Tag: ಮುರಳೀಧರ್ ರಾವ್

  • ನ.2ರಂದು ನವಕರ್ನಾಟಕ ಪರಿವರ್ತನಾ ರ್ಯಾಲಿಗೆ ಮೋದಿ, ಶಾ ಚಾಲನೆ- ಬಿಜೆಪಿಯವರಿಂದ ಇಂದು ಭೂಮಿ ಪೂಜೆ

    ನ.2ರಂದು ನವಕರ್ನಾಟಕ ಪರಿವರ್ತನಾ ರ್ಯಾಲಿಗೆ ಮೋದಿ, ಶಾ ಚಾಲನೆ- ಬಿಜೆಪಿಯವರಿಂದ ಇಂದು ಭೂಮಿ ಪೂಜೆ

    ಬೆಂಗಳೂರು: ನಗರದಲ್ಲಿ ನವ ಕರ್ನಾಟಕ ಪರಿವರ್ತನಾ ರ್ಯಾಲಿಗೆ ಸಿದ್ಧವಾಗುತ್ತಿರೋ ವೇದಿಕೆಗೆ ಇಂದು ಬಿಜೆಪಿ ನಾಯಕರು ಭೂಮಿ ಪೂಜೆ ನೆರವೇರಿಸಿದ್ದಾರೆ.

    ನವೆಂಬರ್ 2 ರಂದು ನೆಲಮಂಗಲದ ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನ ಆವರಣದಲ್ಲಿ ನವ ಕರ್ನಾಟಕ ಪರಿವರ್ತನಾ ಜಾಥಾಗೆ ಚಾಲನೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿದ್ಧವಾಗುತ್ತಿರುವ ವೇದಿಕೆಗೆ ಇಂದು ಭೂಮಿ ಪೂಜೆ ನೆರವೇರಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಂದು ಬೆಂಗಳೂರಿಗೆ ಆಗಮಿಸಲಿದ್ದು, ನವಕರ್ನಾಟಕ ಜಾಥಾಗೆ ಚಾಲನೆ ನೀಡಲಿದ್ದಾರೆ.

    ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮಾತನಾಡಿ, ನವ ಪರಿವರ್ತನಯಾತ್ರೆ ಕಾರ್ಯಕ್ರಮದ ಉದ್ಘಾಟನಾ ಸ್ಥಳದಲ್ಲಿ ಭೂಮಿ ಪೂಜೆ ಮಾಡಿದ್ದೇವೆ. ರಾಜ್ಯದಲ್ಲಿ ಸರ್ಕಾರ ಬದಲಾವಣೆ ಮಾಡುವ ಕಾರ್ಯಕ್ರಮ ಇದು. ಸಿದ್ದರಾಮಯ್ಯ ಸರ್ಕಾರ ಹಲವು ವಿಚಾರಗಳಲ್ಲಿ ವಿಫಲವಾಗಿದೆ. ಕಮಿಷನ್ ಪಡೆಯುವುದರಲ್ಲಿ ನಿಸ್ಸೀಮರಾಗಿದ್ದಾರೆ. ಒಡೆದು ಆಳುವ ರಾಜಕಾರಣ ಮಾಡಲು ಸಿಎಂ ಮುಂದಾಗಿದ್ದಾರೆ. ಹೊಸ ರಾಜ್ಯ ಕಟ್ಟುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯ ಮಾಡಲಿದೆ. ನಾವು ಯಾವುದೇ ಒಂದು ವರ್ಗ, ಜಾತಿ ಪರ ಅಲ್ಲ ಅಂತ ತಿಳಿಸಿದ್ದಾರೆ.

    ಪರಿವರ್ತನೆ ಮಾಡುವುದು ಅಂದ್ರೆ ಪ್ಯಾಚ್ ವರ್ಕ್ ಮಾಡುವ ಕಾರ್ಯಕ್ರಮವಲ್ಲ. ಸಂಪೂರ್ಣ ಬದಲಾವಣೆಯೇ ಇದರ ಉದ್ದೇಶ. ಹೊಸದೊಂದು ರಾಜಕಾರಣದ ಪರ್ವ ನಿರ್ಮಿಸಲು ಮುಂದಾಗಿದ್ದೇವೆ. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸಲಿದ್ದಾರೆಂದು ಮುರಳೀಧರ್ ಹೇಳಿದರು.

    ಭೂಮಿ ಪೂಜೆಯಲ್ಲಿ ಕೇಂದ್ರ ಸಚಿವ ಡಿವಿ ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಆರ್ ಅಶೋಕ್, ಪರಿಷತ್ ಸದಸ್ಯ ಸೋಮಣ್ಣ, ಶಾಸಕರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

  • ಚುನಾವಣಾ ಉಸ್ತುವಾರಿಗಳಾಗಿ ಇಬ್ಬರು ಕೇಂದ್ರ ಸಚಿವರ ನೇಮಕ: ಅಮಿತ್ ಶಾ ತಂತ್ರ ಏನು?

    ಚುನಾವಣಾ ಉಸ್ತುವಾರಿಗಳಾಗಿ ಇಬ್ಬರು ಕೇಂದ್ರ ಸಚಿವರ ನೇಮಕ: ಅಮಿತ್ ಶಾ ತಂತ್ರ ಏನು?

    ಬೆಂಗಳೂರು: 2018ರ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾಗಿ ಇಬ್ಬರು ಕೇಂದ್ರ ಸಚಿವರನ್ನು ನೇಮಕಗೊಳಿಸಿದ್ದಾರೆ.

    ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ, ಇಂಧನ ಸಚಿವ ಪಿಯೂಷ್ ಗೋಯಲ್ ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿಯಾಗಿ ನೇಮಕವಾಗಿದ್ದಾರೆ. ಇಬ್ಬರು ಕೇಂದ್ರ ಮಂತ್ರಿಗಳ ಜೊತೆ ಜೊತೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‍ರಾವ್ ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

    ನೇಮಕ ಮಾಡಿದ್ದು ಏಕೆ?
    ರಾಜ್ಯ ಬಿಜೆಪಿ ನಾಯಕರ ಮೇಲೆ ವಿಶ್ವಾಸ ಕಡಿಮೆಯಾದ ಹಿನ್ನೆಲೆಯಲ್ಲಿ ಅಮಿತ್ ಶಾ ಇಬ್ಬರು ಸಚಿವರನ್ನು ನೇಮಕ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ನಾಯಕರುಗಳ ನಡುವಿನ ಸಮನ್ವಯತೆ ಕೊರತೆಯಿಂದ ಪಕ್ಷಕ್ಕೆ ಹೊಡೆತ ಬೀಳದೇ ಇರಲು ಸಚಿವರನ್ನು ನೇಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಪ್ರಕಾಶ್ ಜಾವಡೇಕರ್, ಗೋಯಲ್ ಇಬ್ಬರು ಪಕ್ಷದ ಶಿಸ್ತಿನ ಸಿಪಾಯಿಗಳು, ಜೊತೆಗೆ ಇಬ್ಬರು ಕೇಡರ್ ಬೇಸ್ ನಾಯಕರುಗಳು, ಆರ್‍ಎಸ್‍ಎಸ್‍ಗೂ ಹತ್ತಿರವಾಗಿದ್ದು, ಯಾವುದೇ ಬಣಗಳಿಗೆ ಮಣಿಯುವದಿಲ್ಲ. ಪಕ್ಷದ ಸೂಚನೆ ಪಾಲನೆ ಮಾಡುವ ವಿಶ್ವಾಸ ಇರುವುದಿಂದಲೇ ಇವರನ್ನು ನೇಮಿಸಲಾಗಿದೆ. ಇದೇ ಮೊದಲ ಬಾರಿಗೆ ಚುನಾವಣಾ ಉಸ್ತುವಾರಿಯನ್ನು ಇಬ್ಬರು ಸಚಿವರು ಹೊತ್ತಿದ್ದು, ಚುನಾವಣಾ ಉಸ್ತುವಾರಿಗಳ ನಿಯಂತ್ರಣದಲ್ಲಿ ರಾಜ್ಯ ಬಿಜೆಪಿ ಮುಂದೆ ಹೆಜ್ಜೆ ಹಾಕಲಿದೆ.

    ಇದೇ ವೇಳೆ ಗುಜರಾತ್‍ಗೂ ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನು ಬಿಜೆಪಿ ಹೈಕಮಾಂಡ್ ನೇಮಿಸಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮುಖ್ಯ ಚುನಾವಣಾ ಉಸ್ತುವಾರಿಯಾಗಿ ನೇಮಕವಾಗಿದ್ದರೆ, ನಾಲ್ವರು ಕೇಂದ್ರ ಸಚಿವರನ್ನು ಸಹ ಉಸ್ತುವಾರಿಗಳನ್ನಾಗಿ ನೇಮಕಗೊಳಿಸಲಾಗಿದೆ.

    ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್, ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ಪಿ.ಪಿ. ಚೌಧರಿ, ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅವರನ್ನು ಗುಜರಾತ್ ಚುನಾವಣಾ ಸಹ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.

    ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರ ಮೇಲೆ ಅಮಿತ್ ಶಾ ಗರಂ!

    ಇದನ್ನೂ ಓದಿ: ಏರ್‍ಪೋರ್ಟ್ ನಿಂದ ರಸ್ತೆಯಲ್ಲಿ ಬರುವಾಗಲೇ ರಾಜ್ಯ ಬಿಜೆಪಿ ನಾಯಕರಿಗೆ ಶಾ ತರಾಟೆ