಣೆಯಲ್ಲಿ ಹಾಲಿ ಶಾಸಕರನ್ನು ಸೋಲಿಸಿ ಎದುರಾಳಿ ಅಭ್ಯರ್ಥಿಗೆ ಜಯ ನೀಡುತ್ತ ಬಂದಿದೆ. ಸದ್ಯ ಹಾಲಿ ಶಾಸಕರಾಗಿರುವ ಹಾಗೂ ಆರೋಗ್ಯ ಸಚಿವರಾದ ರಮೇಶ್ ಕುಮಾರ್ ಅವರಿಗೆ ಜೆಡಿಎಸ್ ನ ಜಿ.ಕೆ.ವೆಂಕಟಶಿವಾ ರೆಡ್ಡಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಒಬ್ಬರು ರಮೇಶ್ ಕುಮಾರ್ ಅವರು ಸ್ವಾಮಿ ಎಂದು ಹೆಸರು ಪಡೆದಿದ್ದರೆ, ವೆಂಕಟಶಿವಾ ರೆಡ್ಡಿ ಅವರು ರೆಡ್ಡಿ ಎಂದೇ ಪರಿಚಿತರು.

    ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಪ್ರಮುಖ ಚರ್ಚೆಯ ವಿಷಯವಾಗಿ ಕಾಣುತ್ತಿದೆ. ಕೋಲಾರ ಜಿಲ್ಲೆಯ ಬಹು ವರ್ಷಗಳ ಬೇಡಿಕೆಯಾದ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರುವ ಬದಲಾಗಿ ಕೆಸಿ ವ್ಯಾಲಿ ನೀರು ನೀಡುವ ನಿರ್ಧಾರವು ಪ್ರಮುಖ ವಿಷಯವಾಗಿದೆ. ಕ್ಷೇತ್ರದಲ್ಲಿ ರೆಡ್ಡಿ ಹಾಗೂ ಒಕ್ಕಲಿಗ ಮತಗಳ ಹೆಚ್ಚು ನಿರ್ಣಾಯವಾಗಿದೆ. ಕಳೆದ ಬಾರಿ ರಮೇಶ್ ಕುಮಾರ್ 83,426 ಮತ ಪಡೆದಿದ್ದರೆ, ವೆಂಕಟಶಿವಾ ರೆಡ್ಡಿ 79,533 ಮತ ಪಡೆದಿದ್ದರು. ಇಬ್ಬರೆ ವ್ಯಕ್ತಿಗಳಾದ್ರು ಇಬ್ಬರ ಜಯಕ್ಕೆ ಕೆಲವೆ ಕೆಲ ಮತಗಳ ಅಂತರವಷ್ಟೆ ಕಾಯ್ದುಕೊಂಡೆ ಬಂದಿರುವುದು 40 ವರ್ಷಗಳ ತಾಜಕಾರಣಕ್ಕೆ ಸಾಕ್ಷಿ.

    ಬೆಂಗಳೂರಿಗೆ ಹೊಂದಿಕೊಂಡಿರುವ ಮಾಲೂರು ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಉತ್ತಮ ಬೆಳವಣಿಗೆ ಪಡೆಯುತ್ತಿದೆ. ಸದ್ಯ ಕ್ಷೇತ್ರದಲ್ಲಿ ಜೆಡಿಎಸ್ ನ ಮಂಜುನಾಥ ಗೌಡರು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವ ಕೃಷ್ಣಯ್ಯ ಶೆಟ್ಟಿ ಅವರು ಉಚಿತ ಧಾನ, ಧರ್ಮಗಳ ಹಾಗೂ ಧಾರ್ಮಿಕ ಕಾರ್ಯಗಳ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಕಳೆದ ಬಾರಿ ಮಂಜುನಾಥ್ ಅವರು 57,645 ಮತ ಪಡೆದಿದ್ದಾರೆ, ಕೃಷ್ಣಯ್ಯ ಶೆಟ್ಟಿ ಪಕ್ಷೇತರ ರಾಗಿ ಸ್ಪರ್ಧೆ ಮಾಡಿ 38,876 ಮತ ಪಡೆದು ಸೋಲುಂಡಿದ್ದರು. ಈ ಬಾರಿಯೂ ಇಬ್ಬರ ನಡುವೆ ನಾನೇನೂ ಕಡಿಮೆ ಇಲ್ಲವೆಂಬಂತೆ ಪೈಪೋಟಿ ಕಾಂಗ್ರೇಸ್ ನ ಅಭ್ಯರ್ಥಿ ಕೆ.ವೈ.ನಂಜೇಗೌಡ ಕಣದಲ್ಲಿದ್ದು, ಮೂವರ ನಡುವೆ ತೀವ್ರ ಪೈಪೋಟಿ ಮುಂದುವರಿದಿದೆ.

    ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಬೀಗಿ ಹಿಡಿತ ಹೊಂದಿರುವ ಏಕೈಕ ಕ್ಷೇತ್ರ ಕೆಜಿಎಫ್ ಎಂದರೆ ತಪ್ಪಾಗಲಾರದು. ಸಂಪಂಗಿಗೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೆ ಅವರ ತಾಯಿ ರಾಮಕ್ಕ ಗೆಲ್ಲಿಸಿಕೊಂಡ ಬಿಜೆಪಿ ಸಂಪಂಗಿ ಅವರಿಗೆ ಹೆಚ್ಚು ಪ್ರಭಾವ ಹೊಂದಿದ್ದು, ಕಳೆದ ಬಾರಿ ಅವರ ತಾಯಿ ರಾಮಕ್ಕ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಆದರೆ ಈ ಬಾರಿಯೂ ಟಿಕೇಟ್ ಕೈತಪ್ಪಿದ ಬೆನ್ನಲ್ಲೆ ಸಂಪಂಗಿ ಮಗಳು ಆಶ್ವಿನಿ ಎನ್ ಬಿಜೆಪಿ ಯಿಂದ ಸ್ಪರ್ಧೆ ಮಾಡುತ್ತಿದ್ದಾರೆ.

    ಬೆಂಗಳೂರಿಗೆ ಉತ್ತಮ ರೈಲ್ವೇ ಸಂಪರ್ಕ ಹೊಂದಿರುವುದರಿಂದ, ಚಿನ್ನದ ಗಣಿ ಮುಚ್ಚಿದ ನಂತರ ಕ್ಷೇತ್ರ 25 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗಕ್ಕಾಗಿ ರಾಜಧಾನಿಯನ್ನೇ ಮೆಚ್ಚಿಕೊಂಡಿದ್ದಾರೆ. ಅಲ್ಲದೇ ಚುನಾವಣೆಯಲ್ಲಿ ಕೆಜಿಎಫ್ ಗಣಿಗಳ ಪುನರ್ ಆರಂಭವೂ ಚರ್ಚೆಯ ವಿಷಯವಾಗಿದೆ. ಕ್ಷೇತ್ರದ ತಮಿಳು ಭಾಷೆ ಮಾತನಾಡುವ ಮತದಾರರು ಮುಖ್ಯ ಪಾತ್ರವಹಿಸುತ್ತಾರೆ. ಕ್ಷೇತ್ರದಲ್ಲಿ ಹೆಚ್ಚು ಪೈಪೋಟಿ ನೀಡುತ್ತಿರುವ ಜೆಡಿಎಸ್ ಅಭ್ಯರ್ಥಿ ಭಕ್ತವತ್ಸಲಂ ಈ ಬಾರಿಯೂ ಕಣದಲ್ಲಿ ಮುಂದುವರೆದಿದ್ದಾರೆ. ಉಳಿದಂತೆ ಕಾಂಗ್ರೆಸ್ ನಿಂದ ಸಂಸದ ಮುನಿಯಪ್ಪ ಪುತ್ರಿ ರೂಪಕಲಾ ಬಿಜೆಪಿ ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ, ಆರ್ ಪಿ ಐ ನಿಂದ ಮಾಜಿ ಶಾಸಕ ರಾಜೇಂದ್ರನ್, ಸಿಪಿಎಂ ನಿಂದ ತಂಗರಾಜ್ ಕಣದಲ್ಲಿದ್ದಾರೆ. ಕಳೆದ ಬಾರಿ ಹಾಲಿ ಶಾಸಕಿ ರಾಮಕ್ಕ 55,014 ಮತ ಹಾಗೂ ಜೆಡಿಎಸ್ ನಿಂದ ಭಕ್ತವತ್ಸಲಂ 28,992 ಮತ ಪಡೆದಿದ್ದರು.

    ಚುನಾವಣೆಗೂ ಮುನ್ನವೆ ಕಾಂಗ್ರೇಸ್ ಅಭ್ಯರ್ಥಿ ನಾಮಪತ್ರ ತಿರಸ್ಕಾರ ಆಗುವ ಮೂಲಕ ಕಾಂಗ್ರೇಸ್ ಗೆ ಮರ್ಮಾಗತ ಉಂಟಾಗಿತ್ತು, ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆಯೇ ರಾಜ್ಯ ಗಮನ ಸೆಳೆದಿದ್ದ ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ಮೀಸಲು ಕ್ಷೇತ್ರವಾಗಿರುವುದರಿಂದ ಕಳೆದ ಬಾರಿ ಜಯಗಳಿಸಿದ್ದ ಕೊತ್ತೂರು ಮಂಜುನಾಥ್ ನಕಲಿ ಜಾತಿ ಪ್ರಮಾಣ ಪತ್ರ ನೀಡಿರುವ ಆರೋಪದಲ್ಲಿ ಈ ಬಾರಿ ಸ್ಪರ್ಧೆ ಮಾಡುವ ಹಕ್ಕನ್ನೇ ಕಳೆದುಕೊಂಡಿದ್ದಾರೆ.

    ಆರ್ಥಿಕವಾಗಿ ಬಹಳ ಹಿಂದುಳಿದಿರುವ ಈ ಕ್ಷೇತ್ರವೂ ಅಭಿವೃದ್ಧಿಯ ವಿಚಾರದಲ್ಲಿಯೂ ಹಿಂದುಳಿದಿದೆ. ಕ್ಷೇತ್ರದಲ್ಲಿ ರೆಡ್ಡಿ, ಒಕ್ಕಲಿಗ ಮತದಾರರು ಜೊತೆ ಮುಸ್ಲಿಂ ಮತಗಳು ಹೆಚ್ಚು ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಬಾರಿ ಬಿಜೆಪಿಯಿಂದ ಅಮರೇಶ್ ಸ್ಪರ್ಧೆ ನಡೆಸಿದ್ದರೆ, ಜೆಡಿಎಸ್ ನಿಂದ ಸಮೃದ್ದಿ ಮಂಜುನಾಥ್ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಕೋಲಾರ ಎಂಪಿ ಕೆ.ಎಚ್ ಮುನಿಯಪ್ಪ ಅವರ ದ್ವಿತೀಯ ಪುತ್ರಿ ಕೊನೆ ಗಳಿಗೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಯಾಗಲು ರಾಜಕೀಯ ಕುತಂತ್ರವೆ ನಡೆದಿತ್ತು. ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಹಿಂಪಡೆದಿದ್ದರು. 2013 ರ ಚುನಾವಣೆಯಲ್ಲಿ ಮಂಜುನಾಥ್ 73,146 ಮತ ಹಾಗೂ ಜೆಡಿಎಸ್ ಮುನಿ ಆಂಜನಪ್ಪ ಅವರು 39,412 ಮತ ಪಡೆದಿದ್ದರು. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲದ ಕಾರಣ ಸ್ವತಂತ್ರವಾಗಿ ನಾಮಪತ್ರ ಸಲ್ಲಿಸಿರುವ ಪವರ್ ಮಿನಿಸ್ಟರ್ ಡಿಕೆಶಿ ಹಾಗೂ ಪರಮೇಶ್ವರ ಅವರ ಆಪ್ತ ಎಚ್.ವೆಂಕಟೇಶ್ ಗೆ ಕಾಂಗ್ರೆಸ್ ಬೆಂಬಲ ನೀಡಲು ನಿರ್ಧರಿಸಿದೆ.

    ಒಟ್ಟಿನಲ್ಲಿ ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳ ಪೈಕಿ ಜೆಡಿಎಸ್ ಮೊದಲ ಸ್ಥಾನ 3 ಅಥವಾ 4 ಸ್ಥಾನ, ಕಾಂಗ್ರೇಸ್ ಎರಡನೆ ಸ್ಥಾನ 2 ಅಥವಾ 3 ಹಾಗೂ ಬಿಜೆಪಿ ಮೂರನೆ ಸ್ಥಾನಕ್ಕೆ ಅಂದರೆ 1 ಸ್ಥಾನಕ್ಕೆ ತೃಪ್ತಿ ಪಡಬೇಕಿದೆ. ಈ ಮಧ್ಯೆ ಒಂದು ಪಕ್ಷೇತರ ಅಥವಾ ನಮ್ಮ ಕಾಂಗ್ರೇಸ್ ಗೆದ್ದರೆ ಅಚ್ಚರಿ ಏನಿಲ್ಲ.

  • ಕಾಂಗ್ರೆಸ್ ಮುಖಂಡ ಸೇರಿ ಜಿಲ್ಲಾ, ತಾಲೂಕು ಪಂಚಾಯ್ತಿ ಸದಸ್ಯರು ಜೆಡಿಎಸ್ ಗೆ ಸೇರ್ಪಡೆ!

    ಕಾಂಗ್ರೆಸ್ ಮುಖಂಡ ಸೇರಿ ಜಿಲ್ಲಾ, ತಾಲೂಕು ಪಂಚಾಯ್ತಿ ಸದಸ್ಯರು ಜೆಡಿಎಸ್ ಗೆ ಸೇರ್ಪಡೆ!

    ಕೋಲಾರ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಾಂತರ ಪರ್ವ ಜೋರಾಗಿದ್ದು, ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡ ಕಲ್ಲಪಲ್ಲಿ ಪ್ರಕಾಶ್ ಸೇರಿದಂತೆ ಜಿಲ್ಲಾಪಂಚಾಯ್ತಿ, ತಾಲೂಕು ಪಂಚಾಯ್ತಿ ಸದಸ್ಯರು ಇಂದು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ್ರು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ನಿಂತಿದ್ದ ಮುಖಂಡರು ಈ ಬಾರಿ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದರು. ಇದನ್ನೂ ಓದಿ: ಮುಳುಬಾಗಿಲಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ!

    ಈ ವೇಳೆ ಮುಳಬಾಗಿಲು ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದ ಮುಖಂಡರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡ್ರು. ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಅಧಿಕೃತ ಅಭ್ಯರ್ಥಿ ಇಲ್ಲದೆ ಪಕ್ಷದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಮುಖಂಡರುಗಳು ಈ ನಿರ್ಧಾರಕ್ಕೆ ಬಂದು ಜೆಡಿಎಸ್‍ಗೆ ಬೆಂಬಲ ನೀಡಿದ್ದಾರೆ. ಇದನ್ನೂ ಓದಿ: ಹೊಸ ಮುಖಗಳಿಗೆ ಸಿಕ್ತು ಕೈ ಟಿಕೆಟ್: 2013ರಲ್ಲಿ ಇಲ್ಲಿ ಗೆದ್ದವರು ಯಾರು?

  • ನೀರಿನ ಪೈಪ್‍ ಲೈನ್ ಅಳವಡಿಸುವ ವಿಷಯದಲ್ಲಿ ಗುಂಪು ಘರ್ಷಣೆ – 5 ಮಹಿಳೆಯರು ಸೇರಿ 8 ಮಂದಿಗೆ ಗಾಯ

    ನೀರಿನ ಪೈಪ್‍ ಲೈನ್ ಅಳವಡಿಸುವ ವಿಷಯದಲ್ಲಿ ಗುಂಪು ಘರ್ಷಣೆ – 5 ಮಹಿಳೆಯರು ಸೇರಿ 8 ಮಂದಿಗೆ ಗಾಯ

    ಕೋಲಾರ: ನೀರಿನ ಪೈಪ್ ಲೈನ್ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿರುವ ಘಟನೆ ಕೋಲಾರದಲ್ಲಿ ಸೋಮವಾರ ನಡೆದಿದೆ.

    ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಖಾದ್ರಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆಯ ಬಳಿ ನೀರಿನ ಪೈಪ್ ಲೈನ್ ಹಾಕುವ ವಿಚಾರದಲ್ಲಿ ಪರಸ್ಪರ ಪೈಪ್ ಗಳಿಂದ ಹಲ್ಲೆ ಮಾಡಿಕೊಂಡಿರುವ ಎರಡು ಗುಂಪಿನವರು ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಶಂಕರಪ್ಪ ಮತ್ತು ಗಂಗಾಧರ ಎಂಬ 2 ಗುಂಪುಗಳ ನಡುವೆ ಈ ಘರ್ಷಣೆ ನಡೆದಿದೆ. ಗಂಗಾಧರ ಗುಂಪಿನ ಐವರು ಮಹಿಳೆಯರು ಸೇರಿದಂತೆ 8 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಸದ್ಯ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರ ವಿರೋಧ ಪ್ರಕರಣ ದಾಖಲಾಗಿದೆ.